ಸಮುದ್ರೆಯ ಎದೆಯ ಬಯಲಲಿ

ನೀರಗಿಡದ ಎಲೆಯ ಮೇಲೆ
ಅಂಗಾತ ಮಲಗಿ
ನಿನ್ನ ನೆನಪಿಸಿಕೊಳ್ಳುವೆ
ಒಳಗೆಲ್ಲ ಉರಿಯೆದ್ದು
ಸಕಲ ಜೀವಕೋಶಗಳಿಗೆ ಬೆಂಕಿ ತಗುಲಿ
ಶರಧಿ ಧುಮ್ಮಿಕ್ಕಲು ಹವಣಿಸುವುದು
ಎಲ್ಲ ತಣ್ಣಗಾದ ಮೇಲೆ
ಮತ್ತೆ ಮೊದಲಿನಿಂದ ಶುರು
ಯುದ್ಧ ಜಾರಿಯಿರಲಿ ಹೀಗೆ ನನ್ನ ನಿನ್ನ ನಡುವೆ
ಗೆಲ್ಲಬೇಕಿಲ್ಲ ಸೋಲಬೇಕಿಲ್ಲ
ರಣಾಂಗಣದಲ್ಲಿ ಹಾಜರಿರಬೇಕು ಅಷ್ಟೆ

ಈಗ ಎಲ್ಲ ಕಡೆ ಬೆಂಕಿಯದೆ ಮಾತು
ಹೌದು ಮಾತೂ ಬೆಂಕಿಯೇ ಈಗೀಗ
ಪ್ರೇಮವೇ ಹೆಸರಾದ ಊರಲ್ಲಿ ಈಗ ಕುಳಿತು ಪ್ರೇಮಿಸಲೂ ಪುರುಸೊತ್ತಿಲ್ಲ
ಬಂದೂಕು ಬಾಂಬುಗಳಿಂದ ಚುಕ್ಕಿಗಳ ಬೇಟೆ ಜೋರಾಗಿದೆ
ಪ್ರೇಮತಾಣವೀಗ
ನಕ್ಷತ್ರಗಳು ಗೋರಿಯಾದ ಸುಡುಗಾಡು

ಯಾರು ಕಂಡು ಹಿಡಿದರೋ ಈ ಬಂದೂಕು ಬಾಂಬು

ಹೂಗಳ ಪರಿಮಳ
ಹೃದಯದ ಕೋಣೆಗಳಿಗೆ ಹೊಕ್ಕಿದ್ದರೆ
ಅವಳ ನಗುವಿನ
ಬಣ್ಣಗಳು ಕಣ್ಣುಗಳಿಗೆ ಸೋಕಿದ್ದರೆ
ಇನಿದನಿಯ ಪಿಸುಗಂಧ ಕಿವಿಯ ಗುಹೆಯ ತುಂಬಿದ್ದರೆ
ಪ್ರೀತಿಯ ಮಾತುಗಳ ಬಿಸಿಯ ಸ್ನಾನ ಮಾಡಿದ್ದರೆ
ತುಟಿಗೆ ತುಟಿ ಒತ್ತೊತ್ತಿ ಬಿಡಿಸಿದ ಚಿತ್ರಗಳು
ನೆನಪಿಗಾದರೂ ಬಂದಿದ್ದರೆ
ಹೀಗಾಗುತ್ತಿರಲಿಲ್ಲ.

ಧನ್ಯವಾದಗಳು ಹುಡುಗಿ
ಸಾವಿಲ್ಲದ ಕೇಡಿಲ್ಲದ ಯುದ್ಧ ಕಲಿಸಿದ್ದಕ್ಕೆ
ನನ್ನನ್ನಿನ್ನೂ
ಅವ್ವನ ಮಾತು ಕೇಳುವ ಮಗನಾಗಿ ಉಳಿಸಿದ್ದಕ್ಕೆ

ವೀರಣ್ಣ ಮಡಿವಾಳರ ಹೊಸತಲೆಮಾರಿನ ಪ್ರಮುಖ ಕವಿಗಳಲ್ಲೊಬ್ಬರು.
ರಾಯಬಾಗದಲ್ಲಿ ನೆಲೆಸಿರೋ ವೀರಣ್ಣ, ವೃತ್ತಿಯಲ್ಲಿ ಶಿಕ್ಷಕರು.
ಕನ್ನಡದ ಚೊಚ್ಚಲ ಕೇಂದ್ರ ಅಕಾಡೆಮಿ ಯುವ ಪುರಸ್ಕಾರದ ಜೊತೆಗೆ, ಹಲವಾರು ಪ್ರಶಸ್ತಿಗಳು ಇವರ ಸಾಹಿತ್ಯ ಕೃತಿಗಳಿಗೆ ದೊರಕಿವೆ.