ಮೊಡವೆಯೊಡವೆ
ಗಿಡ್ಡವಾಗುವ ನೀಲಿ ಲಂಗವ
ಬಗ್ಗಿ, ಮೊಣಕಾಲ ಕೆಳವರೆಗೂ ಜಗ್ಗಿ ಜಗ್ಗಿ
ಉದ್ದ ಮಾಡುವ ಬೆನ್ನಲ್ಲೇ…
ಮೂಗಿನ ಅಂಚು, ಹಣೆಯ ತುದಿ
ಗಲ್ಲದ ನಡು, ಕೆನ್ನೆಯ ಗುಳಿಯನ್ನೂ ಬಿಡದೆ
ನಿದ್ದೆ ತೆಗೆದೇಳುವುದರೊಳಗೆ ಎದ್ದು ಬಿಡುವ
ಕೆಂಪು ಕೆಂಪನೆ ಚೂಪಾದ ಅಣಬೆ ಮೊಗ್ಗುಗಳ ಕಂಡು
ಕಂಗಾಲಾದುದ ನೋಡಿ ಕನ್ನಡಿ ಹೇಳಿತ್ತು
ಇದು ಕನ್ನೆಯಾಗುವ ಹೊತ್ತೆಂದು.
ಮೊಗದಿ ಮೂಡುವ ಈ ಮೊಗ್ಗುಗಳು
ಹಿಗ್ಗಿಗೋ?
ಹಾರ್ಮೋನಿಗೋ..?
ಎಲ್ಲೋ ಓದಿದ್ದೆ, ಎಲ್ಲೋ ಕೇಳಿದ್ದೆ
ತಲೆ ಕೆಡಿಸಿಕೊಳ್ಳದೆ ಕಿವುಚಿ ಕಿವುಚಿ
ಹಿತ ನೋವ ಪಟ್ಟಿದ್ದೆ.
ಪುಣ್ಯ ಕಲೆ ಇಲ್ಲವೆಂದು
ಕನ್ನಡಿಗೆ ಕಣ್ ಹೊಡೆದಿದ್ದೆ.
ಅರೇ! ಮತ್ತಿಂದು ಅದೇ.. ಹೂ ಮೊಗ್ಗು.
ಒಂದೇ..ಒಂದು.
ಎಷ್ಟೇ ನೋವ ಕೊಟ್ಟರೂ
ಕೆನ್ನೆಗೊಂದು ದೃಷ್ಟಿ ಬೊಟ್ಟಿಟ್ಟಂತೆ
ವದನಕ್ಕೆ ಈ ಮೊಡವೆ
ಒಡವೆಯಾದಂತೆ.
ಗುಳಿಯಿಂದ ಕನಸೆಲ್ಲ
ಮತ್ತೆದ್ದು ಬಂದಂತೆ..
ಹೇಳಲಾರದ ಮಾತಿಗೆ
ಮನ ಲಜ್ಜೆ ಗೊಂಡಂತೆ.
ನಾವಿಬ್ಬರೂ ಎದುರು ಬದಿರು
ನಿಂತು ಬಿಟ್ಟಂತೆ.
ಕೇಳು…
ಕೈ ನೇವರಿಸಿತು ಕೆನ್ನೆಯ
ಇನ್ನೇನು ಉಗುರು ತಾಗುವ ಹೊತ್ತು
ನಿನ್ನದೇ.. ಇನಿದನಿ
ಕಿವುಚಬೇಡ ಕಲೆಯಾದಿತು.
ಸವಿ ನೆನಪಿಗೆ
ಇರಲಿ ಬಿಡು ಕಲೆ
ಕನ್ನಡಿಯಂದಿತು
ಅತ್ತ ನಾಚುತ್ತ ಮೊಡವೆ
ತಂತಾನೆ ನಗುತಿತ್ತು
ಬದುಕು ಹಳೆಯ-ಹೊಸದರ
ನೇಯ್ಗೆಯಂತೆ
ಕಲೆಗಳೋ ನೆನಪುಗಳ ಬಿಂಬ
ನಿರಂತರತೆಯಂತೆ
ಶೋಭಾ ಹಿರೇಕೈ ಕಂಡ್ರಾಜಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು
ಪ್ರಾಥಮಿಕ ಶಾಲೆ ಶಿಕ್ಷಕರು
ಕಥೆ, ಕವನ, ಲಲಿತ ಪ್ರಬಂಧ, ಲೇಖನ ಬರವಣಿಗೆ ಪ್ರವೃತ್ತಿ.
“ಅವ್ವ ಮತ್ತು ಅಬ್ಬಲಿಗೆ” ಪ್ರಕಟಿತ ಕವನ ಸಂಕಲನ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಶೋಭಾಳ ಕವಿತೆಗಳ ಅಭಿಮಾನಿ ನಾನು.ಚೆಂದದ ಕವಿತೆ ಶೋಭಾ
ಹೇ.. ತುಂಬು ಪ್ರೀತಿ ನಿನಗೆ ಸ್ಮಿತಾ.
ಧನ್ಯವಾದಗಳು ಕೆಂಡ ಸಂಪಿಗೆಯ ಬಳಗಕ್ಕೆ.
ಚೆಂದ ಕವಿತೆ . ಈ ಕವಿತೆಯ ಮೊದಲ ಓದುಗ ನಾನು .
ಚೆಂದ ಕವಿತೆ .
ತುಂಬಾ ಛಂದದ ಕವಿತೆ. ಓದಿ ಖುಷಿಯಾಯಿತು.