ಜಯಂತ ಕಾಯ್ಕಿಣಿ ಮತ್ತು ಪಾಟಿಚೀಲ

ಜಯಂತರು ಎಲ್ಲಿ ಹೋದರೂ ತಮ್ಮೊಡನೆ ಒಂದು ಪಾಟಿಚೀಲವೊಂದನ್ನು ಕೊಂಡೊಯ್ಯುತ್ತಾರೆ.
ಅದರೊಳಗೆ ಏನಿರಬಹುದು?
ಕಲ್ಲು ಸಕ್ಕರೆಯೋ ಅಥವಾ ಒಂದು ಜಿಲೇಬಿಯೋ ಎಂದು
ನನಗೆ ಯಾವಾಗಲೂ ಕುತೂಹಲ ಕಾಡುತ್ತದೆ.

ತೊದಲು ಮಾತಿನ ಪುಟ್ಟ ಮಗು,
ತನ್ನ ಸುತ್ತಮುತ್ತಲಿನ ಎಲ್ಲಾ ಚರಾಚರಗಳೊಂದಿಗೆ ಸಹಜವಾಗಿ
ಸಂಭಾಷಣೆಗೆ ತೊಡಗುವಂತೆ,
ಬದುಕಿಗೆ ತನ್ನ ಭಾವಕೋಶವನ್ನು ತೆರೆದು ಕುಳಿತಿರುವಂತೆ ಚಿತ್ರ ಮೂಡುತ್ತದೆ.

ಜಗತ್ತನ್ನೆ ತನ್ನ ಜೋಳಿಗೆಯಲ್ಲಿಟ್ಟುಕೊಂಡು ತಿರುಗುವ ಸಂತನಂತೆ, ಎದುರಿಗಿರುವವರ
ಎದೆ ಬಡಿತದ‌ ಏರಿಳಿತದ ಸದ್ದಿಗೆ
ಕಿವಿಯಾಗಿ ಸಂವೇದನೆಯನ್ನು ಅಳೆಯುತ್ತಾ ಅಲೆಯುತ್ತಿರುವಂತೆ ಭಾಸವಾಗುತ್ತದೆ.

ಕುತೂಹಲದ ಕಣ್ಣಿನ ಶಾಲಾ ಬಾಲಕನಂತೆ
ಆಗಾಗ ಪಾಟಿ ಚೀಲದಲ್ಲಿನ
ಸ್ಲೇಟನ್ನು ಹೊರತೆಗೆದು ಗೀಚಿ, ಬರೆದು, ಅಳಿಸಿ, ತಿದ್ದಿ, ತೀಡಿ, ಬೇಕಾದಂತೆ ಬದುಕಿಗೆ
ಬಣ್ಣ ತುಂಬಿದಂತೆ ರಂಜಿಸಿದಂತೆ ಸ್ವಪ್ನ ಬೀಳುತ್ತದೆ.‌

 

ಶರತ್ ಪಿ.ಕೆ. ಹಾಸನದವರು.
ನಗರ ಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಗುಂಪಿಗೆ ಸೇರದ ಪದಗಳು” ಇವರ ಪ್ರಕಟಿತ ಕವನ ಸಂಕಲನ.