ವೃದ್ಧಾಶ್ರಮದ ಅಂಗಳ ತಮ್ಮ ಮನೆ. ಆವತ್ತು ಭಾವನಾಳೊಡನೆ ಮನೆ ಬಿಟ್ಟು ಹೋಗುವಾಗ ಅಪ್ಪ ಆರಾಮ ಕುರ್ಚಿಯ ಮೇಲೆ ನಿರ್ಲಿಪ್ತವಾಗಿ ಕೂತಿದ್ದರು. ಅಮ್ಮ ಕಣ್ಣಿನಲ್ಲಿ ನೀರು ತುಂಬಿಕೊಂಡು ನೋಡುತ್ತ ನಿಂತಿದ್ದರು. ಹದಿಮೂರು ಜನ ವೃದ್ಧ-ವೃದ್ಧೆಯರೂ ನಮ್ಮನ್ನೆ ನೋಡುತ್ತ ನಿಂತಿದ್ದರು. ಏಕೋ ನನ್ನಲ್ಲಿ ಅಳುಕು. ಭಾವನಾ ಸರಸರನೇ ಹೆಜ್ಜೆ ಹಾಕಿ ಕಾರಿನಲ್ಲಿ ಕುಳಿತುಬಿಟ್ಟಿದ್ದಳು. ಲಚ್ಚಿ ಆಗ ಗರ್ಭಿಣಿ. ನನ್ನೆಡೆಗೆ ದುರದುರನೆ ದಿಟ್ಟಿಸುತ್ತಿದ್ದಳು. ಕಾರು ಹೊರಡುತ್ತಲೇ ಕುಸಿದು ಕೂತಳು. ಭಾವನಾಳ ಹಠಕ್ಕಾಗಿ ನಾನು ತಂದುಕೊಂಡ ದುರಂತ.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಕೊ ಕ್ಕೊ ಕ್ಕೊ…” ನಿಮ್ಮ ಓದಿಗೆ
ಅಂಕದ ಪರದೆಯ ಹುಂಜ ಕ್ಕೊಕ್ಕೊಕ್ಕೊ…. ಎಂದು ಕೂಗುತ್ತದೆ. ತಾನು ಸೋಲುತ್ತೇನೋ ಗೆಲ್ಲುತ್ತೇನೋ ಗೊತ್ತಿಲ್ಲ. ಕ್ಕೊಕ್ಕೊಕ್ಕೊ… ಕ್ಕೊಕ್ಕೊಕ್ಕೊ…
ಸುರೇಶ ಬಸ್ ಸ್ಟಾಪಿನಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾನೆ. ತಾನು ಹೇಗೆ ವಿಚಲಿತವಾಗುತ್ತಿದ್ದೇನಲ್ಲಾ? ಎಂದು ಆಶ್ಚರ್ಯಚಕಿತನಾಗುತ್ತಾನೆ. ಯಾವುದೇ ಕಥೆ ಹೇಳುವುದಕ್ಕು ಮುಂಚೆ ಶುರು ಮತ್ತು ಕಾಳಜಿ ಇದ್ದರೆ ಅದೊಂದು ಸತ್ಯಭಾವನೆಯಿಂದ ಜಾರಿಕೊಳ್ಳುವ ಪ್ರಯತ್ನವಾಗಿಬಿಡಬಹುದೆಂದು ಚಿಂತಿಸುತ್ತ ಹೊರಟಿದ್ದಾನೆ. ತಾನಾಕೆಗೆ ಮುತ್ತಿಟ್ಟುದುದನ್ನ ಮುಚ್ಚಿಹಾಕಲು ಪ್ರಯತ್ನಿಸುತ್ತಾನೆ. ಚಾಮುಂಡಿ ಬೆಟ್ಟದ ಮೇಲೆ ಇವತ್ತು ಆಕೆಯನ್ನ ಪ್ರೀತಿಯ ತೆಕ್ಕೆಯಲ್ಲಿ ಬಂಧಿಸಿ, ಆಕೆಗೆ ತಾಗುವಂತೆ ಕೂತು ಆಕೆಯ ಕೈಹಿಡಿದು ಜೀವನದ ಕನಸುಗಳನ್ನ ಕಟ್ಟಿದ್ದು ಸುಳ್ಳೇ ಅಥವಾ ಸತ್ಯವೇ? ಅರ್ಥವಾಗದೇ ಚಡಪಡಿಸುತ್ತ ಬಸ್ ಏರಿದ್ದಾನೆ. ತಾನು ಏರಿದ ಬಸ್‌ನಲ್ಲಿದ್ದ ವೃದ್ಧರ ಮುಖ ನೋಡುತ್ತ ಕಳೆದುಹೋಗಿದ್ದಾನೆ. ತನ್ನ ಅಪ್ಪ-ಅಮ್ಮ? ಹೀಗೆ ವೃದ್ಧರಲ್ಲವೇ? ಹಾಗಾದರೆ ತಾನು ಜವಾಬ್ದಾರಿಗಳಿಂದ ಜಾರಿಕೊಳ್ಳುತ್ತಿದ್ದೇನೆಯೇ? ವೃದ್ಧರಾದ ಅಪ್ಪ ಅಮ್ಮಂದಿರನ್ನು ಅನಾಥರನ್ನಾಗಿಸುವ ಹವಣಿಕೆಯಲ್ಲಿದ್ದೇನೆಯೆ? ಎನ್ನುವ ಚಿಂತೆಯಲ್ಲಿದ್ದಾಗ ವೃದ್ಧನೊಬ್ಬ, ಕಣ್ಣಿಗೆ ಬೀಳುತ್ತಾನೆ. ರಸ್ತೆ ದಾಟುವಾಗ ಅವನ ಕೈ ಹಿಡಿದುಕೊಂಡು ಅವನು ಹೇಳಿದ ಜಾಗಕ್ಕೆ ಕರೆದೊಯ್ದು ಬಿಡುತ್ತಾನೆ.
“ನಿನ್ನ ಹೆತ್ತ ತಂದೆ-ತಾಯಂದಿರು ಪುಣ್ಯ ಮಾಡಿದ್ದಾರಪ್ಪ” ಎಂದು ವೃದ್ಧ ಕೃತಜ್ಞತೆಯಲ್ಲಿ ತಲೆ ಸವರುತ್ತಾನೆ. ತಾನು ಏನು ಮಾಡಿದೆ ಎಂದು ತೋಚದೆ ರಾತ್ರಿಯ ಕತ್ತಲಲ್ಲಿ ತನ್ನನ್ನು ತಾನು ತಡಕಾಡುತ್ತಾನೆ.
ಅಂಕದ ಪರದೆಯ ಹುಂಜ. ಕ್ಕೊಕ್ಕೊಕ್ಕೊ…
ನಡೆದ ದಾರಿಯಲ್ಲಿ ಎಲ್ಲವನ್ನೂ ತ್ಯಜಿಸಿ ನಾನು ನನ್ನ ಹೆಂಡತಿ ಮತ್ತು ಮಕ್ಕಳು ಇಷ್ಟರಲ್ಲೇ ಬದುಕನ್ನು ಕಟ್ಟಿಕೊಂಡಾಗ ಗೊತ್ತೇ ಆಗಲಿಲ್ಲ. ಅಂಕದ ಗೊಂಬೆ ಕ್ಕೊಕ್ಕೊಕ್ಕೊ… ಮದುವೆಯಾದ ಮೇಲೆ ಎಲ್ಲಿ ಭಾವನಾಳೊಡನೆ ಕಳೆಯಲು ಸಮಯ ಸಿಗುವುದಿಲ್ಲವೋ ಎಂಬ ಭಾವನೆಯಲ್ಲಿ ತಂದೆ ತಾಯಿಯನ್ನ ತೊರೆಯಬಯಸಿದ್ದು ಇನ್ನು ಹಚ್ಚ ಹಸಿರಾಗೆ ಇದೆ.
“ಅಮ್ಮಾ ಅಪ್ಪ… ಅಜ್ಜ ಅಜ್ಜಿ… ವೃದ್ಧರು… ಮಕ್ಕಳು… ಮೊಮ್ಮಕ್ಕಳು… ಮತ್ತೆ ಹೆಂಡತಿ. ಈ ಕಾಲಚಕ್ರ ನಿಲ್ಲುವುದಿಲ್ಲ ನನಗೆ ಇಲ್ಲಿ ಸಿಲುಕದೇ ನಡೆಯಲು ಸಾಧ್ಯವಿಲ್ಲ. ಇವತ್ತು ನಾನು ನಾಳೆ ಇನ್ಯಾರೋ ಬಲಿಯಾಗಬೇಕು. ಆದರೆ ಸಂಬಂಧಗಳು… ನನ್ನನ್ನ ಕಸಿದುಕೊಳ್ಳುತ್ತಿವೆಯೇ ಗೊತ್ತಿಲ್ಲ. ಈ ಪ್ರೀತಿಯೂ ಕೂಡ ಒಂದು ಜಾಲ”.
ಕ್ಕೊಕ್ಕೊಕ್ಕೊ…. ಅಂಕದ ಪರದೆಯ ಹುಂಜ.
You are such an Idiot. You can’t escape your life. You are an
existentialistic third person. You pretend as if you are noble but yourthoughts are corrupt.”
“ಹೌದು ನಿಜ ಅನ್ಸುತ್ತೆ. ನನ್ನೊಳಗೆ ಏನೋ ಆತಂಕವಿದೆ. ಅಳುಕಿದೆ. ನನಗೆ ನಿನ್ನ ಪ್ರೀತಿಯ ಹಂಬಲ ಬೇಕು. ಹಲವಾರು ಕಾರಣಗಳಿಂದ ನನಗೆ ದುರಂತ ಇಷ್ಟವಾಗುತ್ತೆ. ಕಾಂಪ್ಲೆಕ್ಸಿಟಿಯಲ್ಲಿ ನನ್ನನ್ನ ನಾನು ಸಿಲುಕಿಸುತ್ತೇನೆ. ಅಸಮಾಧಾನದ ಸುಖವನ್ನ ಪಡೆಯುತ್ತೇನೆ. ಬಟ್ ಐ ಲವ್ ಯೂ ಟ್ರೂಲಿ.”
ಆಕೆಯೊಡನೆ ಮಾತನಾಡುವಾಗ ದ್ವಂದ್ವಗಳಲ್ಲಿ ಸಿಲುಕುವುದು ನನಗೆ ಅನಿವಾರ್ಯವಾಗುತ್ತದೆ. ಇದು ನನ್ನ ಅತೃಪ್ತಿಯೇ ಇರಬೇಕು. ನಾನು ಹೇಗೆ ಆಟದ ಬೊಂಬೆಯಾಗುತ್ತೇನೆ. ಎಕ್ಸಿಸ್ಟೆನ್ಷಿಯಲ್ ಥರ್ಡ ಪರ್ಸನ್, ನನ್ನೊಳಗೆ ನಾನಿರದೆ ಇನ್ನೊಬ್ಬನಾಗುವ ನಾಟಕ. ಅದನ್ನೆ ನಿಜವೆಂದು ಭಾವಿಸಿ ತೊಳಲಾಡುವ ರೋಗ. ದುರಂತದ ನೋವು. ಅನುಕರಣೆ ಆದರೂ ನಾನು ನೋಬಲ್ ಎನ್ನಿಸುವ ಕ್ಷಣಗಳು ಆಕೆಯೊಡನೆ ಕಳೆಯಲು ಬೇಕಾಗುವ ಪ್ರೈವಸಿ. ಹೊಂದಿಕೊಳ್ಳಲಾಗದೆಂಬ ಹೊಯ್ದಾಟ. ಇವೆಲ್ಲ ನನ್ನನ್ನ ವಿಹ್ವಲನನ್ನಾಗಿಸುತ್ತವೆ.
ಕಾಲೇಜಿನ ಬದುಕಿನಲ್ಲಿ ಪ್ರೀತಿಯಲ್ಲಿ ಯಾವುದೂ ಗೊತ್ತೇ ಆಗಲಿಲ್ಲ. ಎಲ್ಲವೂ ಆನಂದಮಯ. ಮೋಹಕ, ಸಿಹಿ. ಅವಳ ಮನೆಗೆ ಹೋಗಿ ಇದ್ದುದು ಯಾಕೆ ಎಷ್ಟೊಂದು ಸುಂದರವೆನಿಸಿತ್ತು? ಗೊತ್ತಿಲ್ಲ ಅವಳನ್ನ ಕಾಮಿಸುವಾಗ ಮತ್ತು ಪ್ರೀತಿಸುವಾಗ ಇಟ್ ಡಿಡಂಟ್ ಮ್ಯಾಟರ್. ಆದರೆ ಸಂಬಂಧಗಳ ಆಳ್ವಿಕೆಯನ್ನ ಬಯಸುವಾಗ ಆಕೆ ಎಷ್ಟು ಸ್ವಾರ್ಥಿಯಾಗುತ್ತಾಳೆ. ದಬ್ಬಾಳಿಕೆ ಮಾಡುತ್ತಾಳೆ. ಆಕೆಯೇ ಗೆಲ್ಲುವಂತೆ ನಾನು ಸುಮ್ಮನಾಗುತ್ತೇನೆ. ಆಕೆ ನನ್ನನ್ನು ಕೊಲ್ಲಲು ಅಣಿಯಾಗಿಬಿಡುತ್ತಾಳೆ. ಕೊಂದೇ ಬಿಡುತ್ತಾಳೆ. ನಾನು ವಿಲಿವಿಲಿ ಒದ್ದಾಡುತ್ತೇನೆ. ನನ್ನನ್ನು ಕಬಳಿಸೇ ಬಿಡುತ್ತಾಳೆ. ನಾನು ವ್ಯಕ್ತಿತ್ವವಿಲ್ಲದೆ ಜೀವಿಸುತ್ತೇನೆ. ಆಕೆ ಎಷ್ಟೊಂದು ಕ್ರೂರಿಯಾಗುತ್ತಾಳೆ. ಆದರೂ ಆಕೆಯ ಸಂಗ ಬೇಕೆನಿಸುತ್ತದೆ. ಕ್ಕೊಕ್ಕೊಕ್ಕೊ…
“ಹೌ ಫೂಲಿಷ್?!… ನಾನೂ ನನ್ನ ತಂದೆ ತಾಯಿಯನ್ನ ಬಿಟ್ಟಿರುವುದು ಸಾಧ್ಯವೇ ಇಲ್ಲ. ನಿನ್ನ ಹಾಗೆಯೇ ನಾನೂ ಕೂಡ. ಅರ್ಥ ಮಾಡಿಕೋ.”
“You do anything you want but I can’t live without my parents. You will have to settle here only with me..”
ಅಂಕದ ಪರದೆಯ ಹುಂಜ ಸುಮ್ಮನಾಗುತ್ತದೆ, ಹಾಕುವ ಕಾಳುಗಳನ್ನು ತಿನ್ನುತ್ತ.
ಆಕೆ ನನ್ನನ್ನು ಸ್ವೀಟ್ ಪೆಟ್ ಎಂದಾಗ ಎಷ್ಟೊಂದು ಒಲವಿನಲ್ಲಿ ನಾಚಿಕೊಂಡು ಕೆಂಪಗಾಗುತ್ತೇನಲ್ಲವೇ? ನನ್ನ ಪ್ರೀತಿ ಯಾವುದೇ ತೊಡಕನ್ನ ಮೀರಿ ನೋಬಲ್ ಆಗಿದೆಯಲ್ಲ ಎಂದುಕೊಂಡದ್ದು? ಈಗ ಅಪ್ರಸ್ತುತ. ಪ್ರೀತಿಯ ಕೈಚಳಕ. ನನ್ನ ಹಾಗೂ ನನ್ನ ತಾಯಿ-ತಂದೆಯರ ನಡುವಿನ ಪ್ರೀತಿ ಈಕೆಯ ಪ್ರೀತಿಯೆದುರಿಗೆ ತಲೆಬಾಗಬೇಕು. ಹೇಗೆ ಇದು ಇಷ್ಟೊಂದು ವಿಚಿತ್ರ. ಸಾಧ್ಯವಿದೆಯೇ? ನಾನು ಚಿಕ್ಕವನಿದ್ದಾಗ ನನಗೆ ಚಂದಿರನನ್ನ ತೋರಿಸುತ್ತ ಊಟ ಮಾಡಿಸುತ್ತಿದ್ದ ಅಮ್ಮ, ಹೆಗಲ ಮೇಲೆ ಹೊತ್ತುಕೊಂಡು ಓಡಾಡಿಸಿದ ಅಪ್ಪ. ನಾನು ಮಾಡಿದ ಉಚ್ಚೆಯನ್ನು ಹ್ಹಹ್ಹಹ್ಹಾ ಎಂದು ಪ್ರೀತಿಯಲ್ಲಿ ತೊಳೆದ ಅವರನ್ನು? ತೊರೆಯುವುದೇ? ಸಾಧ್ಯವಿಲ್ಲ. ನನ್ನನ್ನ ಬಚ್ಚಲಲ್ಲಿ ಕಾಲಮೇಲೆ ಹಾಕಿ ಮೀಯಿಸುತ್ತಿದ್ದ ಕ್ಷಣಗಳು. ಅತ್ತಾಗ ಗೊಂಬೆಯಾಡಿಸಿ ಎತ್ತಿಕೊಂಡು ಮುದ್ದು ಮಾಡಿ…. ಅಮ್ಮ – ಅಪ್ಪ ನನ್ನೆರಡು ಕಣ್ಣುಗಳು.
ಆವತ್ತು ನಾನಿದ್ದ ರೂಮಿಗೆ ಈಕೆ ಬಂದಾಗ ನನ್ನ ತಲೆ ಸವರಿ ನಿನ್ನಂತೆ ಯಾರೂ ಇಲ್ಲ ಎಂದು ಹಣೆಗೆ ಮುತ್ತಿಕ್ಕಿ ಹಣ್ಣು ತಿನ್ನಿಸಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಒಲವಿನ ಕನಸುಗಳನ್ನ ಕಟ್ಟಿದ್ದಳು. ಮೋಜಿನಲ್ಲಿ ನಲಿದಾಡಿ, ಕೂಡಾಡಿ ಪ್ರೀತಿಯಲಿ ಜೊತೆಯಾಗಿ ಒಬ್ಬರನ್ನೊಬ್ಬರು ತಡಕಾಡಿ…. ನನಗೆ ನೆನಪಿರಲೇಬೇಕು. ನಾನು ನೆನಪಿರದಂತೆ ನಟಿಸುತ್ತಿರಬಹುದು. ಇದು ಯಾರನ್ನೂ ನನ್ನ ಈ ಸ್ಥಿತಿಗೆ ಕಾರಣವಾಗಿ ಮಾಡಬೇಕೆನಿಸುವ ವಿಷಬೀಜ. ಅಪ್ಪ ಅಮ್ಮ ಚಿಕ್ಕವನಿದ್ದಾಗ ನನ್ನ ಬಚ್ಚಲಲ್ಲಿ ಬತ್ತಲೆ ಮಾಡಿ ಸ್ನಾನ ಮಾಡಿಸಿದ್ದು, ಎಣ್ಣೆ ಹಚ್ಚಿ ಮೈ ತಿಕ್ಕಿದ್ದು ನೆನಪು ನಾನು ಮಾಡಿಕೊಳ್ಳಲೊಲ್ಲೆ.
ಈಕೆ ನನ್ನ ರೂಮಿಗೆ ಬಂದಾಗ ಕಿಟಕಿಯ ಪರದೆಯನ್ನ ಮುಚ್ಚಿ ಬಾಗಿಲ ಅಗುಳಿಯನ್ನ ಹಾಕಿ ನಡೆಸಿದ್ದೇನು? ಹೇಗೆ ನನ್ನನ್ನು ಕಟ್ಟಿಹಾಕಿದೆ ಕಾಲ. ಕಾಲದೇಶವನ್ನ ಮೀರುವುದು, ಇದನ್ನೆಲ್ಲ ತಪ್ಪಿಸುವುದು ನನ್ನಿಂದ ಸಾಧ್ಯವೇ ಇಲ್ಲ. ಎಕ್ಸಿಸ್ಟೆನ್ಷಿಯಲ್ ಥರ್ಡ ಪರ್ಸನ್. ನಾನೊಬ್ಬ ಭೂತರಾಯ ಕಲ್ಲುಡ್ಕನಿಗೆ ನರಬಲಿ. ರಾತ್ರಿ ಬೀಳುವ ಕನಸುಗಳು. ನಿನ್ನನ್ನ ಹಿಡಿದುಕೊಂಡು ಹೋಗುತ್ತೇನೆ. ನೀನು ನೀಚ. ಮೋಸಗಾರ. ಆತ್ಮಸಾಕ್ಷಿ ಇಲ್ಲದ ಹಲಕಾ ಎಂಬ ಕಿರುಚಾಟಗಳು. ಕಿಂಕರರು ಬಂದು ನನ್ನ ತಲೆಕಡಿಯುತ್ತಿರುವ ದೃಶ್ಯ. ಇದೆಲ್ಲ ಏನು? ನಿದ್ದೆಯಿಲ್ಲದ ಕನಸಿನ ರಾತ್ರಿಗಳು.
ಕ್ಕೊಕ್ಕೊಕ್ಕೊ… ಇತಿಹಾಸದ ಚಕ್ರದಲ್ಲಿ ಸಿಲುಕಿ ಕೆಳಗೆ ಹೋದ ನಾನು. ನನ್ನ ಆಂತರ್ಯದ ತಿಳಿವುಗಳಲ್ಲಿ ನಿರ್ಲಜ್ಜೆಯಿಂದ ಧಿಕ್ಕರಿಸಿದ ಪ್ರೀತಿ. ಪೈಥಾಗೋರಸನ ಪ್ರಮೇಯ- ಎರಡು ದಿಕ್ಕಿನ ಎರಡು ಭುಜಗಳ ಮೇಲೆ ನಿಂತಿರುವ ನಾನು. ಬ್ರೌನಿಯನ್ ಮೂವ್‌ಮೆಂಟ್. ಚಲನೆ ಎಲ್ಲಿಯೂ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗದ ಸಂಧಿಗ್ಧತೆ. ಹೇಗೆ ಜೀವನದಲ್ಲಿ ಪ್ರೀತಿಯನ್ನ ಅವಕಾಶವಾಗಿಸುವುದು? ಪ್ರೀತಿಯ ಮೂಲವನ್ನು ಹೇಗೆ ಎರಡು ಮಾಡುವುದು. ಅವುಗಳನ್ನ ಹೇಗೆ ಆಯ್ಕೆಗಳನ್ನಾಗಿ ಪರಿವರ್ತಿಸುವುದು? ನನ್ನನ್ನು ಸ್ವತಂತ್ರನನ್ನಾಗಿ ಮಾಡಿ ತಾನು ಮಾತ್ರ ಈ ಪ್ರಕ್ರಿಯೆಯಲ್ಲಿ ಸತ್ಯವಾಗಬೇಕೆನ್ನುವ ಹಂಬಲದಲ್ಲಿರುವ ಆಕೆ. ಯಾಕೆ ನಾನು ಆಕೆಗೆ ಪ್ರಮುಖನೆನಿಸುವುದಿಲ್ಲ?
ಅವತ್ತಾಕೆ ನನ್ನೊಡನೆ ಮಾತನಾಡುವಾಗ ಮೈಗೆ ಮೈ ತಾಕಿಸಿ ಕೂತು ನನ್ನ ಕೈಗಳನ್ನ ಹಿಡಿದುಕೊಂಡು ಭುಜದ ಮೇಲೆ ತಲೆಯಿಟ್ಟು
“ಪ್ರೊಟಾನಿನ ಸುತ್ತ ಎಲೆಕ್ಟ್ರಾನು ಯಾವಾಗಲೂ ಸುತ್ತುತ್ತಿರಬೇಕು. ಆವಾಗಲೇ ಅದು ಒಂದು ಕಣ. ಇಟ್ ಶುಡ್ ಬಿ ಸ್ಟೇಬಲ್ ಲೈಕ್ ಅಸ್.”
“ನಾನೆಂದಿಗೂ ನಿನ್ನ ಬಿಟ್ಟು ಹೋಗುವುದಿಲ್ಲ. ಎಲ್ಲಿ ಉತ್ತರ ಧ್ರುವವಿದೆಯೋ ಅಲ್ಲಿ ದಕ್ಷಿಣ ಧ್ರುವವಿರಲೇಬೇಕು.”
“ಅಂದರೆ ನೀನು ನಾನು ಅಪೊಸಿಟ್ ಪೋಲುಗಳೇ? ಆದರೇ ಅವೆರಡು ಸಂಧಿಸುವುದು ಸಾಧ್ಯವೇ ಇಲ್ಲವಲ್ಲ. ನೀನು ಹೇಳುವುದೇನು? ನಾವಿಬ್ಬರೂ ಸರಿ ಜೋಡಿ ಅಲ್ಲವೆಂದೇ?”
“ಅಯ್ಯೋ ನಾನೆಲ್ಲಿ ಹಾಗೆಂದೆ! ಪೊಸಿಟ್ ಪೋಲುಗಳೆ ಅಟ್ರ್ಯಾಕ್ಟ್ ಆಗುವುದಲ್ಲವೇ? ಅವುಗಳಿಗೆ ದೂರವೆಲ್ಲಿ? ಅಲ್ಲಿ ಫ್ಲಕ್ಸ ಇದ್ದೇ ಇರುತ್ತದಲ್ಲ.”
“ಹೌದು ನೀ ನನ್ನ ತುಂಬಾ ಪ್ರೀತಿಸ್ತೀಯ… ನಿನ್ನನ್ನ ಪಡೆಯೋಕೆ ಐ ಆಮ್ ವೇರಿ ಮಚ್ ಲಕ್ಕಿ.”
“ನಮ್ಮ ಪ್ರೀತಿ ಕಾಲದೇಶವನ್ನ ಮೀರಿದ್ದು ಅಲ್ಲವೇ?”
ಎಲ್ಲ ನವಿರಿನ ಸಂದರ್ಭಗಳು. ಪ್ರೀತಿಯಲ್ಲಿ ಕಳೆದುಹೋದ ನಾನು ಮತ್ತು ಆಕೆ. ಕನಸುಗಳನ್ನ ನನಸಾಗಿಸೋ ನಂಬಿಕೆಯಲ್ಲಿ ಇಬ್ಬರೂ ಕೈ ಹಿಡಿದುಕೊಂಡಿದ್ದು ಜೊತೆಯಾಗಿದ್ದು. ಹೌದು ಎಲ್ಲವೂ ನಿಜ. ಈ ಜೀವನ… ಕೋಳಿಯ ಅಂಕ…. ಕಾದಾಟ…. ಪ್ರೀತಿಯ ದ್ವಂದ್ವಗಳಲ್ಲಿ ನನ್ನ ಭಾವನೆ ಮತ್ತು ವಿಚಾರಗಳ ತಿಕ್ಕಾಟ. ನಾನೊಬ್ಬ ಎಕ್ಸಿಸ್ಟೆನ್ಷಿಯಲ್ ಥರ್ಡ ಪರ್ಸನ್. ಸಾಂಗತ್ಯವಾಗಿರುವುದನ್ನ ಎದುರಿಸಲಾಗದೇ ಸತ್ಯದಿಂದ ದೂರವಾಗುತ್ತಿರುವ ನಾನು. ನಾನು ಇಲ್ಲಿ ಅವಕಾಶವಾಗುವುದು, ಆಯ್ಕೆಯಾಗುವುದು ಸಾಧ್ಯವಿಲ್ಲ. ನಾನು ನಾನಾಗಿ ಇರಲೇಬೇಕು. ಇದನ್ನೆಲ್ಲ ಎದುರಿಸಲೇಬೇಕು.

ಆಕೆಯನ್ನ ಪೀಡಿಸಿ ಹಂಬಲಿಸಿ ಮದುವೆಯಾಗಿ ತನ್ನೊಡನೆ ಊರಿಗೆ ಕರೆದುಕೊಂಡು ಹೋಗುವಾಗ ಆಕೆ ಮುನಿಸಿನಲ್ಲೇ ನನ್ನೊಡನೆ ಹೆಜ್ಜೆಹಾಕಿದ್ದಳು. ಭಾವನಾ ಓ ನನ್ನ ಭಾವನಾ… ಪ್ರೀತಿಯ ಹಂದರದ ಕೆಳಗೆ ನಮ್ಮ ಬಾಳು. ಸಂಕಟ. ಯಾಕೆ ಪ್ರೀತಿಸಿದೆನೋ ಗೊತ್ತಿಲ್ಲ. ಯಾವುದೂ ಸರಿಯಲ್ಲ. ಕಾರಣವಿಲ್ಲದೇ ಬದುಕುವುದು ದುರಂತ. ನಾನು ಮತ್ತು ಆಕೆ, ಇಬ್ಬರೂ ಪ್ರೀತಿಯಲ್ಲಿ ಒಂದಾಗಿ ಗುದ್ದಾಡಿದ್ದ ಕ್ಷಣಗಳು. ಜೀವನವೆಷ್ಟು ಅಸಂಬದ್ಧ. ಈಕೆಯ ಸ್ವಾರ್ಥ. ನನ್ನ ಸ್ವಾರ್ಥ. ಮನುಷ್ಯ ಸ್ವಾರ್ಥದಲ್ಲಿಯೇ ಎಲ್ಲವನ್ನೂ ಕಟ್ಟಿಕೊಂಡಿದ್ದಲ್ಲವೇ? ಪ್ರೀತಿಯಲ್ಲಿ ಇದು ತ್ಯಾಗವಾಗಬೇಕೆ? ಆಕೆಯ ಸಂತೋಷಕ್ಕಾಗಿ ನಾನು ಬದುಕುವುದು? ಇಲ್ಲ ಸಾಧ್ಯವಿಲ್ಲ. ಭಾವನಾ ನಾನು ನಿನ್ನಲ್ಲಿ ಸತ್ಯವಾಗಿರಬೇಕೆಂಬ ಹಂಬಲದಲ್ಲಿ ಬದುಕುತ್ತಿದ್ದೇನೆ. ನೀನೇಕೆ ಹೀಗೆ ಪೀಡಿಸುತ್ತಿದ್ದೀ? ನಿನ್ನ ತಂದೆ ತಾಯಂದಿರನ್ನು ನೋಡಿಕೊಳ್ಳಲು ನಿನ್ನ ತಮ್ಮನಿದ್ದಾನೆ ನನಗೆ?! ನನ್ನ ಅಂತರ್‌ಪಿಶಾಚಿಯನ್ನಾಗಿ ಮಾಡಬೇಡ. ನಿನ್ನನ್ನ ತುಂಬ ಪ್ರೀತಿಸಿದ್ದೇನೆ. ಪಡೆಯಬಾರದ ನೋವುಗಳನ್ನು ಅನುಭವಿಸಿದ್ದೇನೆ. ವಿರಹದಲ್ಲಿ ಬಳಲಿಹೋಗಿದ್ದೇನೆ. ನಾನು ತಂದೆ-ತಾಯಿಯೊಂದಿಗಿರಲಾರದೇ ಇರಲು ಸಾಧ್ಯವಿಲ್ಲ. ನಿನ್ನನ್ನು ಬಿಟ್ಟಿರುವುದೂ ಕೂಡ ಅಷ್ಟೇ, ಸಾಧ್ಯವಿಲ್ಲ. ಎಂದಿಗೂ ನಿನ್ನಲ್ಲಿರುವುದನ್ನ ಕಳಚಿಟ್ಟು ನೀನು ಬೆತ್ತಲೆಯಾಗುವುದು ಸಾಧ್ಯವೇ ಇಲ್ಲ. ನಾನೆಂದರೆ ಹೀಗೇಕೆ ಮಾಡುತ್ತಿ, ನಿನ್ನಂತೆಯೇ ನಾನೂ ಅಲ್ಲವೇ? ಈ ಸುರೇಶನಿಗೆ ನಿನ್ನ ಬಿಟ್ಟಿರುವುದು ಸಾಧ್ಯವೇ ಇಲ್ಲ. ಇಷ್ಟು ಕಠೋರವಾಗಬೇಡ. ನೀನೇ ಅಂದಿದ್ದೆಯಲ್ಲವೇ ‘ಬದಲಾವಣೆಯೇ ಬದುಕು, ನಮ್ಮ ಜೀವನ ಸುಂದರವಾಗಿರುತ್ತದೆ’ ಅಂತ. ಯಾಕೆ? ನೀನು ಇಷ್ಟೊಂದು ಹಠಮಾರಿ. ನನ್ನೊಂದಿಗೆ ಮಲಗುವುದನ್ನೂ ಬಿಟ್ಟಿದ್ದೀಯಲ್ಲ. ಹತ್ತಿರ ಬಂದು ಕೂತರೆ ಎದ್ದು ಹೋಗುತ್ತಿ. ನನ್ನೊಂದಿಗೆ ಮಾತನಾಡುವುದನ್ನೂ ಕಡಿಮೆ ಮಾಡಿಬಿಟ್ಟಿದ್ದಿ. ನನ್ನೊಡನಿರುವುದು ನಿನಗಿಷ್ಟವಿಲ್ಲವೇ? ನನ್ನನ್ನು ನೀನು ಪ್ರೀತಿಸುವುದೇ ಇಲ್ಲವೇ?… ಯಾವುದೋ ಚಿಕ್ಕಪುಟ್ಟ ವಿಷಯಗಳಿಗೆ ಜಗಳವಾಡುತ್ತಿ ಕೂಗಾಡುತ್ತಿ ರಂಪಾಟ ಮಾಡುತ್ತಿ ಡೋಂಟ್ ಬಿ ಸೋ. ನಿನ್ನನ್ನ ತಬ್ಬಿಕೊಂಡು ತಲೆಸವರಿ ಪ್ರೀತಿಯ ಎರಡು ಮುತ್ತುಗಳನ್ನಿಟ್ಟು ಕೈ ಹಿಡಿದುಕೊಂಡು ಕೂರಬೇಕು. ನಾನು ಹೀಗೆಂದುಕೊಂಡು ನಿನ್ನ ಹತ್ತಿರ ಬಂದಾಗ ಎಲ್ಲವೂ ಬಾಲಿಶವೆನಿಸಿಬಿಡುತ್ತದೆ. ಅಪ್ಪ-ಅಮ್ಮನನ್ನು ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಲ್ಲವೇ? ನಿನಗೆ ನಿನ್ನ ತಂದೆ-ತಾಯಿಯನ್ನು ನೋಡಬೇಕಲ್ಲವೇ? ಬಾ ಇಲ್ಲಿ ಕೂರು, ಅವರನ್ನ ನಮ್ಮೊಡನೇ ಇದ್ದುಬಿಡಲು ಕರೆಸಿಕೊ. ನಾವೆಲ್ಲ ಕೂಡಿಯೇ ಬದುಕೋಣ, ಎಲ್ಲರೂ ಸಂತೋಷವಾಗಿರೋಣ- ಹೀಗೆ ಹೇಳಬೇಕೆಂದುಕೊಂಡು ಬಂದಾಗ ನೀನು ನಿರ್ಲಿಪ್ತವಾಗಿ ಸಿಡಿಮಿಡಿಗೊಳ್ಳುತ್ತ ಇದ್ದುಬಿಡುತ್ತಿ. ನನ್ನ ಮಾತುಗಳೆಲ್ಲ ಗಂಟಲಲ್ಲೇ ಉಳಿದುಬಿಡುತ್ತವೆ. ನೀನೇಕೆ ಕೇವಲ ನಿನ್ನದಷ್ಟನ್ನೇ ಯೋಚಿಸುತ್ತಿದ್ದಿ? ನಾನು?…
ಅವತ್ತು ರಾತ್ರಿ ಬೆಡ್‌ರೂಮಿಗೆ ಬಂದಾಗ ನೀನು ಅಳುತ್ತ ಕೂತಿದ್ದೆ. ನಾನು ಬಾಗಿಲ ಅಗುಳಿಯನ್ನ ಹಾಕಿ ತುಂಬ ಪ್ರೀತಿಯಲ್ಲಿ ಬಂದು ಏನಾಯಿತು ಭಾವನಾ ಎಂದು ಕೇಳಿದೆ. ಯಾವ ಉತ್ತರವನ್ನೂ ನೀಡದೇ ನನ್ನನ್ನ ನೀನು ತಬ್ಬಿದೆ. ನಾನು ನಿನ್ನ ಮುಖವನ್ನೆತ್ತಿ ಏನಾಯಿತು ಎಂದು ನಿನ್ನ ಕಂಗಳಿಗೆ ಮುತ್ತಿಟ್ಟು ಕೇಳಿದಾಗ ‘ಐ ಲವ್ ಯೂ’ ಎಂದೆ. ನಾನೂ ‘ಐ ಲವ್ ಯೂ ಟೂ’ ಎಂದೆ. ಹಾಗೆಯೇ ತಬ್ಬಿ ಮಲಗಿದೆ.
*****
“ನನಗಾಗಿ ನೀನು, ನಿನಗಾಗಿ ನಾನು. ವಿ ಶುಡ್ ರೆಸಲ್ಯೂಟ್ ಅವರಸೆಲ್ವ್ಸ್. ನಿನ್ನ ಹೆಜ್ಜೆಗಳಲ್ಲಿ ಹೆಜ್ಜೆಯಾಗಿ ನಲಿವಿನಲ್ಲಿ ನಲಿವಾಗಿ ದುಃಖದಲಿ ದುಃಖವಾಗಿ ಸರಸವಾಗಿ ವಿರಸವಾಗಿ ಇರುವುದು. ಏಕತಾನತೆಯಲ್ಲಿ ಮುಳುಗಿಬಿಡುವುದು. ನನಗೆ ನೀನು ಬೇಕು.”
“ನೀನು ಯಾಕೆ ಇಷ್ಟೊಂದು ಕಠಿಣವಾಗಿದ್ದೀಯಾ? ನಿನಗೆ ಸಂದರ್ಭಗಳನ್ನೆದುರಿಸುವುದು ಏಕೆ ಸಾಧ್ಯವಿಲ್ಲ? ವೈ ಯು ವಾಂಟ್ ಟು ಎಸ್ಕೇಪ್?”
“ನಾನು ಏನು ಹೇಳಿದರೂ ಎಸ್ಕೇಪಿಸಮ್ ಆಗಿಬಿಡುತ್ತದೆ. ನಾನೊಬ್ಬ ಫಿಕ್ಷನ್ ಆಗಿ ನಿನಗೆ ಕಾಣಿಸುತ್ತೇನೆ. ಇರಬಹುದು. ಅಂತರಾಳದಲ್ಲಿ ನಿನ್ನನ್ನ ಕಳೆದುಕೊಂಡುಬಿಡಬಹುದೆಂಬ ಭಯ. ನಾನೊಬ್ಬ ಎಡಬಿಡಂಗಿಯಾಗಿಬಿಡಬಹುದೆಂಬ ಅಳುಕು”.
ಕ್ಕೊಕ್ಕೊಕ್ಕೊ…. ನಾನೊಬ್ಬ ಎಸ್ಕೇಪಿಸ್ಟನೇ? ಎಕ್ಸಿಸ್ಟೆನ್ಷಿಯಲ್ ಥರ್ಡ ಪರ್ಸನನೇ? ನನ್ನದು ಸ್ಪ್ಲಿಟ್ ಪರ್ಸನಾಲಿಟಿಯೇ? ಅಂತರಂಗದಲ್ಲಿ ವಿಷಬೀಜವಿಟ್ಟುಕೊಂಡಿರುವ ರಾಕ್ಷಸನೇ? ಈಕೆಯೊಡನೆ ಮಾತನಾಡುವಾಗ ನನ್ನ ಅಸ್ತಿತ್ವವೇ ಇಲ್ಲವಾಗಿಬಿಡುತ್ತದೆ. ಅಂಕದ ಪರದೆಯ ಹುಂಜ.
ಮನೆಯ ಹಾಲಿನಲ್ಲಿ ಕುಳಿತು ಭಾವನಾ ಹೊರಗೆ ಹೋಗಿದ್ದಾಗ, ಅಮ್ಮನ ಮುಖದಲ್ಲಿ ಸಂತಸ. ಅಪ್ಪ ಸರಸವಾಗಿ ಕೂರುತ್ತಾರೆ. ಹೇಗೆ ಆಕೆ ಬೇರೆಯವಳಾಗಿಬಿಟ್ಟಿದ್ದಾಳೆ? ತರ್ಕಕ್ಕೆ ಸಿಗದ ಗೊಂದಲಗಳು- ಬದುಕು. ಅಮ್ಮನಿಗೆ ಭಾವನಾ ಇರದ ಸಮಯದಲ್ಲಿ ಲಚ್ಚಿ ನೆನಪಾಗುತ್ತಾಳೆ. ಅಪ್ಪನಿಗೂ ಕೂಡ. ನನಗೂ ಕೆಲವೊಂದು ಸಾರಿ ಆಕೆಯ ನೆನಪಾಗುವುದುಂಟು. ಯಾಕೆ ಇದು ಹೀಗೆ? ಲಚ್ಚಿ ನನ್ನ ಅತ್ತೆಯ ಮಗಳು. ನಾನೆಂದರೆ ನವಿಲಿನಂತೆ ಗರಿಗೆದರಿ ಕುಣಿಯುತ್ತಿದ್ದವಳು. ನಾನು ನನ್ನ ಪದವಿ ಮುಗಿಸಿ ಊರಿಗೆ ಬಂದಾಗ ಕಾತರದ ಪ್ರೀತಿಯಲ್ಲಿ ಎದುರುಗೊಂಡವಳು. ಅವಳ ಕಣ್ಣಿನಲ್ಲಿದ್ದ ಪ್ರೀತಿಯ ಅಪೇಕ್ಷೆಯ ನೋಟ, ಅವಳ ನಾಚಿಕೆ. ನನಗೆ ಮಧುರವೆನಿಸಲೆಂದು ನನ್ನಿಷ್ಟದ ಲಂಗ ದಾವಣಿ ತೊಟ್ಟು ಬಂದು ನನ್ನ ಮುಗುಳ್ನಗೆ ನೋಡಿ ಸಂಭ್ರಮಿಸಿದವಳು. ಎಲ್ಲವೂ ಕಣ್ಣಿಗೆ ಕಟ್ಟುವಂತೆ ನೆನಪಾಗುತ್ತದೆ. ಭಾವನಾಳ ಹಿಂದೆ ಓಡುವಾಗ ಲಚ್ಚಿಯ ತುಂಬು ಪ್ರೀತಿ ನನಗೆ ಕಾಣಿಸಲೇ ಇಲ್ಲ – ಇದೆಲ್ಲ ನನ್ನ ಭೂತ ದಿಗ್ಗನೆಂದು ಎದ್ದು ಕುಳಿತುಬಿಡುವ ಕ್ಷಣಗಳು. ಭಾವನಾಳೊಡನೆ ಈಗ ಮಾತಾಡುವಾಗ ಏಕೆ ಮದುವೆಯಾದೆನೋ ಎನ್ನಿಸುತ್ತದೆ. ಇವಳಿಗಾಗಿ ಹಾತೊರೆಯದ ಮನಸ್ಸು ಲಚ್ಚಿಗಾಗಿ ಹಪಹಪಿಸುತ್ತದೆ. ಬಂದಿರುವ ಕ್ಷಣಗಳನ್ನ ಎದುರಿಸಲಾಗದ ಹೇಡಿತನ. ಥೂ. ಬಿಡಬೇಕು ಹೀಗೆ ಯೋಚಿಸುವುದನ್ನ. ಇನ್ನೊಬ್ಬಳಿಗಾಗಿ ಕಾತರವಾಗಿರುವುದನ್ನ.
ಈ ಸುರೇಶ ದಿಗಿಲುಗೊಳ್ಳುತ್ತಾನೆ. ತನ್ನಲ್ಲಿಯೇ ಸಮಾಧಿಯಾಗಿರುವ ಕೆಲವಿಷಯಗಳನ್ನ ಹೆಕ್ಕಿ ತೆಗೆಯುತ್ತಾನೆ. ಲಚ್ಚಿಯ ನೆನಪಿನಲ್ಲಿ ಭಾವನಾಳನ್ನು ಮರೆತು ಮನಸ್ಸನ್ನ ಬೆಚ್ಚಗಾಗಿಸಿಕೊಳ್ಳುತ್ತಾನೆ. ತಾನು ಜೀವನವನ್ನ ಮರೆತು ಎಲ್ಲೋ ಕಳೆದುಬಿಡಬೇಕೆಂದುಕೊಳ್ಳುತ್ತಾ ಬೀರ್‌ಅನ್ನು ಕುಡಿಯುತ್ತಾನೆ – ಅಂಕದ ಪರದೆಯ ಹುಂಜ. ಕ್ಕೊಕ್ಕೊಕ್ಕೊ.
ಅಮ್ಮನ ದುಃಖದಲ್ಲಿ ತನ್ನೊಳಗಿನ ಈ ಹೊಯ್ದಾಟ ಏನೂ ಅಲ್ಲ. ಅಮ್ಮನಿಗೆ ನಾನು ತುಂಬ ನೋವಿನಲ್ಲಿ ಮಾತನಾಡಿದೆ.
“ಅಮ್ಮ ತಪ್ಪು ಮಾಡಿಬಿಟ್ಟೆ. ಮಾತಿರದ ಗಯ್ಯಾಳಿಯನ್ನ ಕಟ್ಟಿಕೊಂಡು ನಿನ್ನ ಮಾತಿಗೆ ಬೆಲೆಕೊಡದೆ ಸುಳ್ಳಾಗಿಹೋದೆ. ಯಾವುದೋ ರಣಹದ್ದಿಗೆ ನನ್ನನ್ನ ನಾನೇ ಬಲಿತೆಗೆದುಕೊಂಡೆ.”
“ಸುರೇಶ, ಅದೆಲ್ಲ ಮುಗಿದು ಹೋಗಿದ್ದು ಕಣೋ. ಇರುವುದೆಲ್ಲವನ್ನ ಬಿಟ್ಟು ನೀನು ಮತ್ತೆ ಹಿಂದಕ್ಕೆ ಚಲಿಸಲಾರೆ. ಭಾವನಾ ನೀನು ಪ್ರೀತಿಸಿದ ಹುಡುಗಿ. ನಿನ್ನ ಹಾಗೆಯೇ ತುಂಬ ಕಲಿತವಳು. ಇದನ್ನ ಹೇಗಾದರೂ ಸರಿ ಮಾಡಿಕೋಬೇಕಾದರೆ…..”
ಅಮ್ಮನ ಕಣ್ಣಿನಲ್ಲಿ ನೀರು. ಎಷ್ಟೊಂದು ಕ್ರೂರವಾಗಿದೆಯಲ್ಲ ನನ್ನ ಹಾಗೂ ಭಾವನಾಳ ಸಂಬಂಧ. ನನ್ನನ್ನ ಕುಕ್ಕಿ ತಿನ್ನುವ ನನ್ನ ಪ್ರೀತಿ.
…..ಬೇಕಾದರೆ ಮನೆಬಿಟ್ಟು ಹೋಗಿಬಿಡು”
ಅಯ್ಯೋ… ಇದು ಎಷ್ಟೊಂದು ಜಟಿಲ ಅಲ್ಲವೇ? ನನ್ನ ಕಣ್ಣಿನಲ್ಲೂ ನೀರು. ‘ಮನೆಗೆ ಬಾ ಮಗನೇ’ ಎಂದು ಕರೆಯುತ್ತಿದ್ದ ಅಮ್ಮ ‘ಮನೆಬಿಟ್ಟು ಹೋಗು’ ಎನ್ನುತ್ತಿದ್ದಾಳೆ. ಸಂದರ್ಭ ಹೇಗೆ ಅವಳನ್ನ ಕಠಿಣವಾಗಿಸಿದೆ.
ಇದೆಲ್ಲ ನಡೆದು ವರುಷಗಳೇ ಕಳೆದುಹೋಗಿವೆ. ತಂದೆ ತಾಯಿಯರನ್ನ ನೆನಪಿಸಿಕೊಳ್ಳುತ್ತಾ ಇರುವುದು. ಯಾವುದೇ ನೆನಪು ಉಳಿಸಿಕೊಳ್ಳಲಾಗದ ರೋಗಕ್ಕೆ ತುತ್ತಾದ ಭಾವನಾಳನ್ನ ಮಾತನಾಡಿಸುವುದು. ಆಕೆಗೆ ಇಷ್ಟವಾಗುವ ಬದಾಮಿ ಹಾಲನ್ನ ತರಿಸಿ ಕುಡಿಸುವುದು. ನನ್ನ ಅಭೀಪ್ಸೆಯೊಳಗೆ ಮತ್ತೆ ಒಂದಾದ ಪ್ರೀತಿಯ ಮೂಲ. ಯಾವುದು ಹೇಗೆ ಎಂದು ಯೋಚಿಸುವಾಗ ತಿಳಿಯಾಗುವ ವಿಚಾರಗಳು. ಸುಮಾರು ವರ್ಷಗಳ ಹಿಂದೆ ಸೌಖ್ಯಕ್ಕಾಗಿ ನಾನಿದೆಲ್ಲವನ್ನ ಮಾಡಿದ್ದು ಎಂದುಕೊಂಡರೂ ಅಪ್ಪನನ್ನ ತಿರಸ್ಕರಿಸುವ ಯೋಚನೆಯಲ್ಲಿ ಎಂಬುದೂ ಸತ್ಯವೇ.
ಅಪ್ಪ ಸತ್ತಾಗ ಈ ವೃದ್ಧಾಶ್ರಮದ ಮುಂದೆ ಹೆಣದ ಸುತ್ತಲೂ ಅರವತ್ತು ಮಂದಿ ವೃದ್ಧ – ವೃದ್ಧೆಯರು ಕೃತಜ್ಞತೆಯ ಕಣ್ಣೀರಿನಲ್ಲಿ, ಮಳೆಯನ್ನೂ ಲೆಕ್ಕಿಸದೇ ನಿಂತಿದ್ದರು. ಅಪ್ಪನ ಹೆಣ, ಮಳೆ. ಮನೆಯ ಮುಂದೆ ಹಚ್ಚಿಟ್ಟಿದ್ದ ಬೆಂಕಿ. ನಾನು ಅಪ್ಪನ ಚಿತೆಗೆ ಬೆಂಕಿ ಹಚ್ಚುವಾಗಲೂ ಅಳಲಿಲ್ಲ. ಆಮೇಲೆ ಚಿತಾಭಸ್ಮಕ್ಕಾಗಿ ಬಂದು ಅದನ್ನು ಕಾವೇರಿಯಲ್ಲಿ ವಿಸರ್ಜಿಸಿ ನನ್ನ ಭೂತದಿಂದ ನಾನು ಬಿಡಿಸಿಕೊಳ್ಳಲೆತ್ನಿಸಿದೆ. ಹೀಗಾದರೂ ನನ್ನ ಅಹಂಕಾರದಲ್ಲಿ ನಿರ್ಭಿಡೆಯ ಒಂದು ಹೊರೆ ಕಳಚಿತಲ್ಲ ಎಂದುಕೊಂಡೆ. ಹೇಗೆ ಅಪ್ಪ ಹೊರೆಯೆನಿಸಿದ್ದು? ನನ್ನನ್ನ ನಾನು ಹೇಗೆ ಜವಾಬ್ದಾರಿಯಿಂದ ಹೊರಗೆಳೆದುಕೊಂಡಿದ್ದು? ಭಾವನಾಳ ಸಂಜ್ಞೆಯಲ್ಲಿ ಆಕೆಯ ತಿರಸ್ಕಾರದಲ್ಲಿ ನಾನೂ ಗೊಂಬೆಯಾದದ್ದು? ಅಮ್ಮನನ್ನ ಭಾವನಾ ಅವತ್ತು ಸಂತೈಸಲೂ ಇಲ್ಲ ಎಷ್ಟು ಹೃದಯಹೀನವಾಗಿಬಿಟ್ಟಳು? ಆದರೆ ಲಚ್ಚಿ? ಒಂದು ವಾರ ಮುಂಚಿನಿಂದ ಅಲ್ಲೇ ಇದ್ದಳಂತೆ. ಅಪ್ಪಹೋದ ಮೇಲೂ ಅಮ್ಮನನ್ನ ಸಂತೈಸುತ್ತ ಮತ್ತೊಂದು ವಾರ ಇದ್ದು ಹೋದಳಂತೆ. ಅಪ್ಪನ ಚಿತೆಗೆ ಬೆಂಕಿ ಇಟ್ಟಾಗಲೂ ಅಳದ ನಾನು ಅಮ್ಮನ ಮುಖ ನೋಡಿದ ತಕ್ಷಣ ಗೋಳಾಡಿಬಿಟ್ಟೆ. ನನ್ನ ಅಂತರಂಗದಲ್ಲಿದ್ದ ದುಃಖದ ಕಟ್ಟೆ ಒಡೆದುಹೋಯಿತು. ‘ಬನ್ನಿ ಹೋಗೋಣ’ ಎಂದು ಅವಸರಿಸುತ್ತಿದ್ದ ಭಾವನಾಳ ಕನ್ನೆಗೆರೆಡು ಬಿಟ್ಟೆ. ಭಾವನಾ ಬುಸುಗುಡುತ್ತಾ ಸಿಟ್ಟಿನಲ್ಲಿ ಹೊರಟೇಹೋದಳು. ಆಮೇಲೆ ಒಂದೆರಡು ದಿನ ನಾನು ಅಮ್ಮನ ಜೊತೆಯಲ್ಲೇ ಇದ್ದೆ. ನಾನಿದ್ದ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಲು ಭಾವನಾಳೂ ಇರಲಿಲ್ಲ, ಇತ್ತ ಅಮ್ಮನನ್ನ ಸಮಾಧಾನಿಸಲು ಲಚ್ಚಿಯೊಬ್ಬಳು ಮಾತ್ರ ಇದ್ದಳು. ಲಚ್ಚಿಗೆ ನಾವು ಯಾವ ರೀತಿಯಲ್ಲಿ ಹತ್ತಿರ? ಮತ್ತೆ ಭಾವನಾ?
ವೃದ್ಧಾಶ್ರಮದ ಅಂಗಳ ತಮ್ಮ ಮನೆ. ಆವತ್ತು ಭಾವನಾಳೊಡನೆ ಮನೆ ಬಿಟ್ಟು ಹೋಗುವಾಗ ಅಪ್ಪ ಆರಾಮ ಕುರ್ಚಿಯ ಮೇಲೆ ನಿರ್ಲಿಪ್ತವಾಗಿ ಕೂತಿದ್ದರು. ಅಮ್ಮ ಕಣ್ಣಿನಲ್ಲಿ ನೀರು ತುಂಬಿಕೊಂಡು ನೋಡುತ್ತ ನಿಂತಿದ್ದರು. ಹದಿಮೂರು ಜನ ವೃದ್ಧ-ವೃದ್ಧೆಯರೂ ನಮ್ಮನ್ನೆ ನೋಡುತ್ತ ನಿಂತಿದ್ದರು. ಏಕೋ ನನ್ನಲ್ಲಿ ಅಳುಕು. ಭಾವನಾ ಸರಸರನೇ ಹೆಜ್ಜೆ ಹಾಕಿ ಕಾರಿನಲ್ಲಿ ಕುಳಿತುಬಿಟ್ಟಿದ್ದಳು. ಲಚ್ಚಿ ಆಗ ಗರ್ಭಿಣಿ. ನನ್ನೆಡೆಗೆ ದುರದುರನೆ ದಿಟ್ಟಿಸುತ್ತಿದ್ದಳು. ಕಾರು ಹೊರಡುತ್ತಲೇ ಕುಸಿದು ಕೂತಳು. ಭಾವನಾಳ ಹಠಕ್ಕಾಗಿ ನಾನು ತಂದುಕೊಂಡ ದುರಂತ. ನಾನು ನಿಜವಾಗಿಯೂ ಬಿಟ್ಟು ಹೋಗಬೇಕೆಂದುಕೊಂಡೆನೇ ಅಥವಾ ಭಾವನಾಳನ್ನ ಕಾರಣವಾಗಿಸಿದೆನೇ? ಗೊತ್ತಿಲ್ಲ. ನಾನಿದ್ದ ಮೌನದ ಅರ್ಥವೇನು? ನಾನು ಸತ್ಯವಾಗಿ ಜೀವನವನ್ನ ಎದುರಿಸಿದೆನೆ?
*****
ನಾನು ಮನೆಬಿಟ್ಟು ಹೋಗುವ ಎರಡು ವರ್ಷಗಳ ಹಿಂದಿನ ಮಾತು ಭಾವನಾಳನ್ನ ಮದುವೆಯಾಗಿ ಆಗ ತಾನೆ ಮನೆಗೆ ಬಂದಿದ್ದೆ ಭಾವನಾಳಿಗೆ ಅತ್ತೆ ಮಾವ ಎಂದರೆ ತಾತ್ಸಾರ. ಆಕೆ ಅದನ್ನ ನನ್ನ ಮೇಲಿನ ಪ್ರೀತಿ ಎಂದು ನಂಬಿಸಿ… ಆಗಿದ್ದೆಲ್ಲವನ್ನ ನಾನು ನೆನೆಸಿಕೊಳ್ಳಲು ಸಿದ್ಧನಿಲ್ಲ. ನನ್ನ ಅಸ್ತಿತ್ವವನ್ನೇ ತಾತ್ಸಾರದ ಪ್ರೀತಿಯಲ್ಲಿ ಆಕೆ ಪ್ರಶ್ನಿಸಿದಾಗ ನಾನು ಗೊಂದಲಕ್ಕೊಳಗಾಗಿದ್ದೆ. ಆಮೇಲೆ ಭಾವನಾ ಅರ್ಥವಾಗತೊಡಗಿದಳು. ಆಸ್ತಿಯ ಮೇಲಿದ್ದ ಆಕೆಯ ಕಣ್ಣು, ನನ್ನ ಮೇಲಿದ್ದ ಆಕೆಯ ಪ್ರೀತಿ, ಅಪ್ಪ ಅಮ್ಮನ ಬಗೆಗಿನ ತಾತ್ಸಾರ ಎಲ್ಲವೂ ನಿಜ. ಆಕೆ ಆಸೆಯ ಒತ್ತಡಗಳಲ್ಲಿ ನನ್ನಿಂದ ದೂರವಾಗುತ್ತ ಹೋದಳು. ಲಚ್ಚಿ ಅಷ್ಟೆ ಹತ್ತಿರವಾಗುತ್ತ ಬಂದಳು. ಲಚ್ಚಿಯ ಗಂಡ ಮಹಾದೇವ ನನ್ನ ಬಾಲ್ಯದ ಸ್ನೇಹಿತ. ಆತನಿಗೆಲ್ಲವೂ ಗೊತ್ತಿತ್ತು. ನನಗಾಗಿ ಲಚ್ಚಿಯಲ್ಲಿರುವ ಪ್ರೀತಿಯೂ ಕೂಡ. ಲಚ್ಚಿಯ ಸಾಂತ್ವನದ ಮಾತುಗಳು- ಲಚ್ಚಿ ನನ್ನನ್ನ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವತ್ತು ಪ್ರೀತಿಯಲ್ಲಿ ಹೇಳಿದ್ದಳು,
“ಮಾವ ನೀನೆಷ್ಟೇ ಕ್ರೂರ ಎನ್ನಿಸಿದರೂ ಒಳಗಡೆ ತುಂಬ ಮೃದು. ಭಾವನಾ ಎಷ್ಟೇ ಮೃದುವಾಗಿದ್ದರೂ ತನ್ನ ಆಸೆಯ ಕೂಪದಲ್ಲಿ ಕ್ರೂರಿಯಾಗಿ ಕಾಣುತ್ತಾಳೆ. ನೀನು ಅಂದ್ರೆ ನಂಗೆ ತುಂಬಾ ಇಷ್ಟ. ನೀನೇನೂ ಚಿಂತಿಸಬೇಡ. ಭಾವನಾಳನ್ನ ತಿರಸ್ಕರಿಸು ಅಪ್ಪ ಅಮ್ಮರೊಡನೆ ಇದ್ದು ಬಿಡು.”
ನಾನೇನನ್ನು ಮಾತನಾಡದೇ ಅವಳನ್ನ ತಬ್ಬಿದೆ. ಇದೆಲ್ಲ ನಡೆದು ತಿಂಗಳಾಗಿರಬಹುದು. ನಾನು ಆಫೀಸಿಗೆ ಹೋಗಲು ಸಿದ್ಧನಾಗುತ್ತಿದ್ದೆ. ಅಪ್ಪ ಕರೆದರು.
“ಮಗನೇ, ನಾಳೆ ವೃದ್ಧಾಶ್ರಮದ ಲೋಕಾರ್ಪಣೆ ಇದೆ. ನೀನು ಅದರ ಅಧ್ಯಕ್ಷ. ಇವತ್ತೇ ಹೋಗಿ ನಿನ್ನ ಕೆಲಸಕ್ಕೆ ರಾಜಿನಾಮೆಯನ್ನ ಕೊಟ್ಟು ಬಾ. ಇನ್ನೂ ಕೆಲಸಗಳಿವೆ ಬೇಗ ಬಂದುಬಿಡು.”
“ಏನು?!”
“ಹೌದು ಸುರೇಶ..”
ಹೀಗೆ ಹೇಳಿ ಕೆಲ ಕಡತಗಳಿಗೆ ಸಹಿ ಮಾಡಿಸಿಕೊಂಡರು. ನಾನು ಏನೂ ಮಾತನಾಡಲಿಲ್ಲ. ನನಗೆಲ್ಲವೂ ಒಂದು ಚಿತ್ರ ಪಟದಂತೆ ತೋರುತ್ತಿತ್ತು. ಯಾರು ಏನು ಮಾಡುತ್ತಿದ್ದಾರೋ ಯಾವುದೂ ತಿಳಿಯದಾಗಿತ್ತು. ಎಲ್ಲವೂ ತನ್ನಷ್ಟಕ್ಕೆ ತಾನೇ ನಡೆದುಹೋಗುತ್ತಿದ್ದವು. ನಾನು ನನ್ನ ಕೆಲಸಕ್ಕೆ ರಾಜಿನಾಮೆಯನ್ನ ಕೊಟ್ಟು ಬಂದೆ. ಅಪ್ಪ-ಅಮ್ಮನ ಜೊತೆ ಈ ಸಮಾಜವಾದಿ ಕೆಲಸದಲ್ಲಿ ಮಗ್ನನಾದೆ. ಎಲ್ಲ ವೃದ್ಧರ ಪ್ರೀತಿಯ ಮಗನಾಗಿ ಬೆಳೆದೆ. ಆಮೇಲೆಯೇ ಭಾವನಾಳಲ್ಲಿ ಕಿಚ್ಚು ಶುರುವಾಗಿದ್ದು. ಪ್ರತಿಯೊಂದಕ್ಕೂ ಸಿಡಿಮಿಡಿಗೊಳ್ಳತೊಡಗಿದಳು. ನನಗೆ ನನ್ನನ್ನ ಬೇರೆಯಾಗಿ ನೋಡುವ ಸಂಧಿಗ್ಧತೆಯನ್ನ ತಂದಿಟ್ಟಳು. ತನ್ನ ಕೌರ್ಯದ ಕೆನ್ನಾಲಿಗೆಗೆ ನನ್ನ ಬಲಿಪಶುವನ್ನಾಗಿ ಮಾಡಿದಳು. ನಿತ್ಯವೂ ನನ್ನಲ್ಲಿ ವಿಷಬೀಜ ಬಿತ್ತಿದಳು. ನನ್ನನ್ನ ಇನ್ನೊಬ್ಬನನ್ನಾಗಿ ಮಾಡಿದಳು. ನಾನು ಅವಳನ್ನ ನಿಜವಾಗಿ ಪ್ರೀತಿಸುತ್ತೇನೆಯೇ? ಎಂಬ ಪ್ರಶ್ನೆಯಲ್ಲಿ ಕುಕ್ಕಿದಳು ತಾನು ಎಲ್ಲವನ್ನು ಎದುರಿಸುತ್ತ ನಿಜವಾಗುತ್ತ ಹೋದಳು. ನನ್ನನ್ನ ಥರ್ಡ್ ಪರ್ಸನನ್ನಾಗಿಸಿ ಗೋಳು ಹೊಯ್ದುಕೊಂಡು. ನನ್ನನ್ನೊಬ್ಬ ಅಂಕದ ಹುಂಜವನ್ನಾಗಿಸಿದಳು. ನನ್ನ ಆಂತರ್ಯದೊಳಗೆ ನಾನೊಬ್ಬ ಹೇಡಿ ಎಂದುಕೊಳ್ಳುವಂತೆ ಮಾಡಿದಳು. ನನ್ನನ್ನ ಸಂಕೀರ್ಣವಾಗಿಸಿದಳು. ನನ್ನ ಪ್ರೀತಿಯನ್ನ ಆಕೆಯ ತಿಳಿವುಗಳಲ್ಲಿ ತಿರುವಿ ಹಾಕಿದಳು. ಆಕೆಯಿಂದ ನನ್ನನ್ನ ಕಿತ್ತುಕೊಳ್ಳುತ್ತಿರುವ ಭಾವನೆಗಳನ್ನ ಬಿತ್ತಿದಳು. ನನಗೇನೆ ತಿಳಿಯದಂತೆ ನಾನು ತಂದೆ-ತಾಯಿಯರನ್ನ ತೊರೆಯುವ ನಿರ್ಧಾರಕ್ಕೆ ಬಂದುಬಿಟ್ಟಾಗ ಭಾವನಾ ಅರಳುತ್ತ ಹೊರಟಳು. ನನಗೆ ತುಂಬ ಹತ್ತಿರವಾಗಹತ್ತಿದ್ದಳು.
ಸುರೇಶ ಆಗ ಅಸ್ತಿತ್ವದಲ್ಲಿ ಇದ್ದನೆ? ಆತನ ಪ್ರೀತಿ ಹಾಗಿತ್ತೆ? ಗೊಂದಲಗಳಲ್ಲಿ ಆತ ಏನು ಮಾಡಬೇಕು ಎಂದು ತಿಳಿಯದೆ ಹೋದನೇ? ಗೊತ್ತಿಲ್ಲ. ಎಕ್ಸಿಸ್ಟೆನ್ಷಿಯಲ್ ಥರ್ಡ ಪರ್ಸನ್.
ನಂತರದ ದಿನಗಳಲ್ಲಿ ಅಪ್ಪ-ಅಮ್ಮನಿಗಾಗಿ ಹಪಹಪಿಸಿದ್ದು ಈಗ ಸುಳ್ಳು. ಪ್ರೀತಿಯ ಗೊಂದಲದಲ್ಲಿ ನಾನು ಸುಳ್ಳಾಗಿ ಹೋದೆ. ಪೈಥಾಗೋರಸ್‌ನ ಪ್ರಮೇಯ ನನ್ನ ಜೀವನದಲ್ಲಿ ಸುಳ್ಳು. ಜೀವನದ ಸಂಕೀರ್ಣತೆಯಲ್ಲಿ ಎಲ್ಲವೂ ಅನಿವಾರ್ಯವಾಗುತ್ತದೆ. ಕಾಲದೇಶವನ್ನು ಮೀರುವುದು ಎಂದಿಗೂ ಸಾಧ್ಯವಿಲ್ಲ. ಹಾಗಾದರೆ ನಾನೇ ಅಪ್ಪ-ಅಮ್ಮಂದಿರನ್ನ ತೊರೆಯಬಯಸಿದ್ದೆನೆ? ಯಾವುದಕ್ಕೂ ಉತ್ತರವಿಲ್ಲ. ಇಲ್ಲಿ ಏಕತಾನತೆಯಲ್ಲಿ ಬದುಕುವುದು ಸಾಧ್ಯವಿಲ್ಲ. ಸ್ವಾರ್ಥಿಯಾಗದೇ ಸಾಂಗತ್ಯವಾಗುವುದು, ಬದುಕಿನಲ್ಲಿ ಪರಿಪೂರ್ಣವಾಗುವುದು ಸಾಧ್ಯವಿಲ್ಲ. ಇದೆಲ್ಲ ಭಾವನಾಳ ಕಾನ್ಸ್ಪಿರಸಿ. ಬದುಕನ್ನ ಎದುರಿಸುವುದು ಹೇಗೆ? ನಾನು ನನ್ನ ಅಸ್ತಿತ್ವವನ್ನುಳಿಸಿಕೊಳ್ಳುವುದು ಹೇಗೆ? ಹಾಗಾದರೆ ನಾನು ವೃದ್ಧಾಶ್ರಮದ ಅಧ್ಯಕ್ಷನಾಗಿದ್ದು? ಲಚ್ಚಿಯನ್ನ ನೆನೆಸಿಕೊಂಡಿದ್ದು? ಭಾವನಾಳನ್ನ ಪ್ರೀತಿಸಿದ್ದು? ಬದುಕನ್ನು ಹೇಗೆ ಎದುರಿಸುವುದು?…
*****
ಅಂತೂ ಮನೆ ಬಿಟ್ಟು ಹೊರಟು ಬಂದೆ. ಭಾವನಾಳ ಪ್ರೀತಿಯೊಳಗೆ ಮುಳುಗಿದೆ. ನಮ್ಮಿಬ್ಬರ ಪ್ರೀತಿಯಲ್ಲಿ ಶ್ರೀಕಾಂತ ಅಂಕುರಿಸಿದ. ಶ್ರೀಕಾಂತನನ್ನ ನಾವಿಬ್ಬರೂ ತುಂಬ ಪ್ರೀತಿಯಲ್ಲಿ ಬೆಳೆಸಿದೆವು. ಶ್ರೀಕಾಂತನಿಗೆ ಏಳು ವರ್ಷವಾದಾಗ ಅಪ್ಪ ತೀರಿಕೊಂಡರು. ಅದಾದ ವರ್ಷದ ಕೊನೆಯಲ್ಲೇ ಅಮ್ಮನೂ ಲೀನವಾದಳು. ಸಂದರ್ಭದ ಒತ್ತಡಗಳಲ್ಲಿ ನಾನು ಮುರುಟಿಹೋದೆ. ಇದೆಲ್ಲ ನಡೆದಾದ ಮೇಲೆ ವರುಷಗಳು ಸಂದವು. ಶ್ರೀಕಾಂತ ದೊಡ್ಡವನಾದ. ಕಾಲೇಜಿನಲ್ಲಿ ಅಶ್ವಿತಾ ಅನ್ನೋ ಹುಡುಗಿಯನ್ನ ಪ್ರೀತಿಸಿದ. ಕೆಲಸ ಹಿಡಿದ. ಮದುವೆಯಾದ. ತುಂಬ ಪ್ರೀತಿಯಲ್ಲಿಯೇ ನಮ್ಮಿಬ್ಬರನ್ನು ನೋಡಿಕೊಂಡ. ದಿನಗಳುರುಳಿದಂತೆ ನಾನು ಭಾವನಾ ಅಜ್ಜ-ಅಜ್ಜಿಯರಾದೆವು. ಮೊಮ್ಮಕ್ಕಳನ್ನ ಪಡೆದೆವು. ಅವರೊಡನೆ ಆಟವಾಡುತ್ತಾ, ಅರಳುತ್ತಾ ನಲಿವಾದೆವು. ಅಶ್ವಿತಾ ಕೂಡ ತುಂಬ ಸರಸವಾಗಿದ್ದಳು.
ಒಂದು ದಿನ ಭಾವನಾ ಕಲ್ಲೊಂದನ್ನ ಎಡವಿ ಬಿದ್ದಳು. ಅವಳ ತಲೆಗೆ ಬಲವಾದ ಪೆಟ್ಟು ಬಿದ್ದು ಹಳೆಯದನ್ನೆಲ್ಲ ನೆನಪುಹಾರಿದಳು. ಅಶ್ವಿತಾಳಿಗೆ ಭಾವನಾಳನ್ನ ಸಹಿಸುವುದು ಸಂಭಾಳಿಸಿಕೊಂಡು ಹೋಗುವುದು ಅಸಾಧ್ಯವಾಯಿತು. ಶ್ರೀಕಾಂತ ಭಾವನಾಳನ್ನ ವೃದ್ಧಾಶ್ರಮಕ್ಕೆ ಸೇರಿಸುವುದೆಂದು ನಿರ್ಧರಿಸಿದ. ನಾನು ಇದನ್ನೆಲ್ಲ ತುಂಬ ವಿರೋಧಿಸಿದೆ. ಶ್ರೀಕಾಂತ ಹಾಗೂ ನನ್ನ ನಡುವಿನ ಪ್ರೀತಿ, ಸಲುಗೆ ಎಲ್ಲವೂ ವಿರಸದಲ್ಲಿ ಅಳಿಸಿಹೋಯಿತು. ಜಗಳವಾಡಿದ. ‘ಭಾವನಾಳನ್ನ ವೃದ್ಧಾಶ್ರಮಕ್ಕೆ ಸೇರಿಸುವುದಾದರೆ ನನ್ನನ್ನೂ ಸೇರಿಸಿಬಿಡು’ ಎಂದೆ. ಅವನು ಕಣ್ಣಿನಲ್ಲಿ ನೀರು ತುಂಬಿಕೊಂಡು ಸುಮ್ಮನಾದ.
ಹೇಗೆ ಶ್ರೀಕಾಂತನೂ ಈ ಸುರೇಶನಂತೆ ಅನಿವಾರ್ಯತೆಯ ಹಂಗಿಗೆ ಬಿದ್ದ? ಕಾಲದೇಶ, ಹೌದು, ಮೀರುವುದು; ಯಾರೂ ಪರಿಪೂರ್ಣವಾಗುವುದು ಸಾಧ್ಯವೇ ಇಲ್ಲ. ಪ್ರೀತಿಯ ಮೂಲವನ್ನ ಒಡೆಯುವುದು, ಆಯ್ಕೆಗಳನ್ನಾಗಿಸುವುದು ಸಾಧ್ಯವೇ ಇಲ್ಲ. ನಾನು ಅನುಭವಿಸಿದ ಸಂದಿಗ್ಧತೆ. ಈತನೂ ಅಂಕದ ಪರದೆಯ ಹುಂಜ. ಕಾಲದ ಚಕ್ರ ತಿರುಗಲೇಬೇಕು. ಸಂದರ್ಭಗಳನ್ನ ನಾವೆಲ್ಲ ಎದುರಿಸಲೇಬೇಕು. ಎಲ್ಲರೂ ಕೊನೆಗೊಂದು ಸಾರಿ ಸತ್ಯವಾಗಲೇಬೇಕು. ಪ್ರೀತಿ ಸತ್ಯವಾಗಬೇಕಾದಾಗ ಸ್ವಾರ್ಥಿಯಾಗಲೇಬೇಕು. ಯಾವಾಗ ಏನೆನ್ನಿಸುತ್ತದೆಯೋ ಅದನ್ನ ಮಾಡಲೇಬೇಕು. ಆದರೆ ಆಸೆಯ ಕೂಪದಲ್ಲಿ ಬೀಳುವುದು ಬಲಿಯಾಗುವುದು ಯಾವುದೂ ಮಾನವತೆಯನ್ನ ಮೀರಬಾರದು. ಆದರೆ ಸಾಧ್ಯವೇ? ಉತ್ತರವಿಲ್ಲ. ಉತ್ತರವನ್ನ ಹುಡುಕಬೇಕೇ? ಗೊತ್ತಿಲ್ಲ.
*****
ಆವತ್ತು ವೃದ್ಧಾಶ್ರಮದ ಗೇಟಿನೆದುರುಗಡೆ ನಿಂತಾಗ ಅಪ್ಪ-ಅಮ್ಮನ ನೆನಪು. ಕಣ್ಣಿನಲ್ಲಿ ನೀರು. ಭಾವನಾ ಇಷ್ಟೊಂದು ವಯಸ್ಸಾದರೂ ಚಿಕ್ಕ ಮಗುವಿನಂತೆ. ಅವಳ ಕೈಹಿಡಿದುಕೊಂಡು ನಿಂತೇ ಇದ್ದೆ. ಯಾವ ವೃದ್ಧಾಶ್ರಮದ ಅಧ್ಯಕ್ಷನಾಗಿದ್ದೆನೋ ಅದರ ಮುಂದೆಯೇ ನಿರ್ಲಿಪ್ತವಾಗಿ ನಿಂತಿದ್ದೆ. ಅಪ್ಪ-ಅಮ್ಮನಿಗಾಗಿ ನಿಲ್ಲದ ನಾನು ಮಗನ ಕಾರಣದಿಂದ ಮರಳಬೇಕಾಯಿತು. ಭಾವನಾ ಯಾವುದೇ ನೆನಪನ್ನ ಉಳಿಸಿಕೊಳ್ಳಲಾಗದೇ ಸುಳ್ಳಾಗಬೇಕಾಯಿತು. ಕಾಲ ಹೇಗೆ ಬದುಕನ್ನ ಒಳಸೆಳೆದುಕೊಳ್ಳುತ್ತಾ ಹೋಗುತ್ತದೆ?
ಒಬ್ಬ ನನ್ನ ಮಗನ ವಯಸ್ಸಿನ ಹುಡುಗ ಬಂದು ಸಾಮಾನುಗಳನ್ನೆತ್ತಿಕೊಂಡು ಒಳ ಕರೆದುಕೊಂಡು ಹೋದ. ಆ ಹುಡುಗನನ್ನ ನಾನು ಮಾತನಾಡಿಸಿದೆ.
“ಏನು ಮಗು ನಿನ್ನ ಹೆಸರು?”
“ಸುರೇಶ ಅಂತಾ ಸರ್. ಬನ್ನಿ ಸಾರ್ ಊಟ ಮಾಡಿದ ನಂತರ ಮಾತನಾಡುವಿರಂತೆ”
ನಾನು ಕೃತಜ್ಞತೆಯಲ್ಲಿ ಅವನ ತಲೆ ಸವರಿದೆ.
“ಸುರೇಶ, ಯಾರು ಇಲ್ಲಿ ನಿರ್ದೇಶಕರು ಹಾಗೂ ಸಂಚಾಲಕರು?”
“ಇಲ್ಲಿಯ ನಿರ್ದೇಶಕಿ ಲಕ್ಷ್ಮಿಭಾಯಿಯವರು, ಮತ್ತೆ ಸಂಚಾಲಕರು ಮಹಾದೇವ ಅವರು, ಸಾರ್.”
ನಾನು ತುಂಬ ಪ್ರೀತಿಯಲ್ಲಿ ಹಾಗೂ ಉತ್ಸುಕತೆಯ ದನಿಯಲ್ಲಿ…
“ನಾನು ನಿರ್ದೇಶಕಿಯನ್ನ ನೋಡಬೇಕಲ್ಲ.”
“ಅವರು ಯಾವುದೋ ಕಾರ್ಯಕ್ರಮದ ಮೇಲೆ ಹೊರಹೋಗಿದ್ದಾರೆ ಸಾರ್. ಸಂಜೆಯಾಗುತ್ತದಂತೆ. ನೀವು ಗೆಸ್ಟ್ ಹೌಸಿನಲ್ಲಿ ವಿಶ್ರಮಿಸಿ. ನಾನಿನ್ನು ಬರುತ್ತೇನೆ.”
“ಸುರೇಶ ನಿನ್ನ ಹುದ್ದೆ ಏನಪ್ಪಾ ಇಲ್ಲಿ?”
“ನಾನು ಸಹಸಂಚಾಲಕ ಸಾರ್.”
ಎಂದು ಕೈಮುಗಿದು ಹೋರಟುಹೋದ.
ಸಂಜೆಯ ಹೊತ್ತಿನಲ್ಲಿ ನಾನು, ಅಮ್ಮ ಕೂರುತ್ತಿದ್ದ ಮೆಟ್ಟಿಲುಗಳ ಮೇಲೆ ಕೂತು ಭಾವನಾಳಿಗೆ ಚಹಾ ಬಿಸ್ಕತ್‌ನ್ನ ತಿನ್ನಿಸುತ್ತಿದ್ದೆ. ಸುರೇಶ ಬಂದು- ‘ಸಾರ್ ನಿಮ್ಮನ್ನ ನಿರ್ದೇಶಕಿ ಕರೆದುಕೊಂಡು ಬಾ ಎಂದರು’-ಎಂದು ತಿಳಿಸಿದ. ಭಾವನಾಳನ್ನ ಕರೆದುಕೊಂಡು ಲಕ್ಷ್ಮೀಭಾಯಿಯನ್ನು ನೋಡಹೋಗುವಾಗ ಭಾವನಾ ಮತ್ತೆ ಬಿಸ್ಕತ್ ಬೇಕೆಂದು ಹಠಮಾಡತೊಡಗಿದಳು. ನಾನು ಬಿಸ್ಕತ್‌ಗಳನ್ನ ತಿನ್ನಿಸುತ್ತ ನಿಂತೆ. ಯಾವಾಗ ಲಚ್ಚಿ ಬಂದಳೋ ಗೊತ್ತೇ ಆಗಲಿಲ್ಲ. ನಾನು ಭಾವನಾಳಿಗೆ ತಿನ್ನಿಸುತ್ತಿರುವುದನ್ನು ನೋಡಿ ಜೋರಾಗಿಯೇ ‘ಮಾವ’ ಎಂದು ಕರೆದಳು. ನಾನೂ ಲಚ್ಚಿಯೆಡೆಗೆ ತಿರುಗಿದೆ. ದುಃಖ ಉಮ್ಮಳಿಸಿ ಬಂತು. ಕಂಗಳಲ್ಲಿ ನೀರು ತುಂಬಿಕೊಂಡು ನಿಂತೆ. ಲಚ್ಚಿ ನನ್ನನ್ನ ಗಟ್ಟಿಯಾಗಿ ತಬ್ಬಿದಳು. ನಂತರ ಸುರೇಶನಿಗೆ ರಾತ್ರಿ ಊಟಕ್ಕೆ ಸಿಹಿಯನ್ನ ತರಿಸಲು ಹೇಳಿದಳು. ನನ್ನನ್ನ ಭಾವನಾಳನ್ನ ಮನೆ ಒಳಗೆ ಕರೆದೊಯ್ದಳು. ಏನಾಯಿತು ಎಂದು ಕೇಳಿದಳು. ದುಃಖ ಉಮ್ಮಳಿಸಿತು. ಆಕೆಯನ್ನ ತಬ್ಬಿ ಮಗುವಿನಂತೆ ಅಳಲು ಶುರುವಿಟ್ಟುಕೊಂಡೆ. ಲಚ್ಚಿ ನನ್ನ ಸಮಾಧಾನಿಸ ಪ್ರಯತ್ನಿಸಿದಳು. ಭಾವನ-‘ಏಯ್ ಸುಮ್ಮನಿರೋ’ ಎಂದು ಗದರಿದಳು. ಸ್ವಲ್ಪ ಹೊತ್ತಾದ ಮೇಲೆ ಬಂದ ಸುರೇಶನನ್ನ ಪರಿಚಯಿಸುತ್ತಾ ‘ಈತ ನನ್ನ ಮಗ ಮಾವ’ ಎಂದಳು. ನಾನು ಆಕೆಯೆಡೆಗೆ ಪ್ರೀತಿಯಿಂದ ನೋಡಿದೆ ಕಣ್ಣಿನಲ್ಲಿಯ ನೀರನ್ನು ತಡೆದುಕೊಳ್ಳಲಾರದೇ ಆಕೆಯ ಕೈ ಹಿಡಿದುಕೊಂಡೆ. ಯಾವುದೇ ತೊಡಕನ್ನ ಮೀರಿ ನೋಬಲ್ ಆಗಿದ್ದು ಲಚ್ಚಿಯ ಪ್ರೀತಿ. ಜೀವನ ಸಾಧ್ಯತೆ ಎಷ್ಟೊಂದು ವಿಸ್ತಾರ. ಮಹಾದೇವ ಬಂದೊಡನೆಯೇ ನನ್ನ ತಬ್ಬಿ ಕುಶಲೋಪರಿಯನ್ನ ವಿಚಾರಿಸಿದ. ನಂತರ ಲಚ್ಚಿ ಅಪ್ಪ ಬರೆದಿಟ್ಟಿದ್ದ ವಿಲ್‌ನ್ನ ನನ್ನ ಕೈಗಿತ್ತು “ಇದು ನಿನ್ನದು ಮಾವ. ಅಪ್ಪ ಸಾಯುವಾಗ ಬರೆದಿಟ್ಟಿದ್ದು, ಅಮ್ಮ ತೀರುವ ಮುಂಚೆ ನನ್ನ ಕೈಗಿತ್ತರು.” ಎಂದಳು.
ಯಾವುದೇ ದ್ವೇಷ ಸಾಧಿಸದೇ ಅಪ್ಪ ಬರೆದಿಟ್ಟ ಈ ವಿಲ್. ಈ ಆಸ್ತಿಯ ವಾರಸುದಾರನಾಗಿ ಮಾಡಿ ನನ್ನ ತಪ್ಪನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡರು. ಇಲ್ಲ ಇಷ್ಟು ದಿನ ನಾನಂದುಕೊಂಡಿದ್ದು ಸುಳ್ಳು. ಪೈಥಾಗೋರಸ್‌ನ ಪ್ರಮೇಯ- ಎರಡು ದಿಕ್ಕಿನ ಎರಡು ಭುಜಗಳ ಮೇಲೆ ನಿಂತ ನಾನು- ಸತ್ಯ. ಪ್ರೀತಿಯನ್ನ ಅವಕಾಶವಾಗಿಸುವುದು, ಆಯ್ಕೆಯಾಗಿಸುವುದು ಸಾಧ್ಯವಿಲ್ಲ. ಆದರೆ ಪ್ರೀತಿಯನ್ನ ಅಳೆಯುವುದು ಅಸಂಬದ್ಧ. ಅದನ್ನ ಹೋಲಿಸುವುದು ಕೂಡ ಸಾಧ್ಯವಿಲ್ಲ. ನನ್ನ ಜೀವನದಲ್ಲಿ ನಡೆದ ಎಲ್ಲವೂ ಸತ್ಯ. ಹೀಗೆಂದುಕೊಳ್ಳುತ್ತಾ ನಾನು ಅಧ್ಯಕ್ಷ ಕೋಣೆಯಿಂದ ಹೊರಬಂದೆ. ಹೊರಗಡೆ ಅಶ್ವಿತಾ ತುತ್ತುಗಳನ್ನು ಮಾಡಿಡುತ್ತಿದ್ದಳು. ಲಚ್ಚಿ ಅದನ್ನ ಭಾವನಾಳಿಗೆ ತಿನ್ನಿಸುತ್ತಿದ್ದಳು.

ಜೀವನವನ್ನ ಪ್ರಶ್ನಿಸುವುದು ಉಡಾಫೆಯಾಗುತ್ತದೆ. ಮತ್ತೆ ಅದರಲ್ಲಿ ನೆಮ್ಮದಿಯನ್ನ ಹೇಗೆ ಕಂಡುಕೊಳ್ಳುವುದು? -ಎಂದುಕೊಂಡಾಗ ಹುಚ್ಚುತನವಾಗುತ್ತದೆ. ಸಾಂಗತ್ಯ ಅಸಾಂಗತ್ಯದೊಳಗಿನ ತಡಕಾಟ ಜೀವನ ಪ್ರೀತಿಯಲ್ಲಿ ಕಳೆದುಹೋಗುತ್ತದೆ. ಈ ಸುರೇಶನ ಜೀವನದಲ್ಲಿ ಪ್ರೀತಿಯೆ ಜಯಿಸುತ್ತದೆ. ಆತ ಮತ್ತೆ ಕಾಲದೇಶಗಳಿಗೆ ಬಲಿಯಾಗುತ್ತಾನೆ. ಕಾಲಚಕ್ರಕ್ಕೆ ಹೊಂದಿಕೊಳ್ಳುತ್ತಾನೆ. ಮತ್ತೆ ತನ್ನ ಅಸ್ತಿತ್ವವನ್ನ ಹುಡುಕತೊಡಗುತ್ತಾನೆ. ಎಕ್ಸಿಸ್ಟೆನ್ಷಿಯಲ್ ಥರ್ಡ ಪರ್ಸನ್…. ಅಂಕದ ಪರದೆಯ ಹುಂಜ. ಕ್ಕೊಕ್ಕೊಕ್ಕೊ…


ಬಹಳ ಅರ್ಥಪೂರ್ಣವಾಗಿ ಮೂಡಿ ಬಂದಿದೆ
ಧನ್ಯವಾದಗಳು ಸರ್.
ಹೊಸ ಹೊಳವು ನೀಡುವ ಕಥೆ. ತಿರುವುಗಳು ಮತ್ತು ಪಾತ್ರ ಪ್ರವೇಶ ಉತ್ತಮವಾಗಿದೆ. ಒಂದು ಸಂದೇಶ ಹೊತ್ತ ಕಥೆ ಸರಾಗವಾಗಿ ಓದಿಸಿಕೊಂಡು ಹೋಗುವಂತೆ ಹೆಣೆದಿರುವುದು ನಿಜಕ್ಕೂ ಲೇಖಕರ ಶ್ರದ್ಧೆ, ತಾದಾತ್ಮಕತೆ ಎದ್ದು ತೋರುತ್ತವೆ.
ಅಭಿನಂದನೆಗಳು ವಿರೇಶ್….
ಧನ್ಯವಾದಗಳು ಸರ್. ತಮ್ಮ ಪ್ರೀತಿ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನನ್ನ ಸದಾಕಾಲದ ಸೆಲೆಗಳು.