Advertisement
ಶ್ರಾವಣ ಬಂತೂ ನಾಡಿಗೆ….: ಮಹಾಲಕ್ಷ್ಮೀ ಕೆ. ಎನ್. ಬರಹ

ಶ್ರಾವಣ ಬಂತೂ ನಾಡಿಗೆ….: ಮಹಾಲಕ್ಷ್ಮೀ ಕೆ. ಎನ್. ಬರಹ

ಈ ಹಸಿರ ಬಸಿರ ತಿಳಿಗಾಳಿಯನ್ನು ಉಸಿರಾಡುವವರು ನಾವುಗಳು. ಜೀವರಾಶಿಗಳ ಚಟುವಟಿಕೆಗಳು ಕೂಡ ಹೆಚ್ಚಾಗುತ್ತವೆ. ಪ್ರಕೃತಿ ಮತ್ತು ಜೀವಿಗಳ ನಡುವಿನಲ್ಲಿ ನಡೆಯುವ ಭಾವನಾತ್ಮಕ ಸಂವಾದ ಹೆಚ್ಚಾಗುತ್ತದೆ. ಭೂಮಿಯನ್ನು ಚುಂಬಿಸುವ ಮಳೆರಾಯ, ಅವಕಾಶ ಸಿಕ್ಕಾಗ ಮಳೆಯಲ್ಲೇ ಚೂರು ಬಂದು ಹೋಗುವ ಸೂರ್ಯ. ಅದ್ಭುತ ಋತುಚಕ್ರ. ನಿಸರ್ಗದ ಕಲಾತ್ಮಕತೆಗೆ ಜೀವವೈವಿಧ್ಯದ ಸಂಗಮಕ್ಕೆ ಕಾರಣವಾಗಿದೆ ಈ ಶ್ರಾವಣ ಮಾಸ. ಪ್ರಕೃತಿಯ ಹೃದಯಧ್ವನಿಯ ಹಬ್ಬ. ಮರದ ರೆಂಬೆ ಕೊಂಬೆಗಳಲ್ಲಿ ಅಳಿಲುಗಳು ಮಾತಿಗಿಳಿಯುತ್ತವೆ, ಕೆಲವೊಮ್ಮೆ ಕೀಟಗಳು ಬಂದು ಇಣುಕಿ ಹೋಗುತ್ತವೆ. ಮಣ್ಣಿನ ಶಾಖ ಕಡಿಮೆಯಾಗುವುದರಿಂದ ಹಿಮ ನಿದ್ರೆಯಿಂದ ಹೊರಬರುವ ಜೀವಿಗಳು ಚಟುವಟಿಕೆಯಲ್ಲಿ ತೊಡಗುತ್ತವೆ.
ಶ್ರಾವಣ ಸಂದರ್ಭದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳ ಕುರಿತು ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

ಶ್ರಾವಣ ಮಾಸವೆಂದರೆ ಭಾರತದಾದ್ಯಂತ ಮಳೆಯ ಶ್ರೇಷ್ಠ ಕಾಲ. ಮಾನ್ಸೂನ್ ಮಾರುತಗಳನ್ನು ಕರೆತರುವ ಪವಿತ್ರ ಋತು. ವಾತಾವರಣದಲ್ಲಿ ಶೇಕಡಾ ಸರಾಸರಿ 70 ರಿಂದ 90 ರಷ್ಟು ತೇವಾಂಶವನ್ನು ಹೊಂದಿರುತ್ತದೆ. ಇದು ಪರಿಸರದ ಪರ್ವಕಾಲ, ಪರ್ಣವಸಂತ ಕಾಲ, ಪುನಶ್ಚೇತನದ ಕಾಲ. ಪ್ರಕೃತಿ ತನ್ನ ಅತಿ ಸುಂದರವಾದ ನಯನಾಭಿರಾಮ ರೂಪವನ್ನು ತೋರಿಸುವ ಕಾಲ.

ದಟ್ಟ ಮೋಡ ಮುಸುಕಿದ ಆಕಾಶ, ಮಳೆಗೆ ಮಿಂಚುವ ಭೂಮಿ, ಹಸಿರು ಹೊಲ, ಚಿಗುರು ತಳೆದ ಮರಗಳು – ಇವೆಲ್ಲವೂ ಸೇರಿ ಪ್ರಕೃತಿಯೇ ಚಿತ್ರಿಸಿದ ದೈವಿಕ ಬಣ್ಣದ ನಕಾಶೆಯನ್ನು ಕಂಗೊಳಿಸುತ್ತದೆ. ಶ್ರಾವಣದ ದಿನವೆಂದರೆ ಪ್ರಕೃತಿಯ ಹೊಸ ಮೆರುಗು.

ತೀವ್ರ ಗಾಳಿ ಸಾಗುವುದರೊಂದಿಗೆ ಮಳೆಯ ಸಡಗರ, ಈ ಮಳೆ ಹಾಡಿಗೆ ನಮ್ಮ ಹೃದಯವೇ ನೃತ್ಯ ಮಾಡುವಂತೆ ಭಾಸವಾಗುತ್ತದೆ. ಈ ಜಲಚಕ್ರ ಭೂರಮೆಯ ಜೀವಚಕ್ರಕ್ಕೆ ಪ್ರಾಣಪಾನ. ಶ್ರಾವಣದ ಮಳೆ ಅಂತರ್ಜಲದ ಪುನರ್‌ಪೂರಣಕ್ಕೆ ಸಹಕರಿಸುತ್ತದೆ. ಬೆಳಕು, ತೀವ್ರ ತಾಪ, ಋತುಚಕ್ರವನ್ನು ಪ್ರೇರೇಪಿಸುತ್ತದೆ, ಬೀಜಾಭಿವೃದ್ಧಿಗೆ ತಕ್ಕ ಶರತ್ತುಗಳನ್ನು ಒದಗಿಸುತ್ತದೆ. ಮಳೆ ಮಣ್ಣನ್ನು ಮುಟ್ಟುತ್ತದೆ. ಮಣ್ಣು ಲವಣ ಹಾಗೂ ಪೋಷಕಾಂಶಗಳನ್ನು ಶೋಧಿಸಿ ಹಿಡಿದಿಟ್ಟುಕೊಂಡು ಬೇರುಗಳ ಕೋಶಕ್ಕೆ ತಲುಪಿಸಿ ಬೆಳೆಯನ್ನು ಪೋಷಿಸುತ್ತದೆ. ಹಸಿರಿಗೆ ಹದವಾಗುವ ಒಡಲು ಬಿತ್ತನೆಗೆ ತಯಾರಾಗುವ ರೈತ. ಬಿತ್ತನೆಗೆ, ಬೆಳವಣಿಗೆಗೆ, ಪುಷ್ಟೀಕರಣಕ್ಕೆ, ಫಲಧಾರಣೆಗೆ ಸೂಕ್ತವಾದ ಕಾಲ ಶ್ರಾವಣ.

ಈ ಹಸಿರ ಬಸಿರ ತಿಳಿಗಾಳಿಯನ್ನು ಉಸಿರಾಡುವವರು ನಾವುಗಳು. ಜೀವರಾಶಿಗಳ ಚಟುವಟಿಕೆಗಳು ಕೂಡ ಹೆಚ್ಚಾಗುತ್ತವೆ. ಪ್ರಕೃತಿ ಮತ್ತು ಜೀವಿಗಳ ನಡುವಿನಲ್ಲಿ ನಡೆಯುವ ಭಾವನಾತ್ಮಕ ಸಂವಾದ ಹೆಚ್ಚಾಗುತ್ತದೆ. ಭೂಮಿಯನ್ನು ಚುಂಬಿಸುವ ಮಳೆರಾಯ, ಅವಕಾಶ ಸಿಕ್ಕಾಗ ಮಳೆಯಲ್ಲೇ ಚೂರು ಬಂದು ಹೋಗುವ ಸೂರ್ಯ. ಅದ್ಭುತ ಋತುಚಕ್ರ. ನಿಸರ್ಗದ ಕಲಾತ್ಮಕತೆಗೆ ಜೀವವೈವಿಧ್ಯದ ಸಂಗಮಕ್ಕೆ ಕಾರಣವಾಗಿದೆ ಈ ಶ್ರಾವಣ ಮಾಸ. ಪ್ರಕೃತಿಯ ಹೃದಯಧ್ವನಿಯ ಹಬ್ಬ. ಮರದ ರೆಂಬೆ ಕೊಂಬೆಗಳಲ್ಲಿ ಅಳಿಲುಗಳು ಮಾತಿಗಿಳಿಯುತ್ತವೆ, ಕೆಲವೊಮ್ಮೆ ಕೀಟಗಳು ಬಂದು ಇಣುಕಿ ಹೋಗುತ್ತವೆ. ಮಣ್ಣಿನ ಶಾಖ ಕಡಿಮೆಯಾಗುವುದರಿಂದ ಹಿಮ ನಿದ್ರೆಯಿಂದ ಹೊರಬರುವ ಜೀವಿಗಳು ಚಟುವಟಿಕೆಯಲ್ಲಿ ತೊಡಗುತ್ತವೆ.

ಕೃಷ್ಣಮಂಡೂಕ (Indian Bull Frog), ಸಣ್ಣ ತಂತಿ ಹುಳುಗಳು, ನದಿಯ ತಡೆವಲಯದಲ್ಲಿ ಹುಟ್ಟುವ ಕೀಟಗಳು – ಇವೆಲ್ಲವೂ ಈ ಸಮೃದ್ಧ ತೇವಭರಿತ ವಾರಗಳಲ್ಲಿ ಪುನಃ ರೂಪ ಪಡೆಯುತ್ತವೆ. ನವಿಲುಗಳು ತಮ್ಮ ದೀಪ್ತಿಮಯ ಗರಿಗಳನ್ನ ಹರಡಿಕೊಂಡು ನೃತ್ಯಮಾಡಿ, ಘನಧ್ವನಿಯಿಂದ ಹಾಡಿ ಸಂಗಾತಿಯನ್ನು ಆಕರ್ಷಿಸುತ್ತವೆ. ಮೈನಾ ಹಕ್ಕಿಗಳು ಜೋಡಿಯಾದ ಮೇಲೆ ಶ್ರಾವಣದ ಸಮಯದಲ್ಲಿ ಗೂಡು ನಿರ್ಮಿಸಿ ಮೊಟ್ಟೆಯಿಡುತ್ತವೆ.

ಭಾರತೀಯ ರಾಬಿನ್ ಹಕ್ಕಿಗಳಿಗೆ ಜೀವನದ ಹೊಸ ಅಧ್ಯಾಯವೊಂದು ಆರಂಭವಾಗುವ ಕಾಲ ಈ ಶ್ರಾವಣ. ಪ್ರತಿಯೊಂದು ಗೂಡು ಒಂದೊಂದು ಹೊಸ ತೊಗಲು. ಜೀವವೈವಿಧ್ಯದ ಜಗತ್ತಿಗೆ ನವಚೇತನ ನೀಡುವ ಕಾಲದಲ್ಲಿ ನಾವುಗಳೂ ಕೂಡ ಪುನಶ್ಚೇತನ ಪಡೆಯೋಣ.

ಶ್ರಾವಣದ ಹಸಿರಿಗೆ ಕಾಡುಗಳು, ಕಾಡು ಹಕ್ಕಿಗಳು ಹಾಡುತ್ತಿರುತ್ತವೆ. ಹೊಸ ಬಾಳ ಸವಿಗನಸ ಕಾಣುತ್ತಿರುತ್ತವೆ. ಬಿರುಸಿನ ಗಾಳಿಯಿಂದ ಉಲಿಯುವ ಮೋಡಗಳು. ನವಜೀವನದ ಕಾಲ. ಹೃದಯದ ತಾಳ. ಜಲಚಕ್ರದಿಂದ ಜೀವನ ಚಕ್ರದವರೆಗೆ. ಮಣ್ಣ ಸ್ಪರ್ಶದಿಂದ ಹಕ್ಕಿಗಳ ಗಾನದವರೆಗೆ. ಕೇಳುವ ಪ್ರತಿಧ್ವನಿಯಲ್ಲೂ ಕಾವ್ಯವಿರುತ್ತದೆ.

ದಿವ್ಯ ಶ್ರಾವಣದ ಪ್ರತೀಕ — ತೀವ್ರಜಲದ ಜಲಜ ಜೀವಿಗಳ ಆಶ್ರಯದ ನಿಲಯವಾದ ಬಿಳಿ, ನೀಲಿ, ಗುಲಾಬಿ ಬಣ್ಣದ ತಾವರೆಗಳು ನದಿಜಲದ ತಾಪಮಾನವನ್ನು ನಿಯಂತ್ರಿಸುತ್ತವೆ. ಅನೇಕ “diurnal blooming behaviour” ಹೊಂದಿರುವ ಹೂಗಳು ಮಳೆ ಹೊದಿಕೆಯ ಬೆಳಕು ನೋಡಿದ ನಂತರ ಅರಳುತ್ತವೆ. ಮಳೆ ಮತ್ತು ತೀವ್ರತೆಯಿಂದ ಉಂಟಾಗುವ “auxins” ಹಾಗೂ “gibberellins” ಉತ್ಪಾದನೆಯು ಹೂವಿನ ಚಿಗುರಿಗೆ ಸಸ್ಯದ ಜೀವಕೋಶ ವಿಭಜನೆಗೆ ಉತ್ತೇಜನ ನೀಡುತ್ತದೆ. ಎಲೆ- ಪ್ರಕೃತಿಯ ನಿಶ್ಯಬ್ದ ಅಡುಗೆ ಮನೆ. ಶರೀರದ ಸೆರೋಟೊನಿನ್ ಮಟ್ಟವನ್ನು ಹೆಚ್ಚಿಸುವ ಸಂಪಿಗೆಯ ಪರಿಮಳ ಹೆಚ್ಚಾಗುತ್ತದೆ. ಕಿತ್ತಳೆ, ಕಾಫಿ, ಬಿಳಿ, ನೀಲಿ, ನೀರಳೆ ಬಣ್ಣಗಳ ಕನಕಾಂಬರ ಅರಳುತ್ತವೆ. ಆಯುರ್ವೇದದಲ್ಲಿ ಮೆದುಳಿಗೆ ಶಕ್ತಿದಾಯಕವಾದ ಶಂಖಪುಷ್ಪಿ, ಫ್ಲೇವನಾಯ್ಡ್ಸ್ ಮತ್ತು ವಿಟಮಿನ್ಸ್‌ಗಳಿಂದ ಸಮೃದ್ಧವಾದ ಅಗಸ್ತ್ಯಪುಷ್ಪ. ಲ್ಯುಕೇಮಿಯಾ ಚಿಕಿತ್ಸೆಯಲ್ಲಿ ಬಳಸುವ ಆಲ್ಕಲಾಯ್ಡ್ಸ್ ಹೊಂದಿರುವ ಔಷಧೀಯ ಹೂವು — ಪೆರ್ವಿಂಕಲ್ (Catharanthus roseus) ಎಲ್ಲೆಡೆ ಹರಡುತ್ತವೆ.

ಈಗ ಚಿಗುರುವ ಮಲ್ಲಿಗೆ, ಮೈಸೂರು ಮಲ್ಲಿಗೆ, ಕಾಡುಮಲ್ಲಿಗೆ, ದುಂಡು ಮಲ್ಲಿಗೆ, ಏಳುಸುತ್ತಿನ ಮಲ್ಲಿಗೆ, ಮೂವತ್ತಿಂಚಿನ ಮುಡಿಗೇರುವ ಮಾರುದ್ದ ಮಲ್ಲಿಗೆಯ ಘಮಲು ಮುಡಿದಾಕೆಯ ಮನದ ಇನಿಯನಂತೆ ಮನೆತುಂಬ ಮನತುಂಬ ಘಮಘಮಿಸುತ್ತಿರುತ್ತದೆ. ಆಯುರ್ವೇದದಲ್ಲಿ ಅಮೃತ ಸ್ವರೂಪವೆಂದು ಎಣಿಸಲ್ಪಟ್ಟ ಯೂಜೆನಾಲ್ (Eugenol) ಎಂಬ ಸಸ್ಯ ಸಾರವನ್ನು ಹೊಂದಿರುವ, ರೋಗನಿರೋಧಕ ಶಕ್ತಿಯುಳ್ಳ, ಶ್ವಾಸಕೋಶ ಶುದ್ಧಿಗೆ, ಜ್ವರ ನಿವಾರಣೆಗೆ ಬಳಸಲಾಗುವ ತುಳಸಿ ಶ್ರಾವಣದಲ್ಲಿ ಹೆಚ್ಚಾಗುತ್ತದೆ. ತುಳಸಿ ಕೇವಲ ಸಸ್ಯವಲ್ಲ; ಅದು ಸಂಸ್ಕೃತಿಯ ಸಾರ. ಹೀಗೆ ಅನೇಕ ಹೂಗಳು – ಅಪರಾಜಿತೆಯ ಹೂವು, ಕೃಷ್ಣಕಮಲ (Passion flower), ಬೋಗನ್‌ವಿಲ್ಲಾ – ಅರಳುತ್ತವೆ. ಪ್ರಕೃತಿಯ ಜೀವಸಂಕೇತವು ಕಣ್ಣಿಗೆ ಔನ್ನತ್ಯ.

ಬೆಳ್ಳಂಬೆಳಗ್ಗೆ ಎದ್ದ ಹೊಸದಿನದ ಬಾಳಿಗೆ ಹೂ ಮಾರುವವರ ಧ್ವನಿ ಹೊರಡುತ್ತದೆ. ಸ್ನಾನದ ಮನೆಯ ಕೊಳವೆಯಿಂದ ಹೊಗೆಯಾಡುತ್ತದೆ.

ಶ್ರಾವಣ ಬಂತು ಕಾಡಿಗೆ |
ಬಂತು ನಾಡಿಗೆ |
ಬಂತು ಬೀಡಿಗೆ | ಬಂತು ಶ್ರಾವಣ. ಬೇಂದ್ರೆ ಅಜ್ಜನ ಸಾಲು ನೆನಪಾಗುತ್ತದೆ.

ತೋಟ ಸುತ್ತುವ ಕಾಡು ಸುತ್ತುವ ಬಯಕೆ ನೆಪಕೇಳುತ್ತದೆ. ಶ್ರಾವಣದಲ್ಲಿ ವನದೇವಿ ಮೈದಳೆವಂತೆ. ಮಳೆಯಲ್ಲಿ ಮೈದೊಳೆಯುವಂತೆ, ಹಸಿರುಡುಗೆಯ ನವವಸ್ತ್ರ ಉಡುವಂತೆ, ಜೀವವೈವಿಧ್ಯರಾಶಿಗಳಲ್ಲಿ ಸಂತಾನ ಸಂಭ್ರಮಿಸುವಂತೆ, ಉಸಿರು ಹುಟ್ಟುವಂತೆ, ನಾವುಗಳೂ ಕೂಡ ಪುನಶ್ಚೇತನಗೊಳ್ಳೋಣ. ಹೊಸ ಹಾದಿ ಕಾಣೋಣ.

About The Author

ಮಹಾಲಕ್ಷ್ಮೀ ಕೆ. ಎನ್.

ಮಹಾಲಕ್ಷ್ಮೀ. ಕೆ. ಎನ್.  ತೃತೀಯ ಬಿ. ಎಸ್ಸಿ. ವಿದ್ಯಾರ್ಥಿನಿ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ