ಇಂಡಿಯ ಈಗ ವಸಂತದ ಮರೆಯಲ್ಲಿನ ಬೇಸಿಗೆಗೆ ಬುಸುಗುಡುತ್ತಿರುತ್ತದೆ. ಸಿಡ್ನಿಯಲ್ಲೋ, ಚಳಿ ಹಗುರಾಗಿ ಮೈಮೇಲೆ ಬೆರಳಾಡಿಸಿದಂತೆ ಆಗುತ್ತಿದೆ. ಆದರೂ ಬಿಡಲು ಇಷ್ಟವಿಲ್ಲದ ನವಪ್ರೇಮಿಯಂತೆ ಬೇಸಿಗೆ ಮಾತ್ರ ತಬ್ಬಿಯೇ ಇದೆ. ಬೆಂಕಿಯಂತ ಉರಿಹಗಲಿಗೆ ಒಣಗಿ ಬೇಸತ್ತ ಚರ್ಮ ಚಳಿಯೊಡನೆ ಖುಷಿಯಿಂದಲೇ ಕಾಮಕೇಳಿಗೆ ಇಳಿಯುತ್ತದೆ.
ಲಂಕೇಶರ ಹುಟ್ಟುಹಬ್ಬಕ್ಕೆ ಅವರ ನೆನಪಿನಲ್ಲಿ ನೀವೆಲ್ಲಾ ತೊಯ್ಯುತ್ತಿರುವಾಗ ಸಿಡ್ನಿಯಲ್ಲಿ ಮಾರ್ಚ್ ಎಂಟರ ಭಾನುವಾರ ಗೇ ಹಾಗು ಲೆಸ್ಬಿಯನ್ ಮಾರ್ಡಿ ಗ್ರಾ (Gay and Lesbian Mardi Gras)ದ ಉಲ್ಲಾಸ ಹಾಗು ಸಿಟ್ಟು ಆವರಿಸಿತು. ರಂಗುರಂಗಿನ ನೆರೆ ನೆತ್ತಿಯವರೆಗೂ ಏರಿತು. ಹಾಗೆಯೇ ಹಲವರ ಸಿಟ್ಟೂ ಕೂಡ. ಹಸಿರಿನ ಕೆಲವೇ ಶೇಡ್‌ಗಳಿರುವ ಇಲ್ಲಿಯ ಮರಗಿಡಗಳು ಅಲ್ಲಾಡದೆ ಚಳಿಯ ಧ್ಯಾನಕ್ಕಿಳಿಯಲು ತಯಾರಾಗಿ ತಮ್ಮ ಜಾಗ ಕಂಡುಕೊಂಡಂತೆ ನಿಂತಿವೆ. ಗಾಳಿ ಬೀಸಿದಾಗೆಲ್ಲಾ, ಈ ಸಲದ ಬೇಸಿಗೆಯ ಕಾಡ್ಗಿಚ್ಚಿಂದ ಪಾರಾದ ನಿಟ್ಟುಸಿರು ಅವುಗಳಿಂದ ಕೇಳಿಬರುತ್ತದೆ. ಸಿಟ್ಟು ಅಸಹನೆಯ ಜನರಿಂದ ಬಚಾವಾದ ಸಂಭ್ರಮ ಮಾರ್ಡಿ ಗ್ರಾದಲ್ಲಿ ಅರಳುತ್ತದೆ.
ಮೂವತ್ತು ವರ್ಷಗಳಿಂದ ಮಾರ್ಚಿನ ಮೊದಲ ಭಾನುವಾರ ನಡೆವ ಈ ಅಭಿಮಾನ ಹಾಗು ಉಲ್ಲಾಸದ ಉತ್ಸವದಲ್ಲಿ ಈ ಸಲ ಮೂರು ಲಕ್ಷಕ್ಕೂ ಮಿಕ್ಕು ಜನ ಮೈಕುಣಿಸಿದ್ದಾರೆ. ೧೯೭೮ರಲ್ಲಿ ಒಂದು ಸಂಜೆಯ ಚಿಕ್ಕ ಪಾರ್ಟಿಯಂತೆ ಶುರುವಾದದ್ದು ಇದು. ಮೊದಮೊದಲಲ್ಲಿ ಸಲಿಂಗಕಾಮ ಅಪರಾಧವಾಗಿದ್ದ ದಿನಗಳು. ನೂರಾರು ಜನರನ್ನು ಆಗ ಪೋಲೀಸರು ಬಂಧಿಸಿದ್ದರು. ಸಮಾಜದ ಅಸಹನೆಗೆ ಪ್ರತ್ಯಕ್ಷ ರೂಪವಾಗುವ ಪೋಲೀಸರ ಸಿಟ್ಟಿಗೆ ಸಮವಾಗಿ ಪ್ರತಿರೋಧವೂ ಹೆಚ್ಚುತ್ತಾ ಹೋಯಿತು. ಇಂದಿಗೂ ಪೋಲೀಸರ, ಧಾರ್ಮಿಕ ನಾಯಕರ, ರಾಜಕಾರಣಿಗಳ ವೇಷ ತೊಟ್ಟು, ಅವರನ್ನು ಹೀಗಳೆಯುವ ಪರಂಪರೆ ಮಾರ್ಡಿ ಗ್ರಾದಲ್ಲಿ ಜೀವಂತವಾಗಿದೆ. ಹಲಹಲವು ಬಣ್ಣಗಳಲ್ಲಿ “ಸಭ್ಯತೆ”ಗೆ ಸೆಡ್ಡುಹೊಡೆಯುವಂತಹ ಫ್ಲೋಟಿಲ್ಲಾಗಳು ಈ ಜಾತ್ರೆಯಲ್ಲಿ ತೇಲಿಬರುತ್ತದೆ. ಗೇ/ಲೆಸ್ಬಿಯನ್ ಅಲ್ಲದವರು ಕೂಡ ಹುಚ್ಚೆಬ್ಬಿಸುವಂತೆ ನಗುತ್ತಾ, ಚೀರುತ್ತಾ, ಕೈತಟ್ಟುತ್ತಾರೆ. “ನಿಮ್ಮ ಲೈಂಗಿಕತೆ ಏನೇ ಆಗಿರಲಿ ನಿಮ್ಮ ಜತೆಗೆ ನಾವಿದ್ದೇವೆ” ಎಂಬಂತೆ ಸಾವಿರಾರು ಕೊರಳುಗಳು ಅರಚುತ್ತವೆ. ನೈಸರ್ಗಿಕವಾದ ಲೈಂಗಿಕತೆಯ ಬಗ್ಗೆ ಅಸಹಜ ಅಳುಕನ್ನು ಗೆಲ್ಲುವುದಕ್ಕೆ ಇವೆಲ್ಲಾ ಬೇಕಾಗಿರುತ್ತದೆ. ಎಲೆಗಳೆಲ್ಲಾ ಹಸುರಾಗಿದ್ದರೂ ಹೂವುಗಳು ಮಾತ್ರ ಹಲವು ಬಣ್ಣಗಳು ಎಂದು ಇವೆಲ್ಲಾ ನೆನಪಿಸುವಂತೆ ಮಾಡುತ್ತದೆ.
ಮನುಷ್ಯನ ಆದಿಮ ಶಕ್ತಿಯಾದ ಈ ಲೈಂಗಿಕತೆ ಯಾಕಿಷ್ಟು ಜನರ ತಲೆ ಕೆಡಿಸುತ್ತದೆ ಎಂದು ಹುಬ್ಬೇರುಸುತ್ತಾರಲ್ಲ ಅವರನ್ನು ತುಸು ನೋಡಿ. ಅವರಲ್ಲಿ ಯಾರೂ ಸಲಿಂಗಕಾಮಿಗಳಲ್ಲ. ಲೋಕ “ಇರುವುದೇ ಹೀಗೆ” ಎಂಬ ಅಂತವರ ನಿಲುವು “ಇರಬೇಕಾದ್ದೇ ಹೀಗೆ” ಎಂಬ ಗರ್ವಕ್ಕೆ ತಿರುಗಿ ಉಪಟಳವಾಗಿ ಪರಿಣಮಿಸುತ್ತದೆ. ಮರಕ್ಕೆ ಇಲ್ಲೇ ಟಿಸಿಲಿರಬೇಕು ಎಂದು ತಾಕೀತು ಮಾಡಿದಂತಿದು. ಅಂತ ಮನಸ್ಥಿತಿಯಲ್ಲಿ ಮರ ತನಗೆ ಬೇಕಾದಂತೆ ಟಿಸಿಲೊಡೆದಾಗ ಆಶ್ಚರ್ಯಪಡುವ, ಖುಷಿಪಡುವ ತೇವದ ಭಾವವೆಲ್ಲಾ ಅಸಹನೆಗೆ, ಸಿಟ್ಟಿಗೆ ಆಹುತಿಯಾಗಿರುತ್ತದೆ.
ಹಳೆಯ ಒಂದು ನೆನಪು: ಯಾವುದೋ ಡ್ಯಾನ್ಸ್ ಪ್ರೋಗ್ರಾಮಿಗೆ ನಾನೊಬ್ಬನೇ ಹೋಗಿದ್ದೆ. ಇಂಟರ್ವೆಲ್ಲಿನಲ್ಲಿ ಆಸ್ಟ್ರೇಲಿಯದವನೊಬ್ಬ ಬಂದು ತನ್ನ ಹೆಸರು ರಿಚರ್ಡ್ ಎಂದು ಪರಿಚಯಿಸಿಕೊಂಡ. ಎತ್ತರಕ್ಕೆ ಹೊಂಬಣ್ಣದ ಕೂದಲಿನ ರಿಚರ್ಡ್ ನನ್ನ ಜತೆ ನಗುತ್ತಾ ಮಾತಿಗಿಳಿದ. ಅವನ ಜತೆ ಇನ್ನಿಬ್ಬರು ಇಂಡಿಯನ್ನರು ಬಂದಿದ್ದರು. ಅವರೂ ಮಾತಿಗೆ ಸೇರಿಕೊಂಡರು. ಒಬ್ಬ ಹೈದರಾಬಾದಿನವನು ಮತ್ತೊಬ್ಬ ಮುಂಬೈನವನು. ಪ್ರೋಗ್ರಾಮಿನ ನಂತರ ಕಾಫಿ ಕುಡಿಯೋಣ ಎಂದು ಪಕ್ಕದ ಕಾಫಿಯಂಗಡಿಗೆ ಹೋದೆವು. ಹರಟೆ ಹೊಡೆಯುತ್ತಾ ಕಾಫಿ ಕುಡಿಯುತ್ತಾ ಒಬ್ಬರನ್ನೊಬ್ಬರು ನೋಡಿಕೊಂಡು ಕಣ್ಣಲ್ಲೇ ನಗುತ್ತಿದ್ದರು. ಹೊಸಪ್ರೇಮಿಗಳು ಮಾತಾಡಿಕೊಳ್ಳುವಂತೆಯೇ. ಹಲವಾರು ಗೇ ಮಂದಿಯನ್ನು ಕೆಲಸದಲ್ಲಿ, ಅಲ್ಲಿ ಇಲ್ಲಿ ಭೇಟಿಯಾಗಿದ್ದ ನನಗೆ ಅದೇನು ವಿಶೇಷವೆನಿಸಲಿಲ್ಲ. ನಂತರ ರಿಚರ್ಡ್ ನಾವು ಮೂವರೂ ಗೇ ಎಂದ. ಹೌದಾ ಎಂದೆ. ಅವರು ಅಚ್ಚರಿಯಾಗಲಿಲ್ಲವೆ, ಭಯವಾಗಲಿಲ್ಲವೆ ಎಂದೆಲ್ಲಾ ಕೇಳಿದರು. ಇಲ್ಲ ಎಂದೆ. ನಿಜ ಹೇಳಬೇಕೆಂದರೆ ಅವರು ಮೊದಲು ಬಂದು ಮಾತಾಡಿಸಿದಾಗಲೇ ಅದರ ಅರಿವಾಗಿತ್ತು. ಇಂಡಿಯದಲ್ಲಿ ಸಲಿಂಗಕಾಮಿಗಳ ದುರವಸ್ಥೆಯ ಬಗ್ಗೆ ಆತಂಕದಿಂದ ಮಾತಾಡಿದರು. ರಿಚರ್ಡ್ ಕೂಡ ಬೆಂಗಳೂರಿಗೆ ಬಂದಿದ್ದನಂತೆ. “ಇಂಡಿಯದಲ್ಲಿ ನಿಮ್ಮ ಹೆಂಗಸರಷ್ಟೇ ಗಂಡಸರೂ ಚೆಂದ ಗೊತ್ತ?” ಎಂದ. ಉಳಿದಿಬ್ಬರು ನಾಚಿದಂತೆ ಕಂಡಿತು. ಕಡೆಗೆ ತಮ್ಮ ಕಾರಿನಲ್ಲಿ ಮನೆಗೆ ಬಿಡುತ್ತೇವೆ ಎಂದು ಕರಕೊಂಡು ಹೋಗಿ ಮನೆ ತಲುಪಿಸಿದರು. ಇಳಿಯುವಾಗ ರಿಚರ್ಡ್ – “ನೀನೂ ಸುಂದರವಾಗಿದ್ದೀಯ, ಒಂದು ಮುತ್ತು ಕೊಡುತ್ತೀಯ?” ಎಂದು ಕೇಳಿದ. ನಾನು ನಕ್ಕು ದಯವಿಟ್ಟು ನಿನ್ನತನವನ್ನು ನನ್ನ ಮೇಲೆ ಹೇರಬೇಡ ಎಂದೆ. ಹೋಗಿ ಬಾ ಎಂದು ಕೈಕುಲುಕಿ ಕಳಿಸಿದರು.
ತುಂಬಾ ವರ್ಷದ ಹಿಂದಿನ ಈ ನೆನಪು ಇದನ್ನು ಬರೆಯುವಾಗ ಧುತ್ತನೆ ಎದುರಾಯಿತು. ಸಲಿಂಗಕಾಮಿಗಳನ್ನು ಕಂಡರೆ ಹಲವರಿಗೆ ಅಸಹನೆ ಯಾಕೆ ಎಂದು ಕೇಳಿಕೊಂಡೆ. ಅಂದು ನನಗೆ ಸವಾಲಾದಂತೆ, ಎಲ್ಲರಿಗೂ ತಮ್ಮತಮ್ಮ ಲೈಂಗಿಕತೆಯನ್ನೇ ಅವರು ಸವಾಲಾಗಿಸುತ್ತಾರೆ. ಲೈಂಗಿಕತೆಯ ಸುತ್ತ ಇರುವ ನಾಚಿಕೆ, ರಮ್ಯತೆ ಎಲ್ಲವೂ ಉದುರಿಹೋಗಿ ನಮ್ಮನ್ನು ನಗ್ನ ಮಾಡುತ್ತಾರೆ. ಕಡೆಗೆ ಕಾಮದ ಸುತ್ತ ನಾವು ಬಿಗಿದಿಕೊಂಡಿರುವ ಪಾವಿತ್ಯ್ರವೂ ಪ್ರಶ್ನಾರ್ಹವಾಗುವಂತೆ ಮಾಡುತ್ತಾರೆ. ಹೆಂಗಸರಿಗೆ ಕಾಂಟ್ರಸೆಪ್ಟಿವ್ ಪಿಲ್ಸ್ ಬಂದದ್ದು ನೆನಪಿಸಿಕೊಳ್ಳಿ-ಅದು ಹೆಣ್ಣಿನ ಲೈಂಗಿಕ ಬದುಕಿಗೆ ಕೊಟ್ಟ ಬಿಡುಗಡೆಯನ್ನು ನೆನಪಿಸಿಕೊಳ್ಳಿ. ಸಮಾಜದ ನೈತಿಕ ಹೊಣೆ “ಹೊತ್ತವರು” ಕಿಡಿಕಾರಿದ್ದನ್ನು ನೆನಪಿಸಿಕೊಳ್ಳಿ. ಈಗ ಲೈಂಗಿಕ ಪಾವಿತ್ಯ್ರ ಪ್ರಶ್ನೆಗೀಡಾಗುವುದರ ಹಿಂದಿನ “ಕರಾಳತೆ” ನಿಮಗೆ ಅರಿವಾಗಬಹುದು.
ಇನ್ನೊಂದು ಕಡೆಯಿಂದ ನೋಡಿದರೆ : ಇವರು ಜೀವಿಗಳಲ್ಲಿ ಎಂದಿಗೂ ಅಲ್ಪಸಂಖ್ಯಾತರೇ ಆಗಿ ಉಳಿಯುವಂತಹವರು. ಆದರೆ ವಿಕಲತೆಯಿರದೆ ನಮ್ಮ ನಿಮ್ಮಂತೇ ವಿಕೃತವಲ್ಲದ ಸಹಜಕಾಮಿಗಳು. ಇವರನ್ನು ಇಲ್ಲವಾಗಿಸಲು ಪಣತೊಟ್ಟವರು, ಇವರಿಗೇನೋ ಖಾಯಿಲೆ ಎಂಬಂತೆ ನೋಡುವವರು, ಧರ್ಮಕ್ಕನುಸಾರ ಅಲ್ಲವೆಂದು ಸಿಟ್ಟಾಗುವವರು – ಎಲ್ಲರ ನಡುವೆ ಇವರು ತಲೆಯೆತ್ತಿ ನಡೆಯಬೇಕು. ಅದಕ್ಕೆ ತಮ್ಮ ತಮ್ಮಲ್ಲೇ ಕೈಬೆಸೆದು ಒಂದಾಗಬೇಕು. ತಮ್ಮ ಉಳಿವಿಗಾಗಿಯೇ ರಾಜಕೀಯವಾಗಿ ಪ್ರಬಲರಾಗಬೇಕು. ತಮ್ಮ ದನಿ ಎಲ್ಲರಿಗೂ ಕೇಳುವಂತೆ ಮಾಡಬೇಕು. ಅದಕ್ಕೆ ಹಾಡು ಕಟ್ಟಬೇಕು, ಸಂಗೀತ ನುಡಿಸಬೇಕು, ಜಾತ್ರೆ ಮಾಡಬೇಕು. ಅಳುಕು ತೊರೆದು ಬದುಕನ್ನು ಅರಳಿಸಿಕೊಳ್ಳಬೇಕು. ಬಣ್ಣ, ಬಟ್ಟೆ, ಲೇಪನದಿಂದ “ಸ್ವಸ್ಥ”ರಿಗೆ ಸೆಡ್ಡುಹೊಡೆದು ಯೋಚನೆಗೀಡು ಮಾಡಬೇಕು. ಸಲಿಂಗಕಾಮಿಗಳಲ್ಲದ ನಮ್ಮಂತವರಿಗೆ, ಗೇ/ಲೆಸ್ಬಿಯನ್ನರ ಲೈಂಗಿಕತೆ ಮಾತ್ರ ಸವಾಲು; ಅವರಿಗೆ ಈ ಕ್ರೂರ ಸಮಾಜದಲ್ಲಿ ತಮ್ಮ ಉಳಿವೇ ದೊಡ್ಡ ಸವಾಲು.
ಈಗಷ್ಟೆ ನಮ್ಮ ಮೈಸವರಿ ಹೋದ ಕಾಮನ ಹಬ್ಬದ ಹೊಸತೊಂದು ಅವತರಣಿಕೆ ಈ ಅಲ್ಪಸಂಖ್ಯಾತರಿಗೆ ಬಿಟ್ಟುಕೊಡಬಹುದಲ್ಲಾ ಎಂದು ಯೋಚಿಸುತ್ತಾ ಕೂರುತ್ತೇನೆ. ಅಥವಾ ಅವರೇ ಅದನ್ನು ಕಸಿದು ತಮ್ಮದಾಗಿಸಿಕೊಂಡರೆ ಮತ್ತೂ ಚಂದವಲ್ಲವೆ?
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.