ಈಗಿನ ಕಾಲಘಟ್ಟದಲ್ಲಿ ಪೋಲಂಡ್‌ನ ಸಾಂಸ್ಕೃತಿಕ ಬಹುತ್ವ ಕ್ಷೀಣಿಸತೊಡಗಿದೆ. ನಗರಕೇಂದ್ರಿತವಾದ ಸಂಸ್ಕೃತಿಯೇ ಪ್ರಾಬಲ್ಯ ಮೆರೆಯುತ್ತಾ, ಎಲ್ಲರ ಜೀವನ ವಿಧಾನವನ್ನು ಅದೇ ಬಗೆಯಲ್ಲಿ ರೂಪಿಸತೊಡಗಿದೆ. ಪೋಲಂಡ್‌ನ ಆಧುನಿಕ ಮಾಧ್ಯಮಗಳೂ ಸಹ ಏಕರೂಪದ ಸಂಸ್ಕೃತಿಯೆಡೆಗೆ ಒತ್ತು ನೀಡುತ್ತಿವೆ. ಪೋಲಂಡ್‌ನ ಪರಂಪರೆಯನ್ನು ಸಂರಕ್ಷಿಸಬೇಕೆಂಬ ಮನೋಭಾವದ ಕೆಲವರು ಜಾನಪದ ಸಂಸ್ಕೃತಿಯಲ್ಲಿ ಕಂಡುಬರುವ ಧಾರ್ಮಿಕ ಸಂಗತಿಗಳ ಕಡೆಗೆ ಗಮನಹರಿಸುತ್ತಿದ್ದಾರೆ. ವಿಶೇಷವಾಗಿ ಅಲ್ಲಿಯ ಚರ್ಚುಗಳು ಈ ಬಗೆಯ ಕಾರ್ಯದಲ್ಲಿ ನಿರತವಾಗಿವೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಪೋಲಂಡ್ ದೇಶದ ಕುರಿತ ಬರಹ ನಿಮ್ಮ ಓದಿಗೆ
ಪೋಲಂಡ್ ಎನ್ನುವ ಹೆಸರು ಬಂದದ್ದು ಇಲ್ಲಿ ವಾಸಿಸುತ್ತಿದ್ದ ಸ್ಲಾವಿಕ್ ಬುಡಕಟ್ಟಿನಿಂದ. ಪೋಲಾನಿ ಎನ್ನುವುದು ದೇಶದ ಮೂಲ ಹೆಸರು. ಪೋಲಾನಿ ಎಂದರೆ ತೆರೆದ ಮೈದಾನದಲ್ಲಿ ವಾಸಿಸುವ ಜನರು ಎಂದರ್ಥ. ಸ್ಲಾವಿಕ್ ಬುಡಕಟ್ಟಿಗೆ ಸೇರಿದ ಜನರು ಆರನೇ ಶತಮಾನದಿಂದಲೂ ಸಹ ಪೋಲಂಡ್‌ನಲ್ಲಿ ವಾಸಿಸುತ್ತಿದ್ದಾರೆ. ಪೋಲಂಡ್‌ನ ಜಾನಪದ ಸಂಸ್ಕೃತಿ ದುರ್ಬಲಗೊಳ್ಳಲಾರಂಭಿಸಿದ್ದು ಎರಡನೇ ಮಹಾಯುದ್ಧದ ನಂತರ. ಪೋಲಂಡ್‌ನಲ್ಲಿ ಕೈಗಾರಿಕೆಗಳು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಿದವು. ನಗರಗಳ ನಿರ್ಮಾಣ ಬಹುಬೇಗನೆ ನಡೆಯಿತು. ಕಮ್ಯುನಿಸ್ಟ್ ಆಳ್ವಿಕೆಯ ಸಮಯದಲ್ಲಿ ಗ್ರಾಮೀಣ ಸಂಪ್ರದಾಯಗಳ ಕುರಿತು, ಧರ್ಮಾಚರಣೆಗಳ ಕುರಿತು ದಿವ್ಯ ನಿರ್ಲಕ್ಷ್ಯ ರೂಪುಗೊಂಡಿತು. ಇದರಿಂದಾಗಿ ಪ್ರಾಚೀನ ಕಾಲಘಟ್ಟದಿಂದಲೂ ಅಸ್ತಿತ್ವದಲ್ಲಿದ್ದ ಜಾನಪದ ಸಂಸ್ಕೃತಿ ಬಲ ಕಳೆದುಕೊಳ್ಳುವಂತಾಯಿತು. ಪೋಲಂಡ್‌ನ ಜನಪದರು ತಮ್ಮದೇ ಆದ ಮಾತಿನ ಶೈಲಿಯನ್ನು ರೂಢಿಸಿಕೊಂಡಿದ್ದರು. ಗ್ರಾಮ್ಯ ಭಾಷೆಯ ಸೊಗಸನ್ನು, ಸೊಗಡನ್ನು ಅವರ ಮಾತಿನ ಮೂಲಕ ಗಮನಿಸಬಹುದಿತ್ತು. ಅವರದ್ದೇ ಆದ ವಿಶಿಷ್ಟವಾದ ಉಡುಗೆ ತೊಡುಗೆಗಳಿದ್ದವು. ಹಲವಾರು ಪ್ರಾದೇಶಿಕವಾದ ಉಪಭಾಷೆಗಳಿದ್ದವು. ಹಳ್ಳಿಯ ರೈತರು ತಮ್ಮ ಕಲ್ಪನೆ, ಸೃಜನಶೀಲತೆಗಳಿಗೆ ಅನುಗುಣವಾಗಿ ಹಲವಾರು ಕಲೆಗಳನ್ನು ರೂಪಿಸಿಕೊಂಡಿದ್ದರು. ಕರಕುಶಲ ವಸ್ತುಗಳ ತಯಾರಿಯಲ್ಲಿ ಮುಂಚೂಣಿಯಲ್ಲಿದ್ದರು. ಧರ್ಮಕ್ಕೆ ಸಂಬಂಧಿಸಿದ, ಕೃಷಿಯೊಂದಿಗೆ ತಳಕು ಹಾಕಿಕೊಂಡ ಅನೇಕ ಹಬ್ಬಗಳನ್ನು ಬೇರೆ ಬೇರೆ ಋತುಗಳಲ್ಲಿ ಆಚರಿಸಿ ಸಂಭ್ರಮಿಸುತ್ತಿದ್ದರು ಪೋಲಂಡ್‌ನ ಜನರು.
ಆದರೆ ಈಗಿನ ಕಾಲಘಟ್ಟದಲ್ಲಿ ಪೋಲಂಡ್‌ನ ಸಾಂಸ್ಕೃತಿಕ ಬಹುತ್ವ ಕ್ಷೀಣಿಸತೊಡಗಿದೆ. ನಗರಕೇಂದ್ರಿತವಾದ ಸಂಸ್ಕೃತಿಯೇ ಪ್ರಾಬಲ್ಯ ಮೆರೆಯುತ್ತಾ, ಎಲ್ಲರ ಜೀವನ ವಿಧಾನವನ್ನು ಅದೇ ಬಗೆಯಲ್ಲಿ ರೂಪಿಸತೊಡಗಿದೆ. ಪೋಲಂಡ್‌ನ ಆಧುನಿಕ ಮಾಧ್ಯಮಗಳೂ ಸಹ ಏಕರೂಪದ ಸಂಸ್ಕೃತಿಯೆಡೆಗೆ ಒತ್ತು ನೀಡುತ್ತಿವೆ. ಪೋಲಂಡ್‌ನ ಪರಂಪರೆಯನ್ನು ಸಂರಕ್ಷಿಸಬೇಕೆಂಬ ಮನೋಭಾವದ ಕೆಲವರು ಜಾನಪದ ಸಂಸ್ಕೃತಿಯಲ್ಲಿ ಕಂಡುಬರುವ ಧಾರ್ಮಿಕ ಸಂಗತಿಗಳ ಕಡೆಗೆ ಗಮನಹರಿಸುತ್ತಿದ್ದಾರೆ. ವಿಶೇಷವಾಗಿ ಅಲ್ಲಿಯ ಚರ್ಚುಗಳು ಈ ಬಗೆಯ ಕಾರ್ಯದಲ್ಲಿ ನಿರತವಾಗಿವೆ. ಕಲ್ವಾರಿಯಾ ಜೆಬ್ರೊಜಿಡೋವ್ಸ್ಕಾ, ಲ್ಯಾಂಕೋರೊನಾ, ಕ್ಝೆಸ್ಟೊಚೋವಾ, ಪಿಕಾರಿ ಸ್ಲ್ಯಾಸ್ಕೀ ಮೊದಲಾದ ಚರ್ಚುಗಳಿಗೆ ಯಾತ್ರೆ ಕೈಗೊಳ್ಳುವವರಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಮೂಲಕ ಆಸ್ತಿಕ ಮನೋಭಾವವನ್ನು ಜನರಲ್ಲಿ ಬೆಳೆಸುವ ಪ್ರಯತ್ನ ನಡೆಯುತ್ತಿದೆ. ಪ್ರಾಚೀನ ಸಂಸ್ಕೃತಿ ಉಳಿದರೆ ಮಾತ್ರವೇ ದೇಶ ಉಳಿಯುತ್ತದೆ ಎಂಬ ಮನೋಭಾವ ಕೆಲವರದ್ದಾಗಿದೆ. ಇನ್ನೂ ಕೆಲವರು ಆಧುನಿಕ ಸಂಸ್ಕೃತಿಯನ್ನೇ ಬಲವಾಗಿ ಅಪ್ಪಿಕೊಂಡಿದ್ದಾರೆ. ಪರಂಪರೆಯನ್ನೂ ಉಳಿಸಿಕೊಂಡು, ಆಧುನಿಕತೆಯನ್ನೂ ಬೆಳೆಸಿಕೊಂಡು ದೇಶವನ್ನರಳಿಸುವ ಕಲೆಯನ್ನು ಪೋಲಂಡ್ ಕಲಿಯಬೇಕಾದದ್ದು ಈ ಕಾಲಘಟ್ಟದ ಅಗತ್ಯವಾಗಿದೆ.
ಪೋಲಂಡ್‌ನ ಕೆಲವು ಜಾನಪದೀಯ ಸಂಸ್ಥೆಗಳು- ಪ್ರದೇಶಗಳು- ಸಮುದಾಯಗಳು ಬದಲಾಗಿರುವ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಮುನ್ನಡೆಯುತ್ತಿವೆ. ಮಜೋವ್ಸೆ ಎನ್ನುವುದು ಪೋಲಂಡ್‌ನ ಜಾನಪದ ಸಮೂಹದ ವರ್ಣರಂಜಿತ ಮತ್ತು ಶೈಲೀಕೃತ ಸಂಗ್ರಹವಾಗಿದೆ. ಇದು ಕಾಲಕ್ಕೆ ತಕ್ಕಂತೆ ಮಾರ್ಪಾಡು ಆಗಿರುವುದರಿಂದಾಗಿ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿಕೊಂಡಿದೆ. ಪೊಧಾಲೆ ಪ್ರದೇಶದಲ್ಲಿರುವ ಗೊರಲೆ ಸಮುದಾಯದವರು ಹೈ ಲ್ಯಾಂಡರ್ಸ್ ಎಂದು ಗುರುತಿಸಿಕೊಂಡಿದ್ದಾರೆ. ಈಶಾನ್ಯ ಪೋಲಂಡ್‌ನ ಕುರ್ಪಿ ಮತ್ತು ವಾರ್ಸಾ ಪ್ರದೇಶದಲ್ಲಿ ಓವಿಜ್ ಜನಾಂಗದವರು ವಾಸವಾಗಿದ್ದಾರೆ. ಈ ಪ್ರಾದೇಶಿಕ ಸಮುದಾಯದ ಜನರು ತಮ್ಮ ಹಳೆಯ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಹೊಸ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಇದು ಸಂಸ್ಕೃತಿಯ ನೆಲೆಯಲ್ಲಿ ನಿಜಕ್ಕೂ ಅನುಕರಣೀಯವಾದ ಮಾದರಿಯಾಗಿದೆ.
ಪೋಲಂಡ್ ಜನರ ಹೆಸರುಗಳು ಮತ್ತು ಅಲ್ಲಿನ ಕ್ಯಾಲೆಂಡರ್ ಮಧ್ಯೆ ಸಂಬಂಧ ಇರುವುದು ಪೋಲಂಡ್‌ನ ಕುರಿತಾದ ಸೋಜಿಗದ ಸಂಗತಿಯಾಗಿದೆ. ಪೋಲಂಡ್‌ನ ಕ್ಯಾಲೆಂಡರನ್ನು ಗಮನಿಸಿದರೆ ಪ್ರತಿಯೊಂದು ದಿನಾಂಕವೂ ಸಹ ಪೋಲಂಡ್ ಪುರುಷ ಮತ್ತು ಸ್ತ್ರೀ ಹೆಸರುಗಳನ್ನು ಹೊಂದಿರುತ್ತದೆ. ನಿರ್ದಿಷ್ಟ ದಿನಾಂಕವು ನಿರ್ದಿಷ್ಟ ಹೆಸರನ್ನು ಸೂಚಿಸುತ್ತದೆ. ಇದರಿಂದಾಗಿ ಪೋಲಂಡ್‌ನ ಜನರು ತಮ್ಮ ಹೆಸರಿಗನುಗುಣವಾದ ದಿನಾಂಕವನ್ನು ಹುಟ್ಟುಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ. ಉಡುಗೊರೆ ನೀಡುವ ಕ್ರಮವೂ ಇದೆ.
ಪೋಲಂಡ್‌ನಲ್ಲಿ ವಿಶಿಷ್ಟ ಸಂಪ್ರದಾಯವೊಂದು ಕಂಡುಬರುತ್ತದೆ. ಈ ಸಂಪ್ರದಾಯ ನಡೆಸುವವರು ಮಕ್ಕಳು. ಟೋಪಿನಿ ಮಾರ್ಜಾನಿ ಎಂದು ಇದನ್ನು ಕರೆಯಲಾಗುತ್ತದೆ. ಇದು ಆಚರಿಸಲ್ಪಡುವುದು ಪ್ರತೀ ವರ್ಷದ ಮಾರ್ಚ್ 23ರಂದು. ಈ ಆಚರಣೆಯಲ್ಲಿ ಹೊಸದಾಗಿ ಹರಿಯುವ ನದಿಗಳಿಗೆ ಮಕ್ಕಳು ಗೊಂಬೆಗಳನ್ನು ಎಸೆಯುತ್ತಾರೆ. ಪೋಲಿಷ್ ಜನರ ನಂಬಿಕೆ ಪ್ರಕಾರ, ಹೀಗೆ ಮಕ್ಕಳು ಎಸೆಯುವ ಗೊಂಬೆಗಳು ಚಳಿಗಾಲವನ್ನು ಸಂಕೇತಿಸುತ್ತವೆ. ಈ ಆಚರಣೆಯನ್ನು ಹಿಂದಿನ ಕಾಲದಿಂದಲೂ ನಡೆಸಲಾಗುತ್ತಿದೆ. ಆಫ್ರಿಕಾದ ಸಹಾರಾ ಮರುಭೂಮಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪೋಲಂಡ್‌ನಲ್ಲಿಯೂ ಸಹ ಇದೇ ಮಾದರಿಯ ಮರುಭೂಮಿಯಿದ್ದು ಇದು ಪೋಲಿಷ್ ಸಹಾರಾ ಎಂದು ಖ್ಯಾತವಾಗಿದೆ. ಇಲ್ಲಿರುವ ಬ್ಲೆಡೋವ್ಸ್ಕಾ ಮರುಭೂಮಿಯು ಕ್ರಾಕೋವ್ ಮತ್ತು ಕ್ಯಾಟೋವೈಸ್ ಪ್ರದೇಶಗಳ ನಡುವೆ ಇದ್ದು, ಯುರೋಪಿನ ಅತೀ ದೊಡ್ಡ ಮರುಭೂಮಿ ಎನಿಸಿಕೊಂಡಿದೆ. ಸಾವಿರಾರು ವರ್ಷಗಳ ಹಿಂದೆ ಇದು ರೂಪುಗೊಂಡದ್ದು ಕರಗುವ ಹಿಮನದಿಯಿಂದ. ಪೋಲಂಡ್‌ನ ರಾಷ್ಟ್ರೀಯ ಧ್ವಜ ಅಂಗೀಕರಿಸಲ್ಪಟ್ಟದ್ದು 1919ರಲ್ಲಿ. ಕೆಂಪು ಮತ್ತು ಬಿಳಿ ಬಣ್ಣದ ಪಟ್ಟಿಗಳು ಧ್ವಜದಲ್ಲಿ ಎದ್ದು ಕಾಣುವಂತಿವೆ. ಬಿಳಿ ಪಟ್ಟಿಯ ಮೇಲಿರುವ ವಿನ್ಯಾಸವನ್ನು ಪೋಲಿಷ್ ಕೋಟ್ ಆಫ್ ಆರ್ಮ್ಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಬಿಳಿ ಬಣ್ಣದ ಹದ್ದಿನ ಚಿತ್ರಣವಿದ್ದು, ಕೆಂಪು ಹಿನ್ನೆಲೆಯನ್ನು ಹೊಂದಿದೆ. ಜೆಸ್ಜೆ ಪೋಲ್ಸ್ಕಾ ನೀ ಝಗಿನಾ ಎನ್ನುವುದು ಇಲ್ಲಿಯ ರಾಷ್ಟ್ರಗೀತೆಯಾಗಿದೆ. ವಿಶ್ವದ ಹಳೆಯ ಸಂವಿಧಾನಗಳ ಪೈಕಿ ಪೋಲಂಡ್ ದೇಶದ ಸಂವಿಧಾನವೂ ಸ್ಥಾನ ಗಿಟ್ಟಿಸಿಕೊಂಡಿದೆ. ಇಲ್ಲಿಯ ಸಂವಿಧಾನ ಅಂಗೀಕರಿಸಲ್ಪಟ್ಟದ್ದು 1791ರ ಮೇ 3ರಂದು. ಆದರೆ ಪೋಲಂಡ್ ವಿಭಜನೆಯಿಂದಾಗಿ ಈ ಸಂವಿಧಾನ ಕೇವಲ ಹದಿನಾಲ್ಕು ತಿಂಗಳುಗಳಲ್ಲಿಯೇ ಅಸ್ತಿತ್ವ ಕಳೆದುಕೊಂಡಿತು. ಸುಮಾರು 123 ವರ್ಷಗಳ ಕಾಲ ಪೋಲಂಡ್ ದೇಶವು ಜಗತ್ತಿನ ನಕ್ಷೆಯಲ್ಲಿ ಅವಕಾಶವನ್ನೇ ಕಳೆದುಕೊಂಡಿತ್ತು. ರಷ್ಯಾ, ಪ್ರಷ್ಯಾ ಮತ್ತು ಆಸ್ಟ್ರಿಯಾ ದೇಶಗಳಿಂದ ಮೂರು ಮೂರು ಸಲ ವಿಭಜನೆಗೊಳಗಾದ ಪೋಲಂಡ್ ಜಾಗತಿಕ ನಕ್ಷೆಯಲ್ಲಿ ಮತ್ತೆ ಕಾಣಿಸಿಕೊಂಡದ್ದು ಮೊದಲ ಮಹಾಯುದ್ಧ ಮುಗಿದ ಬಳಿಕ. ಇದಕ್ಕೂ ಮೊದಲಿನ 123 ವರ್ಷಗಳಲ್ಲಿ ಅದು ನಕ್ಷೆಯಲ್ಲಿ ಕಾಣಿಸಿಕೊಂಡಿರಲೇ ಇಲ್ಲ.
ವಾರ್ಸಾ ನಗರದಲ್ಲಿ ಓಲ್ಡ್ ಟೌನ್ ಕಂಡುಬರುತ್ತದೆ. ಇದು ಈಗಲೂ ಹಳೆಯ ಪೋಲಂಡ್ ಪಟ್ಟಣವನ್ನು ನೆನಪಿಸುವ ರೀತಿಯಲ್ಲಿದೆ. ಪಾರಂಪರಿಕತೆಯನ್ನು ಉಳಿಸಿಕೊಂಡಂತಿದೆ. ಆದರೆ ವಾಸ್ತವವಾಗಿ ಇದು ಮೂಲ ಹಳೆಯ ಪಟ್ಟಣವಲ್ಲ. ಎರಡನೇ ಮಹಾಯುದ್ಧದ ಸಮಯದಲ್ಲಿ ವಾರ್ಸಾ ಪಟ್ಟಣವು ನಾಜಿಗಳ ಬಾಂಬ್ ಧಾಳಿಗೆ ಒಳಗಾಗಿತ್ತು. ಸಂಪೂರ್ಣ ಪಟ್ಟಣ ನಾಶವಾಗಿತ್ತು. ಕಟ್ಟಡಗಳು ಉಳಿದುಕೊಳ್ಳಲಿಲ್ಲ. ಪೋಲಂಡ್‌ನ ಜನರಿಗೆ ತಮ್ಮ ಹಳೆಯ ಪಟ್ಟಣವನ್ನು ಅದೇ ರೂಪದಲ್ಲಿ ಮತ್ತೆ ಕಾಣುವ ಬಯಕೆಯಿತ್ತು. ಇದಕ್ಕಾಗಿ ವೆನೆಷಿಯನ್ ವರ್ಣಚಿತ್ರ ಕಲಾವಿದರಾದ ಬರ್ನಾರ್ಡೋ ಬೆಲ್ಲೊಟ್ಟೊ ಅವರ ರಚನೆಯ ಚಿತ್ರವನ್ನು ಆಧಾರವಾಗಿಟ್ಟುಕೊಂಡು ವಾರ್ಸಾದ ಓಲ್ಡ್ ಟೌನ್ ಅನ್ನು ಮತ್ತೆ ನಿರ್ಮಿಸಲಾಯಿತು. ವಾರ್ಸಾ ನಗರದ ಮಧ್ಯಭಾಗದಲ್ಲಿರುವ ಪ್ಯಾಲೇಸ್ ಆಫ್ ಕಲ್ಚರ್ ಆ್ಯಂಡ್ ಸೈನ್ಸ್ ಕಟ್ಟಡವು ಪ್ರಸಿದ್ಧವಾಗಿದೆ. ಈ ಕಟ್ಟಡ ಕಮ್ಯುನಿಸ್ಟ್ ವಿಚಾರಧಾರೆಯ ಸ್ಮಾರಕದಂತಿದೆ. ರಷ್ಯಾದ ಕಮ್ಯುನಿಸ್ಟ್ ನಾಯಕರಾಗಿದ್ದ ಜೋಸೆಫ್ ಸ್ಟಾಲಿನ್ ಅವರಿಗೆ ಇದನ್ನು ಸಮರ್ಪಿಸಲಾಗಿದೆ. ಆದರೆ ಡಿ- ಸ್ಟಾಲಿನೈಸೇಶನ್ ಅವಧಿಯಲ್ಲಿ ಸ್ಟಾಲಿನ್ ಅವರ ಹೆಸರನ್ನು ಹಿಂದೆಗೆದುಕೊಳ್ಳಲಾಗಿದೆ. ಪೋಲಂಡ್‌ನ ಅನೇಕ ಜನರಿಗೆ ಈ ಕಟ್ಟಡದ ಕುರಿತು ಅಸಮಾಧಾನವಿದೆ. ಇದನ್ನು ಕೆಡವಿಹಾಕಬೇಕು ಎನ್ನುವ ಕೂಗು ಆಗಾಗ ಕೇಳಿಬರುತ್ತದೆ. ಸೋವಿಯತ್ ಒಕ್ಕೂಟದ ನೆನಪನ್ನು ಇದು ಉಂಟುಮಾಡುವುದರಿಂದ ಪೋಲಂಡ್‌ನ ಅನೇಕರು ಇದರ ಕುರಿತು ತಿರಸ್ಕಾರದ ಭಾವವನ್ನು ಇಟ್ಟುಕೊಂಡಿದ್ದಾರೆ.
ಹಿಂದಿನ ಕಾಲದಿಂದಲೂ ಪೋಲಂಡ್‌ನ ಸಾಹಿತ್ಯ ರಚನೆಗಳು ರಾಷ್ಟ್ರೀಯತೆಯ ಅಭಿವ್ಯಕ್ತಿಯನ್ನು ಪ್ರಧಾನ ಉದ್ದೇಶವಾಗಿ ಹೊಂದಿವೆ. ಸಾಹಿತ್ಯ ಮತ್ತು ಧರ್ಮ ಈ ಎರಡೂ ಅಂಶಗಳು ಪೋಲಂಡ್‌ನ ಪರಂಪರೆಯನ್ನು ಮುಂದಿನ ತಲೆಮಾರಿಗೆ ರವಾನಿಸುವ ಸಾಧನಗಳಾಗಿ ಗುರುತಿಸಿಕೊಂಡಿವೆ. ಪಾಶ್ಚಾತ್ಯ ಪ್ರಭಾವದ ಎದುರು ತಮ್ಮತನವನ್ನು ಉಳಿಸಿಕೊಳ್ಳುವುದಕ್ಕೆ ಸಾಹಿತ್ಯವನ್ನು ಪ್ರಧಾನವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಪೋಲಂಡ್‌ನ ಜನರು. ರಾಷ್ಟ್ರದ ಅಸ್ಮಿತೆಯನ್ನು ಉಳಿಸುವ ಪ್ರಬಲ ಸಂಗತಿಯಾಗಿ ಸಾಹಿತ್ಯವನ್ನು ಕಾಣಲಾಗಿದೆ. ಪೋಲಿಷ್ ಸಾಹಿತ್ಯ ರಚನೆಗಳ ಮೇಲೆ ಅಲ್ಲಿನ ರಾಜಕೀಯವು ಪ್ರಭಾವ ಬೀರಿದೆ. ರಾಜಕೀಯ ನೆಲೆಯಲ್ಲಿ ನಡೆಯುವ ಘಟನಾವಳಿಗಳು ಕಾಲ್ಪನಿಕ ಮತ್ತು ವಾಸ್ತವತೆಗಳ ಸಂಮ್ಮಿಶ್ರಣದೊಂದಿಗೆ ಸಾಹಿತ್ಯ ರಚನೆಗಳಲ್ಲಿ ಕಂಡುಬರುತ್ತವೆ. ಪೋಲಂಡ್‌ನಲ್ಲಿ ಕಮ್ಯುನಿಸ್ಟ್ ಸರ್ಕಾರವಿದ್ದ ಸಮಯದಲ್ಲಿ ಅಲ್ಲಿನ ಸಾಹಿತಿಗಳು ತಮ್ಮ ಚಿಂತನೆಗಳನ್ನು ಬರಹದ ರೂಪದಲ್ಲಿ ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲ. ಸರ್ಕಾರದ ಕುರಿತಾದ ಭೀತಿ ಅವರಲ್ಲಿತ್ತು. ಈ ಕಾರಣದಿಂದಾಗಿ ಉಪಮೆಗಳು, ಸಂಕೇತಗಳು, ಪ್ರತಿಮೆಗಳ ಮೂಲಕ ಸಮಾಜದ ವಸ್ತುಸ್ಥಿತಿಯನ್ನು ಪರೋಕ್ಷ ಧಾಟಿಯಲ್ಲಿ ಬರೆದಿದ್ದಾರೆ.
ಈ ಬಗೆಯ ಸಾಹಿತ್ಯ ರಚನೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ. ಈ ಕಾರಣದಿಂದಾಗಿ ಪೋಲಿಷ್ ಸಾಹಿತ್ಯ ರಚನೆಗಳು ಶ್ರೇಷ್ಠಮಟ್ಟದಲ್ಲಿದ್ದರೂ ಹೊರದೇಶದ ಓದುಗರನ್ನು ಹೆಚ್ಚಾಗಿ ಆಕರ್ಷಿಸಿಲ್ಲ ಎನ್ನುವುದು ನಿಜ. ಹತ್ತೊಂಬತ್ತನೇ ಶತಮಾನದ ಮೊದಲಾರ್ಧದಲ್ಲಿ ಪದ್ಯ ರಚನೆಗಳು ಹೆಚ್ಚಾಗಿ ರಚನೆಯಾದರೆ, ಉತ್ತರಾರ್ಧದಲ್ಲಿ ಗದ್ಯ ಪ್ರಕಾರಗಳು ಪ್ರಾಧಾನ್ಯತೆ ಗಳಿಸಿಕೊಂಡವು. ಹತ್ತೊಂಬತ್ತನೇ ಶತಮಾನದ ಆರಂಭದ ಕಾಲಘಟ್ಟದಲ್ಲಿ ಮೂರು ಪ್ರಮುಖ ಕವಿಗಳು ಪೋಲಿಷ್ ಕಾವ್ಯ ವಲಯವನ್ನು ಬೆಳೆಸಿದ್ದಾರೆ. ಜೂಲಿಯಸ್ ಸ್ಲೋವಾಕಿ, ಜಿಗ್ಮಂಟ್ ಕ್ರಾಸಿನ್ಸ್ಕಿ, ಆ್ಯಡಮ್ ಮಿಕಿವಿಕ್ಜ್ ಈ ಮೂವರು ಪೋಲಂಡ್‌ನ ಕಾವ್ಯಕ್ಷೇತ್ರದ ಬೆಳವಣಿಗೆಗೆ ಕಾರಣಕರ್ತರಾದವರು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಆರಂಭಗೊಂಡ ಗದ್ಯ ಪ್ರಾಬಲ್ಯ ಇಪ್ಪತ್ತನೇ ಶತಮಾನದಲ್ಲಿಯೂ ಮುಂದುವರಿಯಿತು. ಎಲಿಜಾ ಒರ್ಜೆಸ್ಕೊವಾ, ಸ್ಟೀಫನ್ ಝೆರೊಮ್ಸ್ಕಿ, ಹೆನ್ರಿಕ್ ಸಿಯೆನ್ಕಿವಿಕ್ಜ್, ಬೋಲೆಸ್ಲಾವ್ ಪ್ರಸ್ ಇವರು ಪ್ರಮುಖ ಗದ್ಯ ಬರಹಗಾರರು. ಇವರಲ್ಲಿ ಬಹುತೇಕರು ಯುವ ಪೋಲಂಡ್ ಚಳುವಳಿಯಲ್ಲಿ ಭಾಗವಹಿಸಿದ್ದರು. ಹೆನ್ರಿಕ್ ಸಿಯೆನ್ಕಿವಿಕ್ಜ್ ಅವರು ನೋಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇವರೆಲ್ಲರೂ ಪೋಲಿಷ್ ಭಾಷೆಯಲ್ಲಿ ಸಾಹಿತ್ಯ ರಚನೆ ನಡೆಸಿದ್ದರೆ, ಜೋಸೆಫ್ ಕಾನ್ರಾಡ್ ಅವರು ಪೋಲಂಡ್‌ನ ಸಂವೇದನೆಗಳನ್ನು ಅಭಿವ್ಯಕ್ತಿಸುವುದಕ್ಕೆ ಇಂಗ್ಲಿಷ್ ಭಾಷೆಯನ್ನು ಬಳಸಿಕೊಂಡಿದ್ದಾರೆ. ಸರಳವಾದ ಇಂಗ್ಲಿಷ್ ಭಾಷೆಯನ್ನು ಬಳಸಿರುವ ಇವರು ಪ್ರೌಢ ಧಾಟಿಯಲ್ಲಿ ವಿಚಾರಗಳನ್ನು ಮಂಡಿಸಿದ್ದಾರೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲಂಡ್‌ನ ಬರಹಗಾರರು ಭೂಗತವಾಗಿದ್ದುಕೊಂಡು ಸಾಹಿತ್ಯವನ್ನು ಸೃಷ್ಟಿಸಿದರು. ಇದಕ್ಕೆ ಕಾರಣವೂ ಇತ್ತು. ನಾಜಿಗಳು ಇವರ ಸಾಹಿತ್ಯ ರಚನೆಗಳನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧರಿರಲಿಲ್ಲ. ಸಣ್ಣ ಕಥೆಗಾರರಾಗಿದ್ದ ಬ್ರೂನೋ ಶುಲ್ಜ್ ಅವರು 1942ರಲ್ಲಿ ನಾಜಿಗಳಿಂದ ಹತ್ಯೆಯಾಗಿದ್ದರು. ಇದರಿಂದಾಗಿ ಪೋಲಂಡ್ ಸಾಹಿತಿಗಳಿಗೆ ಭೂಗತರಾಗಿದ್ದುಕೊಂಡು ಬರೆಯುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಇಂತಹ ಸಾಹಿತ್ಯ ರಚನೆಗಳು ಹೊರಜಗತ್ತಿನ ಮೆಚ್ಚುಗೆ ಗಳಿಸುವುದಕ್ಕೆ ಹದಿನೈದರಿಂದ ಇಪ್ಪತ್ತು ವರ್ಷಗಳೇ ಹಿಡಿದವು. ಯುದ್ಧಾನಂತರದ ಅವಧಿಯಲ್ಲಿ ಪೋಲಂಡ್‌ನ ಕ್ಜೆಸ್ಲಾ ಮಿಲೋ ಮತ್ತು ವಿಸ್ಲಾವಾ ಸ್ಝಿಂಬರ್ಸ್ಕಾ ಇವರಿಬ್ಬರು ನೋಬೆಲ್ ಪ್ರಶಸ್ತಿ ಗಳಿಸಿದ್ದಾರೆ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಪೋಲಂಡ್‌ನ ಅನೇಕ ಗದ್ಯ ಪ್ರಕಾರಗಳು ವಿಶ್ವಮಟ್ಟದ ಗುರುತಿಸುವಿಕೆಗೆ ಒಳಗಾದವು. ನಾಟಕಕಾರರಾದ ಗೊಂಬ್ರೊವಿಚ್ ಮತ್ತು ಸ್ಲಾವೊಮಿರ್ ಮ್ರೊಜೆಕ್, ಪ್ರಬಂಧಕಾರ ರೈಸ್ಝಾರ್ಡ್ ಕಪುಸ್ಕಿಸ್ಕಿ, ವೈಜ್ಞಾನಿಕ ಕಾದಂಬರಿಕಾರ ಸ್ಟ್ಯಾನಿಸ್ಲಾವ್ ಲೆಮ್ ಇವರು ಅಂತಾರಾಷ್ಟ್ರೀಯ ಖ್ಯಾತಿಗೆ ಪಾತ್ರರಾದರು. ಪೋಲಂಡ್‌ನಲ್ಲಿ ಮೊದಲ ವಿಶ್ವವಿದ್ಯಾನಿಲಯ ಸ್ಥಾಪನೆಯಾದದ್ದು 1364ರಲ್ಲಿ. ದೇಶದ ಅತೀ ಹಳೆಯ ವಿಶ್ವವಿದ್ಯಾನಿಲಯ ಎಂಬ ಖ್ಯಾತಿಗೆ ಪಾತ್ರವಾದ ಜಾಗಿಲೋನಿಯನ್ ವಿಶ್ವವಿದ್ಯಾನಿಲಯ ಸ್ಥಾಪಿಸಲ್ಪಟ್ಟದ್ದು ಮೂರನೇ ಕ್ಯಾಸಿಮಿರ್ ಹೆಸರಿನ ದೊರೆಯಿಂದ. ಈಗ ಪೋಲಂಡ್‌ನ ವಿಶ್ವವಿದ್ಯಾನಿಲಯಗಳಲ್ಲಿ ಎಲ್ಲಾ ನಾಗರಿಕರು ಉಚಿತವಾಗಿ ಯಾವುದೇ ಶುಲ್ಕ ಪಾವತಿಸದೆ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬಹುದಾಗಿದೆ. ಹೊರದೇಶಗಳಿಂದ ಬಂದ ವಿದ್ಯಾರ್ಥಿಗಳು ಕಡಿಮೆ ಶುಲ್ಕ ಪಾವತಿಸಿ, ಅಧ್ಯಯನ ಕೈಗೊಳ್ಳಬಹುದು.
ಪೋಲಂಡ್‌ನಲ್ಲಿ ಆಹಾರ ಪ್ರಿಯರ ಬಾಯಿಗೆ ರುಚಿ ನೀಡುವ ಹಲವಾರು ಜನಪ್ರಿಯ ಭಕ್ಷ್ಯಗಳಿವೆ. ಪೋಲಂಡ್‌ನ ಸಾಂಪ್ರದಾಯಿಕವಾದ ಪಾಕಪದ್ಧತಿಯು ವೈವಿಧ್ಯಮಯವಾಗಿದೆ. ಡಕ್ ಸೂಪ್ ಮತ್ತು ಬೀಟ್‌ರೂಟ್ ಸೂಪ್‌ಗಳು ಪ್ರಸಿದ್ಧ. ಇವುಗಳಲ್ಲಿ ಡಕ್ ಸೂಪ್‌ಗೆ ಕ್ಜಾರ್ನಿನಾ ಎಂಬ ಹೆಸರಿದ್ದರೆ, ಬಾರ್ಸ್ಜ್ ಎನ್ನುವುದು ಬೀಟ್‌ರೂಟ್ ಸೂಪ್‌ಗಿರುವ ಇನ್ನೊಂದು ಹೆಸರಾಗಿದೆ. ಕುಂಬಳಕಾಯಿಯಿಂದ ತಯಾರಿಸಲಾದ ಪೈರೋಗಿ, ಸಾಲ್ಮನ್, ಈಲ್, ಸೌರ್ ಕ್ರಾಟ್, ಕೀಲ್ಬಾಸಾ ಸಾಸೇಜ್ ಮೊದಲಾದವುಗಳು ಪ್ರಸಿದ್ಧ ಭಕ್ಷ್ಯಗಳು. ಕೋಳಿ ಮಾಂಸ ಮತ್ತು ಹಂದಿ ಮಾಂಸವನ್ನು ಪೋಲಂಡ್‌ನ ಜನರು ಇಷ್ಟಪಟ್ಟು ಸೇವಿಸುತ್ತಾರೆ. ಬಹುತೇಕ ಖಾದ್ಯಗಳನ್ನು ಸಾಸ್ ಜೊತೆಗೆ ಬಡಿಸುವುದು ಇಲ್ಲಿಯ ವಿಶಿಷ್ಟವಾದ ಆಹಾರ ಶೈಲಿ. ಅಣಬೆಗಳನ್ನು ಪೋಲಂಡ್ ಜನರು ಇಷ್ಟಪಟ್ಟು ಸೇವಿಸುತ್ತಾರೆ. ಕೆಲವು ಋತುಗಳಲ್ಲಿ ಮಾತ್ರವೇ ಬೆಟ್ಟಗಳಲ್ಲಿ ಸಿಗುವ ಕಾಡು ಅಣಬೆಗಳನ್ನು ಹುಡುಕಿ ತಂದು, ಆಹಾರವಾಗಿ ಸೇವಿಸುವ ಜನರಿದ್ದಾರೆ. ಎಲೆಕೋಸು, ಅಣಬೆ ಮೊದಲಾದವುಗಳ ಬಳಕೆ ವ್ಯಾಪಕವಾಗಿದೆ. ಇವುಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಶೈಲಿಯಲ್ಲಿ ಸೂಪ್ ತಯಾರಿಸಲಾಗುತ್ತದೆ. ಇದನ್ನು ಗ್ರಝಿಬೋವಾ ಎಂದು ಕರೆಯಲಾಗುತ್ತದೆ. ಲೆಂಟನ್ ಋತುವಿಗೂ ಮೊದಲು ಬರುವ ಕ್ರಿಶ್ಚಿಯನ್ ಹಬ್ಬಗಳಲ್ಲಿ ಸೇವಿಸಲೆಂದು ಪ್ಯಾಕ್ಝ್ಕಿ ಹೆಸರಿನ ವಿಶೇಷ ಖಾದ್ಯವನ್ನು ಸಿದ್ಧಪಡಿಸಲಾಗುತ್ತದೆ. ಇದು ಹಣ್ಣುಗಳಿಂದ ತುಂಬಿಕೊಂಡ ಕರಿಯಲಾದ ಪೇಸ್ಟ್ರಿಗಳನ್ನು ಹೊಂದಿದ ಆಹಾರವಾಗಿದೆ. ರಾಸ್‌ಬೆರಿ ಹಣ್ಣಿನ ರಸವನ್ನು ಪೋಲಂಡ್‌ನ ಜನರು ವಿಪರೀತವಾಗಿ ಇಷ್ಟಪಡುತ್ತಾರೆ. ಬಿಯರ್ ಕುಡಿಯುವವರೂ ಸಹ ಬಿಯರ್ ಜೊತೆಗೆ ರಾಸ್‌ಬೆರಿ ಹಣ್ಣಿನ ರಸವನ್ನು ಸೇರಿಸಿ ಕುಡಿಯುತ್ತಾರೆ. ಇದು ವಿಪರೀತ ತಂಪಾಗಿರುವುದರಿಂದ ಚಳಿಗಾಲದಲ್ಲಿ ದಾಲ್ಚಿನಿ ಮತ್ತು ಲವಂಗವನ್ನು ಸೇರಿಸಿ ಕುಡಿಯುತ್ತಾರೆ. ಯುರೋಪ್‌ನ ಅತೀ ಹಳೆಯ ರೆಸ್ಟೋರೆಂಟ್‌ಗಳಲ್ಲಿ ಒಂದು ರೆಸ್ಟೋರೆಂಟ್ ಇರುವುದು ಪೋಲಂಡ್‌ನಲ್ಲಿ. ಇಲ್ಲಿನ ವ್ರೊಕ್ಲಾವ್‌ನಲ್ಲಿ ಓಲ್ಡ್ ಟೌನ್ ಹಾಲ್ ಇದೆ. ಇದರ ನೆಲಮಾಳಿಗೆಯಲ್ಲಿ ಪಿವ್‌ನಿಕಾ ಸ್ವಿಡ್‌ನಿಕ್ಕಾ ಹೆಸರಿನ ಪ್ರಸಿದ್ಧ ರೆಸ್ಟೋರೆಂಟ್ ಇದೆ. 1273ರಲ್ಲಿ ಆರಂಭಗೊಂಡ ಇದು ಈಗಲೂ ಕಾರ್ಯನಿರ್ವಹಿಸುತ್ತಿದೆ.
ಪೋಲಿಷ್ ಸಂಗೀತ ಕ್ಷೇತ್ರವು ಮಧ್ಯಯುಗದವರೆಗೂ ಸಹ ಸಂಪ್ರದಾಯಬದ್ಧವಾಗಿತ್ತು. ಶಾಸ್ತ್ರೀಯ ಶೈಲಿಯನ್ನು ಆಧರಿಸಿಕೊಂಡಿತ್ತು. ಸಂಗೀತ ಕ್ಷೇತ್ರವು ಸಾಹಿತ್ಯದಂತೆ ರಾಜಕೀಯದ ಕಡೆಗೆ ಹೆಚ್ಚು ಒತ್ತು ನೀಡಲಿಲ್ಲ. ಈ ಕಾರಣದಿಂದಾಗಿ ಅದು ಯಾವುದೇ ರೀತಿಯ ತೊಂದರೆಗೊಳಗಾಗದೆ ನಿರಂತರವಾಗಿ ಸಾಗುತ್ತಾ ಬಂತು. ಪೋಲಿಷ್ ಸಂಗೀತದ ಬೇರು ಇರುವುದು ಅಲ್ಲಿಯ ಜಾನಪದ ಸಂಗೀತ ಪ್ರಕಾರಗಳಲ್ಲಿ. ಜಾನಪದ ಸಂಗೀತದ ಲಯ ಮತ್ತು ಮಾಧರ‍್ಯ ಅಲ್ಲಿಯ ಶಾಸ್ತ್ರೀಯ ಸಂಗೀತ ಪರಂಪರೆಯ ಮೇಲೆ ಗಾಢ ಪ್ರಭಾವ ಬೀರಿವೆ. ಕ್ರಾಕೋವಿಯಾಕ್, ಮಝರ್ಕಾ, ಪೊಲೊನೈಸ್ ಮೊದಲಾದ ಸಂಗೀತ ರೂಪುಗೊಂಡದ್ದು ಈ ಮಾದರಿಯಲ್ಲಿ. ನವೋದಯ ಕಾಲಘಟ್ಟದಲ್ಲಿ ಪೋಲಂಡ್‌ನ ಚರ್ಚುಗಳು ಸಂಗೀತದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿದವು. ಅನೇಕ ಉತ್ತಮ ಕಲಾವಿದರು ಹೊರಹೊಮ್ಮುವಂತಾಯಿತು. ಪೋಲಿಷ್ ಸಂಗೀತ ಶ್ರೇಷ್ಠತೆಯನ್ನು ಗಳಿಸಿಕೊಂಡದ್ದು ಫ್ರೆಡರಿಕ್ ಚಾಪಿನ್ ಅವರ ಕಾಲದಲ್ಲಿ. ಪೋಲಿಷ್ ನೆಲದಿಂದ ವಿದೇಶಗಳಿಗೆ ಹೋಗಿ ಕಾರ್ಯಕ್ರಮವನ್ನು ನೀಡಿ, ಜನಸಮೂಹದ ಮೆಚ್ಚುಗೆ ಗಳಿಸಿದ ಅವರು ತಾವು ಬೆಳೆದುದಲ್ಲದೆ, ಪೋಲಂಡ್ ಸಂಗೀತ ಕ್ಷೇತ್ರವನ್ನೂ ಬೆಳೆಸಿದರು. ಪಿಯಾನೋ- ಪಿಟೀಲು ವಾದಕರಾದ ಇಗ್ನಾಸಿ ಪಾಡೆರೆವ್ಸ್ಕಿ, ಆರ್ತರ್ ರೂಬಿನ್‌ಸ್ಟೈನ್, ಹೆನ್ರಿಕ್ ಸೆರಿಂಗ್ ಮೊದಲಾದವರು ಪೋಲಿಷ್ ಸಂಗೀತಕ್ಕೆ ಜೀವಕಳೆಯನ್ನು ತಂದುಕೊಟ್ಟ ಕಲಾವಿದರು. ಪೋಲಂಡ್‌ನಲ್ಲಿ ನಡೆಯುವ ಕೆಲವು ಸಂಗೀತ ಉತ್ಸವಗಳು ದೇಶ- ಹೊರದೇಶಗಳ ಸಂಗೀತಪ್ರೇಮಿಗಳನ್ನು ಆಕರ್ಷಿಸುತ್ತಿವೆ. ವಾರ್ಸಾ ಜಾಝ್ ಜಾಂಬೋರಿ, ಜಾಝ್ ಆನ್ ದಿ ಓಡರ್ ಉತ್ಸವಗಳನ್ನು ಈ ನೆಲೆಯಲ್ಲಿ ಹೆಸರಿಸಬಹುದು.
ಪೋಲಂಡ್‌ನ ಶಾಸ್ತ್ರೀಯ ಸಂಗೀತ ವಲಯವು ಈಗಲೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಸಂಗೀತ ಕ್ಷೇತ್ರವನ್ನು ಬೆಳೆಸಿದ ಶ್ರೇಷ್ಠ ಕಲಾವಿದರನ್ನು ಸ್ಮರಿಸುವ ಕಾರ್ಯಕ್ರಮಗಳು ಇಲ್ಲಿಯ ಅನೇಕ ಪ್ರದೇಶಗಳಲ್ಲಿ ನಡೆಯುತ್ತವೆ. ಬೀಥೋವನ್ ಸಂಗೀತ ಉತ್ಸವ ಈ ಮಾದರಿಯದ್ದು. ಇದು ರೊಮ್ಯಾಂಟಿಕ್ ಕಾಲಘಟ್ಟದ ಪಿಯಾನೋ ವಾದಕ ಮತ್ತು ಸಂಗೀತ ಸಂಯೋಜಕರಾದ ಫ್ರೆಡರಿಕ್ ಚಾಪಿನ್ ಅವರ ನೆನಪಿನಲ್ಲಿ ನಡೆಯುವ ಕಾರ್ಯಕ್ರಮ. ಪೋಲಂಡ್‌ನ ಎರಡು ಪ್ರಮುಖ ಪ್ರದೇಶಗಳಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಕ್ರಾಕೋವ್ ಪ್ರದೇಶದಲ್ಲಿ ಇದು ನಡೆಯುವುದು ಮಳೆಗಾಲದಲ್ಲಿ. ಬೇಸಿಗೆ ಕಾಲದಲ್ಲಿ ವಾರ್ಸಾದ ಮೊಜಾರ್ಟ್‌ನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಯುರೋಪಿನ ಅತೀ ದೊಡ್ಡ ಬಯಲು ಸಂಗೀತ ಉತ್ಸವ ನಡೆಯುವುದು ಪೋಲಂಡ್‌ನಲ್ಲಿ. ಇಲ್ಲಿ ನಡೆಯುವ ಪೋಲ್ ಆ್ಯಂಡ್ ರಾಕ್ ಫೆಸ್ಟಿವಲ್ ಜಗತ್ಪ್ರಸಿದ್ಧವಾಗಿದೆ. ಇದನ್ನು ಮೊದಲು ವುಡ್‌ಸ್ಟಾಕ್ ಫೆಸ್ಟಿವಲ್ ಎಂದು ಕರೆಯಲಾಗುತ್ತಿತ್ತು. ಈ ಉತ್ಸವಕ್ಕೆ ಬರುವ ಸಂಗೀತ ಪ್ರಿಯರು ಯಾವುದೇ ಶುಲ್ಕ ಪಾವತಿಸದೆ ಉಚಿತವಾಗಿ ಸಂಗೀತ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಆರು ಲಕ್ಷಗಳಿಗಿಂತಲೂ ಹೆಚ್ಚಿನ ಜನರು ಈ ಉತ್ಸವಕ್ಕೆ ಆಗಮಿಸಿ ಸಂತಸವನ್ನು ಅನುಭವಿಸುತ್ತಾರೆ.
ಪೋಲೆಂಡ್‌ನಲ್ಲಿ ಸಾಧಕರಾಗಿ ಗುರುತಿಸಿಕೊಂಡ ಅನೇಕ ಜನರಿದ್ದಾರೆ. ಅತ್ಯುನ್ನತ ಸಾಧನೆಗಾಗಿ ಮೀಸಲಾಗಿರುವ ನೋಬೆಲ್ ಪ್ರಶಸ್ತಿಯು ಪೋಲಂಡ್‌ನ ಹದಿನೆಂಟು ಜನ ಸಾಧಕರಿಗೆ ದೊರೆತಿದೆ. ಎರಡೆರಡು ಬಾರಿ ನೋಬೆಲ್ ಪ್ರಶಸ್ತಿಗೆ ಪಾತ್ರರಾದ ಮೇರಿ ಕ್ಯೂರಿ ಅವರು ಪೋಲಿಷ್ ಮಹಿಳೆ ಎನ್ನುವುದು ಗಮನಾರ್ಹ. ಕ್ಯಾಥೋಲಿಕ್ ಚರ್ಚ್‌ನ ಮಾಜಿ ಮುಖ್ಯಸ್ಥರಾದ ಪೋಪ್ ಎರಡನೇ ಜಾನ್ ಪಾಲ್ ಅವರು ಪೋಲಂಡ್ ಮೂಲದವರು. ಪೋಪ್ ಆಗುವುದಕ್ಕೂ ಮೊದಲಿನ ಅವರ ಹೆಸರು ಕರೋಲ್ ವೊಜ್ಟಿಲಾ. ಇವರು 1920ರ ವೇಳೆಗೆ ಜನಿಸಿದ್ದು ಪೋಲಂಡ್‌ನ ವಾಡೋವಿಸ್ ನಗರದಲ್ಲಿ. ಖಗೋಳಶಾಸ್ರಜ್ಞರಾಗಿ ಪ್ರಸಿದ್ಧರಾದ ಕೋಪರ್ನಿಕಸ್ ಅವರು ಪೋಲಂಡ್ ದೇಶಕ್ಕೆ ಸೇರಿದವರು. ಅವರು ಜನಸಿದ್ದು ಪೋಲಂಡ್‌ನ ಟೊರುನ್ ಹೆಸರಿನ ಪ್ರದೇಶದಲ್ಲಿ. ಅವರು ಸೂರ್ಯಕೇಂದ್ರಿತ ಸಿದ್ಧಾಂತವನ್ನು ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಭೂಮಿಯೇ ಬ್ರಹ್ಮಾಂಡದ ಕೇಂದ್ರ ಎಂಬ ತಪ್ಪು ತಿಳುವಳಿಕೆಯನ್ನು ನಿರಾಕರಿಸಿ, ಸೂರ್ಯನೇ ಬ್ರಹ್ಮಾಂಡದ ಕೇಂದ್ರ. ಎಲ್ಲಾ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ ಎಂಬ ವಾಸ್ತವ ಸತ್ಯವನ್ನು ನಿರೂಪಿಸಿದ್ದು ಇವರ ಹೆಗ್ಗಳಿಕೆಯಾಗಿದೆ.
ಪೋಲಿಷ್ ಚಿತ್ರಕಲಾ ಕ್ಷೇತ್ರವು ಕೀರ್ತಿಶಿಖರವನ್ನೇರಿದ್ದು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ. ಈ ಅವಧಿಯಲ್ಲಿ ಪೋಲಂಡ್‌ನ ದೇಸೀ ಶೈಲಿಯ ಜೊತೆಗೆ ಯುರೋಪಿಯನ್ ಶೈಲಿಯೂ ಸೇರಿಕೊಂಡಿತು. ಜಾನ್ ಮಾಟೆಜ್ಕೊ, ಹೆನ್ರಿಕ್ ಸೀಮಿರಾಡ್ಜ್ಕಿ ಮೊದಲಾದವರು ಅಪಾರ ಜನಪ್ರಿಯತೆಗೆ ಪಾತ್ರರಾದರು. ಸ್ಟ್ಯಾನಿಸ್ಲಾ ವಿಸ್ಪಿಯಾನ್ಸ್ಕಿ ಅವರು ರಚಿಸಿದ ವರ್ಣಚಿತ್ರಗಳು ಸೂಕ್ಷ್ಮತೆಯನ್ನು ಹೊಂದಿದ್ದವು. ಮ್ಯಾಗ್ಡಲೀನಾ ಅಬಕಾನೋವಿಚ್ ಅವರು ಫೈಬರ್‌ನಲ್ಲಿ ಶಿಲ್ಪಕಲಾಕೃತಿಗಳನ್ನು ರಚಿಸಿದ ಮುಂಚೂಣಿಯ ಪೋಲಂಡ್ ಶಿಲ್ಪಿಯಾಗಿದ್ದಾರೆ. ಪೋಲಂಡ್ ವಾಸ್ತುಶಿಲ್ಪವು ರೋಮನೆಸ್ಕ್ ಮತ್ತು ಗೋಥಿಕ್ ವಾಸ್ತುಶಿಲ್ಪ ಶೈಲಿಗಳನ್ನು ಆಧರಿಸಿಕೊಂಡಿವೆ.
ಧಾರ್ಮಿಕ ಸಂಗತಿಗಳು ಪೋಲಂಡ್ ವಾಸ್ತುಶಿಲ್ಪವನ್ನು ಪ್ರಭಾವಿಸಿದ ರೀತಿಯಲ್ಲಿಯೇ ಜಾತ್ಯತೀತವಾದ ವಿಚಾರಧಾರೆಯೂ ಸಹ ಪ್ರಭಾವ ಬೀರಿದೆ. ಕ್ರಾಕೋವ್‌ನ ಸೇಂಟ್ ಮೇರಿ ಚರ್ಚ್‌ನಲ್ಲಿರುವ ವೀಟ್ ಸ್ಟೋಸ್‌ನ ಮರದ ಬಲಿಪೀಠ ಪ್ರಸಿದ್ಧವಾದ ವಾಸ್ತುಶಿಲ್ಪ ರಚನೆಯಾಗಿದೆ. ಮಾಲ್ಬೋರ್ಕ್ ಕ್ಯಾಸಲ್ ಹೆಸರಿನ ವಾಸ್ತುಶಿಲ್ಪ ರಚನೆಯು ಪೋಲಂಡ್‌ನ ಮಧ್ಯಕಾಲೀನ ಯುಗದ ಶ್ರೇಷ್ಠ ರಚನೆಗಳಲ್ಲಿ ಒಂದೆನಿಸಿದೆ. ಸಂಕೀರ್ಣವಾದ ಕೋಟೆಗಳನ್ನು ಒಳಗೊಂಡಿರುವ ಇದನ್ನು ಕೆಂಪು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಒಂದಷ್ಟು ಹಾನಿಗೊಳಗಾದ ಇದನ್ನು ಮತ್ತೆ ನಿರ್ಮಿಸಲಾಗಿತ್ತು. 1997ರಲ್ಲಿ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎನಿಸಿಕೊಂಡಿದೆ. ನವೋದಯ ಕಾಲಘಟ್ಟದಲ್ಲಿ ಪೋಲಂಡ್‌ನ ಶಿಲ್ಪಗಳು ಮತ್ತು ವಾಸ್ತುಶಿಲ್ಪ ನಿರ್ಮಿತಿಗಳು ಇಟಲಿಯ ಪ್ರೇರಣೆಗೊಳಗಾದವು. ಆದರೆ ಸಂಪೂರ್ಣವಾಗಿ ಅನುಕರಣೆ ಇದಾಗಿರಲಿಲ್ಲ. ಸ್ವಂತಿಕೆಗೂ ಪ್ರಾಮುಖ್ಯತೆ ದೊರಕಿತು. ಕಾಝಿಮಿಯರ‍್ಝ್ ಡಾಲ್ನಿ ಝಾಮೋಸ್ಕ್ ಹೆಸರಿನ ನವೋದಯ ಶೈಲಿಯ ನಗರವು ಆಕರ್ಷಣೀಯವಾಗಿದೆ. ಇದೂ ಸಹ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂಬ ಮಾನ್ಯತೆ ಗಳಿಸಿಕೊಂಡಿದೆ.
ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ಪ್ರಮುಖ ವಾಸ್ತುಶಿಲ್ಪ ರಚನೆಗಳಾಗಿ ಕಂಡುಬರುವುದು ಕೆಲವು ಅರಮನೆಗಳು. ವಾರ್ಸಾದಲ್ಲಿರುವ ಅಜಿಯೆಂಕಿ ಅರಮನೆ ಮತ್ತು ನೈಬೋರೋದಲ್ಲಿ ಕಟ್ಟಲ್ಪಟ್ಟಿರುವ ರಾಡ್ಜಿವಿಲಾಸ್ ಅರಮನೆ ಈ ನೆಲೆಯ ವಾಸ್ತುಶಿಲ್ಪ ನಿರ್ಮಿತಿಗಳು.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.