ಕಾಲದ ಕುರುಹನ್ನು ಅಳಿಸಿಹಾಕಿ
ಯಾವುದೋ ಪವಾಡ
ಬಯಲಾದ ಗುಡಿಯಿಂದ
ಒಕ್ಕಲೆದ್ದ ಮೂಢ ಪಾತ್ರಗಳು
ವಿಚಲಿತಗೊಳ್ಳದೇ
ನೆಲೆಯನರಸಿ ಹೊರಡುತ್ತವೆ.
’ನಡೆಯುತ್ತಿರುವವರೆಗೆ
ನಡುಗುತ್ತಲೇ ಇರುತ್ತದೆ ನೆಲ’
ಎಂಬ ಭ್ರಮೆಗೇ
ಕುಸಿದು ಬಿದ್ದು
ನಶಿಸಿಹೋಗುವ ಅವಯವಗಳ
ಅಂತಿಮ ಸಂಸ್ಕಾರ
ನಡೆಯುತ್ತದೆ.
ಪಾಳುಬಿದ್ದ ಕೆತ್ತನೆಗಳ
ಸಂದುಗೊಂದುಗಳಲ್ಲಿ
ಜೀರ್ಣವಾಗಿಹೋದ ಆಕಾರಗಳನ್ನು
ಮತ್ತೆ ರೂಪಿಸಿ
ಬೆಳಕಿಗೆ ತೆರೆದಿಟ್ಟರೆ
ಹೊಸ ಹುಟ್ಟಿನ
ಗುಟ್ಟು ರಟ್ಟಾದಂತೆಯೇ.
ಹೊಳೆಯುವ ಹೊಳೆಯ ಹರಿವಿನಲ್ಲಿ
ತೊಳೆವ ಕೊಳೆ
ಅಂತಿಮವೂ ಅಲ್ಲ
ಆರಂಭವೂ ಅಲ್ಲ.
ರೂಪುಗೊಳ್ಳುವ ಆಕಾರಗಳ ಶುದ್ಧತೆಯೇ
ಬಿದ್ದುಹೋಗುವ ಅಂಗಾಂಗಗಳ
ಕೊಳೆಯನ್ನು ಒರೆಸಬೇಕು.
ನಿನ್ನೆ ಯಾವುದು
ನಾಳೆ ಯಾವುದು
ಎಂಬ ಲೆಕ್ಕವನ್ನೇ
ತಿರಸ್ಕರಿಸುವ ಪಾತ್ರಗಳೇ
ಕಾಲದ ಕುರುಹನ್ನು ಅಳಿಸಿಹಾಕುವ
ಸೂತ್ರಧಾರರಾಗಿರಬಹುದೇ?!
ಸಂಚಾರಿ
ಅಕ್ಷಾಂಶ ರೇಖಾಂಶಗಳನ್ನು
ಹಿಡಿದೆಳೆಯುತ್ತ ಸಾಗುವ ಹಾದಿ
ಮುಗಿಯುವುದೇ ಇಲ್ಲ.
ಮಣ್ಣು ಮರಳುಗಳಿಗೆದುರಾಗಿ
ರಾತ್ರಿಯೆಲ್ಲ ಮಿನುಗುವವು ಬಿಂದುಗಳು;
ಸಹವಾಸವೇ ಇಲ್ಲದೆ
ದೂರದಾರಿ ಕಳೆಯುವುದಿಲ್ಲ.
ತನ್ನ ಬೆವರಿನಲ್ಲೇ ಮಿಂದುಕೊಂಡ
ಎಲೆಗಳ ಹೊಳಪನ್ನು
ಕಣ್ಣಗಲಿಸಿ ನೋಡುತ್ತಹೋದರೆ
ರಸ್ತೆಗಳೆಲ್ಲ ಗೌಣವಾಗುತ್ತವೆ.
ಇಟ್ಟಿಗೆ ಜೋಡಿಸಿ ಕಟ್ಟಿದ
ಪಟ್ಟಣದ ಗೋಪುರಗಳು
ಹಳ್ಳಿಗೋ ಕಾಡಿಗೋ
ಹೋಗುವವನ ಕಡೆಗೇ ವಾಲುತ್ತವೆ.
ಓಡಾಡಲೆಂದೇ ಸವೆದಂತಿರುವ
ದಾರಿಗಳನ್ನು ಬಿಟ್ಟು
ನಡೆಯುವ ಪೋರನಿಗೆ
ಊರಗಾದೆ ಅಡ್ಡಿಯಾಗುವುದು.
ಹೆಜ್ಜೆಗೆ ಹೆಜ್ಜೆಯ
ಪೊಣಿಸುತ್ತ ಸಾಗಿ
ಬಂಧಿಸುವ ಅನುಭವಗಳು
ಪಡೆದವನ ಸೊತ್ತು.
ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ