Advertisement
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಯಾವಾಗ ಶಾಂತಮ್ಮ ಮೃದುಲಾಳ ಆರೈಕೆಯಲ್ಲಿ ನಾಲ್ಕು ದಿನ ಕಳೆದರೋ, ಮೃದುಲಾಳ ಮಂದಸ್ಮಿತ ಮುಖ, ಸ್ವಲ್ಪವೂ ಬೇಸರಿಸದೆ ಗಂಡನನ್ನು ಅನುಸರಿಸಿಕೊಂಡು ಹೋಗುವ ಪರಿ, ತಾನು ಗರ್ಭಿಣಿಯಾಗಿದ್ದರೂ ತನ್ನ ಕೆಲಸ ಬೊಗಸೆ ಕಡಿಮೆ ಮಾಡಿಕೊಳ್ಳದೆ ಪಾದರಸದಂತೆ ಓಡಾಡುವ ರೀತಿ, ಇವನ್ನೆಲ್ಲಾ ನೋಡುವಾಗ ತಮ್ಮ ಬಗ್ಗೆಯೇ ನಾಚಿಕೆಯಾಯಿತು ಶಾಂತಮ್ಮನವರಿಗೆ. ಈಗಲೂ ಬದಲಾಗದಿದ್ದರೆ ಇನ್ನೆಂದು… ಎನಿಸಿತು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ “ರೂಪಾಂತರ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಶಂಕರನಿಗೆ, ಗಿರಿ ಮದುವೆಯಲ್ಲಿ ಸಿಕ್ಕಿದ್ದ ಅಪರೂಪದ ನೆಂಟರಲ್ಲಿ, ಶಾಂತಮ್ಮತ್ತೆಯೂ ಒಬ್ಬರು. ತುಂಬಾ ದೂರದ ನೆಂಟರೇನೂ ಅಲ್ಲ. ಶಂಕರನ ತಂದೆ ವೆಂಕಟೇಶ ಮೂರ್ತಿಗಳ ಕಸಿನ್ -ದೊಡ್ಡ ಚಿಕ್ಕಮ್ಮನ ಮಗಳೋ, ಚಿಕ್ಕ ದೊಡ್ಡಮ್ಮನ ಮಗಳೋ- ಅನೇಕ ಸಲ ಹೇಳಿದ್ದರೂ ಶಂಕರನಿಗೆ ಕ್ಲಾರಿಟಿ ಸಿಕ್ಕಿರಲಿಲ್ಲ‌. ಅದಕ್ಕೆ ಕಾರಣ ಕೆಲಸದ ನಿಮಿತ್ತ ದುರ್ಗ ಬಿಟ್ಟು ಬೆಂಗಳೂರಿಗೆ ಬಂದು ಸುಮಾರು ವರ್ಷ ಕಳೆದಿತ್ತು. ಶಾಂತಮ್ಮತ್ತೆ ಸ್ವಲ್ಪ ಬಿಗುಮಾನದವರೆಂದೂ, ತನ್ನ ತವರಿನ ಕಡೆಯವರಲ್ಲದೇ ಉಳಿದವರನ್ನು -ತವರಿಗೆ ದೂರದ ಸಂಬಂಧಿಕರಾಗಿದ್ದರೂ- ಅಷ್ಟಾಗಿ ಹಚ್ಚಿಕೊಳ್ಳುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟು ಮಾತ್ರ ಮಾತು, ಎಂದು ತಂದೆಯ ಬಾಯಿಯಲ್ಲಿ ಅನೇಕ ಬಾರಿ ಕೇಳಿದ್ದ ಶಂಕರನಿಗೆ ಅಚ್ಚರಿಯಾಯಿತು. ಅಷ್ಟು ಕಕ್ಕುಲತೆಯ ಧ್ವನಿಯಲ್ಲಿ ಶಂಕರನನ್ನು ವಿಚಾರಿಸಿಕೊಂಡಿದ್ದರು ಶಾಂತಮ್ಮತ್ತೆ. ಕೈಯಲ್ಲಿ ಕೈ ತೆಗೆದುಕೊಂಡು ಆತ್ಮೀಯತೆ ತೋರಿಸುತ್ತಾ ಶಂಕರನ ಬಗ್ಗೆ ಪೂರ್ಣ ಪ್ರವರ ವಿಚಾರಿಸಿಕೊಂಡರು. ಅಷ್ಟೇ ಅಲ್ಲದೆ ತಾನೀಗ ಬೆಂಗಳೂರಿನಲ್ಲಿಯೇ ಮಗನ ಮನೆಯಲ್ಲಿ ಇರುವುದಾಗಿಯೂ, ತಪ್ಪದೇ ಬರಬೇಕೆಂದೂ ಅನೇಕ ಸಲ ಒತ್ತಾಯಪೂರ್ವಕವಾಗಿ ಹೇಳಿದ್ದಲ್ಲದೆ, ತನ್ನ ಫೋನ್ ನಂಬರ್ ಅನ್ನು ವಿಳಾಸವನ್ನು ಬರೆದುಕೊಳ್ಳಲು ಹೇಳಿದಾಗ ಶಂಕರನಿಗೆ ಅನಿವಾರ್ಯವಾಗಿ, ಕೊನೆಗೆ ತನ್ನ ನಂಬರನ್ನು ಅವರ ಫೋನ್‌ನಲ್ಲಿ ಸೇವ್ ಮಾಡಿಕೊಟ್ಟ. ಈ ವಿವರಣೆ ಕೇಳಿ ವೆಂಕಟೇಶ ಮೂರ್ತಿಗಳಿಗೂ ಅಚ್ಚರಿಯಾಯಿತು.

*****

ಜಬ್ಬಲ್ಪುರದಲ್ಲಿ ಕೇಂದ್ರ ಸರ್ಕಾರದ ಯಾವುದೋ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡ ಮಗ ಸತೀಶ ಅಲ್ಲಿಯದೇ ಹುಡುಗಿ ಒಬ್ಬಳನ್ನು ಪ್ರೀತಿಸಿ ಮದುವೆಯಾದಾಗ ಭೂಮಿ ಆಕಾಶ ಒಂದು ಮಾಡಿದ್ದರು ಶಾಂತಮ್ಮ. ಈ ಜನ್ಮದಲ್ಲಿ ಅವನ ಮುಖ ನೋಡುವುದಿಲ್ಲವೆಂದು ಶಪಥ ಮಾಡಿದ್ದರು. ಆ ಶಪಥ ಬಹಳ ದಿನ ಉಳಿಯಲಿಲ್ಲ‌. ಕಾರಣ ಎರಡನೇ ಮಗ ಮಹೇಶ ಮೆಕ್ಯಾನಿಕಲ್ ಬಿ.ಇ. ದಾವಣಗೆರೆಯಲ್ಲಿ ಮುಗಿಸಿ, ಬೆಂಗಳೂರಿನ ಎಚ್.ಎ.ಎಲ್. ನಲ್ಲಿ ಕೆಲಸಗಿಟ್ಟಿಸಿದ್ದ‌. ನಂತರ ಅಮ್ಮನ ಇಚ್ಛೆಯಂತೆ ಅವರ ತಮ್ಮ ಶ್ರೀನಿವಾಸನ ಮಗಳು ಸ್ಮಿತಾಳನ್ನು ಮದುವೆಯಾಗಿ ಬೆಂಗಳೂರಿನ ಹೆಚ್.ಎ.ಎಲ್ ಕ್ವಾಟರ್ಸ್‌ನಲ್ಲಿ ಠಿಕಾಣಿ ಹೂಡಿದ. ಡಿಗ್ರಿ ಮಾಡಿದ್ದರೂ ಹೊರಗೆ ಕೆಲಸಕ್ಕೆ ಹೋಗುವ ಚಾಕಚಕ್ಯತೆಯೂ ಆಸಕ್ತಿಯೂ ಸ್ಮಿತಾಳಿಗಿರಲಿಲ್ಲ. ಬೆಳಿಗ್ಗೆ ಬೇಗ ಏಳುವುದಕ್ಕೂ ಬೇಸರ. ಅನಿವಾರ್ಯವಾಗಿ ಗಂಡನಿಗೆ ಅತ್ತೆಗೆ ಕಾಫಿ ಮಾಡಿಕೊಟ್ಟರೆ ಮುಗಿಯಿತು. ಸುರೇಶನ ತಿಂಡಿ ಮಧ್ಯಾಹ್ನದ ಊಟ ಎಲ್ಲಾ ಕ್ಯಾಂಟೀನ್‌ನಲ್ಲಿಯೇ. ಶಾಂತಮ್ಮ ಮೊದಮೊದಲು ಸೊಸೆ ಮೇಲೆ ಒತ್ತಡ ಹಾಕಿ ಮಾಡಿಸಿದರು. ಆದರೆ ರಾತ್ರಿ ಹೆಂಡತಿಯ ಸಿಟ್ಟಿನ ವರ್ತನೆ ಕಂಡು ಅತ್ತೆ ಸೊಸೆ ಹೇಗಾದರೂ ಸಾಯಲಿ ಎಂದು ಕ್ಯಾಂಟೀನ್ ಗಟ್ಟಿ ಮಾಡಿಕೊಂಡ ಮಹೇಶ. ಕೊನೆಗೆ ಶಾಂತಮ್ಮ ತಮಗಾಗಿಯಾದರೂ ಏನಾದರೂ ಮಾಡಿಕೊಳ್ಳಬೇಕಲ್ಲ ಎಂದು ಬೆಳಗಿನ ತಿಂಡಿಯನ್ನು ವಹಿಸಿಕೊಂಡರೆ, ಮಧ್ಯಾಹ್ನದ ಅಡುಗೆ ಸ್ಮಿತಾಳ ಪಾಲಿಗೆ ಹೋಯಿತು. ಹೊರಗೆಲಸಕ್ಕೆ ಹೇಗಿದ್ದರೂ ಕೆಲಸದವರಿದ್ದರು. ಏನೇ ಆದರೂ ಅತ್ತೆ ಸೊಸೆಯ ನಡುವೆ ಆತ್ಮೀಯತೆ ಮೂಡಲೇ ಇಲ್ಲ.

ಜಬ್ಬಲ್ಪುರದಲ್ಲಿದ್ದ ಸತೀಶ ತನ್ನ ಹೆಂಡತಿಗೆ ತುಸುಮಟ್ಟಿಗೆ ಕನ್ನಡ ಕಲಿಸಿದ್ದ ಅಲ್ಲದೆ ಆಗಾಗ ಅಮ್ಮನಿಗೆ ಫೋನ್ ಮಾಡುತ್ತಿದ್ದ. ಮೊದ ಮೊದಲು ತಾನೊಬ್ಬನೇ ಮಾತಾಡುತ್ತಿದ್ದ. ಒಂದು ದಿನ ಫೋನ್ ಮಾಡಿದಾಗ ಸತೀಶ ಸಿಹಿ ಸುದ್ದಿಯನ್ನು ಅಮ್ಮನಿಗೆ ಅರುಹಿದ. ಅಲ್ಲದೆ ಅವಳ ಕೈಯಲ್ಲಿ ಫೋನ್ ಕೊಡುವೆ ಎಂದು ಹೇಳಿ ಹೆಂಡತಿ ಕೈಗೆ ಕೊಟ್ಟುಬಿಟ್ಟ.ಸತೀಶನ ಹೆಂಡತಿ ಮೃದಲಾ -ಮೃದಲಾ ಚೌಬೆ- ಅತ್ತೆಗೆ ಪ್ರಣಾಮಗಳನ್ನು ತಿಳಿಸಿ, ಹರಕು ಮುರುಕು ಕನ್ನಡದಲ್ಲಿ ಮಾತಾಡಿದಳು. ಶಾಂತಮ್ಮನ ಬಿಗುಮಾನ ಹೊರಟುಹೋಯಿತು. ಸೊಸೆಗೆ ಆರೋಗ್ಯದ ಬಗ್ಗೆ ಗಮನ ಕೊಡಲು ತಿಳಿಸಿ, ತಾನೂ ಒಮ್ಮೆ ಜಬ್ಬಲ್ಪುರಕ್ಕೆ ಬರುವುದಾಗಿಯೂ, ಮಗ ಸೊಸೆಯನ್ನು ನೋಡಬಯಸಿರುವುದಾಗಿಯೂ ಮಾತಿನ ಭರದಲ್ಲಿ ಹೇಳಿಬಿಟ್ಟರು.

ಮಹೇಶ ಸಂಜೆ ಬಂದಾಗ ವಿಷಯ ಅರುಹಿದರು ಶಾಂತಮ್ಮ. “ಕೆಲವು ದಿನಗಳ ಮಟ್ಟಿಗೆ ನಿಮ್ಮಣ್ಣನ ಮನೆಗೆ ಹೋಗಿ ಬರುವೆ” ಎಂದಾಗ ಮಹೇಶನಿಗೆ ಖುಷಿಯಾಯಿತು. ಅವನ ಅಣ್ಣನ ಸಂಬಂಧ ಮುಂಚಿನಿಂದಲೇ ಸ್ನೇಹದಿಂದ ಇತ್ತು. ಅಮ್ಮನಿಗೂ ಹವೆ ಬದಲಾಗುತ್ತದೆ. ಕಿರಿ ಸೊಸೆಯ ಕಿರಿಕಿರಿಯೂ ಕೆಲವು ದಿನ ತಪ್ಪುತ್ತದೆ ಎಂದು, “ಸರಿಯಮ್ಮ ನಾನು ಅಣ್ಣನ ಹತ್ತಿರ ಮಾತಾಡಿ ಟ್ರೈನ್ ಬುಕ್ ಮಾಡುವೆ” ಎಂದ ಅಲ್ಲದೆ ಕೂಡಲೇ ಫೋನ್ ಮಾಡಿ ಅಣ್ಣ ಅತ್ತಿಗೆಗೆ ಅಭಿನಂದನೆ ತಿಳಿಸಿದ.

ಶಾಂತಮ್ಮನವರಿಗೆ ಒಬ್ಬರೇ ಓಡಾಡಿ ಅಭ್ಯಾಸ ಇತ್ತು. ಅದು ರಾಜ್ಯದೊಳಗೆ ಮಾತ್ರ.. ಹೊರಗೆ ಹೋದವರಲ್ಲ. ಉತ್ಸಾಹದಲ್ಲಿ ಬರುವೆ ಎಂದು ಹೇಳಿಬಿಟ್ಟಿದ್ದರು. ಮಹೇಶನೇನೋ ವಿಮಾನದಲ್ಲಿ ಕಳಿಸಲು ಸಿದ್ಧವಿದ್ದ, ಆದರೆ ಶಾಂತಮ್ಮನವರಿಗೆ ಹೆದರಿಕೆ. ಕೊನೆಗೆ ರೈಲಿಗೆ ಬುಕ್ ಮಾಡಿ, ಆ ದಿನ ಸ್ಟೇಷನ್‌ಗೆ ಮೂವರೂ ಹೋಗಿ, ಸಹ ಪ್ರಯಾಣಿಕರಲ್ಲಿ ಮಹೇಶ ವಿಚಾರಿಸಿ, ಅದೃಷ್ಟಕ್ಕೆ ಬೆಂಗಳೂರಿನ ಸಸ್ಯಾಹಾರಿ ಕುಟುಂಬ ಒಂದರ ಪರಿಚಯವಾಗಿ, ಅವರು ಭರವಸೆ ಕೊಟ್ಟ ಮೇಲೆ, ಅಲ್ಲದೆ ಅಲ್ಲಿ ತಲುಪುವಾಗ ಸತೀಶ ಸ್ಟೇಶನ್ನಿಗೆ ಮುಂಚಿತವಾಗಿಯೇ ಬರುತ್ತಾನೆಂಬ ನಂಬಿಕೆಯ ಮೇಲೆ ಶಾಂತಮ್ಮನವರ ಪ್ರಯಾಣ ಸಾಗಿತು. ಸತೀಶ ಆಗಾಗ ಮೊಬೈಲ್‌ನಲ್ಲಿಯೇ ರೈಲು ಬರುವ ಸಮಯವನ್ನು ತಿಳಿದುಕೊಳ್ಳುತ್ತಿದ್ದ. ಆದರೂ ಇರಲಿ ಎಂದು ಒಂದು ಗಂಟೆ ಮುಂಚಿತವಾಗಿಯೇ ಸ್ಟೇಷನ್‌ಗೆ ಬಂದಿದ್ದರು ಗಂಡ ಹೆಂಡತಿ.

ಎರಡು ವರ್ಷಗಳ ಹಿಂದೆ ತಾಯಿ ಮಗನ ಭೇಟಿಯಾಗಿತ್ತು. ಸತೀಶ ಒಬ್ಬನೇ ತನ್ನ ಆಫೀಸಿನ ಕೆಲಸದ ಮೇಲೆ ಬಂದು ಹೋಗಿದ್ದ. ಶಾಂತಮ್ಮನವರಿಗೆ ಸೊಸೆಯನ್ನು ನೋಡುವ ಕಾತರವಿದ್ದರೂ ತೋರಿಸಿಕೊಳ್ಳಬಾರದೆಂದಿದ್ದರು. ಆದರೆ ತಲೆಗೆ ಸೆರಗು ಹೊದ್ದುಕೊ೦ಡು, ಮೃದುಲಾ ಶಾಂತಮ್ಮನವರ ಪಾದಕ್ಕೆ ನಮಸ್ಕರಿಸಿದಾಗ ಶಾಂತಮ್ಮನವರ ಬಿಗುಮಾನ ದೂರಾಗಿ ಹೋಯಿತು‌. ಎರಡು ಕೈಯಿಂದ ಸೊಸೆಯನ್ನು ಅಪ್ಪಿಕೊಂಡರು. ತಮ್ಮ ಕುಟುಂಬದ ಕುಡಿ ಹೊತ್ತವಳೆಂಬ ಅಭಿಮಾನ ಬೇರೆ. ಕಾರಿನಲ್ಲೇ ಮನೆ ತಲುಪಿದಾಗ ಮೂರು ಬೆಡ್ರೂಮ್‌ನ ಫ್ಲ್ಯಾಟ್ ನೋಡಿ ಖುಷಿಯಾದರು ಶಾಂತಮ್ಮ. ಎರಡು ದಿನಗಳಲ್ಲಿ ಸೊಸೆಯ ಸ್ವಭಾವಕ್ಕೆ ಮಾರು ಹೋದರು…

 ಶಾಂತಮ್ಮ ಮೊದಮೊದಲು ಸೊಸೆ ಮೇಲೆ ಒತ್ತಡ ಹಾಕಿ ಮಾಡಿಸಿದರು. ಆದರೆ ರಾತ್ರಿ ಹೆಂಡತಿಯ ಸಿಟ್ಟಿನ ವರ್ತನೆ ಕಂಡು ಅತ್ತೆ ಸೊಸೆ ಹೇಗಾದರೂ ಸಾಯಲಿ ಎಂದು ಕ್ಯಾಂಟೀನ್ ಗಟ್ಟಿ ಮಾಡಿಕೊಂಡ ಮಹೇಶ. ಕೊನೆಗೆ ಶಾಂತಮ್ಮ ತಮಗಾಗಿಯಾದರೂ ಏನಾದರೂ ಮಾಡಿಕೊಳ್ಳಬೇಕಲ್ಲ ಎಂದು ಬೆಳಗಿನ ತಿಂಡಿಯನ್ನು ವಹಿಸಿಕೊಂಡರೆ, ಮಧ್ಯಾಹ್ನದ ಅಡುಗೆ ಸ್ಮಿತಾಳ ಪಾಲಿಗೆ ಹೋಯಿತು.

ಗಂಡನಿಗಾಗಿ ಸಂಪೂರ್ಣ ಸಸ್ಯಹಾರಿಯಾಗಿ ಬದಲಾಗಿದ್ದಳು ಮೃದುಲಾ. ತಾನು ಕೆಲಸಕ್ಕೆ ಹೋಗುತ್ತಿದ್ದರೂ ಮನೆಯ ಕೆಲಸಗಳನ್ನೆಲ್ಲ ತಾನೇ ನಿಭಾಯಿಸುತ್ತಿದ್ದಳು. ಜೊತೆಗೆ ಸತೀಶನು ಕೈಜೋಡಿಸುತ್ತಿದ್ದ. ತೀರಾ ಇತ್ತೀಚೆಗೆ ಮೃದುಲಾಳ ತಾಯಿ ಕಡೆಯ ದೂರದ ಸಂಬಂಧಿ ಹುಡುಗನೊಬ್ಬ ಇವರ ಮನೆಯಲ್ಲಿದ್ದ. ಅವನಿಗೆ ತಂದೆ ತಾಯಿಯರಿಲ್ಲದೆ ಅಕ್ಕನ ಮನೆಯಲ್ಲಿದ್ದವನು, ಭಾವನ ಸಿಡಿಮಿಡಿಗೆ ಬೇಸರವಾಗಿ ಮನೆ ತೊರೆದು ಅನಾಥನಾಗಬೇಕಾದ ಸಂದರ್ಭದಲ್ಲಿ, ವಿಚಾರ ಮೃದುಲಾಳ ಕಿವಿಗೆ ಬಿದ್ದು ಸತೀಶನ ಅನುಮೋದನೆಯು ಸಿಕ್ಕಿ ಇವರ ಮನೆಗೆ ಬಂದಿದ್ದ. ಹಗಲು ಇವರಿಗೆ ಸಹಾಯ ಮಾಡುತ್ತಾ ಸಂಜೆ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದ. ಮೃದುಲಾ ಆ ಹುಡುಗನ ಬಗ್ಗೆ – ದೂರದ ಸಂಬಂಧಿಯಾಗಿದ್ದರೂ-ತೋರುತ್ತಿದ್ದ ಅಕ್ಕರೆ ಶಾಂತಮ್ಮನಿಗೆ ಅಚ್ಚರಿ. ನೆರೆಹೊರೆಯವರೊಂದಿಗೆ ಮೃದುಲಾಳ ಪ್ರೀತಿ ವಿಶ್ವಾಸದ ಒಡನಾಟ, ದಂತದ ಗೊಂಬೆಯಂತಿದ್ದರೂ ಒಂದು ಚೂರು ಅಹಂಕಾರವಿಲ್ಲದ ಗುಣ ಶಾಂತಮ್ಮನವರನ್ನು ಮರುಳು ಮಾಡಿತ್ತು. ಹಾಗಾಗಿ ಸಂಬಂಧದಲ್ಲಿ ಮನೆಗೆ ತಂದುಕೊಂಡ ಇನ್ನೊಬ್ಬ ಸೊಸೆ ಸ್ಮಿತಾಳೊಂದಿಗೆ ಇವಳನ್ನು ಹೋಲಿಸದೆ ಇರಲಾಗಲಿಲ್ಲ. ಇಂತಹ ಗುಣಶೀಲ ಸೊಸೆಯನ್ನು ಇಷ್ಟು ದಿನ ದೂರ ಇಟ್ಟಿದ್ದೆನಲ್ಲ ಎಂಬ ಭಾವ ಹೃದಯದೊಳಗೆ ತುಂಬಿಕೊಂಡಿದ್ದಲ್ಲದೇ, ತನ್ನ ವ್ಯಕ್ತಿತ್ವದ ಪುನರ್ ವಿಮರ್ಶೆ ಮಾಡತೊಡಗಿತು ಅವರ ಮನಸ್ಸು.

ಶಾಂತಮ್ಮ ಬಾಲ್ಯದಿಂದಲೂ ಒಂದು ರೀತಿಯ ಬಿಗುಮಾನದಿಂದಲೇ ಬೆಳೆದವರು. ಜೊತೆಗೆ ತನಗೆ ಒಂದು ಕಣ್ಣು ಹೋದರೂ ತೊಂದರೆ ಇಲ್ಲ ಎದುರಾಳಿಗಳ ಎರಡೂ ಕಣ್ಣು ಹೋಗಲಿ ಎಂಬ ದುಷ್ಟತನ. ಹುಟ್ಟಿನಿಂದ ಬಳುವಳಿಯಾಗಿ ಬಂದಿದ್ದ ಬಣ್ಣ, ರೂಪ. ಎಸ್‌.ಎಸ್. ಎಲ್‌. ಸಿ. ಒಂದೇ ಸಲಕ್ಕೆ ಪಾಸ್ ಮಾಡಿದ್ದೇ ದೊಡ್ಡ ಸಾಧನೆ. ತಾಯಿ ಕಡೆಯ ಸಂಬಂಧಿಯನ್ನೇ ಮದುವೆಯಾಗಿದ್ದರು. ಕೆಲವು ದಿನಗಳಲ್ಲೇ ಹೆಂಡತಿ ಹಾಗೂ ಅಮ್ಮನ ಜಟಾಪಟಿ ನೋಡಲಾರದೆ ಬೇರೆ ಮನೆ ಮಾಡಿದ್ದರು ಹೆಂಡತಿಯ ಒತ್ತಾಸೆಯಿಂದ ಆ ಮನುಷ್ಯ. ತನ್ನ ಗಂಡನ ಕಡೆಯ ನೆಂಟರು ಯಾರೇ ಬಂದರೂ ಶಾಂತಮ್ಮನ ಮುಖದಲ್ಲಿ ಒಂದು ಸಣ್ಣ ನಗೆಯೂ ಕಾಣುತ್ತಿರಲಿಲ್ಲ. ಎಷ್ಟು ಬೇಕೊ ಅಷ್ಟು. ಒಂದು ದಿನ ಉಳಿಯಲು ಬಂದವರು ಒಂದೇ ಹೊತ್ತಿಗೆ ಜಾಗ ಖಾಲಿ ಮಾಡುವ ಹಾಗೆ. ಕೆಲವೇ ದಿನಗಳಲ್ಲಿ ಶಾಂತಮ್ಮನೆಂದರೆ “ಓಹ್ ಆಯಮ್ಮನ ಬಿಗುಮಾನಕ್ಕೇನೂ ಕಮ್ಮಿಯಿಲ್ಲ”. “ಉಪವಾಸ ಇದ್ದರೂ ಆಕೆ ಮುಂದೆ ಕೈ ಒಡ್ಡಬಾರದು,” ಹೀಗೆ ಖ್ಯಾತರಾದರು ಶಾಂತಮ್ಮ.

ಇಂತಹ ಶಾಂತಮ್ಮನಿಗೆ ತಕ್ಕ ಹಾಗೆ ಬಂದಿದ್ದಳು ಎರಡನೇ ಸೊಸೆ, ಕಂತೆಗೆ ತಕ್ಕ ಬೊಂತೆ ಎಂಬಂತೆ. ಯಾವಾಗ ಶಾಂತಮ್ಮ ಮೃದುಲಾಳ ಆರೈಕೆಯಲ್ಲಿ ನಾಲ್ಕು ದಿನ ಕಳೆದರೋ, ಮೃದುಲಾಳ ಮಂದಸ್ಮಿತ ಮುಖ, ಸ್ವಲ್ಪವೂ ಬೇಸರಿಸದೆ ಗಂಡನನ್ನು ಅನುಸರಿಸಿಕೊಂಡು ಹೋಗುವ ಪರಿ, ತಾನು ಗರ್ಭಿಣಿಯಾಗಿದ್ದರೂ ತನ್ನ ಕೆಲಸ ಬೊಗಸೆ ಕಡಿಮೆ ಮಾಡಿಕೊಳ್ಳದೆ ಪಾದರಸದಂತೆ ಓಡಾಡುವ ರೀತಿ, ಇವನ್ನೆಲ್ಲಾ ನೋಡುವಾಗ ತಮ್ಮ ಬಗ್ಗೆಯೇ ನಾಚಿಕೆಯಾಯಿತು ಶಾಂತಮ್ಮನವರಿಗೆ. ಈಗಲೂ ಬದಲಾಗದಿದ್ದರೆ ಇನ್ನೆಂದು… ಎನಿಸಿತು. ಇದೇ ಸಂದರ್ಭದಲ್ಲಿ ಒಂದು ದಿನ ಸತೀಶ ಶಾಂತಮ್ಮನವರನ್ನು ಕರೆದುಕೊಂಡು ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳ ವೀಕ್ಷಣೆಗೆ ಹೊರಟ. ಆ ದಿನ ಮೃದುಲಾಳಿಗೆ ವಾಕರಿಕೆ ಹೆಚ್ಚಾಗಿದ್ದುದರಿಂದ ತಾನು ಬರುವುದು ಕಷ್ಟ ಎಂದು ಅವಳು ಬೇಸರಿಸಿಕೊಂಡಳು. ಶಾಂತಮ್ಮ, “ಹೊರಗೆ ಹೋಗುವುದೇ ಬೇಡ ಬಿಡು” ಎಂದರು, ಅವರ ಸ್ವಭಾವಕ್ಕೆ ವಿರುದ್ಧವಾಗಿ. ಆದರೆ ಸತೀಶ ರಜೆ ಹಾಕಿದ್ದ ಮೃದುಲಾಳೂ ಒತ್ತಾಯಿಸಿ, ಹಣ್ಣು, ಬಿಸ್ಕತ್ತು, ಫ್ಲಾಸ್ಕ್ ನಲ್ಲಿ ಕಾಫಿ ರೆಡಿ ಮಾಡಿ ಕೊಟ್ಟು ಹೊರಡಿಸಿದಳು.

ಸತೀಶನ ಕಾರಿನಲ್ಲಿಯೇ ಹೊರಟರು ಇಬ್ಬರೇ. ಹತ್ತಿರದ ಧುಂವಾಧಾರ್ ಫಾಲ್ಸ್, ಅಲ್ಲಿಯೇ ಕೇಬಲ್ ಕಾರ್ ಪ್ರಯಾಣದ ಸುಖ ಅನುಭವಿಸಿ, ಅಲ್ಲಿಂದ ವಿಷ್ಣುವರಾಹ ದೇಗುಲಕ್ಕೆ ಬಂದರು. ಶಾಂತಮ್ಮ “ಒಂದೇ ದಿನ ಹೆಚ್ಚು ಸುತ್ತಾಡುವುದು ಬೇಡ, ಆಯಾಸವಾಗುತ್ತದೆ ” ಎಂದು ದೇಗುಲದ ಪ್ರಶಾಂತ ವಾತಾವರಣದಲ್ಲಿ ಸ್ವಲ್ಪ ಸಮಯ ಕಳೆದು ಹೋಗಲು ನಿರ್ಧರಿಸಿದರು. ಶಾಂತಮ್ಮನಿಗೆ ಹಳೆಯದನ್ನೆಲ್ಲ ಮೆಲುಕು ಹಾಕಲು ಅನುಕೂಲವಾಯಿತು‌. ಮಗನೊಬ್ಬನೇ ಇದ್ದುದರಿಂದ ಮನ ಬಿಚ್ಚಿ ಮಾತನಾಡಿದರು. ತಾನು, ತನ್ನ ಯೌವನದ ಕಾಲದ ಸ್ವಭಾವದ ಬಗ್ಗೆ, ಮದುವೆಯಾದ ಹೊಸತರಲ್ಲಿ, ನಂತರ ಮಕ್ಕಳು ಹುಟ್ಟಿದ ನಂತರ, ತನ್ನ ಮಕ್ಕಳೇ ತನಗೆ ಸರ್ವಸ್ವ ಎಂದು ಬದುಕಿ ಉಳಿದವರನ್ನು ಅನಾದರದಿಂದ ಕಂಡ ಬಗ್ಗೆ…. ಹೀಗೆ ಮಾತು ಮುಂದುವರಿಸಿ ಕಣ್ಣು ಒದ್ದೆ ಮಾಡಿಕೊಂಡರು. ಸತೀಶನೇ ಸಮಾಧಾನಿಸಿದ “ಇರಲಿ ಬಿಡಮ್ಮ ಹಳೆಯದೆಲ್ಲ ಈಗೇಕೆ. ಆಗ ನಿನ್ನ ಪರಿಸ್ಥಿತಿ ಹೇಗಿತ್ತೋ. ಈಗ ಎಲ್ಲರೂ ಸಂತೋಷದಿಂದ ಇದ್ದೇವಲ್ಲ. ನೀನು ಇಲ್ಲಿಯೇ ಇದ್ದು ಬಿಡು ಎಂದ. ಹಾಗೆಯೇ “ಪ್ರೀತಿ ಅನ್ನೋದು ಎಷ್ಟು ಹಂಚಿದರೂ ಮುಗಿಯದ ವಸ್ತುವಮ್ಮಾ, ಅದರಲ್ಲೂ ಮೃದುಲಾಳನ್ನು ಮದುವೆಯಾದ ಮೇಲೆ ನನಗೆ ಪ್ರೀತಿಯ ನಿಜವಾದ ಅರ್ಥವಾಯಿತು. ಅವಳು ಆಗಾಗ ನಿಮ್ಮನ್ನು ನಿಮ್ಮಮ್ಮನಿಂದ ದೂರ ಮಾಡಿದೆ ಎಂದು ಕೊರಗುತ್ತಿದ್ದಳು. ಈಗ ಅವಳಿಗೆ ಸಮಾಧಾನವಾಗಿದೆ ಎಂದ. ಹಾಗೆಯೇ ಮಹೇಶ ದಂಪತಿಯನ್ನೂ ಜಬ್ಬಲ್ಪುರಕ್ಕೆ ಬರಲು ಆಹ್ವಾನಿಸುವುದಾಗಿಯೂ ತಿಳಿಸಿದ‌.

ಶಾಂತಮ್ಮನವರ ಮನದ ದುಗುಡವೆಲ್ಲ ಕರಗಿ ಹರಿದು ಹೋದ ಹಾಗೆ ಭಾಸವಾಯಿತು. ನೆಮ್ಮದಿಯಿಂದ ಮನೆಗೆ ಹಿಂತಿರುಗಿದರು. ಅಲ್ಲಿ ಕೆಲವು ದಿನ ಇದ್ದು ಪುನಃ ಏಳು ತಿಂಗಳು ತುಂಬಿದ ನಂತರ ಬರುವುದಾಗಿ ತಿಳಿಸಿ ಬೆಂಗಳೂರಿಗೆ ಮರಳಿದರು.

ಹೀಗೆ ಒಳಗಿನ ಒತ್ತಾಯದಿಂದ ತಮ್ಮ ಸ್ವಭಾವ ತುಸು ಬದಲಾಯಿಸಿಕೊಳ್ಳುವ ನಿರ್ಧಾರ ಮಾಡಿ, ಹಂತ ಹಂತವಾಗಿ ಬದಲಾದರು. ತಮ್ಮವರು, ದೂರದ ನೆಂಟರು, ಎಲ್ಲಿ ಸಿಕ್ಕರೂ ಆತ್ಮೀಯವಾಗಿ ಮಾತಾಡಲು ಶುರು ಮಾಡಿದರು ಅಥವಾ ತಮ್ಮ ಮನೆಗೆ ಅವರೇನಾದರೂ ಬಂದರೂ ಆದರಿಸಿ ಉಪಚರಿಸಬೇಕಾದದ್ದು ಸೊಸೆಯಂದಿರೆಯಲ್ಲವೇ ಎಂಬ ಒಳ ಮನಸು ಇದ್ದಿರಬಹುದು. ಈ ಬದಲಾವಣೆಯ ನಂತರವೇ ಒಂದು ಸಂದರ್ಭದಲ್ಲಿ ಗಿರಿ ಮದುವೆಯಲ್ಲಿ ಶಂಕರನಿಗೆ ಶಾಂತಮ್ಮತ್ತೆಯ ಭೇಟಿಯಾಗಿ ಅಚ್ಚರಿ ಪಟ್ಟದ್ದು!!.

About The Author

ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ'  (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ