ಅದು ಅಜ್ಜಿಗೆ ಮೀಸಲಿಡುವ ದಿನವಾಗಿತ್ತು. ಮಕ್ಕಳೆಲ್ಲರೂ ಒಟ್ಟಿಗೆ ಸೇರುವುದು ವಾಡಿಕೆಯಾಗಿತ್ತು. ಅಜ್ಜಿಗೆ ಪರಮ ಪ್ರಿಯಳಾಗಿದ್ದ ಕೊನೆಯ ಮಗಳು ಮಾತ್ರ ಗಂಡನ ಮನೆಯಿಂದ ಬಂದಿರಲಿಲ್ಲ. ಅಣ್ಣಂದಿರು ಒತ್ತಾಯ ಮಾಡಿ ಕರೆದಿದ್ದರೂ ಅವಳ ಗಂಡ ಅದೇನೋ ಹಳೆಯ ಮುನಿಸಿನಿಂದಾಗಿ ಹೆಂಡತಿಯನ್ನು ತವರಿಗೆ ಕಳಿಸಿರಲಿಲ್ಲ. ಅಕ್ಕಂದಿರೆಲ್ಲ ಅವಳನ್ನು ನೆನೆಸಿಕೊಂಡು ಕಣ್ಣೀರಿಡುತ್ತಲೇ ಅಮ್ಮನಿಗೆ ಮೀಸಲಿಟ್ಟಿದ್ದರು. ಆ ರಾತ್ರಿ ಎಲ್ಲರೂ ಮಲಗಿದಾಗ ನಡುರಾತ್ರಿಯಲಿ ನೀಲಿಯ ದೊಡ್ಡಮ್ಮ ಇದ್ದಕ್ಕಿದ್ದಂತೆ ಕುಣಿದು ಕುಪ್ಪಳಿಸಿದ್ದಳು. ಎಲ್ಲರೂ ಗಾಬರಿಗೊಂಡು ಎದ್ದು ವಿಚಾರಿಸಿದಾಗ ‘ನನ್ನ ಅಪ್ಪಿಯನ್ನು ತಂದು ಕೊಡಿ’ ಎಂದು ಕಣ್ಣು ಕೆಂಪು ಮಾಡಿ ಅಬ್ಬರಿಸಿದ್ದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಐದನೆಯ ಕಂತು ನಿಮ್ಮ ಓದಿಗೆ
“ಅಂತೂ ಶಣಿಯಾರಜ್ಜ ಜೀವ ಬಿಟ್ಟ!” ಹೊಳೆಸಾಲಿನ ಎಲ್ಲರ ಬಾಯಲ್ಲೂ ಆ ದಿನ ಇದೇ ಮಾತು. ನೀಲಿಯೂ ಅಮ್ಮನೊಂದಿಗೆ ಶಣಿಯಾರಜ್ಜನ ಹೆಣ ನೋಡಲು ಹೋಗಿದ್ದಳು. ಸತ್ತ ಮನೆಯಲ್ಲಿ ದುಃಖದ ಛಾಯೆಯಿದ್ದರೆ ಅಲ್ಲಿ ಮಾತ್ರ ಬರಿಯ ನಗೆಚಟಾಕಿಗಳೇ ತುಂಬಿಹೋಗಿದ್ದವು. ಹೆಚ್ಚಿನವರೆಲ್ಲರೂ ಏನೋ ಒಂದು ತಮಾಷೆಯ ಸಂಗತಿ ನಡೆದಿದೆಯೆಂಬಂತೆ ಅಂತಿಮಯಾತ್ರೆಗೆ ತಯಾರಿ ನಡೆಸಿದ್ದರು. ನೀಲಿಯ ಕೈಹಿಡಿದು ಮರಳುವಾಗ ಅಮ್ಮ, “ಅಂತೂ ಬದುಕು ಮುಗಿಸಿಕೊಂಡು ಹೋದ ಮಾರಾಯ್ತಿ. ಎಲ್ಲಿಯಾದರೂ ನಾಯಿ, ನರಿ ಪಾಲಾಗುವನೇನೋ ಎಂದು ಹೆದರಿದ್ದೆ.” ಎಂದು ನಿರಾಳವಾಗಿದ್ದಳು. ಸತ್ತ ಇಲಿಗಳನ್ನು ಸುಲಿದು ಕೋಲಿನಲ್ಲಿ ನೇತಾಡಿಸಿಕೊಂಡು ತಿರುಗಾಡುತ್ತಿದ್ದ ಶಣಿಯಾರಜ್ಜನ ಚಿತ್ರ ನೀಲಿಯ ಕಣ್ಣೆದುರು ತೇಲಿಬಂತು.
ಹೊಳೆಸಾಲಿನಲ್ಲಿ ಯಾರೂ ಇಲಿಯನ್ನು ತಿನ್ನುತ್ತಿರಲಿಲ್ಲ. ಆದರೆ ಶಣಿಯಾರಜ್ಜನಿಗೆ ಇಲಿಗಳೆಂದರೆ ಪ್ರಾಣವಾಗಿತ್ತು. ಅಷ್ಟಕ್ಕೂ ಅವನು ಎಲ್ಲದರಲ್ಲಿಯೂ ಊರಿನವರೆಲ್ಲರಿಗಿಂತ ಬೇರೆಯೇ ಆಗಿದ್ದ. ಕೆಸುವಿನೆಲೆಯ ಮೇಲಿನ ನೀರ ಹನಿಯಂತೆ ಯಾವುದನ್ನು ಹಚ್ಚಿಕೊಳ್ಳದೇ ಬದುಕು ಮುಗಿಸಿದ್ದ. ಹಾಗಂತ ಅವನೇನು ಸನ್ಯಾಸಿಯಲ್ಲ. ಸಾಲಲ್ಲಿ ಎಂಟು ಮಕ್ಕಳನ್ನು ಹುಟ್ಟಿಸಿದ ಮೇಲೆ ಅವುಗಳನ್ನೆಲ್ಲ ಸಾಕುವ ದರಕಾರ ಬೇಡವೆಂದು ಹೀಗೆ ಸಂಸಾರಕ್ಕೆ ಬೆನ್ನು ಹಾಕಿದನೊ? ಅಥವಾ ಊರಿನವರೆಲ್ಲ ಹೇಳುವಂತೆ ಕಾಡು ಹಂದಿ ತಿಂದನಂತರ ಬಿಟ್ಟುಹೋದ ಸಾಯದ ದೆವ್ವ ಅವನಲ್ಲಿಗೆ ಮತ್ತೆ ಮರಳಲೇ ಇಲ್ಲವೊ? ತಿಳಿಯದು. ಹೊಳೆಸಾಲಿನಲ್ಲಿ ಅಪರೂಪಕ್ಕೆ ಹಂದಿಬಾಡನ್ನು ಎಲ್ಲರೂ ಹಂಚಿ ತಿನ್ನುವುದಿತ್ತು. ಆದರೆ ಅದನ್ನು ತಿಂದು ನಲವತ್ತೈದು ದಿನಗಳವರೆಗೆ ತಮ್ಮ ಸಾಯದ ದೆವ್ವ ತಮ್ಮನ್ನು ಬಿಟ್ಟು ಹೋಗುತ್ತದೆಯೆಂಬುದು ಅವರ ನಂಬಿಕೆಯಾಗಿತ್ತು. ನಲವತ್ತೈದು ದಿನಗಳ ನಂತರ ಅವರು ಮತ್ತೆ ಮೊದಲಿನ ಮನುಷ್ಯರಾಗುತ್ತಿದ್ದರು. ಶಣಿಯಾರಜ್ಜ ತನ್ನ ಕೊನೆಯ ಮಗಳು ಹುಟ್ಟಿದ ಒಂದು ವರ್ಷಕ್ಕೆ ಹೀಗೆ ಹಂದಿಯ ಬಾಡೂಟ ಮಾಡಿ ಹಾಸಿಗೆ ಹಿಡಿದುಕೊಂಡು ಮಕ್ಕಿಗದ್ದೆಯ ಮಾಳಕ್ಕೆ ಹೋದವನು ಅಲ್ಲಿಯೇ ನೆಲೆಯಾಗಿಬಿಟ್ಟಿದ್ದ.
ಮಕ್ಕಿಗದ್ದೆಯೆಂದರೆ ಊರಿನ ಮೇಲ್ಬಾಗದಲ್ಲಿ ಕಾಡಿಗೆ ಹೊಂದಿಕೊಂಡಿರುವ ಎತ್ತರವಾದ ಪ್ರದೇಶದಲ್ಲಿರುವ ಭತ್ತದ ಗದ್ದೆ. ಅಲ್ಲಿಗೆ ಹೊಳೆಬೇಸಾಯ ಇಲ್ಲದ್ದರಿಂದ ಮಳೆಗಾಲದಲ್ಲಿ ಮಾತ್ರವೇ ಭತ್ತ ಬೆಳೆಯುತ್ತಿದ್ದರು. ಬೆಳೆಯನ್ನು ಕಾಡು ಪ್ರಾಣಿಗಳು ತಿಂದು ಹೋಗಬಾರದೆಂದು ಸುತ್ತಲೂ ಬೇಲಿಕಟ್ಟಿ ನಡುವಿನಲ್ಲಿ ಒಬ್ಬರು ಮಾತ್ರವೇ ಮಲಗಬಹುದಾದ ನಾಲ್ಕು ಕಂಬಗಳ ಮೇಲೆ ನಿಂತಿರುವ ಮಾಳವೆಂಬ ಪುಟ್ಟ ಮನೆಯನ್ನು ಕಟ್ಟುತ್ತಿದ್ದರು. ಶಣಿಯಾರಜ್ಜನಿಗೆ ಆ ಮನೆ ಬೇಸಿಗೆಯಲ್ಲಿಯೂ ಆಸರೆಯಾಯಿತು. ಎಲ್ಲ ಬೆಳೆಯನ್ನು ಒಕ್ಕಿಯಾದಮೇಲೆ ಅಲ್ಲೆಲ್ಲ ಚೆಲ್ಲಿರುವ ಭತ್ತವನ್ನು ಒಟ್ಟುಗೂಡಿಸಿ, ಅದನ್ನು ಒಂದು ಮಣ್ಣಿನ ಗಡಿಗೆಯಲ್ಲಿ ಬೇಯಿಸಿ, ತಾನೇ ನಿರ್ಮಿಸಿರುವ ಒಳಕಲ್ಲಿನಲ್ಲಿ ಕುಟ್ಟಿ ಕೆಂಪು ಕುಚಲಕ್ಕಿಯನ್ನು ಅವನೇ ತಯಾರಿಸಿಕೊಳ್ಳುತ್ತಿದ್ದ. ಕಾಡಿನಂಚಿನ ಒರತೆಯಿರುವ ಜಾಗದಲ್ಲಿ ಪುಟ್ಟ ಹೊಂಡ ತೋಡಿ ನೀರಿಗೆ ಆಸರೆ ಮಾಡಿಕೊಂಡಿದ್ದ. ಅದೇ ನೀರನ್ನು ಚಿಮುಕಿಸಿ ಒಂದಿಷ್ಟು ತರಕಾರಿಗಳನ್ನು ಬೆಳೆಯುತ್ತಿದ್ದ. ಅಲ್ಲಿಗೆ ಜೀವನಕ್ಕೆ ಬೇಕಾದವುಗಳೆಲ್ಲ ಅಲ್ಲಿಯೇ ದಕ್ಕಿದಂತಾಗಿತ್ತು. ತರಕಾರಿ ತಿಂದು ಬಾಯಿ ಚಪ್ಪೆಗಟ್ಟಿದರೆ ಮೊಲವನ್ನೋ, ಇಲಿಯನ್ನೋ, ಉಡವನ್ನೋ ಹೊಡೆದು ಸುಟ್ಟು ಹುಡಿಹಾಕಿ ತಿನ್ನುತ್ತಿದ್ದ. ಅವನ ಇಲಿತಿನ್ನುವ ಚಟ ಮನೆಯವರಿಗ್ಯಾರಿಗೂ ಸೇರುತ್ತಿರಲಿಲ್ಲವಾಗಿ ಅಪರೂಪಕ್ಕೆ ಮನೆಗೆ ಬಂದಾಗಲೂ ಅವನಿಗೆಂದು ಪ್ರತ್ಯೇಕವಾದ ಬಟ್ಟಲಿನಲ್ಲಿ ಬಡಿಸುತ್ತಿದ್ದರು. ಊರಿಗೆ ಬರುವಾಗ ತಾನು ಮಕ್ಕಿಗದ್ದೆಯಲ್ಲಿ ಬೆಳೆದ ಬಸಳೆ, ಬದನೆ, ಹರಿವೆ, ಬೆಂಡೆಗಳೆಲ್ಲ ತುಂಬಿದ ಹಸಿರು ಬುಟ್ಟಿಯನ್ನೇ ಹೊತ್ತುಕೊಂಡು ಬರುತ್ತಿದ್ದನಾದರೂ ಮನೆಯವರೆಗೆ ಅದ್ಯಾವುದೂ ತಲುಪುತ್ತಿರಲಿಲ್ಲ. ಶಣಿಯಾರಜ್ಜ ಮಾತನಾಡಿದ್ದನ್ನು ಕೇಳಿದವರೇ ಅಲ್ಲಿ ವಿರಳ. ಇತ್ತೀಚೆಗಂತೂ ಎಲ್ಲವನ್ನೂ ಕೈಬಾಯಿ ಸನ್ನೆಯಲ್ಲಿಯೇ ಮುಗಿಸಿಬಿಡುತ್ತಿದ್ದ. ಊರಿನ ಸಾಕ್ಷಿಪ್ರಜ್ಞೆಯಂತೆ ಸುಮ್ಮನೆ ಎಲ್ಲವನ್ನೂ ನೋಡುತ್ತ ಓಡಾಡಿಕೊಂಡಿದ್ದ ಶಣಿಯಾರಜ್ಜ ಒಂದು ದಿನ ಮಕ್ಕಿಗದ್ದೆಯ ಮಾಳದಲ್ಲಿ ಮಲಗಿದವನು ಮೇಲೇಳದೇ ಹಾಗೆಯೇ ಹಗಲುರಾತ್ರಿ ಬಿದ್ದುಕೊಂಡಿದ್ದ.
ಆಚೀಚೆ ಸುಳಿಯುವರ‍್ಯಾರೋ ಊರಿನಲ್ಲಿರುವ ಮಕ್ಕಳಿಗೆ ವಿಷಯ ಮುಟ್ಟಿಸಿದರೂ ಅವರೇನೂ ಅದರಿಂದ ವಿಚಲಿತರಾಗಲಿಲ್ಲ. ಅಪ್ಪನ ನೆರವಿಲ್ಲದೇ ಅವಿಭಕ್ತ ಕುಟುಂಬದ ನೆರಳಿನಲ್ಲಿ ಬೆಳೆದ ಅವರಿಗೆ ಅವರ ಬದುಕಿನ ಚಿಂತೆಯೇ ಹಾಸಿ ಹೊದೆಯುವಷ್ಟಿತ್ತು. ಆದರೂ ಹಾಗೆಯೇ ಸಾಯಲು ಬಿಡಬಾರದೆಂದು ಮನೆಗೆ ತರುವ ಮನಸ್ಸು ಮಾಡಿದರಾದರೂ ಅವನನ್ನು ಮಲಗಿಸುವುದು ಎಲ್ಲೆಂಬ ಸಮಸ್ಯೆಗೆ ಎಷ್ಟು ಚರ್ಚಿಸಿದರೂ ಪರಿಹಾರ ಸಿಗಲಿಲ್ಲ. ಕೊನೆಗೆ ಎಲ್ಲರೂ ಯೋಚಿಸಿ ತೋಟದ ಮೂಲೆಯಲ್ಲೊಂದು ಮಾಳವನ್ನು ಅವನಿಗಾಗಿ ಕಟ್ಟಿ ಅಲ್ಲಿಯೇ ತಂದು ಮಲಗಿಸಿದರು. ದಿನದ ಮೂರು ಹೊತ್ತು ಊಟವನ್ನು ತಂದು ತಮ್ಮ ಕರ್ತವ್ಯವಾಯಿತೆಂಬಂತೆ ನಡೆಯುತ್ತಿದ್ದರು. ಇದ್ದಕ್ಕಿದ್ದಂತೆ ತಮ್ಮ ತೋಟದ ಆಚೆಯಲ್ಲಿ ಎದ್ದುನಿಂತ ಪುಟ್ಟ ಅಟ್ಟಣಿಗೆಯ ಮನೆಯನ್ನು ಕಣ್ಣರಳಿಸಿ ನೋಡಿದ ನೀಲಿ ಅದರಲ್ಲಿ ಏನಿರಬಹುದೆಂದು ಮೆಲ್ಲನೆ ಮೇಲೆ ಹತ್ತಿ ನೋಡಿದಾಗ ಊರಿನ ಕರಿನಾಯಿಯೊಂದು ಶಣಿಯಾರಜ್ಜನಿಗಿಟ್ಟ ಊಟವನ್ನು ಕಬಳಿಸುತ್ತಿತ್ತು. ಇವಳ ಕತ್ತು ಕಂಡದ್ದೇ ಪಟ್ಟನೆ ನೆಗೆದು ಓಡಿಹೋಯ್ತು. ಶಣಿಯಾರಜ್ಜ ಮಾತ್ರ ಇದ್ಯಾವುದೂ ತನಗೆ ಸಂಬಂಧಿಸಿದ್ದಲ್ಲವೆಂಬಂತೆ ಸೂರು ನೋಡುತ್ತಾ ಮಲಗಿದ್ದ. ಮನೆಗೆ ಬಂದ ನೀಲಿ ಶಣಿಯಾರಜ್ಜನನ್ನು ಅಲ್ಲಿ ಮಲಗಿಸಿದ್ದರ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಮನೆಯವರೆಲ್ಲರಲ್ಲಿಯೂ ಕೇಳಿ ಸರಿಯಾದ ಉತ್ತರ ಸಿಗದೇ ನಿರಾಶಳಾಗಿದ್ದಳು. ದಿನವೂ ಹತ್ತಾರು ಸಲ ಮಾಳದ ಕಡೆಗೆ ಹೋಗಿ ಶಣಿಯಾರಜ್ಜನಿಂದ ಏನಾದರೂ ಸಂಜ್ಞೆ ಬರಬಹುದೇ ಎಂದು ಕಾಯುತ್ತಿದ್ದಳು. ಕೊನೆಗೂ ಒಂದು ದಿನ ಶಣಿಯಾರಜ್ಜ ಹೊಳೆಸಾಲಿಗೆ ಟಾಟಾ ಹೇಳಿದ್ದ.
ಸಾಲಲ್ಲಿ ಎಂಟು ಮಕ್ಕಳನ್ನು ಹುಟ್ಟಿಸಿದ ಮೇಲೆ ಅವುಗಳನ್ನೆಲ್ಲ ಸಾಕುವ ದರಕಾರ ಬೇಡವೆಂದು ಹೀಗೆ ಸಂಸಾರಕ್ಕೆ ಬೆನ್ನು ಹಾಕಿದನೊ? ಅಥವಾ ಊರಿನವರೆಲ್ಲ ಹೇಳುವಂತೆ ಕಾಡು ಹಂದಿ ತಿಂದನಂತರ ಬಿಟ್ಟುಹೋದ ಸಾಯದ ದೆವ್ವ ಅವನಲ್ಲಿಗೆ ಮತ್ತೆ ಮರಳಲೇ ಇಲ್ಲವೊ? ತಿಳಿಯದು.
ಹೊಳೆಸಾಲಿನಲ್ಲಿ ಸತ್ತವರೆಲ್ಲರೂ ಅವರ ಹನ್ನೆರಡನೆಯ ದಿನಕ್ಕೆ ಮತ್ತೆ ಮನೆಗೆ ಮರಳುತ್ತಿದ್ದರು. ದೇಹವಾಗಿಯಲ್ಲದಿದ್ದರೂ ಕೊಲೆಯೆಂಬ ದೈವವಾಗಿ ಮನೆಮಂದಿಯಲ್ಲಿ ಯಾರಾದರೊಬ್ಬರ ಮೈಮೇಲೆ ಬಂದು ಮನೆಯವರೆಲ್ಲರ ಯೋಗಕ್ಷೇಮ ವಿಚಾರಿಸಿ, ಮುಂದೆಯೂ ತಾನು ಅವರನ್ನೆಲ್ಲ ದೈವವಾಗಿ ಕಾಯುವುದಾಗಿ ತಿಳಿಸಿ ಎಲ್ಲರೂ ಸನ್ಮಾರ್ಗದಲ್ಲಿರುವಂತೆ ಎಚ್ಚರಿಸಿ ಹೋಗುವುದು ವಾಡಿಕೆಯಾಗಿತ್ತು. ಸಾಮಾನ್ಯವಾಗಿ ತಮಗೆ ಇಷ್ಟವಿದ್ದವರ ಮೈಮೇಲೆ ಅವರು ಬರುವುದು ವಾಡಿಕೆಯಾಗಿತ್ತು. ಮಾತಾಡುವುದನ್ನೇ ಬಿಟ್ಟಿದ್ದ ಶಣಿಯಾರಜ್ಜ ಈಗ ಬಂದು ಏನು ಹೇಳುತ್ತಾನೆಂದು ಕೇಳಲು ನೀಲಿ ಕಾತರಳಾಗಿದ್ದಳು. ಊರಿನಲ್ಲಿರುವ ಎಲ್ಲರಿಗೂ ಈ ಕುತೂಹಲವಿದ್ದಂತೆ ಕಾಣುತ್ತಿತ್ತು. ಶಣಿಯಾರಜ್ಜನಿಗೆ ಮೀಸಲಿಡುವ ದಿನದ ತಯಾರಿ ಹೊಳೆಸಾಲಿನಲ್ಲಿ ಭರ್ಜರಿಯಾಗಿಯೇ ನಡೆದಿತ್ತು. ಜೀವವಿದ್ದಾಗ ಇಲಿ ತಿನ್ನುವವನೆಂದು ಬೈಯ್ಯುತ್ತಿದ್ದ ಮನೆಯವರು ಏನಾದರಾಗಲಿ ಎಂದು ಅವನ ಮೀಸಲಿಗೆ ನಾಲ್ಕು ಇಲಿಗಳನ್ನು ಹೊಡೆದು ಹುಡಿಹಾಕಿ ಅನ್ನದೊಂದಿಗೆ ಇಟ್ಟಿದ್ದರು. ಮಧ್ಯಾಹ್ನದ ಕಾರ್ಯಗಳೆಲ್ಲ ಮುಗಿದು, ಊರಿನ ಜನರಿಗೆಲ್ಲ ಸಮಾರಾಧನೆಯಾಗಿ ಸಂಜೆಯ ಕಪ್ಪು ಮನೆಯೊಳಗೆ ಇಳಿಯುತ್ತಿದ್ದಂತೆ ಊರ ಹಿರಿಕರೆಲ್ಲ ಅವರ ಮನೆಯೊಳಗೆ ಬಂದು ಸೇರಿದರು.
ಮೊದಲು ಶಣಿಯಾರಜ್ಜನ ದೈವಕ್ಕೆ ಸಿಂಗಾರದ ಕೊನೆಯಿಟ್ಟು ಕೈಮುಗಿದು ಪ್ರಾರ್ಥಿಸಿ ಹೇಳಿಕೆಯನ್ನು ಮಾಡಿಕೊಂಡ ನಂತರ ಮನೆಯಲ್ಲಿ ಯಾರಾದರೊಬ್ಬರು ಅವನನ್ನು ಆವಾಹಿಸಿಕೊಳ್ಳಲು ಕೂರುವಂತೆ ಹೇಳಿದರು. ಎಂಟು ಮಕ್ಕಳಲ್ಲಿ ಯಾರೊಬ್ಬರೂ ಬರಲು ಹಿಂಜರಿದಾಗ ಊರ ಹಿರಿಯರು ಕಣ್ಣು ಕೆಂಪು ಮಾಡಿ ಒಬ್ಬರಾದಮೇಲೊಬ್ಬರನ್ನು ಹಿಡಿದು ತಂದು ಕೂರಿಸಿದರು. ಆದರೆ ಅದೇಕೋ ತಿಳಿಯದು, ಶಣಿಯಾರಜ್ಜನ ಜೀವ ಮಾತ್ರ ಯಾರ ಮೈಮೇಲೂ ಬಾರದೇ ಮೌನವಾಗಿ ಸಿಂಗಾರದೆಲೆಯ ಮೇಲೆಯೇ ಮಲಗಿತ್ತು. ತಮ್ಮ ಪ್ರಯತ್ನ ತಾವು ಮಾಡಿಯಾದಮೇಲೆ ಎಲ್ಲ ಹಿರಿಯರೂ ತಪ್ಪುಗಾಣಿಕೆಯೆಂದು ತೆಂಗಿನ ಕಾಯೊಂದನ್ನು ತೆಗೆದಿಟ್ಟು ತಮ್ಮ, ತಮ್ಮ ಮನೆಯ ಹಾದಿ ಹಿಡಿದಿದ್ದರು. ಸತ್ತವರು ಇದ್ದವರ ಮೈಮೇಲೆ ಬಂದು ಮಾತನಾಡುವುದನ್ನು ನೋಡಬೇಕೆನ್ನುವ ನೀಲಿಯ ಕನಸು ಹಾಗೆಯೇ ಉಳಿದುಹೋಗಿತ್ತು.
ಆಗಿನ್ನೂ ನೀಲಿ ತೀರ ಚಿಕ್ಕವಳಾಗಿದ್ದಳು. ಅಜ್ಜಿಯ ಮನೆಗೆಂದು ಅಮ್ಮನೊಂದಿಗೆ ಹೋಗಿದ್ದಳು. ಅದು ಅಜ್ಜಿಗೆ ಮೀಸಲಿಡುವ ದಿನವಾಗಿತ್ತು. ಮಕ್ಕಳೆಲ್ಲರೂ ಒಟ್ಟಿಗೆ ಸೇರುವುದು ವಾಡಿಕೆಯಾಗಿತ್ತು. ಅಜ್ಜಿಗೆ ಪರಮ ಪ್ರಿಯಳಾಗಿದ್ದ ಕೊನೆಯ ಮಗಳು ಮಾತ್ರ ಗಂಡನ ಮನೆಯಿಂದ ಬಂದಿರಲಿಲ್ಲ. ಅಣ್ಣಂದಿರು ಒತ್ತಾಯ ಮಾಡಿ ಕರೆದಿದ್ದರೂ ಅವಳ ಗಂಡ ಅದೇನೋ ಹಳೆಯ ಮುನಿಸಿನಿಂದಾಗಿ ಹೆಂಡತಿಯನ್ನು ತವರಿಗೆ ಕಳಿಸಿರಲಿಲ್ಲ. ಅಕ್ಕಂದಿರೆಲ್ಲ ಅವಳನ್ನು ನೆನೆಸಿಕೊಂಡು ಕಣ್ಣೀರಿಡುತ್ತಲೇ ಅಮ್ಮನಿಗೆ ಮೀಸಲಿಟ್ಟಿದ್ದರು. ಆ ರಾತ್ರಿ ಎಲ್ಲರೂ ಮಲಗಿದಾಗ ನಡುರಾತ್ರಿಯಲಿ ನೀಲಿಯ ದೊಡ್ಡಮ್ಮ ಇದ್ದಕ್ಕಿದ್ದಂತೆ ಕುಣಿದು ಕುಪ್ಪಳಿಸಿದ್ದಳು. ಎಲ್ಲರೂ ಗಾಬರಿಗೊಂಡು ಎದ್ದು ವಿಚಾರಿಸಿದಾಗ ‘ನನ್ನ ಅಪ್ಪಿಯನ್ನು ತಂದು ಕೊಡಿ’ ಎಂದು ಕಣ್ಣು ಕೆಂಪು ಮಾಡಿ ಅಬ್ಬರಿಸಿದ್ದಳು. ಎಲ್ಲವನ್ನೂ ನಿದ್ದೆಗಣ್ಣಿನಲ್ಲಿ ನೋಡುತ್ತಿದ್ದ ನೀಲಿಗೆ ಎಲ್ಲವೂ ಗೋಜಲು ಗೋಜಲಾಗಿತ್ತು. ಕೊನೆಯಲ್ಲಿ ದೊಡ್ಡಮ್ಮ ತೀರ ಬಳಲಿ ನೆಲಕ್ಕೆ ಉರುಳಿದಾಗ ಎಲ್ಲರೂ ಅವಳಿಗೆ ನೀರು ಕುಡಿಸಿ ಸಮಾಧಾನಿಸಿದ್ದರು. ಆ ರಾತ್ರಿ ನೀಲಿ ಹೆದರಿಕೆಯಿಂದ ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡು ಮಲಗಿದ್ದಳು. ಬೆಳಗೆದ್ದಾಗ ಅವರೆಲ್ಲರ ಮಾತುಗಳಿಂದ ನಿನ್ನೆ ರಾತ್ರಿ ಕೆಂಪು ಕಣ್ಣು ಮಾಡಿ ಮಾತಾಡಿದ್ದು ದೊಡ್ಡಮ್ಮನಲ್ಲ, ಅವಳ ಮೈಮೇಲೆ ಬಂದ ಅಜ್ಜಿ ಎಂದು ತಿಳಿದಿತ್ತು.
ಅಲ್ಲಿಂದಾಚೆಗೆ ಹೊಳೆಸಾಲಿನ ಅನೇಕ ಮನೆಗಳಲ್ಲಿ ಹೀಗೆ ಇಲ್ಲವಾದವರು ಇದ್ದವರ ಮೈಮೇಲೆ ಬಂದು ಕುಟುಂಬದ ಜಗಳಗಳನ್ನು ತೀರಿಸುತ್ತಾ, ಮನೆಯಲ್ಲಿಯ ಜಮೀನಿನ ವ್ಯಾಜ್ಯಗಳನ್ನು ತೀರ್ಮಾನಿಸುತ್ತ, ಮದುವೆ, ಮಂಗಲ ಕಾರ್ಯಗಳಿಗೆ ಶುಭ ಹಾರೈಸುತ್ತಾ ಓಡಾಡುತ್ತಿರುವುದನ್ನು ನೀಲಿ ಗಮನಿಸುತ್ತಲೇ ಇದ್ದಳು. ಇಲಿ ಹಿಡಿಯುವ ಶಣಿಯಾರಜ್ಜನೂ ಇಂದಲ್ಲ ನಾಳೆ ಯಾರ ಮೈಮೇಲಾದರೂ ಬಂದಾನೆಂದು ಕಾಯುತ್ತಲೇ ಇದ್ದಳು.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸೊಗಸಾದ ಬರಹ. ಆಹಾರಗಳು ಅನಿವಾರ್ಯವಾಗಿ ಕೊನೆಗೆ ಅಭ್ಯಾಸವಾಗುವ ಬಗ್ಗೆ ಅಚ್ಚರಿ ಮೂಡಿಸಿತು. ಸುಮಾರು 50- 60 ವರ್ಷಗಳ ಹಿಂದೆ, ಕಾಸರಗೋಡು ಮೂಲದ ನನ್ನಮ್ಮ ನಾವು ಬೆಂಗಳೂರಿನ ಯಶವಂತಪುರದ ಬಾಡಿಗೆ ಮನೆಯಲ್ಲಿದ್ದಾಗ ಮಧ್ಯರಾತ್ರಿ “ಕೊಲೆ ಕೂಗಿದ್ದು ಕೇಳಿಸಿತು” ಎಂದು ಹೇಳುತ್ತಿದ್ದರು ಬಹುಶಃ ಕೊಲೆ ಎಂದರೆ ದೆವ್ವದ ಒಂದು ಪ್ರಕಾರ ಎಂದು ತಿಳಿದುಕೊಂಡಿದ್ದೆ.
ಧನ್ಯವಾದಗಳು ಸರ್. ಹೌದು, ಕೊಲೆ ಎಂದರೆ crime ಎಂಬರ್ಥವಲ್ಲ, ದೈವದ ಒಂದು ರೂಪ ಎಂದರ್ಥ
Enjoyed reading this episode … this is a wonderful series, Sudha Adukala-ji 👍☘️🌻🙂
Thank you so much
Enjoyed your writing madam