ಸಮಾಜವನ್ನು ಪ್ರಗತಿಪರ ಆಶಯಗಳ ಅನುಸಾರ, ಎಲ್ಲರ ಸಹಬಾಳ್ವೆ ಮತ್ತು ಸಾಮರಸ್ಯದ ದಿಕ್ಕಿನಲ್ಲಿ ಕಟ್ಟಬೇಕೆಂಬ ಕನಸು ಹೊತ್ತ ಕವಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ವ್ಯವಸ್ಥೆಯ ಪರವಾಗಿ ಮಾತನಾಡುವವರು ಇಲ್ಲವೆಂದಲ್ಲ. ಅವರು ದುಃಸ್ಥಿತಿಯನ್ನು ಸುಸ್ಥಿತಿಯೆಂದು ಬಿಂಬಿಸಲು ಹರಸಾಹಸಪಡುತ್ತಾರೆ. ಆದರೆ ಅಂತಹ ಮಾತುಗಳಿಗೆ ಆತ್ಮಸಾಕ್ಷಿಯ ಕೊರತೆ ಇರುತ್ತದೆ. ಅದರಲ್ಲಿ ಸತ್ಯದ ಶೋಧ ಇರುವುದಿಲ್ಲವಾದ್ದರಿಂದ ಅಂತಹ ಮಾತುಗಳು ಟೊಳ್ಳಾಗಿಹೋಗುತ್ತವೆ.
ಶಿವಶಂಕರ ಸೀಗೆಹಟ್ಟಿ ಕವನ ಸಂಕಲನಕ್ಕೆ ಡಾ. ಬಂಜಗೆರೆ ಜಯಪ್ರಕಾಶ ಬರೆದ ಮುನ್ನುಡಿ
ಕವಿ ಕಳವಳ ಪಡದ ಕಾಲ ಯಾವುದಿದೆ? ಮಾನವ ಜೀವನವನ್ನು ಬಹಳ ಸೂಕ್ಷ್ಮ ಪ್ರಜ್ಞೆಯಿಂದ ಗಮನಿಸುವ ಕಾರಣಕ್ಕೋ ಏನೋ, ಹಾಗೆ ಗಮನಿಸಿದ್ದನ್ನು ಮಾತಿನಲ್ಲಿ ಕಂಡಿರಿಸಲು ಬರುತ್ತದೆಂಬ ಕಾರಣಕ್ಕೋ ಏನೋ ಕವಿಗಳು ಕಳವಳಗೊಳ್ಳುತ್ತಿರುತ್ತಾರೆ. ಆಧುನಿಕ ಕಾಲದಲ್ಲಿ ಮನುಷ್ಯ ಮನುಷ್ಯರ ನಡುವಿನ ಅಂತಸ್ತುಗಳು, ಅವಕಾಶಗಳು ತೀವ್ರವಾಗಿ ಅಸಮಗೊಂಡಿರುವುದರಿಂದ ಕವಿಯ ಮನಸಿನ ಕಣ್ಣಿಗೆ ಕೋಟಲೆಗಳು ಮತ್ತಷ್ಟು ಹೆಚ್ಚಾಗುತ್ತವೆ. ತಾನು ಕಳವಳಗೊಂಡಿದ್ದನ್ನು ಮುಕ್ತವಾಗಿ ಹೇಳಲಾಗದ ಕಾಲಮಾನವಿದು ಎಂದು ಕವಿಗೆ ಅನ್ನಿಸಿದರೆ ಮನಸ್ಸಿನ ತೊಳಲಾಟ ಮತ್ತಷ್ಟು ಹೆಚ್ಚಾಗುತ್ತದೆ. ಪ್ರಸ್ತುತದಲ್ಲಿ ಆ ಬಗೆಯದೊಂದು ಅಭಿವ್ಯಕ್ತಿಯ ಬಿಕ್ಕಟ್ಟು ಸ್ವಲ್ಪ ಹೆಚ್ಚೇ ಅನಿಸುವಷ್ಟು ಭಾಸವಾಗುವ ಕಾಲವಿದು.
ಕವಿ ಸಾಮಾನ್ಯವಾಗಿ ಜನತೆಯ ಪಕ್ಷಪಾತಿ. ಆಳುವವರು ತಮ್ಮ ಕ್ರೌರ್ಯವನ್ನು ಹೆಚ್ಚಿಸಿದಂತೆಲ್ಲಾ ಅದಕ್ಕೆ ಗುರಿಯಾಗುವ ಜನಸಾಮಾನ್ಯರ ಪಾಡುಗಳನ್ನು ಕಂಡು ಕವಿ ಚಿಂತಿತನಾಗುತ್ತಾನೆ. ತನ್ನ ಮಾತಿನ ಮೂಲಕ ಆ ನೋವಿಗೆ ಕಾರಣವಾದ ಅಂಶಗಳನ್ನು ಖಂಡಿಸಲು ಅವಕಾಶ ಸಿಗದಿದ್ದಾಗ ಮುಚ್ಚುಮರೆ ಮಾತಿನ ಹಾದಿಯನ್ನು ಹಿಡಿಯಬೇಕಾಗುತ್ತದೆ. ಸಮಾಜದಲ್ಲಿ ದಮನ, ದೌರ್ಜನ್ಯಗಳು ಹೆಚ್ಚಿದಾಗ, ದೇಶ ಹೊರಗಿನದೋ ಅಥವಾ ಒಳಗಿನದೋ ಆಪತ್ತಿಗೀಡಾದಾಗ ನ್ಯಾಯ ದೊರಕುವುದೆಂಬ ಭರವಸೆ ಕ್ಷೀಣಿಸಿದಾಗ ಬಹಳ ತೀಕ್ಷ್ಣ ಕವಿತೆಗಳು ಹುಟ್ಟಿವೆ ಎನ್ನುವವರಿದ್ದಾರೆ. ಸಂಕ್ಷೋಭೆ ಮತ್ತು ಸಂಕಷ್ಟಗಳ ಕಾಲದಲ್ಲೆ ಕವಿ ಜನರ ಎದೆಯ ದನಿಯಾಗಿ ಮಾತನಾಡುತ್ತಾನೆ. ವಿಂಗಡಣೆಯ ಗೆರೆ ಹೆಚ್ಚು ಸ್ಪಷ್ಟವಾಗುತ್ತದೆ. ತಾನು ಬಿದ್ದವರ ಪರವೋ, ಗೆದ್ದವರ ಪರವೋ ಎಂಬುದನ್ನು ಪರೀಕ್ಷೆಗೊಳಪಡಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಈಡಾಗುತ್ತಾನೆ.
ಸಮಾಜವನ್ನು ಪ್ರಗತಿಪರ ಆಶಯಗಳ ಅನುಸಾರ, ಎಲ್ಲರ ಸಹಬಾಳ್ವೆ ಮತ್ತು ಸಾಮರಸ್ಯದ ದಿಕ್ಕಿನಲ್ಲಿ ಕಟ್ಟಬೇಕೆಂಬ ಕನಸು ಹೊತ್ತ ಕವಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ವ್ಯವಸ್ಥೆಯ ಪರವಾಗಿ ಮಾತನಾಡುವವರು ಇಲ್ಲವೆಂದಲ್ಲ. ಅವರು ದುಃಸ್ಥಿತಿಯನ್ನು ಸುಸ್ಥಿತಿಯೆಂದು ಬಿಂಬಿಸಲು ಹರಸಾಹಸಪಡುತ್ತಾರೆ. ಆದರೆ ಅಂತಹ ಮಾತುಗಳಿಗೆ ಆತ್ಮಸಾಕ್ಷಿಯ ಕೊರತೆ ಇರುತ್ತದೆ. ಅದರಲ್ಲಿ ಸತ್ಯದ ಶೋಧ ಇರುವುದಿಲ್ಲವಾದ್ದರಿಂದ ಅಂತಹ ಮಾತುಗಳು ಟೊಳ್ಳಾಗಿಹೋಗುತ್ತವೆ. ಒಂದು ವ್ಯವಸ್ಥೆಯ ಪರವಾಗಿ ಸುಂದರ ಟೊಳ್ಳು ಮಾತುಗಳನ್ನು ಬರೆದ ಸಾಹಿತ್ಯಕ್ಕಿಂತ ವ್ಯವಸ್ಥೆಯ ಒಳಹೊರಗನ್ನು ಅರಿತು ಸತ್ಯದ ಪರವಾಗಿ ಬರೆದ ಸೀದಾ ಸಾಹಿತ್ಯವೇ ನಾಲ್ಕು ಕಾಲ ಉಳಿಯುತ್ತದೆ.
ಶಿವಶಂಕರ ಸೀಗೆಹಟ್ಟಿ `ಕರುಳ ಬಳ್ಳಿ ಮತ್ತು ಜೀವಕಾರುಣ್ಯ’ ಪ್ರಕಟಿಸುತ್ತಿದ್ದಾರೆ. ಈ ಸಂಕಲನದ ಬಹುಪಾಲು ಕವಿತೆಗಳಲ್ಲಿರುವುದು ರಮ್ಯತೆಯಲ್ಲ. ಜೀವನದ ಸೊಬಗನ್ನು ಆನಂದಿಸುವ, ಹರ್ಷಿಸುವ ಧೋರಣೆ ಇಲ್ಲಿನ ಕವಿತೆಗಳಿಗಿಲ್ಲ. ಯಾವುದೋ ಆಳದ ಯಾತನೆಯನ್ನು ಹೇಳಿಕೊಳ್ಳಲಾಗದ ಬಿಕ್ಕಟ್ಟಿನಲ್ಲಿ, ಬಿಕ್ಕಟ್ಟಿದ್ದರೂ ಹೇಳಿಕೊಳ್ಳದೆ ಇರಲಾಗದ ಹೊಯ್ದಾಟದಲ್ಲಿ ಇವು ರೂಪುಗೊಂಡಿವೆ. ಇವರ ಬಹುಪಾಲು ಕವಿತೆಗಳ ಸ್ಥಾಯಿದನಿ ಇದಾಗಿದೆ. ಕವಿದಿರುವ ಕಾವಳದ ನಡುವೆಯೇ ಬೆಳಕು ನಾಳೆಗೂ ಉಳಿದಿದೆ ಎಂಬ ಆಶಾವಾದದಲ್ಲಿ ಇವು ಜೀವ ಹಿಡಿದುಕೊಂಡಿವೆ.
`ಇದು ಅಲಿಖಿತ ಆಪತ್ತುಗಳ ಕಾಲ ಸ್ವಾಮಿ
ಇಲ್ಲಿ ಎಲ್ಲದಕ್ಕೂ ಸಂಬಂಧವಿದೆ
ರಕ್ತದ್ದು ಮಾಂಸದ್ದು
ಬಣ್ಣದ್ದು ಬಟ್ಟೆಯದು
ಮಾತಿನದು ಮೌನದ್ದು’ ಎನ್ನುವ ಕವಿ ಇದೇ ಕವಿತೆಯ ಆರಂಭದಲ್ಲಿ
`ಅನುಮಾನದ ಕಾಲಮಾನದಲ್ಲಿ
ಮಾತೆಂಬುದು ಸೂತಕವಾಗಿದೆ’ ಎನ್ನುತ್ತಾರೆ. ಅದೇ ಕವಿತೆಯಲ್ಲಿ
‘ಮನಸಾಕ್ಷಿಯ ಮಾತುಗಳಿಲ್ಲಿ ಮುಖರಹಿತವಾಗಿವೆ’ ಎಂದು ವ್ಯಥಿಸುತ್ತಾರೆ. ಕಾವ್ಯವಾಗಿ ಈ ಬಗೆಯಲ್ಲಿ ಒಂದು ದುರಿತ ಕಾಲದ ಬಿಕ್ಕಟ್ಟನ್ನು ಸೂಚ್ಯವಾಗಿ ಹೇಳಬಯಸುತ್ತಿರುವ ಕವಿಗೆ
`ಗಡಿಯಾರದ ಮುಳ್ಳುಗಳಿಗೆ ಇನ್ನೂ ಚಲನೆಯಿದೆ
ಬಾವುಟದ ನೀಲಿ ಚಕ್ರ ಸದಾ ಸುತ್ತುತ್ತಿದೆ’ ಎನ್ನುವ ಭರವಸೆಯೂ ಇದೆ.
ಒಂದು ದುಮ್ಮಾನದ ಕಾಲದ ಒಳತೋಟಿಯನ್ನು ಕವಿತೆಗಳಾಗಿ ಹೇಳುವಲ್ಲಿ ಶಿವಶಂಕರ್ ಸಾಕಷ್ಟು ಸೂಕ್ಷ್ಮತೆ ಹಾಗೂ ಸೂಚ್ಯತೆಗಳನ್ನು ಬಳಸಿಕೊಂಡಿದ್ದಾರೆ. ಒಡೆದು ಹೇಳಲಾಗದ ಎಷ್ಟನ್ನೋ ಇವು ಓದುಗನಿಗೆ ಅರ್ಥ ಮಾಡಿಸಲು ಬಯಸುತ್ತಿವೆ. ಕೆಲವೊಮ್ಮೆ ಅದು ಬುದ್ಧನ ರೂಪಕವನ್ನು ಬಳಸಬಹುದು. ಬೆಳಕಿನಂತೆಯೇ ಬುದ್ಧನೂ ಬೆಳಕಿನ ರೂಪಕವಾಗಿಯೇ ಕವಿತೆಯಲ್ಲಿ ಗೋಚರವಾಗಿದ್ದಾನೆ.
`ಊರೂರು ಸುತ್ತಿದ ನಿನ್ನ ಭಿಕ್ಕು ಪಾತ್ರೆ
ಈಗಲೂ ಸುತ್ತುತ್ತಿದೆ
ಅದು ಸುತ್ತಿದ್ದು ಹಸಿವಿನ ಮುಕ್ತಿಗಲ್ಲ
ಶಾಂತಿಯ ನೆಲೆಗೆ
ಬೆಳಕಿನ ಬೀಜಗಳಿಗೆ’
ತನ್ನ ಕವಿತೆ ಅದರ ನಿಜಾರ್ಥದಲ್ಲಿ ಊರೂರು ಸುತ್ತಿದ್ದು ಅಥವಾ ಸಂಕಟಗಳಲ್ಲಿ ಅಲೆದಾಡಿದ್ದು ತನ್ನ ಕಾವ್ಯಾಭಿವ್ಯಕ್ತಿಯ ಹಸಿವಿನಿಂದಲ್ಲ. ಬದಲಾಗಿ ಅದಕ್ಕೆ ಬೆಳಕಿನ ಬೀಜಗಳನ್ನು ಹುಡುಕುವ, ನೆಡುವ ಗುರಿಯಿದೆ ಎನ್ನುವುದು ಕವಿಯ ಪರೋಕ್ಷ ದನಿಯಾಗಿದೆ ಎಂದೂ ಕೂಡ ಈ ಸಾಲುಗಳನ್ನು ನಾವು ಅರ್ಥೈಸಬಹುದಾಗಿದೆ.
ಈಚೆಗೆ ಕರೋನ ಕಾರಣದಿಂದ ಲಾಕ್‍ಡೌನ್ ಸಂಭವಿಸಿದಾಗ ಲಕ್ಷಾಂತರ ಕಾರ್ಮಿಕರು ತಮ್ಮ ಊರುಗಳಿಗೆ ಬರಿಗಾಲಲ್ಲಿ ನಡೆದು ಹೋಗುವಂತಹ ತೊಂದರೆಗೀಡಾದರು. ಅದನ್ನು ಕವಿ ಲಾಂಗ್‍ಮಾರ್ಚ್ ಎಂದು ಕರೆದಿದ್ದಾರೆ. ಬಡವರು, ಹೊಟ್ಟೆಗಿಲ್ಲದವರು ಚೀನಾದಲ್ಲಿ ಹೀಗೆ ಲಾಂಗ್‍ಮಾರ್ಚ್ ಮಾಡಿ ತಮ್ಮ ದೇಶದಲ್ಲಿ ಕ್ರಾಂತಿಯುಂಟುಮಾಡಿದರು. ಆದರೆ ಇಲ್ಲಿ ನಡೆದ ಲಾಂಗ್‍ಮಾರ್ಚ್ ಆ ರೀತಿಯ ಗುರಿ ಹೊಂದಿರಲಿಲ್ಲ. ಈ ಸಂಕಟದಿಂದ ಪಾರಾದರೆ ಸಾಕು, ಸಾಯುವುದಾದರೂ ಸ್ವಂತ ಊರಿನಲ್ಲಿ ಸಾಯೋಣ ಎನ್ನುವ ಅಸಹಾಯಕತೆಯಿಂದ ನಡೆದ ಮನಕಲಕುವ ವಿದ್ಯಮಾನವದು.
`ಉರಿಯ ಪಾದವನು ಊರಿ
ಊರೂರು ಸೇರಿದರೆ ಸಾಕೆಂದು’ ನಡೆದವರಾಗಿದ್ದರು ಅವರು.
ಅವರ `ಎದೆಯಲ್ಲಿ ಭಯವೇ ಜೋಗುಳವಾಡುತ್ತಿದೆ’
ತೊಂಡುರೊಟ್ಟಿಗಾಗಿ ಕೈಯೊಡ್ಡಿ ನಡೆಯುತ್ತಿದ್ದ ಅವರ ಮನಸ್ಸು ಹೇಗಿತ್ತೆಂದು ಕವಿ ಹೇಳುವ ಮಾತುಗಳು ಅರ್ಥಪೂರ್ಣವಾಗಿವೆ-
ಯಾವುದೋ ಆಳದ ಯಾತನೆಯನ್ನು ಹೇಳಿಕೊಳ್ಳಲಾಗದ ಬಿಕ್ಕಟ್ಟಿನಲ್ಲಿ, ಬಿಕ್ಕಟ್ಟಿದ್ದರೂ ಹೇಳಿಕೊಳ್ಳದೆ ಇರಲಾಗದ ಹೊಯ್ದಾಟದಲ್ಲಿ ಇವು ರೂಪುಗೊಂಡಿವೆ. ಇವರ ಬಹುಪಾಲು ಕವಿತೆಗಳ ಸ್ಥಾಯಿದನಿ ಇದಾಗಿದೆ. ಕವಿದಿರುವ ಕಾವಳದ ನಡುವೆಯೇ ಬೆಳಕು ನಾಳೆಗೂ ಉಳಿದಿದೆ ಎಂಬ ಆಶಾವಾದದಲ್ಲಿ ಇವು ಜೀವ ಹಿಡಿದುಕೊಂಡಿವೆ.
`ಸಾಯುವ ಭೀತಿಯಲ್ಲಿಯೂ
ಇಲ್ಲಿ ಯಾರದ್ದೋ ಮೇಲೆ
ಇನ್ಯಾರಿಗೋ ಅನುಮಾನಗಳು ಎದ್ದು ನಿಂತಿವೆ
ತಟ್ಟೆ ಜಾಗಟೆಗಳು
ಉರಿಯುವ ದೀಪಗಳು
ಬಂದೀಖಾನೆಯ ದೇವರು
ಅಯೋಮಯವೆನಿಸಿವೆ’
ಎಂದು ಕವಿ ಆ ಸ್ಥಿತಿಯನ್ನು ಬಣ್ಣಿಸುತ್ತಿದ್ದಾರೆ. ಈ ಬಣ್ಣನೆಯ ವಿಧಾನದಲ್ಲಿ ಸ್ಪಷ್ಟತೆ ಇದೆ. ಕವಿ ಏನನ್ನು ಸೂಚಿಸುತ್ತಿದ್ದಾರೆಂಬುದು ನಮ್ಮ ಅರಿವಿಗೆ ಬರುತ್ತದೆ. ಆದರೆ ಇದನ್ನು ವಿವರಿಸಿ ಕವಿ ವಾಚ್ಯ ಮಾಡಲು ಹೋಗಿಲ್ಲ.
`ಬೀದಿಗಳು ಬಯಲಾಗಿವೆ
ನಡೆಯುವ ಕಾಲುಗಳೆಷ್ಟೋ’
ಹೆಜ್ಜೆ ಮರೆತಿವೆ’
ಹೀಗೆ ವರ್ತಮಾನದ ಒಂದು ವಿದ್ಯಮಾನವನ್ನು ಸಂಯಮಪೂರ್ಣವಾಗಿ ಕವಿತೆಗಳಲ್ಲಿ ಹೇಳಲು ಸಾಧ್ಯವಾಗಿರುವುದರಿಂದಲೇ ಶಿವಶಂಕರ್ ಅವರ ಬರವಣಿಗೆಯ ಬಗ್ಗೆ ಭರವಸೆ ಹುಟ್ಟುತ್ತದೆ. ಈ ಸಂಕಲನದಲ್ಲಿ ಸಾಮಾನ್ಯ ಎನ್ನಬಹುದಾದ ಕವಿತೆಗಳು ಇರುವಂತೆಯೇ ಕವಿತೆಗಳಾಗಿ ಗಟ್ಟಿಯಾಗಿರುವ ಕವಿತೆಗಳೂ ಇವೆ. ಸಾಮಾನ್ಯ ಅನ್ನಿಸಿಕೊಳ್ಳುವ ಕವಿತೆಗಳಲ್ಲೂ ಅರ್ಥಪೂರ್ಣವಾಗಿರುವ ಕಾವ್ಯಾತ್ಮಕ ಸಾಲುಗಳಿವೆ.
`ನೆಲವಾಳುವ ದೊರೆಯ
ಆತ್ಮ ಮತ್ತು ದೇಹಗಳು
ಯಾವ ತರಂಗಾಂತರಕ್ಕೂ ತಾಗದೆ
ಯುಗಾಂತರಕ್ಕೆ ಮುನ್ನಡೆಯುತ್ತಿವೆ
ಇನ್ನು ಕಾಯುವುದು ಕೊರಗುವುದು ಏನೂ ಇಲ್ಲ
ಸರ್ವವನ್ನು ಸಲೀಸಾಗಿ ನೆಲಸಮಗೊಳಿಸಲಾಗುತ್ತಿದೆ’
‘ನವಿಲೂರ ನಾಯಕ’ ಎನ್ನುವ ಕವಿತೆಯಲ್ಲಿ ಬರುವ ಸಾಲುಗಳಿವು. ಈ ಕವಿತೆಯಲ್ಲಿ ವಿವರಣಾತ್ಮಕ ಎನ್ನಬಹುದಾದ ಕೆಲವು ಸಾಲುಗಳಿರುವ ಹಾಗೆಯೇ ಅರ್ಥ ಸಾಧ್ಯತೆಯನ್ನು ಹೆಣೆದುಕೊಂಡಿರುವ ಸಾಲುಗಳಿವೆ. ‘ಬೆಳಕಿನ ಸಂತ’ ಎನ್ನುವ ಇವರದೊಂದು ಕವಿತೆಯಲ್ಲಿ..
`ಊರೂರು ಸುತ್ತಿದ ಭಿಕ್ಕು ಪಾತ್ರೆ
ನನ್ನ ಮುಂದೆಯೇ ಬಂದು ನಿಂತಿದೆ
ಪಾತ್ರೆಗೆ ಬೀಳುವ ಎಲ್ಲವೂ
ನನ್ನೊಳಗೆ ಅಕ್ಷಯವಾಗುತ್ತಿದೆ
ಅಚ್ಚರಿಯೆನಿಸಿತು
ನಾನು ಕತ್ತಲನ್ನು ಸುರಿದಾಗ
ಬೆಳದಿಂಗಳು ಕಣ್ಣೆದುರಿಗಿತ್ತು’
ಶಿವಶಂಕರ್ ಸೀಗೆಹಟ್ಟಿಯವರ ಕವಿತೆಯ ದಾರಿ ನಿಚ್ಚಳವಾಗಿದೆ. ಅವರ ಸ್ಪಂದನದ ನೆಲೆಗಳು ಯಾವುವು ಎನ್ನುವುದನ್ನು ಈ ಕವಿತೆಗಳು ಹೇಳುತ್ತಿವೆ. ತನ್ನ ಅಭಿವ್ಯಕ್ತಿಯನ್ನು ಸಂಯಮದಿಂದ ಸುಂದರವಾದ ಪದಜೋಡಣೆಯಿಂದ ಸಿಂಗರಿಸುವಷ್ಟರಲ್ಲೇ ಕವಿ ತೃಪ್ತನಾಗಿಲ್ಲ. ಕವಿತೆಗಳಲ್ಲಿ ಬಳಕೆಯಾಗಿರುವ ಭಾಷೆ ಸಾಹಿತ್ಯಮಯವಾಗಿದೆ. ಆದರೆ ಅದನ್ನು ವಿನಾಕರಣ ಅಲಂಕರಿಸುವ ಆಸಕ್ತಿ ಕವಿಗಿಲ್ಲ ಎಂಬುದು ಕೂಡ ಎದ್ದು ಕಾಣುತ್ತಿದೆ.
`ನಿನ್ನದೇ ಸರಹದ್ದಿನ ಮರದಡಿಯಲ್ಲಿ ಕುಳಿತ
ಬಯಲ ಬೈರಾಗಿಯೊಬ್ಬ
ಕಾರಣ ಪರಿಣಾಮದ ಹಾಡುಗಬ್ಬ ಹಾಡುತ್ತಲೆ
ತನ್ನನು ತಾನೇ ಸಾವರಿಸಿಕೊಂಡು
ಲೋಕ ದುಃಖದಲಿ ಪಾಲು ಕೇಳುತ್ತಲಿದ್ದಾನೆ’
ಇದು ಶಿವಶಂಕರ್ ಅವರ ಕವಿತೆಗಳ ವಸ್ತುವಿಗೂ ಅನ್ವಯವಾಗುತ್ತದೆ. ಸಾಕಷ್ಟು ಒಳ್ಳೆಯ ಕವಿತೆಗಳನ್ನು ಬರೆದಿರುವ, ಇನ್ನಷ್ಟು ಒಳ್ಳೆಯ ಕವಿತೆಗಳನ್ನು ಬರೆಯುವ ಸಾಮರ್ಥ್ಯ ತನಗಿದೆ ಎಂದು ಈ ಸಂಕಲನದ ಮುಖಾಂತರ ಭರವಸೆ ಮೂಡಿಸಿರುವ ತರುಣ ಕವಿ ಶಿವಶಂಕರ್ ಸೀಗೆಹಟ್ಟಿಯವರ ಕಾವ್ಯಯಾನಕ್ಕೆ ನನ್ನ ಶುಭ ಹಾರೈಕೆಗಳು ಸಲ್ಲುತ್ತಿವೆ.
(ಕೃತಿ: ಕರುಳ ಬಳ್ಳಿ ಮತ್ತು ಜೀವಕಾರುಣ್ಯ, ಲೇಖಕರು: ಶಿವಶಂಕರ ಸೀಗೆಹಟ್ಟಿ, ಪ್ರಕಾಶಕರು: ಕಾಜಾಣ ಪ್ರಕಾಶನ, ಬೆಲೆ: ೯೦/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ