ಆ ಸುರಿವ ಮಳೆಗೇನು ಗೊತ್ತು ಹರಿವ ಕಣ್ಣೀರು ನೆಲ ಸೇರದೆ ನದಿಯಾಯಿತೆಂದು
ಈ ಸುಡುವ ಬೆಂಕಿಗೇನು ಗೊತ್ತು ಸುಟ್ಟ ಒಡಲು ಭಸ್ಮವಾಗದೆ ಬೇಗುದಿಯಾಯಿತೆಂದು.
ಎಲ್ಲರೂ ಚಂದ್ರನಂಗಳದಲ್ಲೆ ನಲಿವಾಗ ಅಮಾವಾಸ್ಯೆಯ ಕತ್ತಲೇಕೆ ದಿಟ್ಟಿಸುವರು
ಆ ಬೀಸುವ ಗಾಳಿಗೇನು ಗೊತ್ತು
ತಂಪ ತಾರದೆ ಬಾಳು ಬಿರುಗಾಳಿಯಾಯಿತೆಂದು
ಏನೆಂದು ಹಾಡುವುದು ಕಹಿಯ ಗೂಡು ಕಟ್ಟೆ ಒಡೆದಿರುವಾಗ ಯಾರು ಕೇಳರು ಅಪಸ್ವರವನ್ನು
ಈ ನೆನಪುಗಳಿಗೇನು ಗೊತ್ತು ಮನ ಮಧುರವಾಗದೆ ಸಮಾಧಿಯಾಯಿತೆಂದು.
ಹಂಗು ತೊರೆದ ಮೇಲೆ ಬಂಧಗಳು ಬಳುವಳಿ ನೀಡಲಾರವು ಸಾಕಿ
ಆ ಭಾವನೆಗಳಿಗೇನು ಗೊತ್ತು
ಬಂಧುತ್ವ ಬರಡಾಗಿ ಜ್ವಾಲೆಯಾಯಿತೆಂದು
ಇಲ್ಲಿ ಯಾರಿಗೇ ಯಾರು ಇಲ್ಲ ವಾಣಿ ನಿನ್ನ ನಸೀಬು ಕೆಟ್ಟಿರುವಾಗ ಖುದನು ಕೈ ಹಿಡಿಯಲಾರ
ಈ ಶಬ್ದಗಳಿಗೇನು ಗೊತ್ತು ಮಾತು ಮರೆತು ಮೌನ ಎದೆಯೊಡೆದು ಗೋರಿಯಾಯಿತೆಂದು.

Oplus_35
ವಾಣಿ ಭಂಡಾರಿ ಮೂಲತಃ ಶಿವಮೊಗ್ಗ ಜಿಲ್ಲೆಯವರು.
ವೃತ್ತಿಯಲ್ಲಿ ಕನ್ನಡ ಉಪನ್ಯಾಸಕಿಯಾಗಿ, ಸಂಶೋಧನಾರ್ಥಿಯಾಗಿ, ಪ್ರವೃತ್ತಿಯಿಂದ ಲೇಖಕಿ, ಕವಯಿತ್ರಿ, ವಿಮರ್ಶಕಿಯಾಗಿದ್ದಾರೆ.
ಸಂತನೊಳಗಿನ ಧ್ಯಾನ (ಗಜಲ್ ಕೃತಿ) ಹಾಗೂ ಖಾಲಿ ಜೋಳಿಗೆಯ ಕನವರಿಕೆಗಳು, ಸಂತ ಮತ್ತು ಸಮೀಕ್ಷೆ ಹಾಗೂ ಹನಿ ಹನಿ ಮುತ್ತುಗಳು(ಸಂಪಾದಿತ) ಎಂಬ ಕೃತಿಗಳು ಪ್ರಕಟಗೊಂಡಿವೆ.
“ಮಲ್ನಾಡು ಕವಳ” ಲಲಿತ ಪ್ರಬಂಧ ಹಾಗೂ ಇನ್ನೂ ಕೆಲವು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ