1.
ಕಫನಿನ ಬಟ್ಟೆ ಮೆತ್ತಗೆ ಸರಿಸಿ
ನೋಡಿದ ಕವಿ
ಕವಿತೆಯ ಕಣ್ಣು ಮುಚ್ಚಿತ್ತು
ಎಂದೂ ತೆರೆಯದ ಹಾಗೆ
ಅಕ್ಷರಗಳೆಲ್ಲ ನಿಶ್ಚಲ
ಬದುಕು ಕವಿತೆಯಾಗಿ
ಬಡ ತಾಯ ಎದೆಯ
ಕಿಡಿಗೆ ಅಕ್ಷರ ತಾಗಿ
ಚಿಮ್ಮಿ ಪ್ಯಾಲೆಸ್ತೀನಿನ ಆಕಾಶದಲ್ಲಿ
ಮಿಸೈಲಿನಿಂದಾಚೆ ಹಾರುವಾಗ
ಅವನ ಕಾವ್ಯಹೊತ್ತಿಗೆಗಳೆಲ್ಲ
ಬೆಂಕಿಗೆ ಹಾರಿ
ಆತ್ಮಹತ್ಯೆ ಮಾಡಿಕೊಂಡವು
ಲೇಖನಿ ಇಂಕು ಬತ್ತಿ ಸತ್ತಿತು
ಕಾಗದ ಬೆಂಕಿ ಹೊತ್ತಿ ಸುಟ್ಟಿತು
ಕೋಣೆ ತುಂಬ ಹರಡಿಕೊಂಡ
ಬೆಂಕಿಯ ನಡುವೆ
ಅವನು ಕನ್ನಡಕ ಮೂಗಿಗೊತ್ತಿ
ಬೆವರುತ್ತ ಬಾಗಿಲ ಚಿಲಕ ಹುಡುಕಿದ
ಅರಿವಾಗಿತ್ತು ಕವಿಗೆ
ಉರಿಬೆಂಕಿಯ ನಡುವೆ ಕೂತು
ಹೂವರಳುವ ಕವಿತೆ
ಬರೆಯಲಾಗದು
ಬೆಂಕಿಯ ಕೆನ್ನಾಲಿಗೆ
ಕಾಲಿಂದ ಕೊರಳು ಸುತ್ತುತ್ತ
ಮೈ ಕೈ ಎನ್ನದೆ
ಚರ್ಮ ಚರ್ಮಗಳ ಸುಟ್ಟು
ಕರಕಲಾಗಿಸುವಾಗ
ಕಾಲಕಾಲಕ್ಕೆ
ತುಟಿ ಹೊಲಿದು ಕೂತದ್ದನ್ನು
ನೆನಪಿಸಿಕೊಂಡ
ಇರುವ ದನಿಯೆಲ್ಲ ಬಳಸಿ
ಅರಚಾಡಿ ಕೂಗಿ
ಬಂಧು ಬಳಗವನೆಲ್ಲ ಕರೆದ
ಬೆಂಕಿ ನರ್ತನವಾಡುತ್ತಿತ್ತು
ಚೂರೂ ಸದ್ದು ಮಾಡದೆ
ಗಾಝಾದ
ಗಾಯಗೊಂಡ ಮಗುವೊಂದು
ಕಿಟಕಿ ಗಾಜಿನ ಮುಂದೆ ನಿಂತು
ನೋಡುತ್ತಲೇ ಇತ್ತು
ದುಃಖದಿಂದ ಯೋಚಿಸುತ್ತ
‘ಬೆಂಕಿ ಆರಿಸಲಾದರೂ
ನಮ್ಮ ಬಳಿ ನೀರಿರಬೇಕಿತ್ತು
ಕನಿಷ್ಟ
ಕಣ್ಣೀರಾದರೂ ಬತ್ತದೆ
ಚೂರು ಉಳಿದಿರಬೇಕಿತ್ತು’
2.
ಇನ್ಸ್ಟಾಗ್ರಾಮಿನ
ಯಾವುದೋ ಹುಡುಗಿ
ಕುಣಿಯುವುದು ನೋಡಿ
‘ನೀನು ಬ್ರಾ ಹಾಕಿಲ್ಲ’ವೆಂದು
ಕಮೆಂಟು ಹಾಕುತ್ತಾನೆ
ಹಿಹ್ಹೀ ಎನ್ನುವ ರೋಗಗ್ರಸ್ತ
ನಗೆಯ ಇಮೋಜಿಯೊಂದಿಗೆ
ಅವನೇ,
ಬುರ್ಖಾ ಧರಿಸಿ
ನಡೆದುಕೊಂಡು ಹೋಗುವ
ಹುಡುಗಿಯನ್ನು ನೋಡಿ
ಸಿಟ್ಟಿನಿಂದ ಗೊಣಗುತ್ತಾನೆ
ಮುಖವಾದರೂ ತೋರಿಸಬಾರದೆ
ಹೀಗೆಲ್ಲ ಮುಚ್ಚುವುದೇಕೆ
ಹೌದು ಅದೇ ವ್ಯಕ್ತಿ
ರೇಪ್ ಕೇಸಿನ ನ್ಯೂಸು
ಟಿವಿ ಪರದೆ ಮೇಲೆ
ಅಪ್ಪಳಿಸುವಾಗ
‘ಮತ್ತೆ ಹಾಗೆಲ್ಲ ಬಟ್ಟೆ ಹಾಕಿದರೆ
ಕೆರಳುವುದಿಲ್ಲವೇ ಯಾರೂ?
ಹುಡುಗರದೇನೂ ತಪ್ಪಿಲ್ಲ’ ಅಂತ
ಚೂರೂ ಕರಗದೆ
ತಲೆ ಎತ್ತಿ ನಿಂತು ಹೇಳುತ್ತಾನಲ್ಲ
ಇದಕಿಂತ ನೀಚತನ ಬೇರುಂಟೆ ಹೇಳಿ
3.
ನುಡಿಯೊಳಗಿರದೆ
ನಡೆದವರೆಲ್ಲ
ನುಡಿಸಲರಿಯದೆ
ಎತ್ತಿ ಎಸೆದರು
ಬಿದಿರ ಕೋಲೆಂದು
ನುಡಿ ಮರೆಯಿತ್ತು
ನುಡಿಸದ ದನಿ
ಒಳಗಿತ್ತು
ರಾಗರತಿಯ
ಉಸಿರೊಂದು
ಬೇಕಿತ್ತು
ನಾಕುತಂತಿ
ತಾಕಬೇಕಿತ್ತು
ಬಂದಳವಳು
ಬಂಧವಿರದೆ
ಕೃಷ್ಣಪ್ರಿಯೆ
ಮಗುವನೆತ್ತಿದಂತೆ
ಕರಗಳಲ್ಲಿ
ಬಿದಿರ ಕೊಳಲ
ತುಟಿಗೆ ತಾಕಿಸಿ
ಉಸಿರನೂದಿ
ನಿಂದಳು
ಕೊಳಲ
ಕೊರಳಾದಳು
ಹಾಡು ಹೊಮ್ಮಿ
ಚೈತ್ರ ಚಿಮ್ಮಿ
ಚಿತ್ತಾರ ಕೆತ್ತಿದಳು
ಭಾವ ಭಿತ್ತಿಯಿಂದ
ಬಾಳ ಬುತ್ತಿ
ತೆರೆವವರೆಗೆ
ತೆರೆ ಎಳೆಯದೆ
ತೇರನೆಳೆದು ತಂದಳು
ಬೆನ್ನ ಬಲವು
ಎನ್ನ ಒಲವು
ಮುನ್ನ ನೆಟ್ಟ
ನೋಟ ಹಲವು
ನನ್ನ ನಿಲುವು
ಅವಳ ನಿಲುಮೆ
ಬಲುಮೆಗದುವೆ
ಚೆಲುವು ಗೆಲುವು
ನಿನ್ನ ತುಟಿಯ
ಅಂಚಿನಲ್ಲಿ
ಉಸಿರ ಬಿಸಿಯ
ಹಂಚುವಲ್ಲಿ
ಮತ್ತುಗಣ್ಣ
ಒಳ ಮಿಂಚಿನಲ್ಲಿ
ಪ್ರೀತಿ ಸೆಲೆಯ
ಸಂಚು ಹೊಂಚಿನಲ್ಲಿ
ಸದಾ ಇರುವೆ
ಕೊಳಲಾಗಿ
ನುಡಿಸು ನೀನೆ
ಕೊರಳಾಗಿ
ಷರೀಫ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಎಂ.ಎ. ಪದವಿ ಪಡೆದುಕೊಂಡಿದ್ದಾರೆ
‘ಕನಸಿನೂರಿನ ದಾರಿ’ ಪ್ರಕಟಿತ ಕವನ ಸಂಕಲನ
ಓದು, ಬರಹ, ಸಿನಿಮಾದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ