ಅಸಂಗ್ರಹಕ್ಕೆ ಪರ್ಯಾಯ ಪದ ನನ್ನ ಪ್ರೀತಿಯ ಶಿವ. ವಿಷಯ ಲೋಲುಪತೆಗೆ ಲಾಲಸೆಗೆ ವಸ್ತು ಸಂಸ್ಕೃತಿಗೆ ವಿರುದ್ಧ ಪದ ಶಿವ. ಜಂಗಮವೆ ಶಿವ. ಶೃಂಗಾರವಿಲ್ಲದೆ ಸೋಗಿಲ್ಲದೆ ವಸ್ತ್ರಾಭರಣ ಕಿರೀಟಗಳ ಹಂಗೇ ಇಲ್ಲದೆ, ಸತಿಯ ಲೋಕೋತ್ತರ ಪ್ರೀತಿ ಗೆದ್ದವ. ಪ್ರೀತಿ ಬಲ್ಲವ ಇವ, ಅಪ್ಪಟ ಸಂಸಾರಿ, ಅನುರಾಗಿಯಾಗಿಯೂ ವಿರಾಗಿ. ಸ್ಮಶಾನದ ಬೂದಿಯೊಂದಿಗೇ ಮಂಗಲಕ್ಕೆ ಸಂಕೇತವಾದವ. ಕಪಟ-ನಟನೆಯರಿಯದ, ನಾಟ್ಯ ಬಲ್ಲ ಒಬ್ಬನೇ ಕಲಾವಿದ ದೇವ ಶಿವ. ಕ್ರುದ್ಧ, ಮುಗ್ಧ. ಬೋದಾಳ ಶಂಕರ. ಸಂಗಾತಿಗೆ ಅವಮಾನವಾಯಿತೆಂದರೆ ಭೂಮಿ ಆಕಾಶ ನಡುಗುವಂತೆ ಕೆರಳುವ ರೌದ್ರರೂಪಿ ನಿತ್ಯಕ್ಕೆ ಪ್ರಶಾಂತ ಮುದ್ರೆಯ ಸಂತ-ವಸಂತ. ಅತಿವಿರಳ ಸರಳ. ನಂಜು ವಿಷವನ್ನು ಧಾರಣೆ ಮಾಡಬಲ್ಲವನೊಬ್ಬನೆ ಶಿವ.
ಲೋಕಕಲ್ಯಾಣಾರ್ಥವಾಗಿ ಪತ್ನಿಯೊಡಗೂಡಿ ಆಕಾಶ ಮಾರ್ಗವಾಗಿ ಕೆಳಗೆ ಭೂಲೋಕ ನೋಡುತ್ತಾ ನಿರಂತರ ಸಂಚರಿಸಿ, ಕಷ್ಟದಲ್ಲಿರುವವರನ್ನು ಕಂಡೊಡನೆ ಧುತ್ತೆಂದು ಎದುರು ಮಾರುವೇಷದಲ್ಲಿ ಪ್ರತ್ಯಕ್ಷವಾಗಿ ಅವರ ಸುಖದುಃಖ ವಿಚಾರಿಸಿ, ಪರೀಕ್ಷೆಯನ್ನೂ ಮಾಡಿ, ತಕ್ಷಣವೇ ಪರಿಹಾರ ಕರುಣಿಸುವ ಕಥಾನಕ ಸರಣಿಗಳ ಏಕೈಕ ಕ್ರಿಯಾಶೀಲ ರಮ್ಯ ಕಥಾನಾಯಕ ಈತ. ಕುರೂಪಿ ವಿರೂಪಿಗಳ ದಂಡನ್ನೇ ತನ್ನವರನ್ನಾಗಿ ಹತ್ತಿರಮಾಡಿಕೊಂಡವ. ತನ್ನ ಮಕ್ಕಳನ್ನೂ ಲೌಕಿಕರ ಕಣ್ಣೊರಸಲು ಬಿಟ್ಟು ಕೊಟ್ಟವ. ಶಿವನ ಮೀಸುವ ಹಾಡು ಅಭಿಷೇಕ ಮಾಡಿದಳು ಗೌರಿ ಮೂಗಾಲು ಮಣೆಯಲ್ಲಿ ಮೂಗಣ್ಣಿನವನ
ಇದೋ ಈ ತಂಬಿಗೆ ನೀರು ಗಂಗೆಯವತಾರಕ್ಕೆ ಬೈರಾಗಿ ಬೂದಿ ತೊಳೆಯುತ್ತ ಹಚ್ಚಗೆ ನೋಡುವಳು ನುಡಿ ರೇಶಿಮೆಯಡಿ ನಂಜು ನುಂಗಿದ ಕಿರಾತ ಶಿವನಿದ್ದೂ ಶಿವನಿಲ್ಲದಂಥಚೋದ್ಯಗಳೆಲ್ಲ ಸಂಚಾರ ಮುಗಿಸಿ ಬರುವ ಈಶ್ವರ ಜೋಗಿ |
ಕನ್ನಡದ ಅನನ್ಯ ಕಥೆಗಾರ್ತಿ, ಕವಯಿತ್ರಿ. ಹುಟ್ಟಿದ್ದು ಕುಂದಾಪುರ. ಇರುವುದು ಮಣಿಪಾಲ.