ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿರುವ ಭಕ್ತರ ನಂಬಿಕೆ ಮತ್ತು ಕೈಂಕರ್ಯಗಳು ಹಾಗು ಅಲ್ಲಿ ಆವರಿಸಿಕೊಂಡಿದ್ದ ಮುಡಿವಾಳದ ಘಮ. ಅಲ್ಲಿಂದ ಮುಖ ಮಾಡಿದ್ದೆ ಕೇದಾರನಾಥನ ತಪ್ಪಲಿಗೆ. ಕಪರ್ದಿಯ ದರ್ಶನಕ್ಕೆ ಮೊದಲು ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ರಸ್ತೆ ಯಾನ ಕೊನೆಯಾಗುವುದು ಇಲ್ಲೇ. ಇಲ್ಲಿಂದ ಮುಂದೆ ದುರ್ಗಮ ದಾರಿ. ಕೋಲೂರಿ ಹತ್ತಿ ಹೋಗಬೇಕು ಇಲ್ಲವೇ ಇಲ್ಲಿನ ಕತ್ತೆಯನ್ನು ಹೋಲುವ ಅಲ್ಲಿನ ಕುದುರೆ ಏರಿ ಹೋಗಬೇಕು.
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ ನಿಮ್ಮ ಓದಿಗೆ.
ಭೀಮಾಶಂಕರ, ನಾಗೇಶ್ವರ, ಘೄಷ್ಣೇಶ್ವರ, ಸೋಮನಾಥ, ವಿಶ್ವೇಶ್ವರ, ರಾಮೇಶ್ವರ, ಕೇದಾರೇಶ್ವರ, ತ್ರ್ಯಂಬಕೇಶ್ವರ, ಚಿದಂಬರ, ವೈದ್ಯನಾಥೇಶ್ವರ, ನಂಜುಂಡೇಶ್ವರ, ಮಹಾಬಲೇಶ್ವರ, ಕಾಲಭೈರವೇಶ್ವರ, ತ್ರಿಕಾಲೇಶ್ವರ, ಪಶುಪತಿನಾಥ, ಅಘಂಜರೇಶ್ವರ, ಮಂಜುನಾಥ, ಅಮರನಾಥ, ಜ್ಯತೇಶ್ವರ, ಮದ್ಯಮೇಶ್ವರ, ರುದ್ರನಾಥ, ಹೀಗೆ ಹತ್ತಾರು ಹೆಸರುಗಳಲ್ಲಿ ಸಿಕ್ಕವ ಇವ. ಮೊನ್ನೆಯ ಶಿವರಾತ್ರಿಯ ದಿನ ನೆನಪಿಗೂ ಬಂದವ. ಯಾವ ಹೆಸರಿನಲ್ಲೇ ಆದರೂ ಮುಕ್ಕಣ್ಣ ಸಿಕ್ಕ ಮೂರು ಸ್ಥಳಗಳ ನೆನಪು ಶಾಶ್ವತ.
ಅದರಲ್ಲೊಂದು ಈ ಜಾಗ. ಉತ್ತರಾಖಂಡವೇ ಅಡಿಗೊಂದೊಂದು ಪುರಾಣ ಪುಣ್ಯಕಥೆಗೆ ಹಿಡಿದ ಕನ್ನಡಿ. ಕೈಯಳತೆಯಲ್ಲಿ ಹಲವಾರು ನದಿಗಳ ಝುಳುಝುಳು. ಕಣ್ಣಳತೆಯಲ್ಲಿ ಹಿಮಾಲಯ ಪರ್ವತಶ್ರೇಣಿ. ಬೆನ್ನು ಹಿಡಿದು ಎಳೆಯುವ ಹಸಿರು ಪ್ರಪಾತಗಳು. ಕಾಲ್ಬೆರಳು ಮುದ್ದಿಸೋ ಬಿಸಿನೀರಿನ ಬುಗ್ಗೆಗಳು. ಬೊಗಸೆ ಭರಿಸುವಷ್ಟು ನೀರಿನ ಕುಂಡಗಳು. ಮನಸ್ಸು ಧರಿಸುವಷ್ಟು ಪ್ರಯಾಗಗಳು. ಪ್ರಕೃತಿ ಮೈಹರವಿಕೊಂಡು ಸೌಂದರ್ಯವನ್ನು ಕೊಡವಿಕೊಳ್ಳುತ್ತಿರುವ ಭೂಮಿಯಲ್ಲಿ ಸ್ವಯಂಭುಗೊಂಡಿದ್ದಾನೆ ಕೇದಾರನಾಥ.
ಅವನನ್ನು ಮುಟ್ಟಲು ಮಾರ್ಗ ಹಲವು ಆದರೆ ನಾನು ಆಯ್ಕೆ ಮಾಡಿಕೊಂಡಿದ್ದು ರಿಷಿಕೇಶದಿಂದ ರಸ್ತೆ ಪ್ರಯಾಣ. ಭೂಪಟದಲ್ಲಿ ಕೇವಲ ಇನ್ನೂರು ಕಿಲೋಮೀಟರ್‌ಗಳ ದಾರಿ ಅಂತ ನಮೂದಾಗಿದ್ದರೂ ಕೇದಾರೇಶ್ವರನ ತಪ್ಪಲು ತಲುಪಲು ತೆಗೆದುಕೊಂಡ ಸಮಯ ಮಾತ್ರ ಬರೊಬರಿ ಏಳು ಗಂಟೆಗಳು. ಕಿರಿದಾದ ಹಳ್ಳಕೊಳ್ಳಗಳಿದ್ದ ಮುರಿದು ಹರಿದುಹೋದ ಟಾರು ರಸ್ತೆ. ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಸಾಥ್ ಕೊಡುವ ಬಂಡೆಬೆಟ್ಟಗಳ ಮತ್ತು ಅಲಕಾನಂದಳ ಲಹರಿ. ಇನಿತಿನಿತೇ ಅಳತೆಯಲ್ಲಿ “ನಿಂತು ಹೊರಡಿ” ಅನ್ನುವ ಆಕರ್ಷಣಗೆ ಒಳಪಡಿಸುವ ಮಹಿಮಾಸ್ಥಳಗಳು. ನಾಗರೀಕ ಸಮಾಜಕ್ಕೆ ಕುರುಹುಗಳಾಗಿ ಸಿಗುವ ಚೆಕ್‌ಪೋಸ್ಟ್‌ಗಳು. ರಾಂಪುರವೆನ್ನುವ ತಂಗುದಾಣದಂಥ ಊರು ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು.
ಅಲಕಾನಂದ-ಮಂದಾಕಿನಿಯರ ಸಂಗಮವಾದ ರುದ್ರಪ್ರಯಾಗ ಶ್ರೀರಾಮಚಂದ್ರ ತನ್ನ ಪೂರ್ವಿಕರಿಗೆ ತರ್ಪಣಕೊಟ್ಟ ಸ್ಥಳ. ಮತ್ತೊಂದಷ್ಟು ಹೊತ್ತಿನ ಪ್ರಯಾಣದಲ್ಲಿ ಎದುರಾಗಿದ್ದು ಭಾಗೀರಥಿ-ಮಂದಾಕಿನಿಯರ ಸಂಗಮದ ದೇವಪ್ರಯಾಗ. ಇಲ್ಲಿ ಬ್ರಹ್ಮ ತಪಸ್ಸು ಮಾಡಿದ ಗುರುತಿಗೊಂದು ಶ್ರೀರಾಮ ಮಂದಿರವಿದೆ. ಇನ್ನೊಂದಷ್ಟು ದೂರದಲ್ಲಿ ಸಿಕ್ಕಿದ್ದು ತ್ರಿಯುಗ ನಾರಾಯಣನ ಸ್ಥಾನ. ಪಾರ್ವತಿ ಕಲ್ಯಾಣ ನಡೆದದ್ದು ಎಂದು ಹೇಳಲಾಗುವ ಮನಮೋಹಕ ಮಂದಿರವದು. ಅಲ್ಲೊಂದು ಪುಟ್ಟ ಹಳ್ಳಿ. ಬೆಚ್ಚಬೆಚ್ಚಗೆ ಧಿರಿಸು ಧರಿಸಿ ದೇವಾಲಯದ ಪ್ರಾಂಗಣದಲ್ಲೇ ಓಡಾಡುವ ಅಲ್ಲಿನ ಮೃದು ಭಾಷಿ ಜನರಿಂದ ದಿಬ್ಬಣದಗಳಂತಿಕೆಯ ಸಂಭ್ರಮ.
ಶಿವ ಪಾರ್ವತಿಯರು ಸಪ್ತಪದಿ ತುಳಿದುದರ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಅದೇ ಅಗ್ನಿಯನ್ನು ಅಂದಿನಿಂದ ಈ ಘಳಿಗೆಯವರೆಗೂ ಆರದಂತೆ ಕಾಯುತ್ತಿರುವ ಭಕ್ತರ ನಂಬಿಕೆ ಮತ್ತು ಕೈಂಕರ್ಯಗಳು ಹಾಗು ಅಲ್ಲಿ ಆವರಿಸಿಕೊಂಡಿದ್ದ ಮುಡಿವಾಳದ ಘಮ. ಅಲ್ಲಿಂದ ಮುಖ ಮಾಡಿದ್ದೆ ಕೇದಾರನಾಥನ ತಪ್ಪಲಿಗೆ. ಕಪರ್ದಿಯ ದರ್ಶನಕ್ಕೆ ಮೊದಲು ಭಕ್ತರನ್ನು ಮೀಯಿಸಿ ಶುಚಿಗೊಳಿಸುವ ಬಿಸಿನೀರಿನ ಬುಗ್ಗೆಯ ಗೌರಿಕುಂಡ ಈ ತಪ್ಪಲಿಗೆ ಆತುಕೊಂಡಿದೆ. ರಸ್ತೆ ಯಾನ ಕೊನೆಯಾಗುವುದು ಇಲ್ಲೇ. ಇಲ್ಲಿಂದ ಮುಂದೆ ದುರ್ಗಮ ದಾರಿ. ಕೋಲೂರಿ ಹತ್ತಿ ಹೋಗಬೇಕು ಇಲ್ಲವೇ ಇಲ್ಲಿನ ಕತ್ತೆಯನ್ನು ಹೋಲುವ ಅಲ್ಲಿನ ಕುದುರೆ ಏರಿ ಹೋಗಬೇಕು. ಅದೂ ಸಾಧ್ಯವಿಲ್ಲವೆನಿಸಿದರೆ ಇಬ್ಬರು ಪಾಳಿ ಬದಲಿಸುತ್ತಾ ಹೊತ್ತು ಸಾಗುವ ಪಲ್ಲಕ್ಕಿಯಂಥ ವ್ಯವಸ್ಥೆ ಇದೆ. ಹದಿನಾಲ್ಕು ಕಿಲೋಮೀಟರ್‌ಗಳ ಈ ದಾರಿಯನ್ನು ಕ್ರಮಿಸಲು ಸರಾಸರಿ ಬೇಕಾಗುವ ಸಮಯ ನಾಲ್ಕರಿಂದ ಆರು ಘಂಟೆಗಳು. ನಡೆದುಕೊಂಡು ಹತ್ತುವವರಿಗೆ ಇಪ್ಪತ್ತೈದು ಮೂವತ್ತು ರೂಪಾಯಿಗಳಿಗೆ ಒಂದು ಊರುಗೋಲು ಬಾಡಿಗೆಗೆ ಸಿಗುತ್ತೆ.
ಪಾಪದ ಹುಡುಗನೊಬ್ಬ ಅವನ ಕುದುರೆಯೇರಿ ಹೋಗಬೇಕೆಂದು ದುಂಬಾಲು ಬಿದ್ದಿದ್ದ. ಆ ಕುದೆರೆಯೋ ನನ್ನ ಹೊರುವ ಖಯಾಲಿನಲ್ಲೇ ತನ್ನ ಕಾಲು ಹೊರಳಿಸಿಕೊಂಡು ಬಿದ್ದುಹೋಗುವಷ್ಟು ಸಾಧುವಾಗಿ ಕಾಣುತ್ತಿತ್ತು. ಆದರೂ ಆ ಹುಡುಗನ ದಮ್ಮಯ್ಯಕ್ಕೆ ಮನಸೋತು ಎರಡು ಸಾವಿರದೇಳುನೂರು ರೂಪಾಯಿಗಳಿಗೆ ಆ ಕುದುರೆ ನನ್ನ ಹೊರಲು ಸಿದ್ಧವಾಯ್ತು. ಅವನ ಮಾತಿಗೆ ಬೆಲೆಕೊಡುವಂತೆ ಮಧ್ಯೆ ಮಧ್ಯೆ ಅಶ್ವವನ್ನೇರಿ ನಡುನಡುವೆ ಪಾದಾಳುವಾಗುತ್ತಿದ್ದೆ. ಅಬ್ಬಬ್ಬಾ, ಅಸಾಧ್ಯ ಇಕ್ಕಟ್ಟಿನ, ಕಲ್ಲುಭರಿತ, ಕೊಚ್ಚೆ ಸಹಿತವಾದ ದಾರಿ. ಒಂದಡಿಯೂ ಅಗಲವಿಲ್ಲದ್ದ ರಸ್ತೆಯಲ್ಲಿ ಒಂದೂರಿಗಾಗುವಷ್ಟು ಜನಜಂಗುಳಿ. ಕಣ್ಣು ಮಿಟುಕಿಸಿದರೆ ಅಲಕಾನಂದಳ ಘಾರಘಾರಿಯಲ್ಲಿ ಒಂದಾಗುವ ಆತಂಕ. ಎಡಕ್ಕೆ ಹೊರಳಿದರೆ ಹಿಮಪಾತದಲ್ಲಿ ಸರಿದುಹೋಗುವ ಧಾವಂತ. ಮಾರ್ಗಮಧ್ಯದಲ್ಲಿ ನೀರಿನ ಬಾಟಲಿಗಳು, ಜೂಸಿನ ಟೆಟ್ರಾ ಪ್ಯಾಕ್‌ಗಳು, ಬಿಸ್ಕೇಟು ಮ್ಯಾಗಿಗಳು ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ ಆ ರಸ್ತೆಯನ್ನು ನೋಡಿದಾಗ ಅದನ್ನು ಸುಗಮಗೊಳಿಸಬಹುದಾದ ಎಲ್ಲಾ ಸಾಧ್ಯತೆಗಳು ಕಾಣುತ್ತಿತ್ತು. ಎಲ್ಲೋ ಏನೋ ಅಡೆತಡೆಯಿದೆ ಎನ್ನುವ ಅನುಮಾನವೂ ಹೊಕ್ಕಿತು.
ಅಲ್ಲೊಂದು ಕಡೆ ಕುದುರೆಗಳ ಜಾತ್ರೆ ನಡೆಯುತ್ತಿದೆಯೇನೋ ಅನ್ನುವ ಗುಮಾನಿ ಬರುವ ಹಾಗಿತ್ತು. ಹತ್ತಿರ ಹೋಗಿ ನೋಡಿದರೆ ಮಾಲೀಕರು ಅವುಗಳಿಗೆ ಬೆಲ್ಲ ನೀರು ಕೊಡುತ್ತಿದ್ದರು. ಅವುಗಳನ್ನು ಒಂದಷ್ಟು ಮುದ್ದೂ ಮಾಡಿ ಅಲ್ಲೇ ಕುಳಿತೆ. ಮಾತ್ಮಾತುಗಳ ನಡುವೆ ಅವರನ್ನು ಕೇಳಿಯೇಬಿಟ್ಟೆ “ಈ ರಸ್ತೆಯನ್ನು ನೀವುಗಳು ಯಾಕೆ ಉದ್ಧಾರ ಮಾಡಲು ಸರ್ಕಾರವನ್ನು ಒತ್ತಾಯಿಸಬಾರದು” ಅಂತ. ಆಗ ತಿಳಿದದ್ದು, ಅಲ್ಲಿ ಕುದುರೆ ಮತ್ತು ಡೋಲಿ ನಡೆಸಿ ಹೊಟ್ಟೆಹೊರೆಯುವ ದೊಡ್ಡ ದಂಡೊಂದಿದೆ. ಸರ್ಕಾರ ಕೆಲವು ಬಾರಿ ರೋಪ್ ವೇ ಹಾಕಲು ಮತ್ತು ರಸ್ತೆ ದುರಸ್ತಿ ಮಾಡಲು ಮುಂದಾದಾಗ ಇವರುಗಳು ದೊಡ್ಡ ಹೋರಾಟವನ್ನೇ ಮಾಡಿ ಅದಕ್ಕೆ ತಡೆಯೊಡ್ಡಿದರು ಅಂತ. ಅಬ್ಬಬ್ಬಾ ಅಷ್ಟೆತ್ತರ ಹಿಮಶಿಖರಗಳನ್ನೂ ಬಿಟ್ಟಿಲ್ಲ ಕಲಿಯುಗದ ರಾಜಕೀಯ.
ನಾಲ್ಕು ಘಂಟೆಗಳವಧಿಯಲ್ಲಿ, ಸಮುದ್ರ ಮಟ್ಟದಿಂದ ಮೂರು ಸಾವಿರದ ಐನೂರ ಎಂಭತ್ತ್ನಾಲ್ಕು ಮೀಟರ್‌ಗಳಷ್ಟು ಎತ್ತರವಿರುವ ಕೇದಾರನಾಥನ ಪರ್ವತವನ್ನು ತಲುಪಿದಾಗ ಮೈನಸ್ ನಾಲ್ಕು ಡಿಗ್ರೀ ತೋರಿಸುತ್ತಿತ್ತು ಮಾಪನ. ಉಸಿರು ನನ್ನಲ್ಲಿಲ್ಲ ಎನಿಸಲು ಶುರುವಾಯ್ತು. ಮೊದಲೇ ಕಾಯ್ದಿರಿಸಿದ ಹೋಟೆಲ್ ಜಾಗಕ್ಕೆ ಹೋದಾಗ ಬೆನ್ನುಮೂಳೆಯ ತುದಿಗೆ ಚಳಿ ಹತ್ತಿತ್ತು. ಮೈಮೇಲೆ ಮಣಭಾರದ ಉಲ್ಲನ್ ಹೊದ್ದರೂ ಉಸಿರು ಬಾರದು. ಬಿಸಿ ಚಹಾ ಕುಡಿದು ಮಲಗೆದ್ದಾಗ ಇನ್ನೂ ಸಂಜೆಯ ನಾಲ್ಕು ಗಂಟೆ. “ಹೋಗಿಬರಲೇ” ಅಂತ ಮುದ್ದಾಗಿ ಕೇಳುತ್ತಿದ್ದ ಸೂರ್ಯ. ಏನೋ, ನಾ ಬೇಡವೆಂದರೆ ಸರಿ ರಾತ್ರಿಯೂ ನನ್ನೊಡನೆ ನಿಲ್ಲುವವನ ಹಾಗೆ!
ಕಾಲ್ಕೈದು ಚೀಲಗಳು, ಕಿವಿ ತಲೆ ಕವರ್ಗಳು ಎಲ್ಲಾ ಹಾಕಿಕೊಂಡು, ಊರುಗೊಲನ್ನು ಹಿಡಿದು ದೇವಸ್ಥಾನದ ದಾರಿಗಿಳಿದೆ. ರಸ್ತೆಯುದ್ದಕ್ಕೂ ಹೋಟೆಲ್ ತಂಗುದಾಣಗಳು, ಚಹಾ, ಮ್ಯಾಗಿ, ಜಿಲೇಬಿ, ಸಮೋಸ ಮಾಡುವ ಬಿಸಿಬಿಸಿ ಅಂಗಡಿಗಳು, ದವಾಖಾನೆಗಳನ್ನು ನೋಡುತ್ತಾ ದೇವಸ್ಥಾನದ ಮುಂದೆ ನಿಲ್ಲುವಷ್ಟರಲ್ಲಿ ಗೋಧೂಳಿ ಬೆಳಕಿಗೆ ವಿದ್ಯುದ್ದೀಪಾಲಂಕಾರದ ಝಗಮಗ ಹಿಮಸ್ವರ್ಗವನ್ನು ತೋರುತ್ತಿತ್ತು. ದೊಡ್ಡ ಕ್ಯೂ, ಭಾರೀ ಚಳಿ, ಜೋರು ಹಸಿವು, ಮರೆತ ಉಸಿರು ಎಲ್ಲವೂ ಒಟ್ಟಿಗೆ ಎದುರಾಯ್ತು. ಮೊದಲು ಪ್ರದಕ್ಷಿಣೆ ಬರೋಣ ಅಂತ ಹಿಮದೊಳಗೆ ಹೆಜ್ಜೆ ತೂರಿಸಿ ನಡೆದಾಗ ಸಿಕ್ಕಿದ್ದು ಆದಿ ಶಂಕರಾಚಾರ್ಯರು ಸಮಾಧಿಯಾಗಲು ಹಿಮದೊಳಗೆ ನಡೆದು ಕಣ್ಮರೆಯಾದ ಜಾಗ. ಅಲ್ಲೊಂದು ಅಮೃತ ಶಿಲೆಯ ಮಂದಿರ, ಶಂಕರರ ಮೂರ್ತಿ ಮತ್ತು ಶಿವನ ಲಿಂಗ.
ಸತ್ಯಯುಗದಲ್ಲಿದ್ದ ಕೇದಾರ ಅನ್ನುವ ರಾಜನಿಗೆ ಇದ್ದ ವರದಂತೆ ಈ ಜಾಗಕ್ಕೆ ಕೇದಾರನಾಥ ಎನ್ನುವ ಹೆಸರು ಬಂದಿತಂತೆ. ಪಾಂಡವರು ಯುದ್ಧದಲ್ಲಿ ರಕ್ತಸಿಕ್ತಗೊಂಡಿದ್ದ ತಮ್ಮ ಮೈಮನಸ್ಸುಗಳನ್ನು ಶುಚಿಗೊಳಿಸಬೇಕೆಂದು ಶಿವನನ್ನು ಬೇಡಿಕೊಂಡು ಹಿಮಾಲಯದಲ್ಲಿ ಅಲೆಯುತ್ತಿದ್ದಾಗ, ಶಂಕರನು ಇವರನ್ನು ಪರೀಕ್ಷೆ ಮಾಡಬೇಕೆಂಬ ಉದ್ದೇಶದಿಂದಲೇ ಎತ್ತಿನ ಚೋಹದಲ್ಲಿ ಎದುರಾದನಂತೆ. ಧರ್ಮರಾಯನ ದಿವ್ಯದೃಷ್ಟಿಗೆ ಆ ಎತ್ತು ಶಿವನೆಂದು ತಿಳಿದು ಬಿಟ್ಟಾಗ ಅವನಾಜ್ಞೆಯಂತೆ, ಭೀಮನು ಎತ್ತನ್ನು ಹಿಡಿಯಲು ಹೋದಾಗ, ಅವನ ಕೈಗೆ ದಕ್ಕಿದ್ದು ಅದರ ಡುಬ್ಬ ಮಾತ್ರವಂತೆ. ಆ ಕಾರಣಕ್ಕಾಗಿಯೇ ಇಲ್ಲಿ ಶಿವನ ಲಿಂಗ ಎತ್ತಿನ ಬೆನ್ನ ಮೇಲಿನ ಡುಬ್ಬದಾಕಾರದಲ್ಲಿದೆ ಎನ್ನುವ ಕಥೆಯನ್ನು ಅಮ್ಮ ಮೊದಲೇ ಹೇಳಿದ್ದಳು.
ಚಾರ್‍ಧಾಮ ಯಾತ್ರಿಗಳು ಗಂಗೋತ್ರಿ, ಯಮುನೋತ್ರಿಗಳಿಂದ ತಂದ ಜಲವನ್ನು ಇಲ್ಲಿ ಶಿವನಿಗೆ ಅರ್ಪಿಸುತ್ತಾರೆ. ಅಕ್ಷಯ ತದಿಗೆಯಂದು ಶುರುವಾಗುವ ಕೇದಾರನಾಥನ ದರ್ಶನ ಈ ಸ್ಥಳದಲ್ಲಿ ಭಾಯಿದೂಜ್‌ನ ದಿನ ಕೊನೆಯಾಗುತ್ತೆ. ನಂತರದ ಆರು ತಿಂಗಳು ಊಖೀಮಠದಲ್ಲಿ ದರ್ಶನ ಲಭ್ಯ. ಹೀಗೆ ಇನ್ನೊಂದಷ್ಟು ಕಥೆ ಓದುತ್ತಾ ನಿದ್ದೆಗೆ ಜಾರಿದ್ದವಳನ್ನು ಎಚ್ಚರಿಸಿದ್ದು ದಬದಬ ಬಡಿಯುತ್ತಿದ್ದ ಬಾಗಿಲಿನ ಶಬ್ದ.
ಬೆಳಗಿನ ಝಾವ ಮೂರಕ್ಕೆ ಬಾಗಿಲು ತೆರೆದು ನೋಡಿದಾಗ, ಹೋಟೇಲಿನ ಮ್ಯಾನೇಜರ್ “ದೀದಿ ನಿಮಗೆ ಒಂದು ಖಾಸ್ ದರ್ಶನ ಬೇಕಾದರೆ ಈಗ ನನ್ನೊಡನೆ ಬನ್ನಿ” ಅಂದ. ಆ ಕೊರೆತಕ್ಕೆ ಅರೆ ನಿದ್ರೆಗೆ ತಲೆ ಸುತ್ತುತ್ತಿತ್ತು. ಸ್ನಾನಮಡಿ ಅಂತ ನಿಂತಿದ್ದರೆ ನಾ ಕೊರಡಾಗುತ್ತಿದ್ದೆ. ಹಾಗಾಗಿ ಸೀದಾ ಅವನೊಡನೆ ಹೋಗಿಬಿಟ್ಟೆ. ದೇವಸ್ಥಾನದ ಮೆಟ್ಟಿಲುಗಳಮೇಲೆ ಷೂಝ್ ಕಳಚಿದಾಗ ಥಂಡಿಗೆ ಕಣ್ಣ್ಗುಡ್ಡೆ ನೆತ್ತಿ ಸೇರಿದಂತಾಯ್ತು. ಮುಂಭಾಗದಲ್ಲಿ ತೋಳಗಳಂತಿದ್ದ ಎರಡು ಕಾರ್ಗಪ್ಪು ನಾಯಿಗಳು. ಸದಾಕಾಲವೂ ಅಲ್ಲೇ ಇರುತ್ತವಂತೆ. ಕೇಸರಿಧಾರಿಯೊಬ್ಬ ಬಂದು ತಾಮ್ರದ ಸ್ಥಾಲಿಯಲ್ಲಿ ನೀರು ಕೊಟ್ಟು ಒಳಹೋಗುವಂತೆ ಹೇಳಿ ಪೂಜೆ ಮಾಡಿ ಬನ್ನಿ ಅಂದರು.
ಹೊಸಿಲು ದಾಟಿ ಅಡಿಯಿಟ್ಟಾಗ ಭೋಲೆನಾಥ ಒಬ್ಬನೇ ಬರಮಾಡಿಕೊಂಡ. ಪ್ರದಕ್ಷಿಣೆ ಬಂದು ಅವನ ನೆತ್ತಿಗೆ ಅರ್ಘ್ಯಾಭಿಷೇಕ ಮಾಡಿ, ಕಣ್ಣ್ಗೊತ್ತಿಕೊಳ್ಳಲು ಅವನನ್ನು ಮುಟ್ಟಿಯೇ ಬಿಟ್ಟೆ. ಓಹ್, ಅದೆಂತಹ ಅದ್ಭುತ, ರೋಚಕ ಕ್ಷಣ. ಶಾಂತಮೂರ್ತಿಯಾಗಿದ್ದನವ, ಕಾತರಿಸುವವಳಾಗಿದ್ದೆ ನಾನು. ಮುಚ್ಚಿದ ಎವೆಯೊಳಗೆ ಪರಮಾತ್ಮನ ಸಂಚಾರ. ಪರಮಾನಂದದ ಉಚ್ಛ್ರಾಯ ಸ್ಥಿತಿಯಲ್ಲಿದ್ದೆ. ಪುರೋಹಿತನೊಬ್ಬ ಒಳಬಂದು ಧ್ವನಿಯೆತ್ತಿದಾಗಲೇ ಬಂದ ಪ್ರಜ್ಞೆ. ಆನಂದದಿಂದ, ಸಮಾಧಾನದಿಂದ ಹೊರಬಂದೆ. ಒಂದು ಗಂಟೆಯ ನಂತರ ಮತ್ತೊಂದು ದರ್ಶನಕ್ಕಾಗಿ ಒಳಹೋದಾಗ ಕೇದಾರನಾಥ ಬೆಳ್ಳಿಯ ಮುಖವಾಡ ಧರಿಸಿ ಮೀಸೆ ಹೊತ್ತು ಕೀಲಾಕ್ಷಿಯಾಗಿಬಿಟ್ಟಿದ್ದ.
ಹೊರಬಂದಾಗ ಕ್ಯಾಮೆರಾ ಲೆನ್ಸ್‌ನ ಝೂಂನಲ್ಲಿ ಹೆಲಿಕಾಪ್ಟರ್ ಕಾಣಿಸಿತು. ಹುಮ್ಮಸ್ಸು ಹುಚ್ಚಾಗಿ ಹರೀತು. ಹೆಲಿಕಾಪ್ಟರ್ನಲ್ಲಿ ಕೆಳಗಿಳಿಯೋಣ ಅನ್ನಿಸಿ ಹೋಗಿ ವಿಚಾರಿಸಿದಾಗ ತಿಳಿಯಿತು, ಕೆಳಗಿಳಿಯಲು ಬೇಕಾದ್ದು ಏಳು ನಿಮಿಷ ಮತ್ತು ಟಿಕೆಟ್ಟಿಗೆ ಒಬ್ಬರಿಗೆ ಏಳು ಸಾವಿರ! ‘ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೋ’ ಎಂದ ದಾಸರನ್ನು ನೆನೆಯುತ್ತಾ, ಈಗಾಗಲೇ ರೆಕ್ಕೆ ಬಡಿಯುತ್ತಾ ನಿಂತಿದ್ದ ಗಾಳಿತೇಲು ಬಂಡಿಯನ್ನು ಹತ್ತಿದೆ. ಕ್ಯಾಪ್ಟನ್ ಮಲ್ಹೋತ್ರ ಸ್ವಾಗತಿಸಿ ಸೀಟ್ ಬೆಲ್ಟ್ ಹಾಕಿಕೊಳ್ಳಲು ಹೇಳಿದರು. ಗಾಳಿಯಲ್ಲಿ ತೇಲುತ್ತಿದ್ದಾಗ ಕೆಳಗೊಮ್ಮೆ ಬಗ್ಗಿ ನೋಡಿದೆ. ಅಕಸ್ಮಾತ್ ಅಲ್ಲೇನಾದರು ದುರಂತ ಸಂಭವಿಸಿದರೆ ಒಂದೇಕ್ಷಣದಲ್ಲಿ ಪಂಚಭೂತಗಳೊಂದಿಗೆ ಲೀನವಾಗುವಷ್ಟು ಖಚಿತವಾದ ಭಯಂಕರ ಆದರೂ ರುದ್ರರಮಣೀಯ ನೋಟವಿತ್ತಲ್ಲಿ. ತಕ್ಷಣ ಹೆಲಿಕಾಪ್ಟರ್ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್‍ಆರ್ ನೆನಪಾಯ್ತು. ಮೂರು ನಾಲ್ಕು ದಿನಗಳಾದರೂ ಅವರ ಅವಶೇಷ ಸಿಗದೆ ಆ ಘಟನೆ ಅನುಮಾನಕ್ಕೆಡೆ ಮಾಡಿಕೊಟ್ಟಿತ್ತು. “ಇದೆಲ್ಲಾ ಬರೀ ರಾಜಕೀಯ. ಮಿಲಿಟರಿ ಪಡೆಗೂ ಹುಡುಕಲಾಗದ್ದು ಏನಿದೆ” ಎನ್ನುವ ಬಿರುಸು ನುಡಿ ಆಡಿದವರಲ್ಲಿ ನಾನೂ ಒಬ್ಬಳು. ಆದರೆ ಈ ಹೆಲಿಕಾಪ್ಟರ್ ಹಾರಾಟ ಸತ್ಯದರ್ಶನ ಮಾಡಿಸಿತ್ತು. ಒಂದು ಮಾತಾಗುವ ಮುನ್ನ ಎರಡು ಆಲೋಚನೆಗಳಾಗಲಿ ಎನ್ನುವ ಪಾಠವಿತ್ತಿತ್ತು. ಈ ಜಗತ್ತಿನಲ್ಲಿ ಏನೂ ಆಗುವ ಸಾಧ್ಯತೆಯಿದೆ. ‘ತೃಣಮಪಿ ಚಲತೀ ತೇನವಿನ’ ಅಂತ ಮತ್ತೊಮ್ಮೆ ಕೇದಾರನಾಥ ನನ್ನೊಳಗೆ ತಳವೂರಿ ಬೀಳ್ಕೊಟ್ಟಿದ್ದ. ಸಂಪೂರ್ಣ ಶರಣಾಗಿ, ಗೌಣವಾಗಿ, ಕರಗಿಹೋಗಿದ್ದೆ.
ಇನಿತಿನಿತೇ ಅಳತೆಯಲ್ಲಿ “ನಿಂತು ಹೊರಡಿ” ಅನ್ನುವ ಆಕರ್ಷಣಗೆ ಒಳಪಡಿಸುವ ಮಹಿಮಾಸ್ಥಳಗಳು. ನಾಗರೀಕ ಸಮಾಜಕ್ಕೆ ಕುರುಹುಗಳಾಗಿ ಸಿಗುವ ಚೆಕ್‌ಪೋಸ್ಟ್‌ಗಳು. ರಾಂಪುರವೆನ್ನುವ ತಂಗುದಾಣದಂಥ ಊರು ತಲುಪುವಷ್ಟರಲ್ಲಿ ರಾತ್ರಿಯಾಗಿತ್ತು.
ಇನ್ನೊಮ್ಮೆ ಸಿಕ್ಕವನು ಗಂಗೆಯ ಶಿರದಲ್ಲಿ ಶಂಕರ. ಅವತ್ತು ಅರುಣಾಚಲಪ್ರದೇಶದ ಝೀರೋ ಎನ್ನುವ ಸ್ಥಳದಿಂದ ಆದಿವಾಸಿಗಳ ಹಾಡಿ ಬಿಟ್ಟು ಹೊರಟಾಗ ಅನೂಹ್ಯ ಲೋಕದ ಗುಂಗಿನಲ್ಲಿ ದೇಹದ ಅರಿವೇ ಇಲ್ಲದೆ ಸುಮ್ಮನೆ ಹೋಗುತ್ತಿದ್ದೆ. ಪಟ್ಟಿಯಲ್ಲಿ ಮುಂದೆ ನೋಡಬೇಕಾದ ಜಾಗದ ಗುರುತು ಇತ್ತು. ಆದರೂ ಇಹಪರದ ಅರಿವಿಲ್ಲದಂತಹಾ ಭಾವ. ಹಗುರವಾಗಿದ್ದೆ. ಅಂದುಕೊಂಡರೆ ಎಲ್ಲವೂ ಖಾಸಗಿ ಇಲ್ಲವಾದಲ್ಲಿ ನಾನೂ ನನ್ನದಲ್ಲ ಎನ್ನುವ ಪಾಠ ಕಲಿಸಿತ್ತು ಹಿಂದಿನದೆರಡು ರಾತ್ರಿ ಹಗಲುಗಳು. ಟ್ಯಾಕ್ಸಿ ಹತ್ತಿ ಕುಳಿತೆ. ರಂಜು ಭಯ್ಯ ಕೇಳುತ್ತಲೇ ಇದ್ದ “ದೀದಿ ಈಗ ಎಲ್ಲಿಗೆ ಹೋಗೋಣ”. ದಪ್ಪ ಉಣ್ಣೆಯ ಸ್ವೆಟರ್ ಅನ್ನು ಸೀಳಿ ಛಳಿ ಒಳನುಗ್ಗಿ ತಣ್ಣಗೆ ಮುದ್ದಿಸುತ್ತಿತ್ತು. ಅಷ್ಟರಲ್ಲಿ ಹಿಂದಿನ ದಿನ ಬಸ್ತಿಯ ದಾರಿ ತೋರಿದ್ದ ನಗುಮೊಗದ ಗಂಡಸೊಬ್ಬರು ದಾರಿಯಡ್ಡಗಟ್ಟಿ “ಓಹ್, ವಾಪಸ್ಸು ಹೊರಟಿರಾ. ಶಿವಲಿಂಗ ನೋಡಿಕೊಂಡು ಹೋಗಿ” ಎಂದು ಹೇಳಿ ಕೈ ಬೀಸಿದರು.
ಗಾಡಿ ಪರ್ವತದ ಇಳಿಜಾರಿನಲ್ಲಿ ಓಡುತ್ತಿತ್ತು. ಪ್ರಪಾತ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಕಣ್ಣುಮುಚ್ಚಾಲೆಯಾಟವಾಗುತ್ತಿತ್ತು. ಇಷ್ಟು ಹೊತ್ತು ಇಳಿಯುತ್ತಿದ್ದ ಗಾಡಿಯನ್ನು ಈಗ ಮೇಲೆ ಹತ್ತಿಸತೊಡಗಿದ್ದ ರಂಜು. ಸ್ವಲ್ಪಸ್ವಲ್ಪವೇ ಎಚ್ಚರಕ್ಕೆ ಹೊಂದಿಕೊಳ್ಳುತ್ತಿದ್ದ ನಾನು ಅವನಿಗೆ ದಾರಿ ತಿಳಿದಿದೆ ಎನ್ನುವ ನಂಬಿಕೆಯಲ್ಲೇ ಸುಮ್ಮನೆ ಕುಳಿತಿದ್ದೆ. ತೀರಾ ಕಡಿದಾದ ಮಣ್ಣಿನ ರಸ್ತೆಯಂತಹ ರಸ್ತೆಯಲ್ಲಿ ಮೇಲೇರುತ್ತಿದ್ದೆವು. ಕಾರು ನಿಂತರೆ ಬಾಗಿಲು ತೆರೆಯಲೂ ಆಗದಷ್ಟು ಅಂತರದಲ್ಲಿ ಶಿಲಾ ಏಣುಗಳು. ಪುಪ್ಪಸಗಳಲ್ಲಿ ಹೆಚ್ಚಿನ ಗಾಳಿ ತುಂಬಿಕೊಂಡರೂ ಸಮತೋಲನ ತಪ್ಪಿ ಉರುಳುವಂಥಾ ಪ್ರಪಾತ ಇನ್ನೊಂದು ಕಡೆ. ಮಣ್ಣಿನ ಧೂಳು ಎದ್ದು ದಾರಿ ಕಾಣದಂತಾಯ್ತು. ಗಾಡಿ ನಿಲ್ಲಿಸಿ ಅವನು ಇಳಿದ ಹಿಂದೆಯೇ ಇಕ್ಕಟ್ಟಿನಲ್ಲೇ ನಾನೂ ಇಳಿದೆ. ನೋಡಿದರೆ ಅಬ್ಬಾ, ಇನ್ನೊಂದೇ ಗಾಲಿ ಉರುಳಿದ್ದರೂ ಅದು ಸಾವಿರಸಾವಿರ ಅಡಿ ಇದ್ದ ಪ್ರಪಾತದೊಳಕ್ಕೇ ಹೋಗುತ್ತಿತ್ತು. ಮುಂದೆ ರಸ್ತೆಯೇ ಇಲ್ಲ. ನಾವ್ಯಾಕೆ ಹೀಗೆ ಬಂದೆವು? ಯಾಕಾಗಿ ಇಲ್ಲಿಯೇ ನಿಂತೆವು? ಎಲ್ಲವೂ ಅಯೋಮಯ. ಗಾಡಿಯನ್ನು ತಿರುಗಿಸಿಕೊಂಡು ಹಿಂದೆ ಹೋಗುವುದಂತೂ ಅಸಾಧ್ಯದ ಮಾತಾಗಿತ್ತು.
ಮುಂದೆ ಜೀವನದ ಅಂತ್ಯವೇ ಮೂರ್ತಿವೆತ್ತಂತಿತ್ತು. ರಂಜು ಒಬ್ಬ ಉತ್ತಮ ಚಾಲಕನಾಗಿದ್ದ. ನನ್ನನ್ನು ಒಳಗೆ ಕೂರಲು ಹೇಳಿ ಸುಮಾರು 10 ಕಿಲೋಮೀಟರ್ಗಳಷ್ಟು ರಿವರ್ಸ್ ಗೇರಿನಲ್ಲೇ ಕೆಳಗಿಳಿದ. ನಂತರ ಮತ್ತೊಂದು ಪರ್ವತವನ್ನೇರ ತೊಡಗಿದೆವು. ಏರುತ್ತಾ ಏರುತ್ತಾ ಕವಲಿಲ್ಲದೆ ಕೊನೆಯಾಗಿದ್ದ ದಾರಿಯಲ್ಲಿ ನಿಂತೆವು. “ದೀದಿ ನೀವು ಇಲ್ಲೇ ಇರಿ. ನಾನು ಮುಂದೆ ಹೋಗಿ ನೋಡಿಕೊಂಡು ಬರುತ್ತೇನೆ” ಎಂದು ಹೇಳಿ ಹೋದ. ನಾನು ಗಾಡಿಯಿಂದ ಇಳಿದೆ. ಅವನು ಬರುವವರೆಗೂ ಹಸಿರು ರಾಶಿಯನ್ನು ನೋಡುತ್ತಿದ್ದವಳಿಗೆ ಒಳಗು ಅಪ್ಯಾಯಮಾನವಾಗತೊಡಗಿತ್ತು.
ಅವನು ಬಂದ. “ದೀದಿ ಹೌದು, ಇದೇ ದಾರಿ ಬನ್ನಿ ಹೋಗೋಣ” ಎಂದು ಕಾರನ್ನು ಲಾಕ್ ಮಾಡಿದ. ಏಳೆಂಟು ಕಿಲೋಮೀಟರ್‌ಗಳಷ್ಟು ಕಾಲ್ನಡಿಗೆ. ಮೊದಲೇ ಕೆತ್ತಿಟ್ಟಿದ್ದ ದಾರಿಯಲ್ಲಿ ಅಲ್ಲ. ನಾವಿಬ್ಬರೇ ಹೊಸದಾಗಿ ಕಂಡುಕೊಳ್ಳುತ್ತಿದ್ದ ಕಾಲುದಾರಿ ಬೆಟ್ಟದ ಏರಿನಲ್ಲಿ. ಸ್ವಲ್ಪ ಹೊತ್ತಿನ ನಂತರ ಒಂದಷ್ಟು ಮೆಟ್ಟಲಿನಂತವುಗಳು ಕಾಣತೊಡಗಿತ್ತು. ಬಳಸದೆಯೆ ಅದರ ಮೇಲೆಲ್ಲಾ ಕುರುಚಲು ಗಿಡಗಂಟೆಗಳು ಬೆಳೆದಿದ್ದವು. ಹಿಮ ಕರಗಿ ಅಲ್ಲಲ್ಲೇ ಒದ್ದೆಒದ್ದೆಯಾಗಿತ್ತು. ಅಗೋಚರವಾಗಿದ್ದ ನೀರಿನ ಝುಳುಝುಳು ಮಾತ್ರ ಕೇಳುತ್ತಿತ್ತು. ಮೈಕೈಗೆ ಅಂಟಿಕೊಂಡ ಪುರಲೆಗಳನ್ನು ಸರಿಸುತ್ತಾ ಹತ್ತಿಕೊಂಡು ನಂತರ ಒಂದಷ್ಟು ದೂರ ಇಳಿಜಾರಿನಲ್ಲಿ ಜಾರಿ ಹೋಗಿ ಎಡಕ್ಕೆ ತಿರುಗಿದರೆ ಕಂಡಿದ್ದು ಏನು?!
ಬಯಲ ಬಣ್ಣವ ಮಾಡಿ; ಸ್ವಯವ ನಿಲವ ಮಾಡಿ; ಸುಳಿವಾತನು ಇಲ್ಲಿ ಆಕಾಶಕ್ಕೆದ್ದು ನಿಂತಿದ್ದ. ಪರ್ವತ ಹಿಮ ಮೌನವಾಗಿದ್ದ. 25 ಅಡಿ ಎತ್ತರದ 22 ಅಡಿಗಳಷ್ಟು ಅಗಲದ ಶಿವಲಿಂಗಾಕೃತಿ. ವಿಭೂತಿ ಪಟ್ಟೆ, ರುದ್ರಾಕ್ಷಿ ಮಾಲೆ, ನಾಗಾಭರಣ ಎಲ್ಲವೂ ಅವನ ಮೈಮೇಲೆ ಸ್ವಯಂಭು. ಎಡದ ಹಿಂಭಾಗಕ್ಕೆ ಹೆಣ್ಣಿನಂಥಾ ಆಕೃತಿ. ಇಕ್ಕೆಲಗಳಲ್ಲಿ ಗಣೇಶ, ಕಾರ್ತಿಕೇಯನಂಥ ಶಿಲಾ ರಚನೆ. ಬೂದಿಗಟ್ಟಿದ ಮೋಡ, ನೀಲಿನೀಲಿ ಮಂಜು, ಹಸಿರು ರಾಶಿಯ ನಡುವೆ ಕಪ್ಪು ಶಿಲೆಯಲ್ಲಿ ಆಕಾಶ ಭೂಮಿಗಳ ಒಂದು ಮಾಡಿನಿಂತಿದ್ದ ಶಿವ. ಅವನೊಂದಿಗೆ ಜನ್ಮಾಂತರಗಳ ನಂಟು. ಈಗ ಇಲ್ಲಿ ನಾವಿಬ್ಬರೇ. ಅವನನ್ನೇ ನೋಡುತ್ತಾ ನಿಂತೆ. ನನ್ನೊಳಗಿನ ಅವನು, ಅವನಾಚೆಯ ನಾನು ಬಣ್ಣಗಳ ಮೇಳದಲ್ಲಿ ಬಿಳಿಯಾದಂತೆ. ಅಷ್ಟರಲ್ಲಿ ಕೇಸರಿ ಕಚ್ಚೆ ಧರಿಸಿದ್ದ ಕುಲಾವಿಧಾರಿ ಪುರೋಹಿತರೊಬ್ಬರು ಬಂದು “ಬನ್ನಿ ಮಂಗಳಾರತಿ ಮಾಡುತ್ತೇನೆ” ಎಂದರು.
ನನ್ನ ಕೈಗೆ ಕಂಕಣ ಕಟ್ಟಿ ಹಣೆಗೆ ತಿಲಕವಿಟ್ಟು ಪೂಜೆಗೆ ಶುರುವಿಟ್ಟರು. ಬೆನ್ನ ಹಿಂದಿನ ಬ್ಯಾಗ್‌ನಲ್ಲಿದ್ದ ಸ್ಯಾಂಡಲ್‍ವುಡ್ ಅಗರಬತ್ತಿಯನ್ನು ಕೊಟ್ಟೆ. ಆರತಿ ಮಾಡಿ ಒಂದು ಹಿಡಿಭರ್ತಿ ಕಲ್ಯಾಣಿ ಕೊಟ್ಟರು. ಮಾತಿಗೆ ಶುರುವಿಟ್ಟೆ. “ಪಂಡಿತ್ ಜಿ ನೀವು ದಿನಾ ಇಲ್ಲಿ ಪೂಜೆ ಮಾಡ್ತೀರಾ?” ಎಂದು. ಅಲ್ಲೆಲ್ಲೋ ಕಾಣುತ್ತಿದ್ದ ಸಣ್ಣ ಮನೆಯನ್ನು ತೋರಿಸಿ “ ಹೌದು ನಾನು ಇಲ್ಲಿಯೇ ಇರೋದು. ದಿನಾ ಪೂಜೆ ಮಾಡ್ತೀನಿ ಹೀಗೆ. ಅಪರೂಪಕ್ಕೊಮ್ಮೆ ಯಾರಾದರು ಬರುತ್ತಾರೆ. ಇಲ್ಲಿನ ವಿಶ್ವಹಿಂದು ಪರಿಷತ್ತಿನವರು ಒಂದು ಕಮಿಟಿ ಮಾಡಿದ್ದಾರೆ. ನನಗೆ ಒಂದಷ್ಟು ಸಂಬಳವನ್ನೂ ಕೊಡುತ್ತಾರೆ” ಎಂದರು. ಶಿವನಾಕಾರವನ್ನೇ ನೋಡುತ್ತಾ “ಏನು ಇಲ್ಲಿನ ಐತಿಹ್ಯ?” ಎಂದೆ ಅವರು ಹೇಳುತ್ತಾ ಹೋದರು.
2004ನೇ ಇಸವಿಯ ಜುಲೈ ತಿಂಗಳ ಮೊದಲ ಪಕ್ಷದಲ್ಲಿ, ಶ್ರಾವಣ ಮಾಸದ ಮುಂಜಾವಿನಲ್ಲಿ ಪ್ರೇಮ್ ಸುಭಾ ಎನ್ನುವ ನೇಪಾಳಿ ಯುವಕನೊಬ್ಬ ಕಟ್ಟಿಗೆಗಾಗಿ ಈ ದಟ್ಟ ಕಾಡಿನಲ್ಲಿ ಒಬ್ಬನೇ ಮರ ಕಡಿಯುತ್ತಿದ್ದ. ಗರಗಸದ ತುದಿಯಂಚಿಗೆ ಬಂದು ನಿಂತ ದೊಡ್ಡ ಕಾಂಡ ಬೀಳಲಿದೆ ಎಂದುಕೊಂಡ ದಿಕ್ಕಿನಲ್ಲಿ ಉರುಳದೆ ಅನಿರೀಕ್ಷಿತವಾಗಿ ವಿರುದ್ಧ ದಿಕ್ಕಿನಲ್ಲಿ ಮಲಗಿತು. ಆಶ್ಚರ್ಯದಿಂದ ಆತ ಗಮನವಿಟ್ಟು ನೋಡಿದಾಗ ಅಲ್ಲೇ ಈ ದೈತ್ಯಕಾರಾದ ಕರಿಶಿಲೆಯ ಶಿವ ಕಂಡ. ಸುತ್ತಲಿನ ನಿತ್ಯಹರಿದ್ವರ್ಣದ ಪರ್ವತಗಳ ಸಂಧಿಯಿಂದ ತೂರಿ ಬರುತ್ತಿದ್ದ ಕಿರಣದ ಹಂಗಿನಲ್ಲಿ ಭೋಲೆನಾಥನ ಪರಿವಾರವೇ ಈ ಶಿಲೆಯಲ್ಲಿ ಕಂಡಿತು. 25 ಮೈಲುಗಳಾಚೆಯ ಬಸ್ತಿಗೆ ಓಡಿ ಹೋಗಿ ಎಲ್ಲರಿಗೂ ವಿಷಯ ತಿಳಿಸಿದ ನಂತರ ಪೂಜೆ ಪುನಸ್ಕಾರಗಳ ರೂಪದ ಭಕ್ತಿ ವ್ಯಕ್ತವಾಗತೊಡಗಿತು. ಇಲ್ಲಿನ ವಿಶೇಷವೆಂದರೆ ಶಿವನ ಕಾಲ ಕೆಳಗೆ ಸತತವಾಗಿ ನೀರು ಹರಿಯುತ್ತಿದೆ. ತಜ್ಞರು ಅದರ ಮೂಲವನ್ನು ಗಂಗಾ ನದಿಗೆ ಆರೋಪಿಸಿರುವುದರಿಂದ ಅದನ್ನು ಗಂಗೆಯೇ ಎಂದು ನಂಬಲಾಗಿದೆ.
ಎಲ್ಲೆಡೆಯಲ್ಲಿ ಶಿವನ ಜಟೆಯಲ್ಲಿ ಇರುವ ಗಂಗಮ್ಮ ಇಲ್ಲಿ ತನ್ನ ಶಿರದಲ್ಲೇ ಅವನನ್ನು ಧರಿಸಿದ್ದಾಳೆ, ಭರಿಸುತ್ತಿದ್ದಾಳೆ. ನಂತರದ ದಿನಗಳಲ್ಲಿ ಪುರಾಣಜ್ಞರ ಅಧ್ಯಯನದಿಂದ ತಿಳಿದು ಬಂದಿದೆ ಈ ಲಿಂಗದ ಬಗ್ಗೆ ಶಿವಪುರಾಣದ 17ನೆಯ ಅಧ್ಯಾಯವಾದ ರುದ್ರಖಂಡದಲ್ಲಿ ಉಲ್ಲೇಖಿಸಲಾಗಿದೆ ಎಂದು. ಜ್ಯೋತಿರ್ಲಿಂಗ ರೂಪದಲ್ಲಿನ ಶಿವ ಅಘನಾಶನನೆನಿಸಿಕೊಂಡರೆ, ಅಗಾಧಾಕಾರದಲ್ಲಿ ನಿಂತು ಇಲ್ಲಿ ಇಷ್ಟಾರ್ಥ ಸಿದ್ದಿಸಿಕೊಡುತ್ತಾ ಸಿದ್ಧೇಶ್ವರನಾಥ ಎನಿಸಿಕೊಂಡಿದ್ದಾನೆ. “ಸಿದ್ಧಪೀಠದಲ್ಲಿ ನೆಲೆನಿಂತ ಇವನ ಕಥೆ ಕೇಳಿದರೂ ಜನ್ಮಾಂತರಗಳ ಪಾಪ ಪರಿಹಾರವಾಗುವುದು ಮಗಳೇ, ಅಂಥಾದರಲ್ಲಿ ನೀನು ಅಷ್ಟು ದೂರದಿಂದ ಇಲ್ಲಿ ಬಂದು ದರ್ಶನ ಪಡೆದಿದ್ದೀಯ. ನಿನಗೆ ಮೋಕ್ಷ ಸಿಗುವುದು ಖಾತರಿ” ಎಂದು ಹೇಳಿ ಆ ಪುರೋಹಿತರು ಅಲ್ಲಿಂದ ಹೊರಟಾಗ ಕಿರು ನಗುವೊಂದು ನನ್ನ ತುಟಿಯಂಚಿನಲ್ಲಿ ಅರಳಿತ್ತು.
ಅಮ್ಮ ನೆನಪಾಗುತ್ತಿದ್ದಳು. ಮೊಬೈಲ್ ನೆಟ್ವರ್ಕ್ ಇರಲಿಲ್ಲ. ಅವಳಿಗೊಂದು ಪತ್ರ ಬರೆಯುತ್ತಾ ಕುಳಿತೆ “ಅಮ್ಮ, ಆಕಾರದಲ್ಲಿ ಬಂಧಿತನಾದ ನಿನ್ನ ದೇವರಿಗೆ ಗಂಧ ಮೆತ್ತದೆ, ಹೂವಿಡದೆ, ಉಪವಾಸವಿರದೆ ಪೂಜೆ ಮಾಡದೆ ಊರೂರು ಅಲೆಯುವ ನನ್ನನ್ನು ಅದೆಷ್ಟು ಬೈಯುತ್ತೀಯಾ? ಕೇಳಿಕೋ ಕೊಡುತ್ತಾನೆ ಅಂತ ತಾಕೀತು ಮಾಡುತ್ತೀಯ. ನೋಡಿಲ್ಲಿ ಇವನನ್ನು ನೋಡಿದರೆ ಕೇಳಬೇಕು ಅನ್ನಿಸುತ್ತೇನು? ಇವನ ನೋಟಕ್ಕೆ ನೋಟ ಸಿಕ್ಕುವಾಗಲೇ ಮನಸ್ಸು ಮೃದುವಾಗುತ್ತೆ. ಖಾಲಿಯಾಗುತ್ತೆ. ಬೇಡದೆಯೂ ಜೋಳಿಗೆಯ ತುಂಬಿತುಂಬಿ ಕೊಟ್ಟವನಿಗೆ ಎಲ್ಲವನ್ನೂ ಕೊಟ್ಟು ಕರಗಿ ಹೋಗಬೇಕು ಅನ್ನಿಸುತ್ತೆ. ಹೇಳಿ ಬಿಡೆ ಅಮ್ಮ ನನ್ನ ತಪ್ಪೇನು? ಹಾಂ, ನನಗೆ ಗೊತ್ತು ನಮ್ಮಿಬ್ಬರ ನಡುವಿನ ವಾದಗಳು ಇನ್ನೂ ಬಾಕಿ ಇದೆ. ನನ್ನ ಜಗಳಕ್ಕೆ ಧ್ವನಿಯಾಗಿ, ಕಿವಿಯಾಗಿ ನೀನು ಸಾವಿರ ವರುಷದವಳಾಗಿ ಇದ್ದು ಬಿಡೆ. ಇವನ ಜೊತೆ ನಾನಿಲ್ಲಿ ಕ್ಷೇಮ. ಸಿಗ್ನಲ್ಸ್ ಸಿಕ್ಕೊಡನೆ ಫೋನ್ ಮಾಡುತ್ತೀನಿ. ಊರಿಗೆ ಬಂದ ಮೇಲೆ ಫೋಟೊ ತೋರಿಸುತ್ತೀನಿ”.
ಮತ್ತೊಮ್ಮೆ ಸಿಕ್ಕ ಶಿವ ಗುಜರಾತಿನ ಬಿಲ್ಲಿಮೋರದಲ್ಲಿ ಸೋಮನಾಥನಾಗಿ. ನೆಲಮಟ್ಟದಲ್ಲಿ ಕರಿಕಲ್ಲಿನ ಲಿಂಗ ರೂಪದಲ್ಲಿ. ಹಿಂದೆ ಬಿಳಿ ಅಮೃತಶಿಲೆಯಲ್ಲಿ ಆಳೆತ್ತರಕ್ಕೆ ಅಲಂಕಾರ ಮಾಡಿ ಇರಿಸಿದ್ದ ಹೆಣ್ಣಿನ ಪ್ರತಿಮೆ. ಪ್ರಸಾದ ಸೇವನೆ ಆದ ನಂತರ ಅಲ್ಲಿದ್ದ ಪಂಡಿತರ ಜೊತೆ ಮಾತು ಮುಂದುವರೆಯಿತು. ಅವರು ಹೇಳಿದ್ದು, ಒಂದಾನೊಂದು ಕಾಲದಲ್ಲಿ ಒಬ್ಬ ರಜಪೂತ ಶ್ರೀಮಂತ ಇದ್ದ. ಅವನ ಬಳಿ ನೂರು ಹಸುಗಳು. ಹಾಲು ಕರೆಯುವ ಹೊತ್ತು. ಒಬ್ಬಳು ಮಾತ್ರ ಎರಡು ಹನಿ ಹಾಲು ಕೊಡಲು ಒಲ್ಲೆ ಎನ್ನುತ್ತಾಳೆ. ಅವನ ಹೆಂಡತಿ ಪಾರ್ವತಿ ಪತ್ತೆ ಮಾಡಿದಾಗ ಕತ್ತಲೆ ಕಾಡಿನಲ್ಲಿ ಒಂದು ಮುಷ್ಟಿ ಇದ್ದ ಲಿಂಗಕ್ಕೆ ನಿತ್ಯ ಹಾಲುಕರೆದು ಹೋಗುವುದರಿಂದ ಆ ಹಸು ಬರಿದು ಬರಿದು ಮನೆಯಲ್ಲಿ. ವಿಸ್ಮಯ ಕಂಡವಳು ನಿತ್ಯವೂ ಭಕ್ತಿಭಾವದಿಂದ ಆ ಲಿಂಗಕ್ಕೆ ಪೂಜೆ ಮಾಡುತ್ತಾಳೆ.
ಹೆಂಡತಿ ದಿನವೂ ಹೋಗುವುದಾದರೂ ಎಲ್ಲಿಗೆ ಎನ್ನುವ ರಹಸ್ಯ ಪತ್ತೆ ಮಾಡಲು, ಗಂಡ ಹಿಂದೆಯೇ ಬಂದು ಅನುಮಾನದಿಂದ ಕತ್ತಿ ಎತ್ತಿದಾಗ ಅವಳು ಹೆದರಿ ಲಿಂಗದೊಳಗೆ ಒಂದಾಗುತ್ತಾಳೆ. ಅವಳನ್ನು ತನ್ನೊಳಗೆ ಸೇರಿಸಿಕೊಳ್ಳಲು ಲಿಂಗ ಬೆಳೆಯಿತು. ನೆತ್ತಿಯಲ್ಲಿ ಇಂದಿಗೂ ಅವಳ ತಲೆಗೂದಲು ಇದೆ. ಅದಕ್ಕೆ ಶಿವರಾತ್ರಿಯಂದು ತುಪ್ಪದಿಂದ ಶಿವನ ಮುಖವಾಡ ಹೀಗೆ ಮಾಡಿ ಇಡಲಾಗುತ್ತದೆ. ಇದು ಐತಿಹ್ಯ. ಗೂಗಲ್ ನಲ್ಲಿ ಇನ್ನೂ ಏನೇನೋ ಇದೆಯಂತೆ.
ಶಿಫಾನ್ ಸೀರೆಯುಟ್ಟು ಉದ್ದ ಕೂದಲು ಹರಡಿ ನಿಂತಿರುವ ಪಾರ್ವತಿಗಿಂತ ನನ್ನ ಗಮನ ಸೆಳೆದದ್ದು, ಅಲ್ಲಿನ ಪುರೋಹಿತರು “ಈಗಿನಂತೆ ಆಗಲೂ ಗಂಡಸು ಹೆಂಡತಿಯರನ್ನು ನಂಬುತ್ತಿರಲಿಲ್ಲ” ಎಂದು ಹೇಳಿದ್ದು. ಏನು ಮಾಡಲಿ ಎಲ್ಲಿ ಹೋದರೂ ಭೋಲೇನಾಥ ಭಾವ ಜನ್ಮಕ್ಕಂಟಿದ ಜಾಢ್ಯದಂತೆ!
ಶಿವರಾತ್ರಿ ಕಳೆದು ಮೂರು ರಾತ್ರಿಗಳಾದವು. ಮೂರು ಸ್ಥಳಗಳಲ್ಲಿ ಸಿಕ್ಕ ಮುಕ್ಕಣ್ಣನ ಧ್ಯಾನ ಬೇರೆಡೆಯಲ್ಲಿ ಸಿಕ್ಕ ನಾಮದಲ್ಲೂ ಇನ್ನೂ ಮುಂದುವರೆಯುತ್ತಿದೆ. ಬಾಲೇಶ್ವರ, ಅರ್ಜುನೇಶ್ವರ, ಬಿಲ್ಕೇಶ್ವರ, ಗೌರೀಶಂಕರ, ಭಗೇಶ್ವರ, ಜೋಗೇಶ್ವರ, ಕಾಲೇಶ್ವರ, ಕಲ್ಪೇಶ್ವರ, ಕಪಿಲೇಶ್ವರ, ಕೋಟೇಶ್ವರ, ಮುಕ್ತೇಶ್ವರ, ಆದಿಯೋಗಿ, ಪತ್ತೀಶ್ವರ, ಓಕಾರೇಶ್ವರ, ಮಾಹಾಕಾಲೇಶ್ವರ, ಭವಂತ ಮಹಾದೇವ, ಭಡಕೇಶ್ವರ, ಬಿಲೇಶ್ವರ, ಅಚಲೇಶ್ವರ . . . .
(ಎಲ್ಲಾ ನಾಮಗಳು ಪ್ರವಾಸದಲ್ಲಿ ನನಗೆ ದೇವಸ್ಥಾನಗಳಲ್ಲಿ ಸಿಕ್ಕ ಶಿವನದ್ದೇ)
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.
??
nimma baraha adbutavagide… kannige kattidante nave aa stalagalige hodante bhasavayitu… dhanayadagalu namage aa shankarana darshana madisiddakke… nive dhanyaru… nimma tayige bareda patra odi tumba bhavukalade.. kannachinalli neeru… odutta iddare romanchana vayitu… tumba chennagide…
೧೯೮೫ರಲ್ಲಿ ತಂದೆಯವರ ಜೊತೆ ಹೋಗಿದ್ದೆ. ಆಗ ನೀವು ನೋಡಿದ ಶಿವಲಿಂಗ ಇರಲಿಲ್ಲ. ಬೆಳಗ್ಗೆ ಸಚನಾನ ಕಾಫಿ ಇಲ್ಲದೆ ಕೇದಾರ ಹತ್ತಿ ಇಳಿದೆ ದೇವಸ್ಥಾನದ ಒಳಗೆ ಹೊಗಲಿಲ್ಲ. ಮದ್ಯಾಹ್ನದ ಮೆಲೆ ಕೆಳಗೆ ಇಳಿದು ಸ್ನಾನ ಮಾಡಿ ಕಾಫಿ ಕಿಡಿದೆ. ಕ್ಯಾಮರಾ ಹಸಿವು ದಾಹಗಳನ್ನು ಪೂರೈಸಿದೆ.
Devine words ??