ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಸಹ್ಯಾದ್ರಿ ನಾಗರಾಜ್ ಬರೆದ ದಿನದ ಕವಿತೆ.
ಪಿ.ಲಂಕೇಶರಿಗೆ
ಮತ್ತದೇ ಅಮೃತಾಂಬುಧಿಯನ್ನು
ಹುಡುಕುತ್ತಿದ್ದೇನೆ,
ಜೊತೆಗೆ ನಿಮ್ಮನ್ನೂ!
ವೀರಾವೇಶ, ಮಾರಾಮಾರಿಗಳಿಲ್ಲ
ಇದ್ದರೂ ಕೆರೆಯಿಲ್ಲ-
ಇದ್ದಲ್ಲಿ ಸಂಪಿಗೆಯ ವನವಿರಲಿಲ್ಲ!
ದುಡುದುಡು ನುಡಿವ ಶ್ಯಾಮಲೆ
ಮಿಡಿವ ತಿಪ್ಪಣ್ಣನಿಲ್ಲ!
‘ಥತ್ ಇಂಥವೂ ಒಂದೂರೇ’
ಅಂತ ಜಾಡಿಸಿ
ನಮ್ಮೂರ ಕೆರೆದಿನ್ನೆಯಲಿ
ಸಿಗರೇಟು ಸುಡುತ್ತಾ
ಕುಂತಿದ್ದೇನೆ, ಲಂಕೇಶರೇ…..
ಸ್ತ್ರೀವಾದಿಗಳೆಲ್ಲಾ ಸೇರಿ
ಶ್ಯಾಮಲೆಗೆ ಮರುಮದುವೆ
ಮಾಡುತ್ತಿದ್ದಾರಂತೆ
ಹೇಳಿ, ಏನಂತೀರಿ….????
ನಮ್ಮೂರಿನ ಗೋಮಾಳ ಹರಾಜಿಗಿದೆ
ಅಗೋ…. ಕೆಂಪು ನೆಲದ ಅಷ್ಟಗಲಕ್ಕೆ
ಹಸುರು ಹಾಸಿದ್ದ ನಮ್ಮವ್ವ
ಬಿತ್ತಿದ್ದ ನಮ್ಮಪ್ಪ
ಗೋಣು ಬಗ್ಗಿಸಿ ಕಣ್ಣಗಲಿಸಿ ಕುಂತವ್ರೆ
ಅವರಿಬ್ಬರ ಆಶೆಗಳು ಹರಾಜಿಗಿವೆ..?
ಬಸಿರುಗಟ್ಟಿದ ಮಾಡು
ಮಳೆ ಸುರಿಸಿ ಫಸಲಾಗಿ
ಕೈಗೆ ಮುತ್ತುಗದ ಹೂವಡರಿ
ರಾಶಿ ಪೂಜುವ ಹೊತ್ತಿಗೆ ಸರಿಯಾಗಿ
ನಮ್ಮೂರಿನ ಗೋಮಾಳ ಹರಾಜಿಗಿದೆ.
ದೊಡ್ಡಕೇರಿಯ ಜನರ
ಹರಿಗೊಂಡ ಮೀಸೆ-ಮಾಂಸಗಳೆದುರು
ನೆಣ ಕರಗಿ ನಡು ತೇದ
ಮಾಸು ಬಟ್ಟೆಯ ಮಂದಿಯ
ಬೆವರು ಮಾರಾಟಕ್ಕಿದೆ..??
‘ನಿಮ್ಮ್ ಮನೆ ಹಾಳಾಗಾ….’
ಸಿಟ್ಟು ಕೆಡಹುವ ಹುಡುಗಿಯರ ಲಟಿಕೆ ಸದ್ದು.
ಬೈಗಿನತನಕ ಹೊಲ ಗೆಯ್ಯುವ
ಗಟ್ಟಗಿತ್ತಿಯರಿಗೆ
ನಮ್ಮಂಥ ನಪುಂಸಕರು ಹುಟ್ಟಬಾರದಿತ್ತು;
ನಮ್ಮೂರಿನ ಗೋಮಾಳ ಹರಾಜಿಗಿದೆ.
ಹೊಲದ ರಾಗಿ ಬಣವೆಯ ಹಿಂದೆ
ಕೈಕಟ್ಟಿ ನಿಂತ ಮುತ್ತುಗದ ಮರಗಳಿಗೆ
ನಾಲ್ಕೈದು ದಿನದಲ್ಲೇ ಕೊಡಲಿ ಪೆಟ್ಟು.
ಹುಟ್ಟಲೇಬಾರದಿತ್ತು……
ಅಂದುಕೊಳ್ಳುವುದಿಲ್ಲ.
ಕ್ಷಮಿಸಿ,
ನಮ್ಮೆದೆಯ ಬಿಕ್ಕುಗಳು ಬಿಕರಿಗಿಲ್ಲ.