ಗಂಭೀರ್ ವಿಷಯವಾಗಿ ಒಂದೆರೆಡು ಮಾತು ಇಲ್ಲಿ ಹೇಳಬೇಕು. ಯಾರಿಗಾದರೂ ಫೈನಲ್ಸ್ ಆಡುವಾಗ ಎಷ್ಟೋಸರ್ತಿ ಧೈರ್ಯವಿರುವುದಿಲ್ಲ. ಕೈ ಕಾಲಿನಲ್ಲಿ ನಡುಕ ಹುಟ್ಟುವುದು ಸಹಜವೇ! ಆದರೆ ಗಂಭೀರ್ ಹಾಗಲ್ಲ. ಅವರಿಗೆ ಫೈನಲ್ಸ್‌ನಲ್ಲಿ ಜೋರು ಹುರುಪು, ಆತ್ಮ ವಿಶ್ವಾಸ, ಛಲ ಇದೆಲ್ಲವೂ ಅವರಲ್ಲಿ ಹೇರಳವಾಗಿ ಇರುತ್ತೆ. ಜೊತೆಗೆ ಯಾರಾದರೂ ಅವರನ್ನು ಕೆಣಕಿದರೆ ಬ್ಯಾಟು ಎತ್ತಿ ಅಲ್ಲೇ ಆ ಸಂಗತಿಯನ್ನು ಮುಗಿಸಲು ಹೋಗುತ್ತಾರೆ! ಅಂತಹ ವ್ಯಕ್ತಿ ಕೈಲಿ ಬ್ಯಾಟ್ ಹಿಡಿದರೆ ಅವರ ಆಟದ ಶೈಲಿ, ರಭಸದಿಂದ ಹೊಡೆಯುತ್ತಿದ್ದ ರನ್‌ಗಳು ನೋಡಲು ಚಂದ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ನಿಮ್ಮ ಓದಿಗೆ

ವಿಶ್ವ ಕಪ್ ಒಡಿಐ ಮತ್ತು ಟಿ20 ನಾಲ್ಕು ವರ್ಷಗಳಿಗೊಮ್ಮೆ ಬರುವ ಟೂರ್ನಮೆಂಟ್‌ಗಳು. ಕ್ರಿಕೆಟ್‌ನ ಘಟಾನುಘಟಿ ದೇಶಗಳು ಒಂದೆಡೆ ಸೇರಿ ಕನಿಷ್ಟ ಒಂದೂವರೆ ತಿಂಗಳು ಒಬ್ಬರು ಇನ್ನೊಬ್ಬರ ಮೇಲೆ ಪಂದ್ಯವಾಡಿ ಕೊನೆಗೆ ಯಾರು ಗೆದ್ದು ಕಪ್ಪನ್ನು ಕೈಲಿ ಹಿಡಿದು ಬೀಗುತ್ತಾರೋ ಎಂದು ನೋಡುವ ಸಮಯ. ಇತ್ತೀಚೆಗೆ ಗೆದ್ದವರಿಗೆ ಕಪ್‌ನ ಜೊತೆಗೆ ದೊಡ್ಡ ನಗದು ಬಹುಮಾನವೂ ಸಿಗುತ್ತದೆ.

ಒಡಿಐ ಪಂದ್ಯದ ಮಟ್ಟಿಗೆ ಹೇಳುವುದಾದರೆ ಆಸ್ಟ್ರೇಲಿಯ ಐದು ಸಾರಿ ಗೆದ್ದಿದ್ದರೆ, ಭಾರತ ಮತ್ತು ವೆಸ್ಟ್ ಇಂಡೀಸ್ ತಲಾ ಎರಡು ಬಾರಿ ಗೆದ್ದಿದೆ. ಮಿಕ್ಕವರು – ಪಾಕಿಸ್ತಾನ, ಶ್ರೀಲಂಕ ಮತ್ತು ಹೋದ ವರ್ಷ ಇಂಗ್ಲೆಂಡ್ ತಲಾ ಒಂದು ಬಾರಿ ಗೆದ್ದಿದೆ. ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ, ಬಾಂಗ್ಲದೇಶ ಇನ್ನೂ ಒಂದು ಬಾರಿಯೂ ಗೆದ್ದಿಲ್ಲ. ಈಗ ಕೆಲವು ವರ್ಷಗಳ ಹಿಂದೆ ಬಂದ ಟೀಮ್‌ಗಳು ಸ್ಕಾಟ್ಲೆಂಡ್, ಕೆನ್ಯ, ನೆದರ್ಲೆಂಡ್ಸ್‌ ಯಾರೂ ಇನ್ನೂ ಗೆಲುವಿನ ಮುಖ ನೋಡಿಲ್ಲ.

ಐಸಿಸಿಯ ನಿಯಮದ ಪ್ರಕಾರ ವರ್ಷದಲ್ಲಿ ಆಡಿದ ಒಡಿಐ ಮ್ಯಾಚ್‌ಗಳಲ್ಲಿ ಕೊನೆಯಲ್ಲಿ ಉಳಿದ ಎರಡು ಟೀಮ್‌ಗಳು ಎರಡನೇ ದರ್ಜೆಯಲ್ಲಿರುವ ಸಣ್ಣ ಪುಟ್ಟ ಟೀಮ್ಗಳ ಜೊತೆಯಾಡಿ, ಅದರಲ್ಲಿ ಯಾರು ಗೆದ್ದು ಬರುತ್ತಾರೋ ಅವರನ್ನು ಮುಖ್ಯ ವಿಶ್ವಕಪ್ ಟೂರ್ನಮೆಂಟಿಗೆ ಸೇರಿಸಿಕೊಳ್ಳುತ್ತಾರೆ. ಈ ವರ್ಷದಲ್ಲಿ ಒಂದು ಕಾಲದ ಅತ್ಯುತ್ತಮ ಟೀಮ್ ಆದ ವೆಸ್ಟ್ ಇಂಡೀಸ್ ಅಲ್ಲಿಯೂ ಗೆಲ್ಲದೆ ವಿಶ್ವ ಕಪ್ನಿಂದ ಹೊರಗೆ ಹೋಗಬೇಕಾಯಿತು. ಶ್ರೀಲಂಕ ತನ್ನ ಮ್ಯಾಚ್‌ಗಳಲ್ಲಿ ಗೆದ್ದು ವಿಶ್ವ ಕಪ್ ಟೂರ್ನಮೆಂಟಿನಲ್ಲಿ ಭಾಗಿಯಾಗಲು ಅರ್ಹತೆ ಪಡೆದರು. ಜೊತೆಗೆ ಈ ವರ್ಷ ನೆದರ್ಲೆಂಡ್ಸ್‌ ಆ ಹಕ್ಕನ್ನು ಪಡೆದರು.

ಭಾರತ ಐಸಿಸಿ ಒಡಿಐ ವಿಶ್ವ ಕಪ್ಪನ್ನು ಎರಡು ಬಾರಿ ಗೆದ್ದಿದ್ದಾರೆ. ಹಾಗೆಯೇ ಐಸಿಸಿಯ ಟಿ-20 ಚೊಚ್ಚಲ ಕಪ್ಪನ್ನು ಒಂದು ಬಾರಿ ಗೆದ್ದಿದ್ದಾರೆ. 1975ರಲ್ಲಿ ಶುರುವಾದ ವಿಶ್ವ ಕಪ್ ಟೂರ್ನಮೆಂಟ್ 1983ರಲ್ಲಿ ಇಂಗ್ಲೆಂಡಿನಲ್ಲಿ ನಡೆಯಿತು. ಆಗ ಟೂರ್ನಮೆಂಟಿನಲ್ಲಿ 60 ಓವರ್‌ಗಳನ್ನು ಆಡುತ್ತಿದ್ದರು. ಮತ್ತೆ ಪ್ರತಿಸಸಲವೂ ಇಂಗ್ಲೆಂಡಿನಲ್ಲೇ ವಿಶ್ವ ಕಪ್ ನಡೆಯುತ್ತಿತ್ತು. 1987 ಪ್ರಪಥಮಬಾರಿ ಇಂಗ್ಲೆಂಡಿನಿಂದ ಹೊರಗೆ ಬಂತು. ಆಗ ಭಾರತ ಮತ್ತು ಪಾಕಿಸ್ಥಾನ ದೇಶಗಳು ಆ ಟೂರ್ನಮೆಂಟನ್ನು ಒಟ್ಟಿಗೆ ತಮ್ಮ ದೇಶಗಳಲ್ಲಿ ಆಯೋಜಿಸಿದ್ದವು.

1983ರಲ್ಲಿ ಒಂದು ಪಂದ್ಯದಲ್ಲಿ ಭಾರತದ ಟೀಮ್ ಸೋತು ಟೂರ್ನಮೆಂಟಿನಿಂದ ಹೊರಗೆ ಬರಬೇಕಾದ ಸ್ಥಿತಿಯಲ್ಲಿತ್ತು. ಜಿಂಬಾಬ್ವೆಯ ಜೊತೆ ಬ್ಯಾಟಿಂಗ್ ಶುರು ಮಾಡಿದ ಭಾರತ ಅತ್ಯಂತ ಶೋಚನೀಯ ಪ್ರಾರಂಭ ಮಾಡಿತು. ಟಾಸ್‌ ಗೆದ್ದು ಬ್ಯಾಟಿಂಗ್ ಶುರುಮಾಡಿದ ಭಾರತ ಕೇವಲ 15 ರನ್‌ಗೆ 5 ವಿಕೆಟ್ ಕಳೆದುಕೊಂಡಿತು! ಭಾರತದ ನಾಯಕ ಕಪಿಲ್ ದೇವ್ ಅವ್ರ ಜೊತೆ ಆಡಿದ ರೋಜರ್ ಬಿನ್ನಿ, ಮದನ್‌ ಲಾಲ್ ಮತ್ತು ಕರ‍್ಮಾನಿ ಜೊತೆಗೂಡಿ ಭಾರತ 266/8 ರನ್ ಮಾಡಿತು. ಕಪಿಲ್‌ ದೇವ್ ಕೇವಲ 138 ಬಾಲ್‌ಗಳಲ್ಲಿ 16 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸುರಿಮಳೆಯಿಂದ 175 ರನ್ ಹೊಡೆದು ಅಜೇಯರಾಗಿದ್ದರು. ಜಿಂಬಾಬ್ವೆ ತನ್ನ ಇನಿಂಗ್ಸ್‌ನಲ್ಲಿ 235 ರನ್‌ಗೆ ಎಲ್ಲಾರೂ ಔಟಾದರು. ಮದನ್‌ಲಾಲ್ 3/42 ಮತ್ತು ಬಿನ್ನಿ 2/45 ವಿಕೆಟ್‌ಗಳನ್ನು ತೆಗೆದು ಭಾರತ ಗೆಲ್ಲಲು ಕಾರಣರಾದರು.

(ಮೋಹಿಂದರ್‌ ಅಮರ್‌ನಾಥ್)

ಕಪಿಲ್ ದೇವ್ ಅವರ ಅಂದಿನ ಆಟವನ್ನು ಇಂದಿಗೂ ಅಲ್ಲಿನ ಜನ ಜ್ಞಾಪಿಸಿಕೊಳ್ಳುತ್ತಾರೆ. ಸೋಲಿನ ಹಂತದಲ್ಲಿದ್ದ ಭಾರತದ, ಅವರ ನಾಯಕನ ಅಂತಹ ಪ್ರತಿದಾಳಿ ಯಾರೂ ನೋಡಿಲ್ಲ. ಸೆಮಿ -ಫೈನಲ್ಸ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮದ್ಯೆ ಮ್ಯಾಚ್ ನಡೆಯಿತು. ಟಾಸ್ ಗೆದ್ದು ಆಡಲು ನಿರ್ಧರಿಸಿದ ಇಂಗ್ಲೆಂಡ್ ಅಷ್ಟು ಚೆನ್ನಾಗಿ ಆಡಲಿಲ್ಲ. ಇಂಗ್ಲೆಂಡ್ ಟೀಮಲ್ಲಿ ಯಾರೂ 40ರ ಮೇಲೆ ದಾಟಲಿಲ್ಲ. ಇಂಗ್ಲೆಂಡ್ 213 ರನ್‌ಗೆ ಎಲ್ಲರೂ ಔಟಾದರು. ರೋಜರ್ ಬಿನ್ನಿ 2/43, ಮೊಹಿಂದರ್ ಅಮರ್‌ನಾಥ್ 2/27 ಮತ್ತು ಕಪಿಲ್ ದೇವ್ 3/35 ವಿಕೆಟ್‌ಗಳನ್ನು ತೆಗೆದುಕೊಂಡರು. ಭಾರತ 217/4 ರನ್ ಹೊಡೆದು ಪಂದ್ಯ ಗೆದ್ದರು. ಯಶ್ಪಾಲ್ ಶರ್ಮ ಮತ್ತು ಸಂದೀಪ್ ಪಾಟೀಲ್ ತಲಾ 61 ಮತ್ತು 51 ಹೊಡೆದು ಭಾರತದ ಗೆಲುವಿಗೆ ಕಾರಣವಾಗಿ ಮೊಟ್ಟ ಮೊದಲ ಬಾರಿ ಫೈನಲ್ ತಲುಪಿತು.
ಯಶ್ಪಾಲ್ ಶರ್ಮ ಹೋದ ವರ್ಷ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಇಲ್ಲಿ ಗೆದ್ದ ಟೀಮನ್ನೇ ಕಪಿಲ್ ದೇವ್ ಫೈನಲ್ಸ್‌ಗೆ ಇಟ್ಟುಕೊಂಡರು. ಇನ್ನೊಂದು ಬಾರಿ ಫೈನಲ್ ಆಡಲು ಬಂದ ಟೀಮ್ ಹಿಂದಿನ ಎರಡು ಬಾರಿ ಕಪ್‌ ಗೆದ್ದು ‘ಹ್ಯಾಟ್-ಟ್ರಿಕ್’ ಮಾಡಲು ಬಂದ ವೆಸ್ಟ್ ಇಂಡೀಸ್ ತಂಡ! ಆದರೆ ಭಾರತದ ತಂಡದ ಆತ್ಮವಿಶ್ವಾಸ ಮುಗಿಲುಮುಟ್ಟಿತ್ತು.
‘ಇಲ್ಲಿಯ ತನಕ ಬಂದಿದ್ದೇವೆ, ಒಂದು ಕೈ ನೋಡಿಬಿಡುವ’ ಎನ್ನುವ ಹುರುಪು, ಧೈರ್ಯ ಕಾಣಿಸಿಕೊಂಡಿತ್ತು.

ವೆಸ್ಟ್ ಇಂಡೀಸ್ ದಿಗ್ಗಜರಾಗುವುದಕ್ಕೆ ಹಲವು ಕಾರಣಗಳಿತ್ತು. ವಿಶ್ವದಲ್ಲೇ ಅವರ ಟೀಮ್ ಎಲ್ಲಾ ವಿಭಾಗದಲ್ಲಿಯೂ ಅತ್ಯಂತ ಪ್ರಬಲವಾಗಿತ್ತು. ವಿವ್ ರಿಚರ್ಡಸ್ ಅವರ ಬ್ಯಾಟಿಂಗ್ ಅವರು ಹೊಡೆಯುತ್ತಿದ್ದ ಶರವೇಗದ ರನ್‌ಗಳು ನೋಡಿ ಬೋಲರ್‌ಗಳು ತತ್ತರಿಸುತ್ತಿದ್ದರು. ನಾಯಕ ಕ್ಲೈವ್ ಲಾಯ್ಡ್ ಎಡಗೈನ ಸುಪ್ರಸಿಧ್ದ ಆಟಗಾರರಾಗಿದ್ದರು. ವೆಸ್ಟ್ ಇಂಡೀಸ್ ವೇಗದ ಬೋಲಿಂಗ್ ಜೊತೆ ಅದು ಬಹಳ ನಿಖರವಾಗಿತ್ತು. ರನ್ ಮಾಡುವುದು ಕಷ್ಟ ಮತ್ತು ಅಸಾಧ್ಯವಾಗಿತ್ತು. ಎರಡು ಬಾರಿ 1975 ಮತ್ತು 1979ರಲ್ಲಿ ಕಪ್ ಗೆದ್ದು ಇಂಡಿಯಾವನ್ನು ಸೋಲಿಸಲು ಕಾಯುತ್ತಿದ್ದರು. ಗೆದ್ದೇ ಬಿಡುತ್ತೇವೆ ಅನ್ನುವ ಅತಿಯಾದ ಆತ್ಮವಿಶ್ವಾಸ ಅವರಲ್ಲಿ ಮನೆಮಾಡಿತ್ತು.

1983 25 ಜೂನ್ ದಿನ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಭಾರತವನ್ನು ಮೊದಲು ಬ್ಯಾಟಿಂಗ್ ಆಡಲು ಆಮಂತ್ರಿಸಿತು. ಕ್ರಿಸ್ ಶ್ರೀಕಾಂತ್ ಮತ್ತು ಸುನಿಲ್ ಗವಾಸ್ಕರ್ ಭಾರತದ ಬ್ಯಾಟಿಂಗ್ ಶುರು ಮಾಡಲು ಬಂದರು.

ಕೇವಲ 2 ರನ್‌ಗೆ ಗವಾಸ್ಕರ್ ಔಟಾದರು. ಶ್ರೀಕಾಂತ್ 38 ರನ್ ಹೊಡೆದರು ಮತ್ತು ಮೊಹಿಂದರ್ ಅಮರ್‌ನಾಥ್ 26 ರನ್ ಗಳಿಸಿದರು. 11 ರನ್‌ಗೆ 6 ವಿಕೆಟ್ ಬಿದ್ದವು. ಮದನ್‌ಲಾಲ್, ಕರ‍್ಮಾನಿ, ಸಂಧು ಮತ್ತು ಮಿಸ್ಟರ್ ಎಕಸ್ಟ್ರಾಸ್‌ ಸೇರಿ 20 ಸೇರಿ ಸ್ಕೋರ್ ಕುಂಟುತ್ತಾ 183ಗೆ ಎಲ್ಲಾರೂ ಔಟಾದರು.

1975ರಲ್ಲಿ ನಡೆದ ಫೈನಲ್ಸ್‌ನ ವೆಸ್ಟ್ ಇಂಡೀಸ್ 291 ರನ್ ಹೊಡೆದರು. ಆಸ್ಟ್ರೇಲಿಯಾ 274 ಕ್ಕೆ ಎಲ್ಲರೂ ಔಟಾಗಿ 15 ರನ್ ವಿಜಯವನ್ನು ಗಳಿಸಿತ್ತು. 1979ರಲ್ಲಿ ವೆಸ್ಟ್ ಇಂಡೀಸ್ 286/9 ಹೊಡೆದು ಇಂಗ್ಲೆಂಡನ್ನು 194ಕ್ಕೆ ಔಟ್ ಮಾಡಿ ದೊಡ್ಡ ವಿಜಯವನ್ನು ಗಳಿಸಿದ್ದರು.

ಈ ರೀತಿ ದೊಡ್ಡ ಸ್ಕೋರ್ ಮಾಡಿದ್ದ ವೆಸ್ಟ್ ಇಂಡೀಸ್‌ಗೆ ಭಾರತ ಕೇವಲ 183 ರನ್‌ನ ಲಕ್ಷ್ಯವಿಟ್ಟಿತ್ತು. ಎಲ್ಲರ ಮನಸ್ಸಿನಲ್ಲೂ ವೆಸ್ಟ್ ಇಂಡೀಸ್ ಮ್ಯಾಚ್ ಎಷ್ಟು ಬೇಗ ಮುಗಿಸಬಹುದು ಎಂಬ ಎಣಿಕೆಯಿತ್ತು. ವೆಸ್ಟ್ ಇಂಡೀಸ್ ಇನಿಂಗ್ಸ್ ಚೆನ್ನಾಗಿ ಶುರುವಾಗಲಿಲ್ಲ. ಬಲವಿಂದರ್ ಸಿಂಘ್ ಅವರ ಬೋಲಿಂಗ್‌ನಲ್ಲಿ ಬಹಳ ಅನೀರಿಕ್ಷಿತವಾಗಿ ಗೋರ್ಡನ್ ಗ್ರಿನಿಡ್ಜ್ ಒಂದು ಬಾಲನ್ನು ಹೊರಗೆ ಹೋಗುತ್ತಿದೆ ಎಂದು ಆಡದೆ ಅದು ಸ್ವಿಂಗ್ ಆಗಿ ಒಳಗೆ ಬಂದು ಅವರ ವಿಕೆಟ್ಟನ್ನು ಉರುಳಿಸಿತು!

ಅವರ ಜಾಗದಲ್ಲಿ ಬಂದ ವಿವಿಯನ್ ರಿಚರ್ಡಸ್ ಬಿರುಗಾಳಿಯ ಬಿರಿಸಿನ ಬ್ಯಾಟಿಂಗ್ ಶುರು ಮಾಡಿದರು. ಅವರ ಸ್ಕೋರ್ 33 ಇದ್ದಾಗ ಅವರು ಹೊಡೆದ ಬಾಲ್ ಸಿಕ್ಸ್‌ಗೆ ಹೋಗುತ್ತೆ ಅಂತ ಅಂದುಕೊಂಡರು ಎಲ್ಲರೂ. ಎಡೆಬಿಡದೆ ಕಪಿಲ್ ದೇವ್ ಬಹಳ ದೂರ ಓಡಿ ಅದನ್ನು ಹಿಡಿದರು! ಆ ಕ್ಯಾಚೇ ಆಟಕ್ಕೆ ತಿರುವು ಕೊಟ್ಟಿತು. ಆಮೇಲೆ ಬಂದ ಲಾಯ್ಡ್ ಕೂಡ ಕೇವಲ 8 ರನ್‌ಗೆ ಬೇಗ ಔಟಾದರು. ಮಿಕ್ಕ ಆಟಗಾರರೆಲ್ಲಾ ಜಾಸ್ತಿ ರನ್ ಮಾಡದೆ ಬೇಗ ಬೇಗ ಔಟಾದರು. ಒಂದು ಫೈನಲ್ಸ್‌ಗೆ ಬೇಕಾದ ರನ್ ಹೊಡೆಯದೆ ಕೇವಲ 183 ರನ್ ಹೊಡೆದ ಇಂಡಿಯ ಪ್ರಬಲ ವೆಸ್ಟ್ ಇಂಡೀಸನ್ನು 140 ರನ್ಗೆ ಔಟ್ ಮಾಡಿದರು. ವೆಸ್ಟ್ ಇಂಡೀಸ್ ಆಟಗಾರರು ದಿಗ್ಭ್ರಮೆಯಾದರು ಎಂದರೆ ಅದು ಅತಿಶಯೋಕ್ತಿಯಲ್ಲ.

ಫೈನಲ್ಸ್‌ನಲ್ಲಿ ಶ್ರೀಕಾಂತ್ ಹೊಡೆದ 38 ಅತಿ ಹೆಚ್ಚು ಸ್ಕೋರಾಯಿತು. ಮೊಹಿಂದರ್ ಅಮರ್‌ನಾಥ್ 1983ರ ಟೂರ್ನಮೆಂಟಿನ ಅತಿ ಉಪಯುಕ್ತ ಪ್ಲೇಯರ್ ಎಂದು ಘೋಷಿಸಲಾಯಿತು. ಅವರು ಫೈನಲ್ಸ್‌ನಲ್ಲಿ 26 ರನ್ ಹೊಡೆದು 3/12 ವಿಕೆಟ್ ಗಳಿಸಿದರು. ಅವರನ್ನು ಪ್ಲೇಯರ್ ಆಫ್‌ ದ ಮ್ಯಾಚ್ ಎಂದು ಘೋಷಿಸಲಾಯಿತು.

1983ರಲ್ಲಿ ಗೆದ್ದ ಕಾರಣ ಮುಂದೆ 1987ರಲ್ಲಿ ಪ್ರಥಮವಾಗಿ ವಿಶ್ವ ಕಪ್‌ನ ಟೂರ್ನಮೆಂಟನ್ನು ಹೊರಗೆತರಲು ಭಾರತ ಮತ್ತು ಪಾಕಿಸ್ಥಾನ ಜೊತೆಗೂಡಿ 4 ವರ್ಷಗಳ ನಂತರ ನಮ್ಮ ದೇಶಗಳಲ್ಲಿ ನಡೆಸಿದರು. ಅದನ್ನು ರಿಲೈಯನ್ಸ್ ಕಪ್ ಎಂದು ಕರೆಯಲಾಯಿತು.

(ಗೌತಮ್‌ ಗಂಭೀರ್)

ವೆಸ್ಟ್ ಇಂಡೀಸ್ ದಿಗ್ಗಜರಾಗುವುದಕ್ಕೆ ಹಲವು ಕಾರಣಗಳಿತ್ತು. ವಿಶ್ವದಲ್ಲೇ ಅವರ ಟೀಮ್ ಎಲ್ಲಾ ವಿಭಾಗದಲ್ಲಿಯೂ ಅತ್ಯಂತ ಪ್ರಬಲವಾಗಿತ್ತು. ವಿವ್ ರಿಚರ್ಡಸ್ ಅವರ ಬ್ಯಾಟಿಂಗ್ ಅವರು ಹೊಡೆಯುತ್ತಿದ್ದ ಶರವೇಗದ ರನ್‌ಗಳು ನೋಡಿ ಬೋಲರ್‌ಗಳು ತತ್ತರಿಸುತ್ತಿದ್ದರು. ನಾಯಕ ಕ್ಲೈವ್ ಲಾಯ್ಡ್ ಎಡಗೈನ ಸುಪ್ರಸಿಧ್ದ ಆಟಗಾರರಾಗಿದ್ದರು. ವೆಸ್ಟ್ ಇಂಡೀಸ್ ವೇಗದ ಬೋಲಿಂಗ್ ಜೊತೆ ಅದು ಬಹಳ ನಿಖರವಾಗಿತ್ತು.

2011ರಲ್ಲಿ ಮತ್ತೆ ವಿಶ್ವ ಕಪ್ ಟೂರ್ನಮೆಂಟ್ ಮ್ಯಾಚುಗಳನ್ನು ಆಯೋಜಿಸಲು ಭಾರತ ಮುಂದೆ ಬಂತು. ಭಾರತ, ಶ್ರೀಲಂಕೆ ಮತ್ತು ಬಾಂಗ್ಲಾದೇಶಗಳಲ್ಲಿ ಪಂದ್ಯಗಳನ್ನು ಆಡಿಸಲಾಯಿತು.

2011ರಲ್ಲಿ ಭಾರತದ ನಾಯಕ ಎಮ್.ಎಸ್. ಧೋನಿ ಆದರು. ಅವರ ನಾಯತ್ವದಲ್ಲಿ ಆಗಲೇ ಭಾರತ ಮೊಟ್ಟ ಮೊದಲನೇಯ ಟಿ-20 ಟೂರ್ನಮೆಂಟನ್ನು ಪಾಕಿಸ್ಥಾನದ ಮೇಲೆ 2009ರಲ್ಲಿ ಗೆದ್ದಿತ್ತು. ಸಚಿನ್ ಟೆಂಡೂಲ್ಕರ್ ಅವರಿಗೆ ಇದು ಕೊನೆಯ ಅವಕಾಶವೆಂದು ಹೇಳಬೇಕು. ನಾಲಕ್ಕು ಬಾರಿ ಆಡಿಯೂ ಅವರಿಗೆ ವಿಶ್ವ ಕಪ್ ಗೆಲ್ಲುವ ಅವಕಾಶ ಸಿಕ್ಕಿರಲಿಲ್ಲ. ಭಾರತ ತನ್ನ ಮೊದಲನೇಯ ಪಂದ್ಯದಲ್ಲಿ ಮಣಿಪುರದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 87 ರನ್‌ನಿಂದ ಸೋಲಿಸಿಸಿತು. ಭಾರತ 370/4; ಬಾಂಗ್ಲಾದೇಶ 283/8.

ಎರಡನೇ ಪಂದ್ಯ ಬೆಂಗಳೂರಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ರೋಮಾಂಚಕ ಪಂದ್ಯವಾಗಿ ಕೊನೆಗೆ ಫಲಿತಾಂಶ ‘ಟೈ’ ಆಯಿತು. ಭಾರತ 338; ಇಂಗ್ಲೆಂಡ್ 338/8

ಬೆಂಗಳೂರಿನಲ್ಲಿ ನಡೆದ ಮೂರನೆ ಪಂದ್ಯದಲ್ಲಿ ನೆದರ್ಲೆಂಡ್ಸ್‌ 207; ಭಾರತ 210/5 ಭಾರತದ ಗೆಲುವು.
ನಾಲ್ಕನೇ ಪಂದ್ಯದಲ್ಲಿ ನೆದರ್ಲೆಂಡ್ಸ್‌ 189; ಭಾರತ 191/5. ಭಾರತದ ಗೆಲುವು.
ಐದನೇ ಪಂದ್ಯದಲ್ಲಿ ಭಾರತ 296; ದಕ್ಷಿಣ ಆಫ್ರಿಕ 300/7. ಭಾರತದ ಸೋಲು.

ಆರನೇ ಪಂದ್ಯದಲ್ಲಿ ಭರತ 268; ವೆಸ್ಟ್ ಇಂಡೀಸ್ 188. ಭಾರತದ ಗೆಲುವು.

ಕ್ವಾರ್ಟರ್‌ ಫೈನಲ್ಸ್‌ : ಆಸ್ಟ್ರೇಲಿಯ 260/6 ; ಭಾರತ 261/5 ಭಾರತದ ಗೆಲುವು.

ಸೆಮಿ ಫೈನಲ್ಸ್: ಭಾರತ 260/9; ಪಾಕಿಸ್ಥಾನ 231. ಭಾರತದ ಗೆಲುವು

ಫೈನಲ್ಸ್: ಶ್ರೀಲಂಕ 274/6 : ಭಾರತ 277/4 ಭಾರತ ಕಪ್ ಗೆದ್ದಿತು.

ಮುಂಬೈ ವಾಂಖೇಡೆ ಮೈದಾನದಲ್ಲಿ ನಡೆದ ಫೈನಲ್ಸ್‌ನಲ್ಲಿ ಭಾರತ ಜಯಭೇರಿ ಹೊಡೆಯಿತು.

ಫೈನಲ್ಸ್‌ನಲ್ಲಿ ಮೊದಲು ಆಡಿದ ಶ್ರೀಲಂಕ 6 ವಿಕೆಟ್ ನಷ್ಟಕ್ಕೆ 274 ರನ್ ಮಾಡಿತು. ಕೇವಲ 88 ಬಾಲ್‌ಗಳಲ್ಲಿ ಮಹೇಲಾ ಜಯವರ್ಧನೆ 103 ರನ್ ಮಾಡಿದರು. ಅವರು 13 ಬೌಂಡರಿ ಹೊಡೆದರು. ಅವರಿಗೆ ಸಂಗಕ್ಕಾರ ಮತ್ತು ದಿಲ್ಷನ್ ಜೊತೆ ಕೊಟ್ಟು ಶ್ರೀಲಂಕ ಒಂದು ಒಳ್ಳೆಯ ಸ್ಕೋರ್ ತಲುಪಲು ಸಹಾಯ ಮಾಡಿದರು.

ಭಾರತದ ಶುರು ಚೆನ್ನಾಗಿ ಆಗಲಿಲ್ಲ. ಸೆಹ್ವಾಗ್ ಸೊನ್ನೆಗೆ ಔಟಾದರೆ, ಟೆಂಡೂಲ್ಕರ್ ಕೇವಲ 18ಕ್ಕೆ ಮಾಲಿಂಗ ಅವರ ಬೋಲಿಂಗಿಗೆ ಔಟಾದರು. ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಜೊತೆಗೆ ನಿಂತು ಸ್ಕೋರ್ 113 ಆದಾಗ ಕೊಹ್ಲಿ ಔಟಾದರು. ಆಗ ಯುವರಾಜ್‌ ಸಿಂಘ್ ಬರಬೇಕಿತ್ತು. ಅದರೆ ಮೈದಾನಕ್ಕೆ ಇಳಿದದ್ದು ಮಹೇಂದ್ರ ಸಿಂಘ್ ಧೋನಿ! ಯುವರಾಜ್‌ ಬದಲು ನಾನು ಹೊಗುತ್ತಿದ್ದೇನೆ ಎಂದು ಕೋಚ್‌ಗೆ ಹೇಳಿ ಅವರು ಮೈದಾನಕ್ಕೆ ಇಳಿದರು. ಸಾಮಾನ್ಯವಾಗಿ ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಆಫ್‌ಸ್ಪಿನ್ನರ್‌ರನ್ನು ಎದುರಿಸುವುದು ಕಷ್ಟದ ಕೆಲಸ. ಅದರಲ್ಲೂ ಮುರಳಿಧರನ್ನಂಥ ಅಫ್ ಸ್ಪಿನ್ನರ್ ಬೋಲ್ ಮಾಡುತ್ತಿದ್ದರೆ ಎಂತಹ ಎಡಗೈ ಬ್ಯಾಟ್ಸ್‌ಮನ್‌ಗೂ ಬಹಳ ಕಷ್ಟ. ಇದನ್ನರಿತ ಧೋನಿ ಯುವರಾಜ್‌ ಬದುಲು ಸ್ವತಃ ಅವರೇ ಕರತಾಡನದ ಮಧ್ಯೆ ಮೈದಾನಕ್ಕೆ ಇಳಿದರು. ಶ್ರೀಲಂಕದ ಬೆಸ್ಟ್ ಬೋಲರ್ ಬೋಲ್ ಮಾಡುತ್ತಿದ್ದರು. ಆವಾಗೇನಾದರೂ ಒಂದೆರೆಡು ವಿಕೆಟ್ ಬಿದ್ದಿದ್ದರೆ, ಭಾರತದ ಸ್ಥಿತಿ ಅಧೋಗತಿಯಾಗುತ್ತಿತ್ತು.

(ಯುವರಾಜ್‌ ಸಿಂಘ್)

ಇನ್ನೊಂದು ಕಡೆ ಓಪನರ್ ಆಗಿ ಬಂದ ಗೌತಮ್ ಗಂಭೀರ್ ಆಡುತ್ತಿದ್ದರು. ಗಂಭೀರ್ ವಿಷಯವಾಗಿ ಒಂದೆರೆಡು ಮಾತು ಇಲ್ಲಿ ಹೇಳಬೇಕು. ಯಾರಿಗಾದರೂ ಫೈನಲ್ಸ್ ಆಡುವಾಗ ಎಷ್ಟೋಸರ್ತಿ ಧೈರ್ಯವಿರುವುದಿಲ್ಲ. ಕೈ ಕಾಲಿನಲ್ಲಿ ನಡುಕ ಹುಟ್ಟುವುದು ಸಹಜವೇ! ಆದರೆ ಗಂಭೀರ್ ಹಾಗಲ್ಲ. ಅವರಿಗೆ ಫೈನಲ್ಸ್‌ನಲ್ಲಿ ಜೋರು ಹುರುಪು, ಆತ್ಮ ವಿಶ್ವಾಸ, ಛಲ ಇದೆಲ್ಲವೂ ಅವರಲ್ಲಿ ಹೇರಳವಾಗಿ ಇರುತ್ತೆ. ಜೊತೆಗೆ ಯಾರಾದರೂ ಅವರನ್ನು ಕೆಣಕಿದರೆ ಬ್ಯಾಟು ಎತ್ತಿ ಅಲ್ಲೇ ಆ ಸಂಗತಿಯನ್ನು ಮುಗಿಸಲು ಹೋಗುತ್ತಾರೆ! ಅಂತಹ ವ್ಯಕ್ತಿ ಕೈಲಿ ಬ್ಯಾಟ್ ಹಿಡಿದರೆ ಅವರ ಆಟದ ಶೈಲಿ, ರಭಸದಿಂದ ಹೊಡೆಯುತ್ತಿದ್ದ ರನ್‌ಗಳು ನೋಡಲು ಚಂದ. ಭಾರತ 2 ವಿಕೆಟ್‌ಗಳು -ಸೆಹ್ವಾಗ್ ಮತ್ತು ಟಂಡೂಲ್ಕರ್ -ಅವರನ್ನು ಕಳೆದುಕೊಂಡು ಕಷ್ಟ ಸ್ಥಿತಿಯಲ್ಲಿದ್ದಾಗ ಇನಿಂಗ್ಸನ್ನು ಕೋಹ್ಲಿ ಜೊತೆಯಲ್ಲಿ ಪಾಲುದಾರಿಕೆ ಕಟ್ಟಿದರು. ಮತ್ತೆ ಧೋನಿಯ ಜೊತೆ ಸೇರಿ ಭಾರತಕ್ಕೆ ಗೆಲುವಿನ ದಡದ ಹತ್ತಿರಕ್ಕೆ ತಂದರು. 97 ರನ್ ಮಾಡಿ ಔಟಾದ ಗಂಭೀರ್ ಅವರಿಗೆ ಶತಕ ಬರಬೇಕಾಗಿತ್ತು. 3 ರನ್‌ನಲ್ಲಿ ಮಹತ್ತರವಾಗಬೇಕಾದ ಸೆಂಚುರಿ ಬರಲಿಲ್ಲ.

ಹಾಗೆಯೇ ಟಿ-20ಯ ಮ್ಯಾಚ್ ಪಾಕಿಸ್ಥಾನದ ವಿರುದ್ಧ 2007ರಲ್ಲಿ ಆಡಿದ ಫೈನಲ್ಸ್‌ನಲ್ಲಿ ಭಾರತದ ಸ್ಕೋರ್ 157/5 ರಲ್ಲಿ ಗಂಭೀರ್ 75 ಹೊಡೆದರು! ಎರಡು ಅಂಕಿ ಸ್ಕೋರ್ ಮಾಡಿದವರು ಕೇವಲ 3 ಜನ! ಒಟ್ಟಿನಲ್ಲಿ ಒಂದು ಫೈನಲ್ಸ್‌ಗಳಲ್ಲಿ ಮೈಛಳಿ ಬಿಟ್ಟು ತನ್ನ ಪಂಗಡಕ್ಕೆ ಒಳ್ಳೆ ಸ್ಕೋರ್ ತರಲು ಶ್ರಮಿಸಿದವರು ಗೌತಮ್ ಗಂಭೀರ್. ಇದನ್ನು ಮರೆಯುವ ಹಾಗೇ ಇಲ್ಲ.

ಧೋನಿ ಮತ್ತು ಗಂಭೀರ್ ಜೊತೆಗೂಡಿ ಒಳ್ಳೆ ಪಾಲುದಾರಿಕೆ ಮಾಡಿದ ಮೇಲೆ, ಧೋನಿ ಮತ್ತು ಯುವರಾಜ್ ಸಿಂಘ್ ಭಾರತಕ್ಕೆ ಎರಡನೇ ಒಡಿಐ ವಿಶ್ವ ಕಪ್‌ನ ಚಾಂಪಿಯನ್ ಆಗಲು ಸಹಾಯಮಾಡಿದರು.
ಸತತವಾಗಿ ಬ್ಯಾಟಿಂಗ್ ಮತ್ತು ಸ್ಪಿನ್ ಬೋಲಿಂಗ್ ಮಾಡಿದ ಯುವರಾಜ್ ಸಿಂಘ್ ಅವರನ್ನು 2011 ಅತ್ಯಂತ ಶ್ರೇಷ್ಟ ಆಟಗಾರನೆಂದು ಘೋಷಿಸಿದರು.
ಇದಾದ ಸ್ವಲ್ಪ ದಿನಗಳಲ್ಲಿಯೇ ಯುವರಾಜ್ ಕ್ಯಾನ್ಸರ್ ಪೀಡಿತರಾದರು. ಅವರು ವಾಸಿಯಾಗಿ ಮತ್ತೆ ಕುಟುಂಬದವರ ಜೊತೆ ಸುರಕ್ಷವಾಗಿದ್ದಾರೆ.

ಇಲ್ಲಿಯವರೆಗೆ ನಡೆದ ವಿಶ್ವ ಕಪ್‌ನ ಅತ್ಯಂತ ಹೆಚ್ಚು ಸ್ಕೋರ್ ಗಳಿಸಿದವರು ಸಚಿನ್ ಟೆಂಡೂಲ್ಕರ್. 175 ಅಜೇಯರಾಗಿ ಹೊಡೆದು ಭಾರತಕ್ಕೆ ಮೊದಲ ಒಡಿಐ ಕಪ್ ತಂದ ಕಪಿಲ್ ದೇವ್, ಇಬ್ಬರೂ ತಮ್ಮ ಆಟದ ಮಹಿಮೆಯಿಂದ ಬೆಸ್ಟ್ ಪ್ಲೇಯರ್ ಆದ 1983ರ ಮೊಹಿಂದರ್ ಅಮರ್‌ನಾಥ್ ಮತ್ತು 2011 ರ ಯುವರಾಜ್ ಸಿಂಘ್, ಫೈನಲ್ಸ್‌ನಲ್ಲಿ ಅಜೇಯರಾಗಿ 91 ಹೊಡೆದ ನಾಯಕ ಧೋನಿ, ಪ್ರತಿ ಫೈನಲ್ಸ್‌ನಲ್ಲಿಯೂ ಭಾರತಕ್ಕೆ ಹೆಚ್ಚು ರನ್ ಹೊಡೆದ ಬ್ಯಾಟಿಂಗ್ ವೀರ ಗೌತಮ್ ಗಂಭೀರ್, ಈಗ ಸಿಕ್ಸರ್‌ಗಳ ಸುರಿಮಳೆ ಸುರಿಸುತ್ತಿರುವ ಹಾಗೂ ವಿಶ್ವ ಕಪ್ ಮ್ಯಾಚುಗಳಲ್ಲಿ ಅತ್ಯಂತ ಹೆಚ್ಚು ಶತಕ 7 ಹೊಡೆದಿರುವ ರೋಹಿತ್ ಶರ್ಮ, ಎಲ್ಲಾ ದಾಖಲೆಗಳನ್ನು ಉರುಳಿಸುತ್ತಿರುವ ವಿರಾಟ್ ಕೊಹ್ಲಿ – ಇವರೆಲ್ಲರೂ ಭಾರತದ ವಿಶ್ವಕಪ್‌ನ ನಿಜವಾದ ರತ್ನಗಳು.

ಈ ವಿಶ್ವ ಕಪ್‌ನ ಹೊಸ ಸುದ್ದಿ: ಭಾರತದ ನಾಯಕ ರೋಹಿತ್ ಶರ್ಮ ಅವರ ದಾಖಲೆಯನ್ನು ವಿಶ್ಲೇಷಣೆ ಮಾಡಿ ಅವರು ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಎರಡು ಹೊಸ ದಾಖಲೆ ಮಾಡಬಹುದೆಂದು ಊಹೆ ಮಾಡಿದ್ದೆವು ಹಾಗೂ ನಿರೀಕ್ಷೆಯಲ್ಲಿದ್ದೆವು. ಅದನ್ನು ರೋಹಿತ್ ಶರ್ಮ ಆಫ್ಘಾನಿಸ್ಥಾನದ ವಿರುದ್ಧ ಬ್ಯಾಟಿಂಗ್ ಮಾಡುವಾಗ ಹೊಸ ದಾಖಲೆ ಮಾಡಿದರೆಂದು ತಿಳಿಸಲು ಹೆಮ್ಮೆ ಪಡುತ್ತೇವೆ. 556 ಸಿಕ್ಸರ್‌ಗಳಿದ್ದ ಕ್ರಿಸ್ ಗೇಯ್ಲ್‌ರ ದಾಖಲೆಯನ್ನು ಮುರಿದು ಈಗ ರೋಹಿತ್ 560 ದಾಟಿದ್ದಾರೆ! ಎರಡನೆಯ ದಾಖಲೆ; ಅವರು 17 ಮ್ಯಾಚ್‌ಗಳಲ್ಲೇ 6 ಶತಕ ಹೊಡೆದು ಸಚಿನ್ ಟೆಂಡೂಲ್ಕರ್ ಅವರ ಜೊತೆ ಜಂಟಿ ದಾಖಲೆ ಮಾಡಿದ್ದರು. ಸಚಿನ್ 44 ಇನ್ನಿಂಗ್ಸ್‌ನಲ್ಲಿ 6 ಶತಕ ಮಾಡಿದ್ದರು. ಮೊನ್ನೆ ಆಫ್ಘಾನಿಸ್ಥಾನದ ವಿರುದ್ಧ ತಮ್ಮ 19ನೇ ಮ್ಯಾಚ್‌ನಲ್ಲಿ 7ನೇ ಶತಕ ಬಾರಿಸಿದ ರೋಹಿತ್ ಶರ್ಮ ಮುಂದೆ ಹೋಗಿದ್ದಾರೆ. ಅವರಿಗೆ ನಮ್ಮೆಲ್ಲರ ಶುಭಾಶಯಗಳು. ಇನ್ನು ದಾಖಲೆಯನ್ನು ಮಾಡಿ, ಈ ವರ್ಷ ಹೊಸ ಕಪ್ ಭಾರತಕ್ಕೆ ತರುವರೆಂದು ದೇಶದ ಹಾಗೂ ಕೆಂಡಸಂಪಿಗೆಯಿಂದ ಎಲ್ಲರ ಆಶಯ.