ಕಾನೂನಿನ ಪ್ರಕಾರ ಗೋಡೆ ಗ್ರಫಿಟಿ ಆರ್ಟ್, ಮಸಿ ಬಳೆಯುವುದು ಇಂಥವುದೆಲ್ಲಾ ಅಪರಾಧಗಳು. ಬಲವಾದ, ಅದರಲ್ಲೂ ಕೇಂದ್ರೀಯ ವಿರೋಧಪಕ್ಷದ ನಾಯಕರಾದ ಪೀಟರ್ ಡಟ್ಟನ್ ಅವರ ಭಿತ್ತಿಚಿತ್ರಕ್ಕೆ ಮಸಿ ಬಳೆದದ್ದನ್ನ ನೋಡಿ ನನಗೆ ಆಶ್ಚರ್ಯವಾಯ್ತು. ಅದ್ಯಾರೊ ಬಹಳ ಧೈರ್ಯವಂತರಿರಬೇಕು ಎಂದುಕೊಂಡೆ. ಇಲ್ಲವೇ, ಡಟ್ಟನ್ ಅವರ ಸ್ವಲ್ಪವೂ ಸತ್ವವಿಲ್ಲದ, ಅಸತ್ಯದ, ಅಸಂಗತ ಮಾತುಗಳು, ಹೇಳಿಕೆಗಳಿಂದ ಬೇಸತ್ತು ಅವರ ಭಿತ್ತಿಚಿತ್ರದ ಮುಖಕ್ಕೆ ಮಸಿಬಳೆಯುವ ಯೋಚನೆ ಬಂದಿರಬೇಕು. ಅವರ ಬಳಿ ಸತ್ವಯುತ, ಅಭಿವೃದ್ಧಿ-ಪರ, ಜನ-ಪರ ಆಶ್ವಾಸನೆಗಳು ಇಲ್ಲದಿರುವುದು ಮಸಿಬಳೆದ ಕಿಡಿಗೇಡಿಗಳಿಗೆ ಅದೆಷ್ಟು ನಿರಾಸೆ ತಂದಿರಬೇಕು ಎಂದೆನಿಸಿತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಪ್ರಿಯ ಓದುಗರೆ,
ಸಣ್ಣನೆ ಒಂದು ಚಳಿ ಸುಳಿದಾಡುತ್ತಿದೆ. ಇದು ಹೇಗೆಂದರೆ ಉತ್ತರಧ್ರುವದ ಆಗಸದಲ್ಲಿ ಆಗಾಗ ಕಾಣಿಸಿಕೊಂಡು ಲಾಸ್ಯವಾಡುವ ಅರೋರ ಬಣ್ಣಗಳಂತೆ. ಹಾಗೆಯೇ, ಈ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆಸ್ಟ್ರೇಲಿಯಾ ತುಂಬೆಲ್ಲಾ ಶರತ್ಕಾಲದ ರಂಗುಗಳು ಕಣ್ಣಿಗೆ ಹಬ್ಬ ತಂದಿದೆ. ಕುಂಚ ಹಿಡಿದು ತನ್ಮಯರಾಗಿದ್ದ ಒಂದಷ್ಟು ಚಿತ್ರಗಾರರು ಅದೇನೋ ಬಂತೆಂದು ಅದನ್ನು ನೋಡಲು ಧಾವಿಸುವಾಗ ಅಕಸ್ಮಾತ್ತಾಗಿ ಚೆಲ್ಲಾಡಿದ ಬಣ್ಣಗಳಂತೆ ಆಸ್ಟ್ರೇಲಿಯಾ ಮೈಪೂರ್ತಿ ಚಿತ್ರವಿಚಿತ್ರ ಮನಮೋಹಕ ವರ್ಣಗಳು ಬಳ್ಳಿಗಳಂತೆ ಹಬ್ಬಿವೆ.
ನಾನು ಆಸ್ಟ್ರೇಲಿಯಾದ ಪೂರ್ವ ತೀರದ ನಿವಾಸಿ. ಮೊದಲ ಕೆಲ ವರ್ಷಗಳನ್ನು ಕಳೆದಿದ್ದು ಸಿಡ್ನಿ ಹತ್ತಿರದ ವೊಲೊಂಗೊಂಗ್ ಪಟ್ಟಣದಲ್ಲಿ. ಮಧ್ಯೆ ಕೆಲ ತಿಂಗಳುಗಳನ್ನು ದೇಶದ ರಾಜಧಾನಿ ನಗರ ಕ್ಯಾನ್ಬೆರ್ರಾದಲ್ಲಿ, ವೊಲೊಂಗೊಂಗ್ ಬಿಟ್ಟ ಆನಂತರ ಒಂದಷ್ಟು ಕಾಲ ಮೆಲ್ಬೋರ್ನ್ ನಗರದಲ್ಲಿ ಇದ್ದದ್ದು. ಮಗನ ಆರೋಗ್ಯದ ಕಾರಣಕ್ಕಾಗಿ ಮೆಲ್ಬೋರ್ನ್ ಬಿಟ್ಟು ನಾವು ಬ್ರಿಸ್ಬೇನ್ ನಗರಕ್ಕೆ ಬಂದು ನೆಲೆಸಿದ್ದು. ಈ ಎಲ್ಲಾ ಊರುಗಳಲ್ಲಿ ಶರತ್ಕಾಲದ ಸೌಂದರ್ಯವನ್ನು ನೋಡುತ್ತಾ ನೋಡುತ್ತಾ ನಿಧಾನವಾಗಿ ಉದುರುವ ಎಲೆಗಳ ಚೆಲುವಿಗೆ ಮನಸೋತು ವಸಂತ ಋತುವಿಗಿಂತಲೂ ಶರದೃತುವೇ ಅತ್ಯಂತ ವರ್ಣಮಯವಾದದ್ದು ಎನ್ನುವ ನಿಲುವು ನನ್ನದು.
ಮೂಲತಃ ಆಸ್ಟ್ರೇಲಿಯಾದಲ್ಲಿ ಅತ್ಯಂತ ವೈವಿಧ್ಯಮಯ ನೈಸರ್ಗಿಕ ಸೌಂದರ್ಯವಿದೆ. ಈ ವಿಶಾಲ ಖಂಡದಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆತನಕ ಹಬ್ಬಿರುವುದು ಮರುಭೂಮಿ, ಕಾಡು, outback, ಪೊದೆಕಾಡು, ಗುಡ್ಡಬೆಟ್ಟಗಳು, ಸಾವಿರಾರು ನೀರಿನ ಝರಿಗಳು, ಬೆರಳೆಣಿಕೆಯ ದೊಡ್ಡ ನದಿಗಳು ಮತ್ತು ಸರೋವರಗಳು, ಒಣಪ್ರದೇಶಗಳು. ಏನಿಲ್ಲಾ, ಬರೀ ಪೂರ್ವತೀರದ ಗುಂಟ ಸಾಗಿದರೆ ಸಾಕು ದಾರಿಯಲ್ಲಿ ಸಿಗುವುದು ಸಸ್ಯರಾಶಿ, ಹೂ-ಸ್ವರ್ಗ. ಪುಟಾಣಿ ಹಳದಿ ಅಣಬೆ ಹೂಗಳಿಂದ ಹಿಡಿದು ದೊಡ್ಡ ಹಳದಿ ವಾಟ್ಟಲ್ ಹೂ, ನೂರಾರು ವಿಧಗಳ ಗಮ್ ಮರಗಳು, ಅಕೇಷಿಯಾ, ಇನ್ನೂ ಏನೇನೋ ಹೂ, ಹಣ್ಣು, ಗಿಡ, ಬಳ್ಳಿ, ನೆಲಗೆಣಸು, ಅದೆಷ್ಟು ವಿಧಗಳಿವೆಯೋ ಅಷ್ಟೇ ವೈವಿಧ್ಯಮಯ ಬಣ್ಣಗಳ ಓಕುಳಿಯೂ ತುಂಬಿಕೊಂಡಿದೆ. ಇವನ್ನೆಲ್ಲಾ ನೋಡಿ ರಸಾಗ್ರಹಣ ಮಾಡಲು ಒಂದು ಮಾನವ ಜನ್ಮ ಸಾಲದು ಅನ್ನಿಸತ್ತೆ.
ಹಳದಿ ಹೂ ಅಂದಾಗ ಗೋಲ್ಡನ್ ಪೆಂಡಾ (goldern penda) ಕಣ್ಮುಂದೆ ಬಂತು. ಈ ಮರ ಆಸ್ಟ್ರೇಲಿಯಾದ ಸುಪ್ರಸಿದ್ಧ ಮರ್ಟಲ್ ಕುಟುಂಬಕ್ಕೆ ಸೇರಿದ್ದು. ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ಮಾತ್ರ ಬೆಳೆಯುವ ಮರ. ರಾಜ್ಯದ ಹೆಸರುವಾಸಿ Cairns ಪ್ರವಾಸಿ-ನಗರದ ಹೂ-ಲಾಂಛನವಿದು. ಸದ್ಯಕ್ಕೆ ನಮ್ಮ ರಾಣಿರಾಜ್ಯದ ತುಂಬೆಲ್ಲಾ, ಅದರಲ್ಲೂ ದಕ್ಷಿಣ-ಪೂರ್ವ ಭಾಗದಲ್ಲಿ ಗೋಲ್ಡನ್ ಪೆಂಡಾ ಮರದ ತುಂಬೆಲ್ಲಾ ಹಳದಿ ಹೂ ಗೊಂಚಲುಗಳು ತೂಗಾಡುತ್ತಿವೆ. ಸಾಮಾನ್ಯವಾಗಿ ನೀರಿನ ಒರತೆ, ಝರಿಗಳ ಅಂಚಿನಲ್ಲಿ ಬೆಳೆಯುವ ಮರ. ಈ ವರ್ಷ ಟ್ರಾಪಿಕಲ್ ಸೈಕ್ಲೋನ್ ಆಲ್ಫ್ರೆಡ್ ಕಾರಣವಾಗಿ ದಕ್ಷಿಣ-ಪೂರ್ವ ಕ್ವೀನ್ಸ್ಲ್ಯಾಂಡ್ ನಲ್ಲಿ ವಾರಗಟ್ಟಲೆ ಬಿದ್ದ ಮಳೆಯಿಂದಾಗಿ ಎಲ್ಲಾ ಕಡೆ ಮರಗಿಡಗಳೆಲ್ಲಾ ನಲಿದಾಡುತ್ತಿವೆ. ಹಿಂದಿನ ವರ್ಷಗಳಿಗಿಂತಲೂ ಈ ವರ್ಷ ಹೂರಾಶಿ ಹೆಚ್ಚಿದೆ ಎಂದು ಎಲ್ಲರ ಅಭಿಪ್ರಾಯ. ಅದು ನಿಜವೆಂಬಂತೆ ಗೋಲ್ಡನ್ ಪೆಂಡಾ ಮರದಲ್ಲಿ ಅದೆಷ್ಟು ಅಚ್ಚಹಸಿರು ರೆಂಬೆಕೊಂಬೆ, ಎಲೆಗಳಿವೆಯೋ ಅಷ್ಟೇ ಹಳದಿಹೂ ಗುಚ್ಛ. ಇಂಥ ಸೌಂದರ್ಯಭರಿತ ವರವನ್ನು ಕರುಣಿಸಿದ ಪ್ರಕೃತಿಮಾತೆಗೆ ಶರಣು. ಮನುಷ್ಯರ ಕಣ್ಣು ತಣಿಸುವ ಈ ಹೂರಾಶಿಯನ್ನು ಪ್ರೀತಿಯಿಂದ ಅಪ್ಪಿ ಮುತ್ತಿಕ್ಕಿ ಮಕರಂದವನ್ನು ಹೀರಿ ಹೊಟ್ಟೆತುಂಬಿಸಿಕೊಳ್ಳುವುದು ಸಾವಿರಾರು ಜೇನ್ನೊಣಗಳು, ದುಂಬಿ, ಹಕ್ಕಿ ಮತ್ತಿತರರು.
ಈ ವರ್ಷ ಶರತ್ಕಾಲದ ಬಣ್ಣಗಳ ಜೊತೆ ರಾಜಕೀಯ ರಂಗುಗಳು ಪಂದ್ಯ ಹೂಡಿವೆ. ಹೆಚ್ಚುಕಾಲ ಈ ಪಂದ್ಯವೇನೂ ಉಳಿಯುವುದಿಲ್ಲ ಬಿಡಿ. ಇನ್ನು ಎರಡು ವಾರಗಳಷ್ಟೇ ಉಳಿದಿರುವುದು ಆಸ್ಟ್ರೇಲಿಯನ್ ಕೇಂದ್ರೀಯ ಚುನಾವಣೆಗೆ. ಮೇ ತಿಂಗಳ ಮೂರನೇ ತಾರೀಖು – Australia Votes – ಚುನಾವಣಾ ದಿನವಾದರೂ ಮುಂಚಿತವಾಗಿಯೆ ಮತ ಚಲಾಯಿಸುವ ಕ್ರಮವಿದೆ. ‘ಮುಂಚಿತ ಮತ ಚಲಾವಣೆ’ ಈ ಬರುವ ವಾರ ಆರಂಭವಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಆಸ್ಟ್ರೇಲಿಯಾದಲ್ಲಿ ಮತ ಚಲಾವಣೆ ಕಡ್ಡಾಯ. ಚಲಾಯಿಸದೇ ಹೋದರೆ ತಪ್ಪುದಂಡ ಬೀಳುತ್ತದೆ. ಚುನಾವಣಾ ದಿನ ಮತದಾರರು ಗಂಟೆಗಟ್ಟಲೆ ಕ್ಯೂ ನಿಲ್ಲುವುದು, ಜನಜಂಗುಳಿಯಾಗುವುದು ಬೇಡ ಎನ್ನುವುದು ಒಂದು ಕಾರಣ. ಮತದಾರರು ಕೆಲಸ, ಕುಟುಂಬ, ಆರೋಗ್ಯ ಎನ್ನುವ ಬೇರೆಬೇರೆ ಕಾರಣಗಳಿಂದ ತಮ್ಮ ಮತಕ್ಷೇತ್ರದಿಂದ ಹೊರಗಿದ್ದು ಮತ ಚಲಾಯಿಸದೆ ಇರುವುದನ್ನು ತಪ್ಪಿಸಲು ‘early voting’ ಇದೆ.
ಕಳೆದ ಕೆಲದಿನಗಳಲ್ಲಿ ಏನೇನೋ ಕೆಲಸಗಳಿಗೆಂದು ನಾನು ಬ್ರಿಸ್ಬೇನ್ ನಗರದ ಉತ್ತರ-ಪಶ್ಚಿಮ ಭಾಗದ ಒಂದೆರೆಡು ಬಡಾವಣೆಗಳಿಗೆ ಹೋಗಿದ್ದೆ. ನನ್ನ ಗಮನ ಸೆಳೆದಿದ್ದು ಎರಡು ವಿಶೇಷಗಳು. ಒಂದು, ಆಕರ್ಷಕ ಗೋಲ್ಡನ್ ಪೆಂಡಾ ಹೂಗುಚ್ಛಗಳು. ಇಷ್ಟೊಂದು ಹೂರಾಶಿ ಕಾಣುತ್ತಿರುವುದು ಸ್ವಲ್ಪ ಅಪರೂಪವೇ. ನನ್ನ ಗಮನ ಸೆಳೆದ ಇನ್ನೊಂದು ವಿಷಯ ಮಸಿ ಬಳೆದ ರಾಜಕೀಯ ನಾಯಕನ ಭಿತ್ತಿಚಿತ್ರ. ಇದೂ ಕೂಡ ಅಪರೂಪ!

ನಾನು ಹೋಗಿದ್ದ ಬಡಾವಣೆಗಳು ಇರುವುದು ಕೇಂದ್ರ ವಿರೋಧಪಕ್ಷದ (ಲಿಬರಲ್) ನಾಯಕರಾದ ಪೀಟರ್ ಡಟ್ಟನ್ ರವರ ಮತಕ್ಷೇತ್ರದಲ್ಲಿ. ಚುನಾವಣಾ ಕಣದಲ್ಲಿ ಅವರ ವಿರುದ್ಧ ಪೈಪೋಟಿಗೆ ಇಳಿದಿರುವುದು ಇಬ್ಬರು ಮಹಿಳೆಯರು. ಆಲಿ ಫ್ರಾನ್ಸ್ ಎಂಬಾಕೆ ಈಗ ಅಧಿಕಾರದಲ್ಲಿರುವ ಲೇಬರ್ ಪಕ್ಷದ ಅಭ್ಯರ್ಥಿ. ನಿಧಾನವಾಗಿ ಈಕೆಯ ಭಿತ್ತಿಚಿತ್ರಗಳು ಕಾಣುತ್ತಿವೆ. ಇನ್ನೊಬ್ಬಾಕೆ ಎಲೀ ಸ್ಮಿತ್. ಈಕೆ ಇಂಡಿಪೆಂಡೆಂಟ್ ಅಭ್ಯರ್ಥಿ. ಈಕೆ ವರ್ಷದ ಆರಂಭದಿಂದಲೂ ಭರದಿಂದ ಪ್ರಚಾರ ನಡೆಸಿದ್ದಾಳೆ. ಎಲ್ಲೆಲ್ಲೂ ಕಾಣುತ್ತಿರುವ ಮುಖ ಈಕೆಯದ್ದೇ. ಈ ಇಬ್ಬರು ಮಹಿಳಾ ಅಭ್ಯರ್ಥಿಗಳು ಪೀಟರ್ ಡಟ್ಟನ್ ಅವರಿಗೆ ಬಲವಾದ ಪೈಪೋಟಿ ಕೊಡುತ್ತಿದ್ದಾರೆ. ಆಸ್ಟ್ರೇಲಿಯನ್ ಭಾಷೆಯಲ್ಲಿ ಹೇಳುವುದಾದರೆ, ‘ಅ ಗುಡ್ ರನ್ ಫಾರ್ ಹಿಸ್ ಮನಿ’. ಇನ್ನು Greens ಪಕ್ಷದ ವಿನ್ನೀ ಬ್ಯಾಟನ್ ಎಂಬಾತ ಇತ್ತೀಚೆಗಷ್ಟೆ ಕಂಡುಬಂದಿದ್ದಾನೆ. ಇಲ್ಲಿಯವರೆಗೂ ಗ್ರೀನ್ಸ್ ಪಕ್ಷದ ಪ್ರಚಾರ ತೀರಾ ಸಪ್ಪೆಯಾಗಿದ್ದು ಮುಂದಿನ ಎರಡು ವಾರಗಳಲ್ಲಿ ಅದೇನು ಮಾಯೆ ಮಾಡುತ್ತಾರೋ ನೋಡಬೇಕು. ಅಥವಾ, ಮಿಕ್ಕ ಮೂರೂ ಅಭ್ಯರ್ಥಿಗಳ ಬಲದೆದುರು ತಾವು ನಿಲ್ಲದಾದವರು ಎಂದು ಆಗಲೇ ನಿರ್ಧರಿಸಿಕೊಂಡಿದ್ದಾರೊ ಏನೊ. ಇಬ್ಬರು ಮಹಿಳಾ ಅಭ್ಯರ್ಥಿಗಳಲ್ಲಿ ಯಾರೊಬ್ಬರು ಗೆದ್ದರೂ ಅದು ಪ್ರಗತಿಪರ, ಆರೋಗ್ಯಕರ ಬದಲಾವಣೆ.
ಕಾನೂನಿನ ಪ್ರಕಾರ ಗೋಡೆ ಗ್ರಫಿಟಿ ಆರ್ಟ್, ಮಸಿ ಬಳೆಯುವುದು ಇಂಥವುದೆಲ್ಲಾ ಅಪರಾಧಗಳು. ಬಲವಾದ, ಅದರಲ್ಲೂ ಕೇಂದ್ರೀಯ ವಿರೋಧಪಕ್ಷದ ನಾಯಕರಾದ ಪೀಟರ್ ಡಟ್ಟನ್ ಅವರ ಭಿತ್ತಿಚಿತ್ರಕ್ಕೆ ಮಸಿ ಬಳೆದದ್ದನ್ನ ನೋಡಿ ನನಗೆ ಆಶ್ಚರ್ಯವಾಯ್ತು. ಅದ್ಯಾರೊ ಬಹಳ ಧೈರ್ಯವಂತರಿರಬೇಕು ಎಂದುಕೊಂಡೆ. ಇಲ್ಲವೇ, ಡಟ್ಟನ್ ಅವರ ಸ್ವಲ್ಪವೂ ಸತ್ವವಿಲ್ಲದ, ಅಸತ್ಯದ, ಅಸಂಗತ ಮಾತುಗಳು, ಹೇಳಿಕೆಗಳಿಂದ ಬೇಸತ್ತು ಅವರ ಭಿತ್ತಿಚಿತ್ರದ ಮುಖಕ್ಕೆ ಮಸಿಬಳೆಯುವ ಯೋಚನೆ ಬಂದಿರಬೇಕು. ಅವರ ಬಳಿ ಸತ್ವಯುತ, ಅಭಿವೃದ್ಧಿ-ಪರ, ಜನ-ಪರ ಆಶ್ವಾಸನೆಗಳು ಇಲ್ಲದಿರುವುದು ಮಸಿಬಳೆದ ಕಿಡಿಗೇಡಿಗಳಿಗೆ ಅದೆಷ್ಟು ನಿರಾಸೆ ತಂದಿರಬೇಕು ಎಂದೆನಿಸಿತು.

ಇತ್ತೀಚಿನ ಒಂದು ಪ್ರಚಾರಕ್ಕೆ ಡಟ್ಟನ್ ತಮ್ಮ ಮಗನನ್ನು ಕರೆದುಕೊಂಡು ಬಂದು, ಅವನನ್ನು ಮಾಧ್ಯಮಗಳ ಮುಂದೆ ನಿಲ್ಲಿಸಿದ್ದರು. ಅವನು ಒಂದಷ್ಟು ಮುಲುಗುಟ್ಟುತ್ತಾ ತನ್ನಂಥ ಯುವಕರಿಗೆ ಸ್ವಂತ ಮನೆ ಕೊಳ್ಳುವುದು ಅದೆಷ್ಟು ಕಷ್ಟವಾಗಿದೆ, ಸ್ವಲ್ಪವೂ ಹಣ ಕೂಡಿಡಲು ಸಾಧ್ಯವಾಗುತ್ತಿಲ್ಲ, ಕಾಸ್ಟ್ ಆಫ್ ಲಿವಿಂಗ್ ಅನ್ನೊ ಸಮಸ್ಯೆ ತಮಗೆಲ್ಲ ಎಷ್ಟು ಕಂಟಕವಾಗಿದೆ, ಎನ್ನುತ್ತಾ ಗೊಣಗಾಡಿದ. ಅಧಿಕೃತ ವರದಿಗಳಂತೆ ಅವನಪ್ಪ ಪೀಟರ್ ಡಟ್ಟನ್ ಬರೋಬ್ಬರಿ ಹದಿನೈದು ಮನೆಗಳ ಒಡೆಯ. ಅಷ್ಟೆಲ್ಲ ಆಸ್ತಿ ಇದ್ದು ಐಷಾರಾಮದ ಜೀವನ ನಡೆಸುತ್ತಿರುವವರ ಮಗ ತಾನೆಷ್ಟು ಕಷ್ಟಪಡುತ್ತಿದ್ದೀನಿ ಎಂದು ಮಾಧ್ಯಮಗಳ ಮುಂದೆ ನಾಟಕವಾಡಿದ್ದು ನಗೆಪಾಟಲಾಗಿದೆ. ಡಟ್ಟನ್ ಅವರ ಚುನಾವಣಾ ಪ್ರಚಾರವನ್ನು ಪದೇಪದೇ ಟ್ರಂಪ್ ಅವರ ಶೈಲಿಗೆ ಹೋಲಿಸಿ ಸಾರ್ವಜನಿಕರು, ಮಾಧ್ಯಮಗಳು ಇಬ್ಬರ ನಡುವೆ ಇರುವ ಸಾಮ್ಯತೆಯನ್ನು ತೋರಿಸುತ್ತಿದ್ದಾರೆ. ಅಮೆರಿಕಕ್ಕೆ ಆದ ಗತಿಯೆ ಆಸ್ಟ್ರೇಲಿಯಾಕ್ಕೂ ಆಗುವುದೆ ಎನ್ನುವ ರಹಸ್ಯ ಬರಲಿರುವ ಮೇ ತಿಂಗಳ ಚುನಾವಣೆಯಲ್ಲಿ ಬಯಲಾಗುತ್ತದೆ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

