ದೀಪ ಬೆಳಗಬೇಡ

ನನ್ನೀ ಸುಗಂಧದ ಹಿಂದೆ
ಉಸಿರಾಡಲಾಗದ ಗಬ್ಬುನಾತವಿದೆ
ಕೊಳೆಯಾದ ಅಂಗಿಗಳು
ಕಲೆಯಾದ ಅಂಗಗಳು
ಚಂದ್ರನಿರದ ರಾತ್ರಿಗಳಲ್ಲಿ ಮಾತ್ರ
ಹೊಳೆಯಬಲ್ಲವು;
ರಾತ್ರಿ ಬೀದಿ ದೀಪ ಉರಿಸಬೇಡ
ಕೊಳೆಯ ಒಳಗಿಂದ ವಾಸನೆ ಹಬ್ಬೀತು.

ಕಾರ್ಖಾನೆಯ ಜಿಡ್ಡು
ಒರೆಸಿಕೊಂಡಮೇಲೂ ಅಂಟೆನ್ನಿಸಿದೆ
ಸೋಪು, ನೀರು, ರಾಸಾಯನಿಕಗಳು
ತೊಳೆದು ಕಪ್ಪಾಗಿ ಹರಿಯುತ್ತಿವೆ
ದಯವಿಟ್ಟು ಟಾರ್ಚ್ ಬಿಡಬೇಡ
ಚರ್ಮದ ರಂಧ್ರದೊಳಗಿನ ಕೊಳೆ
ಹೆದರಿ ಅಡಗಿಕೊಳ್ಳುತ್ತದೆ.

ಕಾಲಿಗಂಟುವ ಕೆಸರು
ಚೀಲಕಂಟುವ ಧೂಳು
ಮೂಗು ಕಿವಿಗಳಲ್ಲಿ
ಕಟ್ಟಿಕೊಳ್ಳುವ ಮಾಲಿನ್ಯಗಳನ್ನು
ದಿನವೂ ತೊಳೆದು
ಅಳಿಸುವುದು ಹೇಗೆ?
ದೀಪ ಹಚ್ಚಲೇಬೇಡ
ಮಂಪರಿನಲ್ಲಿ ಮಿಂದರೆ ಸಾಕು.

ನಿದ್ರೆಯೊಳಗಿನ ಕನಸುಗಳಲ್ಲಿ
ಬೆಳಕು ಬಿದ್ದ ವಸ್ತುಗಳೆಲ್ಲ
ಹಳೆಯದರಂತೆ ಕಳೆಗುಂದಿವೆ,
ಇಷ್ಟಕ್ಕೆಲ್ಲ ಹೆದರಿ ಬೆಚ್ಚಿದರೂ
ಕಣ್ತೆರೆಯಬೇಡ
ನಮ್ಮ ಬೆತ್ತಲೆಯೇ ನಮಗೆ
ತೊಳೆಯದ ಉಡುಗೆಯಂತೆ ಕಂಡೀತು.

ಒಂದು ಹುರುಪಿನಲ್ಲಿ

ಕಂಗೆಟ್ಟ ನನ್ನ ಈ ಇರುಳು
ನಿನ್ನ ಪ್ರೀತಿಯ ಹುರುಪಿನಲ್ಲಿ
ಕರಗುತ್ತದೆ

ಕತ್ತಲೆಯ ಏಳುಬೀಳು
ಸಿಡಿದು ಚೂರಾಗಿ ಮರುಗುತ್ತದೆ

ಪಠಿಸುವ ಮಂತ್ರದಂತೆ
ಗೋಚರಿಸುವ ನಿನ್ನ
ಮಾತಿನ ಕೋನಗಳಲ್ಲಿ
ಕತ್ತಲೆಯೂ ಬೆಳಕಿನಂತೆ
ಮೆರೆಯುತ್ತದೆ

ವಿಚಾರಿಸದೆಯೇ ಅವತರಿಸುವ
ನಿನ್ನ ಅವಯವಗಳ ಸ್ಪರ್ಷದಲ್ಲಿ
ಕತ್ತಲೆಯ ವಿಕಾರವೂ ಮುಗಿಯುತ್ತದೆ

ನಾನು ಪ್ರಶ್ನಿಸಲು ತತ್ತರಿಸುವ
ನಿನ್ನ ಉತ್ತರಗಳ ಹೊತ್ತಿಗೆ
ಹಗಲಿನ ಕುರುಹು ಹೊರಡುತ್ತದೆ

ವಿಭಜಿಸಲಾಗದ
ಆತ್ಮ ದೇಹಗಳಲ್ಲಿ
ಪ್ರೀತಿಯ ಹುರುಪು ಹೊಕ್ಕು
ಹೊಸ ಪರಿಮಳವೊಂದು ಹರಡುತ್ತದೆ.

ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.