ಪ್ರಾಮಾಣಿಕ ರಾಜಕಾರಣಿಗಳು ತಮ್ಮ ಇಳಿವಯಸ್ಸಿನಲ್ಲಿ ಎಷ್ಟೊಂದು ಕಷ್ಟಪಡುವರು ಎಂಬುದರ ಬಗ್ಗೆ ಅರಿವಿದ್ದ ನನಗೆ ಅಂದು ಬಹಳ ಹೊತ್ತಿನವರೆಗೆ ನಿದ್ರೆ ಬರಲಿಲ್ಲ. ಪ್ರಾಮಾಣಿಕ ರಾಜಕಾರಣಿಗಳಿಗೆ ಇಂಥ ಗತಿ ಬರದೆ ಬೇರೆ ದಾರಿಯಿಲ್ಲ ಎನಿಸಿತು. ಎಷ್ಟೋ ಮರಿಪುಢಾರಿಗಳು ವಿಧಾನ ಸೌಧ, ಮಂತ್ರಿಗಳ ಮನೆ ಮತ್ತು ಶಾಸಕರ ಭವನದ ಮುಂದೆ ಕಾರಲ್ಲಿ ಸುತ್ತಾಡುವುದನ್ನು ನೋಡಿದ ನನಗೆ, ನನ್ನ ನಾಯಕನೊಬ್ಬ ಈ ರೀತಿ ಯಾವ ಸೌಲಭ್ಯಗಳೂ ಇಲ್ಲದೆ ಬದುಕುವುದನ್ನು ನೋಡಿ ಅತೀವ ಖೇದವೆನಿಸಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 69ನೇ ಕಂತು ನಿಮ್ಮ ಓದಿಗೆ

ಹೋರಾಟ ಮತ್ತು ತ್ಯಾಗದ ಸಂಗಮವಾಗಿ ಕಾಮ್ರೇಡ್ ವಿ. ಎನ್. ಪಾಟೀಲ (ವಿಶ್ವನಾಥ ನೀಲಪ್ಪಗೌಡ ಪಾಟೀಲ)ರ ನೆನಪು ನನ್ನ ಮನದಲ್ಲಿ ಉಳಿದುಕೊಂಡಿದೆ. ನೋವು ಮರೆತು ಸದಾ ಸಮಾಜದ ನೆಮ್ಮದಿಗಾಗಿ ಕ್ರಿಯಾಶೀಲರಾಗುತ್ತಿದ್ದ ಅವರು ನನಗೆ ಯಾವಾಗಲೂ ಕಮ್ಯೂನಿಸ್ಟ್ ಪಕ್ಷದ ಆದರ್ಶ ಪುರುಷರಾಗೇ ಕಾಣುತ್ತಿದ್ದರು. ಅವರ ನೆನಪೇ ಆಹ್ಲಾದಕರವಾದುದು. ಅವರಿಂದಾಗಿ ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಮೀನಕೇರಾ ಗ್ರಾಮ ನನ್ನ ಮನದಲ್ಲಿ ಒಂದು ರೂಪಕದ ಹಾಗೆ ನಿಂತಿದೆ.

ಭಾರತ ಕಮ್ಯೂನಿಸ್ಟ್ ಪಕ್ಷದ ಸಭೆ ಸಮಾರಂಭಗಳಲ್ಲಿ ಅವರ ಕ್ರಾಂತಿಕಾರಿ ಶೈಲಿಯ ಉರ್ದು ಭಾಷಣ ಕೇಳುವುದೇ ಒಂದು ಸೊಬಗು. ಎತ್ತರದ ನಿಲುವಿನ ಕಪ್ಪುದೇಹ, ಸಹಜ ಶೈಲಿಯ ಮೀಸೆ ಹೊತ್ತ ದುಂಡನೆಯ ಮುಖ ಬಿಳಿಬಟ್ಟೆಯಲ್ಲಿ ಆಕರ್ಷಕವಾಗಿ ಕಾಣುತ್ತಿತ್ತು. ನಾವೆಲ್ಲ ಯುವಕರು ಅವರ ದೃಢನಿರ್ಧಾರದಿಂದ ಕೂಡಿದ ಕ್ರಾಂತಿಕಾರಿ ಮಾತಿಗೆ ರೋಮಾಂಚನಗೊಳ್ಳುತ್ತಿದ್ದೆವು. ಅವರ ಮಾತು ಕೇಳುವಾಗ ಕಮ್ಯೂನಿಸಂ ಒಂದು ಮಹಾಕಾವ್ಯದ ಹಾಗೆ ನನ್ನ ಮನದಾಳದಲ್ಲಿ ಮೂಡುತ್ತಿತ್ತು. ಆ ತಾರುಣ್ಯದಲ್ಲಿ ನನ್ನಂಥ ಅನೇಕರಿಗೆ ಕಮ್ಯೂನಿಸಂ ಒಂದು ನಿರಂತರ ನಶೆಯಾಗಿತ್ತು. ನನ್ನ ಸುತ್ತೆಲ್ಲ ಕಮ್ಯೂನಿಸಂನ ಪ್ರಭಾವಳಿ ಇದ್ದ ಹಾಗೆ ಅನಿಸುತ್ತಿತ್ತು. ಆ ಗುಂಗು ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ. ಕಾಮ್ರೇಡ್ ವಿ.ಎನ್. ಪಾಟೀಲ, ಕಾಮ್ರೇಡ್ ಶ್ರೀನಿವಾಸ ಗುಡಿ, ಕಾಮ್ರೇಡ್ ಎಸ್. ಆರ್. ಭಟ್, ಕಾಮ್ರೇಡ್ ಬಿ.ವಿ. ಕಕ್ಕಿಲಾಯ, ಕಾಮ್ರೇಡ್ ಯು.ಎಸ್. ವೆಂಕಟರಾಮನ್, ಕಾಮ್ರೇಡ್ ಪಂಪಾಪತಿ, ಕಾಮ್ರೇಡ್ ಸಿ.ಬಿ. ಪೊನ್ನಯ್ಯ ಮುಂತಾದ ಮಹಾನ್ ವ್ಯಕ್ತಿಗಳ ಸಂಪರ್ಕದಿಂದಾಗಿ ಕಮ್ಯೂನಿಸಂ ನಿಜವಾಗಿಯೂ ಮಾನವ ವಿಮೋಚನೆಯ ಮಾರ್ಗ ಎಂಬುದು ನನಗೆ ಮನದಟ್ಟಾಯಿತು. ಇವರೆಲ್ಲ ನನಗೆ ನಿಜವಾದ ಸಂತರ ಹಾಗೆಯೆ ಕಾಣುತ್ತಿದ್ದರು.

ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಮೀನಕೇರಾ ಗ್ರಾಮದ ಕಾಮ್ರೇಡ್ ವಿ.ಎನ್. ಪಾಟೀಲರನ್ನು ನಾನು ಮೊದಲ ಬಾರಿಗೆ ನೋಡಿದ್ದು 50 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಸಮ್ಮೇಳನದಲ್ಲಿ. ಆಗ ಅವರು ಹುಮನಾಬಾದ ಶಾಸಕರಾಗಿದ್ದರು. ಕಾಮ್ರೇಡ್ ನೀಲಂ ರಾಜಶೇಖರ ರೆಡ್ಡಿಯವರಂಥ ಪಕ್ಷದ ರಾಷ್ಟ್ರೀಯ ನಾಯಕರನ್ನು ನೋಡಿದ್ದು ಕೂಡ ಅಲ್ಲಿಯೆ. (ನಾನು ಬಾಲಕನಾಗಿದ್ದಾಗ ವಿಜಾಪುರದ ರೇಡಿಯೋ ಮೈದಾನದಲ್ಲಿ ಸಿ.ಪಿ.ಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸಿ. ರಾಜೇಶ್ವರರಾವ್ ಅವರ ಭಾಷಣ ಕೇಳಿ ಪ್ರಭಾವಿತನಾಗಿದ್ದೆ. ಬಂಡವಾಳಶಾಹಿಗಳಿಂದಾಗಿ ದೇಶದ ಜನ ಇಲಿಗಳನ್ನು ತಿಂದು ಬದುಕುವ ಪರಿಸ್ಥಿತಿ ಬರುವುದೆಂದು ಅವರು ಹೇಳಿದ್ದು ಇಂದಿಗೂ ನನಗೆ ನೆನಪಿದೆ. ಅದು ನನಗೆ ಕಮ್ಯೂನಿಸಂನ ಮೊದಲ ಪಾಠವಾಗಿತ್ತು. ಅಂಥ ಒಬ್ಬ ಮಹಾನ್ ನಾಯಕನ ಭಾಷಣ ಕೇಳಲು 50 ಜನರೂ ಇರಲಿಲ್ಲ! ಅವರು ಮಾತನಾಡುವಾಗ ವೇದಿಕೆಯೂ ಇರಲಿಲ್ಲ. ಅವರ ಮುಂದೆ ಒಂದು ಮೈಕ್ ಮಾತ್ರ ಇತ್ತು.) ನನ್ನ ಬದುಕಿನ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ಏಕೆಂದರೆ ಬಾಲ್ಯದಲ್ಲೇ ನಾನು ಇಂಥ ಮಾನವೀಯತೆಯ ಸಂಸ್ಕಾರ ಪಡೆದೆ. ಈ ಸಂಸ್ಕಾರದಿಂದಾಗಿಯೆ ನನಗೆ ಬುದ್ಧ, ಪೈಗಂಬರ್, ಬಸವಣ್ಣ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಹೆಚ್ಚು ಹೆಚ್ಚು ಅರ್ಥವಾಗತೊಡಗಿದರು.

ಹುಬ್ಬಳ್ಳಿಯ ಸಿ.ಪಿ.ಐ ರಾಜ್ಯಸಮ್ಮೇಳನದಲ್ಲಿ ವಿ.ಎನ್. ಪಾಟೀಲರ ಮಾತುಗಳನ್ನು ಪಕ್ಷದ ಕಾರ್ಯಕರ್ತರು ಹರ್ಷೋದ್ಗಾರಗಳೊಂದಿಗೆ ಆಲಿಸಿದರು. ನಾನಂತೂ ಪುಳಕಿತಗೊಂಡಿದ್ದೆ. ವೇದಿಕೆಯಲ್ಲಿ ನಿಂತು ಮಾತನಾಡುವಾಗ ಅವರದು ರಾಜಗಾಂಭೀರ್ಯ. ಆದರೆ ಎದುರಿಗೆ ನಿಂತು ಮಾತನಾಡಿಸಿದಾಗ ಕಂಡದ್ದು ಮೃದು ಸ್ವಭಾವ. ಧ್ವನಿ ಗಂಭೀರವಾಗಿದ್ದರೂ ಉರ್ದು ಭಾಷೆಯ ಮಾಧುರ್ಯಕ್ಕೆ ಹೇಳಿ ಮಾಡಿಸಿದಂತಿತ್ತು.

ಮುಂದೆ ನಾನು ಧಾರವಾಡದಲ್ಲಿ ಎಂ.ಎ. ಮುಗಿಸಿ 1976 ರಲ್ಲಿ ನೌಕರಿ ಹಿಡಿದು ಬೆಂಗಳೂರಿಗೆ ಬಂದಾಗ ಸಂಪರ್ಕ ಇನ್ನೂ ಹೆಚ್ಚಾಯಿತು. ಪಕ್ಷದ ಕಚೇರಿಯಲ್ಲಿ ಮತ್ತು ಶಾಸಕರ ಭವನದಲ್ಲಿ ಹೆಚ್ಚಾಗಿ ಭೇಟಿಯಾಗುವ ಪ್ರಸಂಗಗಳು ಬರುತ್ತಿದ್ದವು. ಕಾಮ್ರೇಡ್ ಪಂಪಾಪತಿಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಶಾಸಕರ ಭವನದ ಅವರ ಕೋಣೆಯಲ್ಲಿ ನಾನು ಅನೇಕ ತಿಂಗಳುಗಳವರೆಗೆ ಉಳಿದುಕೊಂಡಿದ್ದೆ. ವಿ.ಎನ್. ಪಾಟೀಲರು ತಮ್ಮ ಊರಿನಿಂದ ಬಂದಾಗಲೆಲ್ಲ ಪಂಪಾಪತಿಯವರ ಕೋಣೆಯಲ್ಲಿ ಇರುತ್ತಿದ್ದರು. ಹೀಗಾಗಿ ಅವರ ಜೊತೆ ಮಾತನಾಡುವ ಸುಸಂದರ್ಭಗಳು ಬಹಳಷ್ಟು ಸಲ ಒದಗಿ ಬಂದವು.

ಅವರದು ಉದಾತ್ತ ಮನಸ್ಸು. ತಮ್ಮ ಬಂಧುಗಳ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ ಇತ್ತು. ಅದನ್ನು ಸಾಧಿಸಿದರು ಕೂಡ. ಕುಟುಂಬ, ಬಂಧುಬಳಗ ಮತ್ತು ಜನಸಾಮಾನ್ಯರ ಬಗ್ಗೆ ಅವರಿಗಿರುವ ಪ್ರೇಮಭಾವದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಅವರು ಇದನ್ನೆಲ್ಲ ಏನನ್ನೂ ಬಯಸದೆ ಮಾಡುತ್ತಿದ್ದರು. ಮಕ್ಕಳ ಭವಿಷ್ಯದ ಬಗ್ಗೆ ಅವರಿಗೆ ಒಂದು ರೀತಿಯ ಕೊರಗು ಇತ್ತು. ಆದರೆ ಎಂದೂ ತೋರಿಸಿಕೊಂಡವರಲ್ಲ. ಮಗಳ ಮದುವೆ ಕುರಿತು ಬಹಳ ಆಪ್ತವಾಗಿ ಒಮ್ಮೆ ಮಾತನಾಡಿದ್ದರು. ಅದೊಂದು ಚಿಂತೆ ಅವರಿಗೆ ಕಾಡುತ್ತಿತ್ತು. ಆಗ ಅವರು ಮಾಜಿ ಶಾಸಕರಾಗಿದ್ದರು. ಅಲ್ಲದೆ ಮಧುಮೇಹದಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು.

ಪಂಪಾಪತಿಯವರ ಶಾಸಕರ ಭವನದ ಕೋಣೆಯಲ್ಲಿರುವಾಗ ಒಬ್ಬರು ಶಾಸಕರು ಬಂದರು. ಬಹುಶಃ ಕಲಘಟಗಿಯ ಕಾಂಗ್ರೆಸ್ ಶಾಸಕರಿರಬಹುದು. ಆ ಮುಸ್ಲಿಂ ಹಿರಿಯರ ಹೆಸರು ಮರೆತುಹೋಗಿದೆ. ಪಂಪಾಪತಿಯವರ ಕೋಣೆಯಲ್ಲಿ ವಿ.ಎನ್. ಪಾಟೀಲರು ಇದ್ದದ್ದು ತಿಳಿದ ಅವರು ಅಲ್ಲಿಗೆ ಬಂದು ಭೇಟಿಯಾದರು. ಪಾಟೀಲರ ಆರೋಗ್ಯದ ಬಗ್ಗೆ ಅರಿತು ನೊಂದುಕೊಂಡರು. ಅವರು ತೋರಿಸಿದ ಕಾಳಜಿ ನನ್ನನ್ನು ಮಂತ್ರಮುಗ್ಧನನ್ನಾಗಿಸಿತ್ತು. ಅವರನ್ನು ಒತ್ತಾಯ ಮಾಡಿ ತಮ್ಮ ಕಾರಲ್ಲೇ ವೈದ್ಯರೊಬ್ಬರ ಬಳಿ ಕರೆದುಕೊಂಡು ಹೋಗಿ ಆರೋಗ್ಯ ಪರೀಕ್ಷೆ ಮಾಡಿಸಿದ ನಂತರ ರೂಮಿಗೆ ಕರೆತಂದರು. ಪಾಟೀಲರು ಬಹಳ ಮುಜುಗರದ ವ್ಯಕ್ತಿ. ಇದೆಲ್ಲ ಅವರಿಗೆ ಆಪ್ತವೆನಿಸಿದರೂ ಏನೋ ಭಾರ ಹೊತ್ತವರಂತೆ ಇದ್ದರು. ಆಗ ಆ ಶಾಸಕರು ಪಾಟೀಲರ ಕೈಯಲ್ಲಿ ಮೂರು ಸಾವಿರ ರೂಪಾಯಿ ಇಡಲು ಬಂದರು. ಪಾಟೀಲರು ಇನ್ನು ಮುಜುಗರಪಟ್ಟು “ಬೇಡ ಈಗಾಗಲೇ ಇಷ್ಟೆಲ್ಲ ಖರ್ಚು ಮಾಡಿರುವಿರಲ್ಲ” ಎಂದು ಹೇಳಿದರು. ಆಗ ಆ ಶಾಸಕರು ಹೇಳಿದ್ದು ಮಾರ್ಮಿಕವಾಗಿತ್ತು. “ನೋಡಿ ಪಾಟೀಲರೇ ನೀವು ದೊಡ್ಡ ನಾಯಕರು ನಿಮ್ಮ ವ್ಯಕ್ತಿತ್ವ ಶಾಸಕ ಪದವಿಗಿಂತಲೂ ಹೆಚ್ಚಿನದು. ನೀವು ಮಾಜಿ ಶಾಸಕರಾದರೂ ನನಗೂ ನಾಯಕರೇ ಆಗಿದ್ದೀರಿ. ನಿಮ್ಮ ಸೇವೆ ಮಾಡುವ ಆನಂದ ನನಗೆ ಇಂದು ಸಿಕ್ಕಿತು. ನಾಳೆ ನಾನು ಮಾಜಿ ಶಾಸಕನಾದಾಗ ಯಾರೂ ಕೇಳುವವರಿರುವುದಿಲ್ಲ. ನಾವು ಯಾವುದೇ ಪಕ್ಷದವರಿರಬಹುದು. ಪ್ರಾಮಾಣಿಕರಾಗಿರುವ ನಮ್ಮಂಥವರ ಭವಿಷ್ಯ ಒಂದೇ ತೆರನಾಗಿರುತ್ತದೆ. ನಮ್ಮಲ್ಲಿ ಹಣವೂ ಇಲ್ಲ; ಅಧಿಕಾರವೂ ಇಲ್ಲ ಎಂದಮೇಲೆ ನಮ್ಮ ಕಡೆ ಜನರು ಹೇಗೆ ಬಂದಾರು?” ಎಂದು ಹೇಳುತ್ತ ಪಾಟೀಲರ ಕೈಯಲ್ಲಿ ಹಣವನ್ನಿಟ್ಟು, ಕೈಮುಗಿದು ಗಡಿಬಿಡಿಯಲ್ಲಿ ನಡೆದೇ ಬಿಟ್ಟರು. ಪಾಟೀಲರು ಮಾನವ ಸಂಬಂಧವನ್ನು ಅನುಭವಿಸಿದರು. ಬೇರೆಯವರ ಒಂದು ಪೈಸೆಯನ್ನೂ ಮುಟ್ಟದ ಅವರಿಗೆ ಇದು ಹೊಸ ಅನುಭವವಾಗಿತ್ತು. ಅವರು ಯಾರಿಂದಲೂ ಏನೂ ಪಡೆದವರಲ್ಲ. ಅವರ ಕಣ್ಣುಗಳು ತೇವಾಗಿದ್ದವು. ಅವರು ಯಾರಿಗೂ ಏನನ್ನೂ ಕೇಳಿದವರಲ್ಲ. ಆದರೆ ಈ ಅನಿರೀಕ್ಷಿತ ಘಟನೆ ಅವರ ಮನದಾಳದಲ್ಲಿ ಅವಿಸ್ಮರಣೀಯವಾಗಿ ಉಳಿದಿರಲು ಸಾಕು.

ಒಮ್ಮೆ ಅವರ ಮಿತ್ರರೊಬ್ಬರು ರಾತ್ರಿ ಊಟಕ್ಕೆ ಕರೆದರು. ಅವರ ಮನೆ ಮೈಸೂರು ರೋಡಿನ ಕಡೆಗೆ ಇತ್ತು. ಅವರು ಮಿತ್ರಪ್ರೇಮಕ್ಕೆ ಜೋತುಬಿದ್ದು ಹೋದರು. ಅದು ಇದು ಮಾತನಾಡುತ್ತ ಕುಳಿತ ಅವರಿಗೆ; ಶಾಸಕರ ಭವನಕ್ಕೆ ಮರಳಿ ಬರುವುದು ರಾತ್ರಿ 9 ಗಂಟೆಗೆ ನೆನಪಾಯಿತು. ಆಗ ಮೊಬೈಲು ಇರಲಿಲ್ಲ ಓಲಾದಂಥ ಟ್ಯಾಕ್ಸಿಗಳ ಸೌಲಭ್ಯವೂ ಇರಲಿಲ್ಲ. ಆಟೋದಲ್ಲಿ ಹೋಗುವುದಾಗಿ ಮಿತ್ರರಿಗೆ ತಿಳಿಸಿ ಸ್ವಲ್ಪ ದೂರದವರೆಗೆ ನಡೆಯುತ್ತ ಬಂದರು. ಆದರೆ ಆಟೊ ಸಿಗಲಿಲ್ಲ. ಅವರ ದಾರಿಯನ್ನು ಕಾಯುತ್ತ ನಾನು ಪಂಪಾಪತಿಯವರ ರೂಮಿನಲ್ಲಿದ್ದೆ. ಅವರು ರಾತ್ರಿ ಒಂದು ಗಂಟೆಗೆ ಬಂದರು. ಬಹಳ ಸುಸ್ತಾಗಿದ್ದರು. ನಿತ್ರಾಣವಾಗಿ ಕುರ್ಚಿಯ ಮೇಲೆ ಕುಳಿತರು. ನನ್ನ ಮನಸ್ಸಿಗೆ ಬಹಳ ನೋವಾಯಿತು. ರಾತ್ರಿ ಒಂದು ತುತ್ತು ಊಟ ಮಾಡುವ ನೀವು ಅಷ್ಟು ದೂರವೇಕೆ ಹೋದಿರಿ ಎಂದೆ. ಗೆಳೆಯನಿಗಾಗಿ ಎಂದರು.

ಅವರು ಶಾಸಕರ ಭವನಕ್ಕೆ ಬಂದು ಮುಟ್ಟಿದ್ದು ಒಂದು ಕಥೆಯೆ ಆಗುತ್ತದೆ. ಬಿನ್ನಿ ಮಿಲ್ಲಿನ ಪಕ್ಕದ ರಸ್ತೆಯಿಂದ ನಡೆದುಕೊಂಡು ಶಾಸಕರ ಭವನಕ್ಕೆ ಬರುವುದು ಬಹಳ ಕಷ್ಟದ ಕೆಲಸ. ಅದೊಂದು ಮಹಾಪ್ರಸ್ಥಾನದಂತೆ. ಅವರು ಏಕಾಂಗಿಯಾಗಿ ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಬರುವಾಗ ಕತ್ತಲಲ್ಲಿ ದಾರಿ ತಪ್ಪಿ, ಪಕ್ಕದ ಬೃಹತ್ ಭಾರಿ ಉದ್ದದ ತಿಪ್ಪೆಯಲ್ಲಿ ಹೊಕ್ಕು ಕಷ್ಟಪಟ್ಟು ಹಾಗೂ ಹೀಗೂ ಮತ್ತೆ ದಾರಿ ಸೇರಿ ಶಾಸಕರ ಭವನಕ್ಕೆ ಕಾಲೆಳೆದುಕೊಂಡು ಬರುವುದರೊಳಗಾಗಿ ರಾತ್ರಿ ಒಂದು ಗಂಟೆಯಾಗಿತ್ತು.

ಪ್ರಾಮಾಣಿಕ ರಾಜಕಾರಣಿಗಳು ತಮ್ಮ ಇಳಿವಯಸ್ಸಿನಲ್ಲಿ ಎಷ್ಟೊಂದು ಕಷ್ಟಪಡುವರು ಎಂಬುದರ ಬಗ್ಗೆ ಅರಿವಿದ್ದ ನನಗೆ ಅಂದು ಬಹಳ ಹೊತ್ತಿನವರೆಗೆ ನಿದ್ರೆ ಬರಲಿಲ್ಲ. “ಮಾಜಿ ಶಾಸಕರ ಕೊನೆಯ ದಿನಗಳು” ಎಂಬ ಹೃದಯವಿದ್ರಾವಕ ಕವನ ಬರೆದೆ. ಆ ಕವನವನ್ನು ಕಳೆದುಕೊಂಡರೂ ಅದರ ನೆನಪು ಮಾಸಿಲ್ಲ. ಪ್ರಾಮಾಣಿಕ ರಾಜಕಾರಣಿಗಳಿಗೆ ಇಂಥ ಗತಿ ಬರದೆ ಬೇರೆ ದಾರಿಯಿಲ್ಲ ಎನಿಸಿತು. ಎಷ್ಟೋ ಮರಿಪುಢಾರಿಗಳು ವಿಧಾನ ಸೌಧ, ಮಂತ್ರಿಗಳ ಮನೆ ಮತ್ತು ಶಾಸಕರ ಭವನದ ಮುಂದೆ ಕಾರಲ್ಲಿ ಸುತ್ತಾಡುವುದನ್ನು ನೋಡಿದ ನನಗೆ, ನನ್ನ ನಾಯಕನೊಬ್ಬ ಈ ರೀತಿ ಯಾವ ಸೌಲಭ್ಯಗಳೂ ಇಲ್ಲದೆ ಬದುಕುವುದನ್ನು ನೋಡಿ ಅತೀವ ಖೇದವೆನಿಸಿತು. ನಮ್ಮ ಪಕ್ಷದ ರಾಜ್ಯಮಟ್ಟದ ನಾಯಕರು, ಹೈಕೋರ್ಟ್ ವಕೀಲರು ಮತ್ತು ಶಾಸಕರಾಗಿದ್ದವರು ಯಾವುದಕ್ಕೂ ಆಸೆಪಡದೆ ಬದುಕಿದ್ದು ಸಂತನ ಲಕ್ಷಣವಲ್ಲದೆ ಇನ್ನೇನು?

ಅವರು ತಮ್ಮ ತಾರುಣ್ಯದಲ್ಲಿ ಬುಲೆಟ್ ಮೋಟರ್‌ಬೈಕ್ ಹತ್ತಿ ಮೀನಕೇರಾದಿಂದ ಬೆಂಗಳೂರಿನವರೆಗೆ ಬಂದವರು. ಶಾಸಕರಾಗುವ ಮೊದಲೇ ಹೈಕೋರ್ಟಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದವರು. ಹತ್ತಾರು ಸಹಸ್ರ ಕಾರ್ಮಿಕರ ನಾಯಕತ್ವ ವಹಿಸಿದವರು. ಸಂಪ್ರದಾಯವಾದಿ ಸಮಾಜದಲ್ಲಿ ತಮ್ಮ ಸಚ್ಚಾರಿತ್ರ ಮತ್ತು ಅಂತಃಕರಣದಿಂದ ಕೂಡಿದ ಸೇವಾ ಮನೋಭಾವದಿಂದಾಗಿ ಜನಮನವನ್ನು ಗೆದ್ದು ಕಮ್ಯೂನಿಸ್ಟ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದವರು. ರಾಜಕಾರಣಕ್ಕೆ ಬಂದು ಮನೆ ತುಂಬಿಕೊಳ್ಳದೆ ಮನೆ ಬರಿದು ಮಾಡಿಕೊಂಡವರು ನಮ್ಮ ಕಾಮ್ರೇಡ್ ವಿ.ಎನ್. ಪಾಟೀಲರು!

ಅವರು ಸೋವಿಯತ್ ದೇಶಕ್ಕೆ ಭೇಟಿ ನೀಡಿದ ಕ್ಷಣಗಳನ್ನು ಬಹಳ ಆಪ್ಯಾಯಮಾನವಾಗಿ ಹೇಳುತ್ತಿದ್ದರು. ಸೋವಿಯತ್ ದೇಶದ ಕಾಮ್ರೇಡರುಗಳಿಗಾಗಿ ಅವರು ಮೈಸೂರು ಸ್ಯಾಂಡಲ್ ಸೋಪ್ ಕಾಣಿಕೆಯಾಗಿ ಕೊಟ್ಟದ್ದು ಮತ್ತು ಸೋವಿಯತ್ ರಷ್ಯಾದವರು ಮೆಚ್ಚಿಕೊಂಡದ್ದು ಅವರಿಗೆ ಖುಷಿ ಕೊಟ್ಟಿತ್ತು. ಅಲ್ಲಿ ಅವರು ಖರೀದಿಸಿದ ಝೆನಿತ್ ಕ್ಯಾಮರಾ 20 ಅಡಿ ಮೇಲಿಂದ ಬಿದ್ದರೂ ಹಾಳಾಗಿರಲಿಲ್ಲ. ಅವರು ಸೋವಿಯತ್ ಉತ್ಪಾದನೆಗಳ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದರು. ನಾನು 1983ರಲ್ಲಿ ಇಸ್ಕಸ್ (ಇಂಡೋ ಸೋವಿಯತ್ ಕಲ್ಚರಲ್ ಸೊಸೈಟಿ) ಗುಡ್‌ವಿಲ್ ಡೆಲಿಗೇಷನ್ ಪ್ರತಿನಿಧಿಯಾಗಿ ಸೋವಿಯತ್ ದೇಶಕ್ಕೆ ಹೋಗುವ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ್ದರು.

ಅವರ ನೆನಪುಗಳು ನನ್ನ ಮನದಲ್ಲಿ ಸದಾ ಹಸಿರಾಗಿವೆ. ಕೆಲವೊಂದು ನೋವಾಗಿ ಕಾಡುತ್ತಲೇ ಇರುತ್ತವೆ. ಅವರ ಕೊನೆಯ ದಿನಗಳು ಮತ್ತು ತದನಂತರ ಅವರ ಮನೆತನದ ಪರಿಸ್ಥಿತಿಯನ್ನು ಅರಿತಾಗ ಹೃದಯ ಘಾಸಿಗೊಂಡಿತು. ಒಳ್ಳೆಯ ಹುದ್ದೆಯಲ್ಲಿದ್ದ ಇಬ್ಬರು ಮಕ್ಕಳು ಅಕಾಲ ಮೃತ್ಯುವಿಗೆ ತುತ್ತಾದರು. ಅವರ ಮನೆತನ ಹೇಗೋ ಹೇಗೋ ಆಗಿ ಹೋಯಿತು. ಸಮಾಜಕ್ಕಾಗಿ ದುಡಿಯುವವರಿಗೆ ಕುಟುಂಬ ಪರಿವಾರವೂ ಇರುತ್ತದೆ ಎಂಬುದು ಸಮಾಜದ ಅರಿವಿಗೆ ಬರುವುದು ಬಹಳ ಕಡಿಮೆ. ಅವರ ಮಧುರ ನಡೆ ನುಡಿ, ದೃಢವಾದ ಸೈದ್ಧಾಂತಿಕ ಬದ್ಧತೆ, ಹೋರಾಟದ ಬದುಕು ನನಗೆ ದಾರಿದೀಪವಾಗಿದೆ.

ಪಂಚಾಕ್ಷರಿ ಪುಣ್ಯಶೆಟ್ಟಿಯವರು ಬರೆದ “ಹುಟ್ಟು ಹೋರಾಟಗಾರ ವಿ.ಎನ್. ಪಾಟೀಲ” ಪುಸ್ತಕದಿಂದ ಆಯ್ಕೆ ಮಾಡಿದ ಕೆಲ ಸಾಲುಗಳು ಹೀಗಿವೆ:
ಮೋರ್ಗಿ ಗ್ರಾಮಕ್ಕೆ ಮಹತ್ವದ ಸ್ಥಾನವಿದೆ. ಇಲ್ಲಿ ಬಡಮಕ್ಕಳಿಗಾಗಿ ಭಾಲ್ಕಿ ಹಿರೇಮಠ ಸಂಸ್ಥಾನದ ಚನ್ನಬಸವ ಪಟ್ಟದ್ದೇವರು 1936 ರಿಂದ ಐದು ವರ್ಷಗಳವರೆಗೆ ಕನ್ನಡ ಶಾಲೆ ನಡೆಸಿದರು. ಇದು ಬೀದರ ಜಿಲ್ಲೆಯ ಪ್ರಥಮ ಕನ್ನಡ ಶಾಲೆ ಆಗಿತ್ತು. ಈ ವಸತಿ ಶಾಲೆಯಲ್ಲಿ ಪಂಕ್ತಿಭೇದ ಮಾಡುತ್ತಿರಲಿಲ್ಲ. ಜಾತಿಭೇದ ಮತ್ತು ಅಸ್ಪೃಶ್ಯತೆ ಇರಲಿಲ್ಲ. ಬಸವಣ್ಣನವರ ವಚನಗಳನ್ನು ಮಕ್ಕಳಿಗೆ ಕಲಿಸುತ್ತಿದ್ದರು. ಈ ಶಾಲೆಯ ಪ್ರಭಾವದಿಂದಲೇ ನಾನು ಕಮ್ಯುನಿಸ್ಟ್ ಪಕ್ಷವನ್ನು ಅಪ್ಪಿದೆ ಎಂದು ವಿ.ಎನ್. ಪಾಟೀಲರು ತಿಳಿಸಿದ್ದಾರೆ.

ವಿ.ಎನ್. ಪಾಟೀಲರು ಬೀದರಿನಲ್ಲಿ ಕರ್ನಾಟಕ ವಾಚನಾಲಯ ಸ್ಥಾಪಿಸಿದ ಮೊದಲಿಗರು. ಅವರ ಪ್ರಯತ್ನದಿಂದ ಬೇಮಳಖೇಡ, ನಿರ್ಣಾ ಮತ್ತು ಆ ವಲಯಕ್ಕೆ ಸೇರಿದ ಹಳ್ಳಿಗಳು ಕರ್ನಾಟಕಕ್ಕೆ ಸೇರಿದವು. ವೀರೇಂದ್ರ ಪಾಟೀಲರು ಇವರಿಗೆ ಆಮಿಷ ಒಡ್ಡಿದರೂ ಸಫಲವಾಗಲಿಲ್ಲ. ಅವರು ಕೊನೆಯವರೆಗೂ ಭಾರತ ಕಮ್ಯುನಿಸ್ಟ್ ಪಕ್ಷದಲ್ಲೇ ಉಳಿದರು. 1957ರಲ್ಲಿ ಪಕ್ಷಕ್ಕೆ ಸೇರಿದ ಅವರು ಬೀದರ್ ಜಿಲ್ಲೆ ಪಕ್ಷದ ಕಾರ್ಯದರ್ಶಿಗಳಾಗಿದ್ದರು. ಫಜಲಲಿ ಕಮಿಷನ್ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಪ್ರಕಾರ ಬೀದರ್ ಜಿಲ್ಲೆಯ ಕನ್ನಡ ಮಾತನಾಡುವ ಪ್ರದೇಶಗಳು ಆಂಧ್ರಪ್ರದೇಶಕ್ಕೆ ಸೇರಬೇಕಿತ್ತು. ಆದರೆ ಕಾಮ್ರೇಡ್ ವಿ.ಎನ್. ಪಾಟೀಲರ ನೇತೃತ್ವದಲ್ಲಿ ನಡೆದ ಹೋರಾಟದ ಫಲದಿಂದ ಬೀದರ ಕರ್ನಾಟಕದಲ್ಲಿ ಉಳಿಯುವಂತಾಯಿತು. ಕನ್ನಡ, ಉರ್ದು, ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವ ಸಾಮರ್ಥ್ಯ ಹೊಂದಿದ ಪಾಟೀಲರು ಕನ್ನಡ ಪ್ರೇಮಿಗಳಾಗಿದ್ದರು. ಬೀದರಲ್ಲಿ ಕನ್ನಡ ಬೆಳೆಯುವಲ್ಲಿ ಅವರ ಪಾತ್ರವೂ ಹಿರಿದಾಗಿದೆ.

1957ರಲ್ಲಿ ಹುಮನಾಬಾದ ಕ್ಷೇತ್ರದಿಂದ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಫರ್ಧಿಸಿದರು. ಪ್ರಚಾರದ ವೇಳೆ ಅಪಘಾತವುಂಟಾಗಿ ಕಾಲು ಮುರಿದ ಕಾರಣ ಸರಿಯಾಗಿ ಪ್ರಚಾರ ಮಾಡಲಿಕ್ಕಾಗಲಿಲ್ಲ. 1962ರಲ್ಲಿ ಮತ್ತೆ ಸ್ಪರ್ಧಿಸಿ ಸೋತರು. 1967ರಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದರು. 10 ವರ್ಷಗಳವರೆಗೆ ಹುಮನಾಬಾದ ಕ್ಷೇತ್ರದ ಶಾಸಕರಾಗಿ ಮಹತ್ವದ್ದನ್ನು ಸಾಧಿಸಿದರು.

ಅವರು 1958ರಲ್ಲೇ ದಲಿತರನ್ನು ದೇವಸ್ಥಾನ ಪ್ರವೇಶ ಮಾಡಿಸಿದ್ದರು. ದಲಿತರ ಮನೆಯಲ್ಲಿ ಭೋಜನ ಸ್ವೀಕರಿಸುತ್ತ ಯುವಕರಿಗೆ ಮಾದರಿಯಾಗಿದ್ದರು. ನಿರೀಶ್ವರವಾದಿಯಾಗಿದ್ದ ಅವರು ಮೂಢನಂಬಿಕೆಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು. ಸತಿ ಚಂಗಳಮ್ಮ ಪತಿಗೆ ತಕ್ಕ ಸತಿಯಾಗಿದ್ದರು. ಇಬ್ಬರೂ ಒಂದಾಗಿ ಬದುಕನ್ನು ನಿಭಾಯಿಸಿದರು. ಶಾಸಕರಾದ ಮೇಲೆ ಬಡವರು ಮತ್ತು ದಲಿತರಿಗೆ ಭೂಮಿ ಕೊಡಿಸುವಲ್ಲಿ ಯಶಸ್ವಿಯಾದರು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ವ್ಯವಸ್ಥೆ ಕೂಡ ಅವರಿಂದಲೇ ಆಯಿತು.

ಯಾವುದೇ ಚಟಗಳಿಲ್ಲದೆ, ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೆ, ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪವಿಲ್ಲದೆ, ರಾಜಕೀಯ ಅಧಿಕಾರ ಇರಲಿ, ಇಲ್ಲದಿರಲಿ ಸದಾ ಸಮಾಜದ ಹಿತಕ್ಕಾಗಿ ಶ್ರಮಿಸಿದ ವಿ.ಎನ್. ಪಾಟೀಲರು ರಾಜಕೀಯ ಸೇರಿ ಆಸ್ತಿಯನ್ನು ಕಳೆದುಕೊಂಡವರು. ಸಮಾಜೋದ್ಧಾರದ ತೃಪ್ತಿಯನ್ನು ಪಡೆದುಕೊಂಡವರು. 71 ವರ್ಷ ಸಾರ್ಥಕ ಜೀವನ ಸಾಗಿಸಿ ಇತಿಹಾಸ ನಿರ್ಮಿಸಿದ ಕಾಮ್ರೇಡ್ ವಿ.ಎನ್. ಪಾಟೀಲರು 1998ನೇ ಮಾರ್ಚ್ 24ರಂದು ನಿಧನರಾದರು. ಅವರಿಲ್ಲ ಆದರೆ ಅವರ ನೆನಪು ಅಮರ.