ಹುಡುಕಾಟ
ಈ ಸಣ್ಣ ಕಣ್ಣು ಗಿಡ್ಡ ಮೂಗು
ತುಸು ಹಳದಿ ಮೈಬಣ್ಣ
ಇವನವನೇ! ಅವನೇ!! ಕಾಡಿನವನು,
ಗುಡ್ಡಗಾಡಿನವನು, ಹುಡುಕಾಡಿ
ತಡಕಾಡಿ ತಳ್ಳಿರವರನು!
ಇವನಾರವ! ಅವನಾರವ? ಅವಳಾರವಳು?
‘ನಾವಿಲ್ಲಿ ಇದ್ದವರೇ ಅಯ್ಯೋ’
ಇರಬಹುದು, ಈಗಲ್ಲ. ಈಗ ಹೊರಗಿನವರು
ಹುಡುಕಾಡಿ ತಡಕಾಡಿ ಕೊಲ್ಲಿರವರನು
ಬೆತ್ತಲು ಮಾಡುವಾಗಲೂ ಎದೆಯೂಡಿದ
ಅಮ್ಮನ ನೆನಪಾಗಲಿಲ್ಲವೇ?!
ಅದು ಹೇಗೆ? ನೀವಲ್ಲಿ ಮಾಡಲಿಲ್ಲವೇ?!
ನಮದಿಲ್ಲಿ ಅಷ್ಟೇ! ನೀವೇ ಮೊದಲಲ್ಲವೇ?!
ನಿಮದೊಂದಾದರೆ ನಮದೆರಡು ಅಷ್ಟೇ!!
ಅಂಕದ ಲೆಕ್ಕ ಹಾಕಲು ಇದೇನು ಫುಟ್ಬಾಲ್ ಕಬಡ್ಡಿಯೇ?
ಹೌದು ನಿಮ್ಮ ಅಸಲಿಗೆ ನಮ್ಮದು ಬಡ್ಡಿಯೇ!
ಮರ್ಮರ ಮರ್ಮರ ಮಣಿಪುರ ಮರಣಿಪುರ
ಹೆಸರೇನು ಎಷ್ಟು ಚೆಂದ ದೇವಲೋಕದ ಹಾಗೆ
ಆದರೂ ಎಲ್ಲರೂ ಸೈತಾನನ ಹಗೆಯ ಹೊಗೆ
ಎಲ್ಲ ಮುಗಿಸಿದ ಮೇಲೆ ದೇಹದ ಮೇಲಿದೆ
ವಸ್ತ್ರ ಶುಭ್ರ, ಶ್ವೇತ, ಬಿಳಿಯ ಬಣ್ಣ!!
ಕಾಣುತ್ತಿದೆ ಅದರಲ್ಲಿ ಹಸಿರು ಕೇಸರಿ ಕೆಂಪು!!
ಓಹ್ ಅಹುದು ಅದು ನೋಟಕರಿಗೆ ಕಾಣುವ ಬಣ್ಣ!!!
ಉಳಿಯಿತೇ ಮನುಕುಲ! ಅಳಿಯಿತೇ ಮಾನವೀಯತೆ?!
ನಡೆದಿದೆ ಹುಡುಕಾಟ ತಡಕಾಟ ಈಗಲೂ ಎಲ್ಲಾದರೂ ಕಾಣಬಹುದೇ ಬುದ್ಧನ ಇರುಳಿನಲೂ.!!?
ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.