ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಮಂಗಳವಾರ ಮಧ್ಯಾಹ್ನ ತೀರಿಕೊಂಡರು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಸಾರಾ, ಲೇಖಕಿಯಾಗಿಯಷ್ಟೇ ಅಲ್ಲ, ಉದಾರವಾದಿ ಚಿಂತಕಿಯಾಗಿಯೂ ಗುರುತಿಸಿಕೊಂಡರು. ವಿರೋಧಗಳನ್ನು ಲೆಕ್ಕಿಸದೇ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸಿದರು. ಅವರ ಕಾದಂಬರಿಗಳು ತಮಿಳು, ಮಲಯಾಳಂ, ಒರಿಯಾ, ಹಿಂದಿ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಮಲಯಾಳಂ ಭಾಷೆಯಲ್ಲಿ ಪ್ರಕಟವಾದ ಅನೇಕ ವೈಚಾರಿಕ ಕೃತಿಗಳನ್ನು ಹಾಗೂ ಕಥೆ– ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಕುರಿತು ಕಳೆದ ವರ್ಷ ಕೆಂಡಸಂಪಿಗೆಯಲ್ಲಿ ಪ್ರಕಟವಾದ ಬರಹವೊಂದು ಇಲ್ಲಿದೆ.
ತಮ್ಮ ಗೆಳತಿಯನ್ನು ತುಸು ಹೊತ್ತು ದಿಟ್ಟಿಸಿ ನೋಡಿದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್, ‘ನನಗೆ ನಿನ್ನ ನೆನಪಿದೆ’ ಎಂದರು. ಹೆಸರನ್ನು ನೆನಪಿಸಿಕೊಳ್ಳಲು ತುಸು ಹೊತ್ತೇ ಬೇಕಾಯಿತು. ಆದರೂ ಗೆಳತಿಯನ್ನು ಕಂಡ ಖುಷಿಗೆ ಮುಖದ ತುಂಬ ಮಂದಹಾಸ. ಕಳೆದ ಜೂನ್ 30ಕ್ಕೆ 85 ವರ್ಷ ತುಂಬಿದ ಕನ್ನಡದ ಹಿರಿಯಜ್ಜಿ ಸಾರಾ ಅಬೂಬಕ್ಕರ್ ಅವರ ಅಕ್ಕರೆಯ ಗೆಳತಿ, ಮತ್ತೊಬ್ಬರು ಹಿರಿಯ ಲೇಖಕಿ ಬಿ.ಎಂ. ರೋಹಿಣಿ.
ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘವು ‘ಹಿರಿಯ ಲೇಖಕಿಯರ ಸಾಹಿತ್ಯ ಮಂಥನ’ ಎಂಬ ಕಾರ್ಯಕ್ರಮದಲ್ಲಿ ಸಾರಾ ಅಬೂಬಕ್ಕರ್ ಅವರ ಕೃತಿಗಳ ಕುರಿತ ವಿಚಾರ ಸಂಕಿರಣವೊಂದನ್ನು ಆನ್ ಲೈನ್ ನಲ್ಲಿ ಆಯೋಜಿಸಿದೆ. ಆದರೆ ವಯೋಸಹಜವಾದ ಅನಾರೋಗ್ಯದ ಕಾರಣ ಸಾರಾ ಅವರಿಗೆ ಆನ್ ಲೈನ್ ಸಂಕಿರಣದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂಬುದು ರೋಹಿಣಿಯವರ ಬೇಸರ. ‘ಬೇಗನೇ ಹುಶಾರಾಗಿ, ಮಂಗಳೂರಿನಲ್ಲಿರುವ ಲೇಖಕಿಯರ ಸಂಘದ ಕಾರ್ಯಕ್ರಮಕ್ಕೆ ನೀವು ಬೇಗನೇ ಬರುವಂತಾಗಲಿ’ ಎಂದು ತಮ್ಮ ಗೆಳತಿಯನ್ನು ಸಮಾಧಾನ ಪಡಿಸುತ್ತಿದ್ದರು. “ಆಗಲಿ, ಆದರೆ ಈಗ ಸಂಜೆ ಸಮುದ್ರ ನೋಡಲು ಕರೆದುಕೊಂಡು ಹೋಗಬಹುದಾ..’ ಎಂದು ಪುಟ್ಟ ಮಗುವಿನಂತೆ ಸಾರಾ ಪ್ರಶ್ನಿಸಿದರು.
‘ಈಗ ಒಂದು ವಾರದಿಂದ ಪುಟ್ಟ ಮಗುವೇ ಆಗಿದ್ದಾರೆ ಅವರು’ ಎನ್ನುತ್ತ ಸಾರಾ ಅವರ ಪ್ರೀತಿಯ ಸೊಸೆ ಸೈದಾ ರಹೀಮ್ ತಟ್ಟೆಯಲ್ಲಿ ಬಾಳೆಹಣ್ಣುಗಳನ್ನು ತಂದಿಟ್ಟರು. ‘ಬಾಳೆಹಣ್ಣು ಮತ್ತು ಜಿಲೇಬಿ ಅತ್ತೆಯವರ ಪ್ರೀತಿಯ ತಿನಿಸುಗಳು. ಅದಕ್ಕಾಗಿಯೇ ರಹೀಮ್, (ಸಾರಾ ಅವರ ಮಗ) ಮನೆಯಲ್ಲಿ ಈ ಎರಡು ತಿನಿಸುಗಳು ಸದಾ ಇರುವಂತೆ ನೋಡಿಕೊಳ್ಳುತ್ತಾರೆ…’ ಎಂದು ಹೇಳುವಷ್ಟರಲ್ಲಿ, ಸಾರಾ ಅಸಮಾಧಾನ ವ್ಯಕ್ತಪಡಿಸಿದರು. ಪ್ರೀತಿಯ ಸೊಸೆಯನ್ನು ಅವರು ‘ಮೋಳೇ’ (ಮಗಳೇ) ಎಂದೇ ಕರೆಯುತ್ತಾರೆ. ‘ನೀನು ಅವರೊಡನೆಯೇ ಮಾತನಾಡಿದ್ದು ಸಾಕು, ನನ್ನೊಡನೆ ಮಾತನಾಡು..’ ಎಂದು ಆಗ್ರಹಿಸಿದರು. ಮಗುವಿನಂತೆ ರಮಿಸುತ್ತ, ಸೈದಾ ಅತ್ತೆಯನ್ನು ಅಕ್ಕರೆ ಮಾಡುತ್ತಿದ್ದರು. ಸಾರಾ ಅವರ ಜೀವನದ ಕುರಿತು ಪುಸ್ತಕ ಬರೆದಿರುವ, ಅವರ ಸ್ನೇಹಿತೆಯೂ ಆಗಿರುವ ದೇವಿಕಾ ನಾಗೇಶ್ ಅತ್ತೆ ಸೊಸೆ ಸಲ್ಲಾಪವನ್ನು ನೋಡುತ್ತ, ಅವರೊಂದಿಗೆ ತಮ್ಮ ಒಡನಾಟದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದರು.
1984ರಲ್ಲಿ ‘ಚಂದ್ರಗಿರಿಯ ತೀರದಲ್ಲಿ’ ಎಂಬ ಕಾದಂಬರಿಯನ್ನು ಸಾರಾ ಅಬೂಬಕ್ಕರ್ ಬರೆದರು. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದವು. ಕಾದಂಬರಿಯು ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಒರಿಯಾ ಭಾಷೆಗೆ ಅನುವಾದಗೊಂಡಿತು. ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಪರಿಗಣಿಸಲ್ಪಟ್ಟು, ಸಾರಾ ಅವರ ಪರಿಚಯ ಹೊಸತಲೆಮಾರಿಗೂ ಆಯಿತು. ಕೃತಿಯು ತಲಾಖ್ ಸಂಪ್ರದಾಯಗಳ ವಿರುದ್ಧ ಧ್ವನಿಯೆತ್ತುವುದರಿಂದ ಅದು ಸಾಮಾಜಿಕವಾಗಿ ಬಹಳ ಚರ್ಚೆಗಳನ್ನು ಹುಟ್ಟುಹಾಕಿತು. ‘ಈ ಕಾದಂಬರಿ ನಾನು ಬರೆದದ್ದಲ್ಲ, ಅದೇ ಬರೆಸಿಕೊಂಡಿತು’ ಎನ್ನುವ ಸಾರಾ ಮೇಡಂ ಅವರೊಡನೆ ಒಮ್ಮೆ, ‘ಚಂದ್ರಗಿರಿ ನದಿ ನೋಡಲು ಹೋಗೋಣವೇ..’ ಎಂದು ಕೇಳಿದ್ದೇ ತಡ, ಖುಷಿಯಿಂದ ಹೊರಟಿದ್ದರು. 2013ರಲ್ಲಿ ಸ್ನೇಹಿತೆ ಬಿ.ಎಂ. ರೋಹಿಣಿಯವರೊಡನೆ ಅವರು ತಮ್ಮ ತವರೂರು ಕಡೆ ಪ್ರಯಾಣಿಸುತ್ತ ಉತ್ಸಾಹದ ಚಿಲುಮೆಯಂತೆ ಕತೆಗಳನ್ನು ಹೇಳುತ್ತಿದ್ದರು. ಅದೇ ಚಂದ್ರಗಿರಿ ನದಿಯ ದಂಡೆಯ ಮೇಲೆ ನಿಂತು, “ಓ..ನೋಡಿ, ಅಲ್ಲಿಯೇ ಆಚೆ ದಂಡೆಯಲ್ಲಿಯೇ ನಾದಿರಾ ನಿಂತಿದ್ದು.. ಇಲ್ಲಿ ಅವಳ ಪತಿ ಬಂದು ತುಸು ಹೊತ್ತು ನಿಂತು, ಹಾಗೆಯೇ ಹಿಂದೆ ಹೋದನಲ್ಲಾ.. ಅದು ಇಲ್ಲಿಯೇ..ಇಲ್ಲಿಯೇ.. ಪಾಪ ನಾದಿರಾ’ ಎಂದು ಹೇಳಿದರು.
ಪ್ರೀತಿಯ ಸೊಸೆಯನ್ನು ಸಾರಾ ಅಬೂಬಕ್ಕರ್ ‘ಮೋಳೇ’ (ಮಗಳೇ) ಎಂದೇ ಕರೆಯುತ್ತಾರೆ. ಆಕೆ ಅತಿಥಿಗಳೊಡನೆ ಮಾತಿಗೆ ಕುಳಿರಾಗ, ‘ನೀನು ಅವರೊಡನೆಯೇ ಮಾತನಾಡಿದ್ದು ಸಾಕು, ನನ್ನೊಡನೆ ಮಾತನಾಡು..’ ಎಂದು ಆಗ್ರಹಿಸುವಷ್ಟು ಅಕ್ಕರೆ. ಅತ್ತೆಯನ್ನು ಮಗುವಿನಂತೆ ರಮಿಸುತ್ತ, ಸೈದಾ ಅಕ್ಕರೆ ಮಾಡುತ್ತಿದ್ದರು.
ತಮ್ಮ ಕಾದಂಬರಿಯ ಕತೆಯು ನಡೆಯುವ ಜಾಗವನ್ನು ವಿವರಿಸುವ ಸಂಭ್ರಮವೊಂದು ಕಡೆಯಾದರೆ, ನಾದಿರಾಳ ನೋವಿನ ಸೆಳಕು ಮತ್ತೊಂದು ಕಡೆಯಾಗಿ, ಅವರ ಮಾತುಗಳು ಗಡಿಬಿಡಿಯಿಂದ ಕೂಡಿತ್ತು. ಅದೊಂದು ಸುಂದರ ಪ್ರಯಾಣ. ಅವರು, ತಾವು ಬಾಲ್ಯದಲ್ಲಿ ಓಡಾಡಿದ ಊರುಗಳನ್ನೆಲ್ಲ ತೋರಿಸುತ್ತಾ, ದೋಣಿಯಲ್ಲಿ ಪಯಣಿಸುತ್ತ, ತಾವು ಕಳೆದ ಕ್ಷಣಗಳನ್ನು ಮರುಸೃಷ್ಟಿಸಿಕೊಂಡು ಮತ್ತೆ ಮತ್ತೆ ಖುಷಿಪಟ್ಟರು.’ನೀವು ನನ್ನ ಬಗ್ಗೆಸಾಕ್ಷ್ಯ ಚಿತ್ರ ಮಾಡದೇ ಇದ್ದರೂ ಪರವಾಗಿಲ್ಲ, ಇಲ್ಲೆಲ್ಲ ಓಡಾಡುತ್ತ, ಹೀಗೆಲ್ಲ ಮಾತನಾಡಲು ಅವಕಾಶ ಕಲ್ಪಿಸಿದಿರಲ್ಲ..’ ಎಂದು ಮತ್ತೆ ಮತ್ತೆ ಖುಷಿಪಟ್ಟರು. ಅವರ ಮಾತುಗಳನ್ನು ಶೇಣಿ ಬಾಲಮುರಳಿ ಮತ್ತು ಮಹೇಶ್ ತೇಜಸ್ವಿ ತಮ್ಮ ಕ್ಯಾಮೆರಾಗಳಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ಕಾರಣಾಂತರದಿಂದ ಆ ಸಾಕ್ಷ್ಯಚಿತ್ರ ಪೂರ್ಣವಾಗಲಿಲ್ಲ.
ಹೀಗೊಂದು ಪಯಣದ ಮೂಲಕ ಆಪ್ತವಾಗಿದ್ದ ಸಾರಾ, ಇತ್ತೀಚೆಗಿನವರೆಗೂ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು ‘ಅಬ್ಬಾ..ಮುಕ್ತವಾಗಿ ಮಾತನಾಡುವುದು ಎಷ್ಟು ಕಷ್ಟ ಅಲ್ಲವಾ.. ಕೆಲವೊಂದುಪದಗಳನ್ನು ಬಳಸುವುದೂ ಕಷ್ಟ. ಎಲ್ಲರೂ ದಿಗ್ಗನೆದ್ದು ಟೀಕಿಸಲು ಶುರು ಮಾಡಿಬಿಡುತ್ತಾರೆ. ಅಲ್ಲ, ನಾನೇ ಏನಾದರೂ ತಪ್ಪು ಹೇಳಿದೆನೇನೋ ಎಂದು ನನಗೇ ಸಂಶಯ ಮೂಡುವಂತೆ ಮಾಡಿಬಿಡುತ್ತಾರಲ್ಲ. ಸಮಾನತೆಯ ಹೊರತಾಗಿ ಮತ್ತೆ ಯಾವುದೇ ಆಶಯವೂ ನನ್ನಲ್ಲಿ ಇಲ್ಲವಲ್ಲಾ..’ ಎಂದು ತಮ್ಮನ್ನು ತಾವು ಮತ್ತೆ ಮತ್ತೆ ಅವಲೋಕಿಸಿಕೊಳ್ಳುತ್ತಿದ್ದರು.
ಪತ್ರಿಕೆಗಳು ತಮ್ಮ ಬರಹವನ್ನು ಸರಿಯಾಗಿ ಪ್ರಕಟಿಸಲಿಲ್ಲವೆಂದೂ, ಎಡಿಟ್ ಮಾಡಿ ಅರ್ಥ ಹಾಳುಗೆಡವಿದರೆಂದು, ಮಾನವೀಯತೆಗೆ ವಿರುದ್ಧವಾಗಿ ವರದಿ ಪ್ರಕಟಿಸುತ್ತಿದ್ದಾರೆಂದು ಸಿಟ್ಟುಮಾಡಿಕೊಳ್ಳುತ್ತಿದ್ದರು. ‘ನೋಡು, ಆ ಪತ್ರಿಕೆಯ ಸಹವಾಸವೇ ಬೇಡ ಎಂದು ನಿಲ್ಲಿಸಿಬಿಟ್ಟೆ’ ಎಂದು ಯಾವುದೋ ಪತ್ರಿಕೆಗೆ ತಾವೇ ನಿಷೇಧ ಹೇರಿ ಫೋನು ಮಾಡುತ್ತಿದ್ದರು. ಆದರೆ ಈಗ ಅವರಿಗೆ ಓದುವುದು ಸಾಧ್ಯವಾಗುತ್ತಿಲ್ಲ. ತಮ್ಮ ಅಮೂಲ್ಯ ಸಂಗ್ರಹದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ದಾನ ಮಾಡಿದ್ದಾರೆ. ಸೊಸೆ ತನ್ನೊಡನೆಯೇ ಮಾತನಾಡಬೇಕು ಎಂದು ಸಿಟ್ಟುಮಾಡಿಕೊಳ್ಳುತ್ತ, ಅಮ್ಮನೊಡನೆ ರೆಚ್ಚೆ ಹಿಡಿಯುವ ಮಗುವಿನಂತೆ ನಗುತ್ತಿದ್ದಾರೆ.
ಸಾರಾ ಅಬೂಬಕ್ಕರ್ ಅವರು ಪತ್ರಿಕೆಗಳನ್ನು ಬಹಳ ಪ್ರೀತಿಯಿಂದ ಓದುತ್ತಿದ್ದರು. ಯಾಕೆಂದರೆ ಅವುಗಳು ಅವರ ಜ್ಞಾನವನ್ನು ಹೆಚ್ಚಿಸುವ ಮಾಧ್ಯಮಗಳಾಗಿದ್ದವು. ಆದ್ದರಿಂದಲೇ ಪತ್ರಿಕೆಗಳಲ್ಲಿ ಕೆಡುಕಿನ, ತಪ್ಪು ದಾರಿಗೆಳೆಯುವ ಸುದ್ದಿಗಳು ಪ್ರಕಟವಾದಾಗ ಬಹಳವೇ ನೊಂದುಕೊಳ್ಳುತ್ತಿದ್ದರು. ನಂಬಿಕೆ ಆಳವಾಗಿದ್ದಷ್ಟೂ, ಅದು ಕುಸಿಯುವಾಗ ಆಗುವ ನೋವು ಕೂಡ ತೀವ್ರವಾದುದು ಅಲ್ಲವೇ.
ಲಂಕೇಶ್ ಪತ್ರಿಕೆಯ ಅಭಿಮಾನಿಯಾಗಿದ್ದ ಅವರಾ ಆ ಪತ್ರಿಕೆಯ ನಿರಂತರ ಓದುಗರು. ಒಮ್ಮೆ ಲಂಕೇಶ್ ಅವರ ‘ನನ್ನ ಜನ ಒಂದಾಗಬೇಕು’ ಎಂಬ ಬರಹಕ್ಕೆ ಪ್ರತಿಕ್ರಿಯೆ ಬರೆದು ಪೋಸ್ಟ್ ಮಾಡಿದ್ದರು. ಇದನ್ನು ಓದಿದ ಲಂಕೇಶ್, ಸಾರಾ ಅವರಲ್ಲಿರುವ ಬರೆಯುವ ಉತ್ಸಾಹವನ್ನು ಗಮನಿಸಿ ಪ್ರೋತ್ಸಾಹಿಸಿದರು. ‘ನನ್ನಲ್ಲಿ ಬರೆಯುವ ಆತ್ಮವಿಶ್ವಾಸ ಮೂಡಿಸಿದವರೇ ಲಂಕೇಶ್ ‘ ಎಂದು ಸಾರಾ ಈಗಲೂ ನೆನಪಿಸಿಕೊಳ್ಳುತ್ತಾರೆ.
ತಮ್ಮಂತೆಯೇ ಅನೇಕ ಮಹಿಳೆಯರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಸಾರಾ ಆಶಯ. 1987ರಲ್ಲಿ ಸಾರಾ ಅಬೂಬಕ್ಕರ್ ಮತ್ತು ಅವರ ವಾರಗೆಯ ಲೇಖಕಿಯರಾದ ಲೀಲಾವತಿ ಎಸ್. ರಾವ್, ಚಂದ್ರಕಲಾ ನಂದಾವರ, ಮನೋರಮಾ ಎಂ., ಪದ್ಮಾ ಶೆಣೈ ಸೇರಿ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘವನ್ನು ಸ್ಥಾಪಿಸಿದರು. ಮೊದಲ ಅಧ್ಯಕ್ಷರಾಗಿ ಪದ್ಮಾ ಶೆಣೈ ಆಯ್ಕೆಯಾದರು. ಸಾರಾ ಅವರು ಅಧ್ಯಕ್ಷರಾದಾಗ, ಲೇಖಕಿಯರ ಸಂಘಕ್ಕೊಂದು ಕಟ್ಟಡವನ್ನು ರೂಪಿಸಲು ಶ್ರಮಿಸಿದರು. ಜಿಲ್ಲಾಧಿಕಾರಿಗಳನ್ನು ಆಗ್ರಹಿಸುತ್ತ, ನಾಲ್ಕು ವರ್ಷಗಳ ಕಾಲ ಅವರು ಆಡಳಿತಶಾಹಿಯೊಂದಿಗೆ ಗುದ್ದಾಡಬೇಕಾಯಿತು. ಆದರೂ ಜಾಗವನ್ನು ಮಂಜೂರು ಮಾಡಿಸಿಕೊಂಡು, ಕಟ್ಟಡರೂಪಿಸುವಲ್ಲಿ ಯಶಸ್ವಿಯಾದರು. ಅದಾಗಿ ಲೇಖಕಿಯರ ಸಂಘವು ಅನೇಕ ಮಂದಿ ಉದಯೋನ್ಮುಖ ಲೇಖಕಿಯರನ್ನು ಪ್ರೋತ್ಸಾಹಿಸುವ ಕೇಂದ್ರವಾಗಿದ್ದು, ಇಂದಿಗೂ ಸಕ್ರಿಯವಾಗಿದೆ. ಸಾರಾ ಅಲ್ಲಿ ಮಾತೃವಾತ್ಸಲ್ಯದ ಮಾರ್ಗದರ್ಶಕಿಯಾಗಿದ್ದಾರೆ. ಈಗ ನೋಡಿದರೆ, ಗೆಳತಿಯು ‘ಸಮುದ್ರಕ್ಕೆ ಹೋಗೋಣವಾ, ಲೇಖಕಿಯರ ಸಂಘದ ಕಾರ್ಯಕ್ರಮಕ್ಕೆ ಹೋಗೋಣವಾ’ ಎಂದು ಪ್ರಶ್ನಿಸಿದರೆ, ‘ಈಗ ಸಮುದ್ರನೋಡಿ ಬರೋಣ..ಬಾ ‘ ಎನ್ನುತ್ತ ನಗುತ್ತಾರೆ.
ಸಾರಾ ಅಬೂಬಕ್ಕರ್ ಅವರು ಪತ್ರಿಕೆಗಳನ್ನು ಬಹಳ ಪ್ರೀತಿಯಿಂದ ಓದುತ್ತಿದ್ದರು. ಯಾಕೆಂದರೆ ಅವುಗಳು ಅವರ ಜ್ಞಾನವನ್ನು ಹೆಚ್ಚಿಸುವ ಮಾಧ್ಯಮಗಳಾಗಿದ್ದವು. ಆದ್ದರಿಂದಲೇ ಪತ್ರಿಕೆಗಳಲ್ಲಿ ಕೆಡುಕಿನ, ತಪ್ಪು ದಾರಿಗೆಳೆಯುವ ಸುದ್ದಿಗಳು ಪ್ರಕಟವಾದಾಗ ಬಹಳವೇ ನೊಂದುಕೊಳ್ಳುತ್ತಿದ್ದರು. ನಂಬಿಕೆ ಆಳವಾಗಿದ್ದಷ್ಟೂ, ಅದು ಕುಸಿಯುವಾಗ ಆಗುವ ನೋವು ಕೂಡ ತೀವ್ರವಾದುದು ಅಲ್ಲವೇ.
ಅವರು ಸಂಘಟಕಿ ಮಾತ್ರವಲ್ಲ ಪ್ರಕಾಶಕಿ ಕೂಡ. ಚಂದ್ರಗಿರಿ ಪ್ರಕಾಶನದ ಮೂಲಕ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸಿದರು. ‘ಸರ್ಕಾರವು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಖರೀದಿಸುವ ವಿಷಯದಲ್ಲಿ ಲಾಬಿಗಳಿಗೆ ಶರಣಾಗುತ್ತದೆ. ನಮ್ಮಂತಹ ಪ್ರಕಾಶಕರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಅನೇಕ ಬಾರಿ ಟೀಕಿಸಿ ಬರೆದರು.
ಅಷ್ಟೇ ಅಲ್ಲ, ರಾಜಕೀಯ ವಿಚಾರಗಳ ಕುರಿತು ಸಮರ್ಥವಾದ ಟೀಕೆಗಳನ್ನು ಮಂಡಿಸಿದವರು. ಸಮಾನ ನಾಗರಿಕ ಸಂಹಿತೆಯ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಧಾರ್ಮಿಕತೆಯ ಅಗತ್ಯ ಮತ್ತು ಅದರಲ್ಲಿರುವ ಹುಳುಕುಗಳ ಕುರಿತು ಮಾತನಾಡುವ ಧೈರ್ಯವಿರುವಾಕೆ. ‘ತಾನು ಹುಟ್ಟಿಬೆಳೆದ ಸಮಾಜವನ್ನು ತಿದ್ದುವ ಸಲುವಾಗಿ ಆ ಸಮಾಜದ ಕೆಲವು ಕ್ರೂರ ಪದ್ಧತಿಗಳ ಮೇಲೆ ಬೆಳಕು ಚೆಲ್ಲಿದ್ದೇನೆಯೇ ಹೊರತು ಅದನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ’ ಎಂದು ಅವರು ಆಗಾಗ ಹೇಳಿದ್ದಾರೆ.
ದಿಟ್ಟ ನಿಲುವು, ಹೇಳಿಕೆಗಳಿಂದ ವಿವಾದಗಳು ಸೃಷ್ಟಿಯಾದರೂ ಧೃತಿಗೆಡಲಿಲ್ಲ. ದಾಳಿಗಳನ್ನು, ಟೀಕೆಗಳನ್ನು ಎದುರಿಸಿದರು. 80ರ ದಶಕದಲ್ಲಿ ಜನಾಂಗೀಯ ಅಧ್ಯಯನ ಕುರಿತ ಗೋಷ್ಠಿಯೊಂದರಲ್ಲಿ ಅವರು ಬುರ್ಖಾ ಧರಿಸಲಿಲ್ಲ ಎಂಬ ಕಾರಣಕ್ಕೆ , ‘ಅವರು ಪ್ರಬಂಧ ಮಂಡನೆ ಮಾಡಬಾರದು’ ಎಂದು ಗದ್ದಲವೇರ್ಪಟ್ಟಿತು. ಮತ್ತೊಂದು ಪ್ರಕರಣದಲ್ಲಿ ಅವರನ್ನು ಮತಭ್ರಷ್ಟೆ ಎಂದು ಘೋಷಿಸಲಾಯಿತು. ಎಲ್ಲ ಅಡೆತಡೆಗಳೂ ಸಾರಾ ಅವರನ್ನು ಮತ್ತೆ ಮತ್ತೆ ಬರೆಯುವಂತೆ ಪ್ರೇರೇಪಿಸಿವೆಯಷ್ಟೇ. ಇಂತಹ ಸಂದರ್ಭಗಳಲ್ಲಿ ತಮ್ಮ ಪರ ನಿಲ್ಲದ ವಾರಗೆಯ ಸಾಹಿತಿಗಳನ್ನೂ ಅವರು ತರಾಟೆಗೆ ತೆಗೆದುಕೊಂಡದ್ದುಂಟು.
‘ಹೊತ್ತು ಕಂತುವ ಮುನ್ನ’ ಅವರು ಬರೆದ ಆತ್ಮಕತೆ. ಕಾಸರಗೋಡು ಜಿಲ್ಲೆಯ ಪ್ರತಿಷ್ಟಿತ ಮನೆತನ ‘ಪುದಿಯಾಪುರ್ (ಹೊಸಮನೆ) ತರವಾಡು ಮನೆಯಲ್ಲಿ ಪಿ. ಅಹ್ಮದ್ ಮತ್ತು ಜೈನಾಬಿ ದಂಪತಿಗಳ ಮಗಳಾಗಿ ಸಾರಾ ಜನಿಸಿದರು. ಜೈನಾಬಿ ಅವರಿಗೆ ಮೂವರು ಗಂಡು ಮಕ್ಕಳೇ ಇದ್ದುದರಿಂದ, ಈ ಬಾರಿಯಾದರೂ ಹೆಣ್ಣುಮಗುವಾದರೆ, ಪ್ರವಾದಿ ಇಬ್ರಾಹಿಂ ಪತ್ನಿಯಾದ ಸಾರಾ ಅವರ ಹೆಸರು ಇಡುವುದಾಗಿ, ಜೈನಾಬಿಯವರ ಮಾವ ಹರಕೆ ಹೊತ್ತಿದ್ದರು. ಅಚ್ಚರಿಯೆಂಬಂತೆ ಸಾರಾ ಅವರು ಪ್ರವಾದಿ ಮಹಮ್ಮದರ ಜನ್ಮದಿನದಂದು ಹುಟ್ಟಿದರು.
ಸಾರಾ ಅವರ ತಾಯಿ ಜೈನಾಬಿ ಅವರ ಹೋರಾಟದ ಕತೆಯೂ ದೀರ್ಘವಾದುದು. ಅವರಿಗೆ ಎಂಟು ವರ್ಷವಿದ್ದಾಗ ಮದುವೆ ಮಾಡಲಾಯಿತು. ಮದುವೆಯ ಬಳಿಕ ಹೆಣ್ಣು ಕೆಲ ಸಮಯ ತೌರಿನಲ್ಲಿಯೇ ಇರುವುದು ವಾಡಿಕೆ. ಗಂಡನ ಮನೆಗೆ ಕಳುಹಿಸಿಕೊಡುವುದಕ್ಕೆ ಇನ್ನೂ ಮೂರುನಾಲ್ಕು ವರ್ಷವಿತ್ತು. ಈ ನಡುವೆ ಎರಡು ಕುಟುಂಬಗಳ ನಡುವೆ ಮನಸ್ತಾಪವಾದಾಗ, ಜೈನಾಬಿಯವರ ಅಣ್ಣ ಬೇಸತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಹಿಂದಿನ ಕಾಲದಲ್ಲಿ, ವಿಚ್ಚೇದನದ ಕಾನೂನುಗಳು ರೂಪುಗೊಂಡಿರಲಿಲ್ಲ. ಖುರಾನಿನ ವಾಕ್ಯಗಳಿಗೆ ಅನುಗುಣವಾಗಿ ಹಲವು ವರ್ಷಗಳ ಕಾಲ ಕಾನೂನು ಹೋರಾಟ ನಡೆದು, ವಿಚ್ಛೇದನ ದೊರೆಯಿತು. 1939ರಲ್ಲಿ ಮುಸ್ಲಿಂ ಮದುವೆ ಕಾನೂನು ತಿದ್ದುಪಡಿ ಸಂದರ್ಭ ಈ ವಿಚ್ಛೇದನ ಪ್ರಕರಣದ ವಿವರಗಳು ಉಲ್ಲೇಖವಾದವು. ‘ಹಸನ್ ಕುಟ್ಟಿ ಮತ್ತು ಜೈನಾಬಿ ಮೊಕದ್ದಮೆ’ಯ ತೀರ್ಪು ಅನೇಕ ಬಾರಿ ಉಲ್ಲೇಖಗೊಂಡಿದೆ. ಬಳಿಕ ಜೈನಾಬಿಯವರು, ಅಹ್ಮದ್ ಅವರನ್ನು ಮದುವೆಯಾದರು. ಅಹ್ಮದ್ ಅವರು ಮದ್ರಾಸಿನಲ್ಲಿ ಮಹಮ್ಮದೀಯ ಕಾನೂನಿನಲ್ಲಿ ಅಧ್ಯಯನ ಮಾಡಿ ಚಿನ್ನದ ಪದಕ ಪಡೆದಿದ್ದ ಸುಶಿಕ್ಷಿತ. ಹಾಗಾಗಿ ಮುಕ್ತ ಚಿಂತನೆ, ಸುಧಾರಣೆಯ ಧೋರಣೆಯು ಸಾರಾ ಅವರಿಗೆ ಬಾಲ್ಯದಿಂದಲೇ ಬಂದ ಆಸ್ತಿ ಎನ್ನಬಹುದು.
ಈ ಯೋಚನೆಗಳೇ ಅವರಿಗೆ ಅನುವಾದ ಕ್ಷೇತ್ರದತ್ತ ಗಮನ ಹರಿಸಲುಪ್ರೇರಣೆ ನೀಡಿದೆ. ಕಮಲಾದಾಸ್ (ಮನೋಮಿ), ಬಿ.ಎಂ. ಸುಹರಾ(ಬಲೆ) ಪಿ.ಕೆ. ಬಾಲಕೃಷ್ಣನ್ (ನಾನಿನ್ನು ನಿದ್ರಿಸುವೆ), ಈಚರ ವಾರಿಯರ್(ತುರ್ತು ಪರಿಸ್ಥಿತಿಯ ಕರಾಳ ಮುಖ) , ಆರ್. ಬಿ. ಶ್ರೀಕುಮಾರ್ (ಧರ್ಮದ ಹೆಸರಿನಲ್ಲಿ), ಡಾ. ಕತೀಜಾ ಮುಮ್ತಾಜ್ (ಮುಂಬೆಳಕು), ಎಂ.ಎನ್. ಕಾರಶೇಂ(ವೈಕಂ ಮಹಮ್ಮದ್ ಬಷೀರ್), ಸಯ್ಯದ್ ಮೆಹಬೂಬ್ ಶಾ ಖಾದ್ರಿ (ಮುಸ್ಲಿಂ ಮಹಿಳೆಯರು ಮತ್ತು ತಲಾಖ್) ಎಂಬ ಕೃತಿಗಳನ್ನು ಅವರು ಮಲಯಾಳಂ ನಿಂದ ಕನ್ನಡಕ್ಕೆ ಅನುವಾದಿಸಿದರು.
ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ತಳಒಡೆದ ದೋಣಿಯಲ್ಲಿ, ಪ್ರವಾಹ-ಸುಳಿ, ಪಂಜರ, ಇಳಿಜಾರು, ಕಾಣಿಕೆ – ಅವರು ಬರೆದ ಕಾದಂಬರಿಗಳು. ಐದು ಕಥಾಸಂಕಲನ, ನಾಟಕ, ಪ್ರವಾಸ ಕೃತಿಗಳು, ಪ್ರಬಂಧ ಸಂಕಲನಗಳನ್ನು ಅವರು ಹೊರತಂದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ ಸೇರಿದಂತೆ ಹಲವು ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ.
ಸಾರಾ ಅವರಿಗೆ ಬಿ.ಎಂ. ರೋಹಿಣಿ ಆಪ್ತ ಗೆಳತಿ. ಎಷ್ಟೋಬಾರಿ ತಮ್ಮ ಮನಸ್ಸಿನ ದುಗುಡ, ಕೌಟುಂಬಿಕ,ಸಾಹಿತ್ಯ ಅಥವಾ ಮತ್ಯಾವುದೇ ಖುಷಿ ಬೇಸರಗಳನ್ನು ಅವರು ಗೆಳತಿಯೊಂದಿಗೆ ಹಂಚಿಕೊಳ್ಳುತ್ತಿದ್ದರು. ಸಾತ್ವಿಕ ಸ್ವಭಾವದ ರೋಹಿಣಿಯವರದು ಅಮ್ಮನಂತಹ ವಾತ್ಸಲ್ಯ. ‘ಕನ್ನಡ ನಾಡು ನನ್ನನ್ನು ಸಾಕಿದೆ. ಸಂತೃಪ್ತಿಯಾಗುವಷ್ಟು ಗೌರವ ಮನ್ನಣೆಗಳನ್ನು ಕೊಟ್ಟಿದೆ..’ ಎಂದು ಸಾರಾ ಆಗಾಗ ರೋಹಿಣಿ ಅವರೊಡನೆ ಹೇಳುತ್ತಿದ್ದುದುಂಟು. ಇದೀಗ, ನಿಮ್ಮ ಸಾಹಿತ್ಯ ಕೃತಿಗಳ ಕುರಿತು ಆನ್ ಲೈನ್ ಸೆಮಿನಾರ್ ಮಾಡುತ್ತಿದ್ದೇವೆ. ಭಾಗವಹಿಸಲು ಆಗುವುದಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ, ಮತ್ತೊಂದು ಕಾರ್ಯಕ್ರಮ ಮಾಡುವ ಎಂದು ಗೆಳತಿಯನ್ನು ಸಂತೈಸುತ್ತಿದ್ದರೆ ಸಾರಾ ಮೇಡಂ ಮುಗುಳು ನಗುತ್ತಿದ್ದರು.
(ಚಿತ್ರಗಳು: ಅಬ್ದುಲ್ ರಶೀದ್)
ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ.