Advertisement
ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ ಶುರು

ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ ಶುರು

ಮೊದಲಿನಿಂದ ಖಾಲಿಯೇ ಇರುವ ಕುರ್ಚಿಗಿಂತ ನಡುವೆ ಒಂದಷ್ಟು ಹೊತ್ತು ಯಾರೋ ಕುಳಿತಿದ್ದು ಎದ್ದು ಹೋದ ಆಸನ ಹೆಚ್ಚು ಖಾಲಿಯಾಗಿ ಕಾಣುತ್ತದೆ. ನವ ಮಾಸ ತುಂಬಿದ ಬಳಿಕ ಜೀವದ ಬದಲಿಗೆ ಶೂನ್ಯವನ್ನು ಹಡೆದ ಒಡಲು ಹೊಸದಾದ ಖಾಲಿತನಕ್ಕೀಡಾಗುತ್ತದೆ. ಬಂದೇ ಬರುವನೆಂದು ನಂಬಿದ್ದ ಅತಿಥಿ.. ಬರಲೇ ಬೇಕಿದ್ದ ಅತಿಥಿ.. ಅವನ ಸ್ವಾಗತಕ್ಕೆ ಏನೆಲ್ಲ ತಯಾರಾಗಿತ್ತು! ತಂದಿಟ್ಟುಕೊಂಡ ಮಲ್ಲಿಗೆ ಮೆದುವಿನ ಟೊಪ್ಪಿಯಿತ್ತು. ಮೊಲದ ತುಪ್ಪಳದಂಥಾ ಅಂಗಿಯಿತ್ತು. ಅದರ ಅಂಚಲ್ಲಿ ಕೈಯಲ್ಲೇ ಹೊಲಿದ ಕಸೂತಿಯಿತ್ತು. ಕಟ್ಟಿದ ತೊಟ್ಟಿಲಿತ್ತು. ಕೈಗೆ ಕೊಡಲು ಕಾದಿದ್ದ ಗಿಲಿಗಿಚ್ಚಿಯಿತ್ತು.. ಅಲ್ಲಿ ಎಲ್ಲವೂ ಇತ್ತು.
ವಿನಾಯಕ‌ ಅರಳಸುರಳಿ ಹೊಸ ಅಂಕಣ “ಆಕಾಶ ಕಿಟಕಿ” ಇಂದಿನಿಂದ, ಮಂಗಳವಾರಗಳಂದು, ಹದಿನೈದು ದಿಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ

ಜೀವವಾಗದೇ ಹೋಗುವ ಜೀವಗಳು…

ಕಿರಣ್ ಕುಮಾರ್ ಅವರ ಕಾಜೂ ಬಿಸ್ಕೆಟ್ ಕಥಾ ಸಂಕಲನದಲ್ಲಿ ‘ಇಪ್ಪತ್ತೊಂದನೇ ಕ್ರೋಮೋಸ಼ೋಮು’ ಎಂಬೊಂದು ಕಥೆಯಿದೆ. ಒಡಲಲ್ಲಿ ಅಂಕುರವಾದರೂ ಪೂರ್ತಿ ಜೀವವಾಗದೇ ಕರಗಿ ಹೋಗುವ ಸಾಲು ಸಾಲು ಕರುಳ ಕುಡಿಗಳನ್ನು ಉಳಿಸಿಕೊಳ್ಳಲೆಂದು ಅಲೆದಾಡುವ ದಂಪತಿಗಳ ಕಥೆಯದು. ಬದುಕಿನ ನಿಗೂಢ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಆ ಯುವ ಜೋಡಿ ತಾವು ನಂಬದ, ನಂಬಿದ ಎಲ್ಲ ದಾರಿಗಳಲ್ಲೂ ಅಲೆಯುತ್ತವೆ. ಹಿಂದೆಂದೋ ಬಿಟ್ಟು ಬಂದ ದೇವರನ್ನು ಮತ್ತೆ ಹುಡುಕಿಕೊಂಡು ನಡೆಯುತ್ತಾ ಕೊನೆಗೆ ಕಾಡೊಂದರ ನಡುವಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಗಳ್ಯಾವುದೂ ಗೊತ್ತಾಗದ ಬಿಂದುವೊಂದರಲ್ಲಿ ಉಳಿದುಹೋಗುತ್ತವೆ. ಎಲ್ಲವೂ ಚೆನ್ನಾಗಿರುವಾಗ ದಿಟ್ಟವಾಗಿ ಆದರ್ಶಗಳಿಗೆ, ನಿಯಮಗಳಿಗೆ ಬದ್ಧನಾಗಿ ನಡೆಯುವ ಮನುಷ್ಯ ಜೀವನದ ರಹಸ್ಯಮಯ ಸವಾಲುಗಳೆದುರು ಹೇಗೆ ದಿಕ್ಕು ತಪ್ಪುತ್ತಾನೆ ಎನ್ನುವುದನ್ನು ಈ ಕಥೆ ಮನೋಜ್ಞವಾಗಿ ತೆರೆದಿಡುತ್ತದೆ.

ಅಂತೆಯೇ ವಿಕ್ರಮ ಹತ್ವಾರ ಅವರ ಝ಼ೀರೋ ಮತ್ತು ಒಂದು ಸಂಕಲನದಲ್ಲಿ ‘ಕನಕಾಭಿಷೇಕ’ ಎಂಬ ಕಥೆಯಿದೆ. ವೃದ್ಧಾಪ್ಯದ ಅಂಚಿನಲ್ಲಿರುವ ಮನೆಯ ಹಿರಿಯರು ತನಗೆ ಮರಿಮಗ ಹುಟ್ಟುತ್ತಿದ್ದಂತೆಯೇ ಕನಕಾಭಿಷೇಕ ಮಾಡಿಸಿಕೊಳ್ಳಲೆಂದು ಮೊಮ್ಮಕ್ಕಳಿಂದ ಮಗುವನ್ನು ನಿರೀಕ್ಷಿಸುತ್ತ ಸಾವನ್ನು ಒಂದೊಂದೇ ದಿನ ಮುಂದೂಡುತ್ತಾ ಬದುಕಿದ್ದರೆ ಅಲ್ಲಿ, ಕಡಲಾಚೆಗಿನ ದೇಶದಲ್ಲಿ ಅವರ ಮೊಮ್ಮಗನ ಸ್ನೇಹಿತೆ ಅವನಿಂದ ಅರಳಬಹುದಾಗಿದ್ದ ಕುಡಿಗಳನ್ನೆಲ್ಲ ಗರ್ಭಪಾತಕ್ಕೀಡು ಮಾಡುತ್ತಿರುತ್ತಾಳೆ. ಇಲ್ಲಿ ಆ ಹಿರಿಯ ಜೀವಕ್ಕಿರುವ ‘ಕನಕಾಭಿಷೇಕದ ನೆಪದಲ್ಲಾದರೂ ಒಡೆದ ತನ್ನ ಕುಟುಂಬ ಮತ್ತೆ ಒಂದಾಗಲಿ’ ಎಂಬ ಬಯಕೆ ಈ ಇಡೀ ಕನಸನ್ನು ಬೇರೆಯದೇ ನೆಲೆಗೆ ಒಯ್ಯುತ್ತದಾದರೂ ಇಲ್ಲೂ ಸಹಾ ಕಥೆಗಾರರು ನಿಷ್ಫಲವಾಗಿ ಚೆಲ್ಲಿಹೋಗುವ ಜೀವದ ಕಣಗಳ ಸಂವೇದನಾಶೀಲ ಕಥೆಯನ್ನು ತೆರೆದಿಡುತ್ತಾ ಹೋಗುತ್ತಾರೆ‌. ಯಾರದೋ ಕನಸೊಂದು ಅದರ ಪರಿಚಯವೇ ಇಲ್ಲದ ಇನ್ಯಾರಿಂದಲೋ ನಿರಂತರವಾಗಿ ಹತ್ಯೆಯಾಗುವ ಬದುಕಿನ ವೈಚಿತ್ರ್ಯವನ್ನು ಈ ಕಥೆ ಮನೋಜ್ಞವಾಗಿ ತೆರೆದಿಡುತ್ತದೆ.

ಈ ಎರಡೂ ಕಥೆಗಳ ಕಥೆಯಾಯಿತು. ಹಾಗಾದರೆ ಬದುಕಿನ ಕಥೆಯೇನು?

ಕೆಲ ವರ್ಷಗಳ ಹಿಂದೆ ಅಷ್ಟಾಗಿ ಆತ್ಮೀಯರಲ್ಲದ ಸ್ನೇಹಿತರೊಬ್ಬರು, ಎಂದೂ ಇಲ್ಲದವರು ಅಚಾನಕ್ಕಾಗಿ ವಾಟ್ಸಾಪಿನಲ್ಲಿ ಮಾತಿಗೆ ತೊಡಗಿಕೊಂಡರು‌. ಸ್ಟೇಟಸ್ಸಿನಲ್ಲಿ ಹಾಕಿದ ಫೋಟೋಗಳಿಗೆ ಎಲ್ಲೋ ಒಮ್ಮೆ ಪರಸ್ಪರ ಪ್ರತಿಕ್ರಿಯಿಸುವುದರ ಹೊರತಾಗಿ ಬೇರೆ ಸಂವಹನವೇ ಇಲ್ಲದವರು ಅಂದು ಅಚಾನಕ್ಕಾಗಿ ಹರಟೆಗೆ ತೊಡಗಿದರು. ಸಣ್ಣ ಬೆರಗೊಂದನ್ನು ಒಳಗಿಟ್ಟುಕೊಂಡೇ ಅವರೊಟ್ಟಿಗೆ ಸಂಭಾಷಿಸುತ್ತಿದ್ದಾಗ ಮುಖ್ಯ ವಿಷಯ ಬಹಿರಂಗವಾಯಿತು. ಮಾತಿನ ಪದರಗಳು ಒಂದೊಂದಾಗಿ ತೆರೆಯುತ್ತ ಕೊನೆಗೆ ಆಳದಲ್ಲಿದ್ದ ವ್ಯಥೆಯೊಂದು ಕಂಡು ಹೋಯಿತು. ಅಲ್ಲೂ ಹುಟ್ಟಬೇಕಿದ್ದ ಜೀವವೊಂದು ಜೀವವಾಗುವ ಮೊದಲೇ ಮರಳಿ ಹೋಗಿತ್ತು. ಒಂಬತ್ತು ತಿಂಗಳಿನಿಂದ ಸ್ವಾಗತಕ್ಕಾಗಿ ಕಾದು ಕುಳಿತಿದ್ದ ಜೀವಮಾನದ ಅತಿಥಿ ಬಾಗಿಲಿನಲ್ಲೇ ಇಣುಕಿ ಹೊರಟುಹೋದ ವೇದನೆಯನ್ನು ಹೇಳಿಕೊಳ್ಳಲೆಂದು ಒಂದೇ ಒಂದೇ ಕಿವಿಗಾಗಿ ಹುಡುಕುತ್ತಾ ಅವರು ನನಗೆ ಮೆಸೇಜು ಮಾಡಿದ್ದರು.

ಈ ಬದುಕು ಎನ್ನುವ ಅದ್ಭುತವಾದ, ಅಷ್ಟೇ ವಿಚಿತ್ರವಾದ ಸೂತ್ರವನ್ನು ಅನ್ವಯ ಮಾಡಲೆಂದೇ ದೇವರು ಮನುಷ್ಯನನ್ನು ಹುಟ್ಟಿಸಿ ಬಿಟ್ಟನೋ ಏನೋ? ಅದೆಷ್ಟೆಲ್ಲ ಸಂವೇದನೆಗಳು. ವೇದನೆಗಳು. ಅವನ್ನೆಲ್ಲ ಮರೆಮಾಚಿ ದೈನಿಕದಲ್ಲಿ ತೊಡಗಿಕೊಳ್ಳಲು ಹೆಣಗಾಡುವ ಜೀವಗಳು.. ಆ ಅನಿರೀಕ್ಷಿತ ಸ್ನೇಹಿತರ ಮಾತುಗಳನ್ನು ಕೇಳುವಾಗ ಕೇವಲ ತನ್ನ ವಂಶವನ್ನು ಮುಂದುವರಿಸಬೇಕೆನ್ನುವುದಷ್ಟೇ ಮನುಷ್ಯ ಮಕ್ಕಳ ಮೇಲಿಟ್ಟಿರುವ ಅಷ್ಟೆಲ್ಲ ಮಮತೆಯ ಹಿಂದಿನ ಉದ್ದೇಶವೇ? ಎಂದು ನನ್ನನ್ನು ನಾನೇ ಕೇಳಿಕೊಂಡೆ. ಇರಲಿಕ್ಕಿಲ್ಲ ಎಂಬ ಉತ್ತರ ಅವರು ಮೆಸೇಜಿಸಿದ ಒಂದೊಂದು ಅಕ್ಷರದಿಂದಲೂ ಹೊಮ್ಮಿ ಬರುತ್ತಿತ್ತು. ವಂಶದ ಕುಡಿ ಎನ್ನುವುದು ಕೇವಲ ಒಂದು ಮಡಿಲಿನ ಖಾಲಿ ಜಾಗವನ್ನು ತುಂಬುವ ಸಂಗತಿಯಷ್ಟೇ ಆಗಿದ್ದರೆ ಅದಕ್ಕಾಗಿ ಮನುಷ್ಯ ಇಷ್ಟೆಲ್ಲ ತಳಮಳಿಸುತ್ತಿರಲಿಲ್ಲವೇನೋ? ‘ಇಪ್ಪತ್ತೊಂದನೇ ಕ್ರೋಮೋಸೋಮ್’ ನ ನಾಯಕ-ನಾಯಕಿಯಂತೆ ದಾರಿಯಲ್ಲದ ಕಗ್ಗಾಡುಗಳಲ್ಲಿ ಅಲೆಯುತ್ತಿರಲಿಲ್ಲವೇನೋ?

ಮಕ್ಕಳೆಂದರೆ ಏನು? ಒಂದು ತಲೆಮಾರಿನಷ್ಟು ಹಿಂದಕ್ಕೆ ಹೋದರೆ ಊರಿನ ಪ್ರತೀ ಮನೆಯಲ್ಲೂ ಅಜ್ಜ, ಅಜ್ಜಿಯ ಹೆಸರನ್ನೇ ಹೊತ್ತ ಮಕ್ಕಳು ಆಟವಾಡಿಕೊಂಡಿರುತ್ತಿದ್ದರು. ಮಂದಿ ತಮ್ಮಿಂದ ದೂರಾದ ಅಥವಾ ದೂರಾಗಲಿರುವ ತಮ್ಮ ಅಪ್ಪ, ಅಮ್ಮ, ಅಜ್ಜ, ಅಜ್ಜಿಯ ಹೆಸರನ್ನು ತಮ್ಮ ಮಕ್ಕಳಿಗಿಡುವ ಮೂಲಕ ಅವರ ಯಾವುದೋ ಒಂದಂಶವನ್ನು ಶಾಶ್ವತವಾಗಿ ತಮ್ಮೊಟ್ಟಿಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅವನ ಮೂಗು ಅಜ್ಜನಂತೆ, ನಿಲ್ಲುವುದು ಅಜ್ಜಿಯಂತೆ, ಮೂಗಿನ ತುದಿಯ ಕೋಪವಿದೆಯಲ್ಲ… ಅದಂತೂ ಥೇಟ್ ಅಪ್ಪನಂತೆ! ಎನ್ನುತ್ತಾ, ಅಳಿದವರನ್ನು ಉಳಿದವರಲ್ಲಿ ಕಾಣುತ್ತ ಪ್ರೀತಿ ಪಾತ್ರರ ಸಾವನ್ನು, ಅಗಲಿಕೆಯನ್ನು ತಮ್ಮ ಇತಿಮಿತಿಯಲ್ಲೇ ಮೀರುತ್ತಾರೆ.

ಹಾಗಾದರೆ ಮಕ್ಕಳೆಂದರೆ ಕುಟುಂಬದ, ವಂಶದ, ತಲೆಮಾರಿನ ಮುಂದುವರಿಕೆಯೇ?

ಮಡಿಲಿನ ಖಾಲಿತನ, ಮನೆಯವರ ಒತ್ತಾಯ, ಸಮಾಜದ ಒತ್ತಡ ಹಾಗೂ ಇವೆಲ್ಲವನ್ನೂ ಮೀರಿದ ಸೃಷ್ಟಿ ಸಹಜವಾದ ಯಾವುದೋ ಒಂದು ತುಡಿತ.. ಇವೆಲ್ಲದರ ಒಟ್ಟು ಮೊತ್ತವಾಗಿಯೇ ಮನುಷ್ಯ ಮಕ್ಕಳಿಗಾಗಿ ಹಂಬಲಿಸುವುದು? ಅದಕ್ಕಾದರೂ ಪೂರ್ತಿ ಹ್ಞೂಂ ಎನ್ನುವುದು ಕಷ್ಟ. ಬದುಕಿನ, ಮನಸ್ಸಿನ, ಅಂತರಾಳದ ಯಾವ ಖಾಲಿತನವನ್ನು ಮಗುವೆಂಬ ಕರುಳಿನ ಚೂರು ತುಂಬುತ್ತದೆಯೋ ವಿವರಿಸಿ ಹೇಳಲಾಗದು.

ಅಂಥಾ ಮಗುವೆಂಬ ಜೀವದ ತುಣುಕು ತಿಂಗಳಾನುಗಟ್ಟಲೆ ಒಡಲಲ್ಲೇ ಚಿಗುರಿ, ತನ್ನ ಇರುವಿಕೆಯ ಹತ್ತೆಂಟು ಲಕ್ಷಣಗಳನ್ನು ಅಮ್ಮ-ಅಪ್ಪನಿಗೆ ದಾಟಿಸಿ, ಒಳಗಡೆಯೇ ಕಾಲು ಆಡಿಸಿ, ಅಚ್ಚು ಹಾಕಿದ ಪ್ರತಿಯೊಂದು ರಿಪೋರ್ಟಿನಲ್ಲೂ ಚಿತ್ರವಾಗಿ, ಗೆರೆಯಾಗಿ, ಲಕ್ಷಣವಾಗಿ, ಎದೆ ಬಡಿತದ ನಕ್ಷೆಯಾಗಿ ಮೂಡಿ, ದಂಪತಿಗಳ ದೈನಿಕ ಹರಟೆಯಲ್ಲಿ ಮಾತಾಗಿ, ನಗುವಾಗಿ, ಕನಸಾಗಿ, ಖುಷಿಯಾಗಿ ಲಾಸ್ಯವಾಡಿ ಕೊನೆಗೆ ಅವೆಲ್ಲವೂ ಸಾಕಾರವಾಗುವ ಹೊತ್ತಿನಲ್ಲಿ ಹಠಾತ್ತನೆ ನಿರ್ಧಾರ ಬದಲಿಸಿ ಎಲ್ಲಿಂದ ಹುಟ್ಟಿ ಬಂತೋ ಅದೇ ಶೂನ್ಯದಲ್ಲಿ ಲೀನವಾಗಿಬಿಟ್ಟರೆ?

ಮೊದಲಿನಿಂದ ಖಾಲಿಯೇ ಇರುವ ಕುರ್ಚಿಗಿಂತ ನಡುವೆ ಒಂದಷ್ಟು ಹೊತ್ತು ಯಾರೋ ಕುಳಿತಿದ್ದು ಎದ್ದು ಹೋದ ಆಸನ ಹೆಚ್ಚು ಖಾಲಿಯಾಗಿ ಕಾಣುತ್ತದೆ. ನವ ಮಾಸ ತುಂಬಿದ ಬಳಿಕ ಜೀವದ ಬದಲಿಗೆ ಶೂನ್ಯವನ್ನು ಹಡೆದ ಒಡಲು ಹೊಸದಾದ ಖಾಲಿತನಕ್ಕೀಡಾಗುತ್ತದೆ. ಬಂದೇ ಬರುವನೆಂದು ನಂಬಿದ್ದ ಅತಿಥಿ.. ಬರಲೇ ಬೇಕಿದ್ದ ಅತಿಥಿ.. ಅವನ ಸ್ವಾಗತಕ್ಕೆ ಏನೆಲ್ಲ ತಯಾರಾಗಿತ್ತು! ತಂದಿಟ್ಟುಕೊಂಡ ಮಲ್ಲಿಗೆ ಮೆದುವಿನ ಟೊಪ್ಪಿಯಿತ್ತು. ಮೊಲದ ತುಪ್ಪಳದಂಥಾ ಅಂಗಿಯಿತ್ತು. ಅದರ ಅಂಚಲ್ಲಿ ಕೈಯಲ್ಲೇ ಹೊಲಿದ ಕಸೂತಿಯಿತ್ತು. ಕಟ್ಟಿದ ತೊಟ್ಟಿಲಿತ್ತು. ಕೈಗೆ ಕೊಡಲು ಕಾದಿದ್ದ ಗಿಲಿಗಿಚ್ಚಿಯಿತ್ತು.. ಅಲ್ಲಿ ಎಲ್ಲವೂ ಇತ್ತು.

ಅವನ್ನೆಲ್ಲ ಧರಿಸಬೇಕಾದ ಮಗುವೊಂದರ ಹೊರತಾಗಿ.

ಆ ದಿನ ಆ ತಂದೆಯಾಗದ ತಂದೆಗೆ “ಇನ್ನೂ ವಯಸ್ಸಿದೆ. ದುಃಖಿಸಬೇಡಿ” ಎಂದಿದ್ದೆ. ಆದರೆ ಕಳೆದುಕೊಳ್ಳುವ ಮೂಲಕ ಅಪ್ಪನಾದ ಅವರ ಆಳದ ದುಃಖಕ್ಕೆ ನಾನು ಹೇಳಿದ ಸಮಾಧಾನ ಎಷ್ಟೊಂದು ನಿರುಪಾಯದ್ದಾಗಿತ್ತೆನ್ನುವುದು ನನಗೂ ಗೊತ್ತಿತ್ತು. ನಾಳೆ ಮತ್ತೊಂದು ಕನಸನ್ನು ಹೊಸದಾಗಿ ಎಳೆದುಕೊಳ್ಳಬಹುದು. ಆದರೆ ಈ ಕನಸಿನ ಗತಿಯೇನು? ಏನಾಗುತ್ತವೆ ಹೀಗೆ ಫಲಿಸದೇ ಹೋದ ಸ್ವಪ್ನಗಳು? ಅವನ್ನು ಕಾಣುತ್ತ ಕಳೆದ ಅಗಣಿತ ಕ್ಷಣಗಳು? ಮೊದಲ ಬಾರಿಗೆ ಒಡಲಲ್ಲೊಂದು ಕುಡಿ ಚಿಗುರಿದ ಸುದ್ದಿಗೆ ವೈದ್ಯರು ಖಾತ್ರಿಯ ರಿಪೋರ್ಟು ನೀಡಿದಾಗ ಪಟ್ಟ ಸಂಭ್ರಮಗಳು? ಕೊಟ್ಟ ಅಪ್ಪುಗೆಗಳು? ತೀರಿಸಿದ ಹರಕೆಗಳು?

ಒಡಲು-ಮಡಿಲು. ಇವುಗಳ ನಡುವೆ ಎರಡೇ ಇಂಚಿನ ಅಂತರ. ಆದರೂ ಅದೆಷ್ಟು ದೂರ! ಬದುಕು ಹಾಗೂ ಸಾವುಗಳನ್ನು ನಿರ್ಧರಿಸುವಷ್ಟು! ಯಾರಿಗೋ ಗರ್ಭಪಾತವಾದ ಸುದ್ದಿ ಕೇಳಿದಾಗ ಅದು ಈಗ ಕಾಮನ್. ಅಷ್ಟು ತಲೆ ಕೆಡಿಸಿಕೊಳ್ಳೋದು ಏನಿದೆ? ಎನ್ನುತ್ತೇವೆ ಒಮ್ಮೊಮ್ಮೆ. ಈ ಜಗತ್ತಿನಲ್ಲಿ ಜನ ಸಂಖ್ಯೆ ಅದೆಷ್ಟಾಗಿದೆಯೆಂದರೆ ಒಬ್ಬರ ಸಾವು, ನೋವು, ದುಃಖ, ದುಮ್ಮಾನಗಳೆಲ್ಲ ಇನ್ನೊಬ್ಬರ ಪಾಲಿಗೆ ಬರಿದೆ ಸುದ್ದಿಯಾಗಿಯೇ ಉಳಿಯುವಷ್ಟು! ವ್ಯಕ್ತಿಯೊಬ್ಬಳು ತಲೆ ಕೊಟ್ಟು ಜೀವ ಬಿಟ್ಟ ಹಳಿಯೊಂದು ತಕ್ಷಣ ಸ್ವಚ್ಛವಾಗಿ ಮುಂದಿನ ರೈಲಿನ ಹಾಯುವಿಕೆಗೆ ಸಿದ್ಧವಾಗುತ್ತದೆ ಕೆಲವೇ ಗಂಟೆಗಳಲ್ಲಿ..

ಕ್ರೋಮೋಸ಼ೋಮ್ ಕಥೆಯಲ್ಲಿ ಗರ್ಭಪಾತವಾಗುವ ಮಗು ದಂಪತಿಗಳ ನಡುವೆ ಗೆರೆಯೊಂದನ್ನು ಎಳೆದು ಬಿಡುತ್ತದೆ. ತಾಯಿ ‘ಈ ನೋವು ನನಗಷ್ಟೇ’ ಎಂಬಂತೆ ನಡೆದುಕೊಂಡು ದುಃಖದಲ್ಲೂ ಅವನನ್ನು ಒಂಟಿ ಮಾಡಿದರೆ ಇತ್ತ ತಂದೆಯು ನಡೆಸಲೇ ಬೇಕಾದ ದೈನಂದಿನ ಜಂಜಡಗಳಲ್ಲೂ ಆ ವಿಷಾದವು ವಿಚಿತ್ರ ರೂಪದಲ್ಲಿ ಬೆರತಂತಾಗಿ ತತ್ತರಿಸಿಹೋಗುತ್ತಾನೆ. ಇರಿಯುವ ಓರಗಿತ್ತಿಯರೊಂದಿಗೆ ಜಗಳವಾಡದೇ, ಪಿಸುಗುಡುವ ನಾಲಿಗೆಗೆ ಪ್ರತಿಕ್ರಿಯಿಸದೇ, ಮನಸ್ಸಿಲ್ಲದಿದ್ದರೂ ಬಾಸಿಗೆ ಕೊಡಬೇಕಾದ ರಿಪೋರ್ಟಿನಲ್ಲಿ ಕೊಂಚವೂ ವ್ಯತ್ಯಯವಾಗದೆಯೇ, ಒಟ್ಟಾರೆ ತನ್ನ ದೈನಂದಿನ ಯಾವ ವ್ಯಾವಹಾರಿಕ ನಡವಳಿಕೆಯಲ್ಲೂ ಏರಿಳಿತವಾಗದಂತೆ ಪ್ರೊಫೆಷನಲ್ ಆದ ನಗುವೊಂದನ್ನು ಬಲವಂತವಾಗಿ ಧರಿಸಿಕೊಂಡು ವೈಯಕ್ತಿಕ ಚಿಂತೆಗಳಿಗೆ ಸಂಜೆ ಏಳರಿಂದ ಬೆಳಗ್ಗೆ ಒಂಬತ್ತರ ನಡುವೆಯಷ್ಟೇ ಕಾಡುವಂತೆ ಬೇಡಿಕೊಳ್ಳುತ್ತ ಒಳಗಿಂದೊಳಗೇ ಹೋರಾಡುವ ದಂಪತಿಗಳ ಆಧುನಿಕ ಜೀವನಗಳು.. ಅರೆರೇ, ಕಲಿಯುಗದಲ್ಲಿ ಮಹಾಭಾರತಗಳು ಮನುಷ್ಯನ ಒಳಗೇ ನಡೆಯುತ್ತಿವೆಯಲ್ಲ ಅನ್ನಿಸುತ್ತದೆ ಒಮ್ಮೊಮ್ಮೆ.

ಕೊನೆಯಲ್ಲಿ ಬದುಕು ಎಲ್ಲವನ್ನೂ ದಾಟಿ ಮುನ್ನಡೆಯುತ್ತದೆ. ತುಸು ಕುಳಿತು, ಸುಧಾರಿಸಿಕೊಂಡು, ಏದುಸಿರು ಬಿಟ್ಟು, ನಗುವಿನ ಇಮೋಜಿಯನ್ನು ತೊಟ್ಟು, ಗಾಯಕ್ಕೊಂದು ಬ್ಯಾಂಡೇಜ್ ಸುತ್ತಿಕೊಂಡು, ಕುಂಟಿಕೊಂಡು, ಹೊರಟವರನ್ನು ಕಳುಹಿಸಿಕೊಟ್ಟು, ಉಳಿದವರ ಕೈ ಹಿಡಿದು ನಡೆಯುತ್ತೇವೆ ನಿಧಾನವಾಗಿ‌. ಕಾಲದ ಯಾವುದೋ ಸರಪಳಿಯ ಕೊಂಡಿಗೆ ಸಿಕ್ಕಿಕೊಂಡ ಕಾಲರ್‌ಗಳು ನಮ್ಮವು. ಸುಮ್ಮನೆ ನಿಂತರೂ ದರ ದರ ಎಳೆಯುತ್ತದೆ ಬದುಕು. ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರಿಸುವಂತೆ..

ಕೊನೆಗೆಲ್ಲೋ ಒಮ್ಮೆ ಕನಸೊಂದು ಫಲಿಸಿ, ಮಡಿಲು ಅರಳಿ, ಆ ಕನಸು ತನ್ನದೇ ಆದ ಒಂದಷ್ಟು ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡು ನಮ್ಮಲ್ಲಿ ಖುಷಿ, ದುಃಖ, ಭರವಸೆ, ಹತಾಶೆ ಎಲ್ಲವನ್ನೂ ಹುಟ್ಟಿಸುತ್ತಾ ಮುನ್ನಡೆಯುವಾಗ ಅಂದು ಫಲಿಸದೇ ಹೋದ ಜೀವವೂ ಇದರಲ್ಲೇ ಸೇರಿ ಹೋದಂತೆ ಎಲ್ಲವನ್ನೂ ಮರೆತು ವಾಸ್ತವದಲ್ಲಿ ಬೆರೆಯುತ್ತೇವೆ.

ಹೀಗೆ ಸಾಗುತ್ತಿರುವಾಗಲೇ ಅದೊಂದು ಸಂಜೆ ವಿನಾಕಾರಣವಾಗಿ ನೆಪಾಗುತ್ತದೆ ಕಣ್ತೆರೆಯುವ ಮೊದಲೊಮ್ಮೆ ಕರಗಿದ ಜೀವ.. ಎಲ್ಲಿ ಹೋಯಿತು ಆ ಜೀವಾತ್ಮ? ಮತ್ತೆ ಮಗುವಾಗಿ ನಮ್ಮಲ್ಲೇ ಮೊಳೆಯಿತೇ? ಅಥವಾ ಇನ್ಯಾರ ಮಡಿಲಲ್ಲೋ ಚಿಗುರಿತೇ? ಎಷ್ಟೆಲ್ಲ ದೂರಗಳಿವೆ ನಮ್ಮೀ ವಂಶೋದ್ಧಾರಕನ ಮೇಲೆ. ಆ ಕುಡಿಯೇ ಜೀವ ತಳೆದಿದ್ದರೆ ಈ ವ್ಯಕ್ತಿತ್ವವನ್ನೇ ಅಳವಡಿಸಿಕೊಳ್ಳುತ್ತಿತ್ತೇ? ಈ ಬದುಕು ಬೇರೆಯೇ ಆಗುತ್ತಿತ್ತೇ? ನೂರು ಸ್ವಭಾವಗಳ ಹೊತ್ತು ಚಲಿಸುವ ಸಾವಿರ ಲಕ್ಷ ಜೀವ ಕಣಗಳ ಪೈಕಿ ಯಾವುದು ಫಲಿಸಬೇಕು, ಯಾವುದು ನಶಿಸಬೇಕು ಎಂದು ನಿರ್ಧರಿಸಿ ಕೋಟ್ಯಾಂತರ ಜನ್ಮಗಳನ್ನು ನಿಯಂತ್ರಿಸುವ ಆ ಶಕ್ತಿಯಾದರೂ ಯಾವುದು?

ಬದುಕೆಂಬ ಅರ್ಥವಾಗದ ಕ್ಯೂ ಆರ್ ಕೋಡನ್ನು ಓದಿ ಅರ್ಥೈಸಬಲ್ಲ ಸ್ಕ್ಯಾನರ್ ಆದರೂ ಎಲ್ಲಿದೆ?

About The Author

ವಿನಾಯಕ ಅರಳಸುರಳಿ

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ' ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ 'ಮರ ಹತ್ತದ ಮೀನು' ಕಥಾ ಸಂಕಲನಗಳು ಪ್ರಕಟವಾಗಿವೆ.

4 Comments

  1. Kiran Kumar KR

    ಚೆನ್ನಾಗಿ ಬಂದಿದೆ, ವಿನಯ್! ಅಭಿನಂದನೆ.

    Reply
  2. Raju Hegde

    ಇನ್ನೂ ಮುಂದೆ ಹೋಗುವುದು ಬೇಡವೇನೊ..ಮತ್ತೊಂದು ಅಡಿ ಇಟ್ಟರೆ “ಆದ್ಯಾತ್ಮ” ವಾಗಿ…

    Reply
  3. NAGESHA B

    ಚಿರಂತನತ್ವದ ಬಗೆಗಿನ ಮನುಷ್ಯನ ಹಂಬಲವೇ ಮಕ್ಕಳನ್ನು ಪಡೆಯಬೇಕೆನ್ನುವ ಪ್ರಕೃತಿದತ್ತ ಸಹಜ ತುಡಿತದಿಂದ ಪ್ರಾರಂಭಿಸಿ ಎಲ್ಲ ಕಲೆಗಳ ನಿರ್ಮಾಣದ ಹಿಂದಿನ ಒತ್ತಡ. ಇದು ಮತ್ತೊಂದು ರೀತಿಯಲ್ಲಿ ಸಾವನ್ನು ಕುರಿತ ಭಯವೂ ಹೌದು. ಲೇಖನ ಚನ್ನಾಗಿದೆ.

    Reply
  4. ಸುಪ್ರೀತಾ ಶೆಟ್ಟಿ

    ಪ್ರತಿಕ್ರಿಯಿಸಲು ಏನು ಇಲ್ಲ ಸರ್,
    ಕಣ್ಣಂಚು ಒದ್ದೆ ಆಯ್ತು,ಇಷ್ಟನ್ನಷ್ಟೆ ಹೇಳಬಲ್ಲೆ. ಕಳೆದುಕೊಂಡವರ ಭಾವನೆಯನ್ನು ಅರಿತು ಬರೆದಿದ್ದೀರಿ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ