ಇಲ್ಲಿ ನಾನು-ನೀನು ಅಂದರೆ ಸಮುದಾಯ ಉಳಿಯಬೇಕು, ಅವರಿಂದ ಅಂದರೆ ಹೊರಗಿನವರಿಂದ ನನ್ನನ್ನು ಕಾಪಾಡು ಎಂಬ ಬೇಡಿಕೆ ಇದೆ. ನಿನ್ನಿಂದ ಅಂದರೆ ದೌರ್ಜನ್ಯದ ಮೂಲವಾದ ಕುಟುಂಬ ಎಂಬ ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಯದಿಂದ ತನ್ನನ್ನು ಕಾಪಾಡಿಕೊಳ್ಳಬೇಕು ಎನ್ನುವ ಆಗ್ರಹವಿಲ್ಲ. ಇದು ನನ್ನ ಗ್ರಹಿಕೆಗೆ ದಕ್ಕುವ ರೀತಿಯಲ್ಲಿ ಕಾಡನ್ನು ನಂಬಿದ, ಕೃಷಿಯ ಮೇಲೆಯೇ ಬದುಕುತ್ತಿರುವ ಸಮುದಾಯಕ್ಕೆ ಕುಟುಂಬ ಹೇಗಾದರೂ ಬದುಕಿ ಉಳಿಯಬೇಕು ಎನ್ನುವ ನೆಲೆಯಿಂದ ಹೊಮ್ಮಿದ ಒಂದು ಸತ್ಯ. ಕೃಷಿ ಕೆಲಸಕ್ಕೆಂದೇ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಕೃಷಿಕ ಕುಟುಂಬಕ್ಕೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಉಪದೇಶ ಮಾಡುವುದು ಅಧಿಕಪ್ರಸಂಗತನ ತಾನೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನೆಂಟನೆಯ ಬರಹ
ಈ ಬರಹವನ್ನ ಮೂರು ಭಾಗಗಳಾಗಿ ಮಾಡಿಕೊಂಡಿದ್ದೇನೆ. ಮೊದಲನೆಯದು ಸ್ತ್ರೀ ಸಂವೇದಿ ಕಾವ್ಯ, ಅನುವಾದ, ಅದನ್ನ ಅರ್ಥ ಮಾಡಿಕೊಳ್ಳುವ ರೀತಿಯ ಬಗ್ಗೆ ಕೆಲವು ಅಂಶಗಳನ್ನ ಪ್ರಸ್ತಾಪಿಸ್ತೀನಿ.
ಎರಡನೆಯ ಭಾಗದಲ್ಲಿ ನಿರ್ಮಲಾ ಅವರ ಕಾವ್ಯಕ್ಕೆ ಯಾವ ರೀತಿಯ ಚೌಕಟ್ಟನ್ನ ಹಾಕಿಕೊಂಡರೆ ಅದು ನಮ್ಮ ಗ್ರಹಿಕೆಗೆ ಹೆಚ್ಚು ದಕ್ಕಬಲ್ಲದು ಅನ್ನುವುದರ ಬಗ್ಗೆ. ಅದನ್ನ ಚೌಕಟ್ಟು ಅನ್ನಬಹುದು, ಚಿತ್ತಾರ ಅಂತಲೂ ಕರೀಬಹುದು. ಓದಿದ್ದನ್ನ ಗ್ರಹಿಸಿಕೊಳ್ಳೋದಕ್ಕೆ ಆ ಚೌಕಟ್ಟು ತಾತ್ಕಾಲಿಕವಾಗಿಯಾದರೂ ಬೇಕಾಗಿರುತ್ತೆ ಅಂತ ನನ್ನ ಭಾವನೆ.
ಇನ್ನು ಮೂರನೆಯ ಭಾಗದಲ್ಲಿ ನಿರ್ಮಲಾ ಅವರ ಒಂದು ಕವನ ‘ಢೇಪಚಾನ ಅಪ್ಪ’ ಅನ್ನೋದನ್ನ ಒಟ್ಟಿಗೆ ಓದ್ತೀವಿ. ಅದು ಬರಿಯ ಓದು ಆಗಿರುತ್ತೆ. ವಿವರಣೆಯ ಅಗತ್ಯವಿರೋದಿಲ್ಲ.
ಭಾಗ ಒಂದು: ಯಾವ ರೀತಿಯ ಓದು? ಯಾಕೆ?
ಕಾವ್ಯ ಎಂದರೇನು? ಬಹುಶಃ ಕೇಳಲು ಹೋಗಬಾರದು. ‘ಸಿಹಿ’ ಎಂದರೇನು ಎಂದು ಯಾರಾದರೂ ಕೇಳಿದರೆ, ನಾವು ಕೊಡಬಹುದಾದ ಜಾಣ ಉತ್ತರ, ‘ತಿಂದು ನೋಡಿ!’ ಹಾಗೆಯೇ ಕಾವ್ಯವೂ! ‘ಓದಿ ನೋಡಿ! ಕೇಳಿ ನೋಡಿ! ಸವಿದು ನೋಡಿ! ಅನುಭವಿಸಿ ನೋಡಿ!’
ಆದರೆ ಅಷ್ಟು ಸುಲಭ ಅಲ್ಲ ಅನ್ನುವುದರ ಅರಿವೂ ನನಗಿದೆ. ಯಾಕೆಂದ್ರೆ ಕಾವ್ಯವನ್ನು ಬರೆಯುವುದು ಮತ್ತು ಓದುವುದು ಒಂದು ಬೌದ್ಧಿಕ ಪ್ರಕ್ರಿಯೆ ಸಹ ಆಗಿರುವುದರಿಂದ ಕಾವ್ಯಕ್ಕೆ ಒಂದು ಡೆಫಿನಿಷನ್ ಇರುತ್ತದೆ. ಆ ಡೆಫಿನಿಷನ್ ಒಂದು ಸೂಚನೆಯಾಗಿರುತ್ತದೆ ಹೊರತು ಇದೇ ಕಾವ್ಯ, ಇದು ಅಲ್ಲ ಎಂದೇನೂ ಹೇಳಲು ಹೋಗುವುದಿಲ್ಲ. ಅಕಸ್ಮಾತ್ ಹೇಳಿದರೆ ಅದು ಅಧಿಕೃತವಾಗಿ ‘ವಿಮರ್ಶೆ’ ಅಂತ ಕರೆಸಿಕೊಳ್ಳುತ್ತೋ ಏನೋ!
ಇರಲಿ, ಹಾಗೆ ನೋಡಿದರೆ ವಿಮರ್ಶೆ ತಳಮಟ್ಟದಲ್ಲಿ ಒಂದು ಸಹೃದಯ ಓದು ಆಗಿರುವುದು ಅಗತ್ಯ. ವಿಮರ್ಶಕರು ಈ ಕಾವ್ಯವನ್ನು ಹೀಗೆ ಅರ್ಥ ಮಾಡಿಕೊಳ್ಳಬಹುದು ಎಂದು ಸೂಚಿಸುತ್ತಿರಬೇಕೆ ಹೊರತು ತೀರ್ಪು ಕೊಡುವ ನ್ಯಾಯಾಧೀಶೆ ಆಗಬಾರದು. ಕಟುವಾದ ವಿಮರ್ಶೆಯನ್ನು ಅರಗಿಸಿಕೊಳ್ಳಲಾಗದ ಇಂಗ್ಲಿಷ್ ರೋಮ್ಯಾಂಟಿಕ್ ಕವಿ ಜಾನ್ ಕೀಟ್ಸ್ ತನ್ನ ಇಪ್ಪತ್ನಾಲ್ಕನೆಯ ವಯಸ್ಸಿನಲ್ಲೇ ಸತ್ತ. ಹೌದೆ? ವಿಮರ್ಶೆ ಕಾರಣವೇ? ಇನ್ನೊಬ್ಬ ಕವಿ ಶೆಲ್ಲಿ ಪ್ರಕಾರ ವಿಮರ್ಶಕರೇ ಕಾರಣ. ಇರಬಹುದು. ಆದೂ ಒಂದು ಕಾರಣವಾಗಿದ್ದಿರಬಹುದು. ಆದರೆ ವೈದ್ಯಕೀಯವಾಗಿ ಕೀಟ್ಸ್ ಸತ್ತಿದ್ದು ಕ್ಷಯ ರೋಗದಿಂದ. ಕಟು ವಿಮರ್ಶೆ ಸಾವಿನ ವೇಗವನ್ನ ಪ್ರಭಾವಿಸಿದ್ದಿರಬಹುದು.
ಇರಲಿ, ಕಾವ್ಯ ಎಂದರೇನು ಎಂದು ಯಾರಾದರೂ ಒಂದೇ ಒಂದು ಅಂಕದ ಪ್ರಶ್ನೆ ಕೇಳಿದರೆ ಬಹುಶಃ ‘ಒಂದು ದಟ್ಟ ಅನುಭವವನ್ನ ಭಾಷೆಯ ಮೂಲಕ ಸಾಧಾರಣೀಕರಣಗೊಳಿಸಿ ಆದಷ್ಟೂ ಕಡಿಮೆ ಪದಗಳಲ್ಲಿ ಸಹೃದಯ ಓದುಗರೊಂದಿಗೆ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನ’ ಅಂತ ಹೇಳಬಹುದು.
ಅಂತಹ ಕಾವ್ಯವನ್ನ ಅರ್ಥ ಮಾಡಿಕೊಳ್ಳೋದಿಕ್ಕೆ ಹಲವಾರು ರೀತಿಯ ವಿಮರ್ಶೆಗಳು ಇರ್ತಾವೆ. ನಾನು ನಿರ್ಮಲ ಫುತುಲ್ ಎಂಬ ಜಾರಖಂಡಿನ ಕವಿಯ ‘ಯಾವ ವಿಳಾಸವೂ ಅವಳದಲ್ಲ’ ಎಂಬ ಕವನ ಸಂಕಲನದಿಂದ ಆಯ್ದ ‘ಢೇಪಚಾನ ಅಪ್ಪ’ ಎಂಬ ಪದ್ಯವನ್ನ ಎರಡು ನೆಲೆಗಳಿಂದ ಅರ್ಥ ಮಾಡಿಕೊಳ್ಳುತ್ತಾ ಒಂದು ಪ್ರಾಯೋಗಿಕ ವಿಮರ್ಶೆ ಮಾಡೋದಕ್ಕೆ ಪ್ರಯತ್ನಿಸ್ತೀನಿ. ಒಂದು ‘ಸ್ತ್ರೀ ಸಂವೇದಿ’ ನೆಲೆ ಮತ್ತು ಇನ್ನೊಂದು ‘ಚಾರಿತ್ರಿಕ’ ನೆಲೆ. ಅಕಾಡೆಮಿಕ್ ಆಗಿ ಬೇರೆ ನೆಲೆಗಳಿಂದ ಮಾಡುವ ವಿಮರ್ಶೆಗಳು ಇದಾವೆ. ಉದಾಹರಣೆಗೆ ಸಮಾಜಶಾಸ್ತ್ರೀಯ ನೆಲೆ; ಮನೋವಿಜ್ಞಾನಿಕ ನೆಲೆ ಇತ್ಯಾದಿ.
ಸ್ತ್ರೀವಾದಿ ಅಥವಾ ಸ್ತ್ರೀ ಸಂವೇದಿ ಅಂದ ತಕ್ಷಣ ‘ಓ, ಆ ತರದ ವಿಮರ್ಶೆ ಎಲ್ಲಾ ನಮ್ಮದಲ್ಲ, ಪಶ್ಚಿಮದಿಂದ ಆಮದಾಗಿದ್ದು,’ ಎಂದು ಹಲವಾರು ವಿಮರ್ಶಕರೂ ಮೂಗೆಳೆಯುವುದು ತುಂಬಾ ಸಾಮಾನ್ಯ. ಹಾಗೆ ನೋಡಿದರೆ ಆಧುನಿಕ ಸಾಹಿತ್ಯ ವಿಮರ್ಶೆ ಅನ್ನೋದೆ ಪಶ್ಚಿಮದಿಂದ ಬಂದದ್ದು ಅನ್ನೋದನ್ನ ಯಾಕೆ ಮರೀತೀವಿ?
ಯಾವುದು ಪಶ್ಚಿಮದಲ್ಲ? ನಮ್ಮ ಶಿಕ್ಷಣ, ನಮ್ಮ ಆಡಳಿತ, ನಮ್ಮ ಮಿಲಿಟರಿ, ನಮ್ಮ ಪಾರ್ಲಿಮೆಂಟು ಎಲ್ಲವೂ ಅಲ್ಲಿಯದೇ ತಾನೇ? ವಸಾಹತುಶಾಹಿ ಅನುಭವ ನಿದ್ದೆಯಲ್ಲಿ ಬಿದ್ದ ಕನಸನ್ನು ಎದ್ದ ಮೇಲೆ ಮರೆಯುವಷ್ಟು ಸುಲಭವಾ?
ಇರಲಿ, ಮಹಿಳೆಯರಿಗೆ ಮೂವತ್ಮೂರು ಪರ್ಸೆಂಟು ಮೀಸಲಾತಿ ಕಾಯಿದೆ ಪಾರ್ಲಿಮೆಂಟಿನಲ್ಲಿ ಚರ್ಚೆಗೆ ಬರುತ್ತೆ ಅಂದ ತಕ್ಷಣವೇ ಎಲ್ಲ ಪಕ್ಷಗಳೂ ತಮ್ಮ ಪಕ್ಷಭೇದಗಳನ್ನು ಮರೆತು ಒಂದಲ್ಲ ಒಂದು ನೆಪದಿಂದ ಅದು ಜಾರಿಯಾಗದ ಹಾಗೆ ನೋಡಿಕೊಳ್ಳುವ ಸನ್ನಿವೇಶದಲ್ಲಿ ನಾವು ಇದ್ದೀವಿ. ಆ ಅಭದ್ರತಾ ಭಾವನೆಯ ಮೂಲ ಎಲ್ಲಿದೆ ಅಂತ ಅರ್ಥ ಮಾಡಿಕೊಳ್ಳೋದು ಕಷ್ಟ ಏನೂ ಅಲ್ಲ ಬಿಡಿ.
ಹಾಗಿದ್ರೆ ಸ್ತ್ರೀಸಂವೇದಿ ನೆಲೆ ಎಂದರೇನು? ಸ್ತ್ರೀವಾದ ಎಂದರೆ ಒಂದು ತತ್ವ. ಅದು ಪುರುಷರನ್ನಾಗಲಿ ಕುಟುಂಬವನ್ನಾಗಲಿ ದ್ವೇಷಿಸುವುದಿಲ್ಲ. ಅದು ಜೀವಪರತೆಯನ್ನು ಮತ್ತು ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುತ್ತದೆ. ಆದರೆ ಮಾನವ ಹಕ್ಕುಗಳ ಘೋರ ಉಲ್ಲಂಘನೆ ಹೆಣ್ಣಿನ ವಿಷಯದಲ್ಲಿ ಅತ್ಯಂತಿಕವಾಗಿ ನಡೆಯುತ್ತಿದ್ದರಿಂದ ಹೆಣ್ಣಿನ ಹಕ್ಕುಗಳ ಹೋರಾಟದಿಂದ ಪ್ರಾರಂಭವಾಗಿ ಈಗ ಅದು ಜಾತಿ, ಧರ್ಮ, ಅಬಲತೆ, ವಿಕಲತೆ, ಬಹುಲಿಂಗೀಯತೆ ಇತ್ಯಾದಿ ಹಲವಾರು ನೆಲೆಗಳಲ್ಲಿ ತನ್ನನ್ನು ಗುರುತಿಸಿಕೊಂಡಿದೆ.
ಹಾಗೆಯೇ ಇನ್ನೊಂದು ಅಂಕಿಅಂಶವನ್ನು ಪರಿಗಣಿಸುವುದು ಒಳ್ಳೆಯದು. ಎಲ್ಲ ರೀತಿಯ ಕೆಲಸಗಳೂ ಸೇರಿದಂತೆ ಜಗತ್ತಿನ ಮೂರರಲ್ಲಿ ಎರಡರಷ್ಟು (ಅಂದರೆ ಶೇಕಡಾ 66) ಭಾಗ ಕೆಲಸವನ್ನು ನಿಭಾಯಿಸುವುದು ಹೆಣ್ಣು. ಆದರೆ ಜಗತ್ತಿನ ಕೇವಲ ಶೇಕಡಾ ಒಂದರಷ್ಟು ಆಸ್ತಿ, ಅಧಿಕಾರ ಮಾತ್ರ ಅವಳ ಕೈಯಲ್ಲಿದೆ. 66 ಮತ್ತು 1 ಕ್ಕೆ ಎಲ್ಲಿಗೆಲ್ಲಿಯ ತಾಳೆ?
ನನ್ನ ವಿದ್ಯಾರ್ಥಿನಿಯೊಬ್ಬಳು ಒಮ್ಮೆ ‘ನಮ್ಮಮ್ಮ ಕೆಲಸ ಮಾಡಲ್ಲ, ಮನೆಲಿದಾರೆ,’ ಎಂದು ಹಾಯಾಗಿ ಹೇಳಿದಾಗ, ‘ಮನೆಯಲ್ಲಿ ಸುಮ್ಮನೆ ಕೂತಿರುತ್ತಾರಾ?’ ಎಂದು ಕೇಳಬೇಕಾಯಿತು. ಹೆಣ್ಣಿನ ಕೆಲಸವನ್ನು ಕೌಟುಂಬಿಕ ಪ್ರೀತಿಯ ಹೆಸರಿನಲ್ಲಿ ವೇತನಕ್ಕೆ ಅನರ್ಹಗೊಳಿಸಿರುವುದು ಒಂದು ಸಾಮಾಜಿಕ ಹುನ್ನಾರ. ಅದರಿಂದ ಲಾಭ ಯಾರಿಗೆ? ಸರಕಾರಗಳಿಗೆ ಮತ್ತು ಕಾರ್ಪೊರೇಟುಗಳಿಗೆ ಎನ್ನುತ್ತಾರೆ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್. ಮನೆಕೆಲಸ, ಲಾಲನೆ ಪಾಲನೆ, ಅಡಿಗೆ, ಇತ್ಯಾದಿಗಳಿಗೆ ವೇತನವಿದ್ದಿದ್ದರೆ ಗಂಡಸಿನ ಸಂಬಳವನ್ನು ಹೆಚ್ಚಿನ ಸ್ತರದಲ್ಲಿ ನಿಗದಿಗೊಳಿಸಬೇಕಲ್ಲ?
ಹೆಂಗಸರಿಗೆ ವ್ಯವಸ್ಥಿತವಾಗಿ ಯಾವ ಸವಲತ್ತನ್ನು ಕೊಟ್ಟರೂ ಲೇವಡಿ ಮಾಡುವುದು, ಹೊಟ್ಟೆ ಉರಿದುಕೊಳ್ಳುವುದು ಪಿತೃಶಾಹಿಯ ಶತಮಾನಗಳಷ್ಟು ಒಂದು ಹಳಸಲು ಪ್ರವೃತ್ತಿ. ಅದು ಉಚಿತ ಬಸ್ ಪ್ರಯಾಣವೋ, ಅಕ್ಕಿ ಭಾಗ್ಯವೋ ತಾಳಿ ಭಾಗ್ಯವೋ ಅಥವಾ ಇನ್ನೊಂದೋ ಮತ್ತೊಂದೋ ಇರಬಹುದು.
ಮೊನ್ನೆ ಒಬ್ಬ ಹೀಗೆಯೇ ಹೆಂಗಸರಿಗೆ ಉಚಿತ ಪ್ರಯಾಣದ ಬಗ್ಗೆ ಹೊಟ್ಟೆ ಉರಿದುಕೊಳ್ಳುತ್ತಿದ್ದಾಗ, ‘ಯೋ, ನಿನಗೆ ದುಡ್ಡು ಉಳಿಯಿತಲ್ಲಯ್ಯಾ?’ ಎಂದು ದಬಾಯಿಸಿದೆ. ‘ಅದೇನೋ ಸರಿ ಕಣೀ, ಆದ್ರೆ ತಿರುಗಕ್ಕೆ ಹೊಂಟುಬಿಟ್ಟಳಲ್ಲ ಸುಬ್ಬಿ!’ ಎಂದು ವಿಷ ಕಕ್ಕಿದ. ಆಗಾಗ ಮಗಳ ಮನೆಗೂ ಅಮ್ಮನ ಮನೆಗೂ ಹೋಗುತ್ತಾಳಂತೆ. ಹೆಂಗಸರ ನಡುವೆ ಅರ್ಥಪೂರ್ಣ ಬಾಂಧವ್ಯ ಏರ್ಪಡದಂತೆ ಕೌಟುಂಬಿಕ ವ್ಯವಸ್ಥೆ ನೋಡಿಕೊಳ್ಳುತ್ತದೆ. ಹೆಣ್ಣು ಮದುವೆಯಾದ ಮೇಲೆ ಯಾಕೆ ಅಷ್ಟೊಂದು ತನ್ನ ಸ್ನೇಹಿತೆಯರನ್ನು ಹಚ್ಚಿಕೊಳ್ಳಬೇಕು ಎಂದು ಅತ್ತೆಯೊಬ್ಬಳು ಪ್ರಲಾಪಿಸುತ್ತಿದ್ದಾಗ ‘ನಿಮ್ಮ ಮಗ ತನ್ನ ಸ್ನೇಹಿತರನ್ನ ಬಿಟ್ಟಿದಾನ?’ ಎಂದು ಕೇಳಿದೆ. ಸುಮ್ಮನೆ ದುರುಗುಟ್ಟಿ ನೋಡಿದಳಾ ತಾಯಿ!
ಇಷ್ಟು ದೀರ್ಘವಾದ ಪ್ರಸ್ತಾವನೆಗೆ ಕಾರಣ ಮುಂಚೆಯೇ ನಾನು ಹೇಳಿದ ಹಾಗೆ ನಿರ್ಮಲಾ ಫುತುಲ್ ಅವರ ಕವನ ಸಂಕಲನದ ‘ಯಾವ ವಿಳಾಸವೂ ಅವಳದಲ್ಲ’ ಎಂಬ ಶೀರ್ಷಿಕೆಯೇ ಒಂದು ಸ್ತ್ರೀಸಂವೇದಿ ವಿಮರ್ಶೆಯನ್ನ ಬೇಡುತ್ತೆ. ಜಗತ್ತಿನ ಶೇಕಡಾ ಅರವತ್ತಾರು ಶ್ರಮವನ್ನು ನಿಭಾಯಿಸಿ ಕೇವಲ ಶೇಕಡಾ ಒಂದರಷ್ಟು ಅಧಿಕಾರವನ್ನು ಹೊಂದಿರುವ ಹೆಣ್ಣಿಗೆ ಯಾವ ವಿಳಾಸ ತಾನೇ ಇರೋದಕ್ಕೆ ಸಾಧ್ಯ?
ಎರಡನೆಯದಾಗಿ ಚಾರಿತ್ರಿಕ ನೆಲೆಗಟ್ಟಿನಲ್ಲಿ ನಿಂತು ನೋಡಿದಾಗ ನಿರ್ಮಲಾ ವರ್ತಮಾನದಲ್ಲಿ ಬರೆಯುತ್ತಿರುವ ಒಬ್ಬ ಆದಿವಾಸಿ ಕವಿ. ಆಕೆ ಬರಿತಾ ಇರೋದು ಸರ್ವಕಾಲಕ್ಕೂ ಸಲ್ಲುವ ಸತ್ಯಗಳ ಬಗ್ಗೆ ಅಲ್ಲ. ಅದು ಆದಿವಾಸಿಯಾಗಿ ತಾನು, ತನ್ನ ಕುಟುಂಬ, ಮತ್ತು ತನ್ನ ಸಮುದಾಯ ಎದುರಿಸುತ್ತಿರುವ ಬದುಕಿನ ಸಂಕಷ್ಟಗಳ ಬಗ್ಗೆ. ಸ್ವಾತಂತ್ರ್ಯ ಹೋರಾಟದ ಮೂಲಕ ರೂಪುಗೊಂಡ ಒಂದು ರಾಷ್ಟ್ರ ಎಂಬ ಮನೆಯೊಳಗೆ ತನ್ನ ಸಮುದಾಯ ಪರಕೀಯವಾಗಿರುವುದರ ಬಗ್ಗೆ. ಕುಟುಂಬ ಎಂಬ ವ್ಯವಸ್ಥೆಯಲ್ಲೂ ಸಹ ಹೆಣ್ಣು ಇದ್ದೂ ಇಲ್ಲದಂತಾಗಿರುವ ಅನಾಥ ಸ್ಥಿತಿಯ ಬಗ್ಗೆ.
ಅಂದರೆ ವರ್ತಮಾನೀಯತೆ ಅದರ ಪ್ರಧಾನ ನೆಲೆ.
ಅನು–ವಾದದಲ್ಲಿ ‘ಯಾವ ವಿಳಾಸವೂ ಅವಳದಲ್ಲ’
ನಿರ್ಮಲಾರನ್ನ ರೇಣುಕಾ ನಿಡುಗುಂದಿ ಅನು-ವಾದ ಮಾಡಿದಾರೆ. ಅನು-ವಾದ, ಅಂದರೆ ಅಕ್ಷರಶಃ ನಂತರದ ಮಾತು. ಹಾಗೆಯೇ ಅದಕ್ಕೆ ಇನ್ನೊಂದು ಪದವೂ ಇದೆ: ಭಾಷಾಂತರ. ಒಂದು ಭಾಷೆಯ ಲೋಕವನ್ನ ಹಾದು ಇನ್ನೊಂದು ಭಾಷೆಯ ಲೋಕಕ್ಕೆ ಬಂದದ್ದು. ಪ್ರತಿಯೊಂದು ಭಾಷೆಯೂ ಒಂದು ವಿಶಿಷ್ಟವಾದ ಪ್ರಜ್ಞೆಯನ್ನ ಅಥವಾ ಲೋಕವನ್ನ ಸೃಷ್ಟಿಸುತ್ತೆ.
ಆ ದೃಷ್ಟಿಯಿಂದ ನೋಡಿದಾಗ ನಾನು ಇಂಗ್ಲಿಷ್ ಪ್ರೊಫೆಸರ್ ಆದರೂ ಸಹ ನನ್ನದು ಕನ್ನಡದ ಪ್ರಜ್ಞೆ. ಯಾಕೆಂದರೆ ಲೋಕ ನನಗೆ ತೆರೆದುಕೊಂಡಿದ್ದು ಮತ್ತು ತನ್ನದೇ ರೀತಿಯಲ್ಲಿ ದಕ್ಕಿದ್ದು ಕನ್ನಡದ ಮೂಲಕ. ಆ ಅರ್ಥದಲ್ಲಿ ನಾವು ಭಾಷೆಯನ್ನ ಕೇವಲ ಬಳಸುವುದಿಲ್ಲ, ಭಾಷೆ ನಮ್ಮನ್ನ, ಅಂದರೆ ನಮ್ಮ ಪ್ರಜ್ಞೆಯನ್ನ ರೂಪಿಸುತ್ತಾ ಇರುತ್ತೆ. ಆಮೇಲೆ ನಾನು ಇಂಗ್ಲಿಷ್ ಮೂಲಕ ಇನ್ನೊಂದು ಲೋಕಕ್ಕೆ ತೆರೆದುಕೊಂಡರೂ ಸಹ ಅದೊಂದು ‘ಅನುವಾದಿತ ಲೋಕ’.
ಕೆಲವು ಮುಖ್ಯ ಅಂಶಗಳು. ನಿರ್ಮಲಾ ಫುತುಲ್ ಅವರ ಸಂತಾಲಿ ಲೋಕವನ್ನ ದೆಹಲಿಯ ರೇಣುಕಾ ನಿಡಗುಂದಿ ಅವರು ಹಿಂದಿಯ ಮೂಲಕ ಕನ್ನಡಕ್ಕೆ ಅನುವಾದ ಮಾಡಿದಾರೆ. ಮೈಸೂರಿನಲ್ಲಿರೋ ನಾನು ಅದನ್ನ ಹೇಗೆ ಅರ್ಥ ಮಾಡಿಕೊಳ್ಳೋದು ಅಂತ ಪ್ರಯತ್ನ ಪಡ್ತಾ ಇದೀನಿ.
ಯಾಕೆ ಇಷ್ಟೆಲ್ಲಾ ಪುರಾಣ? ಪದ್ಯ ಓದಿದರೆ ಸಾಕಲ್ಲ ಅನ್ನೋದು ಸಹ ಒಂದು ಒಳ್ಳೆಯ ಪ್ರಶ್ನೆಯೇ. ಆದರೆ ಯಾರು ಬರಿತಾರೆ? ಯಾರು ಅದನ್ನ ಅನುವಾದಿಸುತ್ತಾರೆ? ಇನ್ಯಾರು ಇದರ ಅರ್ಥ ಇದು ಅಂತ ಹೇಳ್ತಾರೆ ಅನ್ನೋ ಅಂಶಗಳು ಸ್ತ್ರೀಸಂವೇದಿ ನೆಲೆಯಲ್ಲಿ ಮತ್ತು ಚಾರಿತ್ರಿಕ ನೆಲೆಯಲ್ಲಿ ತುಂಬಾ ಮುಖ್ಯ. ಅಕಾಡೆಮಿಕ್ ಪರಿಭಾಷೆಯಲ್ಲಿ ಅದನ್ನ stand point theory ಅಂತ ಸಹ ಕರಿತಾರೆ. ಅಂದರೆ ಯಾರು ಯಾವ ನೆಲೆಯಲ್ಲಿ ನಿಂತು ಅದನ್ನ ಮರುಬರವಣಿಗೆಗೆ ಮತ್ತು ಮರುವಿಶ್ಲೇಷಣೆಗೆ ಹಚ್ತಾ ಇದಾರೆ ಅನ್ನುವ ಪ್ರಶ್ನೆ.
ದೆಹಲಿಯಲ್ಲಿರುವ ಮಧ್ಯಮವರ್ಗದಿಂದ ಬಂದ ಅನುವಾದಕರು ಆದಿವಾಸಿ ಹೆಣ್ಣಲ್ಲ, ಇಂಗ್ಲಿಷ್ ಪ್ರೊಫೆಸರ್ ಆಗಿರೋ ನಾನು ಮೊದಲೇ ಅಲ್ಲ. ಹಾಗಾದ್ರೆ ಈ ನೆಲೆಗಳಲ್ಲಿ ನಿಂತು ನಿರ್ಮಲಾ ಅವರ ಕಾವ್ಯವನ್ನ ಅರ್ಥ ಮಾಡಿಕೊಳ್ಳುತ್ತಿರೋ ನಮ್ಮ ಆಯ್ಕೆಯ ರಾಜಕಾರಣವೇನು? ಇದನ್ನ ನಾವು politics of choice ಅಥವಾ politics of selection ಅಂತ ಕರೀತೀವಿ. ಅಂದರೆ ಯಾವ ಆಯ್ಕೆಯೂ ಮುಗ್ಧವಲ್ಲ ಅನ್ನೋದು ನಮಗೆ ಗೊತ್ತು. ಸ್ತ್ರೀಸಂವೇದಿ ವರ್ತಮಾನೀಯತೆ ನಿರ್ಮಲಾ ಅವರ ಕಾವ್ಯದ ಬಹು ಮುಖ್ಯ ನೆಲೆಯಾದ್ದರಿಂದ ಅನುವಾದಕರು ಮತ್ತು ಉಪನ್ಯಾಸಕರು ಇಬ್ಬರ ಕಾಳಜಿಗಳು ಅದಕ್ಕೆ ಹೊಂದುವುದರಿಂದ ನಾವು ಇವತ್ತು ಇಲ್ಲಿದೀವಿ.
ಇನ್ನು ಈಶಾನ್ಯ ಭಾಗದ ಸಾಹಿತ್ಯವನ್ನ ಯಾಕೆ ಗಮನಿಸಬೇಕು ಅನ್ನುವ ಪ್ರಶ್ನೆ. ನಾನು ಗ್ರಹಿಸಿರುವ ಪ್ರಕಾರ ಬಹು ಮುಖ್ಯವಾಗಿ women write the nation. ರಾಷ್ಟ್ರೀಯ ನೆಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈಶಾನ್ಯ ಭಾಗದಲ್ಲಿ ಕುಟುಂಬ, ಸಮುದಾಯದ ನೆಲೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಆದಿವಾಸಿ ಹೆಣ್ಣೊಬ್ಬಳು ಯಾವ ರೀತಿಯಲ್ಲಿ ರಾಷ್ಟ್ರವನ್ನ ಗ್ರಹಿಸ್ತಾ ಇದಾಳೆ ಅನ್ನೋದು ನಾವು ನಿರ್ಲಕ್ಷಿಸಲಾಗದ ಸತ್ಯ. ಅದಕ್ಕೆ ನಾವದರ ಜೊತೆ ಮುಖಾಮುಖಿಯಾಗುವ ಅನಿವಾರ್ಯ ನಮ್ಮ ಎದುರಿದೆ ಅನ್ನುವ ಸತ್ಯಕ್ಕೆ ಸ್ಪಂದಿಸುತ್ತಾ ಇದನ್ನ ಆಯ್ದುಕೊಂಡಿದಾರೆ ಅಂತ ನಾನು ಭಾವಿಸ್ತೀನಿ.
ಇರಲಿ, ಒಂದು ಕಥನ ಮೂಲ ಭಾಷೆಯದೋ ಇಲ್ಲಾ ಭಾಷಾಂತರವೋ ಅನ್ನುವುದನ್ನ ಕಟ್ಟಿಕೊಂಡು ಏನಾಗಬೇಕಿದೆ ಅನ್ನುವುದು ಒಂದು ರೀತಿಯ ಬೌದ್ಧಿಕ ಉಡಾಫೆ. ಹಾಗಿದ್ರೆ ಭಾಷಾಂತರದಲ್ಲಿ ನಾವು ಗಮನಿಸಬೇಕಾದ ಅಂಶಗಳಾದರೂ ಏನು?
ಕೆಲವೊಮ್ಮೆ, ‘ಭಾಷಾಂತರ ಅಂತಲೇ ಗೊತ್ತಾಗೋಲ್ಲ, ಕನ್ನಡದಲ್ಲೇ (ಅಥವಾ ಇನ್ಯಾವುದೋ ಭಾಷೆಯಲ್ಲೇ) ಬರೆದ ಹಾಗಿದೆ’ ಅನ್ನೋದು ಹೊಗಳಿಕೆಯಂತೆ ಕೇಳಿಸಿದರೂ ಸಹ ಅದು ಸೀಮಿತ ಅರ್ಥದಲ್ಲಿ ಮಾತ್ರ. ವರ್ತಮಾನಿಯತೆಯ ಅಥವಾ ನಿರ್ದಿಷ್ಟ ಕಾಲದ ಹಂಗಿಲ್ಲದೆ ಸರ್ವಕಾಲಕ್ಕೂ ಸಲ್ಲುವ ಕಥಾನಕಗಳು ಅನುವಾದಿಸಲ್ಪಟ್ಟಾಗ ಮಾತ್ರ ಅದನ್ನ ಪ್ರಶಂಸೆ ಅಂತ ಪರಿಗಣಿಸಬಹುದು.
ಉದಾಹರಣೆಗೆ ಶೇಕ್ಸ್ಪಿಯರನ ಹ್ಯಾಮ್ಲೆಟ್ ಕುವೆಂಪು ಅವರಿಂದ ‘ರಕ್ತಾಕ್ಷಿ’ ಆದಾಗ. ಅಥವಾ ಬಿಎಂಶ್ರೀ ಅವರ ‘ಇಂಗ್ಲಿಷ್ ಗೀತಗಳು’. Lord Ullin’s Daughter ‘ಕಾರಿ ಹೆಗ್ಗಡೆಯ ಮಗಳು’ ಎಂಬ ರೂಪದಲ್ಲಿ ಓದುವಾಗ ‘ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿದೆ’ ಎಂಬ ಭಾಷಾಂತರಕಾರರ ಆಶಯ ಸರಿ ಅಂತ ಅನ್ನಿಸುತ್ತೆ. ಅಂದರೆ ಅವುಗಳು ಪೂರ್ತಿಯಾಗಿ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ರವಾನೆಯಾಗಿರೋ ಅಂತದ್ದು. ‘ಪಡುವ ದಿಬ್ಬದ ಗೌಡನೊಬ್ಬನು ಬಿಡದೆ ತೊರೆಯನ ಕೂಗಿಕೊಂಡನು, ಗಡುವ ಹಾಯಿಸು ಈಗಿಂದಿಗಲೇ, ಕೊಡುವೆ ಕೇಳಿದ ಹೊನ್ನನು’ ಅಂತ ಓದುವಾಗ ಅದರ ಗೀತಗುಣ ಇದೆಯಲ್ಲ, ಅದು ಸಂಪೂರ್ಣವಾಗಿ ಕನ್ನಡದ್ದು.
ಆದರೆ ಚಾರಿತ್ರಿಕ ವಿವರಗಳು, ಅಂದರೆ, ಯಾವಾಗ, ಯಾರಿಗೆ ಮತ್ತು ಎಲ್ಲಿ ಇದು ನಡೀತು ಎನ್ನುವ ಅಂಶಗಳು ಮುಖ್ಯವಾದಾಗ ಆ ವಿವರಗಳನ್ನು ಉಳಿಸಿಕೊಳ್ಳುವುದು, ಆ ಅಂಶಗಳತ್ತ ಬೆಟ್ಟು ಮಾಡಿ ತೋರಿಸುವುದು ಭಾಷಾಂತರಕಾರ್ತಿಯ ನೈತಿಕ ಆಯ್ಕೆಯಾಗಿರುತ್ತೆ. ಆ ಚಾರಿತ್ರಿಕ ವಿವರಗಳಲ್ಲಿ ವ್ಯಕ್ತಿಯ ಮತ್ತು ಸ್ಥಳದ ಹೆಸರುಗಳು, ಚಾರಿತ್ರಿಕ ಘಟನೆಗಳು ಎಲ್ಲವೂ ಒಂದು ಪ್ರಬಲವಾದ ರಾಜಕೀಯ ಮತ್ತು ಸಾಂಸ್ಕೃತಿಕ ವಿಮರ್ಶೆಯಾಗುವುದರಿಂದ ಅವನ್ನ ಸುತಾರಾಂ ಕಡೆಗಣಿಸುವ ಹಾಗಿಲ್ಲ.
ಇನ್ನು ಭಾಷೆ. ಇಲ್ಲಿ ಅನುವಾದಕರು ಬಳಸಿರುವ ಭಾಷೆಗೂ ಮೂಲದ ಕವಿಯ ಭಾಷೆಗೂ ತಾಳೆ ಇದೆಯಾ? ಸಂತಾಲಿ ಒಂದು ಆದಿವಾಸಿ ಭಾಷೆ, ಗ್ರಾಮ್ಯ ಇರಬಹುದು. ಆ ಭಾಷೆಯ ನುಡಿಗಟ್ಟುಗಳು, ಗಾದೆಗಳು ಹೊಮ್ಮಿಸುವ ಲೋಕ ವಿಶಿಷ್ಟವಾಗಿರುತ್ತೆ. ಅನುವಾದಕರ ಶಿಷ್ಟ ಕನ್ನಡ ಭಾಷೆ ಅದಕ್ಕೆ ನ್ಯಾಯವನ್ನ ಸಲ್ಲಿಸೋದಕ್ಕೆ ಸಾಧ್ಯವಾ?
ಬಹುಶಃ ಸಾಧ್ಯವಾಗಲಾರದು. ಅದು ಸಂತಾಲಿಯಿಂದ ಹಿಂದಿಗೆ ಬಂದು ನಂತರ ಕನ್ನಡಕ್ಕೆ ಬಂದಿರುವಾಗ ಎರಡೆರಡು ಬಾರಿ ಸತ್ವ ಸೋರಿ ಹೋಗಿದೆ ಅಂತ ಕೆಲವರು ಅಭಿಪ್ರಾಯಿಸಬಹುದು. ಹಾಗಿದ್ದರೆ ಸಂತಾಲಿಯಿಂದ ಕನ್ನಡಕ್ಕೆ ನೇರವಾಗಿ ಅನುವಾದ ಮಾಡುವವರು ಸಿಗುವವರೆಗೆ ಕಾಯಬೇಕಾ? ಅಂತಹ ಅನುವಾದ ಪರಮ ಶ್ರೇಷ್ಠ ಎನ್ನುವ ಗ್ಯಾರಂಟಿಯಾದರೂ ಏನು?
ಅಂದರೆ, ಭಾಷಾಂತರಕ್ಕೆ ಸಂಬಂಧಪಟ್ಟ ಹಾಗೆ ‘ಮೂಲ’ದ ವ್ಯಸನ ಮತ್ತು ಶ್ರೇಷ್ಠತೆಯ ವ್ಯಸನ ಎರಡೂ ಬೇಡ ಅಂತ ಅನ್ನಿಸುತ್ತೆ. ಅನುವಾದ ಎಂದರೆ ಮರು-ಬರವಣಿಗೆಯೇ. ಅನುವಾದವನ್ನ ವಿಶಾಲವಾದ ಅರ್ಥದಲ್ಲಿ ನೋಡಿದಾಗ ನಮ್ಮ ದಿನನಿತ್ಯದ ಮಾತುಕತೆಯೆಲ್ಲ ನಮ್ಮ ಯೋಚನೆಗಳ ಅನುವಾದವೇ.
ಹಾಗಿದ್ರೆ ಅನುವಾದಕರ ಪಾತ್ರವೇನು? ಅಡಿಗೆ ಮಾಡಿ ಬಡಿಸಿಟ್ಟು ಮೆಲ್ಲಗೆ ಬಾಗಿಲ ಹಿಂದಕ್ಕೆ ಸರಿದು ನಿಲ್ಲುವ ಅಪ್ಪಟ ಗೃಹಿಣಿಯದಂತೂ ಅಲ್ಲ. ಇದು ನಾನು ಮಾಡಿದ ಅಡಿಗೆ. ಇದರಲ್ಲಿ ಏನನ್ನು ಮತ್ತು ಯಾವ ರೂಪದಲ್ಲಿ ಉಳಿಸಿಕೊಂಡಿದ್ದೇನೆ, ಯಾವ ರೀತಿಯಲ್ಲಿ ಭಾಷೆಯ ಸ್ವಾಯತ್ತತೆಗೆ ನನ್ನನ್ನು ನಾನು ಒಡ್ಡಿಕೊಂಡಿದ್ದೇನೆ, ಏನನ್ನು ಕೈ ಬಿಡುವ ಅನಿವಾರ್ಯ ಉಂಟಾಗಿದೆ ಇತ್ಯಾದಿಗಳನ್ನು ಪ್ರಸ್ತಾವನೆ, ಟಿಪ್ಪಣಿ, ವಿಮರ್ಶೆಗಳ ಮೂಲಕ ತನ್ನ ಮರುಬರವಣಿಗೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿರಬೇಕು.

ಉದಾಹರಣೆಗೆ ನಿಡಗುಂದಿ ಅವರು ಬಳಸಿರುವ ‘ಸಂಬಂಜ’ ಅನ್ನುವ ಪದವನ್ನೇ ನೋಡಿ. ಅದು ದೇವನೂರು ಮಹಾದೇವರ ‘ಕುಸುಮಬಾಲೆ’ ಜನಪ್ರಿಯಗೊಳಿಸಿದ ಪದ. ಆ ಒಂದು ಪದಕ್ಕೂ ನಿಡಗುಂದಿ ಅವರ
ಉಳಿದ ಭಾಷೆಗೂ ಸಾವಯವತೆಯೇ ಇಲ್ಲ. ಅದೊಂದು ಲೋಪವಾಗಿಯೂ ಕಾಣಿಸಬಹುದು. ಆದರೆ ದೆಹಲಿಯಲ್ಲಿರುವ ಮಧ್ಯಮವರ್ಗದ ಕನ್ನಡತಿ ನಿಡಗುಂದಿ ಅದೊಂದು ಪದದ ಮೂಲಕ ನಿರ್ಮಲಾ ಅವರ ಗ್ರಾಮ್ಯ ಭಾಷೆಯತ್ತ ಬೊಟ್ಟು ಮಾಡುತ್ತಿರಬಹುದು ಎಂದುಕೊಂಡಾಗ ಅದು ವಿಚಿತ್ರವೆನ್ನಿಸುವುದಿಲ್ಲ.
ಭಾಗ ಎರಡು: ಹೆಣ್–ಗಾವ್ಯಕ್ಕೊಂದು ಚಿತ್ತಾರದ ಚೌಕಟ್ಟು
ಹೆಣ್ಣಿನ ಕಾವ್ಯವನ್ನು ಹೇಗೆ ಓದಬೇಕು? ಕೆಲವು ಗುಣಗಳನ್ನು ಪಟ್ಟಿ ಮಾಡಬಹುದು. ಒಂದು, ಅಲ್ಲಿ ದಟ್ಟವಾದ ವೈಯುಕ್ತಿಕತೆ ಇರುತ್ತದೆ. ಅದನ್ನ ಪುರುಷಪ್ರಧಾನ (ಅಪ್ಪಂತನ ಎನ್ನುವುದನ್ನು ಅದರ ತದ್ಭವವಾಗಿ ಬಳಸಿಕೊಂಡಿದ್ದೇನೆ) ವಿಮರ್ಶೆಯ ವ್ಯವಸ್ಥೆಯಲ್ಲಿ ‘ಅತಿಯಾದ ಭಾವುಕತೆ’ ಅಂತ ಕರೆದು ತಳ್ಳಿಹಾಕುವ ಹುನ್ನಾರ ಇರುತ್ತೆ. ಹೆಣ್ಣನ್ನ ಸಂಬಧಾತ್ಮಕತೆಯ ನೆಲೆಯಲ್ಲಿಯೇ ನೋಡುವುದು, ಅಂದರೆ ಅವಳನ್ನು ಮಗಳು, ಹೆಂಡತಿ, ತಾಯಿ ಇತ್ಯಾದಿಗಳಲ್ಲಿ, ಸಹಜ ಅಂತ ಕಾಣಿಸುವ ವ್ಯವಸ್ಥೆಯಲ್ಲಿ ಅವಳು ಸಂಬಂಧಗಳ ಮೂಲಕವೇ ತನ್ನನ್ನು ಗುರುತಿಸಿಕೊಳ್ಳುವಾಗ ಯಾಕೆ ತಕರಾರು? ಈ ಕವನ ಸಂಕಲನದ ಶೀರ್ಷಿಕೆಯನ್ನೇ ಗಮನಿಸಿದರೆ ‘ಯಾವ ವಿಳಾಸವೂ ಅವಳದಲ್ಲ’ ಎನ್ನುವಲ್ಲಿ ಅದೆಷ್ಟು ವಿಷಾದ ಅಡಗಿದೆ ಅಂತ ಅನ್ನಿಸುತ್ತೆ.
ದಲಿತ ಕಾವ್ಯವನ್ನು ಸಹ ಹೀಗೆಯೇ ತಳ್ಳಿ ಹಾಕುವ ಪ್ರವೃತ್ತಿಯೂ ಇದೆಯಲ್ಲ? ದಲಿತರ ಕಾವ್ಯದಲ್ಲಿ ‘ಕಾವ್ಯಾತ್ಮಕತೆ’ ಕಮ್ಮಿ, ಆಕ್ರೋಶವೇ ಜಾಸ್ತಿ! ಇತ್ಯಾದಿ ಶರಾ ಬರೆಯುವ ವಿಮರ್ಶೆಯ ಪ್ರವೃತ್ತಿ ನಮಗೆಲ್ಲ ಪರಿಚಿತ. ಆದರೆ ಬದುಕಿನ ಮೂಲಭೂತ ಹಕ್ಕುಗಳಿಂದ ವಂಚಿತರಾಗಿರುವರಿಗೆ ಯಾಕೆ ಆಕ್ರೋಶ ಇರಬಾರದು ಎನ್ನುವುದು ಒಂದು ಮುಖ್ಯ ಪ್ರಶ್ನೆಯೇ.
ಮತ್ತೆ ಹೆಣ್ಣಿನ ಕಾವ್ಯಕ್ಕೆ ಬರೋಣ. ಸಂಬಂಧಾತ್ಮಕತೆ ಅನ್ನುವುದು ಇನ್ನೊಂದು ನೆಲೆಯಲ್ಲಿ ‘ಸಹಪಠ್ಯತೆ’ ಅಂತಾನೂ ಸಹ ಕರೆಸಿಕೊಳ್ಳುತ್ತೆ. ಇಂಗ್ಲೀಷಿನಲ್ಲಿ ಅದನ್ನ ‘complimentary text’ ಅಥವಾ co-text ಅಂತ ಕರೀತಾರೆ.
ಕವಿಯ ‘ಅತ್ಯುತ್ತಮ ಪ್ರಾತಿನಿಧಿಕ ಕವನ’ ಎನ್ನುವುದು ವಿಮರ್ಶೆ ತನ್ನ ಅನುಕೂಲಕ್ಕೆ ಹುಟ್ಟುಹಾಕಿಕೊಂಡಿರುವ ಒಂದು ಪರಿಕಲ್ಪನೆ ಎಂಬ ವಾದವಿದೆ. ಇರಬಹುದು, ಕೆಲವು ದಟ್ಟ ಅನುಭವಗಳನ್ನ ದಟ್ಟವಾದ ಭಾಷೆಯಲ್ಲಿ ಅಭಿವ್ಯಕ್ತಿಸಿದಾಗ ಅದು ವಿಮರ್ಶೆಗೆ ಹೆಚ್ಚು compact ಆಗಿ ಒದಗಿ ಬರುವುದರಿಂದ ಅದನ್ನ ಪ್ರಾತಿನಿಧಿಕ ಅಂತ ಕರೀತೀವಿ. ಹಾಗೂ ಕಾವ್ಯ ಸಂಕಲನವನ್ನೋ, ಪಠ್ಯಪುಸ್ತಕವನ್ನೋ ಮಾಡುವಾಗ ಪ್ರಾತಿನಿಧಿಕ ಕವನವನ್ನ ಹುಡುಕಿಕೊಂಡು ಹೋಗ್ತೀವಿ. ಆದರೆ ಹೆಣ್ಣಿನ ಕಾವ್ಯವನ್ನ ಸಹಪಠ್ಯತೆಯ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದು ನನ್ನ ಮಟ್ಟಿಗೆ ಒಂದು ಸಮರ್ಥವಾದ ರೀತಿ ಅಂತ ಅನ್ನಿಸಿದೆ.
ಏನು ಹಾಗಂದರೆ? ಪ್ರಾಯೋಗಿಕ ವಿಮರ್ಶೆ ಅಂದಾಗೆಲ್ಲ ನನಗೆ ಅನಂತಮೂರ್ತಿ ಅವರ ಅಡಿಗರ ‘ರಾಮನವಮಿಯ ದಿವಸ’ ಪದ್ಯವನ್ನು ಇಟ್ಟುಕೊಂಡು ಬರೆದ ‘ಪದ್ಯವನ್ನು ಬಗೆವ ಬಗೆ’ ಎಂಬ ಲೇಖನ ನೆನಪಾಗುತ್ತೆ. ನವ್ಯ ಕಾವ್ಯವನ್ನು ಅರ್ಥ ಮಾಡಿಕೊಳ್ಳೋದಕ್ಕೆ ಪ್ರತಿಮೆ, ರೂಪಕ ಇತ್ಯಾದಿಯಂತಹ ಹಲವಾರು ಸಾಧನಗಳು ಬೇಕಾಗುತ್ತೆ. ಆದರೆ ನಾನು ಇಲ್ಲಿ ಹೆಣ್ಣಿನ ಕಾವ್ಯವನ್ನು ಸಹಪಠ್ಯತೆ ಮತ್ತು ವರ್ತಮಾನೀಯತೆಯ ನೆಲೆಗಳಲ್ಲಿ ಅರ್ಥ ಮಾಡಿಕೊಳ್ಳೋದಕ್ಕೆ ಪ್ರಯತ್ನಿಸ್ತೀನಿ.
ಸಹಪಠ್ಯತೆ ಅಂದರೆ ಈ ಸಂಕಲನದಲ್ಲಿರುವ ಉಳಿದ ಪದ್ಯಗಳ ಅಥವಾ ಪಠ್ಯಗಳ ಮೂಲಕ ಒಂದು ಆವರಣವನ್ನ ಸೃಷ್ಟಿಸಿ ಕೊನೆಯಲ್ಲಿ ನಾವು ನೀವು ಒಟ್ಟಿಗೆ ‘ಡೇಪಚನ ಅಪ್ಪ’ ಅನ್ನೋ ಪದ್ಯವನ್ನ ಯಾವ ವಿವರಣೆಯ ಹಂಗಿಲ್ಲದೆ ಸುಮ್ಮನೆ ಓದ್ತೀವಿ. ಅಷ್ಟು ಹೊತ್ತಿಗೆ ನಿರ್ಮಲಾರ ಕಾವ್ಯದ ನೆಲೆಗಳು ಸಾಕಷ್ಟು ಮಟ್ಟಿಗೆ ಸ್ಪಷ್ಟ ಆಗಿರ್ತವೆ ಅಂತ ಭಾವಿಸ್ತೀನಿ.
ಯಾಕೆ ಈ ಸುತ್ತು ಬಳಸು ಅಂತ ಕೇಳಿದರೆ ಬಹುಶಃ ನನ್ನ ಉತ್ತರ, ನನಗೆ ಪದ್ಯವನ್ನ ‘ಬಗೆಯುವುದರಲ್ಲಿ’ ಆಸಕ್ತಿ ಇಲ್ಲ. ಅದು ಸ್ತ್ರೀಸಂವೇದಿ ಅಲ್ಲ ಅಂತ ನನ್ನ ವೈಯುಕ್ತಿಕ ಅನಿಸಿಕೆ. ಒಂದು ಚಾರಿತ್ರಿಕ ಮತ್ತು ಸ್ತ್ರೀಸಂವೇದಿ ಆವರಣವನ್ನ ಸೃಷ್ಟಿಸಿದ ಮೇಲೆ ಓದುಗರ ಅಂತಃಕರಣಕ್ಕೆ ಅರ್ಥ ತಾನಾಗಿಯೇ ದಕ್ಕುತ್ತೆ ಅನ್ನುವ ಭರವಸೆ ನನಗಿದೆ.
ನಾನು ಈ ಹಿಂದೆ ಚಾರಿತ್ರಿಕ ವಿಮರ್ಶೆಯ ಬಗ್ಗೆ ಪ್ರಸ್ತಾಪಿಸಿದ್ದೆ. ಯಾಕೆ ನನಗೆ ಚಾರಿತ್ರಿಕ ನೆಲೆ ಮುಖ್ಯ ಆಗುತ್ತೆ ಅಂದರೆ ಸಾಮಾನ್ಯವಾಗಿ ‘ಹೆಣ್ಣು’ ಅನ್ನುವ ಸಾಮಾಜಿಕ ಪರಿಕಲ್ಪನೆಗೆ ಚರಿತ್ರೆಯ ಹಂಗೇ ಇಲ್ಲ ಅಂತ ಅಪ್ಪಂತನ ವಿಮರ್ಶಕರು ನಿರ್ಧಾರ ಮಾಡಿರುವುದು ನಮ್ಮ ಕಣ್ಣಿಗೆ ಹೊಡೆಯುತ್ತೆ. ಉದಾಹರಣೆಗೆ ಕನ್ನಡ ವಿಮರ್ಶೆಯನ್ನೇ ತೆಗೆದುಕೊಳ್ಳಿ: ಲೇಖಕರು ‘ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ಬಂಡಾಯೋತ್ತರ, ಬಂಡಾಯಪೂರ್ವ’ ಹೀಗೆ ಚರಿತ್ರೆಯ ನೆಲೆಯಲ್ಲಿ ಇಟ್ಟು ನೋಡಲಾಗುತ್ತೆ. ಆದರೆ ಹೆಂಗಸರು ಮಾತ್ರ ಕೇವಲ ಮಹಿಳಾ ಸಾಹಿತಿಗಳು!
ಅವರ ಸಾಹಿತ್ಯಕ್ಕೆ ಕಾಲದ ಹಂಗಿಲ್ಲ ಎನ್ನುವುದು ಪ್ರಶಂಸೆಯ ಮಾತಂತೂ ಅಲ್ಲ! ಅದು ಕೇವಲ ಪುರಾಣಕ್ಕೆ ಅನ್ವಯಿಸಬಹುದು ಅಷ್ಟೆ!
ಈ ತರಹದ ವಿಮರ್ಶೆಯ ಪದ್ಧತಿಯಲ್ಲಿ ಎಷ್ಟು ಮಂದಿ ಹೆಂಗಸರು ‘ಅತ್ಯುತ್ತಮ ಹತ್ತು ಮಂದಿ ಸಾಹಿತಿಗಳು’ ಅಥವಾ ‘ಅತ್ಯುತ್ತಮ ಐದು ಮಂದಿ ವಿಮರ್ಶಕರು’ ಅನ್ನುವಂತಹ ವರ್ಗಕ್ಕೆ ಬರಲು ಸಾಧ್ಯ? ಈ ಟಾಪ್ ಟೆನ್, ಟಾಪ್ ಫೈವ್ ಎನ್ನುವುದು ನನ್ನ ಕಣ್ಣಿಗಂತೂ ಒಂದು ರೀತಿಯ ರೋಗದಂತೆ ಕಾಣಿಸುತ್ತೆ. ಅಥವಾ ಎಫ್ ಆರ್ ಲೀವಿಸ್ (F R Leavis) ಜನಪ್ರಿಯಗೊಳಿಸಿದ ನವವಿಮರ್ಶೆ ಪದ್ಧತಿಯಲ್ಲಿ major poets ಅಥವಾ minor writers ಇತ್ಯಾದಿ ವರ್ಗೀಕರಣ ಇದೆಯಲ್ಲಾ, ಹೆಣ್ಣಿನ ಸಾಹಿತ್ಯ ಅಥವಾ ವಿಮರ್ಶೆ ಅವುಗಳನ್ನು ಸಹ ದೂರ ಇಡಬೇಕು ಅನ್ನೋದು ನನ್ನ ಗ್ರಹಿಕೆ.
ನಿರ್ಮಲಾರ ಈ ಸಾಲುಗಳನ್ನ ಗಮನಿಸಬಹುದು;
ನಾನು ಹೇಳುವುದಿಲ್ಲ
ನೀವಿದನ್ನು ಕವಿತೆ ಎನ್ನಿ
ಕವಿಗಳ ಯಾದಿಯಲ್ಲಿ
ನನ್ನ ಹೆಸರು ದಾಖಲಾಗಬೇಕೆಂದು
ನಾ ಬಯಸುವುದಿಲ್ಲ.
ಆ ಪಂಕ್ತಿಯಲ್ಲೂ
ನಿಲ್ಲ ಬಯಸುವುದಿಲ್ಲ ನಾನು…
ಇದು ಅಪ್ಪಂತನ ವಿಮರ್ಶೆಗೆ ಹೆಣ್ಣು ಕವಿಯೊಬ್ಬಳು ಹಾಕಿದ ಧಿಕ್ಕಾರವೇ! ಅದು ಆಕ್ರೋಶ ಅಂತ ಸುಲಭವಾಗಿ ತಳ್ಳಿ ಹಾಕಬಹುದು. ನನಗೆ ಅದು ಅತ್ಯಂತ ಪ್ರಾಮಾಣಿಕವಾದ ದನಿಯಂತೆ ಕೇಳಿಸುತ್ತೆ. ಹಾಗಿದ್ರೆ ಕವಿಗೆ ಬೇಕಾಗಿರೋದು ಏನು?
ನನ್ನ ಪದಗಳ ಭೂಮಿಯಿಂದ
ಅನೇಕಾನೇಕ
ಬಿರಸಾ ಮುಂಡಾ
ಹುಟ್ಟಲೆಂದು
ನಾ ಬಯಸುತ್ತೇನೆ.
ಬಿರಸಾ ಮುಂಡಾ ಒಬ್ಬ ಆದಿವಾಸಿ ಕ್ರಾಂತಿಕಾರಿ ನಾಯಕ. ಜ್ಞಾನಪೀಠ ಪ್ರಶಸ್ತಿ ಪಡೆದ ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ಅವನ ಬಗ್ಗೆ ಬರೆದಿದ್ದಾರೆ. ಅಂದರೆ ನಿರ್ಮಲಾರಿಗೆ ಬೇಕಾಗಿರುವುದು ವೈಯುಕ್ತಿಕವಾಗಿ ಕವಿಯ ಪಟ್ಟವಲ್ಲ. ಬದಲಿಗೆ ತನ್ನ ಸಮುದಾಯದ ಅಸ್ಮಿತೆಯನ್ನ ಮರಳಿ ಪಡೆಯಬೇಕು. ಬಿರಸಾ ಮುಂಡಾ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದಿದ್ದ ಕ್ರಾಂತಿಕಾರಿ. ಭಾರತ ಸ್ವತಂತ್ರ ರಾಷ್ಟ್ರವಾದ ಮೇಲೆ ಸಂತಾಲರ ಪರಿಸ್ಥಿತಿ ಸುಧಾರಿಸಿದ್ದರೆ ಬಿರಸಾ ಮುಂಡಾನ ಅಗತ್ಯವೇನು? ಒಂದೇ ಸಾಲಿನಲ್ಲಿ ನಿರ್ಮಲಾ ವರ್ತಮಾನದ ರಾಷ್ಟ್ರವನ್ನ ನಮ್ಮ ಮುಂದೆ ಬಿಚ್ಚಿಡುತ್ತಾರೆ.
ನಿರ್ಮಲಾ ಆದಿವಾಸಿ ಸಮುದಾಯದಿಂದಲೇ ಹೊಮ್ಮಿದ ಕವಿ. ಅಂದರೆ ಇಟಾಲಿಯನ್ ಚಿಂತಕ ಆಂಟೋನಿಯೊ ಗ್ರಾಂಶಿ (Antonio Gramsci) ಕರೆಯುವಂತೆ ‘organic intellectual’. ಅದು ಈ ಸಾಲುಗಳನ್ನು ಓದಿದಾಗ ಸ್ಪಷ್ಟವಾಗುತ್ತದೆ:
ಕವಿತೆಯ ವ್ಯಾಖ್ಯಾನವೇನೆಂದು ನಾನರಿಯೆ
ಛಂದಸ್ಸು, ಲಯ, ತರ್ಕದ ಯಾವ ಜ್ಞಾನವೂ ನನಗಿಲ್ಲ
ಶಬ್ದ, ಭಾಷೆಯ ಮೇಲೂ ನನ್ನ ಹಿಡಿತವಿಲ್ಲ
ಮನೆವಾಳ್ತೆ ಸಂಭಾಳಿಸುತ್ತಾ
ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾ
ಕಂಡುದನು, ಕೇಳಿದ್ದನ್ನು, ಅನುಭವಿಸಿದ್ದನ್ನು
ನೆರೆಹೊರೆಯ ಗೆಳತಿಯೊರಡನೆ
ಹೇಳಿಕೊಂಡೆ, ಹಂಚಿಕೊಂಡೆ
ಕಾಲದ ಪಾಟಿಯ ಮೇಲೆ ಇದ್ದುದನ್ನು ಇದ್ದಂತೆ ಬರೆದು ಬಿಟ್ಟೆ
ಹೇಗೆ ಹೇಗೋ ಅಂಕುಡೊಂಕು ಅಕ್ಷರಗಳಲ್ಲಿ..
ನೀನು ಬೇಕಿದ್ದರೆ ಓದು ಇಲ್ಲಾ ಬಿಡು!
***
ಮೊಟ್ಟ ಮೊದಲನೆಯದಾಗಿ ನಿರ್ಮಲಾ ಆದಿವಾಸಿಗಳ ಬಗ್ಗೆ ನಗರೀಕೃತ ಸಮಾಜದಲ್ಲಿ ಇರುವ ರಮ್ಯ ಕಲ್ಪನೆಯನ್ನ ಧಿಕ್ಕರಿಸುತ್ತಾರೆ. ಈ ಸಾಲುಗಳನ್ನು ಗಮನಿಸಬಹುದು:
ಹೊಲ ಗದ್ದೆಯಲ್ಲಿ
ಸಸಿ ನೆಡುತ್ತಾ, ತೆನೆ ಕೊಯ್ಯುತ್ತಾ
ಹಾಡನ್ನು ಹಾಡುವಾಗ
ಬದುಕಿನ ಎಲ್ಲ ನೋವುಗಳನು
ಮರೆಯುವರೆಂದು ಹೇಳುವರು
ಹೀಗೆ ಆದಿವಾಸಿಗಳನ್ನ ರಮ್ಯೀಕರಿಸುವವರು ಯಾರು? ನಿರ್ಮಲಾ ಪದ್ಯದ ಕೊನೆಯಲ್ಲಿ ಝಾಡಿಸುವ ಹಾಗೆ:
ಪದಪುಂಜಗಳಿಂದ ವಂಚಿಸುವ
ಯಾರೋ ಬುದ್ದಿಗೇಡಿ
ಕವಿಯಾಗಿರಬೇಕು ಪಕ್ಕಾ!
ಹೀಗೆ ಆದಿವಾಸಿಗಳನ್ನ ರಮ್ಯೀಕರಿಸುವವರು ಯಾರು? ನಿರ್ಮಲಾ ಪದ್ಯದ ಕೊನೆಯಲ್ಲಿ ಝಾಡಿಸುವ ಹಾಗೆ:
ಪದಪುಂಜಗಳಿಂದ ವಂಚಿಸುವ
ಯಾರೋ ಬುದ್ದಿಗೇಡಿ
ಕವಿಯಾಗಿರಬೇಕು ಪಕ್ಕಾ!
ನಾನು ಹಲವಾರು ವರ್ಷ ನ್ಯೂಜಿಲ್ಯಾಂಡಿನಲ್ಲಿದ್ದೆ. ಅಲ್ಲಿಯ ಆದಿವಾಸಿಗಳು ಮಾವೋರಿ ಸಮುದಾಯದವರು. ಒಂದು ಸಲ ಇಂಡಿಯಾದಿಂದ ಅತಿಥಿ ಒಬ್ಬರು ಬಂದಿದ್ದರು. ಈ ಅತಿಥಿಯನ್ನ ‘ನ್ಯೂಜಿಲ್ಯಾಂಡಿನಲ್ಲಿ ಏನೇನು ನೋಡಬೇಕು ಅಂತ ಅಂದುಕೊಂಡಿದೀರಿ?’ ಅಂತ ಲೋಕಾಭಿರಾಮ ಕೇಳಿದಾಗ ‘ಮಾವೋರಿಯನ್ನ ನೋಡಲೇಬೇಕು’ ಅಂತ ಹೇಳಿದ್ದು ಕೇಳಿ ಬೆಚ್ಚಿ ಬಿದ್ದಿದ್ದೆ. ಯಾಕೆ ಹೀಗೆ ಕೇಳ್ತಾ ಇದಾರೆ? ಅವರೇನು ಮೃಗಾಲಯದ ಪ್ರಾಣಿಯ? ಅಥವಾ ಪ್ರದರ್ಶನದ ವಸ್ತುವಾ ಎಂದು ಯೋಚಿಸುವಂತಾಗಿತ್ತು. ಅಂದರೆ ಆದಿವಾಸಿ ಎಂದರೆ ಒಂದು ವಿಲಕ್ಷಣವಾದ ರಮ್ಯ ಕಲ್ಪನೆಯಿಂದ ಕೇಳುತ್ತಿದ್ದಾರಾ? ಸಮಾಜದ ಮುಖ್ಯವಾಹಿನಿಯಲ್ಲಿ ಇರುವ ಮಂದಿ ತಮ್ಮಂತೆ ಇಲ್ಲದವರನ್ನು ಅನ್ಯೀಕರಿಸುವ (ಇಂಗ್ಲೀಷಿನಲ್ಲಿ othering ಅಂತ ಕರಿತೀವಿ) ರೀತಿಗಳಲ್ಲಿ ಇದೂ ಒಂದು ಅಂತ ಅನ್ನಿಸಿತ್ತು.
ಈ ಸಹಪಠ್ಯಗಳನ್ನು ನಿರ್ಮಲಾರಿಗೆ ಮುಖ್ಯವಾದ ಎರಡು ನೆಲೆಗಳಲ್ಲಿ ವಿಭಾಗಿಸಿಕೊಂಡಿದ್ದೇನೆ: ಒಂದು ಮಾರ್ಮೂ ಸಮುದಾಯಕ್ಕೆ ಸೇರಿದವಳಾಗಿ ಮತ್ತು ಇನ್ನೊಂದು ತಾನೊಂದು ಕುಟುಂಬದ ಸದಸ್ಯೆಯಾಗಿ; ಅಂದರೆ ಸಮುದಾಯದ ಬಗ್ಗೆ ಮತ್ತು ಹೆಣ್ಣಾದ ತನ್ನ ಅಸ್ಮಿತೆಯ ಬಗ್ಗೆ. ಈ ಸಂಕಲನದಲ್ಲಿ ಬರುವ ಬೇರೆ ಬೇರೆ ಪದ್ಯಗಳಿಂದ ಅವನ್ನ ಆಯ್ದುಕೊಂಡಿದ್ದೇನೆ.
ಮೊದಲ ಭಾಗ ತನ್ನ ಸಮುದಾಯದ ಬಗ್ಗೆ. ತನ್ನ ಸಮುದಾಯದ ಬಡತನ ಮೂಡುವ ರೀತಿಯನ್ನು ಗಮನಿಸಿ. ಬಾಹುಮನಿ ಎಂಬ ಶ್ರಮಿಕನನ್ನು ಉದ್ದೇಶಿಸಿದ ಸಾಲುಗಳು ಹೀಗಿವೆ:
ನೀನು ಕೈಯ್ಯಾರೆ ಹೆಣೆದ ಮುತ್ತುಗದ ಎಲೆಯಲ್ಲಿ
ಸಾವಿರಾರು ಹೊಟ್ಟೆಗಳು ತುಂಬುತ್ತವೆ
ಆದರೆ ಸಾವಿರ ಎಲೆಗಳೂ ತುಂಬುವುದಿಲ್ಲ ನಿನ್ನ ಹೊಟ್ಟೆಯನು!
ಯಾರ ಮನೆಗಳಿಗಾಗಿ ನೀನು ಕಸಬರಿಗೆ ಮಾಡುವಿಯೊ
ಅವೇ ಮನೆಗಳಿಂದ ಕಸ ಬರುವುದು ನಿನ್ನ ಕೇರಿಗೆ!
ಹಾಗೆಯೇ ‘ಆದಿವಾಸಿ ಮಹಿಳೆಯರು’ ಎನ್ನುವ ಕವಿತೆಯಲ್ಲಿ ಈ ಸಾಲುಗಳನ್ನು ಗಮನಿಸಬಹುದು:
ಅವರ ಕರಕುಶಲ ವಸ್ತುಗಳು ದಿಲ್ಲಿ ಮಹಾನಗರವನು
ಹೇಗೆ ತಲುಪುವವೆಂದು
ಅವರಿಗೆ ಗೊತ್ತಿಲ್ಲ.
ಯಾಕೆಂದರೆ ರಾಜಮಾರ್ಗವನ್ನು ತಲುಪುವ ಮೊದಲೇ
ಸತ್ತುಹೋಗುತ್ತವೆ
ಅವರ ಲೋಕದ ಕಿರುದಾರಿಗಳು!
‘ಚುಡುಕ ಸೊರೇನ್’ ಎಂಬ ಪದ್ಯದಲ್ಲಿ,
ದಿಲ್ಲಿಯ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ
ಅವರ ಗುಂಪಿನಲ್ಲಿ ಹಲವಾರು ಬಾರಿ
ಪ್ರದರ್ಶನದ ವಸ್ತುವಾಗಿದ್ದೆ ನೀನು
ಅದೇ ಈ ಗಣತಂತ್ರವೆಂಬ ಹಕ್ಕಿ ಎಂದಾದರೂ
ಹಾರಿ ನಿನ್ನ ಮನೆಯ ಕುಂಬಿಯ ಮೇಲೆ ಕುಳಿತಿದೆಯಾ?
ಅಪ್ಪಂತನದ ಮಹಲು ನಿಂತಿರುವುದೇ ಹೆಣ್ಣಿನ ಮೌನವೆಂಬ ತಲಗಟ್ಟಿನ ಮೇಲೆ ಎಂಬರ್ಥ ಬರುವ ವರ್ಜೀನಿಯಾ ವೂಲ್ಫಳ ಒಂದು ಹೇಳಿಕೆಯಿದೆ. ನಿರ್ಮಲಾರ ಈ ಸಾಲುಗಳನ್ನು ಓದಿದಾಗ ಆ ಸತ್ಯವೇ ಧ್ವನಿಸುತ್ತದೆ:
ಹಕ್ಕುಗಳ ಬಗ್ಗೆ ಮಾತಾಡಬೇಡ ಸೋದರಿ,
ಕೇಳಬೇಡ ಪಿತ್ರಾರ್ಜಿತ ಆಸ್ತಿಯಲ್ಲಿನ ಅಧಿಕಾರ
ಅಕ್ರಮವಾಗಿ ಕದಿಯುವ ಕಾಡು ಮತ್ತು ಕಲ್ಲುಗಳ ಸುದ್ದಿ ಎತ್ತಬೇಡ
ಬಡ್ಡಿಕೋರರು ಮತ್ತು ಗ್ರಾಮೀಣ ವೈದ್ಯರ ದೋಚುವಿಕೆಯ
ಬಗ್ಗೆಯೂ ಉಸಿರೆತ್ತದಿರು ಸೋದರಿ…
ನೀನು ತುಂಬಿದ ಪಂಚಾಯತಿ ಸಭೆಯಲ್ಲಿ ಚಾಂಡಾಳಿಯೆಂದು
ಘೋಷಿಸಿ ಶಿಕ್ಷೆಗೊಳಗಾಗಬಹುದು!

(ರೇಣುಕಾ ನಿಡಗುಂದಿ)
ಸಂಕಲನದ ಉದ್ದಕ್ಕೂ ‘ನೀನು’ ಎಂದು ಯಾರೊಂದಿಗೋ ಮಾತಾಡುವಂತಿದೆ. ಈ ನೀನು ಕೇವಲ ಒಬ್ಬಿಬ್ಬರಲ್ಲ. ಅದು ತನ್ನ ಗಂಡನಿರಬಹುದು; ಅಮ್ಮನಿರಬಹುದು; ಪಂಚಾಯಿತಿ ಮುಖಂಡನಿರಬಹುದು; ಪಕ್ಕದ ಮನೆಯವನಾಗಿರಬಹುದು; ತುಂಡು ತೋಳಿನ ರವಿಕೆ ತೊಟ್ಟ ನಗರದ ಹೆಣ್ಣಿರಬಹುದು; ರಾಷ್ಟ್ರ ಎಂಬ ವ್ಯವಸ್ಥೆಯೇ ಇರಬಹುದು; ಯಾವುದೂ ತನ್ನದಾಗದ ಈ ಹೆಣ್ಣಿನ ಅನಾಥಭಾವ, ಮನೆ ಒಳಗೆ ಮತ್ತು ಹೊರಗೆ ಪ್ರತಿಕ್ಷಣ ಅನುಭವಿಸುವ ಪರಕೀಯತೆ ಅದೆಷ್ಟು ದಾರುಣವಾಗಿರಬಹುದು!
ಆ ‘ನೀನು’ ಎಂಬ ವ್ಯಕ್ತಿ ಶಿಷ್ಟ ಹೆಣ್ಣಾದಾಗ, ‘ನನ್ನ ಜಾಗದಲ್ಲಿ ನೀನಿದ್ದಿದ್ದರೆ’ ಎಂಬ ಪದ್ಯದಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ:
ಒಂದು ವೇಳೆ ನಿನ್ನ ಮಕ್ಕಳು
ಹಸು, ಎಮ್ಮೆ, ಕುರಿಗಳ ಹಿಂದೆ ಓಡಾಡುತ್ತಾ
ಪುಂಡತನ ಮಾಡುತ್ತಿದ್ದಾಗ
ಹೆಗಲಿಗೆ ಪಾಟಿಚೀಲ ಹೊತ್ತು
ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ನೋಡಿದಾಗ ನಿನಗೆ
ಹೇಗೆನಿಸುತ್ತಿತ್ತು?
ಬೆನ್ನು ಚಪ್ಪರಿಸುವ ಕೈಗಳೇ
ಹಠಾತ್ತಾಗಿ ಕೆಳಸರಿದು ಮೆದು ಮಾಂಸದ ಗಾತ್ರವನ್ನು ಅಳೆಯತೊಡಗಿದಾಗ
ಫೋಟೋ ತೆಗೆಯುವಾಗ ಕ್ಯಾಮರಾದ ಫೋಕಸ್
ಹಕ್ಕಳೆಗಟ್ಟಿದ ತುಟಿಗಳನ್ನು ಅಲಕ್ಷಿಸಿ
ಎದೆಯ ಉಬ್ಬಿನ ಮೇಲೆ ಕೇಂದ್ರಿತಗೊಂಡಾಗ
ಹೇಳು ಹೇಗೆನಿಸುತ್ತದೆಂದು.
ಒಬ್ಬ ಸಂತಾಲಿ ಹೆಣ್ಣಾಗಿ ‘ಅವರಿಗೆ’ ಅಂದರೆ ಸಾಮಾಜಿಕ ವ್ಯವಸ್ಥೆಗೆ ತಾನು ಏನಾಗಿದ್ದೇನೆ ಎಂಬ ಅರಿವು ಕವಿಗೆ ಇದೆ. ಅವರಿಗೆ ತನ್ನ ಕಪ್ಪು ಬಣ್ಣ ಪ್ರಿಯವಲ್ಲ; ಭಾಷೆ ಪ್ರಿಯವಲ್ಲ; ಉಡುಗೆತೊಡುಗೆ ಪ್ರಿಯವಲ್ಲ; ತನ್ನ ರೀತಿ ರಿವಾಜುಗಳು ಅವರಿಗೆ ಹಿಡಿಸುವುದಿಲ್ಲ… ಇತ್ಯಾದಿ ಇತ್ಯಾದಿ. ಆದರೆ ಪದ್ಯದ ಕೊನೆಯ ಚರಣವನ್ನ ಗಮನಿಸಿ:
ನನ್ನ ಬೆವರಿನಿಂದ ಬಲಿತ ಗೋಧಿಕಾಳು
ಕಾಡಿನ ಹೂವು, ಹಣ್ಣು, ಕಟ್ಟಿಗೆ
ಹೊಲದಲ್ಲಿ ಬೆಳೆದ ತರಕಾರಿಗಳು
ಮನೆಯಲ್ಲಿ ಸಾಕಿದ ಕೋಳಿಗಳು
ಅವರಿಗೆ ಬಲು ಪ್ರಿಯ
ಜಿಗಟು ಹಿಟ್ಟಿನಂತ ಬಿಗಿ ದೇಹ
ನನ್ನ ಮಾಂಸ ಅವರಿಗೆ ಬಲು ಪ್ರಿಯ!
ಸದಾ ಸೆನ್ಸೇಷನಲ್ ವಿಷಯಗಳನ್ನು ಬೆನ್ನಟ್ಟಿ ಹೋಗುವ ಮಾಧ್ಯಮ ಎಂಬ ರಣಹದ್ದುಗಳನ್ನು ಉದ್ದೇಶಿಸಿ ನಿರ್ಮಲಾ ಹೀಗೆ ಬರೀತಾರೆ:
ಈ ಎಲ್ಲಾ ಜನರು
ನಮ್ಮಲ್ಲಿ ದೇಸಿ ಸಂಸ್ಕೃತಿಯನ್ನು ಹುಡುಕುವರು
ಝಾರಖಂಡದ ಅಸ್ಮಿತೆಯಿಂದ ಗುರುತಿಸುವರು
ನೆಲ-ಜಲ-ಅರಣ್ಯದ ಸಮಸ್ಯೆಗಳ ಬಗ್ಗೆ
ನಮ್ಮ ಅಭಿಪ್ರಾಯಗಳನ್ನು ಬಯಸುವರು
ಅದೇ ಜನ ಸಭೆಯಲ್ಲಿ ಮಾತಾಡಿ ಮಾತಾಡಿ
ಬಾಯಾರಿದಾಗ ಬಿಸಲೆರಿ ಬಾಟಲನ್ನು ಚಾಚುತ್ತಾರೆ.
ಸ್ವತಂತ್ರ ರಾಷ್ಟ್ರವೊಂದು ಮೂಡಿದ ಮೇಲೆ ವಸಾಹತುಶಾಹಿಯ ಕಾಲ ಮುಗಿದು ಹೋಯಿತೆ? ರಾಷ್ಟ್ರದೊಳಗೇ ನಡೆಯುವ ವಸಾಹತುಶಾಹಿ ಆಕ್ರಮಣವನ್ನು ಸಹಿಸುವುದು ಸುಲಭವೇ? ಈ ಸಾಲುಗಳನ್ನ ಗಮನಿಸಿ:
ನಮ್ಮ ವಿಕಾಸದ ಅರ್ಥವೆಂದರೆ
ನಮ್ಮ ಕೇರಿಗಳನು ನಿರ್ನಾಮ ಮಾಡಿ ನಾಳೆ ಕಾರ್ಖಾನೆಗಳನು
ಸ್ಥಾಪಿಸುವುದಾಗಿದೆ
ಕೆರೆಗಳನು ಮುಚ್ಚಿ ರಾಜಮಾರ್ಗಗಳನು
ಅರಣ್ಯಗಳನ್ನು ನೆಲಸಮ ಮಾಡಿ ಅಧಿಕಾರಿಗಳಿಗಾಗಿ ಕಾಲೋನಿ
ನಿರ್ಮಿಸುವುದಾಗಿದೆ
ಹಾಗೆ ಪುನರ್ವಾಸದ ನೆಪದಲ್ಲಿ ನಮ್ಮನು
ನಮ್ಮದೇ ಊರ ಹೊರಗಟ್ಟಿ ಗಡಿಪಾರಾಗಿಸಿ
ತುತ್ತತುದಿಯಂಚಿಗೆ ತಳ್ಳುವುದಾಗಿದ್ದರೆ
ನಿನ್ನ ಈ ವಿಕಾಸದ ಮುಖ್ಯವಾಹಿನಿಗೆ
ಸೇರಿಕೊಳ್ಳಲು ನಾವು
ನೂರು ಬಾರಿ ಯೋಚಿಸಬೇಕಾಗಿದೆ!
ಇಷ್ಟೆಲ್ಲಾ ಹೇಳಿದ ಮೇಲೆ ಕೊನೆಯ ಸಾಲು ಅತ್ಯಂತ ಸ್ಪಷ್ಟವಾಗಿ,
ಕ್ಷಮಿಸಿ
ಪಟ್ನಾ, ರಾಂಚಿ, ದಿಲ್ಲಿಯಿಂದ ನಮಗಾಗಿ ಸಿದ್ಧಪಡಿಸಿ ತಂದ
ನಿಮ್ಮ ಈ ವಿಕಾಸದ ಪ್ರಸ್ತಾವವನು ತಿರಸ್ಕರಿಸುತ್ತೇನೆ!
ಮತ್ತೊಮ್ಮೆ ಎಂಬ ಪದ್ಯ ಆದಿವಾಸಿ ಸಮುದಾಯಗಳು ತಲುಪಿರುವ ಹತಾಶೆಯ ಆಳವನ್ನು ಬಿಂಬಿಸುತ್ತವೆ. ಇಲ್ಲಿ ಪ್ರತಿಯೊಂದು ಚರಣವೂ ‘ಮತ್ತೊಮ್ಮೆ’ ಎಂದು ಪ್ರಾರಂಭವಾಗುತ್ತದೆ. ಈ ಚರಣವನ್ನ ಗಮನಿಸಿ:
ಮತ್ತೊಮ್ಮೆ
ಶಬ್ದಗಳ ಆಕಾಶಬುಟ್ಟಿಯಲ್ಲಿ ಕುಳ್ಳಿರಿಸಿ
ಸಂಸತ್ತಿನ ಪಡಸಾಲೆಗೆ ಕರೆದೊಯ್ಯುವರು
ಅಲ್ಲಿ ನಮ್ಮ ಸಮಸ್ಯೆಗಳು
ಪುರುಷಾಹಂಕಾರದೊಂದಿಗೆ ಡಿಕ್ಕಿ ಹೊಡೆದು
ಇದ್ದ ಬಿದ್ದ ಕನಸುಗಳೆಲ್ಲವೂ
ಚಕಣಾ ಚೂರಾಗುವವು.
ಅಂದರೆ ವ್ಯವಸ್ಥೆ ಎಂಬ ಜಾಲದಲ್ಲಿ ಎಲ್ಲರೂ ಎಲ್ಲವೂ ಪರಕೀಯವೇ ಆದಾಗ ಅದು ಹುಟ್ಟಿಸುವ ಅನಾಥಭಾವ ಹೇಗಿರಬಹುದು? ಇಲ್ಲಿ ಎಲ್ಲರೂ ಪರಕೀಯರೇ. ಮೆರವಣಿಗೆಯ ಮುಂದಾಳತ್ವ ವಹಿಸಿರುವ ತುಂಡು ಬ್ಲೌಸಿನ ಮಹಿಳೆಯರು, ಧನ್ ಧನಾ ಧನ್ ಎಂದು ಮಾತಾಡುತ್ತಿರುವ ಮುಖ್ಯಮಂತ್ರಿಗಳು, ಪ್ರತಿಭಟನೆ ಮೆರವಣಿಗೆಯ ಹೆಂಗಸರನ್ನು ‘ಮಿತ್ರಾ, ಊರಿಗೆ ಸುಗ್ಗಿ ಬಂದಂತಾಗಿದೆ ಎಂದು ಜೊಲ್ಲು ಸುರಿಸುತ್ತಾ ಕಣ್ಣಲ್ಲೇ ನಮ್ಮನ್ನು ನುಂಗುವ ಬೀದಿ ಕಾಮಣ್ಣರು’, ‘ಗೋಡೆಗಂಟಿಸಿದ ಪೋಸ್ಟರುಗಳಲಿ ಬ್ರಾ ಪ್ಯಾಂಟಿಯಲ್ಲಿನ ಸಿನೆಮಾ ನಟಿಯರು ನಾಚಿಕೆಯಿಲ್ಲದೆ ನಾಯಕನ ತೋಳಲ್ಲಿ ಜೀಕುತ್ತಾ ನಮ್ಮನ್ನು ಕಂಡು ಅಣಕಿಸುವರು.’
‘ವಿಧಾನ ಸಭೆಯಲ್ಲಿ ನೆರೆ ಬಂದಿದೆ’ ಪದ್ಯದಲ್ಲಿನ ಪ್ರಖರವಾದ ಈ ರಾಜಕೀಯ ಪ್ರಜ್ಞೆಯನ್ನು ಗಮನಿಸಿ:
ಕೇಳಿಸಿಕೊಳ್ಳಲಿಲ್ಲವೇ ಮಂತ್ರಿಗಳು ಈಗಷ್ಟೇ ಹೇಳಿದ್ದೇನು ಅಂತ
ಸರಕಾರ ಉಳಿದರೆ
ನಿಮ್ಮನ್ನು ಮುಳುಗದಂತೆ ಕಾಪಾಡುತ್ತದಂತೆ.
ಮಾಧ್ಯಮಗಳ ರಣಬೇಟೆಯನ್ನು ಖಂಡಿಸುವ ರೀತಿಯನ್ನು ನೋಡಿ:
ದಿನಪತ್ರಿಕೆಗಳ ತಲೆಬರಹದಲ್ಲಿ
ಹಸಿವೆಯಿಂದ ಸತ್ತವರ
ಬಲಾತ್ಕಾರದ ಸುದ್ದಿಗಳಿಂದ
ರಂಗೇರುತ್ತಾ, ಸಿಂಗಾರಗೊಳ್ಳುವುದು
ಕೊನೆಗೂ ಎಲ್ಲಿಯ ತನಕ?
ಕೊನೆಗೆ ನಿರ್ಮಲಾ ಸಂತಾಲ್ ಪ್ರಾಂತ್ಯದ ವರ್ತಮಾನವನ್ನು ನೇರವಾಗಿ ಬಿಚ್ಚಿಡುತ್ತಾರೆ:
ಸಂತಾಲ್ ಪ್ರಾಂತ್ಯವೆಂಬುದು ಈಗೇನೂ ಉಳಿದಿಲ್ಲ!
ಇಲ್ಲಿನ ಜನ ತಮ್ಮ ಭಾಷೆ, ವೇಷಭೂಷಣದಲ್ಲಿಯೇ
ನಗರದ ಮಾರುಕಟ್ಟೆಯತ್ತ ಓಡುತ್ತಾರೆ!
ಅಂದರೆ ಸಮುದಾಯದ ಅಸ್ಮಿತೆ ವೇಷಭೂಷಣಕ್ಕೆ ಮಾತ್ರ ಸೀಮಿತವಾಗಿದೆ. ನಗರದ ಮಾರುಕಟ್ಟೆ ಎಲ್ಲರನ್ನೂ ಎಲ್ಲವನ್ನೂ ನುಂಗುವ ಪೆಡಂಭೂತವಾಗಿದೆ. ನೇರವಾಗಿ ಹೇಳಬೇಕೆಂದರೆ, Market is the Meta Narrative.
ಕುಟುಂಬದೊಳಗಿನ ಹೆಣ್ಣಾಗಿ ತನ್ನ ಅಸ್ಮಿತೆ
ಹೆಣ್ಣು ಹೆಣ್ಣಾಗುವುದು ಕುಟುಂಬದೊಳಗೆ. ನನಗೆ ಮೊದಲನೆಯ ತರಗತಿಯ ಮೊದಲನೆಯ ಪಾಠ ‘ಇವನು ಬಸವ, ಇವಳು ಕಮಲ’. ಎರಡನೆಯ ಪಾಠ ‘ಬಸವ ಏನು ಮಾಡುತ್ತಾನೆ? ಬಸವ ತಂದೆಗೆ ತೋಟದಲ್ಲಿ ಸಹಾಯ ಮಾಡುತ್ತಾನೆ. ಕಮಲ ಏನು ಮಾಡುತ್ತಾಳೆ? ಕಮಲ ತಾಯಿಗೆ ಅಡಿಗೆಮನೆಯಲ್ಲಿ ಸಹಾಯ ಮಾಡುತ್ತಾಳೆ.’
ಅಲ್ಲಿಂದ ಪ್ರಾರಂಭವಾಗುವ ಜೆಂಡರ್ ತರಬೇತಿ ಕುಟುಂಬದೊಳಗೆ ಗಟ್ಟಿಗೊಳ್ಳುತ್ತಾ ಹೋಗುತ್ತೆ. ಮದುವೆ ಮತ್ತು ತಾಯ್ತನಗಳಂತಹ ಪ್ರಮುಖ ವಿಷಯಗಳಲ್ಲಿ ಹೆಣ್ಣಿಗೆ ಆಯ್ಕೆ ಅಕಸ್ಮಾತ್ ಇದ್ದರೆ ಅದು ತುಂಬಾ ಸೀಮಿತ ನೆಲೆಯಲ್ಲಿ. ನಮ್ಮ ಅಪ್ಪನಿಗೆ ಇಂಥ ಗಂಡ ಬೇಕು ಅಂತ ಹೇಳಬಹುದೇನೋ, ಆದರೆ ಗಂಡನೇ ಬೇಡ ಅಂತ ಹೇಳುವ ಹಾಗಿಲ್ಲ. ಆ ಸವಲತ್ತೂ ಸಹ ಕೆಲವೇ ಹೆಂಗಸರಿಗೆ ಮಾತ್ರ.
ನಿರ್ಮಲಾ ಹೆಣ್ಣಾಗಿ ತಮ್ಮ ಅಸ್ಮಿತೆಯ ಪ್ರಶ್ನೆಗೆ ಹೇಗೆ ಎದುರಾಗುತ್ತಾರೆ? ‘ಅಷ್ಟು ದೂರ ಲಗ್ನ ಮಾಡಿಕೊಡಬೇಡ ಅಪ್ಪಾ’ ಎಂಬ ಪದ್ಯದಲ್ಲಿ ಕವಿ ಅದನ್ನ ಸ್ಪಷ್ಟಪಡಿಸ್ತಾ ಹೋಗ್ತಾರೆ:
ಎಲ್ಲಿ ಮನುಷ್ಯರಿಗಿಂತ ಹೆಚ್ಚು
ದೇವರಿರುವರೋ
ಆ ಊರಿಗೂ ನನ್ನ ಕೊಡಬೇಡ.
ಯಾವ ಕೈಗಳು ಯಾವೊಂದು ಗಿಡವನ್ನು ನೆಟ್ಟಿಲ್ಲವೋ
ಬೆಳೆಯನ್ನು ಬೆಳೆದಿಲ್ಲವೋ
ಎಲ್ಲಿ ನದಿ ಕಾಡು ಬೆಟ್ಟಗಳಿಲ್ಲವೋ
ಅಲ್ಲಿಗೂ ನನ್ನ ಲಗ್ನ ಮಾಡಿ ಕೊಡಬೇಡ…’
ಮೊದಲೇ ಹೇಳಿದ ಹಾಗೆ ನಿರ್ಮಲಾರ ಹೆಚ್ಚು ಕಮ್ಮಿ ಎಲ್ಲ ಕವಿತೆಗಳು ಒಂದು ರೀತಿಯ ಸಂವಾದದ ರೂಪದಲ್ಲಿ ಇವೆ. ಅಲ್ಲಿ ನಾನು-ನೀನು ಇಬ್ಬರಿದ್ದಾರೆ. ಆ ನೀನು ಗಂಡನಾದಾಗ, ಅಥವಾ ಕುಟುಂಬದ ಯಜಮಾನನಾದಾಗ, ನಿರ್ಮಲಾ ಕೇಳ್ತಾರೆ:
ನಾನೇನು ನಿನಗೆ…?
ದಣಿದು ಸುಸ್ತಾದಾಗ ಬಂದು
ತಲೆ ಆನಿಸುವ
ಒಂದು ದಿಂಬು!
ಒಂದು ಗೂಟ!
ಆಸತ್ತ ಬೇಸತ್ತ ಅಂಗಿಯನ್ನು
ಕಳಚಿ ನೇತು ಹಾಕಿದರಾಯ್ತು.
ನಿರ್ಮಲಾ ಹೆಣ್ಣಿನ ಅಪ್ಪನಿಲ್ಲದ ಅನಾಥ ಸ್ಥಿತಿಯನ್ನು ಹೀಗೆ ಪದಗಳಲ್ಲಿ ಹಿಡಿಯುತ್ತಾರೆ:
ಅಪ್ಪಾ, ಬಹಳ ನೆನಪಾಗುತ್ತಿ ನೀ?!
ಈಗಂತೂ ಮಾರುಕಟ್ಟೆಯ ಕುಡುಕರು
ಮನೆ ಅಂಗಳವನ್ನೆಲ್ಲಾ ಆವರಿಸಿಕೊಂಡಿರುವರು
ನನ್ನದೇ ಮನೆಯಲಿ ಅಡಗಿರುವೆನು ಭೀತಿಯಿಂದ
ಹಸಿವು, ನೀರಡಿಕೆಯ ಬಾಧೆಯಲೇ ನಿದ್ರಿಸುತ್ತೇನೆ
ರಾತ್ರಿಯಿಡೀ ಹೊರಬಾಗಿಲು ತೆರೆದೇ ಇರುವುದು
ಒಮ್ಮೊಮ್ಮೆ ಮುಂಚೆ ಬಾಗಿಲೂ.
ಸಮುದಾಯವೊಂದು ಅತ್ಯಂತ ದಾರುಣ ಸ್ಥಿತಿಯಲ್ಲಿರುವಾಗ ಸಂಬಂಧಗಳಿಗೆ ಅರ್ಥವಿರುತ್ತದೆಯೇ? ತನ್ನ ತಾಯಿಯೇ ತಲೆ ಹಿಡುಕಿಯಾದರೆ? ಈ ಸಾಲುಗಳನ್ನು ಗಮನಿಸಿ:
ಹೇಗೆ ಮರೆಯಲಿ ಆ ಇರುಳಿನ ಕಥೆ
ಬೇರಾರೂ ಅಲ್ಲ
ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು
ಪ್ರಸವ ವೇದನೆಯನ್ನು ಸಹಿಸಿ
ಜನ್ಮ ಕೊಟ್ಟ ತಾಯಿ
ನೀನೆ ಕ್ರೂರ ನಾಯಿಗಳ ಇರುಳಿನಲಿ
ನನ್ನನ್ನೊಂದು ತೋಳದ ಕೈಗೆ ಕೊಟ್ಟುಬಿಟ್ಟೆ!
ನನ್ನನ್ನೊಂದು ತೋಳದ ಕೈಗೆ ಕೊಟ್ಟುಬಿಟ್ಟೆ!
ತನ್ನವನ ಬಗ್ಗೆ ‘ನಿನ್ನ ದುಷ್ಕೃತ್ಯದ ಕತೆಗಳಿಗೆ ಲೆಕ್ಕವಿಲ್ಲ’ ಎಂದು ಪ್ರಾರಂಭವಾಗುವ ಒಂದು ಪದ್ಯ ಹೀಗೆ ಸಾಗುತ್ತೆ:
ಸಂಗತಿಗಳಿವೆ ಇನ್ನೂ ನೂರಾರು
ಈಗಲೂ ಹೊತ್ತು ತರುತ್ತಿ
ಪ್ರತಿ ರಾತ್ರಿ ಹೊಸ ಹೊಸ ಹೆಣ್ಣುಗಳನು
ಆದರೂ ನಾನೆಂದೂ
ಯಾರಲ್ಲೂ ಬಾಯಿಬಿಟ್ಟಿಲ್ಲ..
ಯಾಕೆಂದರೆ ನಿನ್ನ ಆದೇಶಗಳ ಬಗ್ಗೆ
ಅತ್ಯಂತ ಕಾಳಜಿ ಇದೆ ನನಗೆ
ನೀನು ಇರುಳಿಗೆ ಹಗಲೆಂದರೂ ಸೈ
ಹಗಲಿಗೆ ಇರುಳೆಂದರೂ ಸೈ
ಹೇಗಾದರೂ ಸೈ ಎಚ್ಚೆತ್ತುಕೋ ನೀನು? … ಇಲ್ಲವಾದಲ್ಲಿ?
ಅರ್ಥ ಮಾಡಿಕೋ ನೀನು?
ತನ್ನ ಸಮುದಾಯದೊಳಗೂ ತಾನೆಂದರೆ, ಹೆಣ್ಣೆಂದರೆ ಕೇವಲ ದೇಹ ಎಂಬ ಪರಿಕಲ್ಪನೆಗೆ ಹೇಗೆ ಎದುರಾಗುತ್ತಾರೆ?
ನನಗೆ ನೆನಪಿದೆ —
ನಾನು ಯಾವುದಾದರೂ ಯೋಜನೆಯನ್ನು ರೂಪಿಸುವುದರಲ್ಲಿ ತಲ್ಲೀನಳಾದಾಗ
ಅಥವಾ ಕೇರಿಯ ನಕ್ಷೆಯನ್ನು ಸಿದ್ಧಪಡಿಸುತ್ತಿದ್ದಾಗ
ನಿನ್ನೊಳು ಅಡಗಿರುತ್ತಿದ್ದ ಗಂಡಸು
ನನ್ನ ದೇಹದ ಭೂಗೋಳವನ್ನು ಓದಲು ತೊಡಗುತ್ತಿದ್ದ!
ಆದರೆ ನಾವು ನೀನು ಬಯಸಿದಂತೆ ನಿನ್ನ ಆಲೋಚನೆಗಳಲ್ಲಿ
ನೀನೆ ಹಾಕಿಟ್ಟ ಚೌಕಟ್ಟಿನಲ್ಲಿ ಮೂರ್ತಗೊಳ್ಳಬೇಕೆಂದರೆ
ಅದು ಹೇಗೆ ಸಾಧ್ಯ?
ತನ್ನವನೆನಿಸಿಕೊಂಡ ಗಂಡಸೂ ಪರಕೀಯನೇ ಎಂದು ಧ್ವನಿಸುವ ಈ ಸಾಲುಗಳನ್ನು ಗಮನಿಸಿ;
ಯಾವುದನ್ನೂ ಉಳಿಸಿಕೊಳ್ಳಲಿಲ್ಲ ನೀನು
ಅದೂ ಹೋಗಲಿ ತುಸುವಾದರೂ ಹೆಮ್ಮೆಪಟ್ಟುಕೊಳ್ಳುವಂತೆ
ನೀನು ಮರಳಿ ಬಂದಾಗ
ನನ್ನನ್ನು ನಾನು ಸಿದ್ಧಗೊಳಿಸಿಕೊಳ್ಳುವಂತೆ
ದೇಹ ಮನಸ್ಸನ್ನು ಉಳಿಸಲಿಲ್ಲ ನೀನು!
ಕೊನೆಗೆ ಮಾರ್ಮೂ ಮಗಳಿಗೆ ಎಂಬ ಪದ್ಯದಲ್ಲಿ ಹೆಣ್ಣಿಗೆ ದೇವರೂ ಧರ್ಮಗಳು ಸಹ ಪರಕೀಯವೇ ಎಂಬುದನ್ನು ಧ್ವನಿಸುವ ಈ ಸಾಲುಗಳನ್ನು ಗಮನಿಸಿ:
ಎಲ್ಲಕ್ಕಿಂತ ಹೆಚ್ಚಾಗಿ ದೇವರನ್ನು ಅದು ಹೇಗೆ ನಂಬುತ್ತಿ?
ಅದೇ ದೊಡ್ಡ ವ್ಯಂಗ್ಯ!
*****
ಕುಟುಂಬ ಮತ್ತು ಸಾಮಾಜಿಕ ವ್ಯವಸ್ಥೆ ಎರಡೂ ಅಪ್ಪಂತನದ ರೂಪಗಳೇ ಅನ್ನೋದನ್ನ ನಿರ್ಮಲಾ ಗುರುತಿಸಿದರೂ ಸಹ ತನ್ನನ್ನು ಈ ಮಟ್ಟಿಗಿನ ಹೀನಕ್ಕೆ ತಳ್ಳಿದ್ದರ ಬಗ್ಗೆ ವ್ಯವಸ್ಥೆಯ ಬಗ್ಗೆ ಇರುವ ಆಕ್ರೋಶ ಕುಟುಂಬದ ಬಗ್ಗೆ ಇಲ್ಲ ಎನ್ನುವುದು ನನ್ನ ಓದಿನಿಂದ ಹುಟ್ಟಿದ ಅನಿಸಿಕೆ. ಕುಟುಂಬದೊಳಗೆ ಗಂಡು ಹೆಣ್ಣಿನ ಪಾತ್ರಗಳಲ್ಲಿ ಸಮಾನತೆ ಇರಬೇಕು; ಬದಲಾವಣೆ ಬರಬೇಕು ಎಂದು ಸ್ಪಷ್ಟವಾಗಿ ಹೇಳುವುದಿಲ್ಲ ಅಂತ ಅನ್ನಿಸುತ್ತೆ.
ಸಾಮಾಜಿಕ ವ್ಯವಸ್ಥೆ ಯಾವುದನ್ನ ‘ಇದೇ ನಿಮ್ಮ ವಿಕಾಸದ ನಕ್ಷೆ’ ಅಂತ ಆದಿವಾಸಿ ಸಮುದಾಯದ ಮೇಲೆ ಹೇರೋದಕ್ಕೆ ಪ್ರಯತ್ನ ಪಡ್ತಾ ಇದೆಯೋ, ಅದನ್ನ ನಿರ್ಮಲಾ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ತಿರಸ್ಕರಿಸುತ್ತಾರೆ ಅನ್ನೋದನ್ನ ಈಗಾಗಲೇ ನೋಡಿದೀವಿ. ಹಾಗೆಯೇ ‘ನಾವು ಸುಮ್ಮನಿದ್ದೇವೆ’ ಎಂಬ ಪದ್ಯದಲ್ಲಿ ಸಮುದಾಯವಾಗಿ ತಾವು ಹೇಗೆ ಅಸಹಾಯಕರಾಗಿದ್ದೇವೆ ಎಂದು ಹೇಳುತ್ತಾ ಕೊನೆಗೆ ಒಂದು ಸತ್ಯವನ್ನು ಬಿಚ್ಚಿಡುತ್ತಾರೆ:
ಸತ್ಯವೆಂದರೆ
ಜಾಣ ಮೌನವನ್ನು ತೊಟ್ಟ ಜನರೊಳಗೆ
ನಾವು ಅವರ ಪಿಸುಗುಡುವಿಕೆಯನ್ನು
ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೇವೆ
ಒಳಗೊಳಗೆ
ಈ ಮೌನದ ವಿರುದ್ಧ
ಒಂದು ಸಾರ್ಥಕ ಕೂಗಿನ ರಣನೀತಿಯನ್ನು ರೂಪಿಸುತ್ತಿದ್ದೇವೆ.
ಆದರೆ ನಿರ್ಮಲಾ ಕುಟುಂಬದೊಳಗಿನ ಅಪ್ಪಂತನವನ್ನ ಅಷ್ಟು ನೇರವಾಗಿ ಧಿಕ್ಕರಿಸುವುದಿಲ್ಲ. ಅಲ್ಲಿ, ಅರ್ಥ ಮಾಡಿಕೋ ಅನ್ನುವ ಅನುನಯದ ಧ್ವನಿ ಇದೆ. ಒಂದು ಕಡೆ ಕುಟುಂಬದ ಅಪ್ಪಂತನವನ್ನು ಉದ್ದೇಶಿಸಿ ಹೇಳ್ತಾರೆ:
ಈ ಬಾರಿ ನಾನು ಸುಮ್ಮನಿರುವುದಿಲ್ಲ
ಕಸಿದುಕೊಂಡು ಮುರಿದುಹಾಕುವೆ ನಿನ್ನ ಕೊಳಲನ್ನು
ಈಗಲಾದರೂ ಇತ್ತ ನೋಡು
ಅವರು ನನ್ನನ್ನು ಹೊತ್ತೊಯ್ಯಲು ಬರ್ತಿದಾರೆ!
ಇಲ್ಲಿ ನಾನು-ನೀನು ಅಂದರೆ ಸಮುದಾಯ ಉಳಿಯಬೇಕು, ಅವರಿಂದ ಅಂದರೆ ಹೊರಗಿನವರಿಂದ ನನ್ನನ್ನು ಕಾಪಾಡು ಎಂಬ ಬೇಡಿಕೆ ಇದೆ. ನಿನ್ನಿಂದ ಅಂದರೆ ದೌರ್ಜನ್ಯದ ಮೂಲವಾದ ಕುಟುಂಬ ಎಂಬ ವ್ಯವಸ್ಥೆಯಲ್ಲಿರುವ ಲಿಂಗ ತಾರತಮ್ಯದಿಂದ ತನ್ನನ್ನು ಕಾಪಾಡಿಕೊಳ್ಳಬೇಕು ಎನ್ನುವ ಆಗ್ರಹವಿಲ್ಲ.
ಇದು ನನ್ನ ಗ್ರಹಿಕೆಗೆ ದಕ್ಕುವ ರೀತಿಯಲ್ಲಿ ಕಾಡನ್ನು ನಂಬಿದ, ಕೃಷಿಯ ಮೇಲೆಯೇ ಬದುಕುತ್ತಿರುವ ಸಮುದಾಯಕ್ಕೆ ಕುಟುಂಬ ಹೇಗಾದರೂ ಬದುಕಿ ಉಳಿಯಬೇಕು ಎನ್ನುವ ನೆಲೆಯಿಂದ ಹೊಮ್ಮಿದ ಒಂದು ಸತ್ಯ. ಕೃಷಿ ಕೆಲಸಕ್ಕೆಂದೇ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಕೃಷಿಕ ಕುಟುಂಬಕ್ಕೆ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಉಪದೇಶ ಮಾಡುವುದು ಅಧಿಕಪ್ರಸಂಗತನ ತಾನೇ?
ಆದರೂ ಸಹ ಹೆಣ್ಣಾಗಿ ಒಂದು ರೀತಿಯ ಎಚ್ಚರ ಅಂತೂ ಈ ಸಾಲುಗಳಲ್ಲಿ ಕಾಣಿಸುತ್ತೆ;
ಇದೆಂತಾ ವಿಡಂಬನೆ
ನಾವು ನಮ್ಮದೇ ಜಗತ್ತನ್ನು ಸ್ಥಾಪಿತ ಗಂಡಸಿನ ದೃಷ್ಠಿಯಿಂದ ನೋಡಲು
ಸಹಜವೆಂಬಂತೆ ಪಳಗಿದ್ದೇವೆ
ನಾನು ನನ್ನನ್ನು ನನ್ನದೇ ದೃಷ್ಟಿಯಿಂದ ನೋಡುತ್ತಾ
ನನ್ನದೇ ಜಾತಿಯಿಂದ ಮುಕ್ತಳಾಗಬಯಸುತ್ತೇನೆ.
ಕೊನೆಯದಾಗಿ ನನಗೆ ತುಂಬಾ ಇಷ್ಟವಾದ ಈ ಸಾಲುಗಳು ಒಂದು ದಾರ್ಶನಿಕ ಸತ್ಯವನ್ನ ಹೇಳ್ತಾ ಇದಾವೆ ಅಂತ ಅಂದುಕೊಂಡಿದೀನಿ.
ನಾನು ಮನೆ ಕಟ್ಟುತ್ತಿರುವೆನೋ
ಮನೆ ನನ್ನನ್ನು ಕಟ್ಟುತ್ತಿದೆಯೋ
ನಾನದನು ವಿವರಿಸಲಾರೆ.
ನಾವು ಕಟ್ಟಿಕೊಳ್ಳುವ, ಅದು ಮನೆಯೋ, ಸಂಬಂಧಗಳೂ, ಗ್ರಹಿಕೆಗಳೋ, ನಿಲುವುಗಳೋ ಏನೇ ಇರಬಹುದು, ಅವೆಲ್ಲವೂ ಇನ್ನೊಂದು ಸ್ತರದಲ್ಲಿ ನಮ್ಮನ್ನು ಕಟ್ಟುತ್ತವೆ ಹಾಗೂ ಕಟ್ಟಿ ಹಾಕುತ್ತವೆ ಎನ್ನುವುದನ್ನು ಅವು ಹೇಳುತ್ತಿವೆ.
ಭಾಗ ಮೂರು: ಢೇಪಚಾನ ಅಪ್ಪ
ಮೇಲೆ ಪ್ರಸ್ತಾಪಿಸಿದ ಎಲ್ಲ ಅಂಶಗಳಿಗೆ ಪೂರಕವಾಗಿ ಢೇಪಚಾನ ಅಪ್ಪ ಪದ್ಯದ ಕೊನೆಯ ಸಾಲುಗಳನ್ನ ಸಹ ಗಮನಿಸಬಹುದು. ಈಗ ಪದ್ಯವನ್ನ ಒಟ್ಟಿಗೆ ಓದಬಹುದು ಅಂತ ಅನ್ನಿಸುತ್ತೆ.
ಢೇಪಚಾನ ಬಾಬೂ
ನೀನಂತೂ ಎಲ್ಲವನ್ನೂ ತೊರೆದು
ಕಶ್ಮೀರಕ್ಕೆ ಹೋಗಿಬಿಟ್ಟೆ
ಹೊಟ್ಟೆಪಾಡಿಗಾಗಿ!
ಢೇಪಚಾನೂ ಓಡಿಹೋದ
ತನ್ನ ಗೆಳೆಯರೊಂದಿಗೆ ಆಸ್ಸಾಮಿಗೆ
ಸಾವಿರ ಬಾರಿ ತಿಳಿಹೇಳಿದರೂ ಸುಗಿಯಾ ಕೇಳಲಿಲ್ಲ
ಮುಂಗಲಿ, ಬುಧನಿ, ಬಟೋರನಾ ಜೊತೆಗೆ ಗಾಡಿಯಲ್ಲಿ ಕೂತು ಹೊರಟೇಹೋದಳು
ಭತ್ತದ ಕೊಯ್ಲಿಗೆಂದು ಬಂಗಾಳಕ್ಕೆ
ಕಳೆದ ಬಾರಿ ಬಂದು ಸವಿ ಸವಿಯಾಗಿ ಮಾತಾಡಿ ನಮ್ಮನ್ನೆಲ್ಲ ಕರೆದುಕೊಂಡು ಹೋದವನೇ
ಗಾಡಿ ತೆಗೆದುಕೊಂಡ ಬಂದಿದ್ದ
ನೆನಪಿದೆಯಾ ಎಷ್ಟು ಕಷ್ಟವಾಗಿತ್ತು
ಕೊಡುತ್ತೇನೆಂದು ಹೇಳಿದ ಕೂಲಿಯನ್ನೂ
ಸರಿಯಾಗಿ ಕೊಟ್ಟಿದ್ದಿಲ್ಲ
ನಿನ್ನನು ಪುಸಲಾಯಿಸಿ ಹೊರಗೆಲ್ಲೋ ಕಳಿಸಿ
ನನ್ನ ಮೈಸವರತೊಡಗಿದ್ದ..!
ಈ ಮುಂಗಲಿ, ಸುಗಿಯಾರಿಗೇನು ಗೊತ್ತು?
ಅಲ್ಲಿ ಏನೇನೆಲ್ಲ ನಡೆಯುತ್ತದೆಂದು?
ಸಂಕಟವಾಗುತ್ತದೆ ಎಲ್ಲರೂ ಹೋಗುವುದನು ನೋಡಿ
ಇರಲಿ, ಈಗ ತಾನೇ ಗೊತ್ತಾಗುತ್ತದೆ!
ಮೂರು ವರ್ಷಗಳಾದವು
ಈಗ ಛೋಟುವೂ ಐದು ವರ್ಷದವನಾದ
ಚಿತಕಬರಿ ಕರುವೂ ಈಗ ಆಕಳಾಗಿದೆ
ಕಾಡಿನ ಕಂದ ಮೂಲಗಳೂ ಕಡಿಮೆಯಾಗಿದೆ
ಮಹು ವಾದ ಬನಿ ಹನಿಯುವುದೂ ನಿಂತುಹೋಗಿದೆ
ಬಂಧನಾ, ಸೊಹರಾಯ್ ಕೂಡ ಕಳೆದವು
ಆದರೆ ನೀನು ಮಾತ್ರ ಬರಲಿಲ್ಲ!
ಕನಸಿನಲ್ಲಿ ಬಂದರೇನು ತನುಮನದ ಬಯಕೆಗಳೇನು ತಣಿಯುತ್ತವೆಯೇ?
ಊರುಕೇರಿ ಮನೆಯ ಬಗ್ಗೆಯಂತೂ ಗೊತ್ತೇ ಇದೆ
ಯಾರ ಪತಿ ಜೊತೆಗಿರುವುದಿಲ್ಲವೋ
ಅವರನ್ನು ಹೇಗೆ ಪೀಡಿಸುತ್ತಾರೆಂದು
ಗೋತಿಯಾ-ಭಾಯ್ ಸುತ್ತಮುತ್ತಲಿನ ಜನ
ಒಮ್ಮೆಯಂತೂ ಗೊತ್ತಿಲ್ಲ ಯಾರೋ
ರಾತ್ರೋ ರಾತ್ರಿ
ಹಿತ್ತಲಿನ ಎಲ್ಲಾ ಹಲಸನ್ನು ಕದ್ದುಕೊಂಡು ಒಯ್ದರು
ಮತ್ತು ಬಂಧನಾದಲ್ಲಿ ಘಟ್ಟದ ಮೇಲಿನ ಜನರು
ಹಂದಿಯನ್ನು ಕೊಯ್ದು ತಿಂದರು
ಒಂದು ದಿನವಂತೂ ವಿಪತ್ತು ಬಂದೆರಗಿತು
ಲಖನಾನ ಮಗನಿಗೆ ಹಾವು ಕಚ್ಚಿತು
ಎಲ್ಲರೂ ನಮ್ಮ ಮೇಲೆಯೇ ಮುಗಿಬಿದ್ದರು
ನನಗೆ ಮಾಟಗಾತಿ ಎನ್ನತೊಡಗಿದರು
ಅವರ ಕಂದನಿಗೆ ನಾನೇ ಏನೋ ಮಾಡಿದ್ದೇನಂತೆ
ಶರಬತಿಯಾ ಹಾವನ್ನು ನೋಡಿದ್ದಕ್ಕೆ ಬಚಾವಾದೆ
ಇಲ್ಲವಾದರೆ ಪಕಲೂ ಮುದಕಿಯಂತೆ
ನನ್ನನ್ನೂ ಜನ ಎಳೆದೊಯ್ಯುತ್ತಿದ್ದರು ವಿಚಾರಣೆಗೆ
ತುಂಬಿದ ಪಂಚಾಯತಿಯಲ್ಲಿ ತಲೆಬೋಳಿಸಿ
ಕುಣಿಸುತ್ತಿದ್ದರು ಬೆತ್ತಲೆ
ಬಾಯಿಗೆ ಮೂತ್ರ ಹೊಯ್ದು, ತುರುಕುತ್ತಿದ್ದರು ಮಲವನ್ನು!!
ಸಂತೆ ಬಾಜಾರಿನ ಕತೆ ಕೇಳಬೇಡ
ಈಗಲೂ ರಸ್ತೆಯಲ್ಲಿ ಸಿದ್ದೊ ಕಾನ್ಹೊ ಚೌಕಿನಲ್ಲಿ
ಬಾಜಾರಿನ ಜನ ಕೋಳಿಗಳನ್ನು ಕಿತ್ತುಕೊಳ್ಳುತ್ತಾರೆ
ಮಾವಿನಹಣ್ಣಿನ ಬುಟ್ಟಿಯನ್ನು ದ್ವಾರದಲ್ಲಿಯೇ ಇರಿಸಿ
ನಮ್ಮನ್ನು ಮಾತಿನಲ್ಲಿ ಮೈಮರೆಸಿ ಕಣ್ತಪ್ಪಿಸಿ ಕದಿಯುತ್ತಾರೆ
ರುಚಿ ನೋಡುವ ನೆಪದಲ್ಲಿ ತಿಂದು ಹಾಕುತ್ತಾರೆ
ನೇರಳೆ, ಬೋರೆಹಣ್ಣು ಖಜೂರವನ್ನೂ
ಕುಂಬಳಕಾಯಿ, ಝಿಂಗಾ, ಮಡಿವಾಳ ಹಾಗಲ, ಅಲಸಂದೆಯನ್ನು
ಚೌಕಾಶಿ ಮಾಡಿ ಮಾಡಿ ಸೋವಿಯಲ್ಲಿಯೇ ಒಯ್ಯುತ್ತಾರೆ
ಹೇಗೆ ಹೇಳಲಿ ಈಗಲೂ
ಅದೆಷ್ಟು ಉಪದ್ರವ ಕೊಡುತ್ತಾರೆ ಈ ಉಪದ್ರವಿಗಳು
ಆದಿವಾಸಿಗಳಿಗೆ ಉಪದ್ರವ ಕೊಡುವ ದಿಕ್ ದಿಕೂ
ಹೇಳುತ್ತಾರೆ “ಝಾರಖಂಡ ಬೇರೆಯಾದರೇ ಏನಂತೆ?
ಸೊಂತಾರರಿಗೆ ಎಪ್ಪತ್ತು ವರ್ಷದವರೆಗು ಬುದ್ದಿ ಬರುವುದಿಲ್ಲ!
ನಿನ್ನೊಂದಿಗೆ ಬರುತ್ತಿದ್ದ ಆ ಇಟ್ಟಿಗೆ ಭಟ್ಟಿಯವನು
ಈಗಲೂ ಬರುತ್ತಾನೆ ವಿನಾಕಾರಣ
ನಿನ್ನ ಬಗ್ಗೆ ಅಸಹ್ಯವಾದ ತಮಾಶೆ ಮಾಡುತ್ತಾನೆ
ಅವನ ನಡವಳಿಕೆ ಸರಿಯೆನಿಸುವುದಿಲ್ಲ ನನಗೆ
ಆದರೇನು ಮಾಡಲಿ?
ನೀನೇ ಹೇಳಿಹೋಗಿದ್ದೆಯಲ್ಲ
ಒಳ್ಳೆಯ ಮನುಷ್ಯ, ನಿನ್ನ ಖಾಸಾ ದೋಸ್ತಿಯಿದೆ
ಅನು ಆಪತ್ತಿಗೆ ನೆರವಾಗಬಲ್ಲ ಅಂತ
ನನಗೆ ಅವನ ನೆರವು ಬೇಕಿಲ್ಲ
ನಿನಗೇನು? ನನಗೆ ಗೊತ್ತು,
ಎಷ್ಟು ಬೆಲೆ ತೆರಬೇಕಾಗಬಹುದೆಂದು
ಹಾಗೂ ಇತ್ತೀಚೆಗೆ
ಅವರೆಲ್ಲ ಕೇರಿಗೆ ನುಗ್ಗಿಕೊಂಡು ಬರುತ್ತಿದ್ದಾರೆ
ನಿಧಾನವಾಗಿ ರಸ್ತೆ ಬದಿಯ ಜಮೀನು
ಎಲ್ಲರದೂ ಬಿಕರಿಯಾಗಿ ಹೋಗಿದೆ
ಕಷ್ಟಪಟ್ಟು ಕೆಂಪು ಕಾರ್ಡ ಮಾಡಿಸಿಕೊಂಡಿದ್ದೆ
ಅದರ ಪ್ರಯೋಜನವೇನೂ ಕಾಣುತ್ತಿಲ್ಲ
ಈಗಲೋ ಆಗಲೋ ಅಷ್ಟಿಷ್ಟು ಬಂದರೂ
ಆ ಪ್ರಧಾನ ಮೇಲೆ ಮೇಲಿನದೆಲ್ಲ ನುಂಗಿಬಿಡುತ್ತಾನೆ
ಮಳೆಗಾಲದಲ್ಲಿ ಮನೆ ಸೋರುತ್ತದೆ
ನೀನು ಹೊದೆಸಿ ಹೋಗಿದ್ದೆ ಹುಲ್ಲಿನ ಮಾಡನ್ನು
ಮತ್ತೆಲ್ಲಿ ಮಾಡಿಗೆ ಹುಲ್ಲು ಹೊದೆಸಿದ್ದೇನೆ ನಾನು ನನಗಂತೂ ಈ ಕೆಲಸ ಬರುವುದಿಲ್ಲ
ಈ ಬಾರಿಯಂತೂ ಇಡೀ ಮನೆಯೇ ಮಳೆಯಲ್ಲಿ
ಬಿದ್ದು ಹೋಗುತ್ತದೆನಿಸುತ್ತದೆ
ಇಂದಿರಾ ಆವಾಸಕ್ಕಾಗಿ ಸಾಕಷ್ಟು ಚಪ್ಪಲಿ ಸವೆಸಿದೆ
ಪ್ರಧಾನನಿಗೂ ಐವತ್ತರ ನೋಟನ್ನು ಕೊಟ್ಟೆ
ಆದರೆ ಇದುವರೆಗೂ ಏನೂ ಆಗಿಲ್ಲ
ಪೂರಾ ಒಂದೂವರೆ ವರ್ಷವಾಯಿತು
ಇನ್ನೂ ಬ್ಲಾಕಿನ ದೊಡ್ಡ ಸಾಹೇಬರ ಬಗ್ಗೆ ಏನು ಹೇಳಲಿ?
ಎಂಥಾ ಬೇಡಿಕೆಯನ್ನೊಡ್ಡುತ್ತಾನೆಂದರೆ?
ಹೇಳಲೂ ನಾಚಿಕೆಯಾಗುತ್ತದೆ ನಿನಗೆ ಬಹಳ ಸಿಟ್ಟು ಬರಬಹುದು
ಚೆನ್ನಾಗಿ ಒದ್ದು, ಗುದ್ದಿ, ಥಳಿಸಬಹುದು ನನ್ನನ್ನು,
ಇರಲಿ, ಇದೆಲ್ಲ ಅಭ್ಯಾಸವಾಗಿಹೋಗಿದೆ!
ಹೊಲ ಗದ್ದೆಯ ಸ್ಥಿತಿಯಂತೂ ಹದಗೆಟ್ಟಿದೆ
ಎರಡು ವರ್ಷದಿಂದ ಹೊಲ ಪಾಳುಬಿದ್ದಿದೆ
ಥೇಪಚಾ ಇದ್ದಾಗ, ಸಾಧ್ಯವಾದಷ್ಟೂ ಬೇಸಾಯ ಮಾಡುತ್ತಿದ್ದ
ಈಗಂತೂ ಅವನೂ ಇಲ್ಲ ನನಗಂತೂ ನೇಗಿಲನ್ನು ಹೂಡಲು ಬರುವುದಿಲ್ಲವಲ್ಲ
ಅದೇ..
ಬಹಳ ಕಷ್ಟಪಟ್ಟು ಪ್ರತಿದಿನ ನದಿಗೆ ಹೋಗಿ ನೀರು ತರುತ್ತೇನೆ
ಯಾವತ್ತಿನಿಂದ ಶಾಲೆಯ ಹ್ಯಾಂಡಪಂಪ್ ಕೆಟ್ಟುಹೋಗಿದೆಯೋ
ಪ್ರಧಾನನ ಭಾವಿಗೆ ಹೋದರೆ ಪ್ರಧಾನ ಸಿಡಿಮಿಡಿ ಮಾಡುತ್ತಾನೆ
ಶಾಲೆಯ ಮಾಸ್ತರನೂ ವರ್ಗ ಮಾಡಿಸಿಕೊಂಡು ಹೊರಟುಹೋದ
ಅವತ್ತಿನಿಂದ ಶಾಲೆಯೂ ಮುಚ್ಚಿಹೋಗಿದೆ.
ಕೂಲಿ-ನಾಲಿ ಮಾಡಿ ಬದುಕೋಣವೆಂದರೆ
ಇತ್ತೀಚೆಗೆ ಕೆಲಸವೂ ಸಿಗುತ್ತಿಲ್ಲ
ಊಟದ ಎಲೆ-ದೊನ್ನೆಗಳೂ ಬಿಕರಿಯಾಗುತ್ತಿಲ್ಲ
ಮತ್ತು ಚಾಪೆ ಗೀಪೆಗಳನ್ನೂ ಯಾರೂ ಖರೀದಿಸುತ್ತಿಲ್ಲ
ಪೊರಕೆ, ಬೀಸಣಿಕೆ, ಹಲ್ಲುಜ್ಜುವ ಕಡ್ಡಿಗೂ ವ್ಯಾಪಾರವಿಲ್ಲವೀಗ ಹಾದಿತಪ್ಪಿ ಸಣ್ಣ ಪುಟ್ಟ ವ್ಯಾಪಾರಿಗಳು ಬಂದರೂ ರುಪಾಯಿಗೆ ಎರಡು ಬೀಸಣಿಕೆ ಮತ್ತು
ನೂರು ರುಪಾಯಿಗೆ ಡಜನ್ನು ಚಾಪೆಗಳನ್ನು ಬೇಡುತ್ತಾರೆ
ಕೆಲಸ ಬೊಗಸೆ ಬಿಟ್ಟು ಇಡೀದಿನ ಅದರಲ್ಲಿಯೇ ಮುಳುಗು
ಅದರಿಂದಲೂ ಐವತ್ತು ಅರವತ್ತು ರುಪಾಯಿ ಗಳಿಸದಿದ್ದರೆ
ಅಷ್ಟು ಶ್ರಮಪಟ್ಟಿದ್ದಕ್ಕೂ ಏನು ಪ್ರಯೋಜನ?
ಇಟ್ಟಿಗೆ ಭಟ್ಟಿಯ ಸ್ಥಿತಿಯನ್ನೂ ಬಲ್ಲೆ ನೀನು
ಈ ಭಟ್ಟಿಯವನು ಎಷ್ಟು ಚಾಲಾಕಿ ಇದ್ದಾನೆ
ಈಗಲೂ ಒಂದು ದಿನದ ಕೂಲಿಯ ಬದಲಿಗೆ
ಐದು ರುಪಾಯಿಯಲ್ಲೇ ಸಾವಿರ ಇಟ್ಟಿಗೆ ಹೊರಿಸುತ್ತಾನೆ ಅಲ್ಲದೇ ದಿನವೊಂದಕ್ಕೆ ಐದಾರು ನೂರಕ್ಕಿಂತ
ಹೆಚ್ಚು ಹೊರಲೂ ಆಗುವುದಿಲ್ಲ ನನಗೆ
ಜೊತೆಗೆ ಅವನ ಚೇಷ್ಟೇ, ಕಿರುಕುಳ ಅದೂ ಸಹಿಸಬೇಕು!
ಇನ್ನೆಷ್ಟು ಹೇಳಲಿ ನಿನಗೆ ಯಾವು ಯಾವುದನ್ನು ಹೇಳಲಿ?
ನೀನಂತೂ ಎಲ್ಲಾ ಭಾರವನ್ನು ನನ್ನ ಹೆಗಲಿಗೆ ಹೊರಿಸಿ ಎಲ್ಲವನ್ನೂ ಝಾಡಿಸಿ ಕೊಡಹಿಕೊಂಡು ಹೊರಟುಹೋದೆ
ನಾನೆಲ್ಲಿ ಓಡಿ ಹೋಗಲಿ
ಯಾರ ಮೇಲೆ ಹೊರೆಸಿಹೋಗಲಿ?
ಅದೆಷ್ಟು ಕಷ್ಟ ಕೋಟಲೆಗಳನ್ನು ಸಹಿಸಿದೆ
ಆದರೆ ನಿನ್ನಂತೆ ಮಾರಿಕೊಳ್ಳಲಿಲ್ಲ
ಎಳ್ಳುಕಾಳಿನಷ್ಟು ಭೂಮಿಯನ್ನು ಸಹ
ನಿನ್ನ ವಿಶ್ವಾಸವನ್ನು ಮುರಿಯಲಿಲ್ಲ
ನಿನ್ನ ನೆನಪಿನಲ್ಲಿ ನಿತ್ಯವೂ ತುರುಬಿನಲ್ಲಿ
ಕೇದಿಗೆ ಹೂ ಮುಡಿದುಕೊಳ್ಳುವುದನ್ನು ಮರೆತಿಲ್ಲ ನಾ

