ಅರವಳಿಕೆ
ದೊಡ್ಡದೊಂದು ತುದಿಮೊದಲಿಲ್ಲದ
ವೃತ್ತಾಕಾರದ ಕೊಳವೆ
ಸಿಲುಕಿರುವುದು ದೇಹವೋ ಆತ್ಮವೋ
ಸ್ಥಿರವೋ ಚಲನೆಯೋ
ಪತ್ತೆ ಹಚ್ಚಲಾಗದು.
ನಿರುದ್ದೇಶ, ನಿರ್ಮಮಕಾರ
ನಿರಾತಂಕದ ನಿರ್ವಾತ.
ನೀರೋ, ರಕ್ತವೋ, ಮತ್ತಾವ ದ್ರವವೋ
ತೇಲುತ್ತಿದ್ದೆನೋ, ಮುಳುಗುತ್ತಿದ್ದೆನೋ
ಹಾರುತ್ತಿದ್ದೆನೋ ಖಾತ್ರಿಯಿಲ್ಲ.
ಕೊನೆಯಿಲ್ಲದ ಕೊಳವೆಯೊಳಗೆ
ತಿಳಿ ಬೆಳ್ಳನೆಯ ಬೆಳಕು
ಭಾರವನ್ನೋ ನಿರ್ಭಾರವನ್ನೋ ತಳ್ಳಿ ತಳ್ಳಿ
ಎಲ್ಲಿಗೋ ರವಾನಿಸುತ್ತಿರುವಂತೆ,
ಕನ್ವೇಯರ್ ಬೆಲ್ಟಿನಲ್ಲಿ
ಸುತ್ತುತ್ತಲೇ ಇರುವ ಬೇವರ್ಸಿ ಲಗೇಜು
ಸುಖಾಸುಮ್ಮನೆ ಕಾಣಿಸಿತ್ತು.
ಸುತ್ತುತ್ತಿರುವುದು ಬ್ಯಾಗೋ
ಬ್ಯಾಗಿನೊಳಗೋ ಹೊರಗೋ ಇನ್ನೆಲ್ಲೋ
ಇರಬಹುದಾದ, ಇಲ್ಲದಿರಲೂಬಹುದಾದ
ನಾನೆಂಬ ದೇಹಾತ್ಮವೆರಡೂ
ಆಗಿರದ ಮತ್ತೇನೋ…
ಅಥವಾ ನನ್ನೊಳಗೋ
ಹ ಗು ರ ಹ ಗು ರ ಹಗುರಾಗಿ
ಅಂಗಾಂಗಗಳ ಹಂಗಿಲ್ಲದೇ ಅದೇನೋ
ಅಮೂರ್ತವಾದುದೊಂದು ನಿರಮ್ಮಳವಾದ
ಒಂದರೆ ಕ್ಷಣವೋ, ಅನಾದಿಯಿಂದಲೋ
ಇಲ್ಲೇ ಕೊಳವೆಯೊಳಗೆ
ಕೊಳವೆಯಾಗಿಯೋ, ಇನ್ನೇನಾಗಿಯೋ…
***
ಶಾಂತಿ ಶಾಂತಿ ಶಾಂತಿಃ
ಶಿಶುವಿಹಾರದಲ್ಲಿ ಸಹನಾ ವವತು
ಎಂದು ಜೋರಾಗಿ ಹಾಡುತ್ತಾ ಬೆಳೆದ
ಮಕ್ಕಳಿಗೆ ಕೊನೆ ಸಾಲು ಮರೆತಿರಬೇಕು
ಅಥವಾ ಮರೆತಂತೆ ನಟಿಸುತ್ತಿದ್ದಾರೆ
ನೀರು ಕುಡಿಯಲೂ ನೆನಪಾಗದ
ದಾಹ ದಾಹ ದಾಹ…
ಅಡಿಗೆ ಆಟ, ಗೊಂಬೆಯಾಟ
ಆಡುತ್ತಿದ್ದ ಮಕ್ಕಳು ಹೊಸ ಆಟ
ಕಲಿತಿದ್ದಾರೆ, ಧಾಳಿಯ ಆಟ, ಸಾಯುವ ಆಟ
ಗಂಟು ಮೂಟೆ ಕಟ್ಟಿ ಗುಳೆ ಹೋಗುವ ಆಟ
ರಾತ್ರಿಯಾದರೂ ಮಕ್ಕಳಿಗೆ ನಿದ್ದೆ ಹತ್ತುತ್ತಿಲ್ಲ
ಬಾಂಬುಗಳ ಸಪ್ಪಳದಲ್ಲಿ
ಯಾವ ಲಾಲಿ ಹಾಡು ಕೇಳುವುದಿಲ್ಲ
ಮಗುವಿನ ರಚ್ಚೆಯೂ…
ಆಡಿ ಬಾ ಎನ ಕಂದ ಅಂಗಾಲ ತೊಳೆದೇನ
ಎನುವ ಅವ್ವ ಈಗಷ್ಟೇ ತಣ್ಣಗಾಗಿದ್ದಾಳೆ
ರಕ್ತ ಸಿಕ್ತ ಶೂಗಳ ತೊಟ್ಟ ಮಕ್ಕಳು ಅಳುವುದಕ್ಕೂ
ಬೆದರಿ ಕಣ್ಣಗಲಿಸಿ ಅತ್ತಿತ್ತ ನೋಡುತ್ತಿದ್ದಾರೆ,
ಮೈ ಫೇವರಿಟ್ ಕಲರ್ ಇಸ್ ರೆಡ್
ಎಂದು ಮುದ್ದಾಗಿ ಉಲಿಯುತ್ತಿದ್ದ
ಗುಲಾಬಿ ಕೆನ್ನೆಗಳ, ಹಾಲುಗಲ್ಲದ
ಪುಟ್ಟ ಕಂದನ ಕಂಬನಿಯೂ ಕೆಂಪು ಕೆಂಪು
ಯಹೋವಾ ಅಲ್ಲಾ ಏಸು ಎಲ್ಲರೂ
ಬಂಧನದಲ್ಲಿದ್ದಾರೆ, ಯಾರೊಬ್ಬರಿಗೂ ತಲುಪಿಲ್ಲ
ಆ ಮೂರೂವರೆ ಸಾವಿರ ಕೂಸುಗಳ ಕೂಗು.
ಹತ್ತು ನಿಮಿಷಕ್ಕೊಂದು ಮಗು ಸಾಯುತ್ತಿದೆ
ಇದು ಈಗಿನ ನಿಖರವಾದ ಅಂಕಿ ಅಂಶ
ದೂರು ಸಲ್ಲಿಸುವ ವಿಳಾಸವೂ ಈಗೊಂದು
ಅವಶೇಷ ಮಾತ್ರ….
ಅಲ್ಪ ವಿರಾಮ, ಅರ್ಧ ವಿರಾಮ
ಆಶ್ಚರ್ಯ ಸೂಚಕ, ಪ್ರಶ್ನಾರ್ಥಕ,
ಯಾವ ಚಿಹ್ನೆಯನ್ನೂ ಕವಿತೆ ಒಪ್ಪುತ್ತಿಲ್ಲ,
ಸರ್ವೇ ಭವಂತು ಸುಖಿನಃ
ದಯವೇ ಧರ್ಮದ ಮೂಲವಯ್ಯಾ
ಶಾಂತಿ ಶಾಂತಿ ಶಾಂತಿಃ
ಅಮೆನ್
ಶೃತಿ ಬಿ.ಆರ್. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು.
ಪ್ರಸ್ತುತ ಬೆಂಗಳೂರಿನಲ್ಲಿ ಕೆ.ಎ.ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ‘ಜಿರೋ ಬ್ಯಾಲೆನ್ಸ್’ ಚೊಚ್ಚಲ ಕವನ ಸಂಕಲನಕ್ಕೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ದೊರೆತಿದೆ
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ