ಹೌದು, ಎಲ್ಲಾ ಋತುಗಳೂ ಬದಲಾಗಿವೆ.
ಶಿಶಿರ ಕೂಡಾ ಇದಕ್ಕೆ ಹೊರತಲ್ಲ
ನನ್ನಂತೆಯೇ, ನಿನ್ನಂತೆಯೇ, ನಮ್ಮೆಲ್ಲರಂತೆಯೇ
ಈ ಬಾರಿಯೂ ಶಿಶಿರ ಋತು ಬಹಳ ಬದಲಾಗಿದೆ.
ಮೈ ಕೊರೆವ ಚಳಿಯ ಜೊತೆಗೆ
ಕಾಡುತ್ತಿದ್ದ ಕನವರಿಕೆಗಳಿಲ್ಲ
ಮನೆ-ಮನಗಳನ್ನು ಬೆಚ್ಚನೆ ಇರಿಸಿಕೊಳ್ಳಲು
ಯಾವ ಭಾವ-ಬಂಧನಗಳ ಹಂಗುಗಳಿಲ್ಲ
ವಸಂತನ ಆಗಮನಕ್ಕೆ ಕಾಯುವ ತುರ್ತುಗಳು ಈಗಿಲ್ಲ …
ಹೌದು.. ಶಿಶಿರ ಋತು ಬದಲಾಗಿದೆ.
ನಮ್ಮೆಲ್ಲರಂತೆಯೇ
ಹಳೆಯ ಋತುಮಾನಗಳ ನೆನಪುಗಳ ಬಿಟ್ಟರೆ,
ಈಗ ಎಲ್ಲವೂ ಹೇಗಿದ್ದರೂ ಒಂದೇ,
ಋತುಗಳು ಬದಲಾಗುವುದನ್ನು
ತೋರಿಸುವುದು ದಿನಗಳಷ್ಟೇ ..
ಕಾಯುವಿಕೆ
ನಿರಾಸೆ
ಮತ್ತೆ ಹೊಸ ಭರವಸೆ
ಮತ್ತೆ ಕ್ಯಾಲೆಂಡರ್ ತಿರುವುತ್ತಾ
ಕಾಯುವಿಕೆ
ಹೊಸ ಋತು
ಹೊಸತು ತರಬಹುದು ಎಂಬ ನಿರೀಕ್ಷೆಗಳ ಭಾರದೊಂದಿಗೆ ಪಯಣ
ಗಮ್ಯ ಸ್ಥಾನ ತಲುಪುವವರೆಗೆ ಇದೆ ಧ್ಯಾನ
ಇನ್ನು ನಮ್ಮ ಪಾಲಿನ ಕೆಲಸವಿಷ್ಟೇ ..
ವರ್ಷದ ಲೆಕ್ಕಾಚಾರ ಮುಗಿಸುವ ಧಾವಂತ..
ಶಿಶಿರದ ಆಗಮನದೊಂದಿಗೆ
ಲೆಕ್ಕಾಚಾರಗಳೂ ಹಳೆಯದೇ
ಹಾಳೆ ಮಾತ್ರ ಹೊಸದು
ಯಾವುದನ್ನೋ ಕೂಡಿಸಿ ಇನ್ನಾವುದನ್ನೋ ಕಳೆದು
ಎಲ್ಲವೂ ಸರಿಯಾಗಿದೆ ಎಂದು ತೋರಿಸಲೇ ಬೇಕು
ಇನ್ನೇನು ಕೆಲವೇ ದಿನ
ವಸಂತ ಆಗಮಿಸುವ ಸಂಭ್ರಮ
ಶಿಶಿರನಿಗೆ ಮುಡಿಪಿಟ್ಟ
ಶಬ್ದಾಡಂಬರಗಳನ್ನು
ಜತನವಾಗಿ ಕಾಪಿಟ್ಟಿದ್ದೇನೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ