ಉಳಿಯಬಲ್ಲೆನೆ?

ಯಾವ ಹವಾಮಾನ ಇಲಾಖೆಯೂ
ತಿಳಿಸಿರಲಿಲ್ಲ
ನಿನ್ನ ನೆನಪಿನ ಪ್ರವಾಹ ಇಂದು
ನನ್ನಲ್ಲಿ ಉಕ್ಕಿ ಬರುತ್ತೆಂದು.

ಮೂರು ದಿನ ಭಾರಿ
ಮಳೆಯ ಸಾಧ್ಯತೆ ಎಂದು
ಬಂದಿತ್ತು ಪ್ರಕಟಣೆ.
ಇದ್ದ ಬಿದ್ದ ಕೆಲಸಗಳನ್ನೆಲ್ಲ ಮುಗಿಸಿ
ಮನೆ ಸೇರಿದೆ.
ಕೊಳೆಯಾಗದ ಬಟ್ಟೆಯೂ
ಒಗೆದುಹಾಕಿ ಒಣಗಿಸಿದೆ.
ಚಟ್ನಿ ಮಾಡಿದರಾಯಿತೆಂದು
ತೆಂಗಿನ ಹೋಳುಗಳನ್ನೂ ಒಣಗಿಸಿದೆ.
ಮೂರು ಪ್ಯಾಕು ಸಿಗರೇಟು,
ನಾಲ್ಕು ಬಾಕ್ಸು ಬೀಯರುಗಳನ್ನೂ
ಮನೆ ಸೇರಿಸಿದೆ.

ಹವಾಮಾನ ಇಲಾಖೆ
ಹೇಳಿದ್ದು ನಿಜವಾಯಿತು.
ಗುಡುಗು, ಸಿಡಿಲು, ಮಿಂಚು,
ಧಾರಾಕಾರ ಮಳೆ.

ಆದರೆ ಒಂದು ಮಾತ್ರ
ರಹಸ್ಯವಾಗಿತ್ತು.
ಗಂಟಲಿಗೆ ಒಂದು ಗಿಲಾಸು
ಬೀಯರು ಇಳಿಯುತ್ತಲೇ
ನನ್ನೊಳಗೆ ಅಲ್ಲೋಲ ಕಲ್ಲೋಲ!
ಏನಿದು ಅಸಂಬದ್ಧ ಎಂದು
ನೋಡುತ್ತಲೇ ತಿಳಿದಿದ್ದು
ಓ!! ಪ್ರವಾಹವೇ ಉಕ್ಕುತ್ತಿದೆಯೆಂದು!!

ಹೇಗೆ ಕಾಪಾಡಿಕೊಳ್ಳಲಿ??

ಹೊರಪ್ರವಾಹದಲ್ಲೇ ಉಳಿಯುವುದು
ಕಷ್ಟ,
ಇನ್ನು ಒಳಗೇ ಹುಟ್ಟಿರುವ
ನಿನ್ನ ನೆನಪಿನ ಪ್ರವಾಹದಲ್ಲಿ
ಉಳಿಯಬಲ್ಲೆನೆ??

ಶ್ರೀಮಂತ್‌ ಯನಗುಂಟಿ ಇಂಗ್ಲೀಷ್‌ ಪ್ರಾಧ್ಯಾಪಕರು
ಕಥೆ, ಕವಿತೆ ಮತ್ತು ಕಾದಂಬರಿಗಳನ್ನು ಬರೆಯುವುದರಲ್ಲಿ ಆಸಕ್ತಿ
‘ಮುಕ್ತ’ ಇವರ ಪ್ರಕಟಿತ ಕಾದಂಬರಿ