ಆದರೆ ಎಲ್ಲ ವೇಳೆ ಒಂದೇ ಥೆರನಾಗಿರದು. ಸತತವಾಗಿ ನಡೆಯುತ್ತಿದ್ದ ಅವರ ಕಳ್ಳ ದಂಧೆ ಮಟ್ಟ ಹಾಕಲು ಅದೆಷ್ಟೋ ದಿನಗಳಿಂದ ಅಧಿಕಾರಿಗಳು ಹೊಂಚು ಹಾಕುತ್ತಲೇ ಇದ್ದರೆನ್ನಿಸುತ್ತದೆ. ಒಮ್ಮೆ ಪೋಲೀಸರು ಅವರೆಲ್ಲರನ್ನೂ ಕೆಲಸದ ಜಾಗದಲ್ಲೇ ಅಡ್ಡ ಹಾಕಿದರು. ನಮ್ಮ ಆಳಿನ ಕಿರಿಯ ಮಗನೂ ಅದರೊಳಗಿದ್ದನಂತೆ. ಹೇಗೋ ಕಣ್ಣು ತಪ್ಪಿಸಿಕೊಂಡು ಓಡಿ ಬಂದು ಮನೆಯಲ್ಲಿ ಅಡಗಿದ್ದ. ಅವನಿಗೆ ಕೆಲಸ ಕೊಟ್ಟ ಹೆಗಡೆಯವರು ಇಲಾಖೆಯವರಿಗೆ ದುಡ್ಡು ತಿನ್ನಿಸಿ, ಅವನೇ ಆ ಕಳ್ಳ ನಾಟಾ ಕಡಿಯುವವರಿಗೆ ಮುಖ್ಯಸ್ಥ ಎಂದು ಬಿಂಬಿಸಿ, ಜಾರಿಕೊಂಡರು. ಹೆದರಿದ ಆತ ಗದ್ದೆಗೆ ಹೊಡೆಯಲು ತಂದಿಟ್ಟ ಮದ್ದು ಕುಡಿದು ಬಿಟ್ಟ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಇಪ್ಪತ್ತನೆಯ ಕಂತು
ನಮ್ಮ ಸಮೃದ್ಧ ಕಾಡಿನ ಸಂಪತ್ತನ್ನು ದೋಚುವ ಸಂಚುಕೋರರ ಕಥೆಯನ್ನು ಈ ಅಧ್ಯಾಯದಲ್ಲಿ ಮತ್ತೆ ಮುಂದುವರಿಸೋಣ. “ಬೇಲಿಯೇ ಎದ್ದು ಹೊಲ ಮೇದಂತೆ” ನಾಣ್ಣುಡಿ ಎಲ್ಲರಿಗೂ ಗೊತ್ತು. ಆದರೆ, ಇಲ್ಲಿ ಬೇಲಿ ತಾನೇ ಎದ್ದು ಹೊಲ ಮೇಯುವುದಿಲ್ಲ. ಬದಲು, ತನ್ನೊಳಗೆ ಅನೇಕ ನುಗುಳು ಗಂಡಿ ಸೃಷ್ಟಿಸಿ, ಅದರ ಮೂಲಕ ಹೊಲದೊಳಗೆ ಬೇಕಾದವರನ್ನು ಬಿಟ್ಟುಕೊಂಡು, ತಾನು ಸುಬಗನಂತೇ ನಿಂತು ಬಿಡುತ್ತದೆ. ಅದೇನಾದರೂ ತನ್ನ ಕುತ್ತಿಗೆಗೆ ಬಂತೆಂದರೆ, ನುಗುಳು ಗಂಡಿಯನ್ನು ಪಟಕ್ಕನೆ ಮುಚ್ಚಿಕೊಂಡು ಬಿಡುತ್ತದೆ. ಒಳಗಿದ್ದವರು ಖತಂ. ಇಂಥ ಆಟಗಳು ಹಿಂದೂ, ಎಂದೂ, ಎಂದೆಂದೂ ನಡೆಯುತ್ತಲೇ ಇರುತ್ತವೆ. ಆದರೆ, ಈ ನುಗುಳು ಕೋರರೂ ಬಹಳ ಹುಶಾರಿಯಿಂದ ಪಾರಾಗಿ ಬಿಡುತ್ತಾರೆ. ಚೆಸ್ ಆಟ ನೋಡಿರಬೇಕಲ್ಲಾ. ಅದೇ ಪ್ಯಾದೆಗಳನ್ನು ಬಲಿಕೊಟ್ಟು, ರಾಜ ಪಾರಾಗುವ ತಂತ್ರದ ಆಟ.
ಇಂಥದೇ ಆಟಗಳು ಆಗೆಲ್ಲ ಈ ಮರಗಳ್ಳರು ಆಡುತ್ತಿದ್ದುದು.
ನಮ್ಮೂರ ಸಮೀಪ ಒಬ್ಬ ದೊಡ್ಡ ಹೆಗಡೆಯವರ ಪರಿವಾರವಿತ್ತು. ಅವರು ಬೇರೆ ಊರಿಂದ ಇಲ್ಲಿಗೆ ವಲಸೆ ಬಂದವರು. ಅಂದರೆ ನಮ್ಮೂರಲ್ಲಿ ಜಮೀನು ಖರೀದಿ ಮಾಡಿಕೊಂಡು ಇಲ್ಲಿಯೇ ನೆಲೆಸಲು ಬಂದವರು. ಅವರೋ ಆಗರ್ಭ ಶ್ರೀಮಂತರು. ದೊಡ್ಡ ರಾಜಕೀಯ ಪುಡಾರಿಗಳು. ಹಾಗಾಗಿ ಸಾಮಾನ್ಯ ಜನ (ನಮ್ಮಂಥವರು) ಅವರ ಮನೆಯತ್ತಲೂ ಸುಳಿಯುತ್ತಿರಲಿಲ್ಲ. ಬಂದು ಒಂದಷ್ಟು ವರ್ಷಗಳ ಮೇಲೆ ಆತನ ಒಂದೊಂದೇ ಕಲ್ಯಾಣ ಗುಣಗಳು ಈಚೆಗೆ ಬರತೊಡಗಿದವು. ಆತ ಮಹಾ ಕುತಂತ್ರಿ. ಮರಗಳನ್ನು ಕದ್ದು ವ್ಯಾಪಾರ ಮಾಡುವುದನ್ನೇ ಕಸುಬಾಗಿಸಿಕೊಂಡವ… ಎಂದೆಲ್ಲ ಊರಲ್ಲಿ ಗುಸು ಗುಸು ಸುದ್ದಿ ಹರಡಿತ್ತು. ಆದರೆ ಅಂಥವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಯಾರಿಗಿರುತ್ತದೆ ಹೇಳಿ?
ಈ ಮರಕಡಿಯುವ ಕೆಲಸ ಶುರುವಾಗುತ್ತಿದ್ದುದೇ ಜೋರು ಮಳೆಗಾಲದಲ್ಲಿ. ಊರ ರಸ್ತೆಗಳೆಲ್ಲ ಕೆಸರಲ್ಲಿ ಹೂತು ಹೋಗುವ ಹೊತ್ತಲ್ಲಿ ಹೊರಗಿನಿಂದ ಯಾವ ಸರ್ಕಾರಿ ಅಧಿಕಾರಿಗಳೂ ಹಳ್ಳಿಯ ಕಡೆ ಮುಖ ಮಾಡಿಯಾರು?
ಅಂಥ ವೇಳೆಯಲ್ಲಿ ಊರಿನ ಹತ್ತಾರು ಧಾಂಡಿಗ ಕೂಲಿಯಾಳುಗಳನ್ನು ಹೆಚ್ಚಿನ ಕೂಲಿಯಾಸೆ ತೋರಿಸಿ, ಈ ಮರಕೆಲಸಕ್ಕೆ ಅವರು ನೇಮಿಸಿಕೊಳ್ಳುತ್ತಿದ್ದರಂತೆ. ಹಾಗಂತ ಅವರ್ಯಾರೂ ಬಾಯಿ ಬಿಟ್ಟು ಹೇಳುತ್ತಿರಲಿಲ್ಲ. ತಿಂಗಳಿಡೀ ದುಡಿದರೂ ಹುಟ್ಟದಷ್ಟು ಕೂಲಿ, ಕೇವಲ ಒಂದೆರಡು ಆಳು ಪಗಾರಿಗೇ ಸಿಗುತ್ತ ಹೊರಟರೆ, ಯಾರು ಬಿಡುತ್ತಾರೆ? ನಮ್ಮೂರಲ್ಲಿ ಬಹಳ ಜನ ಅಂಥ ಅಪಾಯದ ಕೆಲಸಕ್ಕೆ ಕಣ್ಮುಚ್ಚಿ ಒಪ್ಪಿಕೊಂಡು ಹೋಗುತ್ತಿದ್ದರು.

ನಮ್ಮ ಮನೆಯಲ್ಲಿ ಲಾಗಾಯ್ತಿನಿಂದ ಕೆಲಸಮಾಡುವ ಆಳೊಬ್ಬನಿದ್ದ. ಅವನಿಗೆ ಮೂವರು ಗಂಡು ಮಕ್ಕಳು. ಅವರೆಲ್ಲರೂ ಅದೇ ಹೆಗಡೆಯವರ ಬಲಗೈ ಭಂಟರಾಗಿ, ಕೂಲಿಯನ್ನೇ ಬಿಟ್ಟು ಜಮೀನು ಖರೀದಿ ಮಾಡಿ, ಎಲ್ಲರೂ ಹುಬ್ಬೇರಿಸುವಂತಾಗಿತ್ತು. ಆದರೆ ಎಲ್ಲ ವೇಳೆ ಒಂದೇ ಥೆರನಾಗಿರದು. ಸತತವಾಗಿ ನಡೆಯುತ್ತಿದ್ದ ಅವರ ಕಳ್ಳ ದಂಧೆ ಮಟ್ಟ ಹಾಕಲು ಅದೆಷ್ಟೋ ದಿನಗಳಿಂದ ಅಧಿಕಾರಿಗಳು ಹೊಂಚು ಹಾಕುತ್ತಲೇ ಇದ್ದರೆನ್ನಿಸುತ್ತದೆ. ಒಮ್ಮೆ ಪೋಲೀಸರು ಅವರೆಲ್ಲರನ್ನೂ ಕೆಲಸದ ಜಾಗದಲ್ಲೇ ಅಡ್ಡ ಹಾಕಿದರು. ನಮ್ಮ ಆಳಿನ ಕಿರಿಯ ಮಗನೂ ಅದರೊಳಗಿದ್ದನಂತೆ. ಹೇಗೋ ಕಣ್ಣು ತಪ್ಪಿಸಿಕೊಂಡು ಓಡಿ ಬಂದು ಮನೆಯಲ್ಲಿ ಅಡಗಿದ್ದ. ಅವನಿಗೆ ಕೆಲಸ ಕೊಟ್ಟ ಹೆಗಡೆಯವರು ಇಲಾಖೆಯವರಿಗೆ ದುಡ್ಡು ತಿನ್ನಿಸಿ, ಅವನೇ ಆ ಕಳ್ಳ ನಾಟಾ ಕಡಿಯುವವರಿಗೆ ಮುಖ್ಯಸ್ಥ ಎಂದು ಬಿಂಬಿಸಿ, ಜಾರಿಕೊಂಡರು. ಹೆದರಿದ ಆತ ಗದ್ದೆಗೆ ಹೊಡೆಯಲು ತಂದಿಟ್ಟ ಮದ್ದು ಕುಡಿದು ಬಿಟ್ಟ. ಕೊನೆಗೇನನ್ನಿಸಿತೋ ಏನೋ. ಮನೆಯಿಂದ ಓಡುತ್ತ ನಮ್ಮನೆಗೆ ಬಂದ. ಆ ಸಮಯದಲ್ಲಿ ಅವರಪ್ಪ ಅಮ್ಮ ನಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು, ಆತ ಅವರ ಭೇಟಿಗೆ ಬಂದಿದ್ದವ. ಅವರಿಬ್ಬರೂ ನಮ್ಮನೆ ಕಟ್ಟೆ ಮೇಲೆ ನೀರು ಕುಡಿಯುತ್ತ ಕುಳಿತಿದ್ದರಂತೆ. (ನಾನಾಗ ಹೈ ಸ್ಕೂಲು ಓದುತ್ತಿದ್ದರಿಂದ, ಬೇರೆ ಊರಲ್ಲಿದ್ದೆ) ಈತ ಅಲ್ಲಿಯ ತನಕ ಹೇಗೆ ತಡೆದುಕೊಂಡಿದ್ದನೋ. ತಾನೂ ನೀರು ಇಸಿದುಕೊಂಡು ಕುಡಿದು, ಹೊಟ್ಟೆ ಹಿಡಿದುಕೊಂಡು, “ಅಯ್ಯಬ್ಬೆ” ಎಂದು ಚೀರುತ್ತ, ಅಂಗಳದ ತುಂಬ ಉರುಳಾಡಿ ವಿಲ ವಿಲ ಒದ್ದಾಡಿದನಂತೆ. ಮತ್ತೆ ಮೂರು ನಾಲ್ಕು ಜನ ಶಿರಸಿಯ ಆಸ್ಪತ್ರೆಗೆ ಹೊತ್ತುಕೊಂಡು ಹೋದರಂತೆ. ಆದರೆ ಆತ ಉಳಿಯಲೇ ಇಲ್ಲ. ಪಾಪ ಮದುವೆಯಾಗಿ ಎರಡು ವರ್ಷವೂ ಆಗಿತ್ತೋ ಇಲ್ಲವೊ. ಹೆಂಡತಿಯನ್ನೂ ಮಗುವನ್ನೂ ಅನಾಥ ಮಾಡಿ ಹೋಗಿಬಿಟ್ಟ.

ಪಾಪ ವಯಸ್ಸಾದ ತಂದೆ ತಾಯಿ ಕೊನೆತನಕ ಕೊರಗಿದರು. ಎಲ್ಲ ಗೊತ್ತಿದ್ದೂ ಏನೂ ಮಾಡಲಾರದ ಅಸಹಾಯಕತೆಯಲ್ಲಿಯೇ ಬದುಕಿದರವರು.
ಹೀಗೆ ತಮ್ಮ ಫಾಯಿದೆಗಾಗಿ ಬಡವರ ಜೀವವವನ್ನೇ ಬಲಿಕೊಡುವ ಅನೇಕ ದೊಡ್ಡ ಮನುಷ್ಯರು ಎಲ್ಲ ಕಾಲದಲ್ಲೂ ಎಲ್ಲೆಲ್ಲೂ ಇರುತ್ತಾರೆ ನೋಡಿ.
ಮುಂದುವರಿಯುವುದು…

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.
