ಒಟ್ಟಿನಲ್ಲಿ ದಿನಗಳು ಉರುಳುತ್ತಾ ಹೋದಂತೆ ತಾನು ಮಾಝ್ ನ ಗುರಿಯತ್ತ ಮತ್ತಷ್ಟು ಹತ್ತಿರವಾಗುತ್ತಿದ್ದೇನೆ ಎಂಬ ಸತ್ಯವು ಮನದಟ್ಟಾದಾಗಲೆಲ್ಲಾ ಬಂಕೋ ಮತ್ತಷ್ಟು ಹತಾಶನಾಗುತ್ತಿದ್ದ. ಇಂತಹ ಅಪಾಯಕಾರಿ ಪ್ರಯೋಗಗಳು ಜಗತ್ತಿನೆಲ್ಲೆಡೆ ಯಾವ ರೀತಿಯ ವಿನಾಶವನ್ನು ತರಬಹುದು ಎಂಬುದರ ಬಗ್ಗೆ ಊಹಿಸಿಕೊಳ್ಳಲೂ ಆತನಿಗೆ ಹಿಂಸೆಯಾಗುತ್ತಿತ್ತು. ಹಾಗೆಂದು ಈ ಹಂತದಲ್ಲಿ ಹಿಮ್ಮೆಟ್ಟುವಂತೆಯೂ ಇರಲಿಲ್ಲ. ಸಂಭಾವ್ಯದ ಗೂಢಚರ ವಿಭಾಗವು ಭದ್ರತೆಯ ನೆಪದಲ್ಲಿ ಬಂಕೋನಿಗೆ ನೀಡಲಾಗಿದ್ದ ಸಹಾಯಕ ಸಿಬ್ಬಂದಿಗಳ ಮೇಲೆ ನಿರಂತರವಾಗಿ ತನ್ನ ಕಣ್ಣಿಟ್ಟಿತ್ತು. ತನ್ನನ್ನು ತಾನು ದೇಶಪ್ರೇಮಿಯೆಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದ ಬಂಕೋ ಈಗ ಹೆಚ್ಚೇ ಎಂಬಷ್ಟಿನ ರಾಜರಹಸ್ಯಗಳನ್ನು ತಿಳಿದುಕೊಂಡಿದ್ದ.
ಮೇಘನಾ ಸುಧೀಂದ್ರ ಮತ್ತು ಪ್ರಸಾದ್ ನಾಯ್ಕ ಬರೆದ ಕೊಲಾಬ್ ಕಥೆ ನಿಮ್ಮ ಓದಿಗೆ

 

ನಾವೀಗ ಚಯಾಂಗ್ ವಿಮಾನ ನಿಲ್ದಾಣವನ್ನು ತಲುಪಿದ್ದೇವೆ. ಹೊರಗಿನ ತಾಪಮಾನವು ಮೂವತ್ತೆರಡು ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು ಬಿಸಿಲು ಹಿತವಾಗಿದೆ. ದೇವರ ದೇಶವೂ, ಧರ್ಮದ ದೇಶವೂ ಆಗಿರುವ ಸಂಭಾವ್ಯ ನಿಮಗೆ ಸುಸ್ವಾಗತವನ್ನು ಕೋರುತ್ತಿದೆ ಎಂದು ಘೋಷಣೆಯಾದ ಕೆಲ ಕ್ಷಣಗಳಲ್ಲೇ ಡಾ. ಬಂಕೋ ಸಂಭಾವ್ಯದ ನೆಲಕ್ಕೆ ಕಾಲಿಟ್ಟಿದ್ದ. ರಾಜಧಾನಿಯ ಮುಖ್ಯ ಕೇಂದ್ರವಾಗಿದ್ದ ಚಯಾಂಗ್ ವಿಮಾನ ನಿಲ್ದಾಣವು ನೋಡಲು ಭವ್ಯ ಅರಮನೆಯಂತೆ ಝಗಮಗಿಸುತ್ತಿತ್ತು. ಇತ್ತ ಹಿತವಾಗಿ ಮೈಮುರಿಯುವಂತಿದ್ದ ಬಿಸಿಲು ಆಪ್ತಸ್ವಾಗತವನ್ನು ಕೋರುವ ಗೆಳೆಯನಂತೆ ಅವನಲ್ಲಿ ಲವಲವಿಕೆಯನ್ನು ತರುತ್ತಿತ್ತು. ಮನುಷ್ಯನೊಬ್ಬ ಮನಸ್ಸು ಮಾಡಿದರೆ ನೂರು ದೇಶ ಸುತ್ತಬಹುದು. ಆದರೆ ತಾಯ್ನಾಡಿಗಿಂತ ಚಂದ ಇನ್ನೇನಿದೆ? ಉನ್ನತ ವಿದ್ಯಾಭ್ಯಾಸಕ್ಕೆಂದು ದೇಶವನ್ನು ಬಿಟ್ಟು ಹಾರಿದ್ದ ಬಂಕೋ ಬರೋಬ್ಬರಿ ಹದಿನೈದು ವರ್ಷಗಳ ನಂತರ ಮರಳಿ ಬಂದಿದ್ದ. ಇದರ ಪರಿಣಾಮವೋ ಏನೋ! ಬಂಕೋನ ಸಂತಸವು ಇಂದು ಪದಗಳಿಗೆ ನಿಲುಕದ ಸಂಗತಿಯಾಗಿತ್ತು.

ಸಂಭಾವ್ಯ ದೇಶದ ಸಾಮಾನ್ಯ ದೃಷ್ಟಿಕೋನದಿಂದ ನೋಡಿದರೆ ಬಂಕೋ ನಿಜಕ್ಕೂ ಓರ್ವ ಅದೃಷ್ಟಶಾಲಿ ಯುವಕನಾಗಿದ್ದ. ಏಕೆಂದರೆ ಬಂಕೋನ ಚುರುಕುಬುದ್ಧಿಯನ್ನು ಎಂಟರ ವಯಸ್ಸಿನಲ್ಲೇ ಗುರುತಿಸಿದ್ದ ಸಂಭಾವ್ಯದ ಸರ್ವಾಧಿಕಾರಿ ಮಾರ್ತಾಂಡ ಸಿಂಹನಾಯಕ, ಈ ಇದ್ದಿಲನ್ನು ವಜ್ರವನ್ನಾಗಿಸಲು ಯೂರೋಪ್, ಅಮೆರಿಕಾಗಳಿಗೆ ಕಳಿಸಿದ್ದ. ಬಂಕೋನ ಪ್ರತಿಭೆಯನ್ನು ಸಂಭಾವ್ಯದ ಉನ್ನತಿಗಾಗಿ ಬಳಸಬೇಕೆಂಬ ಮಹತ್ತರವಾದ ಗುರಿಯು ಮಾರ್ತಾಂಡ ಸಿಂಹನಾಯಕನಲ್ಲಿ ಅದೆಂತೋ ಮೂಡಿತ್ತು. ಆದರೆ ಪ್ರಭುತ್ವದ ಖರ್ಚಿನಲ್ಲಿ ಹೀಗೆ ಹೋಗುವವರು, ತರಹೇವಾರಿ ಸೌಲಭ್ಯಗಳನ್ನು ಪಡೆಯುವವರು ತಾಯ್ನಾಡಿಗೆ ಮರಳಿ ತಮ್ಮಿಂದಾಗುವ ರೂಪದಲ್ಲಿ ದೇಶಸೇವೆ ಮಾಡುವುದು ಸಂಭಾವ್ಯದ ನೆಲದಲ್ಲಿ ಕಡ್ಡಾಯವಾಗಿತ್ತು. ಹೀಗೆ ವೈರಾಲಜಿಯಲ್ಲಿ ಉನ್ನತ ಪದವಿಯನ್ನು ಪಡೆದು ಸಂಭಾವ್ಯಕ್ಕೆ ಮರಳಿದ್ದ ಡಾ. ಬಂಕೋಗೆ ತಾಯ್ನಾಡಿನ ಋಣವನ್ನು ತೀರಿಸುವ ಕಾಲವು ಈಗ ಕೂಡಿಬಂದಾಗಿತ್ತು.

ಸಂಭಾವ್ಯದ ಬಗ್ಗೆ ಹೇಳುವಾಗ ಮಾರ್ತಾಂಡ ಸಿಂಹನಾಯಕನ ಬಗ್ಗೆ ವಿವರವಾಗಿ ಹೇಳದೆ ವಿಧಿಯಿಲ್ಲ. ‘ತಾನೆಂದರೆ ದೇಶ, ದೇಶವೆಂದರೆ ತಾನು’, ಎಂಬಂತೆ ಮೂರು ದಶಕಗಳ ಕಾಲ ಸಂಭಾವ್ಯದ ಆಡಳಿತವನ್ನು ಚಲಾಯಿಸಿದ ಕುಖ್ಯಾತ ಮಿಲಿಟರಿ ನಾಯಕನೀತ. ತನ್ನ ಬರೋಬ್ಬರಿ ಮೂವತ್ತು ವರ್ಷಗಳ ಆಡಳಿತದಲ್ಲಿ ಆತ ಹೇಳಿದ್ದು ಬಹುತೇಕ ಕಾಯಕದ ಮಾತುಗಳೇ ಆಗಿದ್ದವು. ಸಂಭಾವ್ಯದ ನಾಗರಿಕರು ವಾರದ ಆರು ದಿನಗಳ ಕಾಲ ಕೆಲಸ ಮಾಡಬೇಕು, ದಿನಕ್ಕೆ ಹತ್ತು ತಾಸುಗಳ ಕಾಲ ದುಡಿಯಬೇಕು, ಇಂತಿಪ್ಪ ವಿಧಾನಗಳಲ್ಲಿ ದೇಶದ ಆರ್ಥಿಕತೆಯನ್ನು ಬೆಳೆಸಬೇಕು ಎಂಬಿತ್ಯಾದಿ ಕಾನೂನುಗಳು ಜನರ ಬದುಕನ್ನು ವಿನಾಕಾರಣ ಸಂಕೀರ್ಣಗೊಳಿಸಿದ್ದವು.

ಮಾರ್ತಾಂಡ ಸಿಂಹನಾಯಕನು ಸೃಷ್ಟಿಸಿದ್ದ ಸಂಭಾವ್ಯದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯು ಹೊರಜಗತ್ತಿಗೆ ತನ್ನನ್ನು ತಾನು ಮುಕ್ತವಾಗಿ ತೆರೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ದೇಶೀಯತೆಯ ನೆಲೆಯಲ್ಲೇ ಅಭಿವೃದ್ಧಿಯನ್ನು ಕಾಣುವ ಪರಿಕಲ್ಪನೆಯದ್ದಾಗಿತ್ತು. ಅಂದಹಾಗೆ ಈ ಅಭಿವೃದ್ಧಿಯು ಸಂಭಾವ್ಯದ ನೈಜ ಜನಜೀವನಕ್ಕಿಂತ ಸರ್ವಾಧಿಕಾರಿಯ ಅಬ್ಬರದ ಪ್ರಚಾರದ ವೀಡಿಯೋಗಳಲ್ಲಿ ಕಾಣಸಿಕ್ಕಿದ್ದೇ ಹೆಚ್ಚು.

ಅಸಲಿಗೆ ಹೊರಜಗತ್ತಿಗೆ ಮುಕ್ತವಾಗಿರದಿದ್ದ ಸಂಭಾವ್ಯದ ಮಾರುಕಟ್ಟೆಗಳು ಸಿಂಹನಾಯಕನ ಹಿಡಿತದಲ್ಲಿದ್ದ ಕೆಲವೇ ಕೆಲವು ದೈತ್ಯಸಂಸ್ಥೆಗಳಿಂದ ಸಕ್ರಿಯವಾಗಿದ್ದವು. ಹೀಗಾಗಿ ಸಿಂಹನಾಯಕನಿಗೆ ಉದ್ಯಮದಲ್ಲಿ ಸ್ಪರ್ಧೆಯನ್ನು ನೀಡಬಯಸುವ ಜಾಗತಿಕ ಸಂಸ್ಥೆಗಳಿಗೆ ಅಲ್ಲಿ ಅವಕಾಶವೇ ಇರಲಿಲ್ಲ. ಇನ್ನು ಸರಕಾರಿ ಖರ್ಚಿನಲ್ಲಿ ಬಿಟ್ಟಿಯಾಗಿ ನೀಡಲಾಗುತ್ತಿದ್ದ ಶಿಕ್ಷಣ, ಆರೋಗ್ಯ, ಆಹಾರದಂತಹ ಸೌಲಭ್ಯಗಳ ಬದಲಾಗಿ ನಾಗರಿಕರು ತಮ್ಮ ಜೀವನದ ಸಿಂಹಪಾಲನ್ನು ದೇಶಸೇವೆಗಾಗಿ ಮುಡಿಪಾಗಿಡಬೇಕಿತ್ತು. ಕಡ್ಡಾಯ ಮಿಲಿಟರಿ ಸೇವೆಯನ್ನೂ ಸೇರಿದಂತೆ ನಾಗರಿಕರನ್ನು ಸದಾ ಪ್ರಭುತ್ವದ ನಿಯಂತ್ರಣದಲ್ಲಿರುವಂತೆ ಮಾಡುವ ಎಲ್ಲಾ ಕಾನೂನುಗಳನ್ನು ಸರ್ವಾಧಿಕಾರಿ ಜಾರಿಗೊಳಿಸಿದ್ದ. ಇವೆಲ್ಲದರಿಂದಾಗಿ ಸಂಭಾವ್ಯದ ನಾಗರಿಕರು ತಮ್ಮ ನೆಲದಲ್ಲೇ, ದೊಡ್ಡದೊಂದು ಅಗೋಚರ ಜೈಲಿನಲ್ಲಿ ಬಂಧಿತರಾಗಿರುವಂತೆ ಅವ್ಯಕ್ತ ಆತಂಕದೊಂದಿಗೆ ಬದುಕುತ್ತಿದ್ದರು.

ಇನ್ನು ಸಂಭಾವ್ಯದ ಸಾಮಾನ್ಯ ಪ್ರಜೆಯೊಬ್ಬನ ಪರಿಸ್ಥಿತಿಯು ಹೀಗಿದ್ದರೆ ದೇಶದ ಶಕ್ತಿಕೇಂದ್ರಗಳ ಸಾಮೀಪ್ಯವನ್ನು ಹೊಂದಿರುವ ಮಂದಿಯ ಬದುಕು ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಈ ಮೇಲ್ಮಧ್ಯಮ ಮತ್ತು ಗಣ್ಯಾತಿಗಣ್ಯರ ವರ್ಗಕ್ಕೆ ಸೇರುವ ಬಹಳಷ್ಟು ಮಂದಿಯ ಮಕ್ಕಳು ಹೊರದೇಶಗಳಿಗೆ ವಿದ್ಯಾಭ್ಯಾಸಕ್ಕೆಂದು ತೆರಳಿ, ಇನ್ಯಾವುದೋ ದೇಶದಲ್ಲಿ ವಾಸ್ತವ್ಯವನ್ನು ಹೂಡಿದ್ದರೆ ಮತ್ತೆ ಕೆಲವರು ಅಲ್ಲೇ ಸಂಸಾರ ಸಮೇತ ನೆಲೆಯೂರಿ, ಹೊಸ ಪೌರತ್ವವನ್ನು ಪಡೆದುಕೊಂಡು ತಮ್ಮ ಮಾತೃದೇಶದ ನಂಟನ್ನು ಕಳೆದುಕೊಳ್ಳುತ್ತಿದ್ದರು.

ಹೀಗೆ ರಾಷ್ಟ್ರೀಯತೆಯ ಮತ್ತು ದೇಶಸೇವೆಯ ಸೋಗಿನಲ್ಲಿ ಸರ್ವಾಧಿಕಾರಿಯ ಪ್ರಭುತ್ವವು ತನ್ನ ಪ್ರಜೆಗಳಿಂದ ವಿಪರೀತವೆಂಬಷ್ಟು ದುಡಿಸಿಕೊಳ್ಳುವುದು ಸಂಭಾವ್ಯದಲ್ಲಿ ಸಾಮಾನ್ಯ ಸಂಗತಿಯಾಗಿತ್ತು. ಅಂಥದ್ದೇ ಹಿನ್ನೆಲೆಯ ಒಂದು ಮಹಾತ್ವಾಕಾಂಕ್ಷೆಯ ಗುರಿಯನ್ನಿಟ್ಟುಕೊಂಡು ಬಂಕೋನಿಗೀಗ ಮಹತ್ತರವಾದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ಆ ಗುರಿಯು ಮಾತ್ರ ಸರ್ವಾಧಿಕಾರಿಯದ್ದಾಗಿತ್ತು ಎಂಬುದು ಬೇರೆ ವಿಷಯ.

ಜಗತ್ತನ್ನು ತನ್ನ ತೆಕ್ಕೆಗೆ ಸಂಪೂರ್ಣವಾಗಿ ಎಳೆದುಕೊಳ್ಳುವ ದುರಾಸೆಯು ಮಾರ್ತಾಂಡ ಸಿಂಹನಾಯಕನ ಪುತ್ರನಾದ ಮಾಝ್ ನಿಗೆ ಅದ್ಯಾವಾಗ ಮೂಡಿತ್ತೋ ಗೊತ್ತಿಲ್ಲ. ಆದರೆ ಕಾಲಾನುಕ್ರಮದಲ್ಲಿ ಬಂಕೋನ ಬೆಳವಣಿಗೆಯೊಂದಿಗೆ, ಆತನ ದೈತ್ಯ ಕನಸುಗಳಿಗೂ ಆಕಾರ ಸಿಕ್ಕಿತ್ತು. ಅಂದು ವಿಶ್ವದ ಕೆಲ ರಾಷ್ಟ್ರಗಳ ನಕಾಶೆಯ ಮೇಲೆ ತನ್ನ ಬಣ್ಣಗಳನ್ನು ಹರಡಿಸುತ್ತಾ ಜೂನಿಯರ್ ಮಾರ್ತಾಂಡ ಸಿಂಹನಾಯಕ ಅಲಿಯಾಸ್ ಮಾಝ್ ತನ್ನ ಕನಸನ್ನು ಬಂಕೋನೆದುರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದ. ಹೀಗೆ ತನ್ನ ದಿಗ್ವಿಜಯದ ಮಹಾತ್ವಾಕಾಂಕ್ಷೆಗಳನ್ನು ಬಣ್ಣಿಸುವಾಗ ಅವನ ಬೂದುಬಣ್ಣದ ಕಣ್ಣುಗಳು, ಆತ ಕುಳಿತಿದ್ದ ವಜ್ರಖಚಿತ ಸಿಂಹಾಸನಕ್ಕಿಂತಲೂ ಹೆಚ್ಚಿನ ಕಾಂತಿಯಿಂದ ಕಂಗೊಳಿಸುತ್ತಿದ್ದವು.

ಬಂಕೋ ಮತ್ತು ಮಾಝ್ ಬಾಲ್ಯದಿಂದಲೂ ಒಬ್ಬರನ್ನೊಬ್ಬರು ಬಲ್ಲವರು. ಇನ್ನು ದೇಶದ ಯುವ ಅಧಿಪತಿಯಾಗಿದ್ದರ ಹೊರತಾಗಿ, ಮಾಝ್ ನ ಕುಟುಂಬದ ಋಣವು ತನ್ನ ಮೇಲಿದ್ದರಿಂದ ಅವನ ಎಲ್ಲಾ ಮಾತುಗಳಿಗೂ ಕಿವಿಯಾಗಬೇಕಾದ ಅನಿವಾರ್ಯತೆಯು ಈಗ ಬಂಕೋನಿಗಿತ್ತು. ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಬಗ್ಗೆ ಮಾಝ್ ಗಿದ್ದ ನಿಲುವು ಅವನ ತಂದೆಯಾಗಿದ್ದ ಮಾರ್ತಾಂಡ ಸಿಂಹನಾಯಕನಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಅಧಿಕಾರದ ಸೀಮೆಯನ್ನು ಸಂಭಾವ್ಯದ ಗಡಿಯಾಚೆಗೂ ವಿಸ್ತರಿಸುವಲ್ಲಿ ಮಾರ್ತಾಂಡ ನಾಯಕನು ತಕ್ಕಮಟ್ಟಿಗೆ ಆಸಕ್ತನಾಗಿದ್ದರೂ, ಮಾಝ್ ಈ ನಿಟ್ಟಿನಲ್ಲಿ ಹಲವು ಹೆಜ್ಜೆಗಳನ್ನು ಮುಂದೆ ನಡೆದಿದ್ದ. ಇದಕ್ಕಾಗಿ ಯಾವ ದುಸ್ಸಾಹಸಕ್ಕೂ ಕೈಹಾಕುವ ಬಗ್ಗೆ ಆತನಿಗೆ ಅಳುಕು-ಅಂಜಿಕೆಗಳಿರಲಿಲ್ಲ. “ಇನ್ನು ನಮ್ಮ ಯುದ್ಧಗಳಲ್ಲಿ ರಕ್ತಪಾತವಾಗುವುದಿಲ್ಲ ಬಂಕೋ. ಆದರೂ ಕೋಟ್ಯಾಂತರ ಪ್ರಾಣಗಳ ಆಹುತಿಯಾಗುತ್ತದೆ. ಏನಾಯಿತೆಂಬ ಜ್ಞಾನೋದಯವಾಗುವಷ್ಟರಲ್ಲಿ ಕಾಲಕೆಳಗಿನ ನೆಲವೇ ಕುಸಿದಿರುತ್ತದೆ”, ಎಂದು ಬಂಕೋನಲ್ಲಿ ಹೇಳಿದ್ದ ಮಾಝ್.

ಅಷ್ಟಕ್ಕೂ ಮಾಝ್ ತನ್ನ ಕನಸುಗಳ ಬಗ್ಗೆ ಅದೆಷ್ಟು ಗಂಭೀರವಾಗಿದ್ದ ಎಂಬುದು ಬಂಕೋನಿಗೆ ಅರಿವಾಗಿದ್ದು ಆ ರಹಸ್ಯ ಪ್ರಯೋಗಾಲಯವನ್ನು ನೋಡಿದ ನಂತರವೇ. “ನೋಡಿಲ್ಲಿ, ನಿನಗಾಗಿ ಏನನ್ನು ಸೃಷ್ಟಿಸಿದ್ದೇನೆ. ನೀನೀಗ ಸೃಷ್ಟಿಕರ್ತನಾಗುತ್ತೀಯಾ ಬಂಕೋ”, ಎಂದು ಮಾಝ್ ಉದ್ಗರಿಸಿದ್ದ. ನೆಲಮಾಳಿಗೆಯಲ್ಲಿದ್ದ ಆ ರಹಸ್ಯ ಸ್ಥಳವು ಐಷಾರಾಮಿ ಬಂಗಲೆಯನ್ನೂ, ಸುಸಜ್ಜಿತ ಪ್ರಯೋಗಾಲಯವನ್ನೂ ಹೊಂದಿದ್ದು ಬಂಕೋನ ಹೊಸ ಕರ್ಮಭೂಮಿಯಾಗಲಿತ್ತು. ಮಾಝ್ ಆಣತಿಯಂತೆ ಈ ರಹಸ್ಯ ಪ್ರಯೋಗಾಲಯದಲ್ಲಿ ಬಂಕೋ ತಿಂಗಳುಗಳ ಕಾಲ ತೊಡಗಿಸಿಕೊಂಡು ಹೊಸದೊಂದು ಅಪಾಯಕಾರಿ ಸೂಕ್ಷ್ಮಾಣು ಜೀವಿಯನ್ನು ಸೃಷ್ಟಿಸಲಿದ್ದ. ಬರಿಗಣ್ಣಿಗೆ ಕಾಣದ ಈ ಜಂತು ದೇಶಗಳ ಸೀಮೆಗಳನ್ನು ಒಂದೊಂದಾಗಿಯೇ ಕರಗಿಸಿ, ಸಂಭಾವ್ಯದ ಇತಿಹಾಸವು ಹಿಂದೆಂದೂ ಕಾಣದಿದ್ದ ಹೊಸ ವಿಶಾಲವಾದ ಭೂಭಾಗವನ್ನು ತನ್ನದಾಗಿಸಿಕೊಳ್ಳಲಿತ್ತು. ಹೀಗೆ ಎಲ್ಲವೂ ಅಂದುಕೊಂಡಿದ್ದಂತೆ ಆಗಿದ್ದೇ ಆದರೆ ಮುಂದಿನ ಏಳೆಂಟು ತಿಂಗಳುಗಳ ಅವಧಿಯಲ್ಲಿ ಮಾಝ್ ಈ ಹೊಸ ಜಗತ್ತಿನ ಅಧಿಪತಿಯಾಗಲಿದ್ದ. ಹೀಗಾಗಿಯೇ ಮಾಝ್ ಆತನನ್ನು ಐತಿಹಾಸಿಕ ಸೃಷ್ಟಿಕರ್ತನೆಂದು ಕರೆದಿದ್ದು.

ಹಾಗೆ ನೋಡಿದರೆ ಬಂಕೋನಿಗೆ ಮಾಝ್ ನೀಡಿದ್ದ ಆಫರ್ ಚೆನ್ನಾಗಿಯೇ ಇತ್ತು. ಹತ್ತಾರು ತಂತ್ರಜ್ಞರು, ಸಹಾಯಕರು ಮತ್ತು ಸಿಬ್ಬಂದಿಗಳನ್ನು ಸೇರಿದಂತೆ ಎಲ್ಲಾ ಸೌಕರ್ಯಗಳನ್ನೂ ಪ್ರಯೋಗಾಲಯದಲ್ಲಿ ಬಂಕೋನಿಗಾಗಿ ಒದಗಿಸಲಾಗಿತ್ತು. ಆದರೆ ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಯಾಗುತ್ತಿದ್ದ ಸೂಕ್ಷ್ಮಾಣುಜೀವಿಯ ಮತ್ತು ಯೋಜನಾ ಸಂಬಂಧಿ ರೂಪುರೇಷೆಗಳ ಸಂಪೂರ್ಣ ವಿವರಗಳು ಇವರಿಬ್ಬರಿಗಷ್ಟೇ ಗೊತ್ತಿರಲಿದ್ದವು. ಬಂಕೋನ ದೈನಂದಿನ ಬದುಕನ್ನು ಸಲೀಸಾಗಿಸಲು ಸಹಾಯಕರನ್ನೂ, ರಕ್ಷಣೆಗಾಗಿ ಅಂಗರಕ್ಷಕರನ್ನೂ ಮಾಝ್ ಆಡಳಿತವು ಒದಗಿಸಿತ್ತು. ತನ್ನ ಮಹಾತ್ವಾಕಾಂಕ್ಷೆಯ ಯೋಜನೆಗಾಗಿ ಬೇಕಿದ್ದಷ್ಟು ಕಾಸು ಚೆಲ್ಲಲು ಮಾಝ್ ಸಿದ್ಧನಿದ್ದ. ಇನ್ನು ಸಂಭಾವ್ಯದ ಹೊಸ ಪ್ರಾಂತ್ಯವೊಂದಕ್ಕೆ ಬಂಕೋನ ಹೆಸರನ್ನು ಅಧಿಕೃತವಾಗಿ ಇಡುವ ಮತ್ತು ಹೊಸ ಪ್ರಾಂತ್ಯವೊಂದರ ಮುಖ್ಯಸ್ಥನನ್ನಾಗಿ ನೇಮಿಸುವ ಆಮಿಷವನ್ನೂ ಆತನಿಗೆ ನೀಡಲಾಗಿತ್ತು.

“ಮನುಷ್ಯನಿಗೆ ಮಹಾತ್ವಾಕಾಂಕ್ಷೆಗಳಿರುವುದು ಸಹಜ. ಆದರೆ ವಿನಾಶದ ಪರಮಾವಧಿಯಂತಿರುವ ಇಂಥಾ ಯುದ್ಧಗಳು ನಮಗಿನ್ನು ಬೇಕೇ? ಜಗತ್ತಿನಲ್ಲಿ ಸದ್ಯಕ್ಕಿರುವ ಸಮಸ್ಯೆಗಳು ಸಾಲದೇ?”, ಬಂಕೋ ಸಹಜ ಧಾಟಿಯಲ್ಲೇ ಮಾಝ್ ನನ್ನು ಪ್ರಶ್ನಿಸಿದ್ದ. ತಾನು ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸವನ್ನು ಬರೆಯಲಿರುವ ಬಗ್ಗೆ ಖುಷಿಯಾಗಬೇಕೇ ಅಥವಾ ಸ್ಮಶಾನವೊಂದರ ಮೇಲೆ ಹೊಸದೊಂದು ಲೋಕವನ್ನು ಸೃಷ್ಟಿಸುವ ಬಗ್ಗೆ ಗಾಬರಿಯಾಗಬೇಕೇ ಎಂಬ ವಿಚಿತ್ರ ಗೊಂದಲದಲ್ಲಿ ಒದ್ದಾಡುವ ಸ್ಥಿತಿಯು ಈಗ ಬಂಕೋನದ್ದಾಗಿತ್ತು.

“ಅದು ಹಾಗಲ್ಲ. ಶಕ್ತಿವಂತರಷ್ಟೇ ಬದುಕಲು ಯೋಗ್ಯವಾಗಿರುವ ಜಗತ್ತಿದು”, ಎಂದಿದ್ದ ಮಾಝ್.

“ಹಾಗಿದ್ದರೆ ಬಲಹೀನರಿಗೂ ಸಮಾನ ಹಕ್ಕುಳ್ಳ ಜಗತ್ತು ಇರಬಾರದೇ?”

“ಬಲವಂತರೂ, ಬಲಹೀನರೂ ಸಮಾನರಾಗಿ ಬಾಳುವುದು ಕಥೆಗಳಲ್ಲಿ ಮಾತ್ರ, ನೈಜಜೀವನದಲ್ಲಲ್ಲ”, ಎಂದ ಮಾಝ್.

ಮಾಝ್ ತೀರ್ಪು ಕೊಟ್ಟಾಗಿತ್ತು. ಬಂಕೋನಿಗೆ ವೇದಿಕೆ ಸಿದ್ಧವಾಗಿತ್ತು. ಮಾತುಮಾತಿಗೆ ಮಹಾತ್ವಾಕಾಂಕ್ಷೆ ಅನ್ನುತ್ತಿದ್ದ ಆತನ ಮಾತುಗಳು ಬಂಕೋನಿಗೆ ದುರಾಸೆಯೆಂಬಂತೆ ಕಾಣುತ್ತಿದ್ದಿದ್ದೇನೋ ಸರಿ. ಆದರೆ ಅದನ್ನು ವಿರೋಧಿಸುವ ಸ್ಥಾನದಲ್ಲಂತೂ ಬಂಕೋ ಇರಲಿಲ್ಲ. ಬಂಕೋ ಮತ್ತು ಮಾಝ್ ಚರ್ಚಿಸುತ್ತಿದ್ದ ಐಷಾರಾಮಿ ಕೋಣೆಯ ಎಡಭಾಗದಲ್ಲಿ ಸಂಭಾವ್ಯದ ದೊಡ್ಡ ಧ್ವಜವೊಂದನ್ನು ಅದ್ಧೂರಿಯಾಗಿ ಕಾಣುವಂತೆ ಇರಿಸಲಾಗಿತ್ತು.

ಸಮಾಲೋಚನೆಯನ್ನು ಮುಗಿಸಿ ಹೊರಡುವ ಹೊತ್ತಿನಲ್ಲಿ ಬಂಕೋ ತನ್ನ ಬಲಗೈಯನ್ನು ಎದೆಯ ಮೇಲಿಟ್ಟು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ನೋಡಿದ. ತಾನು ದೇಶ ಬಿಟ್ಟು ಹೊರಡುವ ಮುನ್ನದ ಶಾಲಾದಿನಗಳಲ್ಲಿ, ಇದೇ ಭಂಗಿಯಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಾ ರೋಮಾಂಚನಕ್ಕೊಳಗಾಗುತ್ತಿದ್ದ ದೃಶ್ಯವು ಅವನ ಕಣ್ಣಮುಂದೆ ಮಿಂಚಿ ಮರೆಯಾದಂತಾಯಿತು. ದೇಶಪ್ರೇಮವೇ ಎಲ್ಲಕ್ಕಿಂತ ಮಿಗಿಲೆಂಬ ಭಾವುಕ, ಪರಿಚಿತ ಒಳದನಿಯೊಂದು ಅಂದು ಮನದ ಮೂಲೆಯಿಂದ ಹೊರಹೊಮ್ಮಿದಂತಾಯಿತು.

“ನಾಳೆಯಿಂದಲೇ ಬಂದು ಕರ್ತವ್ಯಕ್ಕೆ ಹಾಜರಾಗುತ್ತೇನೆ ಜನರಲ್”, ಎಂದು ಸರ್ವಾಧಿಕಾರಿಯೆದುರು ಗೌರವದಿಂದ ತಲೆಬಾಗಿದ ಬಂಕೋ. ಮಾಝ್ ನ ಕಣ್ಣಿನಲ್ಲಿ ಮತ್ತೊಮ್ಮೆ ಗೆಲುವಿನ ಬೆಳಕು ಪ್ರತಿಫಲಿಸಿತ್ತು.

******

ಹೀಗೆ ಬಂಕೋ ಸಂಭಾವ್ಯಕ್ಕೆ ಬಂದಿಳಿದ ಕೆಲವೇ ದಿನಗಳಲ್ಲಿ ಮಾಝ್ ನ ರಹಸ್ಯ ಯೋಜನೆಗಳು ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ಬರಲಾರಂಭಿಸಿದ್ದವು. ಡಾ. ಬಂಕೋನ ನೇತೃತ್ವದಲ್ಲಿ ಪ್ರಯೋಗಾಲಯದ ಕೆಲಸಗಳು ದಿನಕ್ಕೆ ಹತ್ತರಿಂದ ಹನ್ನೆರಡು ತಾಸುಗಳ ಕಾಲ ನಿರಂತರವಾಗಿ ನಡೆಯುತ್ತಿದ್ದವು. ಇನ್ನು ಮಾಝ್ ವಾರಕ್ಕೊಮ್ಮೆಯಾದರೂ ಈ ರಹಸ್ಯ ಸ್ಥಳಕ್ಕೆ ಸ್ವತಃ ಭೇಟಿ ನೀಡಿ, ನಡೆಯುತ್ತಿದ್ದ ಬೆಳವಣಿಗೆಗಳ ಬಗ್ಗೆ ವರ್ತಮಾನಗಳನ್ನು ಪಡೆಯುತ್ತಿದ್ದ. ಬಂಕೋ ಅಹೋರಾತ್ರಿ ಕೆಲಸ ಮಾಡುತ್ತಿದ್ದ ಪ್ರಯೋಗಾಲಯದ ಗೋಡೆಯೊಂದರಲ್ಲಿ ಸರ್ವಾಧಿಕಾರಿ ಮಾರ್ತಾಂಡ ಸಿಂಹನಾಯಕ ಮತ್ತು ಮಾಝ್ ರ ಫ್ರೇಮ್ ಹಾಕಿದ್ದ ದೊಡ್ಡ ತೈಲಚಿತ್ರಗಳನ್ನು ಇರಿಸಲಾಗಿತ್ತು. ಚಿನ್ನದ ಬಣ್ಣದ ಫ್ರೇಮಿನೊಂದಿಗೆ, ಸಂಭಾವ್ಯದ ರಾಷ್ಟ್ರಧ್ವಜದೊಂದಿಗೆ ಬೀಗುತ್ತಿದ್ದ ಆ ಚಿತ್ರಗಳನ್ನು ಕಂಡು ಮಾಝ್ ಮತ್ತಷ್ಟು ಸಂತುಷ್ಟನಾಗುತ್ತಿದ್ದ. ಹೀಗಾದಾಗಲೆಲ್ಲಾ ಬಂಕೋನ ಬಗೆಗಿದ್ದ ಆತನ ಅಭಿಮಾನವು ಮತ್ತಷ್ಟು ಹೆಚ್ಚುತ್ತಿತ್ತು.

ಅತ್ತ ಸಂಭಾವ್ಯದ ರಾಜಧಾನಿಯ ಹೃದಯಭಾಗದಲ್ಲಿದ್ದ ದೈತ್ಯ ಅರಮನೆಯೂ ಕೂಡ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿತ್ತು. ಸರ್ವಾಧಿಕಾರಿ ಮಾರ್ತಾಂಡ ಸಿಂಹನಾಯಕ ಈಗ ತನ್ನ ಪುತ್ರನಾದ ಮಾಝ್ ಗಾಗಿ ಆಡಳಿತದ ವೇದಿಕೆಯನ್ನು ಸಿದ್ಧಪಡಿಸುತ್ತಿದ್ದ. ತನ್ನ ಮೂರು ದಶಕಗಳ ಆಡಳಿತವು ಆತನಿಗೆ ತೃಪ್ತಿಯನ್ನು ನೀಡಿತ್ತು. ಅಲ್ಲದೆ ಈಗ ಸಂಭಾವ್ಯದ ಆಡಳಿತಕ್ಕೀಗ ಯುವ ನಾಯಕನೊಬ್ಬನ ಅವಶ್ಯಕತೆಯೂ ಸಾಕಷ್ಟಿತ್ತು. ಎಲ್ಲದಕ್ಕಿಂತಲೂ ಮೇಲಾಗಿ ಮಾಝ್ ಸಂಭಾವ್ಯದ ಹೊಸ ಅಧಿಪತಿಯಾದಲ್ಲಿ ತಂದೆಯ ಆಣತಿಯ ಮೇರೆಗೆ ಪುತ್ರನು ದೇಶವನ್ನು ಚಲಾಯಿಸುವುದು ಸಿಂಹನಾಯಕನಿಗೆ ಅನುಕೂಲವಾಗುವ ಸಂಗತಿಯಾಗಿತ್ತು.

ಆ ವರ್ಷ ಸಂಭಾವ್ಯದ ವಾರ್ಷಿಕ ಸಾಂಸ್ಕೃತಿಕ ಮಹೋತ್ಸವವು ಅದ್ಧೂರಿಯಿಂದ ನೆರವೇರಿತ್ತು. ರಾಜಧಾನಿಯಲ್ಲಿ ‘ಜನರಲ್ ಸ್ಕ್ವೇರ್’ ಎಂದು ಕರೆಯಲಾಗುತ್ತಿದ್ದ ಪ್ರತಿಷ್ಠಿತ ಸ್ಥಳವೊಂದರಲ್ಲಿ ಮಹೋತ್ಸವದ ಆಚರಣೆಗೆ ಅಧಿಕೃತವಾಗಿ, ದೊಡ್ಡ ಮಟ್ಟಿನಲ್ಲಿ ಚಾಲನೆಯನ್ನು ನೀಡಲಾಗಿತ್ತು. ಅಂದು ಮಾರ್ತಾಂಡ ಸಿಂಹನಾಯಕನೂ ಸೇರಿದಂತೆ ಆತನ ಮನೆತನ, ಮಿಲಿಟರಿ ಆಡಳಿತದ ಹಲವು ವಿಭಾಗಗಳ ಮುಖ್ಯಸ್ಥರು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಹಲವು ಕಾರ್ಯಕ್ರಮಗಳು ಸಂಭ್ರಮದಲ್ಲಿ ನೆರವೇರಿದ್ದವು. ಈ ಬಾರಿ ಗಣ್ಯಾತಿಗಣ್ಯರ ಸಾಲಿನಲ್ಲಿ ಬಂಕೋನಿಗೂ ಕೂಡ ಒಂದು ಆಸನವನ್ನು ಮೀಸಲಿಡಲಾಗಿತ್ತು. ಬಂಕೋನ ವಿಚಾರದಲ್ಲಿ ಮಾಝ್ ವಿಶೇಷವಾದ ಮುತುವರ್ಜಿಯನ್ನು ವಹಿಸಿ ಇವೆಲ್ಲವನ್ನು ಸಜ್ಜುಗೊಳಿಸಿದ್ದ. ಮಾಧ್ಯಮ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳು ಅಷ್ಟಕ್ಕಷ್ಟೇ ಇದ್ದ ಸಂಭಾವ್ಯದ ದಿನಪತ್ರಿಕೆಗಳು ಗಣ್ಯರ ಸಾಲಿನಲ್ಲಿ ಬಂಕೋನ ಉಪಸ್ಥಿತಿಯನ್ನು ನೋಡಿಯೂ ನೋಡದಂತೆ ತೆಪ್ಪಗಿದ್ದವು. ಆದರೆ ಇತರ ಕೆಲ ದೇಶಗಳ ಟ್ಯಾಬ್ಲಾಯ್ಡುಗಳಲ್ಲಿ ಈ ಸುದ್ದಿಯು ಪ್ರಕಟವಾಯಿತೆಂದು ವಿದೇಶದಲ್ಲಿರುವ ತನ್ನ ಕೆಲ ಮಿತ್ರರಿಂದ ಬಂಕೋನಿಗೆ ವರ್ತಮಾನ ಸಿಕ್ಕಿತ್ತು.

ಬಂಕೋ ಸಂಭಾವ್ಯದ ರಾಜಾಶ್ರಯದಲ್ಲಿರುವ ಓರ್ವ ಖಾಸಾ ವ್ಯಕ್ತಿಯಾಗಿರಬಹುದೇ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದು ಈ ಮಸಾಲೆಭರಿತ ರೋಚಕ ಸುದ್ದಿಗಳಲ್ಲಿರುತ್ತಿತ್ತೇ ಹೊರತು ಗಾಬರಿಯಾಗುವಂಥದ್ದೇನಿರಲಿಲ್ಲ. ಆದರೆ ಒಂದಂತೂ ನಿಜವಾಗಿತ್ತು. ಬಂಕೋನನ್ನು ಈಗ ಜನರು ಸಾರ್ವಜನಿಕವಾಗಿ ಗುರುತಿಸಲಾರಂಭಿಸಿದ್ದರು. ಪ್ರತಿಭಾವಂತ ವೈದ್ಯ ಮತ್ತು ಯುವವಿಜ್ಞಾನಿಯೆಂಬ ಆತನಿಗಿದ್ದ ಸ್ಥಾನಮಾನಗಳು ಈಗ ಸಂಭಾವ್ಯದಲ್ಲಿ ಮತ್ತಷ್ಟು ಹೆಚ್ಚಾಗಿದ್ದವು. ಬಂಕೋನಿಗೆ ವಹಿಸಲಾಗಿದ್ದ ನಿಜವಾದ ಜವಾಬ್ದಾರಿಗಳ ಬಗ್ಗೆ ಯಾರೊಬ್ಬರಿಗೂ ಸುಳಿವಿಲ್ಲದಿದ್ದರೂ, ಆತ ರಾಜಾಶ್ರಯದಲ್ಲಿರುವ ವಿಶೇಷ ಗಣ್ಯವ್ಯಕ್ತಿಯೆಂಬ ಸಂಗತಿಯು ಕ್ರಮೇಣ ಎಲ್ಲರ ಅರಿವಿಗೂ ನಿಲುಕತೊಡಗಿತ್ತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಮಾಝ್ ತೀರ್ಪು ಕೊಟ್ಟಾಗಿತ್ತು. ಬಂಕೋನಿಗೆ ವೇದಿಕೆ ಸಿದ್ಧವಾಗಿತ್ತು. ಮಾತುಮಾತಿಗೆ ಮಹಾತ್ವಾಕಾಂಕ್ಷೆ ಅನ್ನುತ್ತಿದ್ದ ಆತನ ಮಾತುಗಳು ಬಂಕೋನಿಗೆ ದುರಾಸೆಯೆಂಬಂತೆ ಕಾಣುತ್ತಿದ್ದಿದ್ದೇನೋ ಸರಿ. ಆದರೆ ಅದನ್ನು ವಿರೋಧಿಸುವ ಸ್ಥಾನದಲ್ಲಂತೂ ಬಂಕೋ ಇರಲಿಲ್ಲ.

ಆದರೆ ಈ ಸಾಮಾಜಿಕ ಸ್ಥಾನಮಾನಗಳು ಬಂಕೋನಲ್ಲಿ ಆತ್ಮಸಂತೃಪ್ತಿಯನ್ನು ತಂದಿದ್ದವೇ ಎಂಬುದು ಮಾತ್ರ ಬೇರೆ ಪ್ರಶ್ನೆ. ಕರ್ತವ್ಯಪಾಲನೆಗಾಗಿ ತನಗೆ ನೀಡಲಾಗುತ್ತಿದ್ದ ಸೌಲಭ್ಯ ಮತ್ತು ವಿಲಾಸಗಳು ಆಹಾ ಎನ್ನುವಂತಿದ್ದರೂ ತನ್ನ ಪ್ರತಿಭೆಯನ್ನು ಕುಟಿಲ ರಾಜಕೀಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂಬ ಭಾವನೆಗಳು ಅವನಲ್ಲಿ ಕ್ರಮೇಣ ಅಸಮಾಧಾನವನ್ನು ಹುಟ್ಟಿಸಿದ್ದವು. ಏಕೆಂದರೆ ತನ್ನ ಬೆಲೆಕಟ್ಟಲಾಗದ ಪ್ರತಿಭೆಯನ್ನು ಆಡಳಿತವು ನೀಡುತ್ತಿದ್ದ ಆಮಿಷದ ಜುಜುಬಿ ವಿಲಾಸಗಳಿಗೆ ತಾನು ಮಾರಿಕೊಂಡಂತೆ ಬಂಕೋನಿಗೆ ಅನ್ನಿಸುತ್ತಿತ್ತು. ಅಂದು ಸಂಭಾವ್ಯದ ಸಾಂಸ್ಕೃತಿಕ ಮಹೋತ್ಸವದಲ್ಲಿ ಕೀ ಕೊಟ್ಟ ಗೊಂಬೆಗಳಂತೆ ಪರೇಡ್ ನಡೆಸುತ್ತಿದ್ದ ಸೈನ್ಯದ ತುಕಡಿಗಳಿಗೂ, ತನಗೂ ವ್ಯತ್ಯಾಸಗಳಿಲ್ಲವೆಂಬ ಕಟುಸತ್ಯವು ಆತನಿಗೆ ನಿಧಾನವಾಗಿ ಅರಿವಾಗತೊಡಗಿತ್ತು.

ಸರ್ವಾಧಿಕಾರಿ ಸರ್ವವೂ ಆಗಿದ್ದಾನೆ ಎಂಬ ಭ್ರಮೆಯಲ್ಲಿ ಅಂದು ನಾಗರಿಕರು ತೊಡಗಿದ್ದಂತೆ ಕಂಡರೆ, ಅದನ್ನು ನಂಬಿರುವಂತೆ ಮತ್ತು ಇಂಥದ್ದೊಂದು ಭ್ರಮೆಯು ಸದಾಕಾಲ ಉಳಿಯುವಂತೆ ಆಡಳಿತದ ಶಕ್ತಿಗಳು ಕೆಲಸ ಮಾಡುತ್ತಿದ್ದಂತೆ ಭಾಸವಾಗುತ್ತಿತ್ತು. ತಾನೂ ಕೂಡ ಅಂತಹ ಒಂದು ಯಾಂತ್ರಿಕ ಗೊಂಬೆಯೇ ಎಂದು ಬಂಕೋ ಹಲವು ಬಾರಿ ತನ್ನನ್ನು ತಾನೇ ಕೇಳಿಕೊಂಡಿದ್ದ. “ಈ ಸ್ವಗತದ ಪ್ರಶ್ನೆಗೆ ಆತ್ಮಸಾಕ್ಷಿಯಿಂದ ಸಿಕ್ಕ ಉತ್ತರವು ತನಗೆ ರುಚಿಸಲಿಲ್ಲ”, ಎಂದು ತನ್ನ ಖಾಸಗಿ ಡೈರಿಯಲ್ಲಿ ಬರೆದಿಟ್ಟು ಬಂಕೋ ನಿಟ್ಟುಸಿರಿಡುವ ದಿನಗಳೂ ಇರುತ್ತಿದ್ದವು.

ಒಟ್ಟಿನಲ್ಲಿ ದಿನಗಳು ಉರುಳುತ್ತಾ ಹೋದಂತೆ ತಾನು ಮಾಝ್ ನ ಗುರಿಯತ್ತ ಮತ್ತಷ್ಟು ಹತ್ತಿರವಾಗುತ್ತಿದ್ದೇನೆ ಎಂಬ ಸತ್ಯವು ಮನದಟ್ಟಾದಾಗಲೆಲ್ಲಾ ಬಂಕೋ ಮತ್ತಷ್ಟು ಹತಾಶನಾಗುತ್ತಿದ್ದ. ಇಂತಹ ಅಪಾಯಕಾರಿ ಪ್ರಯೋಗಗಳು ಜಗತ್ತಿನೆಲ್ಲೆಡೆ ಯಾವ ರೀತಿಯ ವಿನಾಶವನ್ನು ತರಬಹುದು ಎಂಬುದರ ಬಗ್ಗೆ ಊಹಿಸಿಕೊಳ್ಳಲೂ ಆತನಿಗೆ ಹಿಂಸೆಯಾಗುತ್ತಿತ್ತು. ಹಾಗೆಂದು ಈ ಹಂತದಲ್ಲಿ ಹಿಮ್ಮೆಟ್ಟುವಂತೆಯೂ ಇರಲಿಲ್ಲ. ಸಂಭಾವ್ಯದ ಗೂಢಚರ ವಿಭಾಗವು ಭದ್ರತೆಯ ನೆಪದಲ್ಲಿ ಬಂಕೋನಿಗೆ ನೀಡಲಾಗಿದ್ದ ಸಹಾಯಕ ಸಿಬ್ಬಂದಿಗಳ ಮೇಲೆ ನಿರಂತರವಾಗಿ ತನ್ನ ಕಣ್ಣಿಟ್ಟಿತ್ತು. ತನ್ನನ್ನು ತಾನು ದೇಶಪ್ರೇಮಿಯೆಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದ ಬಂಕೋ ಈಗ ಹೆಚ್ಚೇ ಎಂಬಷ್ಟಿನ ರಾಜರಹಸ್ಯಗಳನ್ನು ತಿಳಿದುಕೊಂಡಿದ್ದ. ಆದರೆ ಉಸಿರುಗಟ್ಟುವಂತಿದ್ದ ಈ ಸತ್ಯಗಳೊಂದಿಗೆ ಬಾಳುವುದೇ ಆತನಿಗೊಂದು ಹೊಸ ಸವಾಲಾಗಿ ಪರಿಣಮಿಸಿತ್ತು.

ಇವೆಲ್ಲದರ ಹಿನ್ನೆಲೆಯೇ ಆತ್ಮಾವಲೋಕನವನ್ನು ಮಾಡಬೇಕಿದ್ದ ಅನಿವಾರ್ಯ ಸ್ಥಿತಿಗೆ ಬಂಕೋನನ್ನು ತಳ್ಳಿದ್ದು. ಕ್ರಮೇಣ ಸರ್ವಾಧಿಕಾರಿ ಮಾರ್ತಾಂಡ ಸಿಂಹನಾಯಕ ಮತ್ತು ಅವನ ಪುತ್ರನಾಗಿದ್ದ ಮಾಝ್ ಆತನಿಗೆ ದುರಾಸೆಯೇ ಮೈವೆತ್ತಂತಹ ರಾಕ್ಷಸರಂತೆ ಕಾಣತೊಡಗಿದ್ದರು. ಈಚೆಗಂತೂ ಸಂಭಾವ್ಯದ ಆಡಳಿತವು ತನ್ನ ಆದ್ಯತೆಗಳನ್ನು ಮರೆತಂತಿದ್ದು, ಭಿನ್ನವಾದ ಮಾರ್ಗದಲ್ಲಿ ರಾಜಕೀಯ ಹೆಜ್ಜೆಗಳನ್ನಿಡುತ್ತಿತ್ತು. ಸಂಭಾವ್ಯದ ಗಡಿಭಾಗಗಳಲ್ಲಿ ದಂಗೆಗಳನ್ನು ಕೃತಕವಾಗಿ ಸೃಷ್ಟಿಸಿ, ನಂತರ ಅವುಗಳನ್ನು ಮಟ್ಟಹಾಕಲಾಗುತ್ತಿತ್ತು. ಹೀಗೆ ತನ್ನೊಳಗಿನಿಂದ ಮಂದವಾಗಿ ಕೇಳಿಬರುತ್ತಿದ್ದ ನೈತಿಕತೆಯ ಮತ್ತು ಮಾನವೀಯತೆಯ ದನಿಗಳು ಬಂಕೋನನ್ನು ಈಗ ಅಗ್ನಿಪರೀಕ್ಷೆಗೊಡ್ಡಿದ್ದವು.

ಡಾ. ಬಂಕೋನ ಬದುಕು ಮಗ್ಗುಲು ಬದಲಾಯಿಸಲು ಆರಂಭವಾಗಿದ್ದೇ ಬಹುಷಃ ಈ ಹಂತದಿಂದ.

******

ಡಾ. ಬಂಕೋನ ಉಭಯಸಂಕಟವು ಸಹಜವೇ ಆಗಿತ್ತು. ಇಂತಹ ಯೋಚನೆಗಳಿಂದ ತಕ್ಷಣಕ್ಕೇನೂ ಆಗದಿದ್ದರೂ ಬಂಕೋ ದಿನಗಳೆದಂತೆ ತನ್ನದೇ ದೃಷ್ಟಿಯಲ್ಲಿ ಮತ್ತಷ್ಟು ಬೆತ್ತಲಾಗುತ್ತಿದ್ದ. ತನ್ನೊಳಗೆ ನಡೆಯುತ್ತಿದ್ದ ನೈತಿಕತೆ ಮತ್ತು ದೇಶಸೇವೆಯ ನಡುವಿನ ಯುದ್ಧಗಳು ಆತನನ್ನು ನಿರಂತರವಾಗಿ ಕಂಗೆಡಿಸುತ್ತಿದ್ದವು. ‘ಅಧಿಕಾರ, ಯಶಸ್ಸಿನತ್ತ ನಡೆಯಲು ನಿನಗಾಗಿ ಕೆಂಪು ರತ್ನಗಂಬಳಿಯನ್ನು ಹಾಸಿದ್ದೇನೆ’ ಎಂದು ಮಾಝ್ ಆಗಾಗ ಹುರಿದುಂಬಿಸುತ್ತಿದ್ದ. ಆದರೆ ನೈಜಸ್ಥಿತಿಯೇನೆಂದರೆ ಹಾಸಿದಂತೆ ಕಾಣುತ್ತಿರುವ ರತ್ನಗಂಬಳಿಯುದ್ದಕ್ಕೂ ಚೆಲ್ಲಿರುವುದು ನೆತ್ತರು ಮಾತ್ರ ಎಂಬುದು ಬಂಕೋನಿಗೆ ತಿಳಿದಿತ್ತು.

ಮಾಝ್ ಎಂದಿನಂತೆ ಗತ್ತಿನಿಂದ ತನ್ನ ಗುರಿಯನ್ನಿಡುತ್ತಿದ್ದರೂ, ಬಂದೂಕು ಬಂಕೋನ ಹೆಗಲ ಮೇಲಿತ್ತು. ಸರ್ವಾಧಿಕಾರಿ ವ್ಯವಸ್ಥೆಯು ಎಲ್ಲರಿಂದ ವಿಧೇಯತೆಯನ್ನು ಬಯಸುತ್ತಿತ್ತೇ ಹೊರತು ಅಲ್ಲಿ ವಿರೋಧಕ್ಕೆ ಅವಕಾಶವಿರಲಿಲ್ಲ. ಸಂಭಾವ್ಯದಲ್ಲಿರುವ ಎಲ್ಲರಂತೆ ಬಂಕೋ ಕೂಡ ವ್ಯವಸ್ಥೆಯ ಕೀಲಿಗೊಂಬೆಯಷ್ಟೇ ಆಗಿದ್ದ.

ಸರ್ವಾಧಿಕಾರಿಯೊಬ್ಬ ರಾಜನಾಗುವುದೂ, ರಾಜನೊಬ್ಬ ನಾಗರಿಕರ ದೃಷ್ಟಿಯಲ್ಲಿ ದೇವರಾಗುವುದೂ ಸುಲಭ. ಇದು ಸ್ವಾಭಾವಿಕವಾಗಿ ಆಗದಿದ್ದರೆ ವ್ಯವಸ್ಥೆಯು ಒತ್ತಾಯಪೂರ್ವಕವಾಗಿಯಾದರೂ ತನ್ನ ನಾಗರಿಕರಿಂದ ಇದನ್ನು ಮಾಡಿಸುತ್ತದೆ. ಇಂತಿಪ್ಪ ಮಾನವರೂಪಿ ಭಗವಂತನ ಹಿಡಿತದಲ್ಲಿ ದೇಶದ ಭವಿಷ್ಯವು ನಿರ್ಭರವಾಗುವುದು ಹೀಗೆ. ಹೀಗಾಗಿ ಒಂದು ದೃಷ್ಟಿಕೋನದಿಂದ ನೋಡಿದರೆ ರಾಜನೊಬ್ಬ ಸೃಷ್ಟಿಕರ್ತನೂ ಹೌದು, ದಮನಕಾರಿ ಶಕ್ತಿಯೂ ಹೌದು. ಆತ ತನ್ನ ಪ್ರಾಂತ್ಯವನ್ನು ಸ್ವರ್ಗವಾಗಿಸಲೂಬಲ್ಲ, ನರಕವಾಗಿಸಲೂ ಕೂಡ ಶಕ್ತ. ಸಾಮ್ರಾಜ್ಯಗಳು ಸಾಮಾನ್ಯವಾಗಿ ರಕ್ತದಿಂದ ತೊಯ್ದ ನೆಲದ ಮೇಲೆ ಸ್ಥಾಪನೆಯಾಗಿ, ಬಹುತೇಕ ಅದೇ ಸ್ಥಿತಿಯಲ್ಲಿ ಅವಸಾನಗೊಳ್ಳುತ್ತವೆ. ವಿಚಿತ್ರವೆಂದರೆ ಇತಿಹಾಸವು ಈ ಸತ್ಯವನ್ನು ಅದೆಷ್ಟು ಬಾರಿ ಸಾಬೀತುಪಡಿಸಿದರೂ ರಾಜಕೀಯ ಶಕ್ತಿಗಳು ವಿನಾಶವನ್ನು ಬಿಟ್ಟು ಬೇರೆ ಮಾರ್ಗಗಳತ್ತ ನೋಡುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ.

ಈ ನಿಟ್ಟಿನಲ್ಲಿ ಮತ್ತಷ್ಟು ಆಳವಾಗಿ ಯೋಚಿಸಿದರೆ, ಓರ್ವ ವೈದ್ಯನಾಗಿ ಮತ್ತು ವಿಜ್ಞಾನಿಯಾಗಿ ತಾನೂ ಕೂಡ ಸರ್ವಾಧಿಕಾರಿಯಷ್ಟೇ ಸರ್ವಶಕ್ತನೆಂಬಂತೆ ಬಂಕೋನಿಗೆ ಭಾಸವಾಗುತ್ತಿತ್ತು. ಏಕೆಂದರೆ ಜೀವದಾನವನ್ನು ಮಾಡಬಲ್ಲ ವೈದ್ಯನೊಬ್ಬ, ಪ್ರಾಣವನ್ನು ಕಿತ್ತುಕೊಳ್ಳಲೂಬಲ್ಲ. ಸರ್ವಾಧಿಕಾರಿಯೊಬ್ಬನ ದುರಾಸೆಗಾಗಿ ಕೋಟ್ಯಾಂತರ ಮಂದಿಯ ಬದುಕನ್ನು ಸದ್ದಿಲ್ಲದೆ ಹೊಸಕಿಹಾಕಬಲ್ಲ ಬಂಕೋ, ಮನಸ್ಸು ಮಾಡಿದರೆ ಪಾತ್ರಗಳನ್ನು ಅದಲುಬದಲಾಗಿಸಿಯೂ ಸಂದರ್ಭವನ್ನು ಅಡಿಮೇಲಾಗಿಸಬಲ್ಲ ಚಾಣಾಕ್ಷನಾಗಿದ್ದ. ಅದೃಷ್ಟವಶಾತ್ ಈ ಒಂದು ಅಂಶವು ಆತನಲ್ಲಿ ತಕ್ಕಮಟ್ಟಿನ ಧೈರ್ಯವನ್ನು ತುಂಬಿತ್ತು.

ಹೀಗೆ ದೇಶಪ್ರೇಮದ ಹೆಸರಿನಲ್ಲಿ ಮಾಝ್ ನ ಮಹಾತ್ವಾಕಾಂಕ್ಷೆಯನ್ನು ಪೊರೆಯಬಲ್ಲ ಬಂಕೋ, ತನ್ನ ವೃತ್ತಿಧರ್ಮದ ನೈತಿಕತೆ ಮತ್ತು ಒಟ್ಟಾರೆ ಮಾನವತೆಯ ಉಳಿವಿಗಾಗಿ ಓರ್ವ ರಹಸ್ಯ ಕ್ರಾಂತಿಕಾರಿಯಾಗಿಯೂ ಬದಲಾಗಬಲ್ಲವನಾಗಿದ್ದ. ಆದರೆ ಬಂಕೋನ ಕ್ರಾಂತಿಕಾರಿ ಮುಖವನ್ನು ಇತಿಹಾಸವು ವೈಭವೀಕರಿಸುವುದು ಹಾಗಿರಲಿ, ಅದರ ಚಿಕ್ಕ ಸುಳಿವೂ ಕೂಡ ಇತಿಹಾಸಕ್ಕೆ ಸಿಗುವಂತಿರಲಿಲ್ಲ. ಆತನ ಈ ಅಪರೂಪದ ಕಥೆಯು ಸಂಭಾವ್ಯದ ಮುಂದಿನ ಪೀಳಿಗೆಯ ಮಕ್ಕಳ ಪಠ್ಯದಲ್ಲಿ ಸೇರಿಕೊಳ್ಳುವ ಸಾಧ್ಯತೆಗಳಿರಲಿಲ್ಲ. ಸಂಭಾವ್ಯದ ಹಿನ್ನೆಲೆಯು ವರ್ಷಾನುಗಟ್ಟಲೆ ಆತನಿಗೆ ರಾಷ್ಟ್ರೀಯತೆಯ ಅಮಲನ್ನಷ್ಟೇ ಕಲಿಸಿತ್ತು. ಆದರೆ ಮಾನವೀಯ ಜೀವನಾನುಭವಗಳು ಅವನಲ್ಲಿ ತನಗರಿವಿಲ್ಲದಂತೆಯೇ ಕ್ರಾಂತಿಯ ಬೀಜವನ್ನು ಬಿತ್ತಿದ್ದವು.

ತನ್ನ ಹೆಗಲ ಮೇಲಿರಿಸಲಾಗಿದ್ದ ಬಂದೂಕನ್ನು ಸರಿಸಿ ಮೈಕೊಡವಿಕೊಳ್ಳಲು ಬಂಕೋ ಕೊನೆಗೂ ತಯಾರಾಗಿದ್ದ.

******

ಬಂಕೋನೊಂದಿಗೆ ಸಮಾಲೋಚನೆಯನ್ನು ನಡೆಸಲು ಈ ಬಾರಿ ಪ್ರಯೋಗಾಲಯಕ್ಕೆ ಬಂದಿದ್ದ ಮಾಝ್ ನ ಭೇಟಿಯು ಆತನ ಬದುಕಿನ ಕೊನೆಯ ಪಯಣವಾಗಿತ್ತು. ಗೌಜುಗದ್ದಲವಿಲ್ಲದೆ ಲಕ್ಷಾಂತರ ಜೀವಗಳನ್ನು ನಾಶಪಡಿಸಲು ಯಾವ ಮಾಝ್ ಬಯಸಿದ್ದನೋ, ಅದೇ ಶೈಲಿಯಲ್ಲಿ ಆತನ ನಿಗೂಢ ಅಂತ್ಯವಾಗಿತ್ತು. ಸಂಭಾವ್ಯದ ರಾಜವೈದ್ಯರು ಈ ಆಕಸ್ಮಿಕ ಸಾವನ್ನು ಹೃದಯಾಘಾತವೆಂದು ಷರಾ ಬರೆದಿದ್ದರು. ಇತ್ತ ಪುತ್ರನ ಅನಿರೀಕ್ಷಿತ ಸಾವಿನಿಂದಾಗಿ ವೃದ್ಧ ಮಾರ್ತಾಂಡ ಸಿಂಹನಾಯಕ ಕುಸಿದುಹೋಗಿದ್ದ. ಆಡಳಿತ ವರ್ಗದಲ್ಲಿ ತನ್ನ ಸ್ಥಾನವನ್ನು ತುಂಬಲು ಸಮರ್ಥ ನಾಯಕರಿದ್ದರೂ ತನ್ನ ವಂಶದ ಕುಡಿಯೇ ಸಿಂಹಾಸನವನ್ನು ಅಲಂಕರಿಸಬೇಕೆಂಬ ಬಯಕೆ ಆತನದಾಗಿತ್ತು. ಮಾಝ್ ನ ನಿಗೂಢ ಸಾವು ಆತನ ಎಲ್ಲಾ ಕನಸುಗಳಿಗೂ ಕೊಳ್ಳಿಯಿಟ್ಟಿತ್ತು.

ರಾಜಧಾನಿಯ ಹೊರವಲಯದಲ್ಲಿ ಮಾಝ್ ಸೃಷ್ಟಿಸಿದ್ದ ದೈತ್ಯ ಪ್ರಯೋಗಾಲಯದ ಅಸಲಿ ಸಂಗತಿಗಳು ಆಂತರಿಕ ಗೌಪ್ಯತೆ ಮತ್ತು ರಾಜರಹಸ್ಯಗಳ ಕಾಯಿದೆಯಡಿಯಲ್ಲಿ ಎಲ್ಲೂ ಲಿಖಿತರೂಪದಲ್ಲಿ ದಾಖಲಾಗಿರಲಿಲ್ಲ. ಅದು ಬಂಕೋ ಮತ್ತು ಮಾಝ್ ರಿಗಷ್ಟೇ ಸಂಪೂರ್ಣವಾಗಿ ತಿಳಿದಿದ್ದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಸೂಕ್ಷ್ಮಾಣುಜೀವಿಗಳನ್ನು ಭವಿಷ್ಯದ ದಿನಗಳಲ್ಲಿ ಶಸ್ತ್ರಗಳಾಗಿ ಹೇಗೆ ಬಳಸಬಹುದು ಎಂಬುದನ್ನು ಪ್ರಯೋಗಾರ್ಥವಾಗಿ ಪರೀಕ್ಷಿಸಲಾಗುತ್ತಿದೆ ಎಂಬ ಮಾಹಿತಿಯನ್ನಷ್ಟೇ ಪ್ರಯೋಗಾಲಯದ ಸಿಬ್ಬಂದಿಗಳಿಗೆ ನೀಡಲಾಗಿತ್ತು. ಆದರೆ ತಮ್ಮ ದೇಶದ ಸರ್ವಾಧಿಕಾರಿ ಪ್ರಭುತ್ವವು ಇದನ್ನು ಪ್ರಾಯೋಗಿಕವಾಗಿ ಬಳಸಲಿದೆ ಎಂಬ ಯಾವ ಕಲ್ಪನೆಯೂ ಈ ತಂತ್ರಜ್ಞರಿಗಿರಲಿಲ್ಲ.

ಅಸಲಿಗೆ ಸಂಭಾವ್ಯದ ವೈರಾಲಜಿ ಕ್ಷೇತ್ರದಲ್ಲಿ ಇಂಥದ್ದೊಂದು ಐತಿಹಾಸಿಕ ಮೈಲುಗಲ್ಲು ಸಾಧ್ಯವಾಗಲಿದೆಯೆಂಬ ಭರವಸೆಯೂ ಬಂಕೋನ ತಂಡದಲ್ಲಿದ್ದ ತಂತ್ರಜ್ಞರಿಗಿರಲಿಲ್ಲ. ಮಾಝ್ ಕಂಡ ಕನಸು ನಿಜಕ್ಕೂ ದೈತ್ಯಾಕಾರದ್ದಾಗಿತ್ತು. ಆದರೆ ಸಂಭಾವ್ಯದ ನಾಗರಿಕರು ಆ ಮಟ್ಟಿನ ಕನಸುಗಳನ್ನೆಂದೂ ಕಂಡಿರಲಿಲ್ಲ. ಅವರ ಪ್ರಾಥಮಿಕ ಆದ್ಯತೆಗಳು ಬೇರೆಯದೇ ಆಗಿದ್ದವು. ತಮ್ಮ ದೇಶದ ತಂತ್ರಜ್ಞಾನಗಳ ಬಗ್ಗೆ ಹೇಳಿಕೊಳ್ಳುವಂತಹ ನಿರೀಕ್ಷೆಗಳೂ ಅವರಲ್ಲಿರಲಿಲ್ಲ. ಹೀಗಾಗಿ ಮಾಝ್ ಒಮ್ಮೆ ಕಂಡಿದ್ದ ಇಂಥದ್ದೊಂದು ಕನಸೂ, ನೆಲಮಹಡಿಯಲ್ಲಿ ನಿರ್ಮಿಸಲ್ಪಟ್ಟಿದ್ದ ಸುಸಜ್ಜಿತ ಪ್ರಯೋಗಾಲಯದ ಅಸಲಿ ರಹಸ್ಯವೂ ಆತನ ಮರಣದೊಂದಿಗೆ ಶಾಶ್ವತವಾಗಿ ಸಮಾಧಿಯಾಗಿತ್ತು. ಮುಂದೆ ಡಾ. ಬಂಕೋನ ರಾಜೀನಾಮೆಯ ಬೆಳವಣಿಗೆಯ ನಂತರ, ಒಂದು ಹಂತಕ್ಕೆ ಬಂದು ನಿಂತಿದ್ದ ಯೋಜನೆಯನ್ನು ಸೂಕ್ತ ವಾರಸುದಾರರಿಲ್ಲದಿದ್ದ ಕಾರಣದಿಂದಾಗಿ ಅರ್ಧದಲ್ಲೇ ಕೈಬಿಡಲಾಯಿತು.

ಮಾಝ್ ನ ಅಂತ್ಯವಾಗಿ ಸುಮಾರು ಒಂದು ವರ್ಷದಷ್ಟು ಸಮಯವು ಕಳೆದ ನಂತರವೂ ಸಂಭಾವ್ಯದ ಮುಂದಿನ ನಾಯಕನನ್ನು ಆರಿಸಿಕೊಳ್ಳುವ ಬಗ್ಗೆ ಮಾರ್ತಾಂಡ ಸಿಂಹನಾಯಕ ಪರದಾಡುತ್ತಿದ್ದಾನೆ. ವೃದ್ಧ ಸರ್ವಾಧಿಕಾರಿಯನ್ನು ಮಟ್ಟಹಾಕಲು ಆಡಳಿತ ವರ್ಗದಲ್ಲೇ ಒಳಸಂಚುಗಳು ನಡೆಯುತ್ತಿವೆ. ಭಿನ್ನಮತಗಳು ಆಗಾಗ ಸ್ಫೋಟಗೊಂಡು ತಣ್ಣಗಾಗುತ್ತಿವೆ. ಸಂಭಾವ್ಯದಲ್ಲಿ ನಿಧಾನವಾಗಿ ಸೃಷ್ಟಿಯಾಗುತ್ತಿರುವ ಅರಾಜಕತೆ ಮತ್ತು ಮುಂದೆ ನಡೆಯಲಿರುವ ಆಂತರಿಕ ಯುದ್ಧಗಳ ಸಾಧ್ಯತೆಗಳನ್ನು ಊಹಿಸುತ್ತಾ, ತಾವು ಈ ಪರಿಸ್ಥಿತಿಯ ಲಾಭವನ್ನು ಹೇಗೆ ಪಡೆಯಬಹುದೆಂದು ಮುಂದುವರಿದ ಕೆಲ ರಾಷ್ಟ್ರಗಳ ನಾಯಕರು ಗಂಭೀರ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ.

ಡಾ. ಬಂಕೋ ಲ್ಯಾಟಿನ್ ಅಮೆರಿಕಾದ ಮೂಲೆಯೊಂದರಲ್ಲಿ ಸದ್ದಿಲ್ಲದೆ ತನ್ನ ಪಾಡಿಗೆ ಬದುಕುತ್ತಿದ್ದಾನೆ. ಪ್ರಸ್ತುತ ಆತನ ಸೇವೆಯು ಅಲ್ಲಿಯ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಾಗಿದೆ. ತನ್ನದೇ ಸಮಸ್ಯೆಗಳ ಸುಳಿಯಲ್ಲಿ ವ್ಯಸ್ತರಾಗಿರುವ ಸಂಭಾವ್ಯದ ಗಣ್ಯರ ವಲಯಕ್ಕೆ ಇಂದು ಬಂಕೋನ ನೆನಪಿಲ್ಲ. ಬೆರಳೆಣಿಕೆಯ ಮಂದಿಗೆ ಒಂದು ಪಕ್ಷ ನೆನಪಿದ್ದರೂ ಅಧಿಕಾರಕ್ಕಾಗಿ ಹುಟ್ಟಿದ್ದ ಆಂತರಿಕ ಕಲಹದಲ್ಲಿ, ಆಕಾಂಕ್ಷಿಯಾಗಬಹುದಾಗಿದ್ದ ಅಭ್ಯರ್ಥಿಯೊಬ್ಬ ತಾನಾಗಿಯೇ ಜಾಗ ಖಾಲಿ ಮಾಡಿದ್ದು ಒಳ್ಳೆಯದೇ ಆಯಿತೆಂದು ಕೆಲವರು ನಿರಾಳರಾಗಿರಲೂಬಹುದು.

ಚಯಾಂಗ್ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ವಿಶಾಲ ಮೈದಾನವೊಂದರಲ್ಲಿ ಇಂದು ನೂರಡಿ ಎತ್ತರದ ಭವ್ಯ ಮೂರ್ತಿಯೊಂದನ್ನು ನೀವು ನೋಡಬಹುದು. ಜನರಲ್ ಮಾಝ್ ನ ಆ ಮೂರ್ತಿಯ ಕಣ್ಣುಗಳು ಇಂದಿಗೂ ಜಗತ್ತಿನ ಮೇಲೆ ತನ್ನದೊಂದು ಕಣ್ಣಿಟ್ಟಿರುವಂತೆ ನಿಮಗೆ ಕಂಡರೆ ಅದು ಅತಿಶಯೋಕ್ತಿಯೇನಲ್ಲ ಬಿಡಿ.

******

ಲೇಖಕರ ಕಿರುಪರಿಚಯ:
ಮೇಘನಾ ಸುಧೀಂದ್ರ
ಮೇಘನಾ ಸುಧೀಂದ್ರ ಬೆಂಗಳೂರಿನವರು. ಬಾರ್ಸಿಲೋನಾದಲ್ಲಿ Master of Science in Artificial Intelligence and Signal Processing ಪದವಿ ಪಡೆದಿದ್ದಾರೆ. “ಜಯನಗರದ ಹುಡುಗಿ” ಇವರ ಪ್ರಕಟಿತ ಅಂಕಣ ಬರಹಗಳ ಪುಸ್ತಕ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ Senior AI Engineer ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2020ರ ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಯ ಮೂರನೆಯ ಬಹುಮಾನ ವಿಜೇತೆ.
ಪ್ರಸಾದ್ ನಾಯ್ಕ್
ಹವ್ಯಾಸಿ ಬರಹಗಾರ ಮತ್ತು ಅಂಕಣಕಾರರಾಗಿರುವ ಪ್ರಸಾದ್ ನಾಯ್ಕ್ ದಕ್ಷಿಣ ಕನ್ನಡದ ಕಿನ್ನಿಗೋಳಿ ಮೂಲದವರು. ಕಥೆಗಳು ಮತ್ತು ಅನುವಾದಗಳು ಹಲವು ಪತ್ರಿಕೆಗಳಲ್ಲಿ ಹಾಗೂ ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿವೆ. ‘ಹಾಯ್ ಅಂಗೋಲಾ!’ ಇವರ ಪ್ರಕಟಿತ ಪ್ರವಾಸಕಥನ. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಶಿವಮೊಗ್ಗ ಕರ್ನಾಟಕ ಸಾಹಿತ್ಯ ಸಂಘದಿಂದ ನೀಡಲ್ಪಡುವ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ.

 

*ಕೊಲಾಬ್ ಕಥೆ: ಒಬ್ಬರಿಗಿಂತ ಹೆಚ್ಚು ಜನರಿಂದ ಬರೆಯಲ್ಪಟ್ಟ ಕಥಾ ಶೈಲಿ