ಒಂಬತ್ತನೇ ಕ್ಲಾಸಲ್ಲಿ ನಾನು ಸಾಕಷ್ಟು ಓದುತ್ತಿದ್ದೆ. ಈ ಓದಿನ ಫಲ ನನಗೆ ಫಲಿತಾಂಶದಲ್ಲಿ ಸಿಕ್ಕಿತ್ತು. ಮೂರೂ ಸೆಕ್ಷನ್‌ಗಳಿಗೂ ಸೇರಿ ಕೊಡುತ್ತಿದ್ದ ರ್ಯಾಂಕಿನಲ್ಲಿ ನನಗೆ ಎರಡನೇ ರ್ಯಾಂಕ್ ಲಭಿಸಿತ್ತು. ಕನ್ನಡ ಮೀಡಿಯಂನ ಶಿವಶಂಕರ್ ಪ್ರಥಮ ರ್ಯಾಂಕ್ ಪಡೆದಿದ್ದ. ನನಗೆ ಎರಡು ಅಂಕಗಳಲ್ಲಿ ಪ್ರಥಮ ರ್ಯಾಂಕ್ ಮಿಸ್ಸಾಗಿತ್ತು. ಇದರ ಬಗ್ಗೆ ಅಷ್ಟು ಫೀಲ್ ಆಗಿರಲಿಲ್ಲ. ಆದರೆ ಯಾವಾಗ ಗಣೇಶನ ಹಬ್ಬದಲ್ಲಿ ಮೊದಲ ರ್ಯಾಂಕ್ ಬಂದವರಿಗೆ ಬಹುಮಾನವಾಗಿ ನೂರು ರೂಪಾಯಿ ಕೊಟ್ಟಾಗ ತುಂಬಾ ಬೇಸರವಾಗಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ
ಒಂಬತ್ತನೇ ತರಗತಿಯಲ್ಲಿದ್ದಾಗ ಕೆಲವರು ಬೇರೆ ಶಾಲೆಯಿಂದ ಬಂದು ನಮ್ಮ ಶಾಲೆಗೆ ಸೇರಿದರು. ಅದರಲ್ಲಿ ರಮೇಶ(ಹೆಸರು ಬದಲಿಸಲಾಗಿದೆ) ಅನ್ನೋ ಒಬ್ಬ ಹುಡುಗ ಸೇರಿದ್ದ. ಇರೋ ವಿದ್ಯಾರ್ಥಿಗಳಲ್ಲಿ ತುಂಬಾ ಶ್ರೀಮಂತ ಮನೆತನದಿಂದ ಬಂದವನು ಅಂತಾ ಅವನನ್ನು ನೋಡಿದ್ರೆ ಅನಿಸೋದು. ಕೆಲವೊಮ್ಮೆ ಅವರ ಮನೆಯಿಂದ ಅವನನ್ನು ನೋಡೋಕೆ ಬಂದಾಗ ಅವರು ಧರಿಸುತ್ತಿದ್ದ ಮಾಡರ್ನ್ ಡ್ರೆಸ್‌ಗಳು, ಬರುತ್ತಿದ್ದ ಕಾರನ್ನು ನೋಡಿ ಅವನಿಗೆ ತುಂಬಾ ಗೌರವ ಕೊಡುತ್ತಿದ್ದರು. ಅವನು ಇಂಗ್ಲೀಷ್‌ನಲ್ಲಿಯೇ ಮಾತಾಡುತ್ತಿದ್ದನು. ನಮ್ ಮೇಷ್ಟ್ರುಗಳು ಅವನ ಜೊತೆ ಕನ್ನಡದಲ್ಲಿ ಮಾತನಾಡಿಸುತ್ತಿರಲಿಲ್ಲ. ಅದರಲ್ಲೂ ನಮ್ಮ ಇಂಗ್ಲೀಷ್ ಮೇಷ್ಟ್ರು ಕೆ.ಆರ್.ಎಸ್. ಅವನ ಜೊತೆ ಹಾಗೂ ಅವರ ಪೋಷಕರ ಜೊತೆ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದಾಗ ನಾನಂತೂ ಅತ್ಯಾಶ್ಚರ್ಯ ಪಡುತ್ತಿದ್ದೆ. ನೀವೇನೇ ಹೇಳಿ, ಯಾರೇನೇ ಹೇಳಲಿ. ಇಂಗ್ಲೀಷ್ ಭಾಷೆಗೆ ತುಂಬಾನೆ ಗೌರವ ಇಂದಿಗೂ ಇದೆ. ಇಂಗ್ಲೀಷ್ ಮಾತನಾಡೋಕೆ ಬರುವವರನ್ನು ತುಂಬಾ ಇಂಟಲಿಜೆಂಟ್ ರೀತಿ ನೋಡೋದು, ಮಕ್ಕಳನ್ನು ಇದೇ ಮೀಡಿಯಂನಲ್ಲಿಯೇ ಓದಿಸಬೇಕು ಎಂಬ ಆಸೆ ತೋರುವುದು ಜಾಸ್ತಿಯಾಗುತ್ತಿದೆ. ಆದರೆ ಯಾವುದೇ ಮಾತೃಭಾಷೆಯಾಗಿರಲಿ ಮೊದಲು ಅದರಲ್ಲಿ ಪ್ರಾವೀಣ್ಯತೆ ಪಡೆಯದಿದ್ದರೆ ಬೇರೆ ಯಾವ ಭಾಷೆಯಲ್ಲಿ ಪ್ರಭುತ್ವ ಸಾಧಿಸಲೂ ಸಾಧ್ಯವಿಲ್ಲ ಎಂಬ ಮಾತಂತೂ ಸತ್ಯ. ಆದ್ದರಿಂದ ಮೊದಲು ನಾವು ನಮ್ಮ ಮಾತೃಭಾಷೆಗೆ ಹೆಚ್ಚು ಆದ್ಯತೆ ಕೊಡೋಣ. ಅಯ್ಯೋ ವಿಷಯ ಎಲ್ಲೆಲ್ಲಿಗೋ ಹೋಯ್ತಲ್ಲ. ರಮೇಶನ ವಿಷಯಕ್ಕೆ ವಾಪಸ್ ಬರೋಣ.
ಅವನ ಬಗ್ಗೆ ನಾವು ಇವನು ಭಾರೀ ಬುದ್ಧಿವಂತ, ಕ್ಲಾಸಲ್ಲಿ ನಮ್ಮನ್ನೆಲ್ಲಾ ಮೀರಿಸಿ ಬಿಡ್ತಾನೆ, ಇವನೇ ಫಸ್ಟ್ ರ್ಯಾಂಕ್ ಬರ್ತಾನೆ ಹಾಗೇ ಹೀಗೆ ಅಂತಾ ನಾವು ಅಂದ್ಕೊಂಡಿದ್ವಿ. ಆದರೆ ಕಾಲಕ್ರಮೇಣ ನಮಗೆ ಗೊತ್ತಾಯ್ತು; ಇವನಿಗೆ ಬರೀ ಇಂಗ್ಲೀಷಿನಲ್ಲಿ ಮಾತಾಡೋಕೆ ಬರುತ್ತೆ, ಬೇರೆ ಸಬ್ಜೆಕ್ಟ್ ನಾಲೆಡ್ಜ್ ಇಲ್ಲ ಅಂತಾ ಇವನ ಸಿಂಗಲ್ ಡಿಜಿಟ್ ಟೆಸ್ಟ್ ಮಾರ್ಕ್ಸ್ ನೋಡಿ ನಾವು ತಿಳ್ಕೊಂಡ್ವಿ.
ಇನ್ನು ಇವನು ಒಂದು ವಾಚ್ ಕಟ್ಟಿಕೊಂಡಿರುತ್ತಿದ್ದ. ಅದು ಟೈಮು ಮನುಷ್ಯರಂತೆ ಶಬ್ದದ ರೂಪದಿ ಹೇಳ್ತಾ ಇತ್ತು. ಅದರಲ್ಲಿ ಅಲಾರಾಂ ಬೇರೆ ಇತ್ತು. ಇದನ್ನು ನೋಡಿ ನಾವು ತುಂಬಾ ಆಶ್ಚರ್ಯ ಪಟ್ಟಿದ್ದೆವು!! ಒಮ್ಮೆ ಗಣಿತ ಕ್ಲಾಸಲ್ಲಿ ಅಲಾರಾಂ ಶಬ್ದ ಕೇಳಿ ನಮ್ಮ ಮೇಷ್ಟ್ರೂ ಸಹ ಶಬ್ದದ ಮೂಲ ಹುಡುಕಿ ಅವನ ಕೈಯಲ್ಲಿನ ವಾಚಿನ ಮಹಿಮೆ ತಿಳಿದು ಅವರೂ ಅಚ್ಚರಿಗೊಂಡಿದ್ದರು. ಇವನು ಹಾಸ್ಟೆಲ್ಲಿನಲ್ಲಿ ಇದ್ದಾಗಲೂ ಬೇಕರಿ ತಿಂಡಿ ತಿನಿಸುಗಳನ್ನು ಸಾಕಷ್ಟು ತರುತ್ತಿದ್ದ. ಇವನ ರೂಂ ಮೇಟ್‌ಗಳೆಲ್ಲರೂ ಸೊಂಪಾಗಿ ಇದ್ದರು. ನಾವೂ ಸಹ ಇವನ ರೂಂಮೇಟ್ ಆಗಿರಬಾರದಿತ್ತ? ಎಂದು ಅಂದುಕೊಂಡಿದ್ದೆವು. ಒಮ್ಮೆ ಕೆಲ ಹುಡುಗರು ಇವನ ಜೊತೆ ರೂಮಿನಲ್ಲಿ ಕೇಕ್, ಪೆಪ್ಸಿ ಕೋಕೋ ಕೋಲಾ ತಂದು ಪಾರ್ಟಿ ಮಾಡಿದ್ದರು ಎಂಬ ಸುದ್ದಿ ಹರಡಿ ವಾರ್ಡನ್ನಿಗೂ ತಿಳಿದು ಅವರಿಗೆ ವಾರ್ನ್ ಮಾಡಿ ಸುಮ್ಮನಾದರು. ನಾವು ಆಗ ಒಂದೊಮ್ಮೆ ಪ್ರತಿಷ್ಟಿತರು ಅಲ್ಲದೇ ಬೇರೆ ಯಾರಾದ್ರೂ ಈ ರೀತಿ ಮಾಡಿದ್ರೆ ಹಾಸ್ಟೆಲ್ ಬಿಟ್ಟು ಕಳಿಸುತ್ತಿದ್ದರು ಎಂದು ನಾವು ಮಾತನಾಡಿಕೊಂಡಿದ್ವಿ. ಇಂತಿಪ್ಪ ರಮೇಶ ಮೊದಲು ಬಂದಾಗ ಅವನು ಗಳಿಸಿದ್ದ ಬೆಲೆ ಕಾಲಕ್ರಮೇಣ ಕಡಿಮೆಯಾಗುತ್ತಾ ಹೋಗಿತ್ತು.
ಒಮ್ಮೆ ವಿಜ್ಞಾನ ಟೆಸ್ಟ್ ಬರೆಯುವಾಗ ನಾವು ನೋಟ್ಸ್‌ಗಳನ್ನೆಲ್ಲಾ ಹೊರಗಡೆ ಇಟ್ಟು ಬಂದಿದ್ವಿ. ಆಗ ನಮಗೆ ವಿಜ್ಞಾನ ಬೋಧಿಸುತ್ತಿದ್ದ ಡಿ.ಎಸ್ (ಡಿ.ಸತೀಶ್) ಸರ್ ನೋಟ್ಸ್‌ಗಳನ್ನೆಲ್ಲಾ ಚೆಕ್ ಮಾಡಿದ್ದಾರೆ. ಆಗ ಅವರಿಗೆ ರಮೇಶನ ನೋಟ್ಸಿನಲ್ಲಿ ಒಂದು ಲೆಟರ್ ಸಿಕ್ಕಿದೆ. ಅದರಲ್ಲಿ ಏನಿದೆ ಅಂತಾ ಓದಿದಾಗ ಅವರಿಗೆ ತುಂಬಾ ಸಿಟ್ಟು ಬಂದಿದೆ. ಯಾಕೆಂದರೆ ಅದು ರಮೇಶನಿಗೆ ನಮ್ಮದೇ ಕ್ಲಾಸಿನಲ್ಲಿದ್ದ ಒಬ್ಬಾಕೆ ಬರೆದ ಲವ್ ಲೆಟರ್ ಅದಾಗಿತ್ತು! ಅವರು ತಕ್ಷಣ ಒಳಗೆ ಬಂದು ಆ ಹುಡುಗಿಯ ಬಗ್ಗೆ ಕಚೇರಿಗೆ ತಿಳಿಸಿ ಕೊನೆಗೆ ಹಾಸ್ಟೆಲ್ ವಾರ್ಡನ್‌ಗೆ ತಿಳಿಸಿದ್ದಾರೆ. ಈ ಸುದ್ದಿಯು ಇಡೀ ಹಾಸ್ಟೆಲ್ಲಿನ ತುಂಬೆಲ್ಲಾ ಕಾಡ್ಗಿಚ್ಚಿನಂತೆ ಹರಡಿತ್ತು. ತಕ್ಷಣ ಆ ಹುಡುಗಿಯ ಪೋಷಕರನ್ನು ಕರೆಸಿ ಅವಳ ಟಿಸಿ ಕೊಟ್ಟು ಶಾಲೆಯಿಂದ ಬಿಟ್ಟು ಕಳಿಸಿದರು. ಈ ಘಟನೆಯಿಂದ ನಮ್ಮ ಹಾಸ್ಟೆಲ್ ಹುಡುಗರಾಗಲಿ, ಹುಡುಗಿಯರಾಗಲಿ ಈ ರೀತಿ ಮಾಡುವ ಸಹವಾಸ ಬೇಡಪ್ಪ ಅನ್ನೋ ರೀತಿ ಆಗಿದ್ದಂತೂ ಸುಳ್ಳಲ್ಲ. ಅಲ್ಲಲ್ಲಿ ಕೆಲವರು ಕೆಲ ಹುಡುಗಿಯರ ಹೆಸರ ಜೊತೆ ಗಾಸಿಪ್ ಮಾಡಿಕೊಂಡಿದ್ದರೇ ಹೊರತು ಲವ್ ಲೆಟರ್ ಬರೆಯುವ ದುಸ್ಸಾಹಸಕ್ಕೆ ಯಾರೂ ಕೈಹಾಕಲಿಲ್ಲ. ನಾನು ಈಗಲೂ ‘ಅವಳು ಮಾಡಿದ್ದ ಅಂತಾ ಮಹಾನ್ ತಪ್ಪೇನು? ಅವಳಿಗೆ ವಾರ್ನ್ ಮಾಡಿ ಬಿಡಬಹುದಿತ್ತಲ್ಲವಾ?’ ಅಂದ್ಕೊಳ್ತೇನೆ.. ಇಲ್ಲಿ ರಮೇಶ ಮಾತ್ರ ಏನೂ ಆಗದ ರೀತಿಯಲ್ಲಿ ಇದೇ ಶಾಲೆಯಲ್ಲಿ ಮುಂದುವರೆದಿದ್ದ!! ಆದರೆ ಮೇಷ್ಟ್ರುಗಳು ಅವನ ಬಗ್ಗೆ ಮೊದಲಿನಷ್ಟು ಆಸಕ್ತಿ ತೋರಲಿಲ್ಲ. ಆದರೆ ಇವನು ಹತ್ತನೇ ತರಗತಿಗೆ ಸೇರಲಿಲ್ಲ. ಒಂಬತ್ತನೇ ತರಗತಿಯನ್ನು ಪಾಸ್ ಆದನೋ ಫೇಲ್ ಆದನೋ ಗೊತ್ತಾಗಲಿಲ್ಲ. ಆದರೆ ಹಲವು ವರ್ಷಗಳು ಕಳೆದ ನಂತರ ಇವನೂ ಸಹ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಮನಸ್ಸಿಗೆ ಗರ ಬಡಿದಂತಾಯಿತು. ಏಕೆಂದರೆ ಹಾಸ್ಟೆಲ್ಲಿನಲ್ಲಿ ಇದ್ದ ಆ ಒಂದು ವರ್ಷ ತಾನು ಸಿರಿವಂತ ಎಂದು ಒಮ್ಮೆಯೂ ಗತ್ತು ತೋರಿಸಿರಲಿಲ್ಲ. ಎಂದೂ ಅಹಂಕಾರ ಪಡಲಿಲ್ಲ. ಎಲ್ಲರೊಡನೆ ಬೆರೆಯುತ್ತಿದ್ದ. ಸಾಕಷ್ಟು ಸ್ಥಿತಿವಂತರಾಗಿದ್ದರೂ ಕೆಲವರು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳೋದನ್ನು ನೋಡಿ ಬೇಸರವೆನಿಸುತ್ತದೆ. ‘ಈಸಬೇಕು ಇದ್ದು ಜಯಿಸಬೇಕು’, ‘ಮಾನವ ಜನ್ಮ ದೊಡ್ಡದು ಇದನು ಹಾಳು ಮಾಡಿಕೊಳ್ಳಬೇಡಿರಿ ಹುಚ್ಚಪ್ಪಗಳಿರಾ’ ಎಂಬ ಮಾತುಗಳು ಬದುಕಲು ಮಾಡುವ ಹೋರಾಟದ ಬಗ್ಗೆ ತಿಳಿಸುತ್ತವೆ. ಇಂತಹ ಮಾತುಗಳಿಂದ ಯಾರೇ ಆದರೂ ಪ್ರೇರೇಪಣೆ ಪಡೆಯಬೇಕು.
ಅವನ ಬಗ್ಗೆ ನಾವು ಇವನು ಭಾರೀ ಬುದ್ಧಿವಂತ, ಕ್ಲಾಸಲ್ಲಿ ನಮ್ಮನ್ನೆಲ್ಲಾ ಮೀರಿಸಿ ಬಿಡ್ತಾನೆ, ಇವನೇ ಫಸ್ಟ್ ರ್ಯಾಂಕ್ ಬರ್ತಾನೆ ಹಾಗೇ ಹೀಗೆ ಅಂತಾ ನಾವು ಅಂದ್ಕೊಂಡಿದ್ವಿ. ಆದರೆ ಕಾಲಕ್ರಮೇಣ ನಮಗೆ ಗೊತ್ತಾಯ್ತು; ಇವನಿಗೆ ಬರೀ ಇಂಗ್ಲೀಷಿನಲ್ಲಿ ಮಾತಾಡೋಕೆ ಬರುತ್ತೆ, ಬೇರೆ ಸಬ್ಜೆಕ್ಟ್ ನಾಲೆಡ್ಜ್ ಇಲ್ಲ ಅಂತಾ ಇವನ ಸಿಂಗಲ್ ಡಿಜಿಟ್ ಟೆಸ್ಟ್ ಮಾರ್ಕ್ಸ್ ನೋಡಿ ನಾವು ತಿಳ್ಕೊಂಡ್ವಿ.
ಒಂಬತ್ತನೇ ಕ್ಲಾಸಲ್ಲಿ ನಾನು ಸಾಕಷ್ಟು ಓದುತ್ತಿದ್ದೆ. ಈ ಓದಿನ ಫಲ ನನಗೆ ಫಲಿತಾಂಶದಲ್ಲಿ ಸಿಕ್ಕಿತ್ತು. ಮೂರೂ ಸೆಕ್ಷನ್‌ಗಳಿಗೂ ಸೇರಿ ಕೊಡುತ್ತಿದ್ದ ರ್ಯಾಂಕಿನಲ್ಲಿ ನನಗೆ ಎರಡನೇ ರ್ಯಾಂಕ್ ಲಭಿಸಿತ್ತು. ಕನ್ನಡ ಮೀಡಿಯಂನ ಶಿವಶಂಕರ್ ಪ್ರಥಮ ರ್ಯಾಂಕ್ ಪಡೆದಿದ್ದ. ನನಗೆ ಎರಡು ಅಂಕಗಳಲ್ಲಿ ಪ್ರಥಮ ರ್ಯಾಂಕ್ ಮಿಸ್ಸಾಗಿತ್ತು. ಇದರ ಬಗ್ಗೆ ಅಷ್ಟು ಫೀಲ್ ಆಗಿರಲಿಲ್ಲ. ಆದರೆ ಯಾವಾಗ ಗಣೇಶನ ಹಬ್ಬದಲ್ಲಿ ಮೊದಲ ರ್ಯಾಂಕ್ ಬಂದವರಿಗೆ ಬಹುಮಾನವಾಗಿ ನೂರು ರೂಪಾಯಿ ಕೊಟ್ಟಾಗ ತುಂಬಾ ಬೇಸರವಾಗಿದ್ದೆ. ನಮಗೆ ದುಡ್ಡಿನ ಸಮಸ್ಯೆ ತುಂಬಾ ಇತ್ತು. ಹಾಸ್ಟೆಲ್ಲಿನ ಶುಲ್ಕಕ್ಕಾಗಿ ಕಟ್ಟಬೇಕಾಗಿದ್ದ ಮೊತ್ತವನ್ನು ಶಿವಕುಮಾರ್ ವಾರ್ಡನ್ ಯಾವುದೋ ಒಂದು ಸರ್ಕಾರಿ ಸ್ಕೀಮ್ ಕೊಡಿಸಿ ಬರೀ ಮುನ್ನೂರು ರೂಪಾಯಿ ಕಟ್ಟುವಂತೆ ಮಾಡಿದ್ದರು.
ನಮ್ಮ ಆಶ್ರಮದಲ್ಲಿ ಗಣೇಶನ ಹಬ್ಬವನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಿದ್ದರು. ವ್ಯಾಸಪೀಠದಲ್ಲಿ ಗಣೇಶನನ್ನು ಕೂರಿಸಿ ಪ್ರತಿದಿನವೂ ವಿಧ ವಿಧದ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಕವಿಗಳು, ಚಿತ್ರಕಲಾವಿದರು, ರಾಜಕಾರಣಿಗಳನ್ನು ಕರೆಸಿ ಅವರಿಂದ ಉಪನ್ಯಾಸ ಕೊಡಿಸುತ್ತಿದ್ದರು. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕರೆಸಿ ಅವರಿಂದ ಭಾಷಣ ಮಾಡಿಸುತ್ತಿದ್ದರು. ಮಕ್ಕಳಿಂದ ಮಾಡಿಸುತ್ತಿದ್ದ ಸಾಮೂಹಿಕ ಕವಾಯತು, ಡಂಬಲ್ಸ್, ಲೇಜಿಮ್ ಡ್ಯಾನ್ಸ್, ಬಾವುಟ ಹಿಡಿದುಕೊಂಡು ಮಾಡುತ್ತಿದ್ದ ಡ್ಯಾನ್ಸ್‌ಗಳು ಸರ್ವರಿಗೂ ಪ್ರಿಯವಾಗುತ್ತಿದ್ದವು. ಕಾರ್ಯಕ್ರಮಗಳು, ಭಾಷಣಗಳು ಮುಂತಾದವುಗಳು ನಮ್ಮಲ್ಲಿ ಸೃಜನಶೀಲ ಚಿಂತನೆಯನ್ನು ಬೆಳೆಸಲು ಸಹಕಾರಿಯಾಗಿದ್ದವು. ಈ ಸಮಯದಲ್ಲಿ ಶಾಲೆಯಲ್ಲಿ ಬರೀ ಬೆಳಗಿನ ಪಾಠಗಳು ಮಾತ್ರ ನಡೆಯುತ್ತಿದ್ದವು.
ಇನ್ನು ವಿಜ್ಞಾನ ಬೋಧಿಸುತ್ತಿದ್ದ ಸತೀಶ್ ಸರ್‌ರವರ ಪಾಠ ತುಂಬಾ ಸ್ಟಾಂಡರ್ಡ್ ಆಗಿ ಇತ್ತು. ವೇಗವಾಗಿ ಬರೀ ಇಂಗ್ಲೀಷಿನಲ್ಲಿಯೇ ಪಾಠ ಮಾಡುತ್ತಿದ್ದುದರಿಂದ ಅವರ ವೇಗಕ್ಕೆ ನನಗೆ ಪಾಠ ಅರ್ಥ ಆಗುತ್ತಿರಲಿಲ್ಲ. ಹಾಗಂತ ರೂಮಿಗೆ ಹೋಗಿ ಅದನ್ನು ಕಲಿಯೋವರೆಗೂ ಬಿಡ್ತಾ ಇರಲಿಲ್ಲ. ಮಾಸಿಕವಾರು ನಡೆಯುತ್ತಿದ್ದ ಕಿರುಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದೆ. ಆಗ ಓದಿದ್ದ ಎಷ್ಟೋ ಕಾನ್ಸೆಪ್ಟ್‌ಗಳು ಈಗ ಶಿಕ್ಷಕನಾಗಿ ನಾನು ಪಾಠ ಮಾಡುವ ಸಮಯದಲ್ಲಿ ನೆನಪಾಗುತ್ತವೆ. ನಾನು ಓದುವಾಗ ನನಗೆ ಹೆಚ್ಚು ಕಷ್ಟವಾಗುತ್ತಿದ್ದ ವಿಷಯ ಸಮಾಜ ವಿಜ್ಞಾನ. ಬೋಧಕರು ಆ ವಿಷಯವನ್ನು ಕಷ್ಟ ಮಾಡಿದ್ದರೋ, ಇಂಗ್ಲೀಷ್ ಮೀಡಿಯಂ ಪ್ರಭಾವವೇನೋ ಗೊತ್ತಿಲ್ಲ. ಸಮಾಜ ವಿಷಯವು ಕಬ್ಬಿಣದ ಕಡಲೆಯಂತಿತ್ತು. ಯಾವುದೇ ವಿಷಯವು ಮಕ್ಕಳಿಗೆ ಇಷ್ಟವಾಗುವುದು, ಬಿಡುವುದು ಆ ವಿಷಯ ಶಿಕ್ಷಕರ ಮೇಲೆ ನಿಂತಿರುತ್ತದೆ. ಈ ಕಾರಣಕ್ಕಾಗಿ ಮಕ್ಕಳು ಶಿಕ್ಷಕರನ್ನು ಮೊದಲು ಇಷ್ಟಪಟ್ಟು ಗೌರವಿಸುವುದನ್ನು ಕಲಿಯಬೇಕು. ಇದೇ ರೀತಿ ಶಿಕ್ಷಕರೂ ಆಸಕ್ತಿದಾಯಕವಾಗಿ ಮಕ್ಕಳಿಗೆ ಕಲಿಸಬೇಕು.
ಕಲಿಕೆ ವಿಷಯವನ್ನು ಹೊರತುಪಡಿಸಿ ನನ್ನ ಬಳಿಯಿದ್ದ ವಸ್ತುಗಳ ವಿಷಯದಲ್ಲಿ ನನಗೆ ತುಂಬಾ ಕೊರತೆಯಿತ್ತು. ನನ್ನ ಬಳಿ ಇದ್ದದ್ದು ಒಂದೇ ಒಂದು ಪ್ಯಾಂಟು!! ಅದೂ ನನ್ನ ದೊಡ್ಡಮ್ಮನ ಮಗ ಕೊಟ್ಟಿದ್ದು. ನನ್ನ ಅದೃಷ್ಟಕ್ಕೆ ವಾರಕ್ಕೊಂದು ದಿನ ಮಾತ್ರ ಕಲರ್ ಬಟ್ಟೆ ಹಾಕುವ ಅವಕಾಶ ನಮಗಿದ್ದಿದ್ದರಿಂದ ಅದನ್ನೇ ಹಾಕಿಕೊಳ್ಖುತ್ತಿದ್ದೆ. ಪ್ಯಾರಾಗಾನ್ ಹವಾಯಿ ಚಪ್ಪಲಿಯೇ ನನ್ನ ಪಾದಗಳಿಗೆ ರಕ್ಷಣೆ ಕೊಡುತ್ತಿತ್ತು. ಇದನ್ನು ಗಮನಿಸಿದ ನನ್ನ ಸೀನಿಯರ್ ಒಬ್ಬನು ಇದರ ಬಗ್ಗೆ ಅಣಕಿಸಿದ. ಆಗ ನನಗೆ ತುಂಬಾ ಫೀಲ್ ಆಗ್ತಿತ್ತು. ಜಗತ್ತಲ್ಲಿ ನಾವು ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಚಿಂತೆಯಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು’ ಅನ್ನೋ ರೀತಿ ತೋರಿಸಿಕೊಳ್ಳಬೇಕು. ಬಾಹ್ಯ ನೋಟಕ್ಕೆ ಬೆರಗಾಗುವರೇ ಬಹಳ. ಇದರ ಅನುಭವ ನನಗೆ ಹಲವಾರು ಬಾರಿ ಆಗಿದೆ. ಮುಂದೆ ಇದರ ಬಗ್ಗೆಯೇ ನನಗಾದ ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ನಾನು ಹೈಸ್ಕೂಲನ್ನು ಈ ಒಂದೇ ಪ್ಯಾಂಟಿನಲ್ಲಿ ಮುಗಿಸಿದೆ ಎಂಬ ಅಂಶವನ್ನು ತಿಳಿಸುತ್ತೇನೆ.
ಓದೋ ಸಮಯದಲ್ಲಿ ಹಲವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಈ ಸಮಸ್ಯೆಗಳನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ನಾವು ಸಾಧಿಸಲು ಸಾಧ್ಯ. ಇದನ್ನು ಬಿಟ್ಟು ಈ ಸಮಸ್ಯೆಗಳನ್ನೇ ನೆವವಾಗಿ ಮಾಡಿಕೊಂಡು ಹಾಗೆಯೇ ಇದ್ದರೆ ಇದೇ ರೀತಿ ಜೀವನವನ್ನು ಕಳೆಯಬೇಕಾಗುತ್ತದೆ ಎಂಬುದನ್ನು ನಾವು ಮನಗಾಣಬೇಕು.
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
ಬಹಳಷ್ಟು ಓದಿನ ಖುಷಿ ಕೊಡುತ್ತಿರುವ ನಿಮ್ಮ ಶಾಲಾ ದಿನಗಳ ನೆನಪುಗಳು. ಎಲ್ಲವನ್ನೂ ನೆನಪಿಟ್ಟು ಬರೆಯುವ ನಿಮ್ಮ ಕೌಶಲ್ಯಕ್ಕೆ ಅಭಿನಂದನೆಗಳು.🙏🙏
Super… ಅತ್ಯಂತ ಉತ್ತಮವಾಗಿ ಜೀವನದ ಪುಟ ತೆರೆದಿಟ್ಟಿದ್ದೀರಿ….. ಎಲ್ಲೋ ನಮ್ಮ ಕಥೆಗಳೇ ಇವು ಅನ್ನುವ ಭಾವನೆ….just fentastic
I am also part of your journey
ಶಾಲಾ ದಿನದ ನೆನಪುಗಳು ನಿಮ್ಮ ಬರವಣಿಗೆ ಯಲ್ಲಿ ಉತ್ತಮ ವಾಗಿ ಮೂಡಿಬಂದಿದೆ.
ಅಭಿನಂದನೆಗಳು ಸರ್
ಬಾಲ್ಯದ ಹಾಸ್ಟೆಲ್ನ ಅನುಭವಗಳ ಕೊಲಾಜ್ ಗಳ ಚಿತ್ರಣ
ಆದರೆ ಲೇಖನದ ಟೈಟಲ್… ಲೇಖನದಲ್ಲಿ ಬಹಳ ಕಡಿಮೆ ವಿಷಯ ವ್ಯಾಪ್ತಿ.
ಹಾಗಾಗಿ ಟೈಟಲ್ ಬೇರೆ ಇಡಬಹುದಿತ್ತೇನೋ
ಈ ಲೇಖನವನ್ನು ಓದುತ್ತಾ ವಿದ್ಯಾರ್ಥಿ ಜೀವನದ ಕ್ರಷ್ಗಳ ನೆನಪಾಯಿತು.
ಕ್ರಷ್ಗಳು ಕೇವಲ ನೋಟ ,ಮುಗುಳ್ನಗೆ, ಜೋರಾದ ಎದೆ ಬಡಿತ, ಊಹಾಪೋಹಗಳಲ್ಲಿ ಮುಗಿದೇ ಹೋಯಿತು.
ಬರೆಯಬೇಕೆನಿಸಿದ ಎಷ್ಟೋ ಪತ್ರಗಳು ಖಾಲಿಯೇ ಉಳಿದವು ಆ ಫೀಲಿಂಗ್ ಕೇವಲ ಅನುಭವಿಸಿದವರಿಗಷ್ಟೇ ಗೊತ್ತು