ಗೃಹಿಣಿಯೊಬ್ಬಳಿಗೆ ಬೆನ್ನು ಸೆಟೆದುಕೊಂಡ ದಿನ!
ಅವಳಿಗೆ ಬೆನ್ನು ಸೆಟೆದುಕೊಂಡ ದಿನ
ಮನೆಯವರೆಲ್ಲರಿಗೂ ಕಿವಿಯ ಸಮಸ್ಯೆಯಾಗಿತ್ತು!
ಇಷ್ಟು ದಿನ
‘ತಿಂಡಿಗೆ ಬನ್ನಿ’, ‘ಕಾಫಿ ತಗೊಳ್ಳಿ’ ಅಂದಾಗೆಲ್ಲ
ಚುರುಕಾಗಿ ಕೇಳಿಸುತ್ತಲೇ ಇತ್ತಲ್ಲ!
…ಬಿಸಿನೀರಿನ ಬ್ಯಾಗು ಹುಡುಕುವಿರಾ
ಬಟ್ಟೆ ಒಣಗಿಸಿ ಪ್ಲೀಸ್
ಚೂರು ಜೀರಿಗೆ ಕಷಾಯ ಸಿಗಬಹುದಾ?
ಅದೇನೋ..
ಕೇಳಿದ್ದೇ ಕೇಳಿ ಅವಳಿಗೆ ಗಂಟಲುನೋವು
ಬೇರೆ ಶುರುವಾಯಿತು!
ವಿಚಿತ್ರವೆಂದರೆ ಅಂದೇ
ಅವಳ ಗಂಡ ಟ್ರಾಫಿಕ್ಕಲ್ಲಿ
ಸಿಕ್ಕಿಹಾಕಿಕೊಂಡ
ಮಗನಿಗೆ ಸಂಜೆ ಅಚಾನಕ್
ಕ್ಲಾಸ್ ಟೆಸ್ಟ್ ಮಾಡಿದರು
ಮಗಳ ಗೆಳತಿಗೆ ಹುಷಾರಿಲ್ಲವೆಂದು
ನೋಡಲು ಹೊರಟುಬಿಟ್ಟಳು
ಅತ್ತೆಯವರು ಚಳಿ ಜಾಸ್ತಿಯೆಂದು
ಹೊದ್ದು ಮಲಗಿದರು!
ರಾತ್ರಿಯಿಳಿಯುವ ಹೊತ್ತಿಗೆ ಬೆನ್ನು ಹಿಡಕೊಂಡದ್ದು
ಜೋರಾಗಿ ನೋವು ಉಕ್ಕುಕ್ಕಿ ಬರುತ್ತಿದ್ದರೂ
ಮೆದುಳು ಚುರುಕಾಯಿತು!
ಹೇಗೋ ಕಷಾಯ ಮಾಡಿಕೊಂಡು ಕುಡಿದು
ನಿಧಾನಕ್ಕೆ ಬಟ್ಟೆ ಒಣಗಿಸಿ ಪಾತ್ರೆ ತೊಳೆದು
ಬಿಸಿ ಬಿಸಿಯಾಗಿ ಅನ್ನ ಸಾರು ಮಾಡಿಟ್ಟಳು
ಏದುಸಿರು ಬಿಡುತ್ತಾ ಡೈನಿಂಗ್ ಟೇಬಲ್
ಅಣಿಗೊಳಿಸುವ ಹೊತ್ತಿಗೆ ಸರಿಯಾಗಿ
ಮನೆಯವರೆಲ್ಲ ಮರಳಿದರು;
ಅತ್ತೆಯವರೂ ಎದ್ದು ಕುಳಿತರು..
ಎಂದಿನಂತೆ
ನಗು ಹರಟೆ ಹುಸಿ ಮುನಿಸುಗಳೊಂದಿಗೆ
ಊಟ ಮುಗಿದು
‘ಡಾಕ್ಟರ್ ಶಾಪ್, ಬಿಸಿನೀರಿನ ಬ್ಯಾಗು’
ಎನ್ನುತ್ತಿದ್ದಂತೆ ಎಲ್ಲರೂ
ಮೊಬೈಲಿನಲ್ಲಿ ಬ್ಯುಸಿಯಾದರು
ಮತ್ತೆ ಮರುದಿನದ ಡ್ಯೂಟಿಯನ್ನು ನೆನೆದು
ಆಕಳಿಸುತ್ತ ಒಬ್ಬೊಬ್ಬರಾಗಿ ಗುಡ್ನೈಟ್ ಹೇಳಿ
ಮಲಗಲು ತೆರಳಿದರು
ಚೆಲ್ಲಾಪಿಲ್ಲಿ ಅಡುಗೆಮನೆ
ಅವಳನ್ನು ನೋಡಿ ನಕ್ಕಿತು..
ಈ ಮೊದಲೂ ಬೆನ್ನು ಸೆಟೆದುಕೊಂಡಿತ್ತು
ಅದೆಷ್ಟನೇ ಸಲವೋ, ಅವಳೂ ಮರೆತಿದ್ದಳು!
ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು
ವಿಡಂಬನೆಯ ಮೂಲಕ ಹಲವು ಮನೆಗಳ ವಾಸ್ತವದ ಅನಾವರಣ. ಸರಳವಾಗಿಯೇ ಕಾಡುವ ಕವಿತೆ.