ಹುಟ್ಟು ಮತ್ತು ಸಾವು ಎಂಬ ಎರಡು ತುದಿಗಳ ಮಧ್ಯೆ ಕೆಲವು ದಿನ ಆಸೆ-ನಿರಾಸೆ, ಪ್ರೀತಿ-ದ್ವೇಷ, ಭಾವ-ಬುದ್ಧಿ, ಇಷ್ಟ-ಕಷ್ಟ, ಸಂಗ್ರಹ-ಅಸಂಗ್ರಹ, ಸಾಧನೆ-ಸವಾಲು… ಇವೆಲ್ಲವೂ ಸೇರಿದ ಬದುಕಿನ ಬೆಳಕು. ಈ ಬದುಕನ್ನೇ ಮಾಯೆ, ಕತ್ತಲು ಎಂದು ಹೇಳುವ ಒಂದು ಆಧ್ಯಾತ್ಮಿಕ ಚಿಂತನ ಧಾರೆಯೂ ಇದೆಯಲ್ಲವೆ? `ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’. `ಯಾಕೆ ಬಡಿದಾಡ್ತಿ ತಮ್ಮ ಮಾಯ ಮೆಚ್ಚಿ ಸಂಸಾರ ನೆಚ್ಚಿ’, `ಒಳಿತು ಮಾಡು ಮನುಜ, ನೀನಿರೋದು ಮೂರು ದಿವಸ’ ಇಂತಹ ಅನೇಕ ಗೀತೆಗಳು, ದಾಸವಾಣಿಗಳು ಬದುಕಿನ ಕ್ಷಣಭಂಗುರತೆಯನ್ನೇ ಹೇಳುತ್ತವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೈದನೆಯ ಬರಹ
ಬಹಳ ಹಿಂದೆ ನಾನು ಓದಿದ್ದ ಒಂದು ಪುಟ್ಟ ಕವಿತೆ ಆಗಾಗ ನನಗೆ ನೆನಪಾಗುತ್ತದೆ –
`ಮಣ್ಣು ಹೇಳುತ್ತೆ ಕುಂಬಾರನಿಗೆ,
ತುಸು ಮೆಲ್ಲಗೆ ತುಳಿ, ನಾನು
ಮೊದಲು ನಿನ್ನ ಹಾಗೇ ಇದ್ದೆ’.
ಬದುಕಿನ ರುದ್ರಸತ್ಯವೊಂದನ್ನು ಬಹು ಮೃದುವಾಗಿ ಹೇಳುವ ಸಾಲುಗಳಿವು. ಇಂದು ಜೋರಾಗಿ, ಬಲವಾಗಿ, ಅಪಾರ ಆತ್ಮವಿಶ್ವಾಸದಿಂದ ಮಣ್ಣನ್ನು ತುಳಿಯುತ್ತಿರುವ ಕುಂಬಾರ ನಾಳೆ ತಾನು ಮಣ್ಣಾಗುತ್ತಾನೆ! ತುಸು ಯೋಚಿಸಿ ನೋಡಿದರೆ ಮೈ ನಡುಗಿಸುವ ಒಂದು ವಾಸ್ತವಾಂಶ ಇದು. ಅಲ್ಲವೆ?
ಎಲ್ಲವೂ ಅಂದರೆ ಎಲ್ಲವೂ ನಾಶಕ್ಕೆ, ಬದಲಾವಣೆಗೆ ಒಳಗಾಗುತ್ತವೆ, ಮತ್ತೆ ಉಳಿಯುವುದು ಯಾವುದು? ಕಟ್ಟಡಗಳು, ರಾಜ್ಯಗಳು, ಉದ್ಯಮಗಳು, ಸಂಸ್ಥೆಗಳು, ಪ್ರತಿಯೊಂದು ಸಹ ಕಾಲರಾಯನ ಕರಾಮತ್ತಿನಲ್ಲಿ ವಿನಾಶಕ್ಕೊಳಗಾಗುತ್ತವೆ. ಇಷ್ಟೇ ಅಲ್ಲ ನಾವು ಶಾಶ್ವತ ಅಂದುಕೊಂಡ ನಮ್ಮ ಜಗಳಗಳು, ಇಷ್ಟಗಳು, ಭಾವನೆಗಳು, ಸಹ ಬದಲಾಗುತ್ತವೆ, ಕೆಲವೊಮ್ಮೆ ಇಲ್ಲವಾಗುತ್ತವೆ!
ಶಾಶ್ವತ, ನಶ್ವರಗಳ ಮಾತು ಬಂದಾಗ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ತಪ್ಪದೆ ನೆನಪಾಗುವ ಕವಿತೆ ಅಂದರೆ ಜಿ.ಎಸ್.ಶಿವರುದ್ರಪ್ಪನವರ `ಚರಿತ್ರೆಯ ಕಾಲಜ್ಞಾನ’. ಈ ಕವಿತೆಯಲ್ಲಿ ಭರತೇಶ್ವರ ಹಾಗೂ ಓಝಿಮಾಂಡಿಯಾಸ್ ಎಂಬ ಇಬ್ಬರು ರಾಜಾಧಿರಾಜರ ಕಥೆಗಳು ಬರುತ್ತವೆ. ಜೈನಪುರಾಣಗಳಿಂದ ತೆಗೆದುಕೊಂಡು ಪಂಪ ಮಹಾಕವಿಯು ಬರೆದಿರುವ `ಆದಿಪುರಾಣ’ ಕಾವ್ಯದಲ್ಲಿ ಬರುವ ಭರತೇಶ್ವರನನ್ನೇ ಕವಿ ಇಲ್ಲಿ ಚಿತ್ರಿಸಿರುವುದು. ತನ್ನ ಆಯುಧಾಗಾರದಲ್ಲಿ ಚಕ್ರರತ್ನವೆಂಬ ಆಯುಧವಿಶೇಷವೊಂದು ಹುಟ್ಟಿದಾಗ ಬಹಳವಾಗಿ ಹಿಗ್ಗಿದ ಭರತೇಶ್ವರನು ಅದನ್ನು ಮುಂದಿಟ್ಟುಕೊಂಡು ದಿಗ್ವಿಜಯಕ್ಕೆ ಹೊರಡುತ್ತಾನೆ. ತನಗೆ ತೃಪ್ತಿಯಾಗುವಷ್ಟು ಭೂಖಂಡಗಳನ್ನು ಗೆದ್ದ ನಂತರ ತನ್ನ ಬಗ್ಗೆ ತುಂಬ ಹೆಮ್ಮೆ ಪಟ್ಟುಕೊಳ್ಳುತ್ತಾ `ತನ್ನಂತಹ ಚಕ್ರೇಶ್ವರ’ನ ಹೆಸರು ಅಜರಾಮರವಾಗಿರಬೇಕೆಂದು ಬಯಸಿ, ದೊಡ್ಡ ಪರಿವಾರದೊಂದಿಗೆ ವಿಜಯಾರ್ಧ ಪರ್ವತ ಎಂಬ ಎತ್ತರವಾದ ಪರ್ವತದ ಮೇಲೆ ತನ್ನ ಹೆಸರನ್ನು ಕೆತ್ತಿಸಲು ಹೊರಡುತ್ತಾನೆ. ಆದರೆ ಪರ್ವತವನ್ನು ಹತ್ತಿದಾಗ ಅವನಿಗೊಂದು ಆಶ್ಚರ್ಯ ಕಾದಿರುತ್ತದೆ! ಈಗಾಗಲೇ ಅದೆಷ್ಟೋ ರಾಜರು ತಮ್ಮ ದಿಗ್ವಿಜಯಪ್ರಶಸ್ತಿಗಳನ್ನು ಆ ಪರ್ವತದ ಮೇಲೆ ಕೆತ್ತಿಸಿಬಿಟ್ಟಿರುತ್ತಾರೆ! ಆಗ ಅವನಿಗೆ ಎಂತಹ ಗರ್ವಭಂಗವಾಗುತ್ತದೆ ಎಂಬುದನ್ನು ಪಂಪಕವಿಯು `ಸೋರ್ದುದು ಕೊಳಗೊಂಡ ಗರ್ವರಸಂ’ ಎಂಬ ಪದಪ್ರಯೋಗದಿಂದ ವರ್ಣಿಸಿದ್ದಾನೆ.
`ಕೊಳದಂತೆ ತುಂಬಿಕೊಂಡಿದ್ದ ಗರ್ವರಸವು ಸೋರಿಹೋಯಿತು’ ಎಂಬ ಅರ್ಥ ಬರುವ ಮಾತಿದು. ಇಷ್ಟಾದರೂ ಸುಮ್ಮನಾಗದ ಭರತೇಶ್ವರನು ನಿರ್ಲಜ್ಜತೆಯಲ್ಲಿ ಇನ್ನೊಂದು ಮೆಟ್ಟಿಲೇರಿ ಆ ಪರ್ವತದಲ್ಲಿ ಈಗಾಗಲೇ ಬರೆಯಲ್ಪಟ್ಟಿದ್ದ ರಾಜರ ಹೆಸರುಗಳನ್ನು ತನ್ನ ಪರಿವಾರದವರಿಂದ ಅಳಿಸಿಸಿ ಅಲ್ಲಿ ತನ್ನ ಹೆಸರನ್ನು ಬರೆಯಿಸುತ್ತಾನೆ! ಅಂದರೆ ತನ್ನ ಅಹಂಕಾರವನ್ನು ಮೆರೆಯಿಸಲು ಚಕ್ರವರ್ತಿಯಂತಹ ಉನ್ನತಸ್ತರದ ವ್ಯಕ್ತಿಯೊಬ್ಬ ಎಂತಹ ಕೀಳುಮಟ್ಟಕ್ಕೆ ಇಳಿಯಬಲ್ಲ ಎಂಬುದಕ್ಕೆ ಇವನು ಒಂದು ಉದಾಹರಣೆಯಾಗಿಬಿಡುತ್ತಾನೆ. ಇದೇ ರೀತಿಯಲ್ಲಿ, ಈಜಿಪ್ಟ್ ದೇಶದ ಮರುಭೂಮಿಯೊಂದರಲ್ಲಿ ಪಯಣಿಗನೊಬ್ಬನಿಗೆ ನೋಡಲು ಸಿಗುವ, ಹಾಳಾಗಿ ಬಿದ್ದು ಹೋಗಿರುವ `ಓಝಿಮಾಂಡಿಯಾಸ್’ ಎಂಬ ರಾಜಾಧಿರಾಜನ ಕಥೆಯೂ ಒದುಗರನ್ನು ಬೆಚ್ಚಿ ಬೀಳಿಸುತ್ತದೆ. ಫೆರೋರಾ ಎಂದು ಕರೆಯಲಾಗುತ್ತಿದ್ದ ಆ ರಾಜನ ದೈತ್ಯ ಗಾತ್ರದ ಕಾಲುಗಳು ಮಾತ್ರ ಪಯಣಿಗನಿಗೆ ಕಾಣಿಸುತ್ತವೆ. ಆ ಕಾಲಿಗೆ ಮುಖ, ದೇಹ ಏನೂ ಇರುವುದಿಲ್ಲ. ಆದರೆ ಆ ಕಾಲಿರುವ ಫಲಕದ ಮೇಲೆ ಮಾತ್ರ “ನನ್ನ ಹೆಸರು ಓಝಿಮಾಂಡಿಯಾಸ್. ರಾಜರ ರಾಜ ನಾನು. ನನ್ನ ಕೆಲಸಗಳನ್ನು ನೋಡಿರಿ ಬಲಾಢ್ಯರೇ ಮತ್ತು ಹತಾಶರಾಗಿರಿ” ಎಂಬ ಅತಿ ಅಹಂಕಾರದ ವಾಕ್ಯಗಳನ್ನು ಬರೆಯಲಾಗಿರುತ್ತದೆ! ಮುರಿದು ಹೋದ ಈ ವಿಗ್ರಹ ಮತ್ತು ಈ ಸಾಲುಗಳು ಮನುಷ್ಯನ ಅಧಿಕಾರ, ಮೆರೆತಗಳನ್ನು ಕಾಲ ಮತ್ತು ಪ್ರಕೃತಿಗಳು ನಿರ್ದಯವಾಗಿ ಹಾಳುಗೆಡೆಯುವ ರುದ್ರವಾಸ್ತವವನ್ನು ಚಿತ್ರಿಸುತ್ತವೆ. 1819ರಲ್ಲಿ, ಖ್ಯಾತ ಇಂಗ್ಲಿಷ್ ಕವಿ ಪಿ.ಬಿ.ಶೆಲ್ಲಿ ಬರೆದ `ಓಝಿಮಾಂಡಿಯಾಸ್’ ಎಂಬ ಸುನೀತದಿಂದ ಸ್ಫೂರ್ತಗೊಂಡು ನಮ್ಮ ಕವಿ ಜೆಎಸ್ಸೆಸ್ ಈ ರಾಜನ ಕತೆಯನ್ನು ಭರತೇಶ್ವರನೊಂದಿಗೆ ಹೋಲಿಸಿದ್ದಾರೆ. ವಿಪರ್ಯಾಸ ಅಂದರೆ ಇಷ್ಟೆಲ್ಲಾ ಆದರೂ ಮನುಷ್ಯನ ಅಹಂಕಾರಕ್ಕೆ ಮಿತಿಯುಂಟೆ?
ಎಂಥ ಹುಚ್ಚು ಈ ರಾಜಾಧಿರಾಜನಿಗೆ
ಎಲ್ಲವನ್ನೂ ತೃಣವೆಂದೆಣಿಸಿ ಯೋಗಮಾರ್ಗವ ಹಿಡಿದ
ಪುರುದೇವನಣುಗನಿಗೆ
ಅವರಿವರ ಬೆವರುನೆತ್ತರಿನಲಿ
ಬೆಳೆಸಿದಹಂಕೃತಿಯ ಚಿತ್ತವಿಕಾರಕೆ
ಶಾಶ್ವತದ ಚೌಕಟ್ಟು ಹಾಕುವ ವ್ಯರ್ಥಪ್ರಯತ್ನ …
ಎಂದು ಕವಿ ನಿಟ್ಟುಸಿರು ಬಿಡುತ್ತಾರೆ.
ಭಗ್ನಾವಶೇಷದ ಸುತ್ತ ಮೇರೆವರಿಯದ
ಹಾಗೆ ಅಲೆಅಲೆಯಾಗಿ ಹಬ್ಬಿದೆ ಮರಳು
ವಿಜಯಾರ್ಧಪರ್ವತದ ಮೇಲೆ ಯಾವತ್ತೋ
ಅಳಿಸಿ ಹೋಗಿವೆ ಅಸಂಖ್ಯ ರಾಜರ ಹೆಸರು
– (ಜಿ.ಎಸ್.ಶಿವರುದ್ರಪ್ಪ, ವ್ಯಕ್ತಮಧ್ಯ, 1999)
ಬದುಕಿನ ಅದರಲ್ಲೂ ಭೌತಿಕ ಸ್ವತ್ತು, ಶ್ರೀಮಂತಿಕೆಗಳ ನಶ್ವರತೆಯ ಬಗ್ಗೆ ಗೊತ್ತಿದ್ದರೂ `ಯಾಕೆ ಮತ್ತೆ ಮತ್ತೆ ಪಾಚಿಗಟ್ಟುವುದು ಹೀಗೆ ಮನುಷ್ಯನ ಚಿತ್ತ’ ಎಂದು ಕವಿ ಆಲೋಚಿಸಿದ್ದಾರೆ.
ಮಹಾಭಾರತದ ಯಕ್ಷಪ್ರಶ್ನೆಯ ಪ್ರಸಂಗ ನೆನಪಾಗುತ್ತದಲ್ಲವೆ? `ಈ ಪ್ರಪಂಚದ ಅತಿ ವಿಚಿತ್ರ ಸಂಗತಿ ಯಾವುದು ಹೇಳು?’ ಎಂಬ ಯಕ್ಷನ ಪ್ರಶ್ನೆಗೆ ಧರ್ಮರಾಯನು ಕೊಡುವ ಉತ್ತರ ಹೀಗಿದೆ – `ತನ್ನ ಕಣ್ಣೆದುರೇ ಜನಗಳು ಸಾಯುತ್ತಿರುವುದನ್ನು ನೋಡುತ್ತಿದ್ದರೂ ನಾನು ಎಂದಿಗೂ ಸಾಯುವುದಿಲ್ಲ ಎಂದು ಮನುಷ್ಯನು ಭಾವಿಸುವುದೇ ಪ್ರಪಂಚದ ಅತಿ ವಿಚಿತ್ರ ಸಂಗತಿ’.
ಹೀಗೆ `ನಾನು ಎಂದಿಗೂ ಸಾಯುವುದಿಲ್ಲ’ ಎಂಬ ಭ್ರಮೆಯಲ್ಲಿರುವ ಮನುಷ್ಯನಿಗೆ ಮುಖಕ್ಕೆ ತಣ್ಣೀರೆರೆಚುವಂತೆ ಭಾಸವಾಗುವ ಒಂದು ಪ್ರಶ್ನೆಯನ್ನು ಒಬ್ಬರು ಕೇಳಿದ್ದು ನೆನಪಾಗುತ್ತಿದೆ ನನಗೆ. ಅದು `ಹೂ ವಿಲ್ ಕ್ರೈ ವ್ಹೆನ್ ಯು ಡೈ?’ (ನೀನು ಸತ್ತಾಗ ಯಾರು ಅಳುತ್ತಾರೆ?) ಎಂಬ ಪ್ರಶ್ನೆ ಕೇಳಿದಂತಹ ವಕೀಲ ಹಾಗೂ ವ್ಯಕ್ತಿತ್ವ ಬೆಳವಣಿಗೆ ಸಲಹೆಗಾರ ರಾಬಿನ್ ಶರ್ಮ. ಈ ಪ್ರಶ್ನೆಯು ನಮ್ಮ ಬದುಕಿನ ನಶ್ವರತೆಯ ಮಾಟ ಹಾಗೂ ಸಾರ್ಥಕ ಬದುಕನ್ನು ಬದುಕಿ ನಾವು ಸತ್ತಾಗ ಕೆಲವು ಮಂದಿಯಾದರೂ ಅಳುವಂತಹ ನೆಲೆಯನ್ನು ನಾವು ನಿರ್ಮಿಸಿಕೊಳ್ಳಲು ಪ್ರಯತ್ನಿಸಬೇಕು ಎಂಬ ಪಾಠ ಎರಡನ್ನೂ ಒಟ್ಟಿಗೆ ಹೇಳುತ್ತದೆ ಅಲ್ಲವೆ?
*****
ಭರತೇಶ್ವರ, ಓಝಿಮಾಂಡಿಯಾಸ್ ಮುಂತಾದ ಸಾಮ್ರಾಟರು ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕೆಂದು ಮಾಡುವ ಮಹಾಕಸರತ್ತುಗಳು ಒಂದೆಡೆಯಾದರೆ ಯಾವುದೇ ಕಿರೀಟ, ಭುಜಕೀರ್ತಿ ಇಲ್ಲದ ನಮ್ಮ ನಿಮ್ಮಂತಹ ಸಾಮಾನ್ಯ ಮನುಷ್ಯರೇನು ಕಡಿಮೆ ಕಸರತ್ತು ಮಾಡುತ್ತಾರೆಯೆ?
ನಾಳೆಗಾಗಿ ಕೂಡಿಡುವುದು, ತಮ್ಮ ಚಿತ್ರ ಬರೆಸುವುದು, ವಿಗ್ರಹಗಳನ್ನು ಮಾಡಿಸುವುದು, ದೇವಸ್ಥಾನಕ್ಕೆ, ಶಾಲೆ-ಕಾಲೇಜುಗಳಿಗೆ ದಾನದತ್ತಿ ಕೊಟ್ಟು ಅಲ್ಲಿನ ಫಲಕಗಳಲ್ಲಿ ತಮ್ಮ ಹೆಸರು ರಾರಾಜಿಸುವಂತೆ ಮಾಡುವುದು, ತಮ್ಮ ಮಕ್ಕಳಿಗೆ ತಂದೆ, ತಾಯಿ, ಅಜ್ಜಿ ತಾತಂದಿರ ಹೆಸರಿಡುವುದು… ಹಾಗೆ ನೋಡಿದರೆ ಮಕ್ಕಳ ಮೂಲಕ ವಂಶಾಭಿವೃದ್ಧಿ ಮಾಡಿಕೊಳ್ಳುವುದು ಅನ್ನುವುದೇ ಮನುಷ್ಯನ ಶಾಶ್ವತತೆಯ ಹಂಬಲದ ಅತಿ ದೊಡ್ಡ ಸಂಕೇತ ಅಲ್ಲವೆ?

ಮನುಷ್ಯನ ಈ ಶಾಶ್ವತತೆಯ ಹಂಬಲ ಒಂದು ಕಡೆಯಾದರೆ `ಯಾವುದೂ ಶಾಶ್ವತ ಅಲ್ಲ, ಎಲ್ಲವೂ ಬದಲಾಗುತ್ತಿರುತ್ತದೆ’ ಎಂಬ ತಿಳುವಳಿಕೆಯ ಒಂದು ಧಾರೆಯೂ ನಮ್ಮಲ್ಲಿದೆ. ಉದಾಹರಣೆಗೆ `ಒಂದು ನದಿಯ ಮೇಲೆ ನೀನು ಎರಡು ಸಲ ಕಾಲಿಡಲು ಸಾಧ್ಯವಿಲ್ಲ’ ಎನ್ನುತ್ತದೆ ಬೌದ್ಧ ಚಿಂತನೆ. ಅಂದರೆ ಬದುಕು ನಿರಂತರವಾಗಿ ಬದಲಾಗುತ್ತಿರುತ್ತದೆ, ಒಮ್ಮೆ ಹೋದ ಕ್ಷಣ ಮತ್ತೆ ಬರುವುದಿಲ್ಲ. ಸಿಗುವ ಆ ಒಂದು ಕ್ಷಣದಲ್ಲೇ ನಿನಗೆ ಸಾಧ್ಯವಾದರೆ ಬದುಕು ಕಟ್ಟಿಕೊ ಎಂಬ ವಿಚಾರ ಲಹರಿ ಇದು. ಈ ಚಿಂತನಾಧಾರೆ ಏನು ಹೇಳುತ್ತದೆ ಅಂದರೆ `ಪ್ರತಿಯೊಂದೂ ನಮ್ಮ ಜೀವನದಲ್ಲಿ ಬಂದು ಹೋಗುವ ಸಂಗತಿಗಳು ಅಷ್ಟೆ. ಅವು ಶಾಶ್ವತವಾಗಿ ಉಳಿಯವು. ಅವು ಇರುವ ಸಮಯದಲ್ಲಿ ಅವನ್ನು ಸವಿಯಬೇಕು, ನಿನ್ನೆಯ ಬಗೆಗಿನ ಕೊರಗು ಹಾಗೂ ನಾಳೆಯ ಬಗೆಗಿನ ಚಿಂತೆಯು ನಿನ್ನ ಇಂದಿನ ಅಂದರೆ ಈ ವರ್ತಮಾನದ ಕ್ಷಣವನ್ನು ಹಾಳು ಮಾಡದೆ ಇರಲಿ’. ಒಟ್ಟಿನಲ್ಲಿ `ಮನಸ್ಸನ್ನು ವರ್ತಮಾನಕ್ಷಣದಲ್ಲಿ ಇಟ್ಟುಕೊ’ (ಮೈಂಡ್‌ಫುಲ್‌ನೆಸ್) ಎಂಬ ವಿವೇಕವನ್ನು ಇಲ್ಲಿ ಎತ್ತಿ ಹಿಡಿಯಲಾಗಿದೆ. ನಾವು ಇಷ್ಟ ಪಟ್ಟು ಕುಡಿಯುವ ಕಾಫಿ, ಆಸೆ ಪಟ್ಟು ಧರಿಸುವ ಬಟ್ಟೆ, ಮುಡಿಯುವ ಹೂವು, ಬೆಳೆಸುವ ಮಕ್ಕಳು, ಕೇಳುವ ಹಾಡು, ನೋಡುವ ಚಿತ್ರ, ಕಟ್ಟುವ `ಸ್ವಂತ ಮನೆ’ … ಎಲ್ಲವೂ ಅಂದರೆ ಎಲ್ಲವೂ ಒಂದಷ್ಟು ಕಾಲ ಮಾತ್ರ ನಮ್ಮದಾಗಿರುತ್ತವೆ. ಬದುಕಿನ ಮಹಾಪ್ರವಾಹದಲ್ಲಿ ನಾವು ಹುಟ್ಟು ಎಂಬ ಬಿಂದುವಿನಿಂದ ಸಾವು ಎಂಬ ಬಿಂದುವಿಗೆ ಚಲಿಸುತ್ತೇವೆ. ಮಧ್ಯದಲ್ಲಿ ಕೆಲವು ವಸ್ತುಗಳು ನಮ್ಮವು ಎಂದು ಭಾಸವಾಗುತ್ತವೆ, ಕೆಲವು ಅನುಭವಗಳು `ಆಗು’ತ್ತವೆ, ಕೆಲವು ನೆನಪಿನಲ್ಲಿ ಉಳಿಯುತ್ತವೆ, ಕೆಲವು ಮರೆತುಹೋಗುತ್ತವೆ. ವಯಸ್ಸಾದಂತೆ ನಮ್ಮ ಆದ್ಯತೆಗಳು ಬದಲಾಗುವುದರಿಂದ ಸಹ ನಮ್ಮ ಶಾಶ್ವತ, ನಶ್ವರದ ಕಲ್ಪನೆಗಳು ಬದಲಾಗುತ್ತವೆ.
*****
ಒಂದು ದೃಷ್ಟಿಯಿಂದ ನೋಡಿದರೆ ಮನುಷ್ಯ ಯಾವುದರ ಮೇಲೂ ಒಡೆತನ ಸಾಧಿಸಲು ಆಗದು. ಬರಿಗೈಯಿಂದ ಬರುವ ಬರಿಗೈಯಲ್ಲಿ ಮಣ್ಣಾಗುವ ಅವನ ಪಯಣ ಕತ್ತಲಿಂದ ಪ್ರಾರಂಭವಾಗಿ ಕತ್ತಲಲ್ಲಿ ಮುಗಿಯುತ್ತದೆ. `ಮಣ್ಣಿಂದ ಕಾಯ ಮಣ್ಣಿಂದ’ ಗೀತ ನೆನಪಾಗುತ್ತದೆ. ಹುಟ್ಟು ಮತ್ತು ಸಾವು ಎಂಬ ಎರಡು ತುದಿಗಳ ಮಧ್ಯೆ ಕೆಲವು ದಿನ ಆಸೆ-ನಿರಾಸೆ, ಪ್ರೀತಿ-ದ್ವೇಷ, ಭಾವ-ಬುದ್ಧಿ, ಇಷ್ಟ-ಕಷ್ಟ, ಸಂಗ್ರಹ-ಅಸಂಗ್ರಹ, ಸಾಧನೆ-ಸವಾಲು… ಇವೆಲ್ಲವೂ ಸೇರಿದ ಬದುಕಿನ ಬೆಳಕು. ಈ ಬದುಕನ್ನೇ ಮಾಯೆ, ಕತ್ತಲು ಎಂದು ಹೇಳುವ ಒಂದು ಆಧ್ಯಾತ್ಮಿಕ ಚಿಂತನ ಧಾರೆಯೂ ಇದೆಯಲ್ಲವೆ? `ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’. `ಯಾಕೆ ಬಡಿದಾಡ್ತಿ ತಮ್ಮ ಮಾಯ ಮೆಚ್ಚಿ ಸಂಸಾರ ನೆಚ್ಚಿ’, `ಒಳಿತು ಮಾಡು ಮನುಜ, ನೀನಿರೋದು ಮೂರು ದಿವಸ’ ಇಂತಹ ಅನೇಕ ಗೀತೆಗಳು, ದಾಸವಾಣಿಗಳು ಬದುಕಿನ ಕ್ಷಣಭಂಗುರತೆಯನ್ನೇ ಹೇಳುತ್ತವೆ.
*****
`ಕೊನೆಗೂ ಉಳಿಯುವುದು ಅಕ್ಷರ’ ಈ ಮಾತನ್ನು ಹೇಳಿದ್ದು ನಮ್ಮ ನಾಡಿನ ಉತ್ತಮ ಸಾಹಿತ್ಯಕ ವಿಮರ್ಶಕರಲ್ಲೊಬ್ಬರಾದ, ಎಚ್ಚೆಎಸ್ಸಾರ್ ಎಂದು ಎಲ್ಲರೂ ಪ್ರೀತಿಯಿಂದ ಕರೆಯುವ ಡಾ.ಎಚ್.ಎಸ್.ರಾಘವೇಂದ್ರ ರಾವ್. `ಸಾಹಿತ್ಯ, ಸಂಗೀತ ನೃತ್ಯ ಮುಂತಾಗಿ, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಆಸಕ್ತಿ, ಪ್ರತಿಭೆ ಇರುವವರು ಯಾವ ಕ್ಷೇತ್ರವನ್ನು ತಮ್ಮದು ಎಂದು ಆಯ್ಕೆ ಮಾಡಿಕೊಳ್ಳಬೇಕು?’ ಎಂದು ನಾನು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಇದು.
ಇದನ್ನು ಮುಂದುವರಿಸಿ ಹೇಳುವುದಾದರೆ, ನಾವು ಸಣ್ಣವರಾಗಿದ್ದಾಗಿನಿಂದಲೂ ತುಂಬ ಪ್ರಚಲಿತವಾಗಿದ್ದ ಒಂದು ವಿಚಾರವೆಂದರೆ `ಅತ್ಯುತ್ತಮ ಕಲಾಕೃತಿಗಳಿಗೆ ಸಾವಿಲ್ಲ, ಅವು ಶಾಶ್ವತ’. ಉದಾಹರಣೆಗೆ ತಾಜಮಹಲು, ರಾಜಾ ರವಿವರ್ಮ ಅವರ ಚಿತ್ರಗಳು, ಎಂ.ಎಸ್.ಸುಬ್ಬಲಕ್ಷ್ಮೀ ಅವರ ಹಾಡುಗಳು, ರವೀಂದ್ರನಾಥ ಠ್ಯಾಗೋರರ ಕವಿತೆಗಳು …. ಹೀಗೆ. `ಎ ಥಿಂಗ್ ಆಫ್ ಬ್ಯೂಟಿ ಈಸ್ ಎ ಜಾಯ್ ಫಾರ್ ಎವರ್’ (ಸುಂದರ ವಸ್ತುವೊಂದು ಎಂದೆಂಗಿಗೂ ಸಂತೋಷಕರವೆ) ಎಂಬ ಕೀಟ್ಸ್ ಕವಿಯ ಜನಪ್ರಿಯ ಹೇಳಿಕೆ ಇದನ್ನೇ ಹೇಳುತ್ತದೆ.
*****
ಈಗ ನಮ್ಮ ಸಮಕಾಲೀನ ಜಗತ್ತಿನ ಶಾಶ್ವತ-ನಶ್ವರತೆಯ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.
ಇಂದಿನ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲಿ ಡಿಜಿಟಲ್ ಫೂಟ್‌ಪ್ರಿಂಟ್ – ಅಂಕೀಯ ಹೆಜ್ಜೆಗುರುತು – ಇದು ಒಳ್ಳೆಯದೋ ಕೆಟ್ಟದೋ ಅನ್ನುವ ಪ್ರಶ್ನೆ ಬೇರೆ, ಆದರೆ ಅದು ಶಾಶ್ವತವಾಗಿದ್ದುಬಿಡಬಹುದು! ಇದನ್ನು ನಿರ್ವಹಿಸುವುದು ಒಂದು ಮುಖ್ಯ ಸವಾಲಾಗುತ್ತಿದೆ ಈಗ.
ಇಂದಿನ ಸಾಮಾಜಿಕ ಮಾಧ್ಯಮಗಳ ಏರುಬ್ಬರದಲ್ಲಿ ಸಾಹಿತ್ಯ, ಹಾಡು, ಕಲೆ ಪ್ರತಿಯೊಂದೂ `ಇದೀಗ ಹುಟ್ಟಿದೆ, ಇದೀಗ ಸತ್ತೆ’ ಎಂಬಂತೆ ಕ್ಷಣಭಂಗುರವಾಗುತ್ತಿವೆ. `ಕಾಲದ ಪರೀಕ್ಷೆಯಲ್ಲಿ ಗೆದ್ದು ಎಲ್ಲ ಕಾಲಕ್ಕೂ ಉಳಿಯುವಂತಹ ಕಲೆ ಯಾವುದು? ಅದನ್ನು ಇಂದು ಹುಡುಕುವುದು ಹೇಗೆ?’ ತಕ್ಷಣದ ಜನಪ್ರಿಯತೆಯ ಭರಾಟೆಯಲ್ಲಿ ಗಟ್ಟಿ ಕಾಳು, ಜಳ್ಳು ಕಾಳು ಎಲ್ಲವನ್ನು ಸಹ ಒಂದೇ ರಾಶಿಯಲ್ಲಿ ಪೇರಿಸುವುದೋ, ಗಾಳಿಗೆ ತೂರುವುದೋ – ಇಂಥವು ನಡೆಯುವುದಿಲ್ಲ ಎಂದು ಖಾತ್ರಿ ಪಡಿಸುವುದು ಹೇಗೆ?

ಕಲಾಕೃತಿಗಳನ್ನು ತಾಳ್ಮೆಯಿಂದ ಅವಕ್ಕೆ ಎಷ್ಟು ಬೇಕೋ ಅಷ್ಟು ಸಮಯ ಕೊಟ್ಟು ಸೃಷ್ಟಿಸುವ ವ್ಯವಧಾನ ಹಾಗೂ ಏಕಾಗ್ರತೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆಯೇನೋ ಅನ್ನಿಸುತ್ತದೆ. ಎಲ್ಲವೂ ವೇಗವಾಗಿ, ಚುಟುಕಾಗಿ, ಸಂಕ್ಷಿಪ್ತವಾಗಿ ಇರಬೇಕಾದ ಇಂದಿನ ಸಂದರ್ಭದಲ್ಲಿ ಬದುಕು ಎಂಬುದು ಅರ್ಧ ನಿಮಿಷದಲ್ಲಿ ಮುಗಿಯಬೇಕಾದ ಜಾಹೀರಾತು ಅಥವಾ ಒಂದು-ಒಂದೂವರೆ ನಿಮಿಷದಲ್ಲಿ ಮುಗಿಯುವಂತಹ ದೃಶ್ಯಸುರುಳಿ(ರೀಲ್ಸ್). ಇಂತಹ ಕಾಲದಲ್ಲಿ ದಿನಗಟ್ಟಲೆ ಕುಳಿತು ಕಷ್ಟ ಪಟ್ಟು ಮಾಡಬೇಕದ ಕಲಾಸಾಧನೆಯ ಬಗ್ಗೆ ಆಕರ್ಷಣೆ ಕಡಿಮೆಯಾಗುತ್ತಿದೆಯೇ ಎಂಬ ಆತಂಕ ಕಾಡುತ್ತದೆ. ಬಹಳ ಅಚ್ಚರಿಯ ಸಂಗತಿ ಅಂದರೆ ತಮ್ಮ ಜೀವನದ ಚಿಕ್ಕ ಚಿಕ್ಕ, ಅಪ್ರಮುಖ ಅನ್ನಿಸುವ ವಿವರಗಳನ್ನು ಸಹ (ತಿನ್ನುವುದು, ಗೆಳೆಯರೊಂದಿಗೆ ಖಾಸಗಿ ಭೇಟಿಗಳು, ನಿತ್ಯದ ಅಡುಗೆ … ಎಲ್ಲವೂ ಅಂದರೆ ಎಲ್ಲವನ್ನು) ಸಾಮಾಜಿಕ ಮಾಧ್ಯಮದಲ್ಲಿ ಹಾಕಿದರೇನೆ ತಮ್ಮ ಬದುಕು ಸಾರ್ಥಕ ಅನ್ನುವ ಹಲವರು ನಮ್ಮ ನಡುವೆ ಇದ್ದಾರೆ. ಇದನ್ನು ತಮ್ಮನ್ನು ತಾವು ಪ್ರಸ್ತುತಗೊಳಿಸಿಕೊಳ್ಳುವ, ಶಾಶ್ವತವಾಗಿರಿಸುವ ಪ್ರಯತ್ನವನ್ನು ಇವರು ಮಾಡುತ್ತಿರಬಹುದು ಅನ್ನಿಸುತ್ತೆ.
ಒಟ್ಟಿನಲ್ಲಿ ಶಾಶ್ವತ ಮತ್ತು ನಶ್ವರ ಎಂಬುದರ ಬಗೆಗಿನ ಪರಿಕಲ್ಪನೆಗಳು ಪ್ರತಿಯೊಂದು ಕಾಲದಲ್ಲೂ ಮರುಹುಟ್ಟು ಪಡೆಯುತ್ತವೆ ಅನ್ನಿಸುತ್ತದೆ.

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

ನಮ್ಮೆಲ್ಲರ ಈಗಿನ ಬದುಕಿನ ಬಗ್ಗೆ ಕಣ್ತೆರಿಸುವ ಲೇಖನ. ತುಂಬ ಆಸಕ್ತಿಯಿಂದ ಓದಿಕೊಂಡೆ, ಧನ್ಯವಾದ ಮೇಡಮ್ 🙏🙏