ಎದುರು ಮನೆಯಾದ್ದರಿಂದ ಗೃಹ ಕೆಲಸಗಳನ್ನು ಮಾಡುವಾಗ ಬರುತ್ತಿದ್ದರು. ಅವರು ನನ್ನ ದಡ್ಡತನಕ್ಕೊಂದು ಬೇರೆ ರೂಪವನ್ನೆ ಕೊಟ್ಟರು. ಪ್ರತಿದಿನವು ಪಕ್ಕದಲ್ಲೆ ಕೂರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸಿದರು. ನಾನು ಹಠಕ್ಕೆ ಬಿದ್ದವನಂತೆ ಕಲಿತೆ. ಅದೊಂದು ತಪಸ್ಸು ಎನ್ನುವಂತೆ ಕಲಿತುಕೊಂಡೆ. ಅಲ್ಲಿಂದ ನನ್ನಲ್ಲಿ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿತು. ಓದುವುದನ್ನು ಬಹಳ ಬೇಗನೆ ಕಲಿತಿದ್ದೆ. ಅಷ್ಟರಲ್ಲಾಗಲೇ ಒಂದನೆ ತರಗತಿಯ ಪುಸ್ತಕದ ಆರು ಪಾಠಗಳು ಮುಗಿದು ಹೋಗಿದ್ದವು. ಏಳನೆಯ ಪಾಠವೆ ‘ಚರಕ’ ಗಾಂಧೀಜಿಯವರ ಆದರ್ಶದ ಪ್ರತಿಬಿಂಬದಂತಿದ್ದ ನಮ್ಮ ಉಡುಪುಗಳನ್ನು ನಾವೆ ತಯಾರಿಸಿಕೊಳ್ಳಬೇಕು ಎನ್ನುವ ಸೂಚಕವಾಗಿ ನೂಲು ನೇಯುತಿದ್ದ ಚರಕದ ಮುಂದೆ ಕುಳಿತಿದ್ದ ಚಿತ್ರ ನಮ್ಮನ್ನು ಆಕರ್ಷಿಸಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಎರಡನೆ ಕಂತು

ಅಂತೂ ಶಾಲೆಗೆ ಪ್ರವೇಶ ಪಡೆದದ್ದಾಯಿತು. ಆಗಿನ ಶಾಲೆಯೂ ಅಷ್ಟೆ ಬಣ್ಣದ ಸೋಂಕಿಲ್ಲದೆ ಊರಿನ ಕೋಟೆ ಬುರುಜಿನ ಪಕ್ಕದಲ್ಲೆ ಕಟ್ಟಿದ ಕಲ್ಲನ್ನು ಹಾಗೂ ಮಣ್ಣನ್ನು ಬಳಸಿಯೆ ಕಟ್ಟಿದ ಕಟ್ಟಡ ನನ್ನಜ್ಜನ ಕಾಲದ್ದು ಅದು ಊರ ಹೆಬ್ಬಾಗಿಲಿನ ಪಕ್ಕದಲ್ಲೆ ಇತ್ತು. ಮನೆಗಳು ಹೇಗಿದ್ದವೋ ಹಾಗೆಯೇ ಇಸ್ಕೂಲಿನ ಕಟ್ಟಡವೂ ಇತ್ತು. ಅದನ್ನು ‘ಮಠ’ ಎಂದೆ ಕರೆಯುತ್ತಿದ್ದರು. ಆಗೆಲ್ಲ ನಾವು ಸಹ ಮಠ ಎನ್ನುವುದೆ ವಾಡಿಕೆ. ನಾನು ಆ ಮಠಕ್ಕೆ ಹೋಗಬೇಕಾದ್ದರಿಂದ ಇಷ್ಟೆಲ್ಲ ಬಿಡಿಸಿ ಹೇಳಬೇಕಾಯಿತು. ಶಾಲೆಗೆ ಪ್ರವೇಶ ಪಡೆದು ನಾಲ್ಕೈದು ದಿವಸಗಳ ನಂತರವೇ ನಾನು ಶಾಲೆಗೆ ಹಾಜರಾಗಿದ್ದು, ಅದಕ್ಕೆ ಬೇರೆ ಕಾರಣವೇನು ಇರಲಿಲ್ಲ. ಮೈತುಂಬ ಬಟ್ಟೆಯನ್ನೆ ಕಾಣದ ದೇಹಕ್ಕೊಂದು ‘ಅಂಗಿ’ ಹೆಸರಿನ ಹೊದಿಕೆಯು ಬೇಕಾಗಿದ್ದರಿಂದ ಅಪ್ಪನ ಕೃಪಕಟಾಕ್ಷದಿಂದ, ಶಾಲೆಯ ಕಾರಣಕ್ಕೆ ‘ಹೊಸಂಗಿ’ಯು ಸಿಕ್ಕಿತು. ಅದನ್ನು ಹಾಕಿಕೊಂಡೆ ಶಾಲೆಗೆ ಹೊರಟೆನು. ನನ್ನ ಓರಗೆಯವರು ಆಗಲೆ ನಾಲ್ಕೈದು ದಿನಗಳಿಂದ ಶಾಲೆಗೆ ಬರುತ್ತಿದ್ದರು. ಅದೊಂದು ಬೇರೆ ಲೋಕದಂತೆ ಕಂಡರೂ ಸ್ಥಳದ ಅಭಾವದಿಂದ ಒಂದೆ ಕೋಣೆಯಲ್ಲಿ ಪೂರ್ವಕ್ಕೆ ಅಭಿಮುಖವಾಗಿ ಮೂರು ನಾಲ್ಕನೆ ತರಗತಿ ಪಶ್ಚಿಮಕ್ಕೆ ಅಭಿಮುಖವಾಗಿ ಒಂದು ಎರಡನೆಯ ತರಗತಿಯ ಮಕ್ಕಳು ಕುಳಿತಿರುತಿದ್ದರು. ಒಂದೆ ಕೋಣೆಯಲ್ಲಿ ನಾಲ್ಕು ತರಗತಿಗೂ ಪಾಠವನ್ನು ಹೇಳುವ ಸೌಭಾಗ್ಯ ದೌರ್ಭಾಗ್ಯ ಶಿಕ್ಷಕರದಾದರೆ ಕೇಳುವ ಸೌಭಾಗ್ಯ ದೌರ್ಭಾಗ್ಯ ನಮ್ಮದೂ ಆಗಿತ್ತು. ಸಗಣಿ ಬಳಿದ ನೆಲದ ಮೇಲೆಯೇ ಕುಳಿತುಕೊಳ್ಳಬೇಕಾಗಿತ್ತು. ಮೊದಲ ದಿನವೆ ಕನ್ನಡದ ಮೊದಲ ‘ಅ’ ಅಕ್ಷರ ಸ್ಲೇಟಿನ ಮೇಲೆ ಮೂಡಿದಂತೆಲ್ಲಾ ಖುಷಿಯೋ ಖುಷಿ.

ನರಸಿಂಹಯ್ಯ ಮೇಷ್ಟ್ರು ನಮಗೆ ಪಾಠ ಮಾಡುತ್ತಿದ್ದರು. ಅಷ್ಟೇನೂ ಆಡಂಬರವಿಲ್ಲದ ಅಂಗಿ ಪಂಜೆ, ಕಾಲಿಗೆ ಒಂಟಿರೆಕ್ಕೆಯ ರಬ್ಬರಿನ ಚಪ್ಪಲಿಯನ್ನು ಹಾಕಿಕೊಂಡು ಒಂದು ಬಡ ಸೈಕಲ್ಲಿನ ಮೇಲೆ ಸಾಮಾನ್ಯರಂತೆ ಬರುತ್ತಿದ್ದರು. ಬಾಯಿ ಮಾತಿನಲ್ಲಿ ಗದರುವ, ಅವಾಗೊಂದು ಇವಾಗೊಂದು ಕೋಲಿನ ರುಚಿಯನ್ನು ಉಣಬಡಿಸುತಿದ್ದ ಅವರನ್ನು ನೋಡಿದರೆ ಯಾರಿಗಾದರೂ ಗೌರವ ಬರಬೇಕು ಎನ್ನುವಂತಿದ್ದರು. ಒಂದರಿಂದ ನಾಲ್ಕನೆ ತರಗತಿಗೆ ಪಾಠ ಹೇಳುತ್ತಿದ್ದ ಅವರು ಸಿಟ್ಟಿಗೆದ್ದುದನ್ನು ನೋಡಿರಲಿಲ್ಲ. ಅವರಲ್ಲೊಂದು ಮುಗ್ಧತೆ ಇತ್ತು. ವಿಮಾನವೆಂದರೆ ಏನೆಂದು ತಿಳಿಯದ ಅನೇಕ ಕುತೂಹಲಕ್ಕೆ ಕಾರಣವಾಗಿದ್ದ ಕಾಲವದು. ಆಕಾಶದಲ್ಲಿ ಅಪರೂಪಕ್ಕೊಮ್ಮೆ ಅದರ ಶಬ್ದ ಕೇಳಿದರೆ ನಾವೆಲ್ಲ ತರಗತಿಯಿಂದ ಹೊರಬಂದು ನೋಡುತಿದ್ದೆವು. ಅವರೂ ನಮ್ಮ ಜೊತೆಯಲ್ಲಿಯೆ ಬಂದು ಮಕ್ಕಳಾಗಿ ನಡೆದುಕೊಳ್ಳುತಿದ್ದರು. ಶಬ್ದ ಕೇಳಿದರೆ ಸಾಕು ಅವರೆ ಮೊದಲು “ಈರಪ್ಪಂಪಿಳ್ಳೆ ಬಂತು ಈರಪ್ಪಂಪಿಳ್ಳೆ ಬಂತು” ಎಂದು ಓಡಿ ಬಂದು ನೋಡುತಿದ್ದರು. ಏರೋಪ್ಲೇನನ್ನು ಹಾಸ್ಯವಾಗಿ ಹೀಗೆ ಕರೆಯುತ್ತಿದ್ದರು. ಒಮ್ಮೊಮ್ಮೆ ವಿಮಾನಗಳು ಹೋಗುವಾಗ ಭಯಂಕರ ಕರ್ಕಶ ಧ್ವನಿ ಮಾಡಿಕೊಂಡು ಹೋಗುತ್ತಿದ್ದುದು ಉಂಟು. ಒಮ್ಮೆಯಂತೂ ಆ ಶಬ್ದಕ್ಕೆ ಹೆದರಿ ಭೂಕಂಪನದ ಶಬ್ದ ಎಂದೆ ಶಾಲೆಯಿಂದ ಹೊರಕ್ಕೆ ಓಡಿ ಬಂದಿದ್ದೆವು. ಮೇಷ್ಟ್ರು ಹಾಗೆ ಕರೆದಾಗಲೆಲ್ಲಾ ಅಲ್ಲೊಂದು ಹಾಸ್ಯದ ವಾತಾವರಣ ಉಂಟಾಗುತ್ತಿತ್ತು.

ಅಕ್ಷರದ ತಿದ್ದುವಿಕೆ ಸ್ಲೇಟು ಬಳಪದೊಂದಿಗೆ ನಡೆಯುತ್ತಲೇ ಇತ್ತು. ಏನು ಕಲಿತೆವೊ ಬಿಟ್ಟೆವೊ, ಶಾಲೆಯಂತು ನಮಗೆ ಆಪ್ತವಾಗಿತ್ತು. ಆಗಾಗ ಜಗಳ ಗಲಾಟೆ ಮಾಡುತಿದ್ದೆವಾದರೂ ನರಸಿಂಹಯ್ಯ ಮೇಷ್ಟ್ರ ಕೋಲು ನಮ್ಮನ್ನು ಸುಮ್ಮನಿರಿಸುತಿತ್ತು. ಮೊದ ಮೊದಲು ಏನು ಕಲಿತಿದ್ದೀವಿ ಎಂದೆ ತಿಳಿಯದೆ ಗೊಂದಲಕ್ಕೆ ಒಳಗಾಗಿದ್ದು ನಿಜವೇ. ನನಗಂತೂ ಮೇಷ್ಟ್ರ ಕೈಯಿಂದ ಏಟುಗಳು ಬಿದ್ದೆ ಬೀಳುತ್ತಿದ್ದವು. ನನಗೆ ಸರಿಯಾಗಿ ಪಾಠ ಓದಲು ಬರುತ್ತಿರಲಿಲ್ಲ. ಅವರು ಬಿಡುತ್ತಿರಲಿಲ್ಲ. ಪುಸ್ತಕ ಹಿಡಿದರೆ ಸಾಕು ಧಾರಾಕಾರವಾಗಿ ಕಣ್ಣಿನಿಂದ ನೀರು ಸುರಿಯುವುದು ಸಾಮಾನ್ಯವಾಗಿತ್ತು. ಓದುವಾಗಲೆಲ್ಲ ಭಯಕ್ಕೋ ಅಥವಾ ಅಕ್ಷರದ ಜ್ಞಾನವಿಲ್ಲದಕ್ಕೋ ತುಂಬಾ ತಡವರಿಸುತಿದ್ದೆ. ಆಗೆಲ್ಲಾ ತಲೆ ಜುಮ್ಮೆನ್ನುವಂತೆ ‘ಏಟು’ ಬೀಳುತ್ತಿತ್ತು. ಇಲ್ಲ ಕೆನ್ನೆಗೆ ‘ಪಟಾರ್’ ಎಂದೆ ಬಾರಿಸುತಿದ್ದರು. ನನಗೂ ಒದೆ ತಿಂದು ತಿಂದು ರೂಢಿಯಾಗಿತ್ತು “ಹುಟ್ದಡ್ಡ, ಮೂರ್ಖ ಇವನು ಉದ್ಧಾರಾಗಲ್ಲ ಏನುಕ್ಕೆ ಮಠಕ್ಕೆ ಬತ್ತವೊ” ಇಂತಹ ಬೈಗುಳಗಳ ಸುರಿಮಳೆಯಾಗುತ್ತಿತ್ತು. ಅವಾಗಲೆಲ್ಲ ಕಣ್ಣೀರು ಉತ್ತರವಾಗಿತ್ತೆ ಹೊರತು ಬೇರೆ ಯಾವ ದಾರಿಯೂ ಇರಲಿಲ್ಲ. ನನಗೂ ಕಲಿಯಬೇಕೆಂಬ ಹಠವೇನೊ ಇತ್ತು. ಹೇಳಿಕೊಡುವವರು ಯಾರು? ಮನೆಯಲ್ಲಿ ಕುಳಿತು ಹೇಳಿಕೊಡುವಷ್ಟು ವ್ಯವಧಾನ ಯಾರಿಗೂ ಇರಲಿಲ್ಲ. ಬದುಕಿನ ಬಂಡಿಯನೆಳೆಯಲು ಅವರವರ ಕೆಲಸ ಮಾಡುವುದು ಅಗತ್ಯವೂ ಇತ್ತು. ಹಾಗಾಗಿ ನಾನು ಅಕ್ಷರ ತಲೆಗೆ ಹತ್ತದ ದಡ್ಡನಾಗೆ ಉಳಿಯಬೇಕಾಯ್ತ ಅನ್ನುವಾಗಲೆ ‘ಸಾಯುವ ಕ್ಷಣದಲ್ಲೂ ಗುಟುಕು ನೀರು ಮರುಜೀವಕ್ಕೆ ಕಾರಣವಾಗುವಂತೆ, ನೀರಿನಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಯಾಗುವಂತೆ, ಸತತಸೋಲಿನ ನಡುವೆಯೂ ಗೆಲುವಿನ ಮಿಂಚೊಂದು ಸುಳಿದು ಗೆಲುವು ಪಡೆವಂತೆ, ಕತ್ತಲಕೂಪದಲ್ಲಿ ದಾರಿತಪ್ಪಿದವನಿಗೆ ದೀಪವೊಂದು ದಾರಿಯಾಗುವಂತೆ ನನಗೊಬ್ಬ ಗುರುವು ಸಿಕ್ಕಿದ ವೃತ್ತಿಯಲ್ಲಿ ಗುರುವಲ್ಲದಿದ್ದರೂ “ವರ್ಣ ಮಾತ್ರಂ ಕಲಿಸಿದಾತಂ ಗುರು” ಎನ್ನುವಂತೆ ಅಕ್ಷರದ ಅನ್ನವ ಉಣಬಡಿಸಿದ ಆ ನನ್ನ ಗುರು ನಮ್ಮ ಮನೆಯ ಮುಂದಿನ ಮನೆಯಲ್ಲೆ ವಾಸಿಸುತ್ತಿದ್ದ.

ಒಂದೆ ಕೋಣೆಯಲ್ಲಿ ನಾಲ್ಕು ತರಗತಿಗೂ ಪಾಠವನ್ನು ಹೇಳುವ ಸೌಭಾಗ್ಯ ದೌರ್ಭಾಗ್ಯ ಶಿಕ್ಷಕರದಾದರೆ ಕೇಳುವ ಸೌಭಾಗ್ಯ ದೌರ್ಭಾಗ್ಯ ನಮ್ಮದೂ ಆಗಿತ್ತು. ಸಗಣಿ ಬಳಿದ ನೆಲದ ಮೇಲೆಯೇ ಕುಳಿತುಕೊಳ್ಳಬೇಕಾಗಿತ್ತು. ಮೊದಲ ದಿನವೆ ಕನ್ನಡದ ಮೊದಲ ‘ಅ’ ಅಕ್ಷರ ಸ್ಲೇಟಿನ ಮೇಲೆ ಮೂಡಿದಂತೆಲ್ಲಾ ಖುಷಿಯೋ ಖುಷಿ.

ಎದುರು ಮನೆಯಾದ್ದರಿಂದ ಗೃಹ ಕೆಲಸಗಳನ್ನು ಮಾಡುವಾಗ ಬರುತ್ತಿದ್ದರು. ಅವರು ನನ್ನ ದಡ್ಡತನಕ್ಕೊಂದು ಬೇರೆ ರೂಪವನ್ನೆ ಕೊಟ್ಟರು. ಪ್ರತಿದಿನವು ಪಕ್ಕದಲ್ಲೆ ಕೂರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸಿದರು. ನಾನು ಹಠಕ್ಕೆ ಬಿದ್ದವನಂತೆ ಕಲಿತೆ. ಅದೊಂದು ತಪಸ್ಸು ಎನ್ನುವಂತೆ ಕಲಿತುಕೊಂಡೆ. ಅಲ್ಲಿಂದ ನನ್ನಲ್ಲಿ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿತು. ಓದುವುದನ್ನು ಬಹಳ ಬೇಗನೆ ಕಲಿತಿದ್ದೆ. ಅಷ್ಟರಲ್ಲಾಗಲೇ ಒಂದನೆ ತರಗತಿಯ ಪುಸ್ತಕದ ಆರು ಪಾಠಗಳು ಮುಗಿದು ಹೋಗಿದ್ದವು. ಏಳನೆಯ ಪಾಠವೆ ‘ಚರಕ’ ಗಾಂಧೀಜಿಯವರ ಆದರ್ಶದ ಪ್ರತಿಬಿಂಬದಂತಿದ್ದ ನಮ್ಮ ಉಡುಪುಗಳನ್ನು ನಾವೆ ತಯಾರಿಸಿಕೊಳ್ಳಬೇಕು ಎನ್ನುವ ಸೂಚಕವಾಗಿ ನೂಲು ನೇಯುತಿದ್ದ ಚರಕದ ಮುಂದೆ ಕುಳಿತಿದ್ದ ಚಿತ್ರ ನಮ್ಮನ್ನು ಆಕರ್ಷಿಸಿತ್ತು. ಸ್ವದೇಶಿಯತೆಯನ್ನು ಸಾಂಕೇತಿಸುವ ಗುಡಿಕೈಗಾರಿಕೆಯ ಅರಿವಿನ ಪಾಠವಾಗಿತ್ತು. ಅದನ್ನು ಈತ ಓದುತ್ತಾನೆಯೇ ಎಂದು ಎಲ್ಲರೂ ಕುತೂಹಲ ಗಾಬರಿಯಿಂದ ನೋಡುತಿದ್ದರು. ನೀರು ಕುಡಿದಷ್ಟೆ ಸಲೀಸಾಗಿ ಪಾಠವ ಓದಿದ್ದೆ. ನನ್ನ ಕಲಿಕೆಯಲ್ಲಿನ ತೊಡಗುವಿಕೆ ನಿರಂತರವಾಯಿತು. ನಾಳೆ ಮಾಡುವ ಪಾಠವನ್ನು ಇಂದೆ ಓದಿಕೊಂಡು ಶಾಲೆಯಲ್ಲಿ ಎಲ್ಲರ ಮುಂದೆ ಶಹಬ್ಬಾಸ್ ಗಿರಿ ಪಡೆಯುವಷ್ಟು ಪ್ರವೀಣನಾದೆ. ನಾನು ಪಾಠ ಓದಲು ನಿಲ್ಲುತ್ತಿದ್ದಂತೆ ನಗುವುದಕ್ಕೆ ಪ್ರಾರಂಭಿಸುತಿದ್ದವರೆಲ್ಲ ‘ಗಪ್ ಚುಪ್’ ಆದರು. ಮೇಷ್ಟ್ರಿಗೂ ಆಶ್ಚರ್ಯ, “ಇವನು ಯಂಗೆ ಓದ್ತನೆ…” ಅಂದುಕೊಂಡಿದ್ದ ಅವರಿಗೂ ಖುಷಿಯಾಗಿತ್ತು. ‘ಚರಕ’ದಿಂದ ಪ್ರಾರಂಭವಾದ ನನ್ನ ಕಲಿಕಯಾನ ಮುಂದಿನ ಯಾವ ತರಗತಿಯಲ್ಲೂ ಅದನ್ನು ಹುಸಿಗೊಳಿಸಲಿಲ್ಲ. ನನ್ನಲ್ಲೊಂದು ಅಕ್ಷರದ ಅರಿವಿಗೆ ಕಾರಣವಾದ ಕಿಟ್ಟಪ್ಪನ ಕಲಿಸುವಿಕೆಯನ್ನು ಮರೆಯುವುದಿಲ್ಲ.

ಓದು ನನ್ನಲ್ಲೊಂದು ಆತ್ಮವಿಶ್ವಾಸವನ್ನು ತಂದಿತ್ತು. ಶಾಲೆಯೆಂದರೆ ಹಿಂಜರಿಯುತಿದ್ದ ನಾನು ಪ್ರತಿದಿನವೂ ತಪ್ಪದೆ ಶಾಲೆಗೆ ಹೋಗುತ್ತಿದ್ದೆನು. ಏಕೆಂದರೆ ಚೆನ್ನಾಗಿ ಓದುತ್ತಾನೆ ಎಂಬ ಹೊಗಳಿಕೆಯು ಉತ್ಸಾಹಕ್ಕೆ ಕಾರಣವಾಗಿತ್ತು. ಎಂದಿನಂತೆ ಅವತ್ತು ಸಹ ಶಾಲೆಗೆ ಹೋಗಿದ್ದೆ. ಪ್ರಾರ್ಥನೆ ಮುಗಿಸಿ ಒಳಹೋದ ನಮಗೆ ಒಂದು ರೀತಿಯ ಶಾಕ್ ಆಗಿತ್ತು. ಇಡಿ ಶಾಲೆಯೆ ಗಬ್ಬುವಾಸನೆ ಹೊಡೆಯುತಿತ್ತು. ಎಲ್ಲರೂ ಮೂಗು ಮುಚ್ಚಿಕೊಂಡು ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುವುದಕ್ಕೆ ಶುರುಮಾಡಿದೆವು. ಇದಕ್ಕೆ ನಾವು ಗೆಳೆಯರಾರು ಕಾರಣವಲ್ಲ ಎಂಬಂತಿತ್ತು ಅವರ ಮುಖಭಾವ. ಕಾಲಿನ ಹೆಬ್ಬೆರಳನ್ನು ಮೂಗಿಗೆ ತಾಕಿಸಿಕೊಂಡರೆ ವಾಸನೆಯೆ ಇರುವುದಿಲ್ಲ ಎಂದು ಮೂಗಿಗೆ ತಾಕಿಸಿದ್ದಾಯಿತು. ಅದೊಂದು ಹುಡುಗಾಟವಷ್ಟೆ. ಏನಿರಬಹುದೆಂದು ಶಾಲೆಯ ಒಳಗೆ ಎಲ್ಲಾ ಹುಡುಕಿದೆವು. ಯಾವ ಸುಳಿವು ಸಿಗಲಿಲ್ಲ. ಅದು ಬಹಳ ಹಳೆಯ ಕಟ್ಟಡವಾದ್ದರಿಂದ ಗೋಡೆಯ ಸುತ್ತ ಅಲ್ಲಲ್ಲಿ ಹೆಗ್ಗಣದ ಬಿಲಗಳು ಕಾಣಿಸುತಿದ್ದವು. ಶಾಲೆಗೆ ಒಂದೆರಡು ದಿನ ರಜೆ ಬಿಟ್ಟರೆ ಸಾಕು. ಮಣ್ಣನ್ನು ಎತ್ತಿಹಾಕುವುದೆ ಒಂದು ಕೆಲಸವಾಗುತಿತ್ತು. ಹೀಗಾಗಿ ಬಿಲದಲ್ಲಿ ಏನಾದರೂ ಸತ್ತಿರಬಹುದೆ ಎಂದು ನೋಡಿದರು. ಕಪ್ಪುಹಲಗೆಯ ಹಿಂಬದಿಯಲ್ಲಿದ್ದ ಬಿಲದಿಂದ ಕೆಟ್ಟವಾಸನೆ ಬರುವುದು ಖಾತ್ರಿಯಾಯಿತು.

ನರಸಿಂಹಯ್ಯ ಮೇಷ್ಟ್ರಿಗೆ ವಿಷಯ ತಿಳಿಸಿದೆವು. ಅವರು ಬಂದು ಬಿಲದಲ್ಲಿ ಹಾವುಗಳು ಸೇರಿಕೊಂಡಿದ್ದರೆ ಎಂದು ಎಲ್ಲಾ ಮಕ್ಕಳನ್ನು ಶಾಲೆಯ ಹೊರಗಡೆ ಕಳಿಸಿದ್ದರು. ನಾಲ್ಕನೆ ತರಗತಿ ಮಕ್ಕಳನ್ನು ಕರೆಸಿ ಕೋಲಿನಿಂದ ನಿಧಾನವಾಗಿ ನೋಡುತ್ತಿದ್ದರು ಇದ್ದಕ್ಕಿದ್ದಂತೆ ಅದರೊಳಗಿಂದ ಹೆಗ್ಗಣವೊಂದು ಪಣಗ್ಗನೆ ಎಗರಿ ಓಡಿಹೋಯಿತು. ಬಗ್ಗಿ ನೋಡುತ್ತಾರೆ… ಅಲ್ಲೆಲ್ಲ ಸತ್ತಕೋಳಿಯ ಅವಶೇಷಗಳು ಕಂಡುಬಂದವು. ಅದು ಎರಡು ಮೂರುದಿನ ಶಾಲೆ ಇಲ್ಲದ ಕಾರಣ ಕೊಳೆತು ನಾರುತಿತ್ತು. ಅದೇ ಗಬ್ಬುವಾಸನೆಗೆ ಕಾರಣವಾಗಿತ್ತು. ಅದನ್ನೆಲ್ಲಾ ಮುಚ್ಚಿ ಮೇಲೆ ಮಣ್ಣನ್ನು ಹಾಕಿ ಸಮಗೊಳಿಸಿ ಸಗಣಿಯನ್ನು ಬಳಿದರು. ಈಗಲೂ ಸಹ ನೆನಪಿಸಿಕೊಂಡರೆ ಅಂದಿನ ಶಾಲೆಗಳ ಸ್ಥಿತಿ ಹೇಗಿತ್ತು ಅನಿಸದೆ ಇರದು.

ಇದಾದ ಒಂದೆರಡು ವರ್ಷಕ್ಕೆ ಆ ಶಾಲೆಯ ಹಿಂಭಾಗದಲ್ಲಿದ್ದ ಸರ್ಕಾರಿ ಜಮೀನಿನಲ್ಲಿ ಒಂದು ಶಾಲಾಕೊಠಡಿ ನಿರ್ಮಾಣವಾಗಿ ಎಲ್ಲರನ್ನು ಹೊಸ ಕಟ್ಟಡಕ್ಕೆ ಕಳಿಸಲಾಯಿತು. ಮಠವಾಗಿದ್ದ ಶಾಲೆ ನಾವು ಅಲ್ಲಿಂದ ಬಂದಮೇಲೆ ಬಹಳ ವರ್ಷಗಳವರೆಗೂ ಹಾಗೆಯೆ ಪಾಳುಬಿದ್ದು ಮಳೆಗೆ ನೆಂದು ನೆಂದು ಒಂದುದಿನ ಬಿದ್ದೆಹೋಯ್ತು. ಇವತ್ತು ಅಂದು ಮಠವಿದ್ದ ಸ್ಥಳ ಸಮತಟ್ಟಾಗಿದೆ ಅದರ ಯಾವ ಕುರುಹುಗಳು ಈಗ ಉಳಿದಿಲ್ಲ. ಅಲ್ಲಿ ನಡೆದಾಡುವಾಗೆಲ್ಲಾ ಅದರ ನೆನಪು ಕಾಡದೆ ಇರದು. ಮಳೆ ಬಂದಾಗಲೆಲ್ಲಾ ಜೀವ ಹಿಡಿದು ಕಟ್ಟಡದ ಒಳಗೆ ಕೂರುತ್ತಿದ್ದ ದೃಶ್ಯ ಬಾಧಿಸದೆ ಇರದು. ಬಾಲ್ಯದ ತುಂಟಾಟಗಳು ಒಂದಿಷ್ಟು ಖುಷಿಯನ್ನು ನೀಡುತ್ತದೆ. ಕಟ್ಟಡ ಯಾವುದಾದರೇನು ಅಂದು ನಮಗೆ ಅದೇ ದೇವಾಲಯವಾಗಿತ್ತು. ಅಕ್ಷರದ ಅರಿವಿನ ಮಂಟಪವಾಗಿತ್ತು. ಅದಷ್ಟೆ ಸಾಕಲ್ಲವೇ ಜೀವನಪ್ರೀತಿಗೆ ಬದುಕಿನ ಸುಂದರತೆಗೆ. ಅಂತೂ ಹೊಸ ಕಟ್ಟಡಕ್ಕೆ ಬರುವಷ್ಟರಲ್ಲಿ ನರಸಿಂಹಯ್ಯ ಮೇಷ್ಟ್ರು ನಮ್ಮ ಶಾಲೆಯನ್ನು ಬಿಟ್ಟಿದ್ದರು. ಹೊಸ ಕಟ್ಟಡಕ್ಕೆ ಹೊಸ ಮೇಷ್ಟ್ರು ಬಂದಿದ್ದರು.

(ಮುಂದುವರಿಯುವುದು…)