ಸಂವಿಧಾನದ ರಚನೆಯಾಗಿ ೧೨೨ ವರ್ಷಗಳಾದರೂ ಈ ನೆಲದ ಮೂಲವಾಸಿಗಳು ದೇಶದ ಸಂವಿಧಾನದಲ್ಲಿ ಸೇರಿಲ್ಲ. ಅಂದರೆ ಸಂವಿಧಾನದ ಪ್ರಕಾರ ಅವರಿಗೆ ಅಸ್ಮಿತೆಯೂ ಇಲ್ಲ. ಅವರಿಗೆ ಸೇರಿದ ಎಲ್ಲಾ ವಿಷಯಗಳನ್ನೂ ನಿರ್ಧರಿಸುವುದು ಕೇಂದ್ರ ಸರಕಾರಕ್ಕೆ ಸೇರಿದ್ದು. ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಈ ಬಿಟ್ಟುಬಿಡುವಿಕೆಯನ್ನು ಅಥವಾ ತಮ್ಮನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಬಹಳ ವರ್ಷಗಳಿಂದ ‘ಈ ಪರಿಸ್ಥಿತಿ ಬದಲಾಗಬೇಕು, ತಮ್ಮನ್ನು ಸಂವಿಧಾನದಲ್ಲಿ ಈ ದೇಶದ ಮೂಲಜನರೆಂದು ಗುರುತಿಸಬೇಕು. ತಮ್ಮ ಅಸ್ಮಿತೆಯನ್ನು ಗೌರವಿಸಬೇಕು’ ಎಂದು ಪ್ರಯತ್ನಿಸುತ್ತಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಕಡೆಗೂ ಮತಚಲಾವಣೆ ಆರಂಭವಾಗಿದೆ.
ಇಪ್ಪತ್ತೊಂದನೆ ಶತಮಾನದ ಕಾಲುಭಾಗ ಇನ್ನೇನು ಕಳೆಯುತ್ತಿರುವಾಗ ಆಸ್ಟ್ರೇಲಿಯಾವು ಮತ್ತೊಂದು ಐತಿಹಾಸಿಕ ಬದಲಾವಣೆಯ ಹೊಸ್ತಿಲಲ್ಲಿ ನಿಂತಿದೆ. ಆಸ್ಟ್ರೇಲಿಯನ್ನರು ಹೊಸ್ತಿಲನ್ನು ದಾಟಿ ಒಳಹೊಕ್ಕು ಮನೆ-ಮನಗಳನ್ನು ಬೆಳೆಗುತ್ತಾರೋ ಇಲ್ಲವೇ ಹೊಸ್ತಿಲಿನ ಆಚೆಬದಿಯೇ ನಿಂತುಬಿಟ್ಟು ಆಳವಾಗಿ ಬೇರೂರಿರುವ ಗೋಡೆಗಳನ್ನು ಹಾಗೆಯೇ ಸವರುತ್ತಾ ಇದ್ದುಬಿಡುತ್ತಾರೋ ಎಂಬುದನ್ನು ನಿರ್ಧರಿಸುವ ದಿನಾಂಕ ಬರುತ್ತಿದೆ.
ಅಕ್ಟೋಬರ್ ಹದಿನಾಲ್ಕು, ಮುಂದಿನ ಶನಿವಾರ, ದಾಪುಗಾಲಿಡುತ್ತಾ ಬರುತ್ತಿದೆ. ಅಂದು ಆಸ್ಟ್ರೇಲಿಯನ್ ಪ್ರಜೆಗಳು ದೇಶದ ಮೂಲಜರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರನ್ನು ಸಂವಿಧಾನದಲ್ಲಿ ಸೇರಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ಕುರಿತು ತಮ್ಮ ಮತವನ್ನು ಚಲಾಯಿಸಲಿದ್ದಾರೆ. ಇದಕ್ಕೆ ಇರುವ ಹೆಸರು ‘ದಿ ವಾಯ್ಸ್ ರೆಫೆರೆಂಡಮ್ ೨೦೨೩’ – (The Voice Referendum 2023 ಅಥವಾ Voice to the Parliament). ಇದು ಬೇರೆಲ್ಲಾ ಮತದಾನ ವಿಷಯಗಳಂತಿಲ್ಲ. ನಮ್ಮ ಮತವನ್ನು ಯಾರಿಗೆ ಕೊಡಬೇಕು ಎಂದು ಆರಿಸಿಕೊಳ್ಳಲು ಇಲ್ಲಿ ಅಭ್ಯರ್ಥಿಗಳೇ ಇಲ್ಲ. ಪ್ರಜೆಗಳ ಮುಂದಿರುವುದು ಒಂದೇ ಪ್ರಶ್ನೆ- ‘ದೇಶದ ಮೂಲಜನರನ್ನು (First Peoples of Australia) ಗುರುತಿಸಲು ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರ ಪ್ರಾತಿನಿಧಿಕ ದನಿಯನ್ನು ಸಂವಿಧಾನದಲ್ಲಿ ಸೇರಿಸುವತ್ತ ಅದರಲ್ಲಿ ತಿದ್ದುಪಡಿ ತರಲು ಈ ಪ್ರಸ್ತಾವನೆ. ಇದನ್ನು ನೀವು ಒಪ್ಪುತ್ತೀರಾ?’ ಎಂದು. ಮತ ಚಲಾಯಿಸಲು ಈಗಾಗಲೇ ‘ಮುಂಚಿತ ಮತ’ ಕೇಂದ್ರಗಳು ತೆರೆದಿವೆ.
ಕೇಳಿದ ಒಂದೇಒಂದು ಪ್ರಶ್ನೆಗೆ ಉತ್ತರಿಸಲು ಆಸ್ಟ್ರೇಲಿಯನ್ನರು ಹೌದು ಅಥವಾ ಇಲ್ಲ (YES ವೋಟ್ ಅಥವಾ NO ವೋಟ್) ಎನ್ನುವ ಮತವನ್ನು ಹಾಕಬೇಕು. ಜನರಾಯ್ಕೆಯಂತೆ YES ಮತಗಳು ಬಂದರೆ ಸಂವಿಧಾನಕ್ಕೆ ತಿದ್ದುಪಡಿ (amendment) ತರಬಹುದು. ಆಗ ದೇಶದ ಸಂಸತ್ತಿನಲ್ಲಿ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನಪ್ರತಿನಿಧಿಗಳ ಒಂದು ಸಮಿತಿಯ ರಚನೆಯಾಗುತ್ತದೆ. ಈ ಸಮಿತಿಯು ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರಿಗೆ ಸೇರಿದ ವಿಷಯಗಳ ಕುರಿತು ಕೇಂದ್ರ ಸರಕಾರಕ್ಕೆ ಸಲಹೆ ಸೂಚನೆಗಳನ್ನು ಕೊಡುತ್ತದೆ. ಇದರಿಂದ ಮೂಲಜನರ ಜೀವನ ಗುಣಮಟ್ಟವು ಸುಧಾರಿಸುತ್ತದೆ ಎನ್ನುವ ಆಶೆಯಿದೆ. ತಮ್ಮ ಜನಪ್ರತಿನಿಧಿಗಳೇ ನೇರವಾಗಿ ಸರ್ಕಾರಕ್ಕೆ ನೀಡುವ ಸಲಹೆಗಳಿಂದ ಸರ್ಕಾರವು ತಮ್ಮ ಜನರ ಪರವಾಗಿ ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗ ರಂಗಗಳಲ್ಲಿ ಸುಧಾರಣೆಗಳನ್ನು ತರಬಹುದು ಎನ್ನುವ ಉದ್ದೇಶವಿದೆ ಈ Voice to the Parliament ವಿಷಯದಲ್ಲಿ. ಒಮ್ಮೆ ಸಂವಿಧಾನದಲ್ಲಿ ಇಂತಹ ತಿದ್ದುಪಡಿಯಾದರೆ ಮುಂದೆ ಯಾವುದೇ ರಾಜಕೀಯ ಪಕ್ಷವು ಅಧಿಕಾರಕ್ಕೆ ಬಂದು ಸರ್ಕಾರವನ್ನು ನಡೆಸಿದರೂ, ಈ ಸಂವಿಧಾನಾತ್ಮಕ ದನಿಗೆ ಚ್ಯುತಿ ಬರುವುದಿಲ್ಲ, ಅದನ್ನು ತೆಗೆದುಹಾಕಲಾಗುವುದಿಲ್ಲ ಎನ್ನುವುದು ಬಹಳ ಮುಖ್ಯ. ಇದರಿಂದ ಸುಮಾರು ೨೪೫ ವರ್ಷಗಳಿಂದ ಬಿಳಿಯರ ವಸಾಹತುಶಾಹಿ ಕಟ್ಟಲೆಗಳು, ನಂತರದ ಅವರ ಆಂಗ್ಲ-ಕೇಂದ್ರಿತ ಸರಕಾರ ಮತ್ತು ಕಾನೂನು, ಕಾರ್ಯನೀತಿಗಳಲ್ಲಿ, ವ್ಯವಸ್ಥೆಯಲ್ಲಿ ಸಣ್ಣದೊಂದು ಬದಲಾವಣೆಗೆ ಅವಕಾಶವಿದೆ.
ಆಸ್ಟ್ರೇಲಿಯಾದಲ್ಲಿ ಸಂವಿಧಾನವು ಹುಟ್ಟಿದ್ದು ಜನವರಿ ೧, ೧೯೦೧ ರಂದು. ಅಲ್ಲಿಯವರೆಗೂ ಇಂಗ್ಲೆಂಡಿನ ಒಡೆತನದಲ್ಲಿದ್ದು ಅದು ವಸಾಹತು ಪ್ರದೇಶವಾಗಿತ್ತು. ಸಂವಿಧಾನಾತ್ಮಕ ಆಡಳಿತವು ಜಾರಿಗೆ ಬಂದಮೇಲೂ ಈಗಲೂ ಬ್ರಿಟನ್ನಿನ ರಾಜ/ರಾಣಿ ಆಸ್ಟ್ರೇಲಿಯಾದ ಮುಖ್ಯಸ್ಥರು, Head of State. ಅವರನ್ನು ಪ್ರತಿನಿಧಿಸುತ್ತಾ, ದೇಶದ ರಾಜಧಾನಿ ಕ್ಯಾನಬೆರಾದಲ್ಲಿ ಗವರ್ನರ್-ಜನೆರಲ್ ಇದ್ದಾರೆ. ಮಿಕ್ಕಂತೆ ಸಂವಿಧಾನಾತ್ಮಕವಾಗಿ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಿದೆ.
ಆದರೆ, ಸಂವಿಧಾನದ ರಚನೆಯಾಗಿ ೧೨೨ ವರ್ಷಗಳಾದರೂ ಈ ನೆಲದ ಮೂಲವಾಸಿಗಳು ದೇಶದ ಸಂವಿಧಾನದಲ್ಲಿ ಸೇರಿಲ್ಲ. ಅಂದರೆ ಸಂವಿಧಾನದ ಪ್ರಕಾರ ಅವರಿಗೆ ಅಸ್ಮಿತೆಯೂ ಇಲ್ಲ. ಅವರಿಗೆ ಸೇರಿದ ಎಲ್ಲಾ ವಿಷಯಗಳನ್ನೂ ನಿರ್ಧರಿಸುವುದು ಕೇಂದ್ರ ಸರಕಾರಕ್ಕೆ ಸೇರಿದ್ದು. ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಈ ಬಿಟ್ಟುಬಿಡುವಿಕೆಯನ್ನು ಅಥವಾ ತಮ್ಮನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಬಹಳ ವರ್ಷಗಳಿಂದ ‘ಈ ಪರಿಸ್ಥಿತಿ ಬದಲಾಗಬೇಕು, ತಮ್ಮನ್ನು ಸಂವಿಧಾನದಲ್ಲಿ ಈ ದೇಶದ ಮೂಲಜನರೆಂದು ಗುರುತಿಸಬೇಕು. ತಮ್ಮ ಅಸ್ಮಿತೆಯನ್ನು ಗೌರವಿಸಬೇಕು’ ಎಂದು ಪ್ರಯತ್ನಿಸುತ್ತಿದ್ದಾರೆ. ಅವರ ಈ ಸಾಂಘಿಕ ದನಿಯನ್ನು ಗುರುತಿಸಲು ಸಾವಿರಾರು ಜನ ವ್ಯಾಪಕವಾಗಿ ಕೆಲಸಮಾಡಿದ ಫಲವಾಗಿ ಸುಮಾರು ೨೫೦ ವಿವಿಧ ಕುಲಗಳ ಜನರು ಸೇರಿ ಒಗ್ಗಟ್ಟಿನಿಂದ ೨೦೧೭ರಲ್ಲಿ ‘ಬನ್ನಿ ಒಟ್ಟಾಗಿ ನಡೆಯೋಣ (Walk Together)’ ಎನ್ನುವ ಸಾಮರಸ್ಯದ ಸಂದೇಶವನ್ನು ಇಡೀ ದೇಶಕ್ಕೆ ಕೊಟ್ಟರು. ಇದಕ್ಕೆ Uluru Statement from the Heart ಎನ್ನುತ್ತಾರೆ. ಇದೊಂದು ಬಹುತ್ವದ, ಶಾಂತಿ ಸಂದೇಶವು. ಮೂಲಜನರ ಮನದಾಳದಿಂದ ಹುಟ್ಟಿದ್ದು. ಅದರಲ್ಲಿ ಯಾವುದೇ ಕಲ್ಮಶದ ಮಾತಿಲ್ಲ, ಒಡಕು ಭಾವನೆಯಿಲ್ಲ. ವಸಾಹತುಶಾಹಿ ಆಡಳಿತದಿಂದಾದ ಮಾರಣಹೋಮ, ಮಕ್ಕಳ ಕದ್ದೊಯ್ಯುವಿಕೆ, ಭಾಷಾಸಂಸ್ಕೃತಿ ನಾಶ, ಎಣೆಯಿಲ್ಲದ ಸಾವುನೋವು, ಬಹುಮಟ್ಟಿಗೆ ನಾಶವಾದ ತಮ್ಮ ಜೀವನದೃಷ್ಟಿಗಳು, ಸಮಷ್ಟಿ ಜೀವನದ ಸಾಂಘಿಕ ವ್ಯವಸ್ಥೆ ಈ ಎಲ್ಲವನ್ನೂ ನುಂಗಿಕೊಂಡು ಅವರು ‘ಬನ್ನಿ, ನಮ್ಮೆಲ್ಲಾ ಭೇದಭಾವಗಳನ್ನು ಹಿಂದಕ್ಕಿಟ್ಟು ಒಗ್ಗಟ್ಟಾಗಿ, ಒಟ್ಟಾಗಿ ಸೇರಿ ಜೊತೆಯಲ್ಲಿ ನಡೆಯೋಣ’, ಎಂದರು. ಅದೆಷ್ಟು ಸುಂದರವಾದ ಮಾತು!
ಈ ಸಮಿತಿಯು ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರಿಗೆ ಸೇರಿದ ವಿಷಯಗಳ ಕುರಿತು ಕೇಂದ್ರ ಸರಕಾರಕ್ಕೆ ಸಲಹೆ ಸೂಚನೆಗಳನ್ನು ಕೊಡುತ್ತದೆ. ಇದರಿಂದ ಮೂಲಜನರ ಜೀವನ ಗುಣಮಟ್ಟವು ಸುಧಾರಿಸುತ್ತದೆ ಎನ್ನುವ ಆಶೆಯಿದೆ. ತಮ್ಮ ಜನಪ್ರತಿನಿಧಿಗಳೇ ನೇರವಾಗಿ ಸರ್ಕಾರಕ್ಕೆ ನೀಡುವ ಸಲಹೆಗಳಿಂದ ಸರ್ಕಾರವು ತಮ್ಮ ಜನರ ಪರವಾಗಿ ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗ ರಂಗಗಳಲ್ಲಿ ಸುಧಾರಣೆಗಳನ್ನು ತರಬಹುದು ಎನ್ನುವ ಉದ್ದೇಶವಿದೆ ಈ Voice to the Parliament ವಿಷಯದಲ್ಲಿ.
ಈ ಗುರುತರ ಸಂದೇಶವನ್ನು ಆಗಿನ ಕೇಂದ್ರಸರ್ಕಾರವು ನಿರ್ಲಕ್ಷಿಸಿತ್ತು. ೨೦೨೨ರಲ್ಲಿ ಆಯ್ಕೆಯಾದ ಆಂಟೋನಿ ಆಲ್ಬಾನೀಸಿ ಮುಂದಾಳತ್ವದ ಸರಕಾರವು ಊಲುರೂ ಸಂದೇಶವನ್ನು ಮನ್ನಿಸಿ, ಮೂಲನಿವಾಸಿಗಳನ್ನು ಸಂವಿಧಾನದಲ್ಲಿ ಸೇರಿಸುವ ನಿಟ್ಟಿನಲ್ಲಿ ಅದಕ್ಕೆ ತಿದ್ದುಪಡಿ ತರುವುದಕ್ಕಾಗಿ ಈಗ ಈ Voice Referendum ಮತಚಲಾವಣೆಯನ್ನು ಏರ್ಪಡಿಸಿದೆ.
ವಿಷಯವು ಅಷ್ಟು ಸುಲಭವೂ, ಸರಳವೂ ಆಗಿದೆ. ಆದರೆ ಬೇಕೆಂದೇ, ದಾರಿತಪ್ಪಿಸಲೆಂದೇ, ಅಥವಾ ವಿರೋಧಿಸಿಯೋ, ಅಜ್ಞಾನದಿಂದಲೋ, ಮಾಹಿತಿಯಿಲ್ಲದೆಯೋ ಎನ್ನುವ ಹಲವಾರು ಕಾರಣಗಳಿಂದ ವಿಷಯವನ್ನು ತಪ್ಪರ್ಥ ಮಾಡಿಕೊಂಡಿರುವವರೇ ಹೆಚ್ಚು. ಈ ವರ್ಷ ಪೂರ್ತಿ ಸಾಮಾಜಿಕ ತಾಣಗಳಲ್ಲಿ ಹರಿಯುತ್ತಿರುವ ಕೆಲ ಮಾತುಗಳು ಹೀಗಿವೆ – ‘ಇಂಡೀಜಿನಸ್ ಜನರು ಅಧಿಕಾರಕ್ಕೆ ಬಂದು ಇದು ನಮ್ಮ ನಾಡು ನೀವೆಲ್ಲಾ ಹೊರಗಿನವರು ಎಂದು ನಮ್ಮನ್ನೆಲ್ಲಾ ಒದ್ದು ಓಡಿಸುತ್ತಾರೆ; ಹಿಂದೆ ನಡೆದ ಅನ್ಯಾಯಗಳಿಗೆ ಸೇಡು ಸೇರಿಸಿಕೊಳ್ಳುತ್ತಾರೆ; ಅಧಿಕಾರದ ಚುಕ್ಕಾಣಿ ಹಿಡಿದು ನಮ್ಮನ್ನೆಲ್ಲ ಜೈಲಿಗೆ ಹಾಕುತ್ತಾರೆ; ನಾವು ಬಿಳಿಯರು ಎಂದು ನಮಗೆ ಕೆಲಸ ಸಿಗದಂತೆ ಮಾಡುತ್ತಾರೆ; ನಮ್ಮ ಜೀವನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ನಮ್ಮನ್ನು ಗುಲಾಮರನ್ನಾಗಿಸುತ್ತಾರೆ; ಏನೇ ಆದರೂ ನೋ ಎಂದೇ ಮತ ಹಾಕಿ’ ಇಂತೆಲ್ಲಾ ಇದೆ. ಹೆಚ್ಚಿನಪಕ್ಷ ಯುವಜನತೆಯನ್ನು ಮತ್ತು ವಯಸ್ಸಾದವರನ್ನು ಗಮನದಲ್ಲಿಟ್ಟುಕೊಂಡು ಇಂತಹ ಪ್ರಚೋದಕಾರಿ ಅಪಾಯಕರ ಸಂದೇಶಗಳನ್ನು ಹಬ್ಬಿಸಲಾಗಿದೆ.
ಕಳೆದ ಹಲವಾರು ತಿಂಗಳುಗಳಿಂದ ಇಡೀ ದೇಶವೇ YES ವೋಟ್, NO ವೋಟ್ ಭಿನ್ನಾಭಿಪ್ರಾಯದಲ್ಲಿ ಮುಳುಗಿ ಅದ್ದಿಕೊಂಡು ತೇಲಾಡುತ್ತಿದೆ. ಯಾವತ್ತೂ ಹೆಸರೇ ಕೇಳಿರಲಿಲ್ಲದವರು ಇಂದು ರಾಜಕೀಯ (ಪುಡಿ) ನಾಯಕರಾಗಿದ್ದಾರೆ. ರಾಜಾರೋಷವಾಗಿ ಜನಾಂಗಭೇದವನ್ನು ಅನುಮೋದಿಸುತ್ತಾ, ಏಷ್ಯಾದ ಜನರು ನಮ್ಮ ದೇಶದೊಳಗೆ ಕಾಲಿಡಬಾರದು, ಈ ಮೂಲನಿವಾಸಿಗಳು ಆಸ್ಟ್ರೇಲಿಯನ್ ಪ್ರಜೆಗಳೇ ಅಲ್ಲ ಎಂದೆಲ್ಲಾ ಅಪಾಯಕಾರಿ ಹೇಳಿಕೆಗಳನ್ನು ಕೊಡುತ್ತಾ ಜನರನ್ನು ಸೆಳೆದುಕೊಂಡು ಚುನಾವಣೆಯಲ್ಲಿ ಗೆದ್ದ ರಾಜಕಾರಣಿಗಳಿಗೆ ಈಗ ಹಬ್ಬವೋ ಹಬ್ಬ. ಮೂಲನಿವಾಸಿಗಳನ್ನು ಮತ್ತಷ್ಟು ತೆಗಳುತ್ತಾ ಏನೇ ಆಗಲಿ ನೋ ವೋಟ್ ಹಾಕಿ ಎಂದು ಇಂತಹ ಮಂದಿ ಅಬ್ಬರಿಸುತ್ತಿದ್ದಾರೆ. ದುರಾದೃಷ್ಟಕರ ವಿಷಯವೆಂದರೆ ಅಂತಹವರ ಪರವಾಗಿ ಕೆಲ ಅಬೊರಿಜಿನಲ್ ಮುಖಂಡರು ನಿಂತಿದ್ದಾರೆ. ತಾವು ವಾಯ್ಸ್ ರೆಫೆರೆಂಡಮ್ ಅನುಮೋದಿಸುವುದಿಲ್ಲ ಎನ್ನುತ್ತಾ ನೋ ಹೇಳಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಅವರಲ್ಲಿ ಒಬ್ಬರು ಫೇಸ್ಬುಕ್ ಮೂಲಕ ವೋಟ್ ನೋ ಎಂದು ಕೂಡ ಸಂದೇಶ ಕಳಿಸಿದ್ದಾರೆ. ಮತ್ತೊಬ್ಬರು ಪತ್ರಿಕಾ ಸಂದರ್ಶನದಲ್ಲಿ ಆಸ್ಟ್ರೇಲಿಯಾದಲ್ಲಿ ರೇಸಿಸಮ್ ಇಲ್ಲ, ಯಾವತ್ತೂ ನಮ್ಮ ಅಬೊರಿಜಿನಲ್ ಮತ್ತು ಬಿಳಿಯ ಜನರಲ್ಲಿ ಒಡಕಿರಲಿಲ್ಲ, ಈ ವಾಯ್ಸ್ ರೆಫೆರೆಂಡಮ್ ಎಲ್ಲರನ್ನೂ ದಾರಿತಪ್ಪಿಸುತ್ತಿದೆ, ಇದನ್ನು ಬೇಕಾಗಿಯೇ ನಮ್ಮನ್ನು ಬೇರ್ಪಡಿಸಲು ಮಾಡಲಾಗಿದೆ, ಎಂದು ಹೇಳಿದಾಗ ನಾನು ಬಿದ್ದುಬಿದ್ದು ನಕ್ಕಿದ್ದೆ. ಕಣ್ಮುಂದೆ ಇರುವ ಕೋಟಿಗಟ್ಟಲೆ ಪುರಾವೆಗಳನ್ನು ತಳ್ಳಿಹಾಕಿದ ಅವರ ಮಾತು ಈ ದೇಶವು ಇನ್ನೂ ಅದೆಷ್ಟು ಹಿಂದುಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.
ಕಳೆದ ಕೆಲ ತಿಂಗಳುಗಳಲ್ಲಿ ವಾಯ್ಸ್ ರೆಫೆರೆಂಡಮ್ ಬಗ್ಗೆ ನೂರಾರು, ಸಾವಿರಾರು ಸಂದರ್ಶನಗಳು, ಮಾಹಿತಿಗೋಷ್ಠಿಗಳು, ವರ್ಕ್ ಶಾಪ್, ವೆಬಿನಾರ್, ಸಮಾವೇಶಗಳು, ಸಭೆಗಳು, ಪ್ರಚಾರಕಾರ್ಯವು, ರೇಡಿಯೋ ಟೀವಿ ಕಾರ್ಯಕ್ರಮಗಳು ನಡೆಯುತ್ತಿದೆ. ಕೆಲವಲ್ಲಿ ನಾನೂ ಕೇಳುಗಳಾಗಿ ಭಾಗವಹಿಸಿದ್ದೀನಿ. ವಾಯ್ಸ್ ಪರವಾಗಿ ಭಾಗವಹಿಸುವ ಬಿಳಿಯರು ಹುಮ್ಮಸ್ಸಿನಿಂದ ‘ಪರದೆಯ ಹಿಂದೆ ಅವಿತಿರುವುದು ಬೇಡ. ಮುಂದೆ ಬನ್ನಿ, ಧೈರ್ಯವಾಗಿ ಯೆಸ್ ವೋಟ್ ಹಾಕಿ’ ಎನ್ನುತ್ತಾರೆ. ಅವರೊಡನೆ ಇರುವ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಬಿಳಿಯರ ಬೆಂಬಲಕ್ಕೆ ಕೃತಜ್ಞತೆ ಸೂಚಿಸಿ ಈ ಒಂದು ಐತಿಹಾಸಿಕ ದಿನಕ್ಕಾಗಿ ತಾವು ದಶಕಗಳಿಂದ ಕಾಯುತ್ತಿರುವುದಾಗಿ ಹೇಳುತ್ತಾರೆ. ಅಂತೆಯೇ, ದೇಶದ ರಾಜ್ಯ ರಾಜಧಾನಿ ನಗರಗಳಲ್ಲಿ ಯೆಸ್-೨೩ ಪರವಾದ ಶಾಂತಿ ಮೆರವಣಿಗೆಗಳು ನಡೆದಿವೆ. ಅದಕ್ಕೆ ವಿರುದ್ಧವಾಗಿ ಅಲ್ಲಲ್ಲಿ ನೋ-೨೩ ಸಭೆಗಳಿವೆ.
ನಾನು Uluru Statement from the Heart ಕೊಟ್ಟಿರುವ ‘ಜೊತೆಯಾಗಿ ನಡೆಯೋಣ ಬನ್ನಿ’ ಎನ್ನುವ ಜನಪರ ಶಾಂತಿ ಸಂದೇಶವನ್ನು ಗೌರವಿಸುತ್ತೀನಿ. ಅದರ ಪರವಾಗಿ ಮಾತನಾಡುತ್ತೀನಿ. ನಾನು postcolonial ದೇಶದಿಂದ ಬಂದವಳು, ಗಾಂಧೀಜಿಯವರು ಇಡೀ ಪ್ರಪಂಚಕ್ಕೇ ಕೊಟ್ಟ ಅಹಿಂಸೆ, ಸತ್ಯಾಗ್ರಹ ಸಂದೇಶಗಳಲ್ಲಿ ಅಚಲ ನಂಬಿಕೆಯಿರುವವಳು, ಅಂತೆಯೇ, ವಾಯ್ಸ್ ರೆಫೆರೆಂಡಮ್ ಪರವಾಗಿ ಯೆಸ್ ವೋಟ್ ಹಾಕುತ್ತೀನಿ ಎಂದು ಹೇಳುತ್ತಾ ಬಂದಿದ್ದೀನಿ. ನನ್ನ ಗಂಡ, ಮಕ್ಕಳು ‘ಅಯ್ಯೋ ಮಹರಾಯ್ತಿ, ವಿರೋಧಿಗಳು ಇದನ್ನು ಕೇಳಿದರೆ ಕಷ್ಟ, ಹುಷಾರಾಗಿರು,’ ಎನ್ನುತ್ತಾರೆ. ನಾನು ಭಾರತವನ್ನು ಬಿಟ್ಟಾದಮೇಲೆ ಸುಮಾರು ೨೨ ವರ್ಷಗಳ ಕಾಲ ಭಾರತೀಯ ಪ್ರಜೆಯಾಗಿಯೇ ಇದ್ದೆ. ನಮ್ಮ ಹೆಮ್ಮೆಯ ಅಶೋಕಚಕ್ರ ಲಾಂಛನವುಳ್ಳ ಭಾರತೀಯ ಪಾಸ್ಪೋರ್ಟ್ ಇಟ್ಟುಕೊಂಡೇ ಹಲವಾರು ದೇಶಗಳನ್ನು ಸುತ್ತಿಬಂದೆ. ಕಡೆಗೂ ಗಳಿಗೆ ಕೂಡಿಬಂತೇನೋ, ೨೦೨೨ರ ಕೊನೆಯಲ್ಲಿ ಆಸ್ಟ್ರೇಲಿಯನ್ ಪೌರತ್ವವನ್ನು ಪಡೆದೆ. ಹೀಗಾಗಿ, ಈ ವರ್ಷ ೨೦೨೩ರಲ್ಲಿ ನಾನು ಹೊಸ ಆಸ್ಟ್ರೇಲಿಯನ್ ಪ್ರಜೆಯಾಗಿ ಮೊತ್ತಮೊದಲ ಬಾರಿ ಮತ ಚಲಾಯಿಸಲಿದ್ದೀನಿ. ನನ್ನ ಮೊದಲ ಮತ ವಾಯ್ಸ್ ರೆಫೆರೆಂಡಮ್ ಪರವಾಗಿ, ನ್ಯಾಯನೀತಿಧರ್ಮಗಳ ಪರವಾಗಿ ಎಂದು ನೆನೆದಾಗ ರೋಮಾಂಚನವಾಗುತ್ತದೆ. ನಾನು ವಲಸಿಗಳಾಗಿ ನೆಲೆಸಿರುವ ಈ ನೆಲ-ನಾಡಿನ ಮೂಲಜರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರ ಅಸ್ಮಿತೆ, ದನಿಯ ಪರವಾಗಿ ನಿಲ್ಲುವುದು ಹೆಮ್ಮೆಯೆನಿಸುತ್ತದೆ. ಅವರದ್ದೇ ನೆಲದಲ್ಲಿ ಅವರ ಜನರೆಲ್ಲರೂ ಸಮತೆ ಮತ್ತು ಸಮಾನತೆಯಿಂದ ಬಾಳಿಬದುಕುವ ಕನಸು ಸಾಕಾರವಾಗಲಿ. ಈ ದೇಶದಲ್ಲಿ ನನ್ನ ಮೊದಲ ಮತ ಇದಕ್ಕಾಗಿಯೇ ಕಾದಿತ್ತೇನೊ, ಎಂದೆನಿಸುತ್ತದೆ. ಆಶ್ಚರ್ಯವಾಗುತ್ತದೆ.
ಬಿಳಿಯ ಜನರಾಗಿಲ್ಲದ, ಮೂಲಜನರೂ ಅಲ್ಲದ ನನ್ನಂಥವರು ಆಸ್ಟ್ರೇಲಿಯಾದಂತಹ ಸಮಾಜದಲ್ಲಿ ನನ್ನ ಭಾರತೀಯ ಬೇರುಗಳನ್ನೊಳಗೊಂಡಂತೆ ಮೂರು ಭಿನ್ನ ಸಾಮಾಜಿಕ-ಸಾಂಸ್ಕೃತಿಕ ಲೋಕಗಳಲ್ಲಿ ನಡೆಯಬೇಕು. ಬಿಳಿಯರಿಗೂ, ಮೂಲಜನರಿಗೂ ಸಮಾನ ಸ್ಥಾನ ಕೊಡಬೇಕು. ಅದು ಹೇಗೆಂದು ಸ್ವಯಿಚ್ಛೆಯಿಂದ, ಪರಿಶೀಲನೆಯಿಂದ ನಾವೇ ಕಲಿತುಕೊಳ್ಳಬೇಕು. ಈ ವಾಯ್ಸ್ ರೆಫೆರೆಂಡಮ್ ಸಂದರ್ಭವನ್ನು ಹೇಗೆ ಸ್ವೀಕರಿಸಬೇಕು ಎಂದು ನಾನು ಒಂದೆರೆಡು ಸಭೆಗಳಲ್ಲಿ ಕೇಳಿದ್ದೆ. ‘ಅದು ನಿಮ್ಮನಿಮ್ಮ ಮೌಲ್ಯಗಳಿಗೆ, ಮನಸ್ಸಾಕ್ಷಿಗೆ ಸೇರಿದ್ದು ಎಂದಿದ್ದರು. ನಮ್ಮ ಅಂತಃಸಾಕ್ಷಿ ಏನನ್ನುತ್ತದೆ ಎಂದು ನಮ್ಮನ್ನು ನಾವೇ ಕೇಳಿಕೊಂಡಾಗ ಮನಸ್ಸು ಏನನ್ನುತ್ತದೆ? ಶಾಂತಿ, ಸಾಮರಸ್ಯ, ಸಮನ್ವತೆ, ಸೌಹಾರ್ದತೆ, ಸಮತೆ ಮತ್ತು ಸಮಾನತೆ ಇರುವ ಗೌರವ, ನಂಬಿಕೆಗಳ ವಾತಾವರಣದಲ್ಲಿ ಬದುಕಬೇಕೆಂಬ ಇಚ್ಛೆ ಎಲ್ಲರಿಗೂ ಇದೆ. ಆಸ್ಟ್ರೇಲಿಯಾದಲ್ಲಿ ಇಪ್ಪತ್ತೊಂದನೇ ಶತಮಾನದ ಉಳಿದ ದಶಕಗಳಲ್ಲಿ ಅಂತಹುದೇ ಒಂದು ಅನುಭೂತಿಯಿರುವ ಹೊಸ ಸಮಾಜದ ನಿರ್ಮಾಣವಾಗಲಿ ಎಂದು ನನ್ನ ಆಶೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ಆಸ್ಟ್ರೇಲಿಯಾದ ಮುಂದಿರುವ ‘ದಿ ವಾಯ್ಸ್ ರೆಫೆರೆಂಡಮ್ ೨೦೨೩’ ಎನ್ನುವ ಈ ಮಹತ್ತರ ಪ್ರಶ್ನೆ ಸ್ಕಾಟ್ಲೆಂಡ್ ರೇಫರಾಂಡಮ್ಮನ್ನು ನೆನಪಿಸಿತು. ಇದರ ಹಿನ್ನೆಲೆಯನ್ನು ಅತ್ಯಂತ ತಿಳಿಯಾಗಿ ಈ ಬರಹದಲ್ಲಿ ತಿಳಿಸಿದ್ದಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು. ನಿಮ್ಮ ಕಿಚನ್ ವರೆಗೂ ಈ ಭೇದಕ ಚರ್ಚೆ ತಾಗಿದ್ದು ಆಶ್ಚರ್ಯವಲ್ಲ. ಈ ವಿಷಯದಲ್ಲಿ ನಿಮ್ಮ ದಿಟ್ಟ ನಿಲುವನ್ನು ಶ್ಲಾಘಿಸುತ್ತೇನೆ; ಬೆಂಬಲಿಸುತ್ತೇನೆ, ೧೨೨ ವರ್ಷಗಳ ನಂತರವಾದರೂ ಆ ಜನತೆಗೆ ನ್ಯಾಯ ಒದಗಿ ಬರಲೆಂದು ಆಶಿಸುವೆ!
ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್, ಯು ಕೆ.
ದೇಸಾಯಿ ಅವರೇ,
ಬರಹವನ್ನು ಓದಿ ಪ್ರತಿಕ್ರಿಯೆ ಬರೆದಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬೆಂಬಲಕ್ಕಾಗಿ ಶರಣು.
ವಿನತೆ
ಮತದಾನದ ಸಮಯದಲ್ಲಿ ಜನರು ಸಂಯಮದಿಂದ / ಸರಿಯಾಗಿ ಯೋಚಿಸಿ ಕಾರ್ಯಪ್ರವೃತ್ತರಾಗಲಿ, ಮೂಲಜನರಿಗೆ ನ್ಯಾಯ ಒದಗಿಸಿಕೊಡಲಿ ಎಂದು ಆಶಿಸುತ್ತೇನೆ. ಅಲ್ಲದೆ, ನಿಮ್ಮ ಪುಸ್ತಕದ ಬಿಡುಗಡೆಗಾಗಿ ಕಾಯುತ್ತಿರುವೆ.
ಅನುರಾಧ ಅವರೇ,
ನಿಮ್ಮ – ನನ್ನ ಆಶಯ ನಿಜವಾಗಲಿ. ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು.
ವಿನತೆ