ಅನೇಕ ಸಂದರ್ಶನಗಳಲ್ಲಿ ಅವರೇ ಹೇಳಿದಂತೆ, ತಿಮ್ಮಕ್ಕ, ಗಿಡ-ಮರಗಳಲ್ಲಿ ಮಕ್ಕಳನ್ನು ಕಂಡು ಸಂತಸಪಟ್ಟವರು. ಪಾತಿ ಮಾಡಿ ಗಿಡ ನೆಡುವುದು, ಅವುಗಳೊಂದಿಗೆ ಮಾತಾಡುತ್ತಾ ನೀರುಣಿಸಿ, ತಲೆಸವರಿ ಅವುಗಳನ್ನು ಹೆಮ್ಮರವಾಗಿಸುವುದು – ತಿಮ್ಮಕ್ಕನವರ ಹವ್ಯಾಸವಲ್ಲ, ಅದು ಅವರ ಬದುಕಿನ ಸಾರ. ಹುಲಿಕಲ್ ಮತ್ತು ಕುಡೂರಿನ ನಡುವಿನ ಹೆದ್ದಾರಿಯ ಅಕ್ಕಪಕ್ಕ ೩೮೫ ಆಲದ ಮರಗಳನ್ನು ಹೀಗೆ ಬೆಳೆಸಿದ ಶ್ರೇಯವೇ, ತಿಮ್ಮಕ್ಕನನ್ನು ‘ಸಾಲುಮರದ ತಿಮ್ಮಕ್ಕ’ನನ್ನಾಗಿಸಿತು, ಗೌರವಾದರಗಳನ್ನು ಮನೆಬಾಗಿಲಿಗೆ ಬರಮಾಡಿಸಿತು!
ನೆನ್ನೆ ತೀರಿಕೊಂಡ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಕುರಿತು ಕ್ಷಮಾ ವಿ. ಭಾನುಪ್ರಕಾಶ್ ಬರಹ ನಿಮ್ಮ ಓದಿಗೆ
ಮಕ್ಕಳ ದಿನಾಚರಣೆಯ ದಿನ ಶಾಲೆಗಳಲ್ಲಿ ಮಕ್ಕಳು ಸಂಭ್ರಮದಿಂದ ಕಾಲ ಕಳೆಯುತ್ತಿದ್ದರೆ, ಅದೇ ದಿನ ಮತ್ತೊಂದೆಡೆ ತಾಯೊಬ್ಬಳು ತನ್ನ ಮಕ್ಕಳನ್ನು ಬಿಟ್ಟು ಶಾಶ್ವತವಾಗಿ ದೂರವಾಗಿದ್ದಾಳೆ; ಆದರೆ, ಆ ತಾಯಿ ಆ ಮಕ್ಕಳನ್ನು ಹೆರಲಿಲ್ಲ, ಹೊರಲಿಲ್ಲ, ನೆಟ್ಟು ಬೆಳೆಸಿದಳು, ತಲೆ ಸವರಿ ನೀರುಣಿಸಿ ಉಳಿಸಿದಳು! ನವೆಂಬರ್ ೧೪ ೨೦೨೫ರಂದು ಸಾವಿರ ಸಾವಿರ ಮರಗಳ ರೂಪದ ಮಕ್ಕಳನ್ನೂ, ನಮ್ಮೆಲ್ಲರನ್ನೂ ಬಿಟ್ಟು ದೂರವಾದ, ಅಮರಳಾದ ಮರಗಳ ತಾಯಿಯೇ ಸಾಲುಮರದ ತಿಮ್ಮಕ್ಕ. ಬದುಕಿದ ಜೀವಿತಕ್ಕೊಂದು ಘನತೆಯನ್ನು ಸರಳವಾಗಿ ಸಂಪಾದಿಸಿದ ತಿಮ್ಮಕ್ಕನವರು ಬದುಕಿದ್ದು ಒಂದು ಶತಮಾನಕ್ಕೂ ಹೆಚ್ಚು ಕಾಲ; ಹೆಚ್ಚು ಬದುಕಿದವರೆಲ್ಲ ಸಾರ್ಥಕವಾಗಿ ಬದುಕುತ್ತಾರೆಂದಲ್ಲ; ಆದರೆ, ಈ ಮಹಾತಾಯಿ, ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುತ್ತಾ, ಕೋಟ್ಯಂತರ ದಾರಿಹೋಕರಿಗೆ ಅಕ್ಷರಶಃ ನೆರಳಾಗುತ್ತಾ ಬದುಕಿದವರು, ಇಲ್ಲಿಂದ ತೆರಳಿಯೂ, ಮರಳಿ ನೆನಪಲ್ಲುಳಿದವರು!
೧೯೧೧ ಜೂನ್ ೩೦ರಂದು ಆಗಿನ ಮೈಸೂರು ಸಂಸ್ಥಾನದ, ಈಗಿನ ತುಮಕೂರಿನ ಗುಬ್ಬಿಯಲ್ಲಿ ಜನಿಸಿದರು. ಅನಕ್ಷರಸ್ಥ ಬಾಲ್ಯ, ರಾಮನಗರದ ಚಿಕ್ಕಯ್ಯನವರೊಂದಿಗೆ ಮದುವೆ, ನಂತರ ಕ್ವಾರಿಯೊಂದರಲ್ಲಿ ದಿನಗೂಲಿ ಕೆಲಸ – ಹೀಗಿತ್ತು ತಿಮ್ಮಕ್ಕನವರ ಬದುಕಿನ ಮೊದಲ ಕೆಲವು ದಶಕಗಳು; ಮಕ್ಕಳಿಗಾಗಿ ಹಂಬಲಿಸಿ, ಮಕ್ಕಳಾಗದಿದ್ದಾಗ, ನೋವಿನಲ್ಲೂ ಭರವಸೆಯೆಡೆಗೆ ಮುಖಮಾಡುವ ಆಶಾವಾದಿ ತಿಮ್ಮಕ್ಕ, ತಮ್ಮ ಜೀವಿತಕ್ಕೊಂದು ಅರ್ಥ ಕಂಡುಕೊಂಡದ್ದು ಗಿಡ-ಮರಗಳಲ್ಲಿ; ಅನೇಕ ಸಂದರ್ಶನಗಳಲ್ಲಿ ಅವರೇ ಹೇಳಿದಂತೆ, ತಿಮ್ಮಕ್ಕ, ಗಿಡ-ಮರಗಳಲ್ಲಿ ಮಕ್ಕಳನ್ನು ಕಂಡು ಸಂತಸಪಟ್ಟವರು. ಪಾತಿ ಮಾಡಿ ಗಿಡ ನೆಡುವುದು, ಅವುಗಳೊಂದಿಗೆ ಮಾತಾಡುತ್ತಾ ನೀರುಣಿಸಿ, ತಲೆಸವರಿ ಅವುಗಳನ್ನು ಹೆಮ್ಮರವಾಗಿಸುವುದು – ತಿಮ್ಮಕ್ಕನವರ ಹವ್ಯಾಸವಲ್ಲ, ಅದು ಅವರ ಬದುಕಿನ ಸಾರ. ಹುಲಿಕಲ್ ಮತ್ತು ಕುಡೂರಿನ ನಡುವಿನ ಹೆದ್ದಾರಿಯ ಅಕ್ಕಪಕ್ಕ ೩೮೫ ಆಲದ ಮರಗಳನ್ನು ಹೀಗೆ ಬೆಳೆಸಿದ ಶ್ರೇಯವೇ, ತಿಮ್ಮಕ್ಕನನ್ನು ‘ಸಾಲುಮರದ ತಿಮ್ಮಕ್ಕ’ನನ್ನಾಗಿಸಿತು, ಗೌರವಾದರಗಳನ್ನು ಮನೆಬಾಗಿಲಿಗೆ ಬರಮಾಡಿಸಿತು! ಅದೆಷ್ಟೇ ಮುತುವರ್ಜಿಯಿಂದ ಬೆಳೆಸಿದ ಮಕ್ಕಳೂ ಕೂಡ ಸಮಾಜಕ್ಕೆ ಒಳಿತೇ ಮಾಡುತ್ತಾರೆಂಬ ನಂಬಿಕೆಯಿರುವುದಿಲ್ಲ; ಆತಂಕವಾದಿಗಳ ಅಮ್ಮಂದಿರು, ‘ತಮ್ಮ ಮಕ್ಕಳು ಹೀಗಾಗಲು ಸಾಧ್ಯವೇ ಇಲ್ಲ’ ಎಂದು ಪ್ರಲಾಪಿಸುವಾಗ, ಹೀಗನಿಸದೇ ಇರದು; ಆದರೆ, ಸಾಲುಮರದ ತಿಮ್ಮಕ್ಕನ ಮಕ್ಕಳಾದ ಸಾವಿರಾರು ಮರಗಳು ಮಾತ್ರ, ಸಮಾಜಕ್ಕೆ, ಪ್ರಕೃತಿಗೆ, ಕೀಟ-ಪ್ರಾಣಿ-ಪಕ್ಷಿ ಸಂಕುಲಕ್ಕೆ ಒಳಿತು ಮತ್ತು ಒಳಿತನ್ನೇ ಮಾಡುತ್ತದೆಂಬ ಮುಗ್ಧ ನಂಬಿಕೆ ಆ ತಾಯಿಯದ್ದು. ಅದು ಮಾತ್ರ ಹುಸಿಯಾಗಲು ಸಾಧ್ಯವೇ ಇಲ್ಲ ಎಂಬುದು ಭರವಸೆಯ ಇತಿಹಾಸವೀಗ!
ತಿಮ್ಮಕ್ಕನವರು ತಮ್ಮ ಪತಿಯ ಜೊತೆ ಸೇರಿ ತಮ್ಮ ಹಳ್ಳಿಯಲ್ಲಿದ್ದ ಪುರಾತನ ಆಲದ ಮರಗಳನ್ನು, ಕಸಿ ಮಾಡುತ್ತಾ ಹೊಸ ಸಸಿಯನ್ನಾಗಿಸುತ್ತಿದ್ದರು; ನೀರನ್ನು ನಾಕಾರು ಕಿಲೋಮೀಟರ್ ಗಟ್ಟಲೇ ಹೊತ್ತೊಯ್ದು ಸಸಿಗಳಿಗೆ ನೀರುಣಿಸಿ ಮರವನ್ನಾಗಿಸಿದರು, ಅಲ್ಲಿ ಹಾಯುವ ದನಕರುಗಳು, ಈ ಸಸಿಗಳನ್ನು ಸೇವಿಸಬಾರದೆಂದು ಪ್ರತಿ ಸಸಿಗೂ ಬೇಲಿ ಹಾಕಿ ಕಾಪಾಡಿದರು ಮತ್ತು ಹೊಸ ಸಸಿಗಳನ್ನು ಮಳೆಗಾಲದಲ್ಲೇ ನೆಡುತ್ತಿದ್ದರು; ಇವೆಲ್ಲವೂ ಅನಕ್ಷರಸ್ಥ ತಿಮ್ಮಕ್ಕ, ಚಿಕ್ಕಯ್ಯ ಮತ್ತು ಇಂತಹ ಲಕ್ಷಾಂತರ ಗ್ರಾಮಸ್ಥರ ಪರಿಸರಜ್ಞಾನಕ್ಕೆ ಹಿಡಿದ ಕನ್ನಡಿ ಎನ್ನಬಹುದು; ಗ್ರ್ಯಾಂಟ್ ಪಡೆದು ವಿಶ್ವವಿದ್ಯಾಲಯದಲ್ಲಿ ಡಿಗ್ರೀ ಪಡೆದು, ಪುಸ್ತಕದ ಮೂಲಕ ಪರಿಸರಕ್ಕೆ ತೆರೆದುಕೊಂಡವರಿಗಿಂತಲೂ ಇವರದ್ದು ನಿಜದ ಜ್ಞಾನ; ತಿಮ್ಮಕ್ಕನವರನ್ನು ಒಂದು ಪರಿಸರ ಸಂಬಂಧೀ ಕಾರ್ಯಕ್ರಮದ ಭಾಗವಾಗಿ ಭೇಟಿಯಾದ ನನಗೆ ಅವರ ಮಾತಿನಲ್ಲಿ ಕಂಡೂಕಾಣದೆ ಇಣುಕುವ ಪರಿಸರದ ಬಗೆಗಿನ ಸಣ್ಣ ವಿವರಗಳು, ದಾಖಲಾಗದ, ದಾಖಲೆಯಾಗಬೇಕಾದ ವಿಶಿಷ್ಟ ನಿಧಿ ಎಂದೆನಿಸುತ್ತಿತ್ತು; ಯಾವುದೇ ಅಪೇಕ್ಷೆಯಿಲ್ಲದೇ ಯಾರೂ ಏನೂ ಮಾಡದ ಕಾಲವಿದು ಎಂದಾಗ, ಕೇವಲ ಪ್ರೀತಿಯಿಂದ, ನಾಕು ಜನರಿಗೆ ನೆರಳಾಗಲಿ ಎಂಬ ಉದ್ದೇಶದಿಂದ ಮರನೆಟ್ಟು ಪೋಷಿಸುವ ಕೈಂಕರ್ಯವನ್ನು ತಪಸ್ಸಿನಂತೆ ನಡೆಸಿಕೊಂಡು ಬಂದ ಈ ಸರಳಜೀವಿಯನ್ನು, ಬೆರಗುಗಣ್ಣಿಂದ ನೋಡುತ್ತಿದ್ದ ಹಲವರಲ್ಲಿ ನಾನೂ ಒಬ್ಬಳಾಗಿದ್ದೆ ಆ ದಿನ.

ಸಾಲುಮರದ ತಿಮ್ಮಕ್ಕ, ತನ್ನ ಸರಳ ಮಹತ್ತರ ಕಾರ್ಯದಿಂದ ಗೆದ್ದಿದ್ದು ಬಿಸಿಲಲ್ಲಿ ಬವಳಿ ಬಂದು ಮರದಡಿ ನೆರಳನ್ನು ಪಡೆದ ದಾರಿಹೋಕರ ಮನಸನ್ನು ಮಾತ್ರವಲ್ಲ, ಪುಟ್ಟ ಅಳಿಲುಗಳ, ಕಣಜಗಳ, ಹಕ್ಕಿಗಳ, ಹಾವುಗಳ ಕೃತಜ್ಞತೆಯನ್ನು ಕೂಡ; ಜೊತೆಗೆ, ಇವರು ಜಗತ್ತಿನ ಪ್ರಸಿದ್ಧ ಪರಿಸರ ಸಂಸ್ಥೆಗಳ, ಅನೇಕ ದೇಶಗಳ, ಸರಕಾರಗಳನ್ನೆಲ್ಲ ಇತ್ತ ತಿರುಗುವಂತೆ ಮಾಡಿದ ಸಾಧಕಿಯೇ ಸರಿ. ಇದರ ಮೂಲಕ ಮತ್ತಷ್ಟು ಜನರಿಗೆ ಸ್ಪೂರ್ತಿಯಾದರು ತಿಮ್ಮಕ್ಕ; ಭಾರತದ ಪ್ರಮುಖ ಗೌರವಾದರಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕಾರವನ್ನೂ ಮುಡಿಗೇರಿಸಿಕೊಂಡ ತಿಮ್ಮಕ್ಕನವರು ಹಂಪಿ ವಿಶ್ವವಿದ್ಯಾಲಯದಿಂದ ‘ನಾಡೋಜ’ರಾದವರು. ಪರಿಸರ ಮಿತ್ರ ಪ್ರಶಸ್ತಿ, ವೃಕ್ಷಮಿತ್ರ ಪ್ರಶಸ್ತಿ, ಪರಿಸರ ರತ್ನ ಪ್ರಶಸ್ತಿ, ಗಾಡ್ಫ್ರೇ ಫಿಲಿಪ್ಸ್ ಬ್ರೇವರಿ ಅವಾರ್ಡ್, ರಾಷ್ಟ್ರೀಯ ನಾಗರಿಕ ಪ್ರಶಸ್ತಿ – ಹೀಗೇ ನೂರಾರು ಪುರಸ್ಕಾರಗಳಿಗೆ ಭಾಜನರಾದ ಸಾಲುಮರದ ತಿಮ್ಮಕ್ಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು. ತಿಮ್ಮಕ್ಕನವರ ಪರಿಸರಪೂರಕ ಕಾರ್ಯವನ್ನು ಗುರುತಿಸಿದ ಬಿ.ಬಿ.ಸಿ ಇವರನ್ನು ‘ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ಮಹಿಳೆಯರಲ್ಲಿ ಒಬ್ಬರು’ ಎಂದು ಗೌರವಿಸಿದೆ. ದೆಹಲಿಯಲ್ಲಿ ನಡೆದ ಭಾರತೀಯ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘ತಿಮ್ಮಕ್ಕ ಮತ್ತು ೨೮೪ ಮಕ್ಕಳು’ ಎಂಬ ಸಾಕ್ಷ್ಯಚಿತ್ರವು ಇವರ ಬದುಕನ್ನು, ಸಾಧನೆಯನ್ನು ಸುಂದರವಾಗಿ ಜಗತ್ತಿನ ಮುಂದಿರಿಸಿದೆ.
ಇಂತಹ ಸ್ಪೂರ್ತಿದಾಯಕ ಸಾಧಕರನ್ನು ಕಂಡಾಗಲೆಲ್ಲಾ ಮನಸಿಗೆ ಬರುವ ಸವಾಲುಗಳು – ಸಾಧನೆ ಎಂಬ ಗಮ್ಯ ತಲುಪಲು ಯಾವ ಹಾದಿ ಸರಿ? ಸಾಧನೆಯ ನಿಜವಾದ ಅರ್ಥವೇನು? ಪ್ರತಿಯೊಬ್ಬ ಸಾಧಕರ ಬದುಕೂ, ಇದಕ್ಕೆ ವಿಭಿನ್ನ ಅರ್ಥ, ಉತ್ತರ ನೀಡಬಹುದು. ತಿಮ್ಮಕ್ಕನವರ ಬದುಕಿನ ಸರಳ ಸತ್ಯವನ್ನು ಗಮನಿಸಿದರೆ, ಸಾಧನೆ ಮಾಡುವ ಅಪೇಕ್ಷೆಯಿಲ್ಲದೇ, ಸರಳ ಅರ್ಥಪೂರ್ಣ ಕಾರ್ಯವನ್ನೂ ನಿರಂತರವಾಗಿ, ದಶಕಗಳ ಕಾಲ ನಡೆಸುತ್ತಲೇ ಸಾಗುವುದೇ ಒಂದು ಸಾಧನೆ. ಸಾಧನೆ ಎಂಬುವುದು ಒಂದು ಗಮ್ಯವೇ ಅಲ್ಲ, ಅದೇ ಈ ನಿರಂತರ ಪಯಣ ಎಂಬ ಉತ್ತರ ಕಾಣಸಿಗುತ್ತದೆ. ಇಂತಹ ನಿಜಾರ್ಥದ ಪರಿಸರವಾದಿಯನ್ನು, ಸಾಧಕಿಯನ್ನು ನೆನೆಯುತ್ತಾ, ಅವರ ಹಾದಿಯಲ್ಲೇ ಸಾಗುವ ಪ್ರಯತ್ನ ಮಾಡೋಣ, ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ನಮ್ಮ ಮಟ್ಟದಲ್ಲಿ, ನಮ್ಮ ನೆಲೆಗಟ್ಟಿನಲ್ಲಿ ಮಾಡುತ್ತಾ ಸಾಗೋಣ; ಅದರ ಮೂಲಕ, ಈ ತಾಯಿಗೆ ಸೂಕ್ತ ಶ್ರದ್ಧಾಂಜಲಿ ಸಲ್ಲಿಸೋಣ.
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.
