Advertisement
ಸರ್ಕಾರಿ ಸಿಬ್ಬಂದಿಯೊಂದಿಗೆ ನಡೆದ ಜಟಾಪಟಿ: ಎಚ್. ಗೋಪಾಲಕೃಷ್ಣ ಸರಣಿ

ಸರ್ಕಾರಿ ಸಿಬ್ಬಂದಿಯೊಂದಿಗೆ ನಡೆದ ಜಟಾಪಟಿ: ಎಚ್. ಗೋಪಾಲಕೃಷ್ಣ ಸರಣಿ

ಬೆಳಿಗ್ಗೆಯಿಂದ ಸುತ್ತಿದ್ದು, ಹಸಿವಿನ ಹೊಟ್ಟೆ, ನಾಲ್ಕು ಮಹಡಿ ಹತ್ತು ಎರಡು ಮಾಡಿ ಇಳಿ… ಬಿಪಿ ಏರಿತು ಕಾಣಿರಿ… ವಾಚಾಮಗೋಚರ ಪುಂಖಾನು ಪುಂಖವಾಗಿ ಬಾಯಿಂದ ಬೈಗುಳ ಹೆಂಗೆ ಯಾವ ಡೆಸಿಮಲ್‌ನಲ್ಲಿ ಉಕ್ಕಿತು ಅಂದರೆ ಮೇಲಿನ ಮಹಡಿ ಕೆಳಗಿನ ಮಹಡಿ ನಾನು ನಿಂತಿದ್ದ ಮಹಡಿ ಜನ ಸುತ್ತಲೂ ಸೇರಿಬಿಟ್ಟರು. ಎರಡು ಸಾವಿರ ಅಂತ ಕೇಳಿದವನು ಸುಟ್ಟು ಕರಕಲಾಗಿರುವ ಬೊಂಬೆ ಹಾಗೆ ನಿಂತಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೆಂಟನೆಯ ಕಂತು

ಕಳೆದ ಸಂಚಿಕೆ ಅಂಚಿಗೆ ಹೀಗೆ ಹೇಳಿದ್ದೆ…

ಒಂದು ಸತ್ಯನಾರಾಯಣ ಸ್ವಾಮಿ ಪೂಜೆ ಇಲ್ಲದೇ, ಹಸು ಕರು ಒಳಗೆ ಓಡಾಡದೇ ಗಣೇಶ ಹೋಮ ಆಗದೇ ದೈವ ಕೃಪೆ ಇಲ್ಲದೇ ನಡೆದ ಗೃಹಪ್ರವೇಶ ನನ್ನ ಬಂಧುಗಳು ಸ್ನೇಹಿತರಲ್ಲಿ ನಡುವೆ ಸುಮಾರು ದಿವಸ ಒಂದು ಮಾತಿನ ವಸ್ತು ಆಗಿತ್ತು! ಈಗಲೂ ಅಂದಿನ ದಿವಸದ ನೆನಪು ಬಂದರೆ ನನ್ನೆಲ್ಲ ಆಪ್ತರ ನೆನಪು ಒದ್ದುಕೊಂಡು ಬರುತ್ತೆ. ಎಂಬತ್ತರ ದಶಕದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ರಸ್ತೆ, ಬಸ್ಸು, ಒಂದು ಇಡ್ಲಿ ಹೋಟೆಲ್ಲು, ಒಬ್ಬ ಡಾಕ್ಟರು…. ಇನ್ನೂ ಏನೇನೋ ಇಲ್ಲಗಳ ನಡುವೆ ಜೀವನ ಸಾಗಿಸಿದ ತಳ ಮಧ್ಯಮ ವರ್ಗದ ವ್ಯಕ್ತಿಗಳ ಕತೆ ಇದು. ನಗರ ನಂತರದ ದಿನಗಳಲ್ಲಿ ಬೆಳೆದು ಬೆಳೆದು ಕೊನೆಗೆ ಅಡ್ಡಉದ್ದ ಬೆಳೆಯುವ ಹಂತ ಮೀರಿ ಈಗ ಎತ್ತರದತ್ತ ಹೊರಳಿ ದಶಕಗಳು ಕಳೆದಿವೆ.

ಮೂಲ ಸೌಲಭ್ಯಗಳು ಇಲ್ಲದೇ ಇಂತಹ ಬಡಾವಣೆಯಲ್ಲಿ ಬಂದು ನೆಲೆಸಿದ ಜನ ಹೇಗೆ ತಮ್ಮ ಜಾಣ್ಮೆ, ಸಂಘಟಿತ ಹೋರಾಟ, ಮೂಲಭೂತ ಅವಶ್ಯಕತೆಗಳನ್ನು ಪಡೆದರು ಎನ್ನುವುದು ಮತ್ತೊಂದು ರೋಚಕ ಕತೆ. ಒಂದು ಬಡಾವಣೆ ಬೆಳೆದ ಕತೆ ಕೇಳಿದರೆ ಮಿಕ್ಕ ಬಡಾವಣೆಗಳ ಇತಿಹಾಸ ಹೀಗೇ ಎಂದು ಹೇಳಬಹುದು. ಬೆಂಗಳೂರು ಇಂತಹ ಬಡಾವಣೆಗಳ ಮೂಲಕ ಬೆಳೆದು ಬೆಳೆದು ಬೆಳೆದು ಬೆಳೆಯುತ್ತಲೇ ಇರುವುದರ ನೆನಪು ಅಚ್ಚರಿ ಹುಟ್ಟಿಸುತ್ತದೆ. ಅವುಗಳ ನೆನಪು bts ಬಸ್ಸುಗಳ ಹಾಗೆ ಒಂದರ ಹಿಂದೆ ಬರುತ್ತಿವೆ. ಹಿಂದೆ ಈಗಿನ bmtc ಹೋದ ಜನ್ಮದಲ್ಲಿ bts ಆಗಿತ್ತಲ್ಲ ಆಗಿನ ಒಂದು ಅತ್ಯಂತ ಕಾಮನ್ ಜೋಕ್ ಏನು ಅಂದರೆ…… ಗಂಟೆ ಗಟ್ಟಲೆ ಕಾದರೂ ಒಂದೇ ಒಂದು bts ಬಸ್ಸು ಬರುತ್ತಿರಲಿಲ್ಲ. ನಂತರ ಹೇಗೆ ಬರುತ್ತಿದ್ದವು ಎಂದರೆ ಒಂದರ ಹಿಂದೆ ಇನ್ನೊಂದು ಅದರ ಹಿಂದೆ ಮತ್ತೊಂದು ಅದರ ಹಿಂದೆ… ಹೀಗೆ. ಕಷ್ಟಗಳು ಬಂದರೆ bts ಬಸ್ಸಿನ ಹಾಗೆ ಒಂದರ ಹಿಂದೆ ಬರುತ್ತದೆ ಎನ್ನುವುದು ಎಂಬತ್ತರ ದಶಕದ ತುಂಬಾ ಪಾಪುಲರ್ ಜೋಕ್.
ಮುಂದೆ ಬಡಾವಣೆ ಅಭಿವೃದ್ಧಿಗಾಗಿ ರಸ್ತೆಗೆ, ಬಸ್ಸಿಗೆ…..

ಈಗ ಮುಂದಕ್ಕೆ ಹೋಗಲೇ..

ಹೇಗೋ ತಿಪ್ಪರಲಾಗ ಹೊಡೆದು ಲಂಚಕೋರರ ಕೈಕಾಲುಗಳಿಗೆ ಬಿದ್ದು ಲೈಟ್ ಕಂಬ ಮನೆವರೆಗೂ ತಂದ ಭಗೀರಥ ಪ್ರಯತ್ನ ಹೇಳಿದೆ ತಾನೇ? ಒಂದು ಸಲ ಈ ಲಂಚ ಪಂಚ ಕೊಡುವ ಅಭ್ಯಾಸ ಆಯಿತು ಅನ್ನಿ, ಮುಂದೇನು ಗೊತ್ತಾ? ಲಂಚದ ಅಂದರೆ ಲಂಚ ಕೊಡುವ ಅಭ್ಯಾಸ ಇನ್ನೂ ರೂಡಿಸಿಕೊಳ್ಳದಿದ್ದಾಗ ಎಲ್ಲರೂ ನಮ್ಮ ಹಾಗೆ ಹರಿಶ್ಚಂದ್ರನ ತುಂಡುಗಳು, ಸಜ್ಜನ ಸಭ್ಯ ಇತ್ಯಾದಿಯಾಗಿ ಕಾಣುತ್ತಾರೆ. ಒಮ್ಮೆ ಅಭ್ಯಾಸ ಆಯ್ತೋ, ಪ್ರತಿಯೊಬ್ಬರೂ ಭ್ರಷ್ಟರು, ಸುಳ್ಳುಕೋರರು, ದಗಲ್ಬಾಜಿಗಳು…. ಹೀಗೆ ಪರಿವರ್ತನೆ ಹೊಂದುತ್ತಾರೆ. ನನಗಾಗಿದ್ದೂ ಸಹ ಹೀಗೆಯೇ…! ಮನೆ ಕಟ್ಟಿದ ನಂತರ ವಾಸಕ್ಕೆ ಬಂದ ಕತೆ ಹೇಳುವ ಮೊದಲು ಒಂದು ಲಂಚದ ನೆನಪು ಒತ್ತರಿಸಿದೆ. ಅದನ್ನ ಮೊದಲು ಕಕ್ಕಿ ಬಿಡ್ತೀನಿ, ಜಾಸ್ತಿ ಹೊತ್ತು ಹೊಟ್ಟೇಲಿ ಅದುಮಿ ಇಟ್ಟುಕೊಂಡಿರಬಾರದಂತೆ!

ಮನೆಗೆ ಸೇರಿಕೊಂಡು ಸುಮಾರು ವರ್ಷ ಆದಮೇಲೆ ನೀರು ಸರಬರಾಜು ಮಂಡಳಿಯಲ್ಲಿ ಒಂದು ಕೊರತೆ ಹೇಳಿಕೊಳ್ಳಲು ಹೋದವನು ಅಲ್ಲಿಯ ಇಂಜಿನಿಯರ್ ಬಳಿ ನನ್ನ ಸಮಸ್ಯೆ ಹೇಳಿದೆ. ಆಗಾಗ ಪೆನ್ಸಿಲ್ ಅಗಿಯುತ್ತಾ ಕಿವಿ ಒಳಗೆ ಅದೇ ಪೆನ್ಸಿಲ್ ಹಾಕಿ ತಿರುಗಿಸುತ್ತಾ ಕೂತಿದ್ದ ಆತ ಸಮಸ್ಯೆ ಕೇಳಿದ ನಂತರ ಇದು ಮೇಲಿನ ಸಾಹೇಬರು ಮಾಡಬೇಕು. ನೀವು ಅರ್ಜಿ ಕೊಡಿ, ನಾನು ಮಾತಾಡಿ ನಿಮಗೆ ಹೇಳ್ತೀನಿ ಅಂದ. ಒಂದು ಸಿಂಪಲ್ ಸಮಸ್ಯೆ, ಅದು ಇವನೇ ಮಾಡಬೇಕಾದ್ದು, ಏನೋ ಸುಳ್ಳು ಬಿಡ್ತಾ ಇದಾನೆ ಅಂತ ಅನಿಸಿತು. ಅಂದರೆ ಐ ಫೆಲ್ಟ್ ರಾಟ್ ( ಇಲಿ)ಸ್ಮೆಲ್..(I felt rat smell).

ಅವರ ಹತ್ರ ಯಾಕೆ ಸಾರ್.. ಅಂದೆ.
ದೊಡ್ಡ ಪ್ರಾಬ್ಲೆಮ್ ಇದೆ ಇವರೇ, ಅವರೇ ಸರಿ ಮಾಡಬೇಕು ಅಂದ.
ಸರಿ ಅಂತ ಅರ್ಜಿ ಅವನ ಎದುರು ಇಟ್ಟು ಮೇಲೆದ್ದೆ. ಚಾರ್ಜ್ ಆಗ್ತದೆ…. ಅಂದ!
ಚಾರ್ಜ್? ಎಷ್ಟು? ಚಲನ್ ಕಟ್ಟಬೇಕಾ.. ಇದು ನಾನು..
ಚಲನ್ ಗಿಲನ್ ಅಂತ ಹೋದರೆ ಈ ಕೆಲಸ ಆಗಕೇ ಇಲ್ಲ…
ಮತ್ತೆ..? ಇದು ನಾನು
ಹದಿನೈದು ಸಾವಿರ ಕೊಡಿ ನಾನೇ ಮಾಡಿಸಿಕೊಂಡು ನಿಮ್ಮನೆಗೇ ತರ್ತೀನಿ.. ಅಂದ.
ನಮ್ಮನೆ ಮೀಟರ್ ಕೆಟ್ಟಿತ್ತು, ಅದರ ಬದಲಾವಣೆಗೆ ಅಂತ ಹೋಗಿದ್ದು.
ಅವನ ಮಾತು ಕೇಳಿ ನಾಲ್ಕು ಬಾರಿಸಬೇಕು ಅನಿಸಿತು.
ಹದಿನೈದು ಸಾವಿರ? ಅದೇನಿದೆ ಅಷ್ಟು ಖರ್ಚು?
ಅಲ್ಲಿ ಆಫೀಸಿಗೆ ಹೋಗಬೇಕು, ಸಾಹೇಬರಿಗೆ ಎಕ್ಸ್ಪ್ಲೇನ್ ಮಾಡಬೇಕು, ಅಲ್ಲಿ ಆಫೀಸ್ ಖರ್ಚು….
ಅಂತ ವಿವರ ಕೊಟ್ಟ.

ನನ್ನ ಹತ್ತಿರ ಅಷ್ಟು ತಂದಿಲ್ಲ. ಮುಂದಿನ ವಾರ… ಅಂದೆ.
ನನ್ನ ಪೋನ್ ನಂಬರ್ ತಗೊಳ್ಳಿ, ಬರೋಕ್ಕೆ ಮೊದಲು ಪೋನ್ ಮಾಡಿ. ಈ ವೇಳೆಗೆ ಸೆಲ್ ಪೋನ್ ಬಂದಿತ್ತು.
ನಂಬರ್ ಹೇಳಿದ. ಅದನ್ನು ಪೋನಿಗೆ ಸೇರಿಸಿದೆ. ಪೋನ್ ಜೇಬಿಗೆ ಹೋಯಿತು.
ಹೆಸರು, ನನ್ನ ಎಸರು ಕೇಳಲೀಲ್ಲ ನೀವು…. ಸೇವ್ ಮಾಡುಕ್ಕೆ…
ಅಂದ. ಅವನ ಹೆಸರು ಶಿವಲಿಂಗಪ್ಪ ಅಂತಲೋ ಶಿವ ಗಂಗಪ್ಪ ಅಂತಲೋ ಒಂದು.
ಪೋನ್ ಕೊಡಿ ಇಲ್ಲಿ ಎಸರು ಆಕಿ ಕೊಡ್ತೀನಿ… ಅಂತ ಫೋನ್ ಇಸ್ಕೊಂಡ. ಅವನ ಹೆಸರು ಇರಬೇಕಾದ ಕಡೆ ಲಂಚಕೋರ ನನ್ಮಗ ಅಂತ ಟೈಪ್ ಮಾಡಿದ್ದೆ. ಪೋನ್ ಇಸಕೊಂಡನ? ಅವನ ನಂಬರು ಒತ್ತಿದನಾ? ಅವನ ಎಸರು ನೋಡಿಕೊಂಡನಾ..,?

ಕಪ್ಪಗಿದ್ದವನು ಕೆಂಪಾಗಿ ಹೋದ.

ಏನ್ ಸಾರ್ ಹೀಗೆ ತಮಾಷೆ ಮಾಡ್ತೀರಿ..?
ಕೋಪ ಬಂದಿತ್ತಾ ಅವನಿಗೆ ತಿಳಿಯದು.

…ನಿನ್ನಂತ ಜನ ಸಮಾಜಕ್ಕೆ ಹೊರೆ ಅಂತ ಬೈದು ಆಚೆ ಬಂದೆ. ಮೀಟರ್ ಕೆಟ್ಟಿದೆ ಅಂತ ಅರ್ಜಿ ಕೊಟ್ಟಿದ್ದೀನಿ ತಾನೇ? ಅದರ ಮೇಲೆ ಕ್ರಮ ತಗೋಬೇಕಾದ್ದು ಅವನ ಡ್ಯೂಟಿ ಅಂತ ತೆಪ್ಪಗಾದೆ. ಮೂರ್ನಾಲ್ಕು ತಿಂಗಳ ನಂತರ ಮೀಟರು ಬದಲಾಯಿತು. ಅಷ್ಟು ಹೊತ್ತಿಗೆ ಲಂಚಕೋರ ಇನ್ನೆಲ್ಲೋ ವರ್ಗ ಆಗಿದ್ದ!

ಈಚಿನ ಮತ್ತೊಂದು ಇದೇ ಜಾತಿಗೆ ಸೇರಿದ ಪ್ರಸಂಗ ಕ್ಯೂ ನಲ್ಲಿ ನಿಂತಿದೆ. ಅದನ್ನು ಮರೆತೆ ಅಂದರೆ ಮತ್ತೆ ಹೇಳುವ ಸೌಭಾಗ್ಯ ನನಗೆ ಸಿಗುತ್ತೋ ಇಲ್ಲವೋ ಗೊತ್ತಿಲ್ಲ! ಹಾಗೇ ನಿಮಗೂ ಕೇಳುವ ಸೌಭಾಗ್ಯದಿಂದ ವಂಚಿಸುವುದು ಸಾಮಾಜಿಕ ನ್ಯಾಯ ಅನಿಸದು. ಅದರಿಂದ ಸಮತೋಲನ ಕಾಪಿಡುವ ಒಂದೇ ಒಂದು ಉದ್ದೇಶದಿಂದ ಅದನ್ನೂ ಹೇಳಿ ಬಿಡುತ್ತೇನೆ….

ನಮ್ಮ ಅವಳಿ ಮೊಮ್ಮಕ್ಕಳ ಬರ್ತ್ ಸರ್ಟಿಫಿಕೇಟ್ ಮಾಡಿಸಬೇಕಿತ್ತು. ಹುಟ್ಟಿದಾಗ ಮಾಡಿಸಿದ್ದರಲ್ಲಿ ಮಕ್ಕಳ ಹೆಸರು ಇರಲಿಲ್ಲ. ಹೊರ ದೇಶಗಳಲ್ಲಿ ಮಗು ಹೆಣ್ಣು ಇಲ್ಲವೇ ಗಂಡು ಎಂದು ಭ್ರೂಣ ಪತ್ತೆಮಾಡಿ ತಂದೆ ತಾಯಿಗೆ ಹೇಳುತ್ತಾರೆ. ಅದರ ಮೇಲೆ ಅವರು ಮಗುವಿಗೆ ಹೆಸರು ಹುಡುಕಿ ಮಗು ಹುಟ್ಟಿದಾಗ ಬರ್ತ್ ಸರ್ಟಿಫಿಕೇಟ್‌ನಲ್ಲಿ ಆಯಾ ಹೆಸರು ಸೇರುತ್ತದೆ. ಅದರಿಂದ ಅಲ್ಲಿನವರು ಕಚೇರಿ ಹುಡುಕಿ ಅಲೆಯುವ ಸುವರ್ಣಾವಕಾಶ ವಂಚಿತರಾಗುತ್ತಾರೆ. ಜತೆಗೆ ಅಪಾರವಾದ ಅನುಭವ ಕಳೆದುಕೊಳ್ಳುತ್ತಾರೆ. ಅವರನ್ನ ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ….!

ಆದರೆ ನಮ್ಮ ದೇಶದಲ್ಲಿ ಮಕ್ಕಳು ಹುಟ್ಟುವ ಮೊದಲೇ ಹೆಸರು ಇಡುವ, ಮಡಗುವ ಸಂಪ್ರದಾಯ ಇಲ್ಲ. ಕಾರಣ ಇಲ್ಲಿ ಭ್ರೂಣ ಲಿಂಗ ಪತ್ತೆ ಕಾನೂನು ಪ್ರಕಾರ ಬಾಹಿರ. ಮಗು ಲಿಂಗ ಗೊತ್ತಾಗದೆ ಹೆಸರು ಇಡುವುದು ಹೇಗೆ? ಅದರಿಂದ ಮಗುವಿಗೆ ನಾಮಕರಣ ಆದಮೇಲೆ ಅದರ ಹೆಸರು ನಮೂದಿಸಿ ಮತ್ತೊಂದು ಬರ್ತ್ ಸರ್ಟಿಫಿಕೇಟ್ ಪಡೆಯುವ ಸೌಲಭ್ಯ ಇದೆ. ಸರ್ಕಾರ ಅನಿವಾರ್ಯವಾಗಿ ಕಲ್ಪಿಸಿರುವ ಈ ಸದವಕಾಶ ಇದು, ಇದು ಬೇಡ ಎಂದು ಬಿಡುವ ಹಾಗಿಲ್ಲ. ಮಗು ಎಲ್ಕೆಜಿಗೋ, ಬೇಬಿ ಸಿಟ್ಟಿಂಗ್‌ಗೋ ಸೇರಬೇಕಾದರೆ ಇದು ಅವಶ್ಯ! ಇದನ್ನು ಮಾಡಿಸುವವರು ಸರ್ಕಾರಿ ಕಚೇರಿಗೆ ಅಲೆಯುವಷ್ಟು ಸಮಯ ಇರುವವರು, ತಾಳ್ಮೆ ಮತ್ತು ಪೇಶೆನ್ಸ್ ಆಗಬೇಕು. ರಿಟೈರ್ ಆದವರಿಗೆ ಇದು ಇರ್ತದೆ ಎನ್ನುವ ಸಾರ್ವಕಾಲಿಕ ನಂಬುಗೆ ಇದೆ. ಅಪ್ಪ ಅಮ್ಮ ಇಬ್ಬರೂ ಸಮಯ ಸಾಲದಿರುವ ಗುಂಪಿಗೆ ಸೇರಿದವರು. ಸ್ವಾಭಾವಿಕವಾಗಿ ಅಂದರೆ ನ್ಯಾಚುರಲ್ಲಾಗಿ ಈ ಹೊಣೆ ಮನೆಯ ಹಿರಿಯ ಕೈಗೆತ್ತಿಕೊಳ್ಳುತ್ತಾನೆ. ನಾನು ಇದು ಅಂದರೆ ಬರ್ತ್ ಸರ್ಟಿಫಿಕೇಟ್ ಮಾಡಿಸಲು ಹೊರಟೆ. ಅದರ ಒಂದು ಅನುಭವ ನನ್ನ ಕರ್ಣ ಚರಿತ್ರಾಮೃತದಲ್ಲಿ ಸೇರಿದೆ. ಈಗ ಅದರ ಒಂದು ಪಕ್ಷಿ ನೋಟ…

ಒಂದು ಇಡೀ ದಿವಸ ಎರಡು ಮೂರು ಕಚೇರಿ ಅಲೆದೆ. ಮಲ್ಲೇಶ್ವರದಲ್ಲಿ ಇದರ ಆಫೀಸು ಅಂತ ಗೊತ್ತಾಯಿತು. ಅಲ್ಲಿ ನಾಡ ಕಚೇರಿಗೆ ಹೋಗಿ…. ಅಂತ ಮತ್ತಿಕೆರೆ ಆಸ್ಪತ್ರೆ ಅವರು ಹೇಳಿದರು. ಮಲ್ಲೇಶ್ವರ ನಾನು ಐವತ್ತು ವರ್ಷ ಓಡಾಡಿದ ಜಾಗ, ಅಲ್ಲಿ ನಾಡಕಚೇರಿ ಎಲ್ಲಿ ಇದೆ ಅಂತ ತಲೆ ಕೆಡಿಸಿಕೊಂಡೆ. ಇನ್ನೊಂದು ಖುಷಿ ಅನಿಸಿದ್ದು ನಾಡಕಚೇರಿ ಹೆಸರು ಕೇಳಿ. ಅಪರೂಪಕ್ಕೆ ಇಂಗ್ಲಿಷ್ ಹಿಂದಿ ಹೆಸರುಗಳಿಗೆ ಮೊರೆಹೋಗದೇ ಅಚ್ಚ ಕನ್ನಡ ಹೆಸರು ಇಟ್ಟಿದ್ದಾರೆ. ನಾನ್ ಕನ್ನಡಿಗರು ಈ ಹೆಸರನ್ನು ಅದು ಹೇಗೆ ಒಪ್ಪಿದರು ಎಂದು ಜಿಜ್ಞಾಸೆ ನಡೆಸುತ್ತಾ ಮಲ್ಲೇಶ್ವರ ಹದಿನೆಂಟನೇ ಕ್ರಾಸ್ ನಿಂದಾ ಸಂಪಿಗೆ ಟಾಕೀಸ್‌ವರೆಗೆ ಬೋರ್ಡ್ ಹುಡುಕುತ್ತಾ ನಡೆದೆ. ಸಂಪಿಗೆ ಹತ್ತಿರ ನಿಂತು ಬೋರ್ಡ್ ಓದುತ್ತಾ ಇದ್ದೇನಾ, ಅಲ್ಲಿ ಮರದ ಕೆಳಗೆ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದ ಪೊಲೀಸು ಏನ್ಸ್ವಾಮಿ ಏನ್ ಹುಡುಕ್ತಾ ಇದೀರಿ ಅಂತ ಕೇಳಿದರು.

ಇಲ್ಲೆಲ್ಲೋ ನಾಡ ಕಚೇರಿ ಅಂತ ಇದೆಯಂತೆ….. ಅಂದೆ.
ಕಾರ್ಪೋರೇಶನ್ ಆಫೀಸಾ…
ಹೌದು ಅಂತ ಕಾಣ್ಸುತ್ತೆ.‌ ಬರ್ತ್ ಸರ್ಟಿಫಿಕೇಟ್ ಮಾಡಿಸಬೇಕಿತ್ತು…. ಅಂದೆ.
ಎದುರು ಕಾಣಿಸುತ್ತಿದ್ದ ಬಿಲ್ಡಿಂಗ್ ತೋರಿಸಿ ಅದೇ ಇರಬಹುದು ನೋಡಿ ಅಂತ ರಸ್ತೆ ದಾಟಿಸಿದರು. ಅಲ್ಲಿ ಹೋಗಿ ವಿಚಾರಿಸಿದೆ. ಮಲ್ಲೇಶ್ವರ ಪೊಲೀಸ್ ಸ್ಟೇಷನ ಹತ್ರ ಹೋಗಿ ಯಾರನ್ನಾದರೂ ಕೇಳಿ ಅಂದರು! ಸಮಯ ಎರಡಾಗಿತ್ತು. ಮನೆಗೆ ಹೋಗಿ ತಿಂದು ಮಂಚ ಒರಗು ಅಂತ ಹೃದಯ ಮೆದುಳು ದೇಹ ಫೋರ್ಸ್ ಮಾಡುತ್ತಾ ಇದ್ದವು. ಇಷ್ಟೇ ಶ್ರಮ ಪಟ್ಟಿದ್ದೀಯ, ಪೊಲೀಸ್ ಸ್ಟೇಷನ್ ಹತ್ತಿರ ಹೋಗಿ ನೋಡು. ನೆವರ್ ಅಕ್ಸೆಪ್ಟ್ ಡಿಫೀಟ್ ಅಂತ ಆತ್ಮ ಸೈಡ್‌ನಲ್ಲಿ ನಿಂತು ಹುರಿದುಂಬಿಸಿತು. ಜಿಜ್ಞಾಸೆಯಲ್ಲಿ ಆತ್ಮ ಜಯಭೇರಿ ಬಾರಿಸಿ ಪೊಲೀಸ್ ಸ್ಟೇಷನ್ ಹೊಕ್ಕೆ. ನಾಡ ಕಚೇರಿ ಇಲ್ಲಿದೆ ಅಂದರು…. ಅಂತ ಅಲ್ಲಿ ಕೂತಿದ್ದ ಯೂನಿಫಾರಂ ಪೊಲೀಸ್ ಹತ್ತಿರ ಮಾತು ಆರಂಭಿಸಿದೆ.

ಅವರು ಎದ್ದರು, ಬನ್ನಿ ಅಂದರು. ನಾಡ ಕಚೇರಿ ಪೊಲೀಸ್ ಸ್ಟೇಷನ್‌ನಲ್ಲೇ ಇರಬಹುದು ಅನಿಸಿತು. ಅವರ ಹಿಂದೆ ನಡೆದೆ. ಪೊಲೀಸ್ ಸ್ಟೇಷನ್‌ನಿಂದ ಆಚೆ ಬಂದು ಎಡಕ್ಕೆ ತಿರುಗಿ ರಸ್ತೆ ಮಧ್ಯೆ ನಿಂತು ಎರಡೂ ಕಡೆಯ ವಾಹನ ನಿಲ್ಲಿಸಿದರು. ರಸ್ತೆ ಕ್ರಾಸ್ ಮಾಡಿಸಿದರು. ಬಲಕ್ಕೆ ಕೈ ತೋರಿಸಿ ನೋಡಿ ಅದೇ ನಾಡ ಕಚೇರಿ ಅಂದರು!

ನಾಡ ಪ್ರಭು ಕೆಂಪೇಗೌಡರ ಹೆಸರು ಚಿರಸ್ಥಾಯಿ ಆಗಿರಲು ಈ ಹೆಸರು ಇಟ್ಟಿರಬಹುದು ಎಂದು ಚಿಂತನ ಮಂಥನ ನಡೆಸುತ್ತಾ ಕಚೇರಿ ಹೊಕ್ಕೆ. ಅದಕ್ಕೆ ಮೊದಲು ಪೋಲೀಸಪ್ಪ ಅವರಿಗೆ ಎರಡೂ ಕೈ ಹಿಡಿದು ಕುಲುಕಿ ಥ್ಯಾಂಕ್ಸ್ ಹೇಳಿದೆ.

ಸೀದಾ ಬಿಲ್ಡಿಂಗ್ ಒಳ ಹೊಕ್ಕೆ. ಎಲ್ಲಾ ಕಾರ್ಪೋರೇಷನ್ ಕಚೇರಿ ಹಾಗೆ ಕೊಳಕು ಕೊಳಕು. ಮುರಿದಿರೋ ಮೂರು ಟೇಬಲ್ ವೆರಾಂಡಾದ ಅತ್ತ ಇತ್ತ, ಗುಟ್ಕಾ ಎಂಜಲು ಹಸಿಯಾದವು ಒಣಗಿದವು ಜತೆಗೆ ಹಳೇ ಬಟ್ಟೆ ಅಲ್ಲಲ್ಲಿ… ವಾಕರಿಕೆ ಬಂತಾ. ಆತ್ಮ go ahead go ahead go ahead ಅಂತ ಹುರಿದುಂಬಿಸುತ್ತಾ ಇದೆ. ಸರಿ go ahead ಅದೇನಾ.. ಅಲ್ಲೇ ಇದ್ದ ದೊಡ್ಡ ಬೋರ್ಡ್ ನೋಡಿ ಜನನ ಮರಣ ಆಫೀಸು ಹುಡುಕಿದೆ. ಅದು ಮೂರನೆಯದೊ ನಾಲ್ಕನೆಯದೊ ಮಹಡಿ. ಕಾರ್ಪೋರೇಷನ್ ಕಚೇರಿಯ ರೂಲ್ಸ್‌ನಂತೆ, ಮತ್ತು ಎಂದಿನಂತೆ ಲಿಫ್ಟ್ out of order!

ಏದುಸಿರು ಬಿಡುತ್ತಾ ನಾಲ್ಕನೇ ಮಹಡಿಗೆ ಬಂದು ಕಚೇರಿ ಒಳಗೆ ಹೋದೆ. ಮಧ್ಯಾಹ್ನ ಮೂರೂ ಕಾಲು ಆಗಿತ್ತು ಅಂತ ಕಾಣುತ್ತೆ. ಆಫೀಸು ಗುಜ ಗುಜ ಅಂತ ಇರಲಿಲ್ಲ, ಅಂದರೆ ಜನರ ದಲ್ಲಾಳಿಗಳ ರಶ್ ಇರಲಿಲ್ಲ. ಬಹುಶಃ ಎಲ್ಲರೂ ಅವರವರ ಕೆಲಸ, ವ್ಯವಹಾರ ಮುಗಿಸಿ ಹೋಗಿದ್ದರು ಅಂತ ಕಾಣುತ್ತೆ. ಐದಾರು ಟೇಬಲ್ ಹಿಂದೆ ಕುರ್ಚಿ ಒರಗಿ ಕೂತಿದ್ದ ಹೆಣ್ಣು ಗಂಡು ಸಿಬ್ಬಂದಿ ಕಣ್ಣು ಮುಚ್ಚಿ, ಮಧ್ಯಾಹ್ಯದ ಊಟದ ಸುಖ ಅನುಭವಿಸುತ್ತಾ ಇದ್ದರು. ಬೆಳಿಗ್ಗೆ ಹತ್ತಕ್ಕೆ ನಾಲ್ಕು ಇಡ್ಲಿ ತಿಂದು ಮಧ್ಯಾಹ್ನ ಮೂರರವರೆಗೆ ಕಚೇರಿ ಹುಡುಕಿ ನಾಲ್ಕು ಮಹಡಿ ಉಬ್ಬಸ ಪಡುತ್ತಾ ಹತ್ತಿ ಬಂದರೆ ಮತ್ತು ನಿಮಗೆ ಅರವತ್ತೈದು ಪ್ಲಸ್ ಆಗಿದ್ದರೆ ಏನಾಗುತ್ತೆ? ಅದೇ ಇವರೇ, ನನಗೂ ಆಗಿದ್ದು. ನಖ ಶಿಖಾಂತ ಉರಿಯಿತು. ಕೂಗಿ ರಂಪ ಯಾರ ಮೇಲೆ ಮಾಡಲಿ? ಗೋಮಾತೆ ನಾನು ಹರಿ ಹರಿ ಗೋವು ಜಾತಿಗೆ ಸೇರಿದ ಮೂಕ ಪ್ರಾಣಿ..

ಮುಖ ಗಂಟು ಹಾಕಿಕೊಂಡು ಹತ್ತಿರ ಇದ್ದ ಟೇಬಲ್ ಬಳಿ ನಡೆದೆ. ಮೆಲ್ಲಗೆ ಮೇಡಂ ಅಂದೆ. ಮೇಡಂ ಕಣ್ಣು ಬಿಡಲಿಲ್ಲ. ಸ್ವಲ್ಪ ವಾಲ್ಯೂಮ್ ಹೆಚ್ಚು ಮಾಡಿ ಮೇಡಂ ಅಂದೆ. ಊಹೂಂ ನೋ ರೆಸ್ಪಾನ್ಸ್… ಟೇಬಲ್ ತಟ್ಟಿದೆ, ಆಗಲೂ ಅಷ್ಟೇ. ಸರಿ ಆಕೆ ಕಣ್ಣುಬಿಡುವರೆಗೂ ಕಾಯೋಣ ಅಂದರೆ ಆತ್ಮ ಒಪ್ಪುತ್ತಿಲ್ಲ! ಆತ್ಮ go ahead ಅಂತ ಬಡ್ಕೊಳ್ತಾ ಇದೆ……

ಟೇಬಲ್ ತಳದಲ್ಲಿ ಒಂದು ಜಲ್ಲಿ ಕಲ್ಲು ಬಿದ್ದಿತ್ತು. ಬಹುಶಃ ಅದು ಪೇಪರ್ ವೈಟ್ ಕೆಲಸಕ್ಕೆ ಅಂತ ನೇಮಕ ಆಗಿದ್ದು ಅಲ್ಲಿತ್ತು ಅಂತ ಕಾಣುತ್ತೆ. ಅದನ್ನು ತೆಗೆದು ಟೇಬಲ್ ಮೇಲೆ ಕುಟ್ಟಿ ಆಕೆಯನ್ನು ಎಬ್ಬಿಸುವ ಒಂದು ವಿಚಿತ್ರ ಐಡಿಯಾ ಹೊಳೆಯಿತಾ. ಕಲ್ಲು ಎತ್ತಲು ಬಗ್ಗಿದೆ. ಶರ್ಟಿನ ಮೇಲಿನ ಜೇಬಿನಲ್ಲಿದ್ದ ಚಿಲ್ಲರೆ ಕಾಸು(ಒಂದು ಇಪ್ಪತ್ತು ರೂಪಾಯಿನಷ್ಟು ಇದ್ದವು)ಟನ್ ಟಾನ್ ಶಬ್ದ ಮಾಡುತ್ತ ಕೆಳಗೆ ಬಿದ್ದವು. ಚಿಲ್ರೆ ಕಾಸು ಶರ್ಟಿನ ಮೇಲು ಜೇಬಿನಲ್ಲಿ ಇಡುತ್ತಿದ್ದ ಕಾರಣ ಬಿಎಂಟಿಸಿ ಬಸ್ಸುಗಳ ಕಂಡಕ್ಟರ್ರಿಗೆ ಟಿಕೆಟ್‌ಗೆ ಕೊಡಲು. ಕಲ್ಲು ಚಿಂತೆ ಹೋಯಿತು, ಚಿಲ್ರೆ ಆರಿಸಿ ಜೇಬಲ್ಲಿ ಇಟ್ಟುಕೊಳ್ಳುವ ಹೊಸ ಕೆಲಸ ಹುಟ್ಟಿತು. ಸರಿ, ಬಗ್ಗಿ ಚಿಲ್ಲರೆ ಹೆಕ್ಕಲು ಶುರು ಮಾಡಿದೆ. ನನ್ನ ಕೈ ಆಕೆಯ ಕಾಲಿಗೆ ತಗುಲಿತು ಅಂತ ಕಾಣುತ್ತೆ. ಆಕೆ ಬೆಚ್ಚಿದಳು, ಕಣ್ಣು ಬಿಟ್ಟಳು.

ಏನ್ ಸಾರ್.. ಅಂದಳು.

ಚಿಲ್ರೆ ಬಿದ್ದು ಹೋಯಿತು ಅಮ್ಮಾ ಮೇಡಂ ಅಂದೆ. ಅಮ್ಮ ಅನ್ನುವ ದೊ ಮೇಡಂ ಅನ್ನುವ ಗೊಂದಲ…!

ಇಷ್ಟು ಹೊತ್ತಿಗೆ ಕಣ್ಣಿಗೆ ಕಂಡ ಕಾಸು ಹೆಕ್ಕಿದ್ದೆ. ಹುಡುಕಿದರೆ ಇನ್ನೂ ಸಂದಿ ಗೊಂದಿನಡಿ ಸೇರಿದ್ದ ಕಾಸು ಇತ್ತೋ ಏನೋ..
ದುಡ್ಡು ಬಿದ್ದ ಶಬ್ದ ಕೇಳಿಸಿತು. ಏನು ಬೇಕು…. ಅಂದಳು!

ಕಾರ್ಪೋರೇಷನ್ ಕಚೇರಿಗೆ ಹೇಳಿ ಮಾಡಿಸಿದವರು ಇವರು ಅಷ್ಟೊಂದು ಸಲ ಬಡಕೊಂಡರು ಎಚ್ಚರ ಇಲ್ಲ, ದುಡ್ಡಿನ ಶಬ್ದ ಕೇಳಿಸಿತಂತೆ…. ಅಂತ ಅವಳ ಬಗ್ಗೆ ಮೆಚ್ಚುಗೆ ಹುಟ್ಟಿತು.

ಆಕೆ ಏನು ಬೇಕು ಅಂದಳು ತಾನೇ..
ಬರ್ತ್ ಸರ್ಟಿಫಿಕೇಟ್.. ಬೇಕಿತ್ತಮ್ಮಾ ಮೇಡಂ ಅಂದೆ.
ಮೇಡಂ ಪದ ಸೇರಿಸಿದ್ದಕ್ಕೆ ಅವಳಿಗೆ ಖುಷಿ ಆಗಿದೆ ಅಂತ ಅಂದುಕೊಂಡೆ.
ಯಾರದ್ದು…? ಅವಳು..

ನನ್ನ ಮೊಮ್ಮಕ್ಕಳದ್ದು, ಅವು ಅವಳಿ ಜವಳಿ ಮಕ್ಕಳು, ನಾನ್ ಐಡೆಂಟಿಕಲ್, ಎರಡೂ ಹುಡುಗರು, ಈಗ ಅವಕ್ಕೆ ಎರಡು ವರ್ಷ, ಎಲ್ಲಿ ಹುಟ್ಟಿದರು ಅಂದರೆ…. ಅವರು ಗರ್ಭದಲ್ಲಿದ್ದಾಗ ಅವರ ತಾಯಿಗೆ ಅದೇನು ಪ್ರಾಬ್ಲಂ ಆಯಿತು ಅಂದರೆ…..

ಕೀ ಕೊಟ್ಟ ಬೊಂಬೆ ತರಹ ನನ್ನ ಮಾತು ಅಡೆ ತಡೆ ಇಲ್ಲದೇ ಓಡ್ತಾ ಇತ್ತು ಅಂತ ಕಾಣುತ್ತೆ. ಯಾಕೋ ಮಾತಿನ ಮಧ್ಯೆ ಅವಳ ಮುಖ ನೋಡಿದೆ. ಅದರಲ್ಲಿ ಬೆದರಿದ ಮುಖ ಕಣ್ಣಿನ ತುಂಬಾ ಗಾಬರಿ ಕಾಣಿಸಬೇಕೇ….?

ಮಾತು ನಿಲ್ಲಿಸಿದೆ. ಟೇಬಲ್ ಡ್ರಾ ಎಳೆದು ನೀರಿನ ಬಾಟಲಿಯಿಂದ ಮುಕ್ಕಾಲು ಬಾಟಲಿ ನೀರು ಕುಡಿದಳು.
ಬರ್ತ್ ಸರ್ಟಿಫಿಕೇಟ್ ಬೇಕಾ? ಕೆಳಗಡೆ ಫ್ಲೋಋಗೆ ಹೋಗಿ ಅಂದಳು!
ಕೆಳಗಡೆ ದೊಡ್ಡ ಬೋರ್ಡ್‌ನಲ್ಲಿ ಈ ಮಹಡಿ ಅಂತ ಹಾಕಿದ್ದಾರೆ…… ಅಂದೆ.
ಬೋರ್ಡ್ ಬರೆದ ಮೇಲೆ ಅದು ಆ ಮಾಡಿ ಅಂತ ಆಯ್ತು. ಬೋರ್ಡು ಚೇಂಜ್ ಆಗಿಲ್ಲ… ಅಂದಳು.
ಓ ಲಕ್ಷ್ಮಣ ಅಂತ ಕೆಳಗೆ ಇಳಿದೆ, ಲಿಫ್ಟ್ ಕೆಟ್ಟಿತ್ತು ಅಂತ ಗೊತ್ತಿತ್ತು.
ಎಂಟ್ರಿ ಆಗುತ್ತಿದ್ದ ಹಾಗೇ ಒಂದು ಮೂಲೇಲಿ ಒಬ್ಬರು ಟೇಬಲ್ ಹಿಂದೆ ಕೂತಿದ್ದರು. ಮಿಕ್ಕವರು ಯಾರಿಲ್ಲ. ಎಲ್ಲರೂ ದೇಶಸೇವೆಗೆ ಕ್ಯಾಂಟೀನ್ ಹೋಗಿದ್ದರು ಅಂತ ಕಾಣುತ್ತೆ. ನೇರ ಅಲ್ಲಿ ನಡೆದೆ. ಟೇಬಲ್ ತಟ್ಟಿ ಅವರನ್ನು ಎಬ್ಬಿಸಿದೆ.
ಬರ್ತ್ ಸರ್ಟಿಫಿಕೇಟ್ ಬೇಕಿತ್ತು….. ಅಂದೆ.
ಪೂರ್ತಿ ಡೀಟೇಲ್ಸ್ ಕೇಳಿದರು. ಹೇಳಿದೆ. ಜತೆಯಲ್ಲಿ ತೆಗೆದುಕೊಂಡು ಹೋಗಿದ್ದ ಹೆಸರಿಲ್ಲದ ಬರ್ತ್ ಸರ್ಟಿಫಿಕೇಟ್ ಕೊಟ್ಟೆ. ಎಲ್ಲಾ ತೆಗೆದು ಟೇಬಲ್ ಒಳಗೆ ಹಾಕಿದರು.
ಯಾವಾಗ ಬೇಕು?
ಇವತ್ತೇ ಕೊಟ್ರೆ ಇವತ್ತೆ ತಗೊಂಡು ಹೋಗ್ತೀನಿ.. ಅಂದೆ
ಇವತ್ತು ಆಗಲ್ಲ ಒನ್ ವೀಕ್… ಅಂದ.
ಸರಿ ಒಂದು ವಾರ ಬಿಟ್ಟು ಬರ್ತೀನಿ… ಅಂದೆ.
ಫೀಸ್ ಕೊಡಿ… ಅವನು
ಎಷ್ಟು….? ನಾನು
ಎರಡು ಸಾವಿರ….. ಅವನು
ಮೂಲ ಪ್ರತಿಗೆ ಎರಡು ರೂಪಾಯಿ ಅದರ ಕಾಪಿಗೆ ಒಂದೊಂದು ರೂಪಾಯಿ ಕೊಟ್ಟಿದ್ದೆ ಮಕ್ಕಳು ಹುಟ್ಟಿದಾಗ… ಇದು ನಾನು.
ಈಗ ಜಾಸ್ತಿ ಆಗೈತೆ….. ಅವನು
ಎಷ್ಟು ಜಾಸ್ತಿ ಆಗದೆ?…. ನಾನು.
ಎರಡು ಸಾವಿರ ಕೊಟ್ಟರೆ ಮುಂದಿನ ವಾರ. ರೂಲ್ ಮಾತಾಡಿದರೆ ಆರ್ ತಿಂಗಳು…… ಅಂದ.

ಬೆಳಿಗ್ಗೆಯಿಂದ ಸುತ್ತಿದ್ದು, ಹಸಿವಿನ ಹೊಟ್ಟೆ, ನಾಲ್ಕು ಮಹಡಿ ಹತ್ತು ಎರಡು ಮಾಡಿ ಇಳಿ… ಬಿಪಿ ಏರಿತು ಕಾಣಿರಿ…

ವಾಚಾಮಗೋಚರ ಪುಂಖಾನು ಪುಂಖವಾಗಿ ಬಾಯಿಂದ ಬೈಗುಳ ಹೆಂಗೆ ಯಾವ ಡೆಸಿಮಲ್‌ನಲ್ಲಿ ಉಕ್ಕಿತು ಅಂದರೆ ಮೇಲಿನ ಮಹಡಿ ಕೆಳಗಿನ ಮಹಡಿ ನಾನು ನಿಂತಿದ್ದ ಮಹಡಿ ಜನ ಸುತ್ತಲೂ ಸೇರಿಬಿಟ್ಟರು. ಎರಡು ಸಾವಿರ ಅಂತ ಕೇಳಿದವನು ಸುಟ್ಟು ಕರಕಲಾಗಿರುವ ಬೊಂಬೆ ಹಾಗೆ ನಿಂತಿದ್ದ.

ಯಾರೋ ಆಫೀಸರ ತರಹ ಕಾಣುವವರು ಹತ್ತಿರ ಬಂದರು. ಅವರ ಜತೆ ಇನ್ನಿಬ್ಬರು, ಅವರೂ ಆಫೀಸರ್ ಇರಬೇಕು. ಕೂತುಕೊಳ್ಳಿ ಸರ್ ಅಂತ ಕುರ್ಚಿ ಹಾಕಿ ದರು. ಫ್ಯಾನ್ ಕೆಳಗೆ ಕೂಡಿಸಿ ಬಾಟಲಿಯಿಂದ ನೀರು ಕೊಟ್ಟರು.
ಹೇಳಿ ಏನಾಗಬೇಕು…… ಅಂದರು!

ಬರ್ತ್ ಸರ್ಟಿಫಿಕೇಟ್ ಬೇಕಿತ್ತು… ಅಂತ ಪೂರ್ತಿ ವಿವರ ಮತ್ತೊಂದು ಸಲ ಒದರಿದೆ….
ಎರಡು ದಿವಸ ಬಿಟ್ಟು ಬನ್ನಿ ಸಾರ್ ನಾನು ಮಾಡಿಸಿರ್ತೀನಿ…. ಅಂದರು!
ಫೀಸು..? ಅಂದೆ.

ಟೆನ್ ರೂಪೀಸು ಕೊಡಿ, ಇಬ್ಬರು ಅಲ್ಲವಾ ಒರಿಜಿನಲ್ ಎರಡು ಮೂರು ಮೂರು ಕಾಪಿ ಇರುತ್ತೆ ಸಾಕಾ…..

ತಲೆ ಆಡಿಸಿದೆ. ಅವನು ಎರಡು ಸಾವಿರ ಕೇಳಿದನಲ್ಲ ಅವನನ್ನ ವಾರಕ್ಕೆ ನಾಲ್ಕು ದಿವಸ ಅಣ್ಣಮ್ಮನ ದೇವಸ್ಥಾನದ ಮುಂದೆ ಕೂಡಿಸಿ, ಪಾಪ ಪರಿಹಾರ ಮತ್ತು ಸಂಪಾದನೆ ಎರಡೂ ಆಗುತ್ತೆ ಅಂತ ಹರಸಿ ಹೊರಗೆ ಬಂದೆ. ಈ ಕತೆ ಮನೇಲಿ ಹೇಳಿ ಎರಡು ಅಡಿ ಎತ್ತರ ಆಗುವ ಪ್ರಚಂಡ ಬಯಕೆ ಆ ಕ್ಷಣದಲ್ಲಿ ಹುಟ್ಟಿತು. ಸರ್ಕಲ್ ಹತ್ತಿರ ಬಂದು ಹೋಟೆಲಲ್ಲಿ ಕಾಫಿ ಕುಡಿಯುತ್ತ ಮನೇಲಿ ಈ ಸಂಗತಿ ಹೇಳಿದರೆ ಏನಾಗಬಹುದು ಎಂದು ಪ್ರೋಸ್‌ ಅಂಡ್ ಕಾನ್ಸ್ ಯೋಚಿಸಿದೆ. ಮನೆಯಿಂದ ಮತ್ತೆ ನನ್ನ ಆಚೆ ಬಿಡ್ತಾರಾ ಅನಿಸಿಬಿಡ್ತು ಇವರೇ…

ಮನೇಲಿ ಈ ಸಂಗತಿ ಇದುವರೆಗೂ ಹೇಳಿಲ್ಲ ಮತ್ತು ನೀವೇ ಫಸ್ಟು ಇದನ್ನ ಕೇಳ್ತಾ ಇರೋದು… ಇಷ್ಟು ವರ್ಷ ಹೊಟ್ಟೆ ಒಳಗೇ ಇತ್ತಲ್ಲ; ಅದರಿಂದ ಅದು ಮರಗಟ್ಟಿತ್ತು, ಈಗ ಆಚೆ ಬಂದು ಹೃದಯ ನಿರಾಳ ಆಯಿತು. ನಾಡ ಕಚೇರಿ ಈಗ ಹೇಗಿದೆಯೋ ಗೊತ್ತಿಲ್ಲ, ಸರ್ಟಿಫಿಕೇಟ್ ತಂದ ನಂತರ ಅತ್ತ ತಲೆ ಹಾಕಿಲ್ಲ. ಆಗ್ಗಾಗ್ಗೆ ಅಣ್ಣಮ್ಮನ ದೇವಸ್ಥಾನದ ಮುಂದೆ ಹೋದರೆ ಅಲ್ಲಿನ ಭಿಕ್ಷುಕರ ಮುಖ ಚೆನ್ನಾಗಿ ಅವಲೋಕಿಸುತ್ತೇನೆ. ಎರಡು ಸಾವಿರ ಕೇಳಿದ ಕ್ಲಾರ್ಕ್ ಏನಾದರೂ ಅಲ್ಲಿ ಭಿಕ್ಷೆ ಬೇಡಲು ಅವನ ಆಫೀಸರ್ ಡ್ಯೂಟಿ ಹಾಕಿದ್ದಾರಾ ಅಂತ. ಇನ್ನೂ ಆತ ನನ್ನ ಕಣ್ಣಿಗೆ ಅಲ್ಲಿ ಸಿಕ್ಕಿಲ್ಲ!

ಈಗ ಮತ್ತೆ ಟು ದೀ ಟ್ರ್ಯಾಕ್… ಮನೆ ಕಟ್ಟಿದ ನಂತರ ವಾಸಕ್ಕೆ ಬಂದ ಕತೆ.

ಆಗ ಈಗಿನ ಹಾಗೆ ಪ್ಯಾಕರ್ಸ್ ಅಂಡ್ ಮೂವರ್ಸ್ ಎನ್ನುವ ಹೆಸರಿನ ಯಾವ ಸಂಸ್ಥೆಗಳೂ ಇನ್ನೂ ಹುಟ್ಟಿರಲಿಲ್ಲ. ಮನೆಯಿಂದ ಮನೆಗೆ ಸಾಮಾನು ಸಾಗಿಸುವ ಒಂದು ಕ್ರಮಬದ್ಧ ವ್ಯವಸ್ಥೆ ಹೆಸರು ಯಾರೂ ಕೇಳಿರಲಿಲ್ಲ. ತಳ ಮಧ್ಯಮ ವರ್ಗದ ಜನ ಗಂಟುಮೂಟೆ ಕಾನ್ಸೆಪ್ಟ್‌ನವರು ಮತ್ತು ಜಟಕಾ ಕಾನ್ವೆಯನ್ಸ್ ಮೋಡ್. ಅಂದರೆ ಒಂದು ಬೆಡ್ ಶೀಟ್ ಹರವಿ ಅದರಲ್ಲಿ ಮನೆ ಸಾಮಾನು ಇಟ್ಟು ಗಂಟು ಕಟ್ಟೋದು. ಪಾತ್ರೆಗಳನ್ನು ಗೋಣಿ ಚೀಲದಲ್ಲಿ ತುಂಬಿ ಅದರ ಬಾಯಿ ಕಟ್ಟೋರು, ಅದನ್ನು ಜಟಕಾ ಒಳಗೆ ತುರುಕಿ ಸಾಗಾಣಿಕೆ. ಈಗಿನ ಹಾಗೆ ರಟ್ಟಿನ ಪೆಟ್ಟಿಗೆ ಬಂದಿರಲಿಲ್ಲ. ಇನ್ನೂ ತಮಾಷೆ ಅಂದರೆ ಊರಿಂದ ಊರಿಗೆ ಟ್ರಾನ್ಸ್ಫರ್ ಆಗುತ್ತಿದ್ದ ಸರ್ಕಾರೀ ನೌಕರರು ರೈಲು ಗಾಡಿಯಲ್ಲಿ ಈ ಸಾಮಾನು ತುಂಬಿ ಸಾಗಿಸುತ್ತಾ ಇದ್ದರು. ಸ್ವಲ್ಪ ಮೇಲಿನ ದರ್ಜೆ ಜನ ಈ ಜವಾಬ್ದಾರಿ ಯಾರಿಗಾದರೂ ವಹಿಸಿ ಕಾಸು ಹೋದರೆ ಹೋಗಲಿ ಅಂತ ಕೆಲಸ ಮಾಡಿಸಿಕೊಳ್ಳುತ್ತಾ ಇದ್ದರು! ಹಾಸಿಗೆ ಚಾಪೆ ಸುರುಳಿ ಸುತ್ತಿ ಅದರೊಳಗೆ ಬಟ್ಟೆ ಸೇರಿಸಿ ಅದನ್ನು ಹಗ್ಗದಿಂದ ಬಿಗಿದು ಸಾಗಿಸುವುದು ಒಂದು ರೀತಿ. ಮತ್ತೊಂದು ಅಂದರೆ hold all ಎನ್ನುವ ಒಂದು ಪರಿಕರ ಆಗ ಇತ್ತು. ಅದರೊಳಗೆ ಹಾಸಿಗೆ ದಿಂಬು ಬಟ್ಟೆ ಇತ್ಯಾದಿ ತುಂಬಿ ಹಾಸಿಗೆ ರೀತಿ ಸುರುಳಿಸುತ್ತಿ ಹಗ್ಗದಿಂದ ಬಿಗಿದು ಹೊತ್ತು ಸಾಗುವುದು ಸಹ ಒಂದು ರೀತಿ. ನಾನು ಚಿಕ್ಕವನಿರುವಾಗ ಮನೆಯ ಹಿರಿಯ ಅಜ್ಜ ಯಾ ತಾತ ಕೈಯಲ್ಲಿ ಒಂದು ತಿರುಪದ ಪಾತ್ರೆ ಹಿಡಿದುಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು! ಸುಮಾರು ಒಂದು ಒಂದೂವರೆ ಲೀಟರ್ ನೀರು ತುಂಬಿಕೊಳ್ಳಬಹುದಾದ ಆ ಪಾತ್ರೆಗೆ ಒಂದು ತಿರುಪಿನ ಮುಚ್ಚಳ ಇತ್ತು ಮತ್ತು ಒಂದು ಪುಟ್ಟ ಹಿತ್ತಾಳೆ ಅಥವಾ ಕಂಚಿನ ಲೋಟ ಅದರ ಜತೆಗೆ. ಕೆಲವು ಸಲ ಇದು ದೊಡ್ಡ ಸೈಜ್ ಸಹ ಇರುತ್ತಿತ್ತು ಅಂದರೆ ಮೂರು ಲೀಟರ್ ಹಿಡಿಯಬಹುದಾದಷ್ಟು. ಆದರೆ ಅದಕ್ಕಿಂತ ದೊಡ್ಡದು ನಾನು ಕಂಡಿಲ್ಲ. ಇದು ನೀರಿನ ಅಗತ್ಯ ಅಂದರೆ ಕುಡಿವ ನೀರಿನ ಅಗತ್ಯವನ್ನು ಮಡಿ ಅವರಿಗೆ ಪೂರೈಸುತ್ತಿತ್ತು. ಅಷ್ಟು ಮಡಿ ಮಾಡದವರು ರೈಲ್ವೆ ಸ್ಟೇಷನ್‌ನಲ್ಲಿ ಇರುತ್ತಿದ್ದ ಕುಡಿಯುವ ನೀರು ಬೋರ್ಡ್ ಹೊತ್ತಿರುತ್ತಿದ್ದ ನಲ್ಲಿಗಳ ಮೂಲಕ ನೀರು ಕುಡಿಯುತ್ತಿದ್ದರು. ಕೆಲವು ಕೊಳಕು ಜನ ಅಲ್ಲೇ ಹಲ್ಲು ಉಜ್ಜಿ ಉಗುಳಿ ಸ್ಥಳದ ನೈರ್ಮಲ್ಯ ಹಾಳುಮಾಡುತ್ತಿದ್ದರು. ಇವೆಲ್ಲಾ ಆ ಕಾಲದ ಕತೆ ಅಂದರೆ ನಮ್ಮ ದೇಶಕ್ಕೆ ಇನ್ನೂ ಬಾಟಲಿ ನೀರು ಕಾಲು ಇಟ್ಟಿರದಿದ್ದ ಕಾಲದ ಪೂರ್ವದ ಸ್ಟೋರಿ. ಯಾವಾಗ ಬಾಟಲಿ ನೀರು ಕಾಲಿಟ್ಟಿತು ನೋಡಿ, ಸಾರ್ವಜನಿಕ ನಲ್ಲಿಗಳ ಮೇಲಿನ ನಮ್ಮ ನಂಬಿಕೆ ಅಂದೇ ಎಗರಿ ಬಿದ್ದು ಸತ್ತಿತು, ಪುಣ್ಯಕೋಟಿಯನ್ನು ಕೊಲ್ಲಲು ಬಂದ ಹುಲಿಯ ಹಾಗೆ! ಬಾಟಲಿನ ಮೇಲೆ ಎಷ್ಟು ವಿಶ್ವಾಸ ಬೆಳೆಯಿತು ಅಂದರೆ ನೀರು ಎಂದು ಬಾಟಲಿಯಲ್ಲಿ ಏನೇ ಕೊಡಲಿ, ಜನ ಕಣ್ಣುಮುಚ್ಚಿ ಕುಡಿಯುವಷ್ಟು…

ಇದು ಆಗ ಮಡಿವಂತರು ನೀರಿಗಾಗಿ ಮಾಡಿಕೊಂಡಿದ್ದ ಒಂದು ಪಾತ್ರೆ. ನಾನು ಏನು ಹೇಳುತ್ತಾ ಇದೀನಿ ಅಂತ ನಿಮಗೆ ಅರ್ಥ ಆಗಿರಬಹುದು. ಹೌದು ನೀವು ಖರೇ, ನಾನು ರೈಲು ಚೊಂಬಿನ ಬಗ್ಗೆ ಹೇಳುತ್ತಾ ಇದ್ದದ್ದು. ನಾನು ಬಾಡಿಗೆ ಮನೆಗೆ ಸಾಮಾನು ಸಾಗಿಸಿದ್ದು ಒಂದು ಆಟೋದಲ್ಲಿ ಅಂತ ಹೇಳಿದ್ದೆ ತಾನೇ. ಈಗ ಆಟೋ ಸಾಕಾಗುತ್ತಾ ಇರಲಿಲ್ಲ. ಟೆಂಪೋಗೆ ಹೇಳಿದರೆ ಎರಡು ಟ್ರಿಪ್ ಆಗುತ್ತೆ, ಕಾಸು ಜಾಸ್ತಿ! ಜಟಕಾ ಸಹ ಇತ್ತು, ಆದರೆ ಪ್ರಾಣಿಯೇ ದೈವ. ಪ್ರಾಣಿ ಹಿಂಸೆ ಕೂಡದು ಎನ್ನುವುದು ನನ್ನ ಫಿಲಾಸಫಿ ಆಫ್ ಲೈಫ್. ಇಂತಹ ಸಮಯದಲ್ಲಿ ಜಿಪುಣರ ಮೈಂಡ್ ಸಖತ್ ಶಾರ್ಪ್ ಆಗಿಬಿಡುತ್ತೆ ಅಂತ ಕೇಳಿದ್ದೆ. ಸಾಗಿಸಬೇಕಾದುದು ಎಲ್ಲವನ್ನೂ ಮೂಟೆ ಗೀಟೆ ಕಟ್ಟಿ ಸಾಗಿಸುವ ಯೋಚನೆ ಬಂದಿತ್ತು. ನಮ್ಮ ಮನೆಗೆ ಕಲ್ಲು ಮರಳು ಸಪ್ಲೈ ಮಾಡಿದ ಲಾರಿಯ ಡ್ರೈವರ್ ಈ ನಡುವೆ ಸಿಕ್ಕಿದ. ಇಬ್ಬರೂ ಬೈಟು ಕಾಫಿ ಹಾಕಿದೆವು, ಎರಡು ನಿಕೋಟಿನ್ ಹೊಗೆ ಬಿಟ್ಟೆವು. ಸಾಮಾನು ಯಾವತ್ತೂ ಸಾಗಿಸ್ತೀರಾ ಅಂತ ಕೇಳಿದ. ನಾನು ಉತ್ತರ ಕೊಡುವ ಮೊದಲೇ ನಾನು ಲಾರಿ ತರ್ತೀನಿ ನಮ್ಮ ಹುಡುಗ್ರು ಇರ್ತಾರೆ ಸಾಗಿಸಿ ಬಿಡೋಣ… ಅಂದ!

ನನ್ನ ಭಾರ ಏಕ್ದಂ ಇಳಿದ ಹಾಗಾಯಿತು. ಇದಾದ ಎರಡು ಮೂರು ದಿನಕ್ಕೆ ಒಂದು ದಿನ ಬೆಳಿಗ್ಗೆ ಲಾರಿ ಬಂತು. ಅದರಲ್ಲಿಂದ ಕೂಲಿಯವರು ದಡ ದಡ ಇಳಿದರು. ಮಹಡಿ ಹತ್ತಿ ಮನೆ ಒಳಗೆ ಬಂದರು. ಇರೋ ಸಾಮನೆಲ್ಲ ಸರಸರ ಅಂತ ಹೊತ್ತು ಮಹಡಿ ಇಳಿದು ಲಾರಿಗೆ ತುಂಬಿದರು. ಹತ್ತೇ ನಿಮಿಷದಲ್ಲಿ ಅವರ ಲೋಡಿಂಗ್ ಕೆಲಸ ಮುಗಿಸಿಬಿಟ್ಟರು! ಕಳೆದ ವರ್ಷ ನನ್ನ ನೆಂಟರೊಬ್ಬರು ಮನೆ ಬದಲಾಯಿಸಿದರು. ಪ್ಯಾಕ್ ಮಾಡಿ ಮೂವ್ ಮಾಡುವ ಒಂದು ಏಜೆನ್ಸಿಗೆ ಕೆಲಸ ಒಪ್ಪಿಸಿದ್ದರು. ಅವರು ಎಂಟುಹತ್ತು ಗಂಟೆ ತಗೊಂಡ, ಸಾಮಾನು ಲಾರಿಗೆ ತುಂಬಲು! ಮೂರು ಕಿಮೀ ದೂರದ ಮತ್ತೊಂದೂಮನೆಗೆ ಅವರು ಶಿಫ್ಟ್ ಆಗಿದ್ದು. ಇಪ್ಪತ್ತೆಂಟು ಸಾವಿರ ಆಯ್ತು ಸಾರ್ ಅಂತ ನಿಟ್ಟುಸಿರು ಬಿಟ್ಟರು! ನಾನು ಆಗ ಎಪ್ಪತ್ತು ರೂಪಾಯಿ ಕೊಟ್ಟೆ ಅಷ್ಟೇ ಮತ್ತು ರಟ್ಟಿನ ಬಾಕ್ಸ್ ಸೆಲ್ಲೋಫೆನ್ ಅದೇನೂ ಇರಲಿಲ್ಲ. ಜೀವನದಲ್ಲಿ ಎರಡೇ ಸಾರಿ ನಾನು ಮನೆ ಬದಲಾಯಿಸಿದ್ದು. ಕೊನೆ ಸಲ ಬದಲಾವಣೆ ಆದನಂತರ ನಲವತ್ತು ಪ್ಲಸ್ ವರ್ಷ ಒಂದೇ ಮನೇಲಿ ಇದ್ದೀನಿ ಅಂದರೆ.. ಹಾ ಅದೇನು ಹೇಳಲಿ? ಅದಕ್ಕೆ ಮುಂದೆ ಬರ್ತೀನಿ.

ಮನೆ ಖಾಲಿಮಾಡಿದ ಸಂಗತಿ ಇನ್ನೂ ತಲೆಯಲ್ಲಿ ಉಂಟು. ಸಾಮಾನು ಲಾರಿಗೆ ಹೇರಿದ ನಂತರ ಮನೇಲಿ ಬಿದ್ದಿರುವ ಕಸ ಗುಡಿಸಿ ಮನೆ ಕ್ಲೀನ್ ಮಾಡಿ ಹೋಗೋಣ ಅಂತ ನನ್ನ ಐಡಿಯಾ ಕೊಟ್ಟೆ. ಮನೆ ಖಾಲಿ ಮಾಡಿದಾಗ ಕಸ ಬಿಟ್ಟು ಹೋಗಬೇಕಂತೆ…. ಇದು ನನ್ನಾಕೆ.

ಯಾರು ಹೇಳಿದ್ದು ಹಾಗೆ?… ಇದು ನಾನು
ಶಾಸ್ತ್ರದಲ್ಲಿದೆ….. ಇದು ನನ್ನಾಕೆ
ಯಾವ ಶಾಸ್ತ್ರದಲ್ಲಿದೆ…? ಇದು ನಾನು.
ನೀನು ಕೇಳ್ತೀಯಾ ಅಂತ ನಾನು ಶಾಸ್ತ್ರದ ಬುಕ್ಕು ಹಿಡಕೊಂಡು ಥೈ ಅಂತ ಗೆಜ್ಜೆ ಕಟ್ಟಿಕೊಂಡು ನಿನ್ನ ಹಿಂದೆ ನಿಂತಿರ್ಲಾ…?

ಸರಿ ಇಂತಹ ಲಾಜಿಕ್‌ಗೆ ಅದೇನು ಉತ್ತರ ಯಾವ ಬ್ರಹ್ಮನ ಹತ್ತಿರ ಇರುತ್ತೆ?
ಅವರು ನಮಗೆ ಮನೆ ಕೊಟ್ಟಾಗ ಹೀಗೆ ಕಸ ತುಂಬಿ ಕೊಟ್ಟಿದ್ದರಾ….. ಅಂತ ಕ್ವೆಶ್ಚನ್ ಎಸೆದೆ.
ಅಷ್ಟೊಂದು ಅಡ್ವಾನ್ಸ್ ದುಡ್ಡು ಇಂಥ ಮನೆಗೆ ತಗೊಂಡಿದ್ದಳು ಓನರ್ ಗೊತ್ತು ತಾನೇ..?
ಮನೆ ಖಾಲಿ ಮಾಡಿದಾಗ ಯಾರೂ ಕ್ಲೀನ್ ಮಾಡಿ ಹೋಗಲ್ಲ, ಇದು ಹೀಗೇ ಬಿಟ್ಟು ಹೋಗಬೇಕು. ಕಸ ಅಂದರೆ ಶನಿ, ಹೊಸಾ ಮನೆಗೆ ಹೋಗ್ತಾ ಯಾರಾದರೂ ಶನಿನ ಜತೇಲಿ ಕರ್ಕೊಂಡು ಹೋಗ್ತಾರಾ?… ಇದು ನಮಗೆ ಸಹಾಯಕ್ಕೆ ಅಂತ ಬಂದಿದ್ದ ಹೆಂಡತಿ ಬಂಧುಗಳು ಹೇಳಿದ್ದು. ಹೆಂಡತಿ ನನ್ನ ಜತೆ ಬರ್ತಿಲ್ಲವಾ ಅಂತ ನಾನು ಹೇಳಬಹುದಿತ್ತು. ಹಾಗೇ ಹೆಂಡತಿಯೂ ಗಂಡ ಅನ್ನೋದು ನನ್ನ ಜತೆ ಬರ್ತಿಲ್ಲವಾ ಅಂತ ಹೇಳಬಹುದಿತ್ತು. ಹೊಸಾ ಮನೆಗೆ ಶನಿನ ಜತೇಲಿ ಕರ್ಕೊಂಡು ಹೋಗ್ತಾರೇನು ಪ್ರಶ್ನೆಗೆ!

ಅವರ ಅನುಭವ ಅಂದರೆ ಪ್ರತಿ ಆರು ತಿಂಗಳಿಗೆ ಮನೆ ಬದಲಾಯಿಸೋದು..! ಆಗ ಈಗಿರುವ ಹಾಗೆ ಹನ್ನೊಂದು ತಿಂಗಳ ರೆಂಟಲ್ ಕಾಂಟ್ರಾಕ್ಟ್ ಇರಲಿಲ್ಲ ಮತ್ತು ಸುಮಾರು ಬಾಡಿಗೆ ಮನೆಗಳು ಬರೇ ಬಾಯಿಮಾತಿನ ಬಲದವು, ನಾಲಿಗೆ ಶುದ್ಧ ಇದ್ದ ಕಾಲ ಅದು.

ಸರಿ ಎಕ್ಸ್ಪರ್ಟ್ ಹೇಳಿದ ನಂತರ ಬೇರೆ ಮಾತುಂಟೇ? ಬಾಯಿಗೆ ಬೀಗ ಹಾಕಿಕೊಂಡು ಲಾರಿ ಮೇಲೆ ಸೈಕಲ್ ಹಾಕಿದೆ. ಮಾರನೇ ದಿವಸ ಬೆಳಿಗ್ಗೆ ಬಂದು ಕಸ ಗುಡಿಸಿ ಮನೆ ಓನರಿಗೆ ಬೀಗದ ಕೈ ಹ್ಯಾಂಡ್ ಓವರ್ ಮಾಡುವ ಐಡಿಯಾ ತಲೆಯಲ್ಲಿ ಮೊಳಕೆ ಒಡೆಯುತ್ತಾ ಇತ್ತು.

ಈ ಮೊಳಕೆ ಸಸಿ ಆಗುವ ಮೊದಲೇ ಮಣ್ಣಾಯಿತು. ಅದು ಹೇಗೆ ಅಂದರೆ ಹೊಸ ಮನೆಗೆ ಹೊಕ್ಕು ಇನ್ನೂ ಅಡಿಗೆ ಪಾತ್ರೆ ಜೋಡಿಸುತ್ತಾ ಇದ್ದೆವು. ಮನೆ ಮುಂದೆ ಇದ್ದಕ್ಕಿದ್ದ ಹಾಗೆ ಕತ್ತಲು ಮುಚ್ಚಿದ ಹಾಗಾಯ್ತು. ಅದೇನು ಅಂತ ಆಚೆ ಬಂದೆ. ನನ್ನ ಬಿಟ್ಟ ಮನೆಯ ಓನರಿಣಿ ರಸ್ತೆಯಲ್ಲಿ ನಿಂತು ನಮ್ಮನೆಯತ್ತ ನೋಡುತ್ತಿದ್ದಳು!

ಹೋ ಬನ್ನಿ ಒಳಗೆ. ನೀವು ಗೃಹಪ್ರವೇಶಕ್ಕೆ ಬರಲೇ ಇಲ್ಲ. ಲೇ ಇವಳೇ ಯಾರು ಬಂದಿದ್ದಾರೆ ನೋಡೂ…. ಅಂದೆ.

ಓನರಿಣಿ ಭಾರವಾದ ತೂಕದ ಹೆಜ್ಜೆ ಇಡುತ್ತಾ ನಾಟಕದಲ್ಲಿ ಹತ್ತು ದುರ್ಯೋಧನ ಎಂಟ್ರಿ ಕೊಟ್ಟ ಹಾಗೆ ಒಳಗೆ ಬಂದಳು. ಆಗ ತಾನೇ ಹಾಕಿದ್ದ ಕಬ್ಬಿಣದ ಹಳೇ ಫೋಲ್ಡಿಂಗ್ ಚೇರಿನ ಮೇಲೆ ಕೂತಳು. ಹಿಂದೆ ನನ್ನಾಕೆಗೂ ಓನರಿಣಿಗೂ ಆಗಿದ್ದ ಜಗಳದ ವಿವರ ನಿಮಗೆ ಹೇಳಿದ್ದೆ ಅಂತ ನೆನಪು. ಮರೆತಿದ್ದರೆ ಬರೇ ಸ್ಥೂಲವಾಗಿ ಅದನ್ನು ವಿವರಿಸಿ ಬಿಡುತ್ತೇನೆ. ನಮ್ಮ ಹೊಸಮನೆಯ ಮರಮುಟ್ಟು ನಾನು ಬಾಡಿಗೆ ಮನೆ ಮುಂದೆ ಹಾಕಿಕೊಂಡು ಅಲ್ಲಿ ತೋಪಡಿ ಹೊಡೆಸಿದ ಕೆಲಸದ ಬಗ್ಗೆ ಹೇಳಿದ್ದೆ. ಇದೇ ಸಮಯದಲ್ಲಿ ಅಲ್ಲಿಗೆ ಓನರಿಣಿ ಪ್ರವೇಶ ಆಗಿತ್ತು. ನನ್ನ ಕೇಳದೇ ಈ ಕೆಲಸ ನಮ್ಮ ಮನೆ ಆವರಣದಲ್ಲಿ ಇವರು ಮಾಡ್ತಾ ಇದ್ದಾರೆ ಎನ್ನುವ ಓನರಿಣಿಗೆ ಸಹಜ ಅನಿಸುವ ಮಾತು ಆಕೆ ಆಡಿತ್ತು. ಇದು ಮಾತಿಗೆ ಮಾತು ಬೆಳೆದು ನಮ್ಮನೆ ಕಿತ್ತೂರು ಚೆನ್ನಮ್ಮ, ಓನರಿಣಿಗೆ ಸಖತ್ ರೋಪ್ ಹಾಕಿ ನಾವು ಬಾಡಿಗೆ ಕೊಡುವವರೆಗೂ ಮನೆ ಹೇಗೆ ಬೇಕಾದರೂ ಉಪಯೋಗಿಸುವ ಹಕ್ಕು ನಮಗಿದೆ ಎಂದು ವಾದ ಹೂಡಿ ಓನರಿಣಿಯನ್ನು ಓಡಿಸಿಬಿಟ್ಟಿದ್ದಳು. ಬಹುಶಃ ಇದೇ ಕೋಪಕ್ಕೆ ಆಕೆ ಮನೆ ಗೃಹಪ್ರವೇಶಕ್ಕೆ ಬಂದಿರಲಿಲ್ಲ. ಈಗ ಅವಳು ಬಂದಿದ್ದಾಳೆ, ಕುರ್ಚಿ ಮೇಲೆ ಕೂತಿದ್ದಾಳೆ. ಮುಂದೇನು ಜಗಳ ಹತ್ತುತ್ತೋ ಅಂತ ನನಗೆ ಒಂದು ರೀತಿ ಟೆನ್ಶನ್ ಅನ್ನುತ್ತಾರಲ್ಲ ಅದು ಹೊಟ್ಟೆಯೊಳಗೆ, ಬ್ರೈನ್‌ನಲ್ಲಿ ಶುರು ಆಗಿತ್ತು….

ಓನರಿಣಿ ಒಳಗೆ ಬಂದ ಐದಾರು ನಿಮಿಷದ ನಂತರ ನನ್ನಾಕೆ ಹೊರಬಂದಳು, ಅಡಿಗೆಮನೆಯಿಂದ….. ಮುಂದೇನಾಯಿತು ಎನ್ನುವುದನ್ನು ನಿಮಗೆ ವಿಷದವಾಗಿ ಹೇಳಲೇಬೇಕು. ಅದರ ನೆನಪು ಈಗಲೂ ಹೇಗೆ ಬ್ರೈನ್‌ನಲ್ಲಿ ಅಡಗಿದೆ ಅಂದರೆ ಆಗ ನಡೆದ ಒಂದೊಂದು ಮಾತು ಸಂಭಾಷಣೆ ಅಕ್ಷರ ಸಮೇತ ಮೆದುಳಲ್ಲಿ ಇಂಬೆಡ್ ಆಗಿದೆ. ಇಂಬೆಡ್ ಟೆಕ್ನಾಲಜಿ ಎನ್ನುವುದು ಒಂದು ಮುಂದುವರೆದ ತಾಂತ್ರಿಕತೆ. ಅದರ ಬಗ್ಗೆ ಸ್ಥೂಲವಾಗಿ ಒಂದು ಪುಟ್ಟ ಟಿಪ್ಪಣಿ…

ಇಂಬೆಡ್ ಪದದ ಅರ್ಥ ನಿಮಗೆ ಹೇಳಲೇಬೇಕು. ಈಗ ಅದಕ್ಕೆ….

ಇಂಬೆಡ್ ಎಂದರೆ ಒಂದು ವಸ್ತುವನ್ನು ಇನ್ನೊಂದು ವಸ್ತುವಿನೊಳಗೆ ಭದ್ರವಾಗಿ ಇರಿಸುವುದು ಅಥವಾ ಸ್ಥಾಪಿಸುವುದು. ಇದನ್ನು ಸಾಮಾನ್ಯವಾಗಿ ಈ ಕೆಳಗಿನ ಸಂದರ್ಭಗಳಲ್ಲಿ ಬಳಸಲಾಗುತ್ತದೆ.
* ಕಂಪ್ಯೂಟರ್ ಮತ್ತು ಇಂಟರ್ನೆಟ್: ಒಂದು ವೆಬ್‌ಸೈಟ್‌ನಲ್ಲಿ ಇನ್ನೊಂದು ವೆಬ್‌ಸೈಟ್, ವಿಡಿಯೋ, ಅಥವಾ ನಕ್ಷೆಯಂತಹ ಕಂಟೆಂಟ್ ಅನ್ನು ನೇರವಾಗಿ ಪ್ರದರ್ಶಿಸಲು ಬಳಸಲಾಗುತ್ತದೆ. ಉದಾಹರಣೆಗೆ, YouTube ವಿಡಿಯೋವನ್ನು ನಿಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಇಂಬೆಡ್ ಮಾಡಬಹುದು.
* ಸಾಮಾನ್ಯ ಬಳಕೆ: ಒಂದು ವಸ್ತುವನ್ನು ಇನ್ನೊಂದರೊಳಗೆ ಗಟ್ಟಿಯಾಗಿ ಸೇರಿಸುವುದು. ಉದಾಹರಣೆಗೆ, ಗೋಡೆಯೊಳಗೆ ಮೆಟಲ್ ರಾಡ್ ಅನ್ನು ಇಂಬೆಡ್ ಮಾಡುವುದು.
* ಪತ್ರಕರ್ತರು: ವರದಿಗಾರರು ಅಥವಾ ಪತ್ರಕರ್ತರು ಸೇನಾ ಪಡೆಗಳ ಜೊತೆಗಿದ್ದು ವರದಿ ಮಾಡುವಾಗ, ಅವರನ್ನು “ಇಂಬೆಡೆಡ್ ಜರ್ನಲಿಸ್ಟ್” ಎಂದು ಕರೆಯಲಾಗುತ್ತದೆ. ಇದರರ್ಥ ಅವರು ತಂಡದ ಭಾಗವಾಗಿ ಜೊತೆಯಲ್ಲೇ ಇರುವುದು.
ಇಂಬೆಡ್ ಆಗಿದ್ದ ಯೋಚನೆ ಬಗ್ಗೆ ಹೇಳುತ್ತಿದ್ದೆ. ಅದನ್ನು ನೆಕ್ಸ್ಟ್ ನೀವು ಸಿಕ್ಕಿದಾಗ ಹೇಳುವೆ. ಅದರ ನೆನಪಿಗೆ ಈಗಲೂ ಗೂಸ್ ಬಂಪ್ಸ್ ಅಂತಾರಲ್ಲಾ ಅದರ ಅನುಭವ ಆಗ್ತಾ ಇದೆ…. ಅಲ್ಲಿಯವರೆಗೂ ಸರ, ಮೇಡಂ ರ ಬೈ ಕಾಣ್ರಿ….

ಇನ್ನೂ ಉಂಟು

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ