ಉಳಿಸಬೇಕು

ಸಂಜೆ ಕೈದೋಟದಲ್ಲಿ ವಿಹರಿಸುವಾಗ
ಸೊಳ್ಳೆಯೊಂದು ನಳಿರ್ದೋಳಿನ ಮೇಲೆ
ಕುಳಿತು ಕಚ್ಚಿಬಿಡುವುದೇ?
ರಪಕ್ಕನೆ ಬಡಿದೆ ಬಡ್ಡಿಮಗಂದ್ ತಪ್ಪುಸ್ಕೊಂತು!
ಅಲ್ಲೇ ಕುಳಿತೆ ಕಲ್ಲುಬೆಂಚಿನ ಮೇಲೆ
ಕಟ್ಟೆಯ ಬದಿಯಲ್ಲಿ ಚ್ವಾರಟೆ ಹುಳುಗಳೆರಡು
ಸಮಾಗಮದಲ್ಲಿ ಬಂಧಿಯಾಗಿದ್ದವು
ಕಡ್ಡಿಯಿಂದ ಕಿತ್ತೆಸೆದೆ ಮಕ್ಕಳು ಮರಿಗಳಾಗಿ
ಸಂತತಿ ಅನಂತವಾದರೆ ರಗಳೆ
ಕಣ್ಣು ಹಾಯಿಸಿದೆ ಸುಂದರ ಹೂಬಿಟ್ಟ
ಗಿಡಗಳ ಮೇಲೆ ಹಾಗೇ ಪಾಟಿನ ಬುಡಕ್ಕೆ
ಬರೀ ಸಿಂಬಳದ ಹುಳಗಳ ಸಾಲು
ಪೊರಕೆಯಿಂದ ತಳ್ಳಿದರೆ ಮತ್ತಷ್ಟು
ಸಂಧಿಗೆ ನುಸುಳಿತು ಜೀವ ಭಯಕ್ಕೆ
ಅಬ್ಬಾ ಎಂಥಾ ಧಿಮಾಕು!!
ಪುಟಗೋಸಿ ಕ್ರಿಮಿಕೀಟಗಳಿಗೆ
ನಿರ್ವಂಶವಾಗಬೇಕು ಅಸಹ್ಯ ಸಂತಾನ
ಒಟ್ಟಾರೆ ಸ್ವಚ್ಛವಾಗಿ ಕಾಣಬೇಕು
ಇಲ್ಲಿ ಉಳಿಸಬೇಕು ಹುಲಿಯ ತಳಿ
ಬೆಳೆಸಬೇಕು ಆನೆಗಳ ಸರಪಳಿ
ಇರಲಿ ಸಿಂಹ ತೋಳ ಚಿರತೆ
ನರಿಗಳು ಆರಾಮವಾಗಿ ವಿಹರಿಸಬೇಕು
ಆಗೀಗ ಕಣ್ಣು ತಂಪಿಗೆ ಜಿಂಕೆ ನವಿಲು
ಸೂರ್ಯೋದಯ ಮಂಜು ಕರಿಮುಗಿಲು
ಹೀಗೆ ಯೋಚಿಸುತ್ತಾ ಒಳಬಂದೆ
ಟಿವಿಯಲ್ಲಿ ನಿರೂಪಕಿ ಪೇಚಾಡುತ್ತಿದ್ದಳು
ಅದಾನಿ ಎರಡನೇ ಶ್ರೀಮಂತ ಸ್ಥಾನದಿಂದ
ಮೂರಕ್ಕಿಳಿದನಂತೆ!!!
ಛೆ ಅವನು ಮೊದಲನೆ ಸ್ಥಾನಕ್ಕೇರಲು
ದೇಶದ ಕೀರ್ತಿ ಪತಾಕೆ ಎತ್ತಿ ಹಿಡಿಯಲು
ನಿರಂತರ ಶ್ರಮಿಸಬೇಕು ನಾವೆಲ್ಲ..
ಇದೋ ಭಾರತವೊಂದು ಹುಂಡಿಡಬ್ಬ!
ನೆಮ್ಮದಿಯ ನಿದ್ದೆ ಕನಸಿನಲ್ಲಿ ಕಟ್ಟಿದೆ ಗರ್ಭ!

ಶಾಂತಾಕುಮಾರಿ ಲೇಖಕಿ ಮತ್ತು ಉದ್ಯಮಿ
ಪತ್ರಕರ್ತೆ ಮತ್ತು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ
“ಮುಟ್ಟು” (ಕಥಾಸಂಕಲನ), “ಇನಿಯನ ಪದಗಳು” ಮತ್ತು “ದಹನ” (ಕವನ ಸಂಕಲನಗಳು) ಪ್ರಕಟಿತ ಕೃತಿಗಳು