ಎಲ್ಲ ಮಧ್ಯಾಹ್ನದಂತಲ್ಲ, ಇಂದು
ಸಂಜೆಗಿದೆ ಶಾಲೆಯಲ್ಲಿ
ಆನ್ಯೂಯಲ್ ಡೆ.
ಖಾಲಿ ನೀಲಿ
ಪ್ಲಾಸ್ಟಿಕ್ ಕುರ್ಚಿಗಳ
ಮಧ್ಯದಲ್ಲೆಲ್ಲೊ ಮೈಕಿನವನು
ಎಲ್ಲಾ ಜೋಡಿಸಿಟ್ಟು
ಸುಖ ನಿದ್ರೆ ಮಾಡುತ್ತಿದ್ದಾನೆ
ಶಾಲೆ ಪಕ್ಕದ ಬೇಕರಿಯಲ್ಲಿ
ಬಿಸಿ ಬಿಸಿ ದಿಲ್ ಪಸಂದ್‌ಗಳು
ಜನ್ಮತಾಳುತ್ತಿವೆ, ಎಗ್ ಪಫ್
ಕಮ್ಮಿಯಾದಿತೆಂದು ಮಾಲೀಕನಿಗೆ ಚಿಂತೆಯಾಗಿದೆ
ಮೊನ್ನೆ ಮೊನ್ನೆಯ ತನಕ
ಹಾಸಿಗೆ ಒದ್ದೆ ಮಾಡುತ್ತಿದ್ದ
ಪುಟ್ಟ ಕಂದವೊಂದು
ನಿಮಗ್ಯಾಕೆ ಕೊಡಬೇಕು ಕಪ್ಪ
ಎಂದು ಉರು ಹೊಡೆಯುತ್ತಿದೆ
ಪದಕ, ಪ್ರಶಸ್ತಿಗಳಿದ್ದ ಕೋಣೆಯ
ಕೀಲಿಕೈ ಕಳೆದುಕೊಂಡಿರುವ ಗುಮಾಸ್ತ
ವಿನಾಕಾರಣ ಹೆಂಡತಿಗೆ ಬೈಯ್ಯುತ್ತಿದ್ದಾನೆ
ನಿರಾಸಕ್ತ ಮಂದಿಗೆ ಭಾಷಣ
ಕೊರೆಯಲು ಅಥಿತಿಯೊಬ್ಬ ಕಾಯುತ್ತಿದ್ದಾನೆ
ಸಂಜೆ ಲಾಭದ ಕನಸು
ಕಾಣುತ್ತಾ ಬಲೂನು ಊದುತ್ತಿರುವ
ಸಣಕಲನ ಬಿಸಿಯುಸಿರಿಗೆ
ಲೋಕವೇ ಕಾದ ಹೆಂಚಿನಂತಾಗಿದೆ
ಎಲ್ಲ ಮಧ್ಯಾಹ್ನದಂತಲ್ಲ, ಇಂದು
ಸಂಜೆಗಿದೆ ಶಾಲೆಯಲ್ಲಿ
ಆನ್ಯೂಯಲ್ ಡೆ.
ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ