ಕಾಮನಬಿಲ್ಲು
ನಡುರಾತ್ರಿಯಲಿ ಕಡುಕಪ್ಪು ಆಕಾಶದಲಿ
ತಾರೆಗಳ ಹುಡುಕುವ ಕಂಗಳಿಂದ ಜಿನುಗುವುದಿಲ್ಲ
ಇದ್ದರೂ ಬತ್ತಿಹೋಗುವ ಕಣ್ಣೀರು
ತೆರೆದ ಕಿಟಕಿಗಳಿದ್ದರೇನು
ಶೀತಲ ಗಾಳಿಯಲಿ ವಿನಿಮಯವಾಗುವುದಿಲ್ಲ
ಅಗಲಿದ ಮನಸುಗಳ ನೋವು
ಗಾಢವಾಗಿ ಬಯಸಿದರೇನು ಬಂತು
ನಮ್ಮ ಅಣತಿಯನು ಕೇಳುವುದಿಲ್ಲ
ಭೂವ್ಯೋಮಾಕಾಶ ಸಾಗರಗಳು
ತೇವವಾದ ಕಣ್ಣುಗಳು ಎಂದೂ ಬಿಟ್ಟುಕೊಡುವುದಿಲ್ಲ ಎಡೆಬಿಡದೆ
ಕಾಡುವ ಮಧುರ ನೆನಪುಗಳನು
ಉದುರುವ ಎಲೆಗಳಿಗೇನು ಗೊತ್ತು
ಏಕಾಂತದಲಿ ರೋದಿಸುವ
ಮನಸಿನ ಯಾತನೆಗಳು
ದೊಡ್ಡ ಕೋಣೆಗಳ ಸಿಂಗಾರದ
ಅರಮನೆಯ ಮೂಲೆಗಳಿಗೇನು ಗೊತ್ತು
ಖಾಲಿ ಹಾಸಿಗೆಯ ಒಂಟಿತನ!
ಚಂಡಮಾರುತ ತಂದ ಅಕಾಲಿಕ ಮಳೆಗೇನು ಗೊತ್ತು
ತೋಯ್ದುಹೋಗದೆ ಉಳಿದ ನೂರಾರು ಮಾತುಗಳು, ಆಣೆ ಪ್ರಮಾಣಗಳು
ಒಲ್ಲದ ಮನಸಿನ ಒಡಂಬಡಿಕೆಗಳಿಂದ
ಎಷ್ಟು ಹೃದಯಗಳು ಮುರಿದಿವೆಯೋ ಗೊತ್ತಿಲ್ಲ
ಮುಲಾಮು ಹಚ್ಚುವ ಕೈಗಳಿಗೇ ಮದ್ದಿಲ್ಲ!
ಎಂದಾದರೊಂದು ದಿನ ಆಕಾಶಕ್ಕೆ ಬಣ್ಣ ಹಚ್ಚುವ
ಕಾಮನಬಿಲ್ಲು ನೊಂದ ಮನಸುಗಳನೇಕೆ ಬೆಳಗುವುದಿಲ್ಲ?! ಉತ್ತರವೇ ಇಲ್ಲ!
ಡಾ. ಸತ್ಯಪ್ರಕಾಶ್ ಎಂ ಆರ್ ಮೂಲತಃ ಬೆಂಗಳೂರಿನವರು.
ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿ ನಂತರ ಅಧ್ಯಾಪನ ವೃತ್ತಿಯನ್ನು ಆರಿಸಿಕೊಂಡವರು.
ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮಾಧ್ಯಮ ಉದ್ಯಮ, ದಲಿತ ವೀರನಾರಿಯರ ಸಂಕಥನ, ಸಂಸತ್ತಿನಲ್ಲಿ ಡಾ. ಬಾಬು ಜಗಜೀವನ್ ರಾಮ್ ಭಾಷಣಗಳು ಇವರ ಈ ಪ್ರಕಟಿತ ಕೃತಿಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ