ಕೆಲವರಿಗೆ ಹೆಚ್ಚು ಹೆಚ್ಚು ಸರ್ಟಿಫಿಕೇಟ್‌ಗಳನ್ನು ನೀಡುವ ಆಸೆಯಿರುತ್ತದೆ. ಇಂಥವರು ತಮ್ಮ ಪ್ರಸಿದ್ಧಿಯನ್ನು ತಾವೇ ಹಬ್ಬಿಸುತ್ತಾರೆ. ಇಂಥವರು ನನಗೆ ಸ್ವಲ್ಪಕಾಲ ಗಂಟುಬಿದ್ದಿದ್ದರು. ನನ್ನಿಂದ ಸಾಕಷ್ಟು ಉಪಕೃತರೂ ಆಗಿದ್ದರು. ಉತ್ಸವ ಮೂರ್ತಿಯ ಸ್ವಭಾವದ ವ್ಯಕ್ತಿತ್ವ. ನಾನು ಎಲ್ಲಿಗೇ ಹೊರಡಲಿ, ಯಾವ ಕಾರ್ಯಕ್ಕೇ ಹೊರಡಲಿ, ಆಯ್ತು ಅಲ್ಲಿ ನನಗೆ ಇಂಥವರು ಪರಿಚಯ, ನನ್ನ ಬಗ್ಗೆ ಗೌರವವಿದೆ, ನನ್ನಿಂದ ಒಂದು ಸರ್ಟಿಫಿಕೇಟ್ ತಗೊಂಡು ಹೋಗು ಎನ್ನುತ್ತಿದ್ದರು. ಹೌದು ಅವರ ಇಂಗ್ಲಿಷ್ ತುಂಬಾ ಚೆನ್ನಾಗಿತ್ತು. ಸರ್ಟಿಫಿಕೇಟ್ ಬರೆದುಕೊಡುವ ಕಾಗದ ಕೂಡ ಚಿನ್ನದ ಬಣ್ಣದಿಂದ ಹೊಳೆಯುತ್ತಿತ್ತು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹತ್ತನೆಯ ಪ್ರಬಂಧ ನಿಮ್ಮ ಓದಿಗೆ
ನಿಮ್ಮ ವಲಯದಲ್ಲೂ ಇಂತಹ ಮಿತ್ರಶ್ರೀಗಳು ಇದ್ದೇ ಇರುತ್ತಾರೆ. ಹಾಗಾಗಿಯೇ ನಾನು ಈ ಬರಹ ಮಾಡುತ್ತಿರುವುದು. ನೀವೂ ಓದಿ, ಅವರಿಗೂ ತಲುಪಿಸಿ. ಇವರನ್ನೆಲ್ಲ ಏನೆಂದು ಕರೆಯಬಹುದು? ಹೇಗೆ ವರ್ಣಿಸಬಹುದು? ಯಾವ ಗುಣವಾಚಕ, ಕ್ರಿಯಾಪದವಾಚಕಗಳನ್ನು ಬಳಸಬಹುದು? ಹೀಗೆಲ್ಲ ಯೋಚಿಸುತ್ತಲೇ ಯೋಚಿಸುತ್ತಲೇ ಈ ಬರಹ ಮಾಡುವುದು ಇಷ್ಟು ತಡವಾಯಿತು, ಇನ್ನು ತಡಮಾಡಲಾರೆ.
ಸುತ್ತಿ ಬಳಸಿ ಹೇಳದೆ ನೇರವಾಗಿ ಹೇಳುವುದಾದರೆ, ಇವರ ಮುಖ್ಯ ಕೆಲಸವೆಂದರೆ ಅಥವಾ ಇವರ ಒಂದೇ ಒಂದು ಕೆಲಸವೆಂದರೆ, ಇನ್ನೊಬ್ಬರ ಬಗ್ಗೆ, ಇನ್ನೊಬ್ಬರ ಬಗ್ಗೆ ಮಾತ್ರವಲ್ಲ, ಎಲ್ಲರ ಬಗ್ಗೆಯೂ ಯಾವಾಗಲೂ ಸರ್ಟಿಫಿಕೇಟ್ ನೀಡುತ್ತಾ ಹೋಗುವುದು. ಹಾಗೆಂದಾಗ ಇವರನ್ನು ನೀವು ನೋಟರಿಯೆಂದೋ ಇಲ್ಲ ಸರ್ಕಾರ ಅಥವಾ ಪ್ರಭುತ್ವದಿಂದ ನಿಯುಕ್ತರಾದ Certificate issuing authorityಯೆಂದೋ ಭಾವಿಸಬಾರದು. ಇವರನ್ನು ಯಾರೂ ನೇಮಿಸಿಲ್ಲ. ಯಾರೂ ಆಯ್ಕೆ ಮಾಡಿಲ್ಲ. ಇವರು ಸ್ವಯಂಭೂಗಳು. ಹಿನ್ನೆಲೆಯೂ ಇಲ್ಲ, ಮುನ್ನೆಲೆಯೂ ಇಲ್ಲ.
ಯಾರ ಬಗ್ಗೆಯಾದರೂ ಸರ್ಟಿಫಿಕೇಟ್ ನೀಡುತ್ತಾರೆ. ಯಾವಾಗ ಬೇಕಾದರೂ ನೀಡುತ್ತಾರೆ. ನೀವು ಇದಕ್ಕೆಲ್ಲ ಅರ್ಜಿ ಹಾಕಬೇಕೆಂದೇನೂ ಇಲ್ಲ. ಹಾಗೇ ಸಿಗುತ್ತದೆ. ಇದನ್ನು ನೀವು ಬಯಸದೆ ಕೂಡ ಇರಬಹುದು. ಆದರೆ ಒಮ್ಮೆ ಇದನ್ನು ನಿಮಗೆಂದು ನೀಡಿದರೆ ನೀವು ತಿರಸ್ಕರಿಸುವ ಹಾಗಿಲ್ಲ. ಇಂತಹ ವಿಷಯದ ಬಗ್ಗೆ ಅಂಥ Certificate ನಿಯಮಿತವಲ್ಲ. ಯಾವ ವಿಷಯದ ಬಗ್ಗೆಯಾದರೂ ಕೊಡಬಹುದು, ಕೊಡುತ್ತಾರೆ. ಸರ್ಟಿಫಿಕೇಟ್ ನೀಡುವುದರ ಜೊತೆಗೆ ಸಾರ್ವಜನಿಕವಾಗಿ ಘೋಷಿಸಿಯೂಬಿಡುತ್ತಾರೆ. ನೀವು ಕೋಮುವಾದಿಯೋ, ಪ್ರಗತಿಪರರೋ, ಸಂವೇದನಾಶೀಲರೋ, ಸಹೃದಯರೋ ಇಲ್ಲವೋ, ನಿಮ್ಮದು ಅನ್ಯೋನ್ಯ ದಾಂಪತ್ಯವೋ ಅಲ್ಲವೋ, ನೀವು ಯಾವ ಕ್ಷೇತ್ರದಲ್ಲಿ ಪರಿಣತರು, ಎಲ್ಲವನ್ನೂ ಈ ಸರ್ಟಿಫಿಕೇಟ್‌ಗಳು ನಿರ್ಧರಿಸುತ್ತವೆ.
ಸರ್ಟಿಫಿಕೇಟ್ ಭಾಷೆ ದಾಖಲೆ ಸ್ವರೂಪದ್ದಲ್ಲ. ಪ್ರಮಾಣಪತ್ರ ಸ್ವರೂಪದ್ದೂ ಅಲ್ಲ. ಭಾಷೆ ಆಜ್ಞೆಯ ರೀತಿಯದು. ನಿರ್ದೇಶನದ ರೀತಿಯದು. ಸರ್ಟಿಫಿಕೇಟ್ ಪಡೆದ ನಂತರ ನೀವು ಮುಂದೆ ಯಾವ ರೀತಿ ಜೀವನ ನಡೆಸಬೇಕು, ನಿಮ್ಮ ಸ್ನೇಹಿತರು ಯಾರು, ಶತ್ರುಗಳು ಯಾರ ಪೈಕಿ ಎಂಬ ಸೂಚನೆಯೂ ಇಲ್ಲಿ ಅಡಕವಾಗಿರುತ್ತದೆ.
ಸಾಮಾಜಿಕ ಮಾಧ್ಯಮಗಳು ಅಧಿಕಾರ ನಡೆಸುತ್ತಿರುವ ಈ ಕಾಲದಲ್ಲಿ ಸರ್ಟಿಫಿಕೇಟನ್ನು ಯಾವುದಾದರೂ ಒಂದು ಗೋಡೆಯ ಮೇಲೋ ಕಿಟಕಿಯ ಮೇಲೋ ಹಾಕಿಬಿಡುವುದರಿಂದ ನಿಮಗೆ ಪ್ರಚಾರವೂ ಸಿಗುತ್ತದೆ. ಹೀಗೆಂದು, ಹೀಗಲ್ಲವೆಂದು ನಾವು ಗೇಲಿ ಮಾಡಿದರೂ ನಮಗೇ ಗೊತ್ತಿಲ್ಲದಂತೆ ನಾವು ಇಂಥವರು ನೀಡಿದ ಸರ್ಟಿಫಿಕೇಟ್‌ಗಳನ್ನು ಸ್ವಂತಕ್ಕೆ ಬಯಸುವುದು ಮಾತ್ರವಲ್ಲ, ಉಲ್ಲೇಖಿಸುತ್ತಿರುತ್ತೇವೆ. ಹಾಗೂ ದಾಖಲೆ ಪತ್ರವಾಗಿ ಪರಿವರ್ತಿಸುತ್ತಲೂ ಇರುತ್ತೇವೆ. ನೋಡಿ ಇಂಥವರ ಬಗ್ಗೆ ನೀವು ಹೀಗೆ ಹೇಳುತ್ತಿದ್ದೀರಿ, ಆ ಅಭಿಪ್ರಾಯ ಸರಿಯಲ್ಲ, ಇಂಥವರೆಲ್ಲ ಇದರ ಬಗ್ಗೆ, ಈ ರೀತಿಯ ಸರ್ಟಿಫಿಕೇಟ್‌ನ್ನು ಈಗಾಗಲೇ ನೀಡಿದ್ದಾರೆ ಎಂದು ಹೇಳಿ ಕಂಡಕಂಡವರ ಹತ್ತಿರವೆಲ್ಲ ಅಂಗಲಾಚಿಕೊಳ್ಳುತ್ತೇವೆ. ನಾನಂತೂ ಒಂದಿಬ್ಬರು ಹಿರಿಯ ಸರ್ಟಿಫಿಕೇಟ್ ದಾತರು ನೀಡಿರುವ ಸರ್ಟಿಫಿಕೇಟ್‌ಗಳ ಆಧಾರದ ಮೇಲೇ ಎಲ್ಲರ ಬಗ್ಗೆ ಅಭಿಪ್ರಾಯಗಳನ್ನು ರೂಢಿಸಿಕೊಳ್ಳುತ್ತೇನೆ. ಹಾಗೆಂದು ನನ್ನ ಅಭಿಪ್ರಾಯ ಶಾಶ್ವತವಲ್ಲ. ಇನ್ನೊಂದು ಹೊಸ ಸರ್ಟಿಫಿಕೇಟ್ ಬಂದಾಗ ನನ್ನ ಅಭಿಪ್ರಾಯವೂ ಬದಲಾಗುತ್ತದೆ. ಸರ್ಟಿಫಿಕೇಟ್ ಹೊಸದಾಗಿ ನೀಡಿರುವವರ ಸ್ಥಾನಮಾನ, ಪ್ರತೀತಿಗಳ ಆಧಾರದ ಮೇಲೆ ಇದು ನಿರ್ಧಾರವಾಗುತ್ತದೆ.
ಹೀಗೆ ಸರ್ಟಿಫಿಕೇಟ್‌ಗಳನ್ನು ಸಲೀಸಾಗಿ ನೀಡುತ್ತಾರಲ್ಲ ಇದಕ್ಕೆ ಅವರ ಅರ್ಹತೆಯೇನು, ಯಾವ ಪರೀಕ್ಷೆ ಪಾಸು ಮಾಡಿಕೊಂಡಿದ್ದಾರೆ, ಯಾವ ರೀತಿಯ ತರಬೇತಿಯಾಗಿದೆ ಎಂದು ನೀವು ಪ್ರಶ್ನೆ ಕೇಳುವುದು ಸಹಜ. ಆದರೆ ನಿಮಗೆ ತೃಪ್ತಿಯಾಗುವಂತಹ ತರ್ಕಬದ್ಧವಾದ ಉತ್ತರಗಳನ್ನು ನಿರೀಕ್ಷಿಸಬೇಡಿ. ಇದನ್ನೆಲ್ಲ ನೀಡಲು ಯಾವ ಅರ್ಹತೆ, ತರಬೇತಿಯೂ ಬೇಕಿಲ್ಲ. ಅದೊಂದು ರೀತಿಯ ಚಟ. ಒಂದಷ್ಟು ಕಾಲ ಹೀಗೆ ಸರ್ಟಿಫಿಕೇಟ್ ನೀಡುತ್ತಾ ಹೋದರೆ, ಪ್ರಸಿದ್ಧಿ ತಾನೇ ತಾನಾಗಿ ಹಬ್ಬುತ್ತದೆ. ಸ್ವಲ್ಪ ಕಾಲದ ನಂತರ ನಾವೇ ಇವರ ಅನುಯಾಯಿಗಳಾಗುತ್ತೇವೆ. ಮುಂದಿನ ಹಂತದಲ್ಲಿ ನಾವೇ ಇವರಿಂದ ನಮ್ಮ ಬಗ್ಗೆ, ನಮಗೆ ಗೊತ್ತಿಲ್ಲದವರ ಬಗ್ಗೆ ಸರ್ಟಿಫಿಕೇಟ್‌ಗಳನ್ನು ನಿರೀಕ್ಷಿಸುತ್ತೇವೆ. ಪ್ರತೀತಿ, ಪ್ರಖ್ಯಾತಿ ಹಬ್ಬುತ್ತದೆ. ಕ್ರಮೇಣ ಈ ದಾತರು “ಸ್ಥಾಪಿತ”ರಾಗುತ್ತಾರೆ.
ಬರವಣಿಗೆಯ ಕಲೆಯನ್ನು ಚೆನ್ನಾಗಿ ಬಲ್ಲ, ವಿದೇಶಗಳಲ್ಲಿ ತರಬೇತಿ, ಅಧ್ಯಯನಗಳನ್ನೆಲ್ಲ ಮಾಡಿದ್ದ ಒಬ್ಬ ಗೆಳೆಯ ವಾರಪತ್ರಿಕೆಯೊಂದರ ಸಂಪಾದಕನ ಹುದ್ದೆಗೆ ಸಂದರ್ಶನಕ್ಕೆ ಹೋಗಿದ್ದ. ಇವನಿಗೆ ಎಲ್ಲ ರೀತಿಯ ಅರ್ಹತೆಯೂ ಇದೆ ಎಂದು ಮಾಲೀಕರು ಒಪ್ಪಿಕೊಂಡು ನೇಮಿಸಿದರು. ಕೆಲವೇ ತಿಂಗಳಲ್ಲಿ ಕೆಲಸದಿಂದ ತೆಗೆಯಬೇಕಾಯಿತು. ಸಂಪಾದಕೀಯದ ಮೂಲಕ ಯಾರಿಗೂ ಯಾವ ರೀತಿಯ ಸರ್ಟಿಫಿಕೇಟ್ ನೀಡಲು ಈತನಿಗೆ ಬರುತ್ತಿರಲಿಲ್ಲ. ಬದಲಿಗೆ ನೇಮಕಗೊಂಡ ಸಂಪಾದಕ ನೋಡಿ! ಅಮೆರಿಕದ ಅಧ್ಯಕ್ಷರು, ಲೋಕಸಭೆಯ ವಿರೋಧಪಕ್ಷದ ನಾಯಕರು, ಗೋವಾದ ಗಣಿ ಮಾಲೀಕರು, ಪುರಿಯ ಶಂಕರಾಚಾರ್ಯರುಗಳ ಬಗ್ಗೆ ಮಾತ್ರವಲ್ಲ, ನಕ್ಷತ್ರ ಲೋಕ, ಹಿಮಾಲಯದ ತಪ್ಪಲಿನಲ್ಲಿ ಮಂಜು ಕರಗುತ್ತಿದೆ ಎಂಬ ಬಗ್ಗೆ ಕೂಡ ಸರ್ಟಿಫಿಕೇಟ್ ನೀಡುತ್ತಾ ಹೋದ. ಈತನಿಂದ ಪ್ರಭಾವಿತರಾದ ತರುಣರ ಒಂದು ಪಡೆಯೇ ನಿರ್ಮಾಣಗೊಂಡು ಸಂಪಾದಕೀಯ ಬರೆಯುವ ಹೊಸ ಶೈಲಿಯೇ ಜಾರಿಗೆ ಬಂದು ಈಗ ಇಂಥ ಸಂಪಾದಕರ ನಡುವೆಯೇ ಸ್ಪರ್ಧೆ, ತಿಕ್ಕಾಟ ಶುರುವಾಗಿದೆ.
ಈ ಸರ್ಟಿಫಿಕೇಟ್‌ಗಳೆಲ್ಲ ನಿಜವೂ ಆಗಬೇಕಾಗಿಲ್ಲ. ನಿಜದ ಮಾತಿರಲಿ, ವಾಸ್ತವಕ್ಕೆ ಕೂಡ ಹತ್ತಿರವಾಗಿರಬೇಕಾಗಿಲ್ಲ. ತಮಾಷೆಯೆಂದರೆ, ಹೀಗಿದ್ದಾಗಲೇ ಸರ್ಟಿಫಿಕೇಟ್ ಹೆಚ್ಚು ಪ್ರಸಿದ್ಧವಾಗುತ್ತದೆ. ನೀಡುವವರಿಗೂ ಹೆಚ್ಚಿನ ಬೇಡಿಕೆಯಿರುತ್ತದೆ. ಉದಾಹರಣೆಗೆ ನನ್ನನ್ನು ಜಾತ್ಯಾತೀತವಾದಿ, ಪ್ರಗತಿಪರ ಮನೋಭಾವದವನು ಎಂದು ಸರ್ಟಿಫಿಕೇಟ್ ಆಧಾರದ ಮೇಲೆ ಜನರೆಲ್ಲರೂ ಗುರುತಿಸುತ್ತಾರೆ. ಇದಕ್ಕೆ ಕಾರಣ ನನಗೆ ನೀಡಲ್ಪಟ್ಟಿರುವ ಸರ್ಟಿಫಿಕೇಟ್‌ಗಳು. ಇಲ್ಲ ಇಲ್ಲ ನಿಜವಾಗಿ ನಾನು ಕೋಮುವಾದಿ, ಸ್ವಾರ್ಥಿ ಎಂದು ಎದೆ ಬಿಚ್ಚಿ ತೋರಿದರೂ ಜನ ನನ್ನ ಬಗ್ಗೆ ಇರುವ ಸರ್ಟಿಫಿಕೇಟ್‌ಗಳನ್ನೇ ನಂಬುತ್ತಾರೆ. ನೀವು ಎಷ್ಟೇ ನಿಜ ಹೇಳಬಹುದು, ಸರ್ಟಿಫಿಕೇಟ್ ಇಂಥವರು ನೀಡಿದ್ದಾರಲ್ಲಾ ಎಂದು ನನ್ನನ್ನೇ ಪ್ರಶ್ನಿಸುತ್ತಾರೆ. ಕವಿರಾಯರೊಬ್ಬರಿಗೆ ಕನ್ನಡ ಕಾವ್ಯ ಪರಂಪರೆಯ ಆಳ, ಅಗಲಗಳನ್ನು ಬಲ್ಲ ಕಾವ್ಯ ಕುಲತಿಲಕ ಎಂದು ಸರ್ಟಿಫಿಕೇಟ್ ನೀಡಲಾಗಿತ್ತು. ವಾಸ್ತವದಲ್ಲಿ ಆತ ಒಬ್ಬ ಹನಿ ಕವನಗಳ ಜುಜುಬಿ ರಚನಾಕಾರನಾಗಿದ್ದ. ಪದವಿ ತರಗತಿಯಲ್ಲಿ ಕನ್ನಡ ಪರೀಕ್ಷೆ ಪಾಸು ಮಾಡಲು ಮೂರು ಸಲ ಪರೀಕ್ಷೆ ಬರೆದಿದ್ದ.
ಕೆಲವು ಸರ್ಟಿಫಿಕೇಟ್‌ಗಳನ್ನು ಸೂಕ್ಷ್ಮದಲ್ಲಿ ಗ್ರಹಿಸಬೇಕಾಗುತ್ತದೆ. ವಿರುದ್ಧಾರ್ಥಗಳಲ್ಲಿ, ಸಂದಿಗ್ಧ ನೆಲೆಗಳಲ್ಲಿ ಓದಬೇಕಾಗುತ್ತದೆ. ಒಬ್ಬ ಅಧಿಕಾರಿ ಮಿತ್ರರಿಗೆ ಕಲ್ಯಾಣಾಧಿಕಾರಿ ಎಂದು ಸರ್ಟಿಫಿಕೇಟ್ ನೀಡಲಾಗಿತ್ತು. ಎಲ್ಲರ ಯೋಗಕ್ಷೇಮವನ್ನು, ಕಲ್ಯಾಣವನ್ನು ನಿರ್ವಹಿಸಬಲ್ಲ ಎಂದು ಗುಣಗಾನ ಮಾಡಲಾಗಿತ್ತು. ನಿಜದಲ್ಲಿ ಆತ ಭ್ರಷ್ಟ ಅಧಿಕಾರಿಯಾಗಿದ್ದ. ಆದರೆ ಭ್ರಷ್ಟನಾಗಬೇಕಾದರೆ ನಾಲ್ಕು ಜನರ ಸಹಕಾರ ಬೇಕು. ಆ ನಾಲ್ಕು ಜನರ ಯೋಗಕ್ಷೇಮ, ಕಲ್ಯಾಣಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಧಿಕಾರಿ ಆ ಸ್ವಭಾವದವನು ಎಂಬುದು ಒಳಾರ್ಥ. ಇನ್ನೊಬ್ಬ ಹದಿನಾರಾಣೆ ಸನಾತನವಾದಿ. ಆದರೂ ಆತನಿಗೆ ಬುದ್ಧಶ್ರೀ ಸರ್ಟಿಫಿಕೇಟ್ ನೀಡಲಾಗಿತ್ತು. ಅರ್ಥ ಇಷ್ಟೇ! ಬುದ್ಧನ ಹೆಸರಿನಲ್ಲಿ ನಿರ್ಮಾಣವಾಗುವ ಎಲ್ಲ ಮಂದಿರಗಳು, ಶಾಲೆಗಳ ಕಾಂಟ್ರಾಕ್ಟ್ ಈತನಿಗೇ ಸಿಕ್ಕಿ, ಈ ಆದಾಯದಿಂದ ಬಂದ ಒಂದು ಸಣ್ಣ ಭಾಗವನ್ನು ಬುದ್ಧನ ಬಗ್ಗೆ ಸಾಹಿತಿಗಳು ಬರೆಯುವ ಪುಸ್ತಕಗಳಿಗೆ ಸಹಾಯಧನವಾಗಿ ನೀಡುತ್ತಿದ್ದ. ಸರ್ಟಿಫಿಕೇಟ್ ನೀಡುವವರಿಗೆ ಇದೆಲ್ಲ ಗೊತ್ತಿರುವುದಿಲ್ಲವೆ ಎಂದು ಕೇಳಬೇಡಿ. ಆದರೆ ಅವರು ಒಂದು ಹಂತದ ಭಾಷಾ ಪಂಡಿತರಾಗಿರುತ್ತಾರೆ. ಒಳಾರ್ಥ, ವಿರುದ್ಧಾರ್ಥಗಳನ್ನು ಹುದುಗಿಸಿ ತಟಸ್ಥ ಭಾಷೆಯಲ್ಲಿ, ಸಂಜ್ಞಾ ಭಾಷೆಯಲ್ಲಿ ಬರೆಯಬಲ್ಲರು. Author is always dead ಎನ್ನುವ ಮಾತು ನಿಜ. ಓದುವವರು, ಗ್ರಹಿಸುವವರು ನೀಡುವ ಅರ್ಥದಂತೆ ಅದು ಬದಲಾಗುತ್ತಾ ಹೋಗುತ್ತದೆ.
ಸರ್ಟಿಫಿಕೇಟ್‌ಗಳ ಅಗತ್ಯ, ಅನಿವಾರ್ಯತೆಯನ್ನು ನಾಗರಿಕ ಪ್ರಪಂಚ ಒಪ್ಪಿದೆ. ಎಲ್ಲ ಕೆಲಸಗಳಿಗೂ ಈ ಸರ್ಟಿಫಿಕೇಟ್ ನೀಡಲೇಬೇಕು. ಇದರ ನಮೂನೆಗಳು ಕಂಪ್ಯೂಟರ್‌ನಲ್ಲಿ ಸಿಗುತ್ತವೆ. ನಾನು ನನ್ನ ಜೀವಮಾನದುದ್ದಕ್ಕೂ ಸನ್ಯಾಸಿಗಳಿಂದ, ಸಾಹಿತಿಗಳಿಂದ, ನಾಯಕರಿಂದ, ಪುಂಗವರಿಂದ, ಪುಂಡರಿಂದ ಬರೆಸಿಕೊಂಡ Character Certificateಗಳನ್ನು ಪಡೆಯುತ್ತಲೇ ಬಂದಿದ್ದೇನೆ. ಇವರೆಲ್ಲರೂ ನನ್ನ ಬಗ್ಗೆ ಬಳಸಿರುವ ಭಾಷೆ, ಗುಣವಾಚಕ ಸರ್ಟಿಫಿಕೇಟ್‌ನ ಧ್ವನಿ ಎಲ್ಲವೂ ಒಂದೇ ರೀತಿ ಇದೆ. ನನ್ನ ನಲವತ್ತಕ್ಕೂ ಮೀರಿದ ಪುಸ್ತಕಗಳಿಗೂ ಮುನ್ನುಡಿ, ಹಿನ್ನುಡಿಯೆಂದು ಬರೆಸಿಕೊಂಡಿರುವ ನಾನಾ ಬಣ್ಣಗಳ, ಕೋಮುಗಳ, ಬಿಗುಮಾನಗಳ ಲೇಖಕರು ನೀಡಿರುವ ಸರ್ಟಿಫಿಕೇಟ್‌ಗಳ ಗತಿಯೂ ಹೀಗೇ ಆಗಿದೆ.
ಜೀವನದಲ್ಲಿ ಒಂದು ಹಂತದ ತನಕ ನಾವು ಸರ್ಟಿಫಿಕೇಟ್ ಪಡೆಯಲು ತುಂಬಾ ಕಷ್ಟ ಪಡಬೇಕು. ನಂತರದ ಹಂತದಲ್ಲಿ ನಾವೇ Certificate ನೀಡುತ್ತೇವೆ. ಈಚಿನ ವರ್ಷಗಳಲ್ಲಿ ನಾನು ಈಗಷ್ಟೇ ಈ ವರ್ಗಕ್ಕೆ ಬಡ್ತಿ ಪಡೆದಿದ್ದೇನೆ. ಮೊದಮೊದಲು ಪ್ರಾಮಾಣಿಕವಾಗಿ ಬರೆಯಲು ಹೋಗಿ ತಿಣುಕಾಡಿ ಸಮಯ ಪೋಲು ಮಾಡಿಕೊಳ್ಳುತ್ತಿದ್ದೆ. ಹೀಗೆ ಬರೆದ ಸರ್ಟಿಫಿಕೇಟ್‌ಗಳನ್ನು ಯಾರೊಬ್ಬರೂ ಒಪ್ಪುತ್ತಿರಲಿಲ್ಲ. ನಿಮ್ಮ ಹತ್ತಿರ ಬಂದಿದ್ದೇನೆ ನಿಜ, ನೀವು ಸರ್ಟಿಫಿಕೇಟ್ ಕೊಡುವುದು ಕೂಡ ನಿಜ. ಆದರೆ ಅದು ನಾವು ಬಯಸಿದ ಧ್ವನಿ, ಭಾಷೆಯಲ್ಲಿರಬೇಕು, ಇಲ್ಲದಿದ್ದರೆ, ಬೇರೆಯವರ ಹತ್ತಿರ ಹೋಗುತ್ತೇವೆ ಎಂದು ಧಮಕಿ ಹಾಕಿಸಿಕೊಂಡು ನಾನು ಕೂಡ ಸಲ್ಲುವ-ಗೆಲ್ಲುವ ಸರ್ಟಿಫಿಕೇಟ್‌ಗಳನ್ನು ಬರೆದುಕೊಡುವುದನ್ನು ಕಲಿತಿದ್ದೇನೆ.
ಒಮ್ಮೆ ಇದನ್ನು ನಿಮಗೆಂದು ನೀಡಿದರೆ ನೀವು ತಿರಸ್ಕರಿಸುವ ಹಾಗಿಲ್ಲ. ಇಂತಹ ವಿಷಯದ ಬಗ್ಗೆ ಅಂಥ Certificate ನಿಯಮಿತವಲ್ಲ. ಯಾವ ವಿಷಯದ ಬಗ್ಗೆಯಾದರೂ ಕೊಡಬಹುದು, ಕೊಡುತ್ತಾರೆ. ಸರ್ಟಿಫಿಕೇಟ್ ನೀಡುವುದರ ಜೊತೆಗೆ ಸಾರ್ವಜನಿಕವಾಗಿ ಘೋಷಿಸಿಯೂಬಿಡುತ್ತಾರೆ. ನೀವು ಕೋಮುವಾದಿಯೋ, ಪ್ರಗತಿಪರರೋ, ಸಂವೇದನಾಶೀಲರೋ, ಸಹೃದಯರೋ ಇಲ್ಲವೋ, ನಿಮ್ಮದು ಅನ್ಯೋನ್ಯ ದಾಂಪತ್ಯವೋ ಅಲ್ಲವೋ, ನೀವು ಯಾವ ಕ್ಷೇತ್ರದಲ್ಲಿ ಪರಿಣತರು, ಎಲ್ಲವನ್ನೂ ಈ ಸರ್ಟಿಫಿಕೇಟ್‌ಗಳು ನಿರ್ಧರಿಸುತ್ತವೆ.
ಜನ ಹೇಳುವುದು, ಬಯಸುವುದು ಎರಡೂ ನಿಜ. ಹೆಚ್ಚಿನ ಸಂದರ್ಭಗಳಲ್ಲಿ ಇದನ್ನೆಲ್ಲ ನೀಡುತ್ತಿರುವವರು ಯಾರು ಎಂಬುದು ಮುಖ್ಯವಾಗುತ್ತದೆಯೇ ಹೊರತು, ಏನು ಸರ್ಟಿಫಿಕೇಟ್ ನೀಡುತ್ತಾರೆ ಎಂಬುದಲ್ಲವೇ ಅಲ್ಲ. ಹೀಗಾಗಿ ಇದನ್ನೆಲ್ಲ ನೀಡುವವರು ಒಂದು ಸುಸಜ್ಜಿತ ಕಾರ್ಯಾಲಯವನ್ನು ತೆರೆದಿರುತ್ತಾರೆ. ನುರಿತ ಸಿಬ್ಬಂದಿ ವರ್ಗವನ್ನಿಟ್ಟುಕೊಂಡಿರುತ್ತಾರೆ. ನೀವು ಇವರನ್ನು ಭೇಟಿ ಮಾಡಿ ಇಂತಹ ಉದ್ದೇಶಕ್ಕೆ ಸರ್ಟಿಫಿಕೇಟ್ ಬೇಕು, ಇಂಥವರು ಇದನ್ನು ಓದುತ್ತಾರೆ ಎಂದು ಬೇಡಿಕೆ ಸಲ್ಲಿಸಿದರೆ ಸಾಕು, ಸಿಬ್ಬಂದಿ ಒಂದು ಸೂಕ್ತವಾದ ಸರ್ಟಿಫಿಕೇಟ್ ತಯಾರಿಸಿಕೊಡುತ್ತಾರೆ. ಉದ್ಯಮ, ಕಲೆ, ಸಮಾಜಸೇವೆ, ಕ್ರೀಡೆ ಹೀಗೆ ಜೀವನದ ಬೇರೆ ಬೇರೆ ಕ್ಷೇತ್ರಗಳಿಗೆ ಪ್ರವೇಶ ಪಡೆಯಲು ಬೇಕಾದ ಸರ್ಟಿಫಿಕೇಟ್‌ಗಳನ್ನು ಒಂದೇ ಕಾರ್ಯಾಲಯದ ನುರಿತ ಸಿಬ್ಬಂದಿಯೇ ತಯಾರಿಸಿಕೊಡುತ್ತಾರೆ. ಇದು ತಿಳಿಯದೆ ಜನ, ಈ ವಲಯದವರು ನೀಡುವ ಪ್ರಶಸ್ತಿ, ಆ ಪ್ರಶಸ್ತಿಗಾಗಿ ಬಳಸುವ ಸರ್ಟಿಫಿಕೇಟ್‌ನಲ್ಲಿ ನಮೂದಿಸಿದ ವಿವರಗಳು ಇದರಲ್ಲೆಲ್ಲ ನಮ್ಮದು ಉತ್ತಮ ಅವರದು ಸಾಧಾರಣ ಎಂದು ಜಗಳ ಕಾಯುವುದನ್ನು ಕಂಡಾಗ ನಗು ಬರುತ್ತದೆ.
ಕೆಲವರಿಗೆ ಹೆಚ್ಚು ಹೆಚ್ಚು ಸರ್ಟಿಫಿಕೇಟ್‌ಗಳನ್ನು ನೀಡುವ ಆಸೆಯಿರುತ್ತದೆ. ಇಂಥವರು ತಮ್ಮ ಪ್ರಸಿದ್ಧಿಯನ್ನು ತಾವೇ ಹಬ್ಬಿಸುತ್ತಾರೆ. ಇಂಥವರು ನನಗೆ ಸ್ವಲ್ಪಕಾಲ ಗಂಟುಬಿದ್ದಿದ್ದರು. ನನ್ನಿಂದ ಸಾಕಷ್ಟು ಉಪಕೃತರೂ ಆಗಿದ್ದರು. ಉತ್ಸವ ಮೂರ್ತಿಯ ಸ್ವಭಾವದ ವ್ಯಕ್ತಿತ್ವ. ನಾನು ಎಲ್ಲಿಗೇ ಹೊರಡಲಿ, ಯಾವ ಕಾರ್ಯಕ್ಕೇ ಹೊರಡಲಿ, ಆಯ್ತು ಅಲ್ಲಿ ನನಗೆ ಇಂಥವರು ಪರಿಚಯ, ನನ್ನ ಬಗ್ಗೆ ಗೌರವವಿದೆ, ನನ್ನಿಂದ ಒಂದು ಸರ್ಟಿಫಿಕೇಟ್ ತಗೊಂಡು ಹೋಗು ಎನ್ನುತ್ತಿದ್ದರು. ಹೌದು ಅವರ ಇಂಗ್ಲಿಷ್ ತುಂಬಾ ಚೆನ್ನಾಗಿತ್ತು. ಸರ್ಟಿಫಿಕೇಟ್ ಬರೆದುಕೊಡುವ ಕಾಗದ ಕೂಡ ಚಿನ್ನದ ಬಣ್ಣದಿಂದ ಹೊಳೆಯುತ್ತಿತ್ತು. ಕಲಾತ್ಮಕವಾಗಿ ಬೆರಳಚ್ಚು ಮಾಡಿಕೊಡುತ್ತಿದ್ದರು. ಅದನ್ನು ಓದುವಾಗ ನಮಗೇ ನಾಲ್ಕಾರು ನಿಮಿಷಗಳ ಕಾಲ ರೋಮಾಂಚನ, ಭಾವೋದ್ವೇಗ ಉಂಟಾಗುತ್ತಿತ್ತು. ದೆಲ್ಲಿಗೆ ಅದನ್ನು ತಗೊಂಡೋಗಿ ಅಧಿಕಾರಸ್ಥರಿಗೆ ತೋರಿಸಿದೆ. ಗತ್ತಿನಿಂದ ಕಣ್ಣಾಡಿಸಿದರು. ಎಷ್ಟು ಸುಂದರವಾದ ಪದಗುಚ್ಛ ಎಂದು ಉದ್ಗಾರ ತೆಗೆದರು. ನಾನು ಒಳಗೊಳಗೇ ಬೀಗಿದೆ. ನಂತರ ಮಾನ್ಯರು ದೀರ್ಘವಾಗಿ ಆಕಳಿಸಿ ಚಿಟಿಕೆ ಹೊಡೆದರು. ಸಹಾಯಕ ಪಾನ್ ಬೀಡಾ ತಂದುಕೊಟ್ಟ. ಜಗಿದು, ರಸಗೂಡಿದ ಮೇಲೆ ರಸವನ್ನು ಸವಿಯುತ್ತಾ, ರಸಲೇಪಿತ ನಾಲಿಗೆಯಿಂದ ತುಟಿ ಸವರಿಕೊಂಡು ಸುಖ ಅನುಭವಿಸುತ್ತಾ, ಅಲ್ಲಾರೀ, ನಿಮ್ಮ ಪ್ರೊಫೆಸರ್‌ಗೆ ಸರ್ಟಿಫಿಕೇಟ್ ಪ್ರಕಾರ ಚೆನ್ನಾಗಿ ಒಲಿದಿದೆ. ಔದಾರ್ಯವಾಗಿ ಕೂಡ ಬರೆಯಬಲ್ಲರು. ಆದರೆ ಎಷ್ಟೆಷ್ಟೊಂದು ಜನಕ್ಕೆ ಸರ್ಟಿಫಿಕೇಟ್‌ಗಳನ್ನು ಕೊಡುತ್ತಲೇ ಇರುತ್ತಾರೆ. ನನ್ನೊಬ್ಬನಿಗೆ ಕಳಿಸಿರುವ ಸರ್ಟಿಫಿಕೇಟ್‌ಗಳನ್ನು ಇಟ್ಟುಕೊಳ್ಳುವುದಕ್ಕೇ ಒಂದು ಚಿಕ್ಕ ಗೋಡೌನ್ ಬೇಕು.
ಇನ್ನೊಬ್ಬರು ಈ ಪ್ರಾಚಾರ್ಯರಿಗೆ ತದ್ವಿರುದ್ಧ. ಆದರೆ ಅವರಿಗೂ ತಾವು ಕೊಡುವ ಸರ್ಟಿಫಿಕೇಟ್ ಮೇಲೆ ತುಂಬಾ ವಿಶ್ವಾಸ. ಪ್ರತಿಯೊಂದು ಪದವನ್ನೂ ಅಳೆದೂ-ತೂಗಿ, ನಾಲ್ಕಾರು ನಿಘಂಟು, ವಿಶ್ವಕೋಶಗಳನ್ನು ಪರಾಮರ್ಶಿಸಿ ಬರೆದುಕೊಡುತ್ತಿದ್ದರು. ಬರದದ್ದೆಲ್ಲ ಹದಿನಾರಾಣೆ ಪ್ರಾಮಾಣಿಕವಾಗಿರುತ್ತಿತ್ತು. ಆದರೆ ಯಾರೊಬ್ಬರಿಗೂ ಅರ್ಥವಾಗುತ್ತಿರಲಿಲ್ಲ. ಬರೆಸಿಕೊಂಡ ನಾವೇ ಅರ್ಥ ಮಾಡಿಕೊಂಡು ಎಲ್ಲರಿಗೂ ವಿವರಿಸಬೇಕಾಗುತ್ತಿತ್ತು.
ಒಟ್ಟಿನಲ್ಲಿ ಎರಡು ರೀತಿಯ ಸರ್ಟಿಫಿಕೇಟ್‌ಗಳಿಂದಲೂ ಯಾವ ಕೆಲಸವೂ ಆಗುತ್ತಿರಲಿಲ್ಲ!
ನನ್ನ ಅನುಭವದಲ್ಲಿ ಸರ್ಟಿಫಿಕೇಟ್ ಅಂಥ ಪ್ರತ್ಯೇಕವಾಗಿದ್ದರೆ ಕಷ್ಟ. ಕೊಡುವರಿಗೂ, ಪಡೆಯುವವರಿಗೂ ಅಷ್ಟೆ, ಯಾವುದಾದರೂ ಸರಿ ಬರವಣಿಗೆಯಲ್ಲಿ ಹುದುಗಿಹೋಗಿರಬೇಕು, ಅಂತರ್ಗತವಾಗಿರಬೇಕು. ವಾಸ್ತವ ಮತ್ತು ರಮ್ಯತೆ ಎರಡನ್ನೂ ಬೆರೆಸಬಲ್ಲ ಸಾಮರ್ಥ್ಯವಿರಬೇಕು. ಮುನ್ನುಡಿ ಬೆನ್ನುಡಿಗಳಲ್ಲಿ, ಶಿಫಾರಸ್ ಪತ್ರಗಳಲ್ಲಿ, ಭಿನ್ನವತ್ತಳೆಗಳಲ್ಲಿ, ವರದಿಪ್ರಧಾನ ದಾಖಲೆಗಳಲ್ಲಿ ಹಿತವಾಗಿ ಮಿತವಾಗಿ ಬೆರೆಸಿದರೆ, ಸಂಬಂಧಪಟ್ಟವರಿಗೆಲ್ಲ ಅನುಕೂಲ. ಮುನಿಸಿಪಾಲಿಟಿಗಳು, ವಣಿಕ ಮಂಡಳಿಗಳು, ವಿಶ್ವವಿದ್ಯಾಲಯಗಳು, ಅಕಾಡೆಮಿ, ಪರಿಷತ್‌ಗಳು ಹೀಗೆ ಬರೆಯಬಲ್ಲ ಕುಶಲಕರ್ಮಿಗಳನ್ನು ನೇಮಿಸಿಕೊಂಡಿರುತ್ತವೆ. ಇಂಥವರಿಗೆ ನೀವು ಕೊಂಚ ಪ್ರಾಥಮಿಕ ಮಾಹಿತಿ ಕೊಟ್ಟರೆ ಸಾಕು, ನಿಮಗೆ ಬೇಕಾದ ರೀತಿಯ ಸರ್ಟಿಫಿಕೇಟ್ ತಯಾರಾಗುತ್ತದೆ.
ಹೀಗೇ ನಮ್ಮೊಡನಿದ್ದ ಸರ್ಟಿಫಿಕೇಟ್ ದಾತರೊಬ್ಬರು ಬರೆದೂ ಬರೆದೂ ಕೊನೆಗೆ ಶೂನ್ಯ ಸಂಪಾದನೆಯ ಸ್ಥಿತಿಯನ್ನು ತಲುಪಿದ್ದನ್ನು ನಾನು ನೋಡಿದ್ದೇನೆ. ಅವರನ್ನು ಭೇಟಿ ಕೂಡ ಮಾಡಿದ್ದೇನೆ. ಇವರಿಗೂ ಮೊನ್ನೆ ೭೦ ವರ್ಷವಾಯಿತು. ಮಾನ್ಯರಿಗೆ ಸನ್ಮಾನ ಮಾಡಿ ಮುನಿಸಿಪಾಲಿಟಿಯ ಕಡೆಯಿಂದ ಒಂದು ಸರ್ಟಿಫಿಕೇಟ್ ಕೊಡಿಸಬೇಕೆಂದು ನಮಗೆಲ್ಲ ಆಸೆಯಾಯಿತು. ಇದೆಲ್ಲ ಏನೂ ಬೇಡ, ನಾನೇ ಸಾವಿರಾರು ಜನಕ್ಕೆ ನಾನಾ ರೀತಿಯ ಸರ್ಟಿಫಿಕೇಟ್ ನೀಡಿದ್ದೇನೆ, ಎಲ್ಲ ಪದಗಳೂ ಗುಣವಾಚಕಗಳೂ ಖಾಲಿಯಾಗಿ ಹೋಗಿವೆ. ನೀವು ಯಾವುದೇ ನಿಘಂಟಿನಿಂದ ಆಯ್ದು ಹೊಸ ಪದಗಳನ್ನು ಬೆರೆಸಿ ಸರ್ಟಿಫಿಕೇಟ್ ನೀಡಿದರೂ ನನ್ನ ಮೇಲೆ ಏನೂ ಪರಿಣಾಮ ಬೀರುವುದಿಲ್ಲ, ಒಂದು ರೀತಿಯ ಅಸಾಂಗತ್ಯದಲ್ಲಿನ ಸಾಂಗತ್ಯದ ಸ್ಥಿತಿ ನನ್ನದು ಎಂದರು. ತುಂಬಾ ಬಲವಂತ ಮಾಡಿದ್ದರಿಂದ ಸನ್ಮಾನಕ್ಕೆ ಒಪ್ಪಿಕೊಂಡರು. ಸರ್ಟಿಫಿಕೇಟ್ ಮಾತ್ರ ಪ್ಪಲಿಲ್ಲ. ಆದರೂ ಹಿಂದಿನ ಅಭ್ಯಾಸದಂತೆ ಈಗಲೂ ಪ್ರತಿದಿನವೂ ಕೊನೇಪಕ್ಷ ಹತ್ತಾರು ಜನಕ್ಕಾದರೂ ಸರ್ಟಿಫಿಕೇಟ್ ನೀಡುತ್ತಲೇ ಇದ್ದಾರೆ.
ಇಷ್ಟೆಲ್ಲಾ ಬರೆದರೂ ಈ ಸರ್ಟಿಫಿಕೇಟ್‌ಗಳ ಆಕರ್ಷಣೆ ಪ್ರಾರಂಭವಾದದ್ದು ಶಾಲಾ ಕಾಲೇಜಿನ ದಿನಗಳಲ್ಲಿ. ಆದರ್ಶ ಶಿಕ್ಷಕರು ನೀಡುತ್ತಿದ್ದ ಬೆಲೆ ಬಾಳುವ ಸರ್ಟಿಫಿಕೇಟ್‌ಗಳಿಂದ. ಹೀಗೆ ಪಡೆದ ಸರ್ಟಿಫಿಕೇಟ್‌ಗಳ ಬಹುಪಾಲು ಅಕ್ಷರಗಳು ಶಿಕ್ಷಕರ ಹಸ್ತಾಕ್ಷರದಲ್ಲಿರುತ್ತಿದ್ದವು. ಕೆಲವನ್ನು ಮೋಡಿ ಲಿಪಿಯಲ್ಲಿ ಕೂಡ ಬರೆಯಲಾಗಿತ್ತು. ಈ ಸರ್ಟಿಫಿಕೇಟ್‌ಗಳೆಲ್ಲ ಹರಿದುಹೋಗಿವೆ, ಮಸುಕಾಗಿವೆ. ಆದರೂ ಆಗಾಗ್ಗೆ ಅವನ್ನು ಸ್ಪರ್ಶಿಸಿದಾಗ ಕ್ಷಣವೊಂದರಲ್ಲಿ ಅದೆಷ್ಟು ಪುಳಕವಾಗುತ್ತದೆ.
ಎಲ್ಲ ವೃತ್ತಿಪರರಂತೆ ಈಗ ಸರ್ಟಿಫಿಕೇಟ್ ದಾತರು ಕೂಡ ಸಂಘಟಿತರಾಗಿದ್ದಾರೆ. ಸಂಘ, ಸಂಸ್ಥೆಗಳನ್ನು ರೂಪಿಸಿಕೊಂಡಿದ್ದಾರೆ. ಅವರ ವೃತ್ತಿ ಹಾಗೆ ಮುಂದುವರೆಯಲಿ, ಅದಕ್ಕೆಲ್ಲ ಅಡ್ಡಗಾಲು ಹಾಕಲು ಯಾರಿಗೂ ಸಾಧ್ಯವಿಲ್ಲ. ಇದು ಯುಗಧರ್ಮ.
ಆದರೆ ಅಮಾಯಕರು, ಸಾಮಾನ್ಯರು ಕೂಡ ಈಗ ಸರ್ಟಿಫಿಕೇಟ್ ನೀಡುವ ಚಟಕ್ಕೆ ಸಿಕ್ಕಿಹಾಕಿಕೊಂಡಿದ್ದಾರಲ್ಲ! ಸಾಮಾಜಿಕ ಮಾಧ್ಯಮಗಳಲ್ಲಿ ಇಂಥವರು ಇಂಥವರಿಗೆ ನೀಡುವ ನಾನಾ ಸರ್ಟಿಫಿಕೇಟ್‌ಗಳ ನಮೂನೆಗಳು ಪ್ರಕಟವಾಗುತ್ತಲೇ ಇರುತ್ತವೆ, ದಿನದಿನವೂ, ಕ್ಷಣಕ್ಷಣವೂ. ಇವರಲ್ಲಿ ಕೆಲವರ ಬಳಿಯಾದರೂ ಶಾಲಾದಿನಗಳಲ್ಲಿ ಮುಗ್ಧ ಶಿಕ್ಷಕರಿಂದ ಪಡೆದ ಅಮೂಲ್ಯ ಸರ್ಟಿಫಿಕೇಟ್‌ಗಳು ಇದ್ದೇ ಇರುತ್ತವೆ. ಅಂತಹ ಸರ್ಟಿಫಿಕೇಟ್‌ಗಳನ್ನು ಮತ್ತೆ ಗಮನಿಸಲಿ, ಜೀವಪುಳಕವನ್ನು ಅನುಭವಿಸಲಿ. ಅವರ ಶಿಕ್ಷಕರು ನೀಡುತ್ತಿದ್ದ ರೀತಿಯ ಸರ್ಟಿಫಿಕೇಟ್‌ಗಳನ್ನು ಮಾತ್ರವೇ ಈ ಅಮಾಯಕರು, ಸಾಮಾನ್ಯ ಜನಗಳು ಕೊಡುವಂತಾಗಲಿ. ತನ್ಮೂಲಕ ಪ್ರಭಾವಿ, ಪ್ರಖ್ಯಾತ ಸರ್ಟಿಫಿಕೇಟ್ ದಾತರ ಪ್ರಭಾವ ಕಡಿಮೆಯಾಗಲಿ ಎಂದು ಪ್ರಾರ್ಥಿಸುವುದರ ಹೊರತಾಗಿ ಇನ್ನೇನು ಮಾಡಲು ಸಾಧ್ಯವಿದೆ.
ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.
ಈ ಬರಹ ಸತ್ಯದ ಮುಖಕ್ಕೆ ವಿಡಂಬನಾತ್ಮಕ ಲೇಪನ ಹಾಕಿದ ಅರ್ಥಪೂರ್ಣ ಲೇಖನ. ಶಿಫಾರಸು ಇಲ್ಲದೆ ಯಾರ ಯಾವ ಕೆಲಸವಆಗದು. ಆದರೆ ಇಲ್ಲಿ ಪ್ರಸ್ತಾಪಿದ ಸರ್ಟಿಫಿಕೇಟ್ ದಾತರು ಸ್ವಯಂ ಪೋಷಿತ ದಾತರು. ಇಂಥವರ ಸರ್ಟಿಫಿಕೇಟ್ ನಿಂದ ಆಗುವಾಗುವ ಪ್ರಯೋಜನಕ್ಕಿಂತ ಹಾನಿಯೆ ಹೆಚ್ಚು
thanks sir
ಲೇಖನ ಚೆನ್ನಾಗಿದೆ. ಇತ್ತೀಚೆಗೆ TV ಕಾರ್ಯಕ್ರಮ ನಿರೂಪಕರೂ ಕೂಡ ಕಾರ್ಯಮಕ್ಕೆ ಮುಖ್ಯ ಅತಿಥಿಯಾಗಿ ಬಂದತಹ ಗಣ್ಯ ಸಾಹಿತಿಗೆ ಅಥವಾ ಸಂಗೀತಾ ಸಂಯೋಜಕರಿಗೆ “ನಾದ ಬ್ರಹ್ಮ “, ಸಂಗೀತಾ ಸಾಮ್ರಾಟ “, “ಅಕ್ಷರ ಜಾದೂಗಾರ ” ಎಂಬತಹ ಬಿರುದುಗಳ Certificate ಗಳನ್ನು ಯಾವ ಸಂಕೋಚವಿಲ್ಲದೆ ನೀಡುತ್ತಾರೆ. ವಿಶ್ವವಿದ್ಯಾನಿಲಯ ಗಳಂತೂ ಸಿನೆಮಾ ನಟರಿಗೆ ಡಾಕ್ಟರೇಟ್ ಗಳನ್ನು ಸ್ಪರ್ಧೆಯಿಂದ ನೀಡುತ್ತಾರೆ.
thanq so much