ಚಕ್ರಮುನಿ ಸೊಪ್ಪಿನ ಗಿಡ ಖರೀದಿಗಿದ್ದದ್ದು ನೋಡಿ ನನ್ನ ಕಣ್ಣರಳಿತು! ಬೆಂಗಳೂರು, ಮೈಸೂರಿನಲ್ಲಿ ಈ ಚಕ್ರಮುನಿ ಎಲೆಗಳನ್ನು ತಿನ್ನುವ ಅಭ್ಯಾಸವಿತ್ತು. ಬ್ರಿಸ್ಬೇನ್ನಿನಲ್ಲಿ ಅಪರೂಪಕ್ಕೆ ವಾರಾಂತ್ಯ ತರಕಾರಿ-ಹಣ್ಣು ಮಾರ್ಕೆಟ್ಟಿನಲ್ಲಿ ವಿಯೆಟ್ನಮೀಸ್ ಮಾರಾಟಗಾರರು ತರುತ್ತಿದ್ದ ಚಕ್ರಮುನಿ ಸೊಪ್ಪನ್ನು ಕಂಡು ಸಂಭ್ರಮಿಸಿದ್ದೆ. ಅದನ್ನು ಕೊಂಡು ಅದರ ಕೊಂಬೆಗಳನ್ನು ನೆಟ್ಟು ಎರಡು ಬಾರಿ ಇದನ್ನು ಬೆಳೆಯಲು ಪ್ರಯತ್ನಿಸಿ ಸೋತಿದ್ದೆ. ಜೆರ್ರಿ ಅವರ ಸ್ವಾವಲಂಬಿ ಕೈತೋಟದಲ್ಲಿ ಚೆನ್ನಾಗಿ ಬೆಳೆದಿದ್ದ ಗಿಡವನ್ನು ನೋಡಿ ಸಂತೋಷವಾಗಿತ್ತು. ಪ್ರದರ್ಶನದಲ್ಲಿ ಮಾರಾಟಕ್ಕಿದ್ದ ಬೇರುಗಳಿದ್ದ ಸಸಿ ಸಿಕ್ಕಿತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಹೋದ ಬಾರಿಯ ‘ಆಸ್ಟ್ರೇಲಿಯಾ ಪತ್ರ’ ದಲ್ಲಿ ಬಜೆಟ್ ಕುರಿತು, ಏರುತ್ತಿರುವ ಬೆಲೆಗಳು, ದಿನನಿತ್ಯದ ಹೊಂದಾಣಿಕೆ, ಸೂರಿಲ್ಲದ ನಿರಾಶ್ರಿತರು ಇತ್ಯಾದಿ ಕುರಿತು ಬರೆಯುತ್ತಿದ್ದಾಗ ಪಿಚ್ಚೆನ್ನಿಸಿತ್ತು. ಓದುಗರಿಗೆ ನೀರಸ ವಿಷಯವೆನ್ನಿಸಿತ್ತೇನೋ! ಈ ಬಾರಿಯ ಪತ್ರದಲ್ಲಿ ವಿಷಯಗಳು ತದ್ವಿರುದ್ಧವಾಗಿವೆ!
ಕಳೆದ ತಿಂಗಳಿನಿಂದಲೂ ರಾಣಿರಾಜ್ಯದ ನಮ್ಮ ಆಗ್ನೇಯ ಭಾಗದ ತೋಟಗಾರಿಕೆ ಭಕ್ತರಲ್ಲಿ ಕಣ್ಣಿಗೆ ಬಡಿಯುವಷ್ಟು ಸಂಚಲನೆಯಿತ್ತು. ಇವರನ್ನು ಹಿರಿ, ಕಿರಿ ತೋಟಗಾರರು ಎನ್ನೋಣ. ಕೆಲವರು ಎಕರೆಗಳಷ್ಟು ಜಮೀನಿದ್ದವರು. ಉಳಿದವರು, ನಗರ ಜೀವನದಲ್ಲಿಯೇ ದೊಡ್ಡ ಜಾಗದಲ್ಲಿ ‘urban farming’ ಮಾಡುವ ಕಿರಿ ತೋಟಗಾರರು. ಇವೆರಡೂ ಗುಂಪಿಗೆ ಸೇರದ ನಮ್ಮಂಥವರು ಮನೆಯಂಗಳದಲ್ಲಿ ಕೈತೋಟ ಮಾಡಿ ಒಂದಷ್ಟು ತರಕಾರಿ ಬೆಳೆದುಕೊಂಡು ಅವಕಾಶ ಸಿಕ್ಕಾಗಲೆಲ್ಲಾ ಹಿರಿ, ಕಿರಿ ತೋಟಗಳ ಹಿರಿಮೆಯನ್ನು ನೋಡಿಕೊಂಡು ಭೇಷ್ ಎನ್ನುವುದು. ಅವರುಗಳು ಅಳವಡಿಸಿಕೊಂಡ ಪದ್ಧತಿಗಳನ್ನು ಕೇಳಿ ತಿಳಿದು ಸಾಧ್ಯವಾದರೆ ನಾವೂ ಬಳಸುವುದು. ಸಾಮಾನ್ಯವಾಗಿ ಈ ಪದ್ಧತಿಗಳು ಮಣ್ಣಿನ ಗುಣಮಟ್ಟವನ್ನು ಉತ್ತಮಪಡಿಸುವುದು, ವಿವಿಧ ಸಾವಯವ ಗೊಬ್ಬರ ವಿಧಾನಗಳು ಮತ್ತು ತರಕಾರಿ, ಹಣ್ಣುಗಳ ಪ್ರಬೇಧಗಳ ಬಗ್ಗೆ ಇರುತ್ತವೆ.
ಏಪ್ರಿಲ್ ತಿಂಗಳಿನಲ್ಲಿ ನಮ್ಮ ರಾಣಿರಾಜ್ಯದ ಆಗ್ನೇಯ ಭಾಗದ ತೋಟಗಾರಿಕೆ ಗುಂಪುಗಳ ಸಾಮಾಜಿಕ ತಾಣಗಳಲ್ಲಿ ಎರಡು ವಿಶೇಷ ಸುದ್ದಿಗಳು ಪ್ರಕಟವಾಗಿದ್ದವು. ಪ್ರಸಿದ್ಧ ಟೆಲಿವಿಷನ್ ಕಾರ್ಯಕ್ರಮವಾದ ‘ಗಾರ್ಡನಿಂಗ್ ಆಸ್ಟ್ರೇಲಿಯಾ’ ದ ಕ್ವೀನ್ಸ್‌ಲ್ಯಾಂಡ್ ಪ್ರತಿನಿಧಿ ಜೆರ್ರಿ ಅವರು ಸಾರ್ವಜನಿಕರು ತಮ್ಮ ಸುಸ್ಥಿರ ಸ್ವಾವಲಂಬಿ ಕೈತೋಟವನ್ನು ನೋಡುವಂತೆ ‘ಓಪನ್ ಗಾರ್ಡನ್’ ದಿನವನ್ನು ಏರ್ಪಡಿಸಿದ್ದರು. ಜೆರ್ರಿ ಅವರು ಬ್ರಿಸ್ಬೇನ್ ನಗರವಾಸಿ. ಮೇ ತಿಂಗಳ ಎರಡನೇ ವಾರಾಂತ್ಯದಲ್ಲಿ ಬರುವ Mothers Day ಸಮಯದ ಎರಡು ದಿನಗಳ ಕಾಲ ‘ಓಪನ್ ಗಾರ್ಡನ್’ ದಿನವನ್ನು ಗೊತ್ತುಪಡಿಸಿದ್ದರು. ಪ್ರದರ್ಶನದ ಜೊತೆ ಜೆರ್ರಿ ಅವರೊಡನೆ ಭೇಟಿ, ಪ್ರದರ್ಶಿಕೆಗಳಲ್ಲಿ ಕಲಿಯುವ ಅವಕಾಶ, ಗಿಡಗಳ ಖರೀದಿ, ಮತ್ತು ಜೆರ್ರಿ ನೇತೃತ್ವದಲ್ಲಿ ನಡೆಯುತ್ತಿರುವ ‘ಬೀಜ ಸಂರಕ್ಷಣಾ’ ಜಾಲದಿಂದ ಬೀಜಗಳ ಖರೀದಿ ಇದ್ದವು. ತಲಾ ಹತ್ತು ಡಾಲರ್ ಕೊಟ್ಟು ನಾವೂ ಕೂಡ ಹೋಗಿದ್ದೆವು. ಹೋಗಿದ್ದು ಎರಡನೇ ದಿನವಾದ್ದರಿಂದ ಎಲ್ಲಾ ಬೀಜಗಳ ಪೊಟ್ಟಣಗಳು ಅದಾಗಲೇ ಮಾರಾಟವಾಗಿದ್ದವು!
ಚಕ್ರಮುನಿ ಸೊಪ್ಪಿನ ಗಿಡ ಖರೀದಿಗಿದ್ದದ್ದು ನೋಡಿ ನನ್ನ ಕಣ್ಣರಳಿತು! ಬೆಂಗಳೂರು, ಮೈಸೂರಿನಲ್ಲಿ ಈ ಚಕ್ರಮುನಿ ಎಲೆಗಳನ್ನು ತಿನ್ನುವ ಅಭ್ಯಾಸವಿತ್ತು. ಬ್ರಿಸ್ಬೇನ್ನಿನಲ್ಲಿ ಅಪರೂಪಕ್ಕೆ ವಾರಾಂತ್ಯ ತರಕಾರಿ-ಹಣ್ಣು ಮಾರ್ಕೆಟ್ಟಿನಲ್ಲಿ ವಿಯೆಟ್ನಮೀಸ್ ಮಾರಾಟಗಾರರು ತರುತ್ತಿದ್ದ ಚಕ್ರಮುನಿ ಸೊಪ್ಪನ್ನು ಕಂಡು ಸಂಭ್ರಮಿಸಿದ್ದೆ. ಅದನ್ನು ಕೊಂಡು ಅದರ ಕೊಂಬೆಗಳನ್ನು ನೆಟ್ಟು ಎರಡು ಬಾರಿ ಇದನ್ನು ಬೆಳೆಯಲು ಪ್ರಯತ್ನಿಸಿ ಸೋತಿದ್ದೆ. ಜೆರ್ರಿ ಅವರ ಸ್ವಾವಲಂಬಿ ಕೈತೋಟದಲ್ಲಿ ಚೆನ್ನಾಗಿ ಬೆಳೆದಿದ್ದ ಗಿಡವನ್ನು ನೋಡಿ ಸಂತೋಷವಾಗಿತ್ತು. ಪ್ರದರ್ಶನದಲ್ಲಿ ಮಾರಾಟಕ್ಕಿದ್ದ ಬೇರುಗಳಿದ್ದ ಸಸಿ ಸಿಕ್ಕಿತು. ಇದರ ಜೊತೆಗೆ ರಾಣಿರಾಜ್ಯದ ಆಗ್ನೇಯ ಭಾಗದಲ್ಲಿ ಮಾತ್ರ ಬೆಳೆಯುವ ಅಪರೂಪದ Jaboticaba ಹಣ್ಣಿನ ಸಸಿಯನ್ನು ಕೂಡ ಖರೀದಿಸಿ ಮುಖಕ್ಕೆ ಮುಗುಳ್ನಗೆಯನ್ನು ಏರಿಸಿಕೊಂಡೆ. ಅಂದಿನ ಭಾನುವಾರ ಮೇ 14 ರಂದು ತಮ್ಮಿಬ್ಬರ ಹುಟ್ಟುಹಬ್ಬದ ಜೊತೆಜೊತೆಗೇ ಬಂದಿದ್ದ ತಾಯಿಹಬ್ಬ-Mothers Day ಗೆಂದು ಬೆಳಗ್ಗೆ ನನ್ನ ಮಕ್ಕಳು ಪ್ರೀತಿಯಿಂದ ಅಮ್ಮನಿಗೆ ಇಷ್ಟವೆಂದು ಹೂ ಗಿಡಗಳನ್ನು ಕೊಟ್ಟು ಅಪ್ಪಿಕೊಂಡಿದ್ದರು. ‘ಓಪನ್ ಗಾರ್ಡನ್’ ಪ್ರದರ್ಶನದಲ್ಲಿ ನಾನು ಖರೀದಿಸಿದ ಗಿಡಗಳನ್ನು ಕಂಡು ‘ಮೋರ್ ಪ್ಲಾಂಟ್ಸ್!’ ಎಂದು ಉದ್ಗರಿಸಿದ್ದರು.
ಕೋವಿಡ್-19 ರ ಕಾಲದಲ್ಲಿ ರದ್ದಾಗಿದ್ದ ಈ ಪ್ರದರ್ಶನವು ಈ ವರ್ಷ ನಡೆಯುವುದು ಎಂದು ಕೇಳಿಯೇ ನೂರಾರು ತೋಟಗಾರರು ಹರ್ಷಿಸಿದ್ದರು. ಅಂತೆಯೇ, ನೂರಾರು ಕಿಲೋಮೀಟರ್ ದೂರದ ಸ್ಥಳಗಳಿಂದ ಪ್ರಯಾಣಿಸಿದ್ದರು. ಜೆರ್ರಿ ಕುಟುಂಬವು ನಗರಜೀವನದಲ್ಲಿ ವಾಸಿಸುತ್ತಾ ಕೇವಲ ನಾನೂರು ಚದರ ಮೀಟರುಗಳಲ್ಲಿ (ಮನೆ ಕಟ್ಟಡವನ್ನು ಹೊರತುಪಡಿಸಿ) ಸುಸ್ಥಿರ ಸ್ವಾವಲಂಬಿ edibles ಕೈತೋಟವನ್ನು ಮಾಡಿದ್ದು ತಾವು ಬೆಳೆಯುವ ತರಕಾರಿ, ಹಣ್ಣು, ಸೊಪ್ಪು, ಹರ್ಬ್ಸ್ ಮುಂತಾದುವಲ್ಲದೆ ಕೆಲ ಅಪರೂಪದ ತಳಿಗಳ ಸಂರಕ್ಷಣಾ ಕೆಲಸವನ್ನೂ ಕುರಿತು ಹಂಚಿಕೊಂಡರು. ಜೆರ್ರಿ ತಾವು ತೋಟದಲ್ಲಿ ಉತ್ಪಾದನೆಯಾಗುವ ಪ್ರತಿಯೊಂದು ಆಹಾರವನ್ನೂ ತಮ್ಮ ದೈನಂದಿನ ಆಹಾರಕ್ರಮದಲ್ಲಿ ಅಳವಡಿಸಿಕೊಂಡಿದ್ದದ್ದನ್ನು ವಿವರಿಸಿದರು. ತಾವು ಬೆಳೆಯದ ಆಹಾರವನ್ನು ಇತರರಿಂದ ಪಡೆಯಲು ತಮ್ಮಲ್ಲಿರುವ ಹೆಚ್ಚುವರಿ ಬೆಳೆಯನ್ನು ಮತ್ತು ತಾವು ತಯಾರಿಸುವ ಜಾಮ್, ಚಟ್ನಿ ಇತ್ಯಾದಿಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಇಂತಹ edibles exchange ನಗರದಾದ್ಯಂತ ಇವೆ.
ಎರಡನೇ ವಿಶೇಷ ಸುದ್ದಿಯೆಂದರೆ ಮೇ ತಿಂಗಳ ಮೂರನೇ ವಾರಾಂತ್ಯ Samford Edible Garden Trail ನಡೆಯಿತು. ಎರಡು ದಿನಗಳ ಕಾಲ ನಡೆದ ಈ ಖಾಸಗಿ ತೋಟಗಳ ಪ್ರದರ್ಶನಗಳಿಗೆ ನೂರಾರು ಮಂದಿ ದುಬಾರಿ ಟಿಕೆಟ್ ದರ ತೆತ್ತು ಬಂದಿದ್ದರೆಂದು ನಮ್ಮ ಗಾರ್ಡನಿಂಗ್ ಗುಂಪಿನ ಸದಸ್ಯರು ಹೇಳಿದರು. ನಾನು ಹೋಗಲಾಗಲಿಲ್ಲ. ಈ Trail ವಿಶೇಷವೆಂದರೆ Samford ಎನ್ನುವ ಊರಿನ ಸುತ್ತಮುತ್ತ ವಾಸಿಸುವ ಹಿರಿ, ಕಿರಿ ಸಾವಯವ ಮತ್ತು permaculture ತೋಟಗಾರರು ತಮ್ಮ ತೋಟಗಳನ್ನು ಸಾರ್ವಜನಿಕರಿಗಾಗಿ ತೆರೆದಿಡುತ್ತಾರೆ. ಕೆಲವರು ತಾವು ಅನುಸರಿಸುವ ವಿಧಾನಗಳನ್ನು ಹಂಚಿಕೊಳ್ಳುತ್ತಾರೆ. ನಮ್ಮ ಸದಸ್ಯರು ಇಂತಹ ಕೆಲ ವಿಧಾನಗಳ ಮಾಹಿತಿ ಮತ್ತು ತಾವು ತೆಗೆದ ಚಿತ್ರಗಳನ್ನು ಗುಂಪಿನ ಫೇಸ್ಬುಕ್ ಪೇಜ್‌ನಲ್ಲಿ ಹಂಚಿಕೊಂಡದ್ದು ಉಪಯೋಗವಾಗಿತ್ತು.
ಇದೇ Edible Garden Trail ಸಂದರ್ಭದಲ್ಲಿ ಕೆಲವರು ತಾವು ಅಭಿಮಾನಿಸುವ ಕೋಸ್ಟಾ ಅವರನ್ನು ಮುಖತಃ ಭೇಟಿಯಾಗುವ ಅದೃಷ್ಟ ಪಡೆದು ಹರ್ಷಿಸಿದರು. Costa ಅವರು ‘ಗಾರ್ಡನಿಂಗ್ ಆಸ್ಟ್ರೇಲಿಯಾ’ ಟೀವಿ ಕಾರ್ಯಕ್ರಮದ ಮುಖ್ಯಸ್ಥ ಮತ್ತು ಅದರ ಮುಖವಾಣಿ ಕೂಡ. ಅವರ ಚೈತನ್ಯ ಮತ್ತು ಹುರುಪುಗಳು ಎಲ್ಲರಲ್ಲೂ ತೋಟಗಾರಿಕೆ ಬಗ್ಗೆ ಆಸಕ್ತಿ ಮೂಡಿಸುವಂತಿವೆ. ನಮ್ಮ ಸದಸ್ಯರೊಬ್ಬರು ನನಗೆ Trail Guide ಪ್ರತಿಯನ್ನು ಕೊಟ್ಟು Costa ರನ್ನು ನೋಡಿ ಮಾತನಾಡಿಸಿದಾಗ ಹೇಗೆ ತಮ್ಮ ಗಂಡನ ಮುಖವರಳಿತು, ದಿನಪೂರ್ತಿ ಆ ಮುಖ ಹೀಗೆಯೇ ಇದ್ದದ್ದನ್ನ ಹೇಳಿಕೊಂಡು ಹರ್ಷಿಸಿದರು.
ಇನ್ನು ಈ ಪತ್ರದಲ್ಲಿ ನಮ್ಮ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಭಾರತೀಯ- ಆಸ್ಟ್ರೇಲಿಯನ್ನರಲ್ಲಿ ಇರುವ ಆರಾಧನಾ ಭಾವನೆಯ ಕುರಿತು ಹೇಳದಿದ್ದರೆ ಹೇಗೆ? ಮೋದಿ ಅವರು 2014ರ ಭೇಟಿಯ ನಂತರ ಈ ವರ್ಷ ಆಸ್ಟ್ರೇಲಿಯಾಕ್ಕೆ ಬಂದರು. ಕಳೆದ ಮಂಗಳವಾರ ಮೇ 23ರಂದು ಭಾರತದ ಪ್ರಧಾನಮಂತ್ರಿ ಮೋದಿ ಅವರು ಆಸ್ಟ್ರೇಲಿಯಾಕ್ಕೆ ಆಗಮನಿಸಿದಾಗ ಅನೇಕ ಸಾವಿರ ಮಂದಿ ಉಘೇ ಉಘೇ ಎಂದಿದ್ದರು. ಏಪ್ರಿಲ್ ತಿಂಗಳಿನಲ್ಲೇ ಮೋದಿ ಅವರು ಸಿಡ್ನಿ ನಗರದಲ್ಲಿ ನಡೆಯಲಿದ್ದ ಗುರುತರವಾದ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಖಚಿತವಾಗಿತ್ತು. ಅದರಲ್ಲಿ ಭಾಗವಹಿಸಲು ಇಚ್ಚಿಸಿದ ಭಾರತೀಯ ಮೂಲದವರಿಗೆಂದು ಮೆಲ್ಬೋರ್ನ್ ಮತ್ತು ಬ್ರಿಸ್ಬೇನ್ ನಗರಗಳಿಂದ ವಿಶೇಷ ಬಸ್ ಏರ್ಪಾಡಾಗಿತ್ತು. ಮಂಗಳವಾರ ಸಿಡ್ನಿ ನಗರದ ಬೃಹತ್ ಸ್ಟೇಡಿಯಂ ತಲೆಯ ಮೇಲೆ ನಿರ್ಮಲ ನೀಲಾಕಾಶದಲ್ಲಿ Welcome Modi ಎನ್ನುವ ಸ್ವಾಗತ ಸಂದೇಶವು ಬರೆದಿತ್ತು. ಸಂಜೆ ಅಲ್ಲಿ ಸೇರಿದ್ದ ಇಪ್ಪತ್ತು ಸಾವಿರಕ್ಕೂ ಹೆಚ್ಚಿನವರು ತಮ್ಮ ನೆಚ್ಚಿನ ಭಾರತೀಯ ವಿಶ್ವನಾಯಕ ಹಿಂದಿ ಭಾಷೆಯಲ್ಲಿ ಉಚ್ಚರಿಸಿದ ಪ್ರತಿವಾಕ್ಯವನ್ನೂ ಸವಿದು ಭೇಷ್ ಎಂದರು. ಈ ಪರಿಯ ಆರಾಧನೆಯನ್ನು ಸ್ವತಃ ಕಣ್ಣಾರೆ ಕಂಡು ಕೇಳಿದ ಆಸ್ಟ್ರೇಲಿಯನ್ ಪ್ರಧಾನಮಂತ್ರಿ ಆಂಟೋನಿ ಆಲ್ಬಾನೀಸಿ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಪ್ರಧಾನಮಂತ್ರಿ ಮೋದಿಗೆ ಇರುವ ‘ರಾಕ್ ಸ್ಟಾರ್’ ಇಮೇಜ್ ಕುರಿತು ಪ್ರಸ್ತಾಪಿಸುವುದನ್ನು ಮರೆಯಲಿಲ್ಲ.
ಅವರು ‘ಪ್ರೈಮ್ ಮಿನಿಸ್ಟರ್ ಮೋದಿ ಈಸ್ ದಿ ಬಾಸ್’ ಎಂದಾಗ ವಿಶ್ವಮಟ್ಟದಲ್ಲಿ ಭಾರತದ ನಾಯಕತ್ವವು ರಾರಾಜಿಸುತ್ತಿರುವುದು ಸ್ಪಷ್ಟವಾಗಿತ್ತು. ನಾನು ಮಾಧ್ಯಮ ಸುದ್ದಿಗಳಲ್ಲಿ ಕಂಡಂತೆ ಅಂದು ಇಡೀ ವಾತಾವರಣದಲ್ಲಿ ಎಂದಿನ ಭಾರತೀಯ ಸಂಸ್ಕೃತಿ, ಹಬ್ಬದ ವಾತಾವರಣವಿತ್ತು. ಮೋದಿಯವರು ಬ್ರಿಸ್ಬೇನ್ ನಗರದಲ್ಲಿ ಪೂರ್ಣಪ್ರಮಾಣದ ಭಾರತೀಯ ರಾಯಭಾರ ಕಚೇರಿಯನ್ನು ತೆರೆಯುವುದಾಗಿ ಘೋಷಿಸಿದಾಗ ನಮ್ಮ ಬ್ರಿಸ್ಬೇನ್ ಮಂದಿಗೆ ಬಿಂಕ ಬಂದಿತ್ತು. ಅತ್ತ ಆಲ್ಬಾನೀಸಿ ಅವರು ಬೆಂಗಳೂರಿನಲ್ಲಿ ಆಸ್ಟ್ರೇಲಿಯನ್ ರಾಯಭಾರ ಕಚೇರಿಯನ್ನು ಸ್ಥಾಪಿಸುವುದಾಗಿ ಹೇಳಿದಾಗ ಕನ್ನಡಿಗರ ನೆಮ್ಮದಿಯ ಉಸಿರು ಜೋರಾಗಿಯೇ ಕೇಳಿಸಿತ್ತು. ಎರಡೂ ದೇಶಗಳ ಬಾಂಧವ್ಯವು ಬಲಪಡುವುದು ಗೋಚರಿಸಿತ್ತು.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.