Advertisement
ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

ದುಃಸ್ವಪ್ನ

ಪಶ್ಚಿಮ‌ ದಿಕ್ಕಿನಿಂದ ಹಾರಿ ಬಂದ ಮಿಸೈಲು
ನೆಲಕ್ಕಪ್ಪಳಿಸಿ ಸೃಷ್ಟಿಸಿದ ಕಂದಕದೊಳಗೆ
ಜ್ವಾಲಾಮುಖಿ ಪುಟಿದೇಳುತಿತ್ತು
ಎಲುಬಿಲ್ಲದೆ ಕೃಷ ದೇಹಗಳು ದಿಗ್ಭ್ರಾಂತಿಯಿಂದ ಅದರ ಸುತ್ತಲೂ ಕುಣಿಯುತ್ತಲಿತ್ತು
ಅಷ್ಟ ದಿಕ್ಕುಗಳಲಿ ವಿಕ್ಷಿಪ್ತ ಧ್ವನಿಗಳು ರಿಂಗಣಿಸುತಲಿತ್ತು
ಎತ್ತ ನೋಡಿದರೂ ಬಟಾ ಬಯಲು
ಸುಟ್ಟು ಕರಕಲಾದ ಲಂಟಾನದ ಬೇಲಿಗಳು,
ರುಂಡವಿಲ್ಲದ ಕಾಂಡಗಳು ಸಾಲುಗಟ್ಟಿ ನಿಂತಿತ್ತು
ರಥಸಪ್ತಮಿಯ ದಿನವೋ ಏನೋ
ಭೂಗರ್ಭ ಬಾಯ್ಬಿಟ್ಟು ಧಗಧಗಿಸುತ್ತಿತ್ತು
ಒಂದಾನೊಂದು ಕಾಲದಲ್ಲಿ ಕಿಕ್ಕಿರಿದು ನಿಂತಿದ್ದ
ಗಗನಚುಂಬಿ ಕಟ್ಟಡಗಳು ನೆಲಸಮವಾಗಿತ್ತು
ಅಲ್ಲಲ್ಲಿ ನಿಂತ ವ್ಯಾನುಗಳ ನಲ್ಲಿಯಿಂದ
ಸೋರುತಿದ್ದ ಹಾಲಿನ‌ ಬಣ್ಣ ಕೆಂಪಾಗಿತ್ತು
ಬತ್ತಿಹೋದ ಕಣ್ಣುಗಳು, ಬಾಗಿದ ಬೆನ್ನುಗಳು
ನಿರ್ಭಾವುಕವಾಗಿ ಕನಲುತಿತ್ತು
ಕೆಂಪಾದ ಬಾನ ಛಾವಣಿಯಡಿ ಹೆಪ್ಪುಗಟ್ಟಿದ ನೆಲದಲ್ಲಿ
ಪ್ಯಾವ್ಲಾವನ ನಾಯಿಯೊಂದು ಅನಾಥವಾಗಿ ಸತ್ತು ಬಿದ್ದಿತ್ತು
ಬಳಸಿ ಬಿಸಾಡಿದ ರಾಶಿ ರಾಶಿ ಯಂತ್ರಗಳು ಬೃಹದಾಕಾರವಾಗಿ ಬೆಳೆದು ನಿಂತಿತ್ತು
ಕಾರ್ಮೋಡವನು ಸೀಳಿ ಬಂದ ಉಲ್ಕೆಯೊಂದು
ಸಿಡಿದ ರಭಸಕೆ ಸೂರ್ಯನ‌ ಕುದುರೆ
ದಿಕ್ಕಾಪಾಲಾಗಿ ಓಡುತಲಿತ್ತು
ಮತಿಭ್ರಾಂತ ಪಥಿಕನಿಗೆ ದೂರದಲಿ ಕಂಡ ಒರತೆಯು ಬರಿಯ ಮರೀಚಿಕೆಯಾಗಿತ್ತು
ಬಿಸಿಗಾಳಿಯ ಆರ್ಭಟಕೆ ಕಂಗಾಲಾದ
ಆತ್ಮವಿಲ್ಲದ ದೇಹಗಳ ಒಳಗೆ ಬಾವಲಿಗಳು ಜೋತಾಡುತಿತ್ತು
ಪಾಪಸುಕಳ್ಳಿಗಳ ಮುಳ್ಳುಗಂಟಿಯ ಬುಡದೊಳಗೆ
ಗತಕಾಲದ ಸರೀಸೃಪಗಳು ಮರುಹುಟ್ಟು ಪಡೆದಿತ್ತು
ನಡೆದಾಡುವ ಹೆಣಗಳ ಮೇಲೆ ತೂಗುಗತ್ತಿಯ ಹಿಡಿದ ರಣಹದ್ದುಗಳು ಹಾರಾಡುತಲಿತ್ತು
ಬುದ್ಧನ ನಗು ಮೂಡಿಸಿದ ಕಪ್ಪು ರಂಧ್ರದೊಳಗೆ
ಘಟಸರ್ಪವೊಂದು ಹೆಡೆಯೆತ್ತಿ ನಿಂತಿತ್ತು
ಅಲ್ಲೇ ಕೂಗಳತೆಯ ದೂರದಲಿ ಕಂಗೊಳಿಸುತಲಿದ್ದ ಅರಗಿನರಮನೆಯೀಗ ಲಾವಾರಸವಾಗಿ ಹರಿಯುತಲಿತ್ತು
ವಿನಾಶೋತ್ತರ ಕಾಲದ ದುಃಸ್ವಪ್ನವಿದು
ಇಲ್ಲಿ ನೆರಳು ಬೆಳಕಿಗೆ ಅಂತರವಿಲ್ಲ,
ಹಗಲಿಲ್ಲ ಇರುಳಿಲ್ಲ, ಕಣ್ಗಳಲಿ‌ ಬೆಳಕಿಲ್ಲ,
ಕಾಲವನು ಕಟ್ಟಿಹಾಕಿದ ಭ್ರಮೆಯಲ್ಲಿದ್ದ
ಗಡಿಯಾರ ಮಾತ್ರ ಕರಗಿಹೋಗುತಲೇ ಇತ್ತು!

ಡಾ. ಸತ್ಯಪ್ರಕಾಶ್ ಎಂ ಆರ್ ಮೂಲತಃ ಬೆಂಗಳೂರಿನವರು.
ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿ ನಂತರ ಅಧ್ಯಾಪನ ವೃತ್ತಿಯನ್ನು ಆರಿಸಿಕೊಂಡವರು.
ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮಾಧ್ಯಮ ಉದ್ಯಮ, ದಲಿತ ವೀರನಾರಿಯರ ಸಂಕಥನ, ಸಂಸತ್ತಿನಲ್ಲಿ ಡಾ. ಬಾಬು ಜಗಜೀವನ್ ರಾಮ್ ಭಾಷಣಗಳು ಇವರ ಈ ಪ್ರಕಟಿತ ಕೃತಿಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಸಂಗೀತಂ

    ಮಾನವೀಯ ಮೌಲ್ಯಗಳನ್ನೊಳಗೊಂಡ ಕವಿತೆ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ