ಗೀರು ಬಿದ್ದ ಅದೃಶ್ಯ ಕೈಗಳು
ಮೊದಲು
ಗೀರುಬಿದ್ದ ಅದೃಶ್ಯ ಕೈಗಳ ಅವಕೃಪೆಗೆ ಒಳಗಾಗು
ಬೆವತು ಸುಕ್ಕಾದ ಮೈಯನ್ನು ಹಿಡಿಯಾಗಿಸಿ ನಿಂತುಬಿಡು
ಆದರೆ ಸುಮ್ಮನೆ ನಿಲ್ಲಬಾರದು
ಅಣಿಯಾಗಿರಬೇಕು
ನಂತರ
ಗೀರುಬಿದ್ದ ಅದೇ ಅದೃಶ್ಯ ಕೈಗಳು
ಗಡುಸು ನೀರಿನೊಳಗೆ ಕುತ್ತಿಗೆ ಹಿಡಿದು ಮುಳುಗಿಸುತ್ತವೆ
ನಿನಗೆ ಉಸಿರುಗಟ್ಟಬಹುದು
ಎದೆಯೊಡೆದು ಹೋಳಾಗಬಹುದು
ಕಣ್ಣು ಮಸುಕಾಗಿ ಮಬ್ಬಾಗಬಹುದು
ಕುತ್ತಿಗೆಯನ್ನ ಸ್ಪರ್ಶದ ಲವಲೇಶವೂ ಉಳಿಯದಂತೆ ಹಿಸುಕಿದ ತಕ್ಷಣ
ಎಲ್ಲವೂ ಮುಗಿಯಿತು ಎಂದುಕೊಳ್ಳಬೇಡ
ಒಂದಿಷ್ಟೇ ಗಾಳಿ ಸಿಕ್ಕರೂ ನಿಧಾನವಾಗಿ ಉಸಿರೆಳೆದುಕೊಂಡು ಮರಳಿ ತಯಾರಾಗು
ಗೀರು ಬಿದ್ದ ಕೈಗಳು
ಎದುರಿದ್ದ ಶತಮಾನಗಳಷ್ಟು ಹಳೆಯ ಕಲ್ಲುಜೋಪಡಿಗೆ
ಮೇಲಿಂದ ಮೇಲೆ ಹಿಡಿಯಾಗಿಸಿದ ನಿನ್ನ ಮೈಯನ್ನ ಸೆಣೆಯುತ್ತವೆ
ಬಡಿಯುತ್ತವೆ
ಕಡೆಗೆ
ನಿನ್ನ ಒಡಲೊಳಗೆ ಏನೆಂದರೆ ಏನೂ ಉಳಿಯದಂತೆ
ಹಿಂಡಿ ಬರಿದಾಗಿಸುತ್ತವೆ
ನಿನಗೆ ನೋವಾಗಿದ್ದು ನಿಜವಿರಬಹುದು
ಇರಲಿ
ಸುಮ್ಮನೆ ಗೀರುಬಿದ್ದ ಅದೃಶ್ಯ ಕೈಗಳನ್ನು ದೂರುವುದು ಬೇಡ
ನಿನ್ನ ಮೈಯೊಳಗಿನ ಮೂಳೆಗಳು ಲಟಲಟನೆ ಮುರಿಸಿಕೊಂಡಿರಬಹುದು
ಆದರೆ ನೀನು ಒಳಗೇ ಹದಗೊಂಡಿದ್ದು ಸುಳ್ಳಲ್ಲವಲ್ಲ!
ಈಗ ನೀನೇ ನೋಡು
ಮೈಗಂಟಿದ ನೆನಪುಗಳ ಕೊಳೆ ಹೇಗೆ ಹರಿಯುತ್ತಿದೆ
ಮೊದಲು ನೆಪಗಳ ನೀಡುವುದನ್ನು ಬಿಡು
ಎರಡೂ ತುದಿಕಾಣದ ತಂತಿಗೆ ನೇತುಬೀಳುವುದನ್ನು ತಪ್ಪಿಸಬೇಡ
ಎದೆ ಸುಡುವ ಬಿಸಿಲಿದೆ
ಸಾಕೆನ್ನುವಷ್ಟು ಮೈ ಕಾಯಿಸಿಕೋ
ಮಾಸದ ಕೊಳೆಯ ಗುರುತು ಮಾತ್ರ
ಏನೆಂದರೆ ಏನೊಂದು ಉಳಿಯದೆ ಒಣಗಿ ಬರಿದಾಗಿಬಿಡು
ಒಂದೇ ಸಂಜೆಯೊಳಗೆ ಮತ್ತೊಮ್ಮೆ ನೀನು ಶುಭ್ರವಾಗಬಹುದು
ನೋಯಿಸಿದಕ್ಕೆ
ಗೀರುಬಿದ್ದ ಅದೃಶ್ಯ ಕೈಗಳನ್ನ ದೂರಬೇಡ
ಹದಗೊಳಿಸಿದಕ್ಕೆ
ಋಣಿಯಾಗಿರು
ಸಂದೀಪ್ ಈಶಾನ್ಯ ಮೂಲತಃ ಮೈಸೂರಿನವರು .
ಮಾರ್ಕೆಟಿಂಗ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದವರು.
ಸುದ್ದಿ ವಾಹಿನಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ. ಆಂಗ್ಲ ಕಾದಂಬರಿಯೊಂದರ ಸಹ ಲೇಖಕರು.ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಇವರಿಗೆ ಸಿನಿಮಾ, ಸಾಹಿತ್ಯ, ಪ್ರವಾಸದಲ್ಲಿ ಆಸಕ್ತಿ.
ಇವರ “ಮೆಟ್ರೋ ರೈಲಿನ ಹುಡುಗಿ” ಕವನ ಸಂಕಲನ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ