ಬದುಕಲು
ಬಡವಿ ನಾನು, ಗೊತ್ತು ಮಹಲು ಕಟ್ಟಿಸಲು ಅವನಲ್ಲೂ ಹಣವಿಲ್ಲ
ಸಾಕು ಕುಚಲಕ್ಕಿ ಗಂಜಿ, ನಂಜಲು ಸುಟ್ಟ ಒಣಮೀನು ಬದುಕಲು
ಕನಸಲ್ಲೂ ಹತ್ತಿರ ಸುಳಿಯುವುದಿಲ್ಲ ತಾಜ್ ಮಹಲಿನ ನೆರಳು
ಸಾರಿಸಿದ ಹಟ್ಟಿಗಿಂತ ಬೇಕೆ ಪ್ರೀತಿಯ ಪವನು ಬದುಕಲು
ಹೇಳದೇ ಹೊರಟು ಬಿಡಬೇಡ, ದಾರಿ ಕಾಯುತ್ತೇನೆ
ಮಾತೇನೂ ಬೇಕಿಲ್ಲ ಕಣ್ಣಂಚಿನ ನೋಟ ಸಾಕು ನಾನು ಬದುಕಲು
ವಸ್ತ್ರ ಒಡವೆ ಚಿನ್ನ ಬೆಳ್ಳಿ ಬೇಕಂದು ಕುರುಬುವುದಾದರೂ ಏಕೆ
ಯಾರೂ ಕಾಣದಂತೆ ಕೆನ್ನೆಗಿತ್ತ ಮುತ್ತಿನ ಬೆಲೆ ಕಡಿಮೆಯೇನು ಬದುಕಲು
ತಾಳೆ ಮರದಡಿ ಕುಳಿತು ಮಜ್ಜಿಗೆಯ ಕನಸು ಕಾಣಬೇಡ
ಮದಿರೆಯ ಹೊರತಾಗಿ ಮತ್ತೇನೂ ಬೇಡ ಅವನು ಬದುಕಲು
ಬಿಳಿಯ ಮೋಡವೊಂದು ತೇಲು ಬಂದಿದೆ ನಿನ್ನೂರಿಂದ
ಗರ್ಭದೊಳಗೆ ಮೊಳೆತ ಬಣ್ಣದ ಕನಸನು ಬದುಕಲು
ಬದುಕಿರುವ ನಾಕು ದಿನವಾದರೂ ಜೊತೆಗೆ ಹೆಜ್ಜೆಯಿಡು
ತಂದು ಕೊಡಲು ಕೇಳುವುದಿಲ್ಲ ಜಗ ಬೆಳಗುವ ಭಾನು ಬದುಕಲು
ಕವಯತ್ರಿ ಶ್ರೀದೇವಿ ಕೆರೆಮನೆ ಮೂಲತಃ ಅಂಕೋಲಾದವರು
ಈಗ ಕಾರವಾರದ ಚಿತ್ತಾಕ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ.
ಒಟ್ಟೂ ಹತ್ತು ಪುಸ್ತಕಗಳು ಪ್ರಕಟಗೊಂಡಿವೆ.
ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಚೆಂದ ಇದೆ ಮೇಡಂ
ಥ್ಯಾಂಕ್ಯೂ