“ರಾಗ ಇದೆಯಲ್ಲ ಅದು ಹುಟ್ಟುವಾಗ ಒಂದು ಮಗು ಥರಾನೆ, ಹಂಗೇ ಬೆತ್ತಲೆಯಾಗಿ ಹುಟ್ಟುತ್ತೆ, ಆಮೆಲೆ ಅದಕ್ಕೆ ಅಲಂಕಾರ ಮಾಡೋದು… ಯಾವ ಸ್ವರವನ್ನು ಎಲ್ಲಿ ಅಲಂಕರಿಸಬೇಕು, ಎಷ್ಟು ತೊಡಿಸಬೇಕು ಅಂತ. ಸೊಂಟದ ಡಾಬನ್ನ ನೆತ್ತಿಗೆ ಹಾಕಕ್ಕಾಗಲ್ಲ. ಹಂಗೇ ಕಿರೀಟವನ್ನು ಸೊಂಟಕ್ಕೆ ತೊಡಿಸಕ್ಕೆ ಆಗಲ್ಲ. ಮುದುಕಿಯ ಅಲಂಕಾರವನ್ನು ಹುಡುಗಿಗೆ ಅಥವಾ ಹುಡುಗಿಯ ಅಲಂಕಾರವನ್ನು ಚಿಕ್ಕ ಮಗುವಿಗೆ ಮಾಡಲಿಕ್ಕಾಲ್ಲ. ಯಾವುದಕ್ಕೆ ಎಷ್ಟು, ಹೇಗೆ ಅಲಂಕಾರ ಮಾಡಬೇಕು ಅಂತ ಯೋಚಿಸಿ ಮಾಡಬೇಕಾಗುತ್ತೆ‘’
ಹೆಸರಾಂತ ಸರೋದ್ ಮಾಂತ್ರಿಕ ರಾಜೀವ ತಾರಾನಾಥರು ಇಂದು ತೀರಿಕೊಂಡರು. ಅವರೊಡನೆ ಕಳೆದ ಘಟನೆಗಳ ಕುರಿತು ಕಥೆಗಾರ್ತಿ ಸುಮಂಗಲಾ ಬರೆದಿದ್ದ ಲೇಖನ ನಿಮ್ಮ ಓದಿಗೆ
ಮೊನ್ನೆ ಬೆಳಗ್ಗೆ ಇದ್ದಕ್ಕಿದ್ದ ಹಾಗೆ ಗೋಪಾಲ ಅಂಕಲ್ ಕರೆ ಬಂದಿತ್ತು. ನನಗೇನೋ ಸರ್ಪ್ರೈಸ್ ಇರುವುದಾಗಿ, ನಾನು ಊಹಿಸಬೇಕೆಂದು ಹೇಳಿ ಜೋರಾಗಿ ನಕ್ಕರು.
“ಸಂಗೀತದ ಸಿಡಿ ಕಳಿಸ್ತಿದ್ದೀರಾ ಅಂಕಲ್…”
“ಅದು ಕಳಿಸ್ತೀನಿ, ಆದರೆ ಈಗಲ್ಲ. ಬೇರೆ ಸರ್ಪ್ರೈಸ್”
“ಅಂಕಲ್ ಈ ಕಡೆ ಏನಾದ್ರೂ ಬರುತ್ತಿರಬಹುದೇ…?” ಕೇಳಿದರೆ ಅದೂ ಅಲ್ಲ ಎಂದರು. ಮತ್ತೆ ಕೊನೇ ಚಾನ್ಸ್ ಎಂಬ ಧಮಕಿ ಬೇರೆ.
“ಮತ್ತೆ ಏನು.. ಯಾರದಾದ್ರೂ ಕಛೇರಿ ಇದೆಯಾ…”
“ಸ್ವಲ್ಪ ಹತ್ತಿರ ಗೆಸ್ ಮಾಡಿದೀರ” ಎಂದವರು, “ನಾನೀಗ ರಾಜೀವ್ ತಾರಾನಾಥರ ಜೊತೆಗೆ ಕೂತಿದ್ದೇನೆ. ನೀವು ಅವರ ಹತ್ರ ಮಾತನಾಡಿ”, ಎಂದು ಅವರಿಗೆ ಇವರು ಫೋನ್ ಕೊಟ್ಟೇಬಿಟ್ಟರು. ಮರುಕ್ಷಣದಲ್ಲಿ ನನಗೆ ರಾಜೀವ ಗುರುಗಳ ‘ನಮಸ್ಕಾರ’ ಎಂಬ ಗಂಭೀರ ತುಂಬು ಧ್ವನಿ ಕೇಳಿಸ್ತು. ನಿಜವೆಂದರೆ ಆ ಕ್ಷಣಕ್ಕೆ ಬಾಯಿ ನಮಸ್ಕಾರ ಎಂದರೂ ನನಗೆ ನನ್ನ ಕಿವಿಗಳನ್ನು ನಂಬಲಾಗಿರಲೇ ಇಲ್ಲ. ನಂಗೆ ನಂಬಲಿಕ್ಕೇ ಆಗ್ತಿಲ್ಲ ಸರ್. ತುಂಬಾ ಖುಷಿಯಾಗ್ತಿದೆ ಎಂದೆ. ಮರುಕ್ಷಣದಲ್ಲಿಯೇ ಯಾವಾಗ ಬರ್ತೀರ ಎಂದು ಕೇಳಿದ್ರು.
ಯಾವಾಗಾದ್ರೂ ತೊದಲಿದೆ.
“ಹಾಗಲ್ಲ. ಸರಿಯಾಗಿ ಬರ್ತೀನಿ ಎನ್ನಬೇಕು. ಯಾರಾನ್ನಾದ್ರೂ ಕಳಿಸುವಾಗ ಕಮ್ ಅಗೇನ್ ಅಂತೇವೆ. ಹಾಗನ್ನೋದಕ್ಕೆ ಅರ್ಥ ಇಲ್ಲ. ಮತ್ತೆ ಮತ್ತೆ ಬರ್ತಾ ಇರಿ ಎನ್ನಬೇಕು” ಎಂದರು. ನಾಳೆ ಸಂಜೆ ಬರ್ತೀರ ಎಂದು ಕೇಳಿದಾಗ ನನಗೆ ನಿಜಕ್ಕೂ ಕಾಲು ನೆಲದ ಮೇಲೆ ಇರಲಿಲ್ಲ. ಸಂಜೆ ನನ್ನ ಕಚೇರಿ ಕೆಲಸದ ಸಮಯ ಎಂದು ಹೇಳಿ ಬುಧವಾರ ಬೆಳಗ್ಗೆ ಅಡ್ಡಿಲ್ಲವಾ ಎಂದು ಕೇಳಿದೆ. ಅವರು ವಿಳಾಸ ಹೇಳಿ, ಅಲ್ಲಿ ಇಳಿದ ಕೂಡ್ಲೇ ನಂಗೆ ಫೋನ್ ಮಾಡಿ ಎಂದರು.
ಹಾಗೆ ಬುಧವಾರದ ಬೆಳಗ್ಗೆ ನಾನು ಮತ್ತು ಮಗರಾಯ ಅವರ ಮುಂದೆ ಕುಳಿತದ್ದು. ಎರಡೂ ಕೈಗಳನ್ನು ನಮ್ಮತ್ತ ಹರವಾಗಿ ಚಾಚಿ ಮತ್ತೆ ಹೇಳ್ರೀ ಎಂದರು. ಹಿಂದಿನ ದಿನ ರಿಹರ್ಸಲ್ ಮಾಡಿಕೊಳ್ಳಲು ಪ್ರಯತ್ನಿಸಿದರೂ, ಹೀಗೆ ಸ್ವರಲೋಕದಲ್ಲಿ ಮುಳುಗಿದ ಮಹಾನ್ ವ್ಯಕ್ತಿಯೊಂದಿಗೆ ಇದು ನನ್ನ ಮೊದಲ ಭೇಟಿಯಾಗಿದ್ದರಿಂದ ಎಷ್ಟು ಯೋಚಿಸಿದರೂ ಏನೇನು ಮಾತನಾಡಬೇಕೆಂದು ಹೊಳೆದಿರಲೇ ಇಲ್ಲ. ಹೀಗಿರುವಾಗ ಆ ಕಪ್ಪು ಬಣ್ಣದ ದೊಡ್ಡ ಸೋಫಾದ ತುಂಬ ಆವರಿಸಿಕೊಂಡು ಕುಳಿತಿದ್ದ ಅವರು ಮಾತನಾಡಿ ಎಂದಾಗ ನನಗೆ ಕಣ್ಣಾಲಿ ತುಂಬಿ ಬರುವುದೊಂದೇ ಬಾಕಿ. “ನೀವೇ ಮಾತಾಡಿ ಸರ್”… ನಿಧಾನವಾಗಿ ಅವರ ತಂದೆ ತಾರಾನಾಥರ ಕುರಿತು ಹೇಳತೊಡಗಿದರು.
ಬಹಳ ಜನ ಸಂಗೀತಗಾರರನ್ನು ತಾರಾನಾಥರು ಮನೆಗೆ ಕರೆಸಿಕೊಂಡು, ಪಾಠ ಹೇಳಿಸಿಕೊಳ್ತಿದ್ದರು. ನಮ್ಮನೇಲೆ ಉಳಕೊಂಡು ಹೇಳಿಕೊಡ್ತಿದ್ದರು. ಆವಾಗ ಕೃಷ್ಣರಾಜ ಒಡೆಯರು ರಾಜರು. ಸಂಗೀತಕ್ಕೆ ಭಾಳಾ ಪ್ರೋತ್ಸಾಹ ಕೊಡ್ತಿದ್ರು. ನಂತರ ಜಯಚಾಮರಾಜೇಂದ್ರರಿಗೆ ಅಷ್ಟೇನೂ ಒಲವಿರಲಿಲ್ಲ. ಇಲ್ಲಿ ನಮ್ಮ ತಂದೆ ಹತ್ರ ಹಾಡಿ, ನಂತರ ಅರಮನೇಲಿ ಕಚೇರಿ ಕೊಡಲಿಕ್ಕೆ ಮೈಸೂರಿಗೆ ಹೋಗ್ತಿದ್ದರು. ಎಷ್ಟೋ ಸಲ ತಾರಾನಾಥರು ನೀವಿನ್ನೂ ಅಭ್ಯಾಸ ಪೂರ್ಣ ಮಾಡಿದಂಗಿಲ್ಲ ಅಂತ ಹೇಳಿ ಅಭ್ಯಾಸ ಪೂರ್ಣವಾದ ಮೇಲೆ ಅಲ್ಲಿಗೆ ಕಳಿಸೋರು.
ತಾರಾನಾಥರ ಟ್ರಸ್ಟ್ ಮಾಡಿದೆ. ಮೂರು ಕಾರ್ಯಕ್ರಮ ಆಯೋಜಿಸಿದ್ವಿ. ನಂಗೆ ಈಗ ಅಷ್ಟು ಓಡಾಡಕ್ಕೆ ಆಗಲ್ಲ. ಟ್ರಸ್ಟಿಗಳಿಗೂ ಕೆಲಸದ ಒತ್ತಡ, ಹೆಚ್ಚು ಸಮಯ ಕೊಡಲಿಕ್ಕೆ ಆಗ್ತಿಲ್ಲ. ಆಸಕ್ತಿ ಇರೋವ್ರು ಸ್ವಲ್ಪ ಮುಂದೆ ಬರ್ಬೇಕು. ಇಂಥ ಕೆಲಸದಲ್ಲಿ ಸಹಕಾರ ಕೊಡ್ಬೇಕು. ಹಂಗೆ ಯಾರೂ ಇಲ್ವಲ್ಲ.
ನನ್ನ ಹಣೆ ಮೇಲೆ ಯಾವಾಗ್ಲೂ ಹಿಂಗೆ ಗಂಟು ಇರುತ್ತಲ್ಲ, (ಹುಬ್ಬುಗಳ ಮಧ್ಯದ ಎರಡೂ ಗೆರೆಯನ್ನು ಬೆರಳಲ್ಲಿ ತೋರಿಸುತ್ತ) ಅದಕ್ಕೆ ರವಿಶಂಕರ್ ಹೇಳ್ತಿದ್ರು, ಸ್ಟೇಜ್ ಮೇಲೆ ನಗುಮುಖದಲ್ಲಿರು ಅಂತ. ನಾವು ನಗ್ತಿದ್ದರಷ್ಟೆ ಗಿರಾಕಿಗಳು ನಮ್ಮ ಹತ್ರ ಬರ್ತಾರೆ. ಇಲ್ದಿದ್ದರೆ ಬ್ಯಾರೆ ಮತ್ತೊಬ್ಬರ ಹತ್ರ ಹೋಗ್ತಾರೆ. ನಾವು ಒಂಥರಾ ಪ್ರಾಸ್ಟಿಟ್ಯೂಟ್ ಥರಾನೆ ಅಂತ ರವಿಶಂಕರ್ ಹೇಳ್ತಿದ್ದರು. ನಿಜ ಅಲ್ವಾ… ಇವತ್ತು ಒಂದು ವೇದಿಕೆ ಮೇಲೆ ಹಾಡ್ತೀವಿ. ನಾಳೆ ಇನ್ನೊಂದು ಕಡೆ. ಆದ್ರೆ ಏನು ಮಾಡಲಿ ನಾನು ಮೊದ್ಲಿಂದ ಹಿಂಗೇ ಇದ್ದಿದ್ದು. ನೀನು ಬದಲಾಗಲ್ಲ ಬಿಡು ಅಂತ ರೇಗ್ತಿದ್ರು. ಸುಮ್ಮಸುಮ್ಮನೆ ಪ್ರದರ್ಶನಕ್ಕೆ ನಗೋದು ನನಗೆ ಆಗಲ್ಲ. ಕೆಲವರಿರ್ತಾರೆ; ಯಾವಾಗ್ಲೂ ನಗುಮುಖ, ಉಲ್ಲಾಸ. ಅವರು ಹುಟ್ತಾನೆ ನಗ್ತಾ ಹುಟ್ಟಿರ್ತಾರೆ. ನಮ್ಮತ್ತೆ, ತಾರಾನಾಥರ ಒಬ್ರು ತಂಗಿ ಹಂಗೇ ಇದ್ರು. (ಗೋಡೆಯ ಮೇಲಿದ್ದ ಫೊಟೋ ತೋರಿಸಿದ್ರು. ಬಹಳ ಹಿಂದಿನ ಕಪ್ಪು ಬಿಳುಪು ಫೋಟೋದಲ್ಲಿ ಆ ಪ್ರಸನ್ನವದನೆ ಚಂದ ಕಾಣ್ತಿದ್ರು). ಅವರ ಸುತ್ತ ಯಾವಾಗ್ಲೂ ಮಕ್ಕಳ ದಂಡು, ನಗು, ಕಥೆ ಎಲ್ಲ. ಮಕ್ಕಳಿಲ್ಲದ ಅವರಿಗೆ ನಾವೆಲ್ಲ ಅಂದ್ರೆ ಭಾಳ ಅಕ್ಕರೆ.
ರಾಗ ಇದೆಯಲ್ಲ ಅದು ಹುಟ್ಟುವಾಗ ಒಂದು ಮಗು ಥರಾನೆ, ಹಂಗೇ ಬೆತ್ತಲೆಯಾಗಿ ಹುಟ್ಟುತ್ತೆ, ಹಾಗೆ… ಹಾಗೇ ಬರುತ್ತೆ… ಆಮೆಲೆ ಅದಕ್ಕೆ ಅಲಂಕಾರ ಮಾಡೋದು… ಯಾವ ಸ್ವರವನ್ನು ಎಲ್ಲಿ ಅಲಂಕರಿಸಬೇಕು, ಎಷ್ಟು ತೊಡಿಸಬೇಕು ಅಂತ. ಸೊಂಟದ ಡಾಬನ್ನ ನೆತ್ತಿಗೆ ಹಾಕಕ್ಕಾಗಲ್ಲ. ಹಂಗೇ ಕಿರೀಟವನ್ನು ಸೊಂಟಕ್ಕೆ ತೊಡಿಸಕ್ಕೆ ಆಗಲ್ಲ. ಮುದುಕಿಯ ಅಲಂಕಾರವನ್ನು ಹುಡುಗಿಗೆ ಅಥವಾ ಹುಡುಗಿಯ ಅಲಂಕಾರವನ್ನು ಚಿಕ್ಕ ಮಗುವಿಗೆ ಮಾಡಲಿಕ್ಕಾಲ್ಲ. ಯಾವುದಕ್ಕೆ ಎಷ್ಟು, ಹೇಗೆ ಅಲಂಕಾರ ಮಾಡಬೇಕು ಅಂತ ಯೋಚಿಸಿ ಮಾಡಬೇಕಾಗುತ್ತೆ. (ಅವರು ಕಿಟಿಕಿಗೆ ಸ್ವಲ್ಪ ಎದುರಾಗಿ ಕುಳಿತಿದ್ದರು. ರಾಗವೊಂದು ಈಗ ಹುಟ್ಟಿ ಅವರ ಬೊಗಸೆಯಲ್ಲಿದೆ ಎಂಬಂತೆ ಕೈಗಳ ಲಾಸ್ಯ ಇತ್ತು. ಕಿಟಿಕಿಯಿಂದ ಹಾದುಬಂದ ಬೆಳಕಿನ ಕಿರಣಗಳು ಅವರ ಬೊಗಸೆಯಲ್ಲಿ ರಾಗಲಾಸ್ಯ ಸೃಷ್ಟಿಸಿತ್ತು)
ಇವರು ಮಲಗುತ್ತಾರೆ ಎಂದು ಗೊತ್ತಾದ ಗುಂಡ ಆಗಲೇ ದೀವಾನದ ಮೇಲೆ ಗೋಡೆಯ ಪಕ್ಕ, ಇದು ತನ್ನ ಜಾಗವೆಂಬ ರಾಜಠೀವಿಯಿಂದ ಮಲಗಿಯಾಗಿತ್ತು. ಈಗ ಅಮ್ಮ ಬರ್ತಾಳೆ ಎಂದು ತಾನೇ ಮೊದಲು ಮಂಚ ಹತ್ತಿ ಮಲಗಿದ ಚಿಕ್ಕ ಮಗುವಿನ ಹಾಗೆ ಮಲಗಿತ್ತು ಅದು
ತಾನಸೇನನ ಕಾಲದಿಂದಲೂ ಯಮನ್ ರಾಗವಿದೆ. ಆದರೆ ಪ್ರತಿ ಸಾರಿ ಹಾಡೋ ಅಥ್ವಾ ನುಡಿಸೋ ಯಮನ್ ಬೇರೇನೆ. ನೂರು ಜನ ಊಟಕ್ಕೆ ಕೂತಿರ್ತಾರೆ, ಎಲ್ರಿಗೂ ಪಂಕ್ತಿಯಲ್ಲಿ ಒಂದೇ ಥರಾ ಬಡಿಸ್ತ್ತಾರೆ. ಆದರೆ ನೂರೂ ಜನ ಕಲೆಸಿಕೊಂಡು ಉಣ್ಣೋದು, ಆ ರುಚಿ ಬ್ಯಾರೇನೆ ಇರುತ್ತೆ. ಹಂಗೇ ಇದೂ. ಆವಾಗಿಂದ ಅದೇ ರಾಗಗಳನ್ನ ಹಾಡ್ತಿದ್ದರೂ ಪ್ರತಿ ಸಾರೆ ಪ್ರತಿ ಗಾಯಕ ಹಾಡಿದಾಗ್ಲೂ ಬ್ಯಾರೇನೆ ಇರುತ್ತೆ. ಅಷ್ಟೇ ಅಲ್ಲ, ಅದೇ ಗಾಯಕ ಮರುದಿನ ಯಮನ್ ಹಾಡಿದ್ರು ಹಿಂದಿನ ದಿನ ಹಾಡಿದ್ಹಾಗೆ ಮರುದಿನ ಹಾಡುವಿಕೆ ಇರಲ್ಲ. ಅದೇ ರಾಗ ಆದ್ರೂ ಏನೋ ಸ್ವಲ್ಪ ಅಲಂಕಾರ ಬೇರೆ ಇರುತ್ತೆ.
ಸಂಗೀತ ವೃತ್ತಿಯಾಗಬಾರದು. ಮಾರಾಟವಾಗಬಾರದು. ಕೆಲವರು ಖಾನದಾನಿ ಪರಂಪರೆಯಿಂದ ಕಲಿತವರು ಇರ್ತಾರೆ, ಸಂಗೀತ ಬಿಟ್ಟರೆ ಅವರಿಗೆ ಬೇರೇ ಏನೂ ಉದ್ಯೋಗ ಗೊತ್ತಿರೋದಿಲ್ಲ, ಅಂಥವರು ಸಂಗೀತವೇ ವೃತ್ತಿಯಾಗಿಸಿಕೊಳ್ಳಬಹುದು. ಇಲ್ಲದಿದ್ದರೆ ಸಂಗೀತ ವೃತ್ತಿಯಾಗಬಾರದು. ಸಂಗೀತ ನಮ್ಮ ದೇಹವನ್ನು ಭಾಳ ದುಡಿಸಿಕೊಳುತ್ತೆ, ಮೊದಲೆಲ್ಲ ಗೊತ್ತಾಗ್ತಿರಲಿಲ್ಲ. ಈಗ ನಂಗೆ ಗೊತ್ತಾಗ್ತಿದೆ. ಸುಸ್ತಾಗುತ್ತೆ.
ಸಂಗೀತ, ನೃತ್ಯ ಇದೆಯಲ್ಲ ಇವು ಪ್ರಮಾಣಬದ್ಧವಾದದ್ದು. ಸಾಹಿತ್ಯಗೀಹಿತ್ಯ ಹಾಗಲ್ಲ. ಇಲ್ಲಿ ನೀನು ಒಳ್ಳೆಯವನೋ, ಕೆಟ್ಟವನೋ ಮುಖ್ಯವಲ್ಲ, ಏನು ಇದ್ದೀಯ ಅದನ್ನು ವೇದಿಕೆ ಮೇಲೆ ತೋರಿಸ್ತೀಯ, ಸ್ಟೇಜ್ ಮೇಲೆ ಎಲ್ಲ ಸಾಬೀತಾಗುತ್ತೆ. ಮೊದಲು ನನ್ನ ಅನಿಸಿಕೆ ಅಭಿಪ್ರಾಯ ಬಹಳ ಹೇಳ್ತಿದ್ದೆ. ಆಮೇಲೆ ಹಾಗೆ ಹೇಳೊದು ದೊಡ್ಡದಲ್ಲ ಅನಿಸಲಿಕ್ಕೆ ಶುರುವಾಯ್ತು. ಏನಿದ್ರೂ ಸಂಗೀತದಲ್ಲಿ, ಸ್ವರದಲ್ಲಿ ಸಾಧಿಸಬೇಕು. ಸುಮ್ಮನಾಗಿಬಿಟ್ಟೆ.
ಸಂಗೀತ ವೃತ್ತಿಯಾಗಬಾರದು. ಮಾರಾಟವಾಗಬಾರದು. ಕೆಲವರು ಖಾನದಾನಿ ಪರಂಪರೆಯಿಂದ ಕಲಿತವರು ಇರ್ತಾರೆ, ಸಂಗೀತ ಬಿಟ್ಟರೆ ಅವರಿಗೆ ಬೇರೇ ಏನೂ ಉದ್ಯೋಗ ಗೊತ್ತಿರೋದಿಲ್ಲ, ಅಂಥವರು ಸಂಗೀತವೇ ವೃತ್ತಿಯಾಗಿಸಿಕೊಳ್ಳಬಹುದು. ಇಲ್ಲದಿದ್ದರೆ ಸಂಗೀತ ವೃತ್ತಿಯಾಗಬಾರದು. ಸಂಗೀತ ನಮ್ಮ ದೇಹವನ್ನು ಭಾಳ ದುಡಿಸಿಕೊಳುತ್ತೆ, ಮೊದಲೆಲ್ಲ ಗೊತ್ತಾಗ್ತಿರಲಿಲ್ಲ. ಈಗ ನಂಗೆ ಗೊತ್ತಾಗ್ತಿದೆ. ಸುಸ್ತಾಗುತ್ತೆ.
ಅವರು ಮಾತನಾಡುತ್ತ ಕಿಟಕಿಯಿಂದ ಆಚೆ ಆಗಾಗ ನೋಡ್ತಿದ್ದರು. ಅವರು ಕುಳಿತಲ್ಲಿಂದ ಆಚೆ ಅಂಗಳದ ದೃಶ್ಯ ಕಾಣಿಸುತ್ತಿತ್ತು ಎಂದು ತೋರುತ್ತೆ. ನನಗೆ ಮಾತ್ರ ಎದುರಿಗಿದ್ದ ರಾಜೀವ ಗುರುಗಳ ಹೊರತಾಗಿ ಬೇರೇನೂ ಕಾಣಿಸುತ್ತಿರಲಿಲ್ಲ. ಆಜಾನುಬಾಹು. ೭೫ ತುಂಬಿ ೭೬ ಎಂದರು. ಮಾತಿನ ನಡುವೆ ಅವರು ತಾರಾನಾಥರ ಬಗ್ಗೆ ಹೇಳುವಾಗ ತಮ್ಮ ಎಂದು ಏನೋ ವಿಚಾರ ಪ್ರಸ್ತಾಪಿಸಿದರು. ನೀವು ಎಷ್ಟು ಜನ ಎಂದು ನಾನು ಕೇಳಿದ್ದಕ್ಕೆ ಇಬ್ರು, ನಾನು, ತಮ್ಮ. ಈಗಿಲ್ಲ ಅವನು, ತೀರಿಕೊಂಡ ಎಂದರು. ತಟ್ಟನೆ ನಮ್ಮ ನಡುವೆ ನಾಲ್ಕಾರು ಕ್ಷಣ ನಿಶ್ಯಬ್ದ. ಅವರು ಕಿಟಕಿಯಿಂದಾಚೆ ನೋಡ್ತಿದ್ದರು. ಅವರ ಧ್ವನಿ ಭಾರವಾಗಿತ್ತು. ಕಣ್ಣು ತುಂಬಿತ್ತೆ..? ಗೊತ್ತಾಗಲಿಲ್ಲ. ನಾಲ್ಕಾರು ಕ್ಷಣದ ನೀರವತೆ ನಂತರ ಮತ್ತೆ ಮಾತನಾಡುತ್ತಿದ್ದ ವಿಷಯಕ್ಕೆ ಮರಳಿದರು. ತಮ್ಮ ಮಗನ ಬಗ್ಗೆ ಸ್ವಲ್ಪ ಹೇಳಿದರು. ಆಗೀಗ ಸ್ವಲ್ಪ ವೈಯಕ್ತಿಕ ವಿವರಗಳನ್ನು ಒಂದೆರಡೇ ವಾಕ್ಯದಲ್ಲಿ ಹೇಳಿದರು.
ನಡುವೆ ಫೋನ್ ಬಂತು. ಅತ್ತಕಡೆಯಿಂದ ಸ್ವೆಟರ್ ವಿವರ ಕೇಳ್ತಿದ್ದ ಹಾಗಿತ್ತು. ತಮ್ಮದೊಂದು ಸ್ವೆಟರ್ನ ಅಳತೆ ನೋಡಿ, ಅದಕ್ಕಿಂತ ಕೊಂಚ ದೊಡ್ಡದು ಎಂದು ವಿವರಿಸಿದ್ದೂ ಆಯಿತು. ಕಿ.ರಂ. ನಾಗರಾಜನ ನೀಸ್, ಕೃಷ್ಣಾ ಎಂದು ಆಮೇಲೆ ಹೇಳಿದರು. ಹೀಗೇ ಕೆಲವರು ಶಿಷ್ಯರು ಇದ್ದಾರೆ ಎಂದರು. ಸರ್ಗೆ ಒಂಟಿತನ ಬಾಧಿಸ್ತಿದೆಯೇ… ಕೇಳುವ ಧೈರ್ಯವಾಗಲಿಲ್ಲ. ಏನೋ ಹೇಳಿ ಮಾತು ನಿಲ್ಲಿಸಿದ ಕೆಲವು ಕ್ಷಣದಲ್ಲಿ ನಮ್ಮ ನಡುವೆ ಯಾವ ಭಾವ ಹರಡಿತ್ತು… ಸ್ಪಷ್ಟವಾಗಿ ಚಿತ್ರಿಸಲಾರೆ. ಮಗ, ನಾನು ಅವರೊಂದಿಗೆ ರುಚಿಯಾದ ಊಟ ಸವಿದೆವು. ಊಟಕ್ಕೆ ಕುಳಿತಾಗ ಅಡುಗೆಯಾಕೆ ಮೊದಲು ಅವರಿಗೆ ಬಡಿಸಿದರು. ತಮಿಳಿನಲ್ಲಿ ಗದರಿಸಿದರು. ಅವಳು ಮೆತ್ತಗೆ ಅಪ್ಪಾ ಎನ್ನುತ್ತ ಏನೋ ಹೇಳಿದಳು. ತಮಿಳು ಬಾರದಿದ್ದರೂ ಅವರಿಬ್ಬರ ಸಂಭಾಷಣೆಯಿಂದ ಮನೆಗೆ ಬಂದವರಿಗೆ ಮೊದಲು ಬಡಿಸಬೇಕು, ನಂಗೆ ಆಮೇಲೆ ಹಾಕು ಎಂದು ಹೇಳಿರಬೇಕು ಎಂದು ಸುಮಾರಾಗಿ ಅರ್ಥವಾಯಿತು. ಅವಳೊಂದಿಗೆ ತಮಿಳಿನಲ್ಲಿಯೇ ಮಾತಾಡೋದು ಕೇಳಿ ನಾನು ಪೆದ್ದಿಯ ಹಾಗೆ ಮನೇಲಿ ತಮಿಳು ಮಾತಾಡ್ತೀರ ಸರ್ ಎಂದು ಕೇಳಿದೆ.
ನಂಗೆ ಒಂಬತ್ತು ಭಾಷೆ ಬರುತ್ತೆ. ನಮ್ಮ ತಾಯಿ ತಮಿಳು. ತಾರಾನಾಥರು ಕೊಂಕಣಿ. ಅವರದ್ದು ಪ್ರೇಮವಿವಾಹ. ಇಬ್ಬರೂ ಮನೇಲಿ ಇಂಗ್ಲಿಶ್ನಲ್ಲಿ ಮಾತಾಡೋರು. ಆ ಕಾಲದಲ್ಲಿ ಹಂಗೇ ಇತ್ತು. ಆದರೆ ನಮ್ಮನೇಗೆ ಬೇರೆ ಬೇರೆ ಸಂಗೀತಗಾರರು, ಆ ಕಾಲದ ವಿಚಾರವಾದಿಗಳು ಬಂದು ಇರ್ತಿದ್ರಲ್ಲ, ಹೀಗಾಗಿ ನಾನು ಕಲ್ತುಕೊಂಡೆ.
ಏನೇ ಅಂದ್ರು ಊಟ ಅಂದ್ರೆ ನಮ್ಮ ಕಡೆ ಊಟವೇ ರುಚಿ ಎನ್ನುತ್ತ ಅಡುಗೆಯವಳಿಗೆ ಅವರಿಗೆ ಅದು ಹಾಕು ಇದು ಹಾಕು, ತುಪ್ಪ ಕೇಳು ಎನ್ನುತ್ತ ನನಗೆ, ಮಗನಿಗೆ ಒತ್ತಾಯಪೂರ್ವಕ ಪ್ರೀತಿಯಿಂದ ಬಡಿಸಿದರು. ಅಷ್ಟರಲ್ಲಿಯೇ ಕಿರಂ ನಾಗರಾಜರ ಸಂಬಂಧಿ ಹುಡುಗಿ ಕೃಷ್ಣಾ ಸ್ವೆಟರ್ನೊಂದಿಗೆ ಬಂದಳೆಂದು ಅಡುಗೆಯವಳು ಹೇಳುತ್ತಿದ್ದಂತೆ ಸರ್ ಮುಖದಲ್ಲಿ ಹರಡಿದ ವಾತ್ಸಲ್ಯದ ಆ ಮಂದಹಾಸ ನೋಡಬೇಕಿತ್ತು… ಅವಳು ನನ್ನ ಮಗಳಿದ್ದ ಹಾಗೆ ಎಂದು ತುಂಬುಪ್ರೀತಿಯಿಂದ ಮೆಲ್ಲಗೆ ಹೇಳಿದರು. ಕೃಷ್ಣಾ ತಂದ ಸ್ವೆಟರ್ ನಿಜಕ್ಕೂ ಚೆನ್ನಾಗಿತ್ತು. ಸರ್ಗೆ ಒಪ್ಪುವ ಹಾಗೆ.
ನನ್ನ ಹಣೆ ಮೇಲೆ ಯಾವಾಗ್ಲೂ ಹಿಂಗೆ ಗಂಟು ಇರುತ್ತಲ್ಲ, (ಹುಬ್ಬುಗಳ ಮಧ್ಯದ ಎರಡೂ ಗೆರೆಯನ್ನು ಬೆರಳಲ್ಲಿ ತೋರಿಸುತ್ತ) ಅದಕ್ಕೆ ರವಿಶಂಕರ್ ಹೇಳ್ತಿದ್ರು, ಸ್ಟೇಜ್ ಮೇಲೆ ನಗುಮುಖದಲ್ಲಿರು ಅಂತ. ನಾವು ನಗ್ತಿದ್ದರಷ್ಟೆ ಗಿರಾಕಿಗಳು ನಮ್ಮ ಹತ್ರ ಬರ್ತಾರೆ. ಇಲ್ದಿದ್ದರೆ ಬ್ಯಾರೆ ಮತ್ತೊಬ್ಬರ ಹತ್ರ ಹೋಗ್ತಾರೆ. ನಾವು ಒಂಥರಾ ಪ್ರಾಸ್ಟಿಟ್ಯೂಟ್ ಥರಾನೆ ಅಂತ ರವಿಶಂಕರ್ ಹೇಳ್ತಿದ್ದರು.
ನಮ್ಮದು ಮುಗಿದ ನಂತರ ಶಿಷ್ಯರಿಬ್ಬರನ್ನೂ ಊಟಕ್ಕೆ ಕರೆದರು. ಅವರಲ್ಲೊಬ್ಬ ಮನೆಗೆ ಹೋಗ್ತೀನಿ ಊಟಕ್ಕೆ ಎಂದಾಗ ಇಲ್ಲೇ ಮಾಡೋ, ಅಡಗಿ ಮಾಡಸೀನಿ ಎಂದು ವಾತ್ಸಲ್ಯದಿಂದ ಗದರಿದರು. ಬಿಢೆ ಮಾಡ್ಕೋಬೇಡೋ. ನಿನಗೆ ಅಷ್ಟೆಲ್ಲ ಮನಿಗೆ ಹೋಗಿ ಮಾಡ್ಬೇಕು ಅಂತಿದ್ರೆ ನಾನದಕ್ಕೂ ಒತ್ತಾಯ ಮಾಡಲ್ಲಪ್ಪ. ನೀನು ಇಲ್ಲಿ ಉಂಡರೆ ನಂಗೆ ಖುಷಿಯಾಗುತ್ತೆ. ನೋಡು. ನಿನ್ನಿಷ್ಟ ಎಂದರು. ಅವರಿಬ್ಬರು ಊಟ ಮಾಡುವಾಗ ನನ್ನೊಂದಿಗೆ ಮಾತಾಡುತ್ತಿದ್ದರೂ ಒಂದು ಕಣ್ಣು ಅವರು ಸರಿಯಾಗಿ ಊಟ ಮಾಡ್ತಿದ್ದರೋ ಇಲ್ವೋ ಎಂದು ಗಮನಿಸುತ್ತಿದೆ ಎನಿಸಿತು. ಬೇಗ ಊಟ ಮಾಡು. ಕಲಸ್ತಾ ಕೂಡಬೇಡ ಎಂದವರು ನಮ್ಮತ್ತ ನೋಡಿ ಅವನು ಕೋಳಿ ಥರಾ ಹಿಂಗೆ ಬೆರಳು ಕಲಿಸ್ತಾನೆ ಇರ್ತಾನೆ. ಅದಕ್ಕೆ ಹೇಳಿದೆ. ನಮ್ಮ ತಮ್ಮನೂ ಹಿಂಗೇ. ಎಷ್ಟರಮಟ್ಟಿಗೆ ಅಂದ್ರೆ ಉಟ ಮಾಡ್ತಾ ಮಾಡ್ತಾ ಅಂವ ನಿದ್ರೆ ಮಾಡಿಬಿಡಾಂವ ಎಂದರು. ನಾವು ಮಾತನಾಡುವಾಗ ಅವರ ನಾಯಿ ಗುಂಡ ಅಲ್ಲಿಯೇ ಇತ್ತು. ನನ್ನ ಮಗ ಅದರೊಂದಿಗೆ ಸ್ವಲ್ಪ ಸ್ನೇಹ ಬೆಳೆಸಿದ್ದ. ಅವನ ಕಾಲ ಬುಡದಲ್ಲಿಯೇ ಮಲಗಿತ್ತು. ಅದೂ ನನ್ನ ಹಂಗೇ ಮುದುಕ. ಹದಿಮೂರು ವರ್ಷಾತು ಗುಂಡಂಗೆ ಎಂದು ಒಮ್ಮೆ ನಕ್ಕರು. ಅದಕ್ಕೂ ಅದರ ಚಂದದ ಪಿಂಗಾಣಿ ತಟ್ಟೆಯಲ್ಲಿ ಬ್ರೆಡ್, ಹಾಲು ಎಲ್ಲ ತಂದು ಅಡುಗೆಯವಳು ಹಾಕಿದಳು.
ಅವರು ಮಾತಾಡುತ್ತಲೇ ಇದ್ದರು. ಮಗನೊಮ್ಮೆ ಇನ್ನು ಹೊರಡುವ ಎಂಬಂತೆ ಕಣ್ಸನ್ನೆ ಮಾಡಿದ. ಎರಡು ಗಂಟೆಗೆ ಹತ್ತಿರವಾಯಿತೇನೋ, ನಾನಿನ್ನೂ ಕಚೇರಿ ಮುಟ್ಟಬೇಕು, ನಾವಾಗಿಯೇ ತಟ್ಟನೆ ಎದ್ದು ನಿಲ್ಲುವುದು ಶಿಷ್ಟಾಚಾರ ಅಲ್ಲವೇನೋ ಎಂದುಕೊಳ್ಳುತ್ತಿರುವಂತೆ ಅವರು ನಾನು ಸ್ವಲ್ಪ ಮಧ್ಯಾಹ್ನ ಮಲಗ್ತೀನಿ. ಹಾರ್ಟ್ ಪೇಶಂಟ್… ಎರಡು ಸಲ ಅಟ್ಯಾಕ್ ಆಗಿದೆ ಎಂದು ಗಂಭೀರವಾಗಿ ಹೇಳುತ್ತಲೇ ಮೂರನೇ ಸಲ ಸ್ವಲ್ಪ ತಡವಾಗಿ ಆಗಲಿ ಅಂತ ಅಂದ್ಕೋತೀನಿ ಎಂದು ನಸುನಕ್ಕರು. ಯಾಕೋ ತಟ್ಟನೆ ನನ್ನಲ್ಲೊಂದು ಸಣ್ಣ ಕಂಪನ ಹಾದುಹೋಯಿತು. ಅಯ್ಯೋ, ಬೇಡ ಸರ್, ಮೂರನೆಯದು ಬೇಡ ನಾನು ಸಣ್ಣಗೆ ತೊದಲಿದೆ ಎನಿಸುತ್ತೆ.
ಇವರು ಮಲಗುತ್ತಾರೆ ಎಂದು ಗೊತ್ತಾದ ಗುಂಡ ಆಗಲೇ ದೀವಾನದ ಮೇಲೆ ಗೋಡೆಯ ಪಕ್ಕ, ಇದು ತನ್ನ ಜಾಗವೆಂಬ ರಾಜಠೀವಿಯಿಂದ ಮಲಗಿಯಾಗಿತ್ತು. ಈಗ ಅಮ್ಮ ಬರ್ತಾಳೆ ಎಂದು ತಾನೇ ಮೊದಲು ಮಂಚ ಹತ್ತಿ ಮಲಗಿದ ಚಿಕ್ಕ ಮಗುವಿನ ಹಾಗೆ ಮಲಗಿತ್ತು ಅದು. ಬಾಗಿಲವರೆಗೆ ಬಂದು ಮತ್ತೆ ಮನೆಗೆ ಬರುವಂತೆ ಆಹ್ವಾನಿಸಿದರು. ನಿಮ್ಮ ಪರಿಚಯ ಮಾಡಿಸಿದ್ದಕ್ಕೆ ಗೋಪಾಲ್ಗೆ ಥ್ಯಾಂಕ್ಸ್ ಹೇಳಬೇಕು ಎಂದು ಶಿಶುಸಹಜ ನಗು ಅರಳಿಸಿದರು. ಬಾಪ್ರೇ…. ಸರೋದ್ ಮಾಂತ್ರಿಕನ ಚಹರೆಯನ್ನು ಹೀಗೆ ಒಂದು ದಿನ ಹತ್ತಿರದಿಂದ ಕಂಡು ಪದಗಳಲ್ಲಿ ಚಿತ್ರಿಸುವುದು ಸಾಧ್ಯವಾದರೂ ಇದೆಯೇ…
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ತುಂಬಾ ಆಪ್ತ ಬರಹ. ಇಷ್ಟವಾಯಿತು.ಅವರು ಈಗಿಲ್ಲ ಎನ್ನುವುದನ್ನು ನೆನೆದು ಕಣ್ಣು ಹನಿಗೂಡಿತು.