ಟ್ಯಾಂಕರ ಮ್ಯಾಲ
ಆ್ಯಂಕರ ಕುಂತ್
ಯುದ್ಧಕ ಹೊಂಟಾನ
ತಮ್ಮಾ
ಯುದ್ಧಕ ಹೊಂಟಾನ
ತೆಲಿಮ್ಯಾಗ ಏಟ
ರಾಕೆಟ ಹೋತ
ಲೆಕ್ಕಾ ಹಾಕ್ಯಾನ
ಪಕ್ಕಾ ಲೆಕ್ಕಾ ಹಾಕ್ಯಾನ
ಬಲೂಚಿ ಕರಾಚಿ
ಕೈಯಾಗ ಐತಿ
ಬಿಡವಲ್ಲೆ ಅಂತಾನ
ಸತ್ರೂ ಬಿಡವಲ್ಲೆ ಅಂತಾನ
ಮಟ್ಯಾಶ ಫಿನೀಶ
ಠುಸ್ಸು ಪಟಾಕಿ
ಅನ್ನಾಕತ್ತಾನ
ಟೀವಿ ನೋಡಾಂವ ಸತ್ತಾನ
ಹೊಡದಾರ ಶೆಲ್ಲ್
ತಡದಾರ ಮಿಸೆಲ್ಲ್
ಜಿಗಿಜಿಗಿದಾಡ್ಯಾನ
ಮಡಿದೋರ
ಮನಿಯೋರ ಮರತಾನ
ಯುದ್ಧ ಬ್ಯಾಡ್ರಲೇ
ಸಾಕು ಮಾಡ್ರಲೇ
ಅಂದರ ಬೈತಾನ
ನೀ ಎಂತಾ ಸೈತಾನ
ಗೇಮ್ಸಿಂದ್ ವಿಡಿಯೊ
ತೋರಸಕೊಂತ
ನಾಟಕ್ ಮಾಡತಾನ
ಹುಚ್ಚ್ ಜನ ನಂಬ್ಯಾರ
ಮಾಡ್ಯಾನ
ಗಡಿಯಾಗ ನಿಲ್ಲಂದ್ರ
ಒಲ್ಲೆ ಅಂತಾನ
ಕೈಕಾಲ ಬಡಿತಾನ
ಸ್ಟುಡಿಯೋನೆ
ರಣರಂಗ ಮಾಡ್ಯಾನ
ಟಿವಿ ಸ್ಕ್ರೀನೊಳಗ
ತೆಲಿ ಮ್ಯಾಲ ಕೈಹೊತ್ತ
ಆ್ಯಂಕರ ಓಡತಾಳ
ಮಿಸೈಲ್ ಹೊಡಿತದ
ಅಂತಾಳ
ಮೈಕ್ ಹಿಡದಕೊಂಡ
ಮೀಡಿಯ ಮಂದಿ
ಕತ್ಲಾಗ ಓಡ್ಯಾರ
ಕತ್ತಲ ಅವರೇ ಮಾಡ್ಯಾರ
ಮಂತ್ರಿಮಾಗಧರ
ಮೂತಿಗೆ ಮೈಕಿಟ್ಟು
ಮಾತಾಡ್ರಿ ಅಂದಾರ
ಅವರೋ
ಬೆಂಕೀನೆ ಉಗುಳ್ಯಾರ
ಬಡವರ ಮನಿಗಿ
ಹೆಣ ಬಂದಾವ
ನೋಡಾಕ ಬಂದಾರ
ಸೆಲ್ಯೂಟು ಹೊಡದಾ
ಹೋಗ್ಯಾರ
ನಗಬೇಕೊ ಅಳಬೇಕೊ
ಗೊತ್ತಾಗವಲ್ದು
ಈ ಕೇಡುಗಾಲದೊಳಗ
ಗುಂಡು ತಾಗಿ ಸತ್ತೋರು ಎಲ್ಲ
ಮನುಜ ಕುಲದ ಬಳಗ
ನಮ್ಮ
ಮನುಜ ಕುಲದ ಬಳಗ
ಷರೀಫ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಪದವಿ ಪಡೆದುಕೊಂಡಿದ್ದಾರೆ
‘ಕನಸಿನೂರಿನ ದಾರಿ’ ಪ್ರಕಟಿತ ಕವನ ಸಂಕಲನ
ಓದು, ಬರಹ, ಸಿನಿಮಾದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ