ಆ ಹುಡುಗಿ ಕೃತಕ ನಗೆ ನಕ್ಕಳು. ಅವಳ ಕಣ್ಣುಗಳಲ್ಲಿ ಏನೋ ಹೊಳೆಯುತ್ತಿತ್ತು. ಚಿನ್ನದ ಹೊಳಪಿನ ಪ್ರತಿಬಿಂಬವನ್ನು ಅಲ್ಲಿ ನಾನು ಕಂಡೆ ಅಂತನ್ನಿಸಿತು. ಅವಳ ಹಾಲೆಗಳಿಂದ ಜೋತಾಡುತ್ತಿದ್ದ ಕಿವಿಯೋಲೆಗಳು, ಮತ್ತು ಸಣ್ಣ ವಜ್ರದ ಉಂಗುರ ಕೈ ಬೆರಳಿನ ಮೇಲೆ ಮಿನುಗುತ್ತಿದ್ದುದ್ದನ್ನು ನಾನು ಆಗ ಮಾತ್ರ ಗಮನಿಸಿದೆ.
ಸ್ಮಿತಾ ಮಾಕಳ್ಳಿ ಅನುವಾದಿತ ಐಸಾಕ್ ಬಾಶೆವಿಸ್ ಸಿಂಗರನ ‘ಇನ್ ಮೈ ಫಾದರ್ಸ್ ಕೋರ್ಟ್‌ʼ ಆತ್ಮಕಥನದ ಸರಣಿಯ ಮೂರನೆಯ ಕಂತು

 

ನಾನು ನನ್ನ ತಂದೆಗೆ ಅನೇಕ ವೇಳೆ ಅವರ ಓಲೆಕಾರನಾಗಿ ಕೆಲಸ ಮಾಡುತ್ತಿದ್ದೆ ಮತ್ತು ರಬಿನಿಕಲ್ ಅಥವಾ ದಿನ್ ಟೋರಾದ ವಿಚಾರಣೆಗೆ ಸಂಬಂಧಿಸಿದವರನ್ನು ಕರೆಯಲು ಪದೇ ಪದೇ ಕಳುಹಿಸುತ್ತಿದ್ದರು. ಅಂತಹ ಒಂದು ನಿರ್ಧಿಷ್ಟ ಪ್ರಯಾಣದ ಕಡು ನೆನಪು ನನ್ನ ಮನಸ್ಸಿನಲ್ಲಿ ನಿಂತಿದೆ. ಪಾಶ್ಚಾತ್ಯ ಶೈಲಿಯ ಉಡುಗೆ ತೊಟ್ಟ ಯುವಕನೊಬ್ಬ ಅಪ್ಪನನ್ನ ನೋಡಲು ಬಂದ. ಜೊತೆಗೆ ನಂ.13, ಕ್ರೋಚ್ಮಲ್ನ ಬೀದಿಯಲ್ಲಿ ವಾಸವಾಗಿದ್ದು, ಅವನಿಗೆ ನಿಶ್ಚಿತವಾದ ವಧುವನ್ನು ವಿಚಾರಣೆಗೆ ಕರೆಸಬೇಕೆಂದು ವರಾತ ತೆಗೆದ. ಅಪ್ಪ ತಕ್ಷಣವೇ ನನಗೆ ಆಕೆ ಮತ್ತು ಆಕೆಯ ತಂದೆಯನ್ನ ಕರೆತರಲು ಕಳುಹಿಸಿದರು.

ಯಾರೇ ಆಗಲಿ ಅಲ್ಲಿಗೆ ಹೋಗಲು ನಂ.10ರ ನಮ್ಮ ಮನೆಯ ಬೀದಿಯನ್ನಷ್ಟೇ ದಾಟಿದರೆ ಸಾಕಿತ್ತು. ಆದಾಗ್ಯೂ, ನಂ.13 ಕುಖ್ಯಾತ ಕ್ರೋಚ್ಮಲ್ನ ಚೌಕದ ತುದಿಯಲ್ಲೇ ಇತ್ತು, ಅಲ್ಲಿ ಜೇಬುಗಳ್ಳರು ಹಾಗೂ ಗುಂಡಾಗಳು ಅಡ್ಡಾಡುತ್ತಿದ್ದರು ಮತ್ತು ವ್ಯಾಪಾರಿಗಳು ಕದ್ದಮಾಲುಗಳ ವ್ಯವಹಾರವನ್ನ ಕುದುರಿಸುತ್ತಿದ್ದರು. ಆ ಚೌಕಕ್ಕೆ ಮುಖ ಮಾಡಿದ್ದ ಎಷ್ಟೋ ಮನೆಗಳು ವ್ಯಭಿಚಾರದ ಗೂಡಾಗಿದ್ದವು. ಅಲ್ಲಿ ಮಾಮೂಲಿ ವ್ಯವಹಾರ ಕೂಡ ಗುಟ್ಟಾಗಿ ನಡೆಯುತ್ತಿದ್ದವು: ಅಲ್ಲಿ ಯಾರಾದರೂ ಚಾಕೋಲೇಟ್ ಹೊದಿಕೆಯಿದ್ದ ಪಟಾಕಿಯ ಕೊಂಡುಕೊಳ್ಳಬೇಕೆಂದಿದ್ದರೇ ಟೋಪಿಯೊಳಗಿಂದ ಒಂದು ಸಂಖ್ಯೆಯನ್ನ ಆರಿಸಬೇಕಿತ್ತು ಅಥವಾ ಮರದ ಚಕ್ರವನ್ನ ತಿರುಗಿಸಬೇಕಿತ್ತು.

ಹೀಗಿದ್ದರೂ ಕೆಲ ಮನೆಗಳಲ್ಲಿ ಸಭ್ಯ ಗಂಡಸರು, ಶ್ರದ್ಧಾ ಭಕ್ತಿಗಳಿದ್ದ ಹೆಂಗಸರು, ಪರಿಶುದ್ಧ ಹುಡುಗಿಯರು ಇದ್ದರು. ಅಲ್ಲಿ ಕೆಲವು ಹ್ಯಾಸ್ದಿಕ್ ಓದಿನ ಮನೆಗಳು ಇದ್ದವು.

ಅದೊಂದು ಬೇಸಿಗೆಯ ಕಾಲ. ಚೌಕವು ಜನರಿಂದ ಕಿಕ್ಕಿರಿದಿತ್ತು. ನಂ.13ರ, ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಹುಡುಗರು ತಾವೇ ಸೈನಿಕರೆಂಬಂತೆ ಆಡುತ್ತಿದ್ದರು, ಅಥವಾ ಕಳ್ಳ ಪೋಲೀಸರ ಆಟ; ಹುಡುಗಿಯರು ಕುಂಟೇಬಿಲ್ಲೆ ಮನೆಯ ಜಿಗಿಯುತ್ತಿದ್ದರು, ಲಗೋರಿ, ತಿರುಗುವ ಆಟಗಳು ಹೀಗೆ ನಡೆಯುತ್ತಿದ್ದವು, ಅದರಲ್ಲಿ ಗೆದ್ದವರಿಗೆ ಕರಟಕಾಯಿಗಳು ಬಹುಮಾನಗಳಾಗಿದ್ದವು. ನಾನು ಯಾವುದಾದರೊಂದು ಆಟದೊಳಗೆ ಸೇರಿ ಕಾಲವ್ಯಯ ಮಾಡಲು ಇಷ್ಟೆಲ್ಲಾ ಪ್ರೇರೇಪಣೆಗಳು ಅಲ್ಲಿ ಇದ್ದವು. ಆದರೆ ಓಲೆಕಾರ ಓಲೆಕಾರನೇ… ನಾನು ಮೆಟ್ಟಿಲುಗಳ ಮೇಲೆ ಓಡಿದೆ. ಮೊದಲನೇ ಮಹಡಿಯಿಂದ ಈ ಕಟ್ಟಡ ನೋಡಲು ಅಂದವಾಗಿಯೇ ಕಂಡಿತು. ನಾನು ಮೇಲೆ ಹತ್ತಿದಂತೆಲ್ಲಾ, ಆದಾಗ್ಯೂ ಗೋಡೆಗಳ ಬಣ್ಣ ಸ್ವಲ್ಪ ಜಾಸ್ತಿಯೇ‌ ಕಿತ್ತು ಉದುರಿಹೋಗಿತ್ತು, ಕಂಬಿ ಸಡಿಲವಾಗಿ, ಮೆಟ್ಟಿಲುಗಳು ಕೊಳಕಾಗಿ ಇದ್ದವು. ಬಾಗಿಲುಗಳು ವಿಶಾಲವಾಗಿ ತೆರೆದಿದ್ದವು. ಅಡುಗೆ ಮನೆಗಳು ಹಬೆಯನ್ನ ಆಚೆ ಹಾಕುತ್ತಿದ್ದವು, ಸುತ್ತಿಗೆಯ, ಹೊಲಿಗೆ ಯಂತ್ರದ ಮೊರೆತ, ದರ್ಜಿಯವಳ ಮತ್ತು ಹೊಸ ಕಸುಬಿಯ ಹಾಡುಗಳ ಸದ್ದಿನ ಜೊತೆಗೆ ಗ್ರಾಮಫೋನುಗಳ ಸದ್ದು ಕೂಡ ಕೇಳಿಬರುತ್ತಿತ್ತು.

ನನ್ನನ್ನು ಯಾರಿಗಾಗಿ ಕಳುಹಿಸಿದ್ದರೋ ಅವರು ಅಟ್ಟದ ಕೊಳಕು ಕೋಣೆಯೊಂದರಲ್ಲಿ ವಾಸಿಸುತ್ತಿದ್ದರು. ನಾನು ಬಾಗಿಲನ್ನ ತೆರೆದೆ. ಅಲ್ಲೊಬ್ಬ ಪೂರ್ಣ ಕರಿಗಡ್ಡದ ಮನುಷ್ಯನೊಬ್ಬ ಕಂಡ, ಜೊತೆಗೆ ಆಧುನಿಕ ಶೈಲಿಯ ಸಭ್ಯ ಉಡುಪಿನ ಹುಡುಗಿಯೊಬ್ಬಳೂ. ಆ ಮನುಷ್ಯ ಮೇಜಿನ ಬಳಿ ಕುಳಿತು ಊಟ ಮಾಡುತ್ತಿದ್ದ. ಆ ಹುಡುಗಿ ಅವನಿಗೆ ಮಾಂಸದ ಸಾರನ್ನೋ, ಅಥವಾ ಕೋಸುಗಡ್ಡೆಯ ಸಾರನ್ನೋ ಬಡಿಸುತ್ತಿದ್ದಳು. ಆತ ನನ್ನ ಕಡೆ ಸಿಟ್ಟಿನಿಂದ ನೋಡಿದ.

“ಏನ್ ಬೇಕು ನಿಂಗೆ?”

“ನಿಮ್ಮನ್ನ ರಬ್ಬಿಯೂ ರಬಿನಿಕಲ್ ವಿಚಾರಣೆಗೆ ಬರಹೇಳಿದ್ದಾರೆ.”

“ನನ್ನನ್ನ ಕರೆಯಲು ಹೇಳಿದವರಾರು?”

“ನಿಮ್ಮ ಮಗಳಿಗೆ ನಿಶ್ಚಯವಾಗಿರುವ ಗಂಡು.”

ಆ ಮನುಷ್ಯ ಏನೋ‌ ಗೊಣಗಿಕೊಂಡ. ಆ ಹುಡುಗಿ ಸಹ ಸಿಟ್ಟಿನಿಂದ ನನ್ನನ್ನ ನೋಡಿದಳು.

“ಸರಿ, ಈಗೇನ್ ಮಾಡೋದು?” ಅವಳಪ್ಪನನ್ನ ಕೇಳಿದಳು.

“ಒಬ್ರು ಕರೆದಾಗ, ಅವ್ನು ಹೋಗ್ತಾನೆ!” ಎಂದು ಅಸಮಾಧಾನದಿಂದ ಉತ್ತರಿಸಿದ.

ಅವನು ಊಟವನ್ನ ಮುಗಿಸಿದ ಮತ್ತು ಅವಸರದಲ್ಲೇ ಅನುಗ್ರಹವನ್ನ ಹೇಳಿಕೊಂಡ. ಆ ಹುಡುಗಿ ಕನ್ನಡಿಯ ಮುಂದೆ ನಿಂತು ತನ್ನ ಕೂದಲನ್ನ ಸರಿಪಡಿಸಿಕೊಂಡು ಹಾಗೇಯೇ ಕೋಟನ್ನ ಧರಿಸಿಕೊಂಡಳು. ನಂತರ ನಾವು ಮೂವರು ಹೊರಗೆ ಅಡಿಯಿಟ್ಟೆವು. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಗಳಲ್ಲಿ ಯಾರಿಗೆ ಹಾಜರಾಗಲೂ ಕರೆಬಂದಿರುತ್ತದೋ ಅವರು ನನ್ನ ಜೊತೆಗೆ ವಾದಕ್ಕೆ ಇಳಿಯುತ್ತಿದ್ದರು. ಆದರೆ ಈ ಸಾರಿ ಅಪ್ಪ ಮತ್ತು ಮಗಳು ಮೌನವನ್ನ ಕಾಪಾಡಿಕೊಂಡರು -ಅದರಲ್ಲೂ ಭೀತಿ ಹುಟ್ಟಿಸುವಂತಹ ಮೌನ. ಹೀಗೆ ನಾನು ಅವರನ್ನು ನಮ್ಮ ಮನೆಗೆ ಕರೆತಂದೆ. ಅಪ್ಪ ಆ ಮನುಷ್ಯನಿಗೆ ಕುಳಿತುಕೊಳ್ಳಲು ಹೇಳಿದರು. ಆ ಹುಡುಗಿ ನಿಂತೇ ಇದ್ದಳು : ಅಪ್ಪನ ಓದಿನ ಕೋಣೆಯಲ್ಲಿ ಮಹಿಳೆಯರಿಗಾಗಿ ಯಾವುದೇ ಆಸನಗಳು ಇರಲಿಲ್ಲ.

ಅಪ್ಪ ಈಗ ಅವರಿಗೆ ರೂಢಿಗತವಾದ ಪ್ರಶ್ನೆಗಳನ್ನು ಕೇಳಲು ಶುರುವಿಟ್ಟ.

“ಇಲ್ಲಿ ಆಪಾದಕ ಯಾರು?”

“ನಾನೇ ಆ ಆಪಾದಕ,” ಯುವಕ ಉತ್ತರಿಸಿದ.

“ಮತ್ತೇ ಏನ್ ಬೇಕಿತ್ತು ನಿಂಗೆ?”

“ನಾನು ನಿಶ್ಚಿತಾರ್ಥವನ್ನ ಮುರಿದುಕೊಳ್ಳಲು ಬಯಸುತ್ತೇನೆ.”

“ಯಾಕೆ?”

“ಏಕೆಂದರೆ ನಾನು ಅವಳನ್ನ ಪ್ರೀತಿಸುತ್ತಿಲ್ಲ,” ಉತ್ತರಿಸಿದ ಯುವಕ.

ನನ್ನ ತಂದೆ ಕಾಣುವಂತೆಯೇ ಅಸಮಾಧಾನವಾದರು. ನಾನು ನಾಚಿದೆ. ಅವಳು ಅವಳ ತಂದೆಯಂತೆ ಕಪ್ಪು, ಅಪ್ರಸನ್ನ, ಗಡ್ಡಧಾರಿಯಾಗಿ, ಸ್ಥೂಲವಾಗಿರದೇ, ಸುಂದರವಾಗಿ, ನಯವಾಗಿ, ಹಗುರವಾಗಿದ್ದಳು. ಅವಳು ಚಾಕಲೇಟ್ ಹಾಗೂ ಸುಗಂಧ ದ್ರವ್ಯದ ಸುವಾಸನೆಭರಿತವಾಗಿದ್ದಳು. ಅವಳ ಶೂಗಳಿಗೆ ತೆಳ್ಳಗೆ, ಉದ್ದನೆಯ ಹಿಮ್ಮಡಿಗಳಿದ್ದವು. ನನಗೆ ಅರ್ಥವಾಗಲೇ ಇಲ್ಲ ಯಾರಾದರು ಇಂತಹ ರಾಜಕುಮಾರಿಯನ್ನ ಪ್ರೀತಿಸುತ್ತಿಲ್ಲ ಎಂದು ಹೇಗೆ ಹೇಳೋಕೆ ಸಾಧ್ಯ ಅಂತ. ಆದರೆ ಸ್ವತಃ ಈ ಯುವಕನೇ ಷೋಕಿಲಾಲನಾಗಿದ್ದ. ಅವನು ಇಂತಹ ಸುಂದರ ಹುಡುಗಿಯ ಬಗ್ಗೆ ಏನು ತಾನೇ ಕಾಳಜಿ ವಹಿಸುತ್ತಾನೆ?

ಅಪ್ಪ ತನ್ನ ದಾಡಿಯನ್ನ ನೀವಿಕೊಂಡ. “ಮತ್ತೆ ಬೇರೇನು?”

“ಇದಿಷ್ಟೇ ರಬ್ಬಿ.”

“ಮತ್ತೆ ನೀನು, ಇದರ ಬಗ್ಗೆ ಏನು ಹೇಳುವೆ?” ಎಂದು ನಮ್ಮಪ್ಪ ಈ ಪ್ರಶ್ನೆಯನ್ನ ಕೇಳಿದ ರೀತಿ ಹೇಗಿತ್ತೆಂದರೆ ಅದು ಅವಳನ್ನೋ ಅಥವಾ ಅವಳ ತಂದೆಯನ್ನು ಉದ್ದೇಶಿಸಿತ್ತೋ ಹೇಳಲು ಕಷ್ಟ.

“ನಾನು ಅವನನ್ನು ಪ್ರೀತಿಸುತ್ತಿದ್ದೇನೆ,” ನೀರಸವಾಗಿ ಹಾಗೂ ಬಹುತೇಕ ಸಿಟ್ಟಿನಲ್ಲೇ ಹೇಳಿದಳು ಹುಡುಗಿ.

ಈಥರ ಪ್ರಕರಣಗಳಲ್ಲಿ ನಮ್ಮಪ್ಪ ಬೇಗನೇ ಒಂದು ನಿರ್ಣಯಕ್ಕೆ ಬಂದುಬಿಡೋನು. ಸಾಮಾನ್ಯವಾಗಿ ಸಂಧಾನ ಮಾಡಿಸೋನು. ಆದರೆ ಇಲ್ಲಿ ಎಂತಾ ಸಂಧಾನ ತಾನೇ ಸಾಧ್ಯವಿತ್ತು? ಇದಕ್ಕೆ ನೀನೇನು ಹೇಳ್ತಿಯ? ಅನ್ನೋ ರೀತಿಯಲ್ಲಿ ನನ್ನ ಕಡೆ ನೋಡಿದ. ಆದರೆ ನಾನು ಅವನಷ್ಟೇ ಗೊಂದಲದಲ್ಲಿದ್ದೆ. ನಂತರ ನಾನು ಇದುವರೆಗೂ ಕೇಳಿರದೇ ಇದ್ದಂತಹದ್ದೇನೋ ಹೇಳಿದ. ಇತ್ತೀಚಿನ ವರ್ಷಗಳಲ್ಲಿ “ಅಧಿಕೃತ”ವಾಗಿ ರಾಜ್ಯದಿಂದಲೇ ನೇಮಕಗೊಂಡ ರಬ್ಬಿಗಳು ವಿವಾದವನ್ನ ಇತ್ಯರ್ಥ ಮಾಡಲು ಒಂದು ಕಡೆಯವರನ್ನು ಅಥವಾ ಇನ್ನಿತರರನ್ನು ಪಕ್ಕಕ್ಕೆ ಕರೆದು ರಹಸ್ಯವಾಗಿ ವಿಚಾರಿಸಿಸೋದು ವಾಡಿಕೆಯಾಗಿದೆ. ಅಪ್ಪ ಆಗಾಗ್ಗೆ ಈ ರೂಢಿಯ ಬಗ್ಗೆ ಅಸಮ್ಮತಿ ಪ್ರಕಟಿಸುತ್ತಲೇಯಿದ್ದ -ನ್ಯಾಯ ತೀರ್ಮಾನಕ್ಕಾಗಿ ಕುಳಿತ ರಬ್ಬಿಯೊಬ್ಬ ಖಡಾಖಂಡಿತವಾಗಿ ಎರಡು ಕಡೆಯ ದಾವೆದಾರರ ಬಳಿ ರಹಸ್ಯದಲ್ಲಿ ಮಾತಾಡಲೇಬಾರದೆಂದು. ಆದರೆ ಈಗ ಅವನು, “ನನ್ನ ಜೊತೆ ಒಳಗೆ ಬನ್ನಿ.” ಎಂದು ಹೇಳಿದ್ದನ್ನ ಸ್ವತಃ ನಾನೇ ಕೇಳಿದ್ದೆ.

ಅಲ್ಲಿ ಯಾರಾದರೂ ಚಾಕೋಲೇಟ್ ಹೊದಿಕೆಯಿದ್ದ ಪಟಾಕಿಯ ಕೊಂಡುಕೊಳ್ಳಬೇಕೆಂದಿದ್ದರೇ ಟೋಪಿಯೊಳಗಿಂದ ಒಂದು ಸಂಖ್ಯೆಯನ್ನ ಆರಿಸಬೇಕಿತ್ತು ಅಥವಾ ಮರದ ಚಕ್ರವನ್ನ ತಿರುಗಿಸಬೇಕಿತ್ತು.

ಎದ್ದು ನಿಂತು ಆ ಹಿರಿಯ ಮನುಷ್ಯನಿಗೆ ಸನ್ನೆ ಮಾಡಿದ. ಅವರಿಬ್ಬರು ಪಕ್ಕದಲ್ಲಿದ್ದ ಉಪಕೋಣೆಗೆ ಹೋದರು. ಮತ್ತೇ ನಾನು -ನಾನು ಇನ್ನೇನು ತಾನೇ ಮಾಡಿದೆ? ಸ್ವಾಭಾವಿಕವಾಗಿ, ಅವರ ಜೊತೆಯಲ್ಲೇ ಹೋದೆ. ಅಲ್ಲಿ ಏನಾದ್ರು ಗುಟ್ಟು ಇದ್ದರೇ, ಅದನ್ನ ಕೇಳಿಸಿಕೊಳ್ಳಬೇಕಿತ್ತು. ಓದಿನ ಕೋಣೆಯ ಬಾಗಿಲು ಸ್ವಲ್ಪ ತೆರೆದಿತ್ತು. ನನ್ನ ಕಿವಿಗಳು ನನ್ನ ತಂದೆಯ ಹಾಗೂ ಆ ಹಿರಿಯ ಮನುಷ್ಯನ ಕಡೆಗೇ ಇದ್ದವು. ಆದರೆ ನನ್ನ ಕಣ್ಣುಗಳು ಆ ಸುಂದರವಾದ ಜೋಡಿಯ ಮೇಲೆ. ಮತ್ತೂ ಈಗ ನಾನು ಅತ್ಯಂತ ಅಸಾಧಾರಣವಾದದನ್ನ ನೋಡಿದೆ. ಆ ಸುಂದರ ಹುಡುಗಿ ಅವಳ ವರನೆಡೆಗೆ ಹೋದಳು, ಅವರಿಬ್ಬರು ಸ್ವಲ್ಪ ಮಾತನಾಡಿದರು, ಮೆಲುಧ್ವನಿಯಲ್ಲಿ ವಾದಿಸಿದರು, ಮತ್ತೇ ಏಕಾಏಕಿ ಪ್ರತಿಧ್ವನಿಯಾಗುವಂತಹ ಏಟಿನ ಶಬ್ಧ. ಒಂದು ನಿಮಿಷದ ನಂತರ, ಮತ್ತೊಂದು. ಯಾರು ಯಾರಿಗೆ ಮೊದಲು ಹೊಡೆದರು ಎಂದು ನನಗೆ ನೆನಪಾಗುತ್ತಿಲ್ಲ, ಆದರೆ ಅವರಿಬ್ಬರೂ ಕೂಡ ಹೊಡೆದುಕೊಂಡಿದ್ದರೆಂದು ನನಗೆ ಗೊತ್ತು, ಅದೆಲ್ಲವೂ ಸದ್ದಿಲ್ಲದೇ ನಡೆದಿತ್ತು -ಕ್ರೋಚ್ಮಲ್ನ ಬೀದಿಯ ರೀತಿಯಲ್ಲಿ ಇರಲಿಲ್ಲ. ಅವರಿಬ್ಬರೂ ಹೊಡೆದುಕೊಂಡ ನಂತರ ದೂರವಾದರು. ಅಪ್ಪನಿಗೆ ಕೇಳಿಸಿತ್ತು ಮತ್ತು ಏನೂ ಕಾಣಿಸಿರಲಿಲ್ಲ. ಆ ಹುಡುಗಿಯ ತಂದೆಗೆ ಇಲ್ಲಿ ಏನಾಗುತ್ತಿರಬಹುದು ಎಂದು ಅರ್ಥವಾದರೂ, ಏನನ್ನೂ ಗಮನಿಸದವನಂತೆ ನಟಿಸಿದ ಎಂದು ನನಗೆ ಅನ್ನಿಸಿತ್ತು. ನನ್ನ ಕಣ್ಣುಗಳು ನೀರು ತುಂಬಿಕೊಂಡವು. ಮೊದಲ ಬಾರಿಗೆ ನಾನು ಪ್ರೌಢಾವಸ್ಥೆಯ, ಗಂಡು ಹೆಣ್ಣಿನ ನಡುವಿನ ರಹಸ್ಯಗಳ, ಗಾಢವಾದ ಪ್ರೀತಿಯ ಕಂಪನವನ್ನ ಉಸಿರಾಡಿದೆ.

ನನ್ನ ತಂದೆ ಹೇಳೋದನ್ನ ಕೇಳಿಸಿಕೊಂಡೆ: “ಅವನಿಗೆ ಅವಳನ್ನು ಮದುವೆಯಾಗಲು ಇಷ್ಟವಿಲ್ಲದಿರುವುದರಿಂದ, ಈಗೇನ್ ಮಾಡೋದು?”

“ರಬ್ಬಿ, ನಮಗೂ ಅವನು ಬೇಕಿಲ್ಲ,” ಆ ಮನುಷ್ಯ ಮುಂಗೋಪದಲ್ಲೇ ಉತ್ತರಿಸಿದ.

“ಅವನೊಬ್ಬ ರೌಡಿ, ದುಂದುವೆಚ್ಚದ -ಕಳಪೆಯವನು. ಅವನು ಬೇರೆ ಹುಡುಗಿಯರ ಹಿಂದೆ ತಿರುಗುತ್ತಾನೆ. ಅವನು ಮಾಡ್ದೇಯಿರೋ ಪಾಪಯಿಲ್ಲ. ಸುಮಾರು ಹಿಂದಿನಿಂದಲೇ ಇವನಿಂದ ದೂರವಾಗಬೇಕು ಅಂತ ಇದ್ವಿ, ಆದ್ರೆ ಇವಳಿಗೆ ಉಡುಗೊರೆಗಳನ್ನ ಕೊಟ್ಟಿದ್ದಾನೆ -ಅವುಗಳನ್ನು ನಮಗೆ ಹಿಂದಿರುಗಿಸಲು ಇಷ್ಟವಿಲ್ಲ. ಅದೊಂದೇ ಕಾರಣಕ್ಕೆ ಈತನನ್ನು ಇನ್ನೂ ಪ್ರೀತಿ ಮಾಡ್ತಾಯಿದ್ದಿನಿ ಅಂತ ಅವಳು ಹೇಳೋದು. ನಿಜವಾಗಿಯೂ ಅವನನ್ನು ಸಹಿಸೋಕೆ ಇವಳಿಗೆ ಆಗಲ್ಲ -ಇದೇ ಈ ವಿಷಯದ ನಿಜಾಂಶ. ಆದ್ರೆ ನಾವು ಆ ಉಡುಗೊರೆಗಳನ್ನು ವಾಪಾಸ್ ಮಾಡೋಲ್ಲ.”

“ಯಾವ ರೀತಿಯ ಉಡುಗೊರೆಗಳು?”

“ಒಂದು ಉಂಗುರ, ಒಂದು ಹಾರ, ಒಂದು ಪದಕ.”

“ಬಹುಶಃ ನೀವು ರಾಜಿ ಮಾಡಿಕೊಳ್ಳಬಹುದ?”

“ರಾಜಿ ಇಲ್ಲವೇ ಇಲ್ಲ! ನಾವು ಏನನ್ನು ಹಿಂದಿರುಗಿಸೋಲ್ಲ! ಏನನ್ನೂ ಸಹ!”

“ಹ್ಮು, ನೋಡುವ. ದಯವಿಟ್ಟು ಈಗ ಆಚೆ ಹೋಗಿ ಮತ್ತು ಆ ಯುವಕನನ್ನು ಒಳಗೆ ಕಳುಹಿಸಿ.”

ನಂತರ ಅಪ್ಪನೇ ಓದಿನ ಕೋಣೆಗೆ ಬಂದು ವರನಿಗೆ ಮೆಲುಧ್ವನಿಯಲ್ಲಿ “ಒಳಗೆ ಬಾ!” ಎಂದ.

ಆ ಯುವಕ ಕೂಡಲೇ ಒಳಬಂದ.

“ನಿಜವಾಗಿಯೂ ನಿನಗೆ ಅವಳನ್ನು ಮದುವೆಯಾಗಲು ಇಷ್ಟವಿಲ್ಲವೆ?” ಕೇಳಿದ ಅಪ್ಪ

“ಇಲ್ಲ ರಬ್ಬಿ.”

“ಬಹುಶಃ ಈಗಲೂ ನಿಮ್ಮಿಬ್ಬರ ನಡುವೆ ಶಾಂತಿಗೆ ಪ್ರಯತ್ನಿಸಬಹುದೇನೊ?”

“ಇಲ್ಲ, ರಬ್ಬಿ. ಅದು ಅಸಾಧ್ಯ.”

“ಈ ಜಗತ್ತು ನಿಂತಿರೋದೇ ಶಾಂತಿ ಎಂಬ ಅಡಿಪಾಯದ ಮೇಲೆ.”

“ಅವಳ ಜೊತೆಗೆ ಶಾಂತಿ ಸಾಧ್ಯವೇ ಇಲ್ಲ.”

“ಅವಳು ಒಳ್ಳೆಯ ಯಹೂದಿ ಹೆಣ್ಣುಮಗಳು.”

“ರಬ್ಬಿ, ನಾವಿಬ್ಬರು ಇನ್ನೂ ಮದುವೆಯೇ ಆಗಿಲ್ಲ ಆಗಲೇ ಅವಳು ನನಗೇ ದುಡ್ಡಿಗಾಗಿ ಪೀಡಿಸಲು ಶುರು ಮಾಡಿದ್ದಾಳೆ. ನೋಡಿಕೊಳ್ಳಬೇಕಿರುವ ವಯಸ್ಸಾದ ತಾಯಿ ಇದ್ದಾರೆ ನನಗೆ, ಆದರೆ ಇವಳು ಅದಕ್ಕೆ ಅವಕಾಶ ಕೊಡುತ್ತಿಲ್ಲ. ನಾನು ದುಡಿದ ಪ್ರತಿ ಪೈಸೆಯ ಲೆಕ್ಕವನ್ನು ಅವಳಿಗೆ ಕೊಡಬೇಕು. ಇದು ಈಗಲೇ ಹೀಗಿದ್ದರೇ ಮುಂದೆ ಇನ್ನೇಗೆ. ಕೆಲಸವಿರುವ ಕಾಲದಲ್ಲಿ ನಾನು ವಾರಕ್ಕೆ ನಲವತ್ತು ರೂಬೆಲ್ ನಷ್ಟು ದುಡಿಯುತ್ತೇನೆ. ಅವಳ ತಂದೆಯೊಬ್ಬ ಲೋಭಿ. ಅವರ ಬಳಿ ಹಣವಿಲ್ಲ. ಅದಕ್ಕಾಗಿ ಎಲ್ಲರಿಂದ ಕೊನೆಯ ಪೈಸೆಯ ತನಕ ಹೀರಲು ನೋಡುತ್ತಾನೆ. ನಾನು ಯಾವಾಗಲಾದರೂ ಅವಳನ್ನು ಹೋಟೆಲ್ಲಿಗೆ ಕರೆದೊಯ್ದರೆ ಅವಳು ಪಟ್ಟಿಯಲ್ಲಿರುವ ಅತಿ ದುಬಾರಿ ತಿನಿಸನ್ನೇ ತರಲು ತಾಕೀತು ಮಾಡುತ್ತಾಳೆ -ಅದು ಹಸಿವೆಯಿಂದಲ್ಲ ಆದ್ರೆ ನನ್ನಿಂದ ಪ್ರಯೋಜನ ಪಡೆಯಲು ಅಷ್ಟೆ. ಯಾವಾಗಾದರೂ ಅವಳ ಮನೆಗೆ ಉಡುಗೊರೆ ಇಲ್ಲದೇ ಹೋಗಿದ್ದೇ ಆದರೆ, ಅವಳ ತಂದೆ ಕೆರಳಿ ಬಿಡುತ್ತಿದ್ದ. ಅವಳು ನನಗೆ ಇಂತದ್ದೇ ಉಡುಗೊರೆಯನ್ನು ಪುರಿಮ್ ಗೆ ತರಬೇಕೆಂದು ಹೇಳುತ್ತಿದ್ದಳು. ಅದು ಎಲ್ಲಾ ವಿಷಯದಲ್ಲೂ ಹೀಗೆಯೇ ಇತ್ತು. ಅವರಿಗೆ ಇದ್ದ ಒಂದೇ ಭಯ ಅಂದ್ರೆ ನಾನೆಲ್ಲಿ ಅವರನ್ನು ಮೂರ್ಖರನ್ನಾಗಿ ಮಾಡಿಬಿಡ್ತಿನೋ ಎಂದು… ನನಗೆ ಇಂತಹ ಜನರು ಇರ್ತಾರೆ ಎಂದು ಗೊತ್ತಿರಲಿಲ್ಲ. ಹಾಗಿದ್ದರೆ ಇದೆಲ್ಲಾ ಯಾವುದ್ದಕ್ಕೋಸ್ಕರ? ನಾನು ಜುಗ್ಗನಲ್ಲ. ಹೇಗಿದ್ದರೂ ಎಲ್ಲವೂ ಅವಳಿಗೆ ಸೇರಬೇಕಿತ್ತು. ನಾನು ಅವಳಿಗೆ ಹಾರ ಕೊಟ್ಟಾಗ ಅವಳು ಒಂದು ಚಿನ್ನದ ಅಂಗಡಿಯಿಂದ ಇನ್ನೊಂದಕ್ಕೆ ಅದರ ಬೆಲೆಯ ನಿರ್ಣಯಕ್ಕೆ ಓಡಾಡಿದ್ದಳು. ರಬ್ಬಿ, ಇಂತಹ ಜೀವನ ನನಗಲ್ಲ!”

“ಹಾಗಿದ್ದಲ್ಲಿ, ನೀನು ನಿಜಕ್ಕೂ ಇದ್ದನ್ನು ಕೊನೆಗೊಳಿಸಲು ಬಯಸುತ್ತೀಯ?”

“ಹೌದು, ರಬ್ಬಿ.”

“ಮತ್ತೇ ಆ ಉಡುಗೊರೆಗಳು?”

“ಅವುಗಳನ್ನ ಅವಳೇ ಇಟ್ಟುಕೊಳ್ಳಲಿ, ಅವಳು ಮಾತ್ರ!”

“ನಾನು ವಿಚಾರ ಮಾಡ್ತೇನೆ, ಈಗ ನಾವು ಅಲ್ಲಿಗೆ ಹಿಂದಿರುಗೋಣ.”

ಅಪ್ಪ ಈ ದೃಶ್ಯಗಳನ್ನ ತನ್ನ ಕೊಠಡಿಯಲ್ಲಿ ಸಮೀಕ್ಷಿಸಲು ತೊಡಗಿದ. ಉಪಕೋಣೆಯ ಒಳಗೆ ಹೋಗುವಾಗ ಅವನಿಗೆ ಇವರಿಬ್ಬರ ಬಗ್ಗೆ ಏನು ಕೂಡ ತಿಳಿದಿರಲಿಲ್ಲ. ಆದರೆ ಈಗ ಅವನಿಗೆ ಸ್ಪಷ್ಟವಾಗಿತ್ತು. ಎರಡು ಕಡೆಯವರು ಅವನ ತೀರ್ಮಾನವ ಒಪ್ಪಿದ್ದಾರೆಂದು ಘೋಷಿಸಲು ಹೇಳಿದ. ಅವನ ಶುಲ್ಕವನ್ನು ತೆಗೆದುಕೊಂಡ. ಅಪ್ಪನ ತೀರ್ಪಿನ ಪ್ರಕಾರ ಎರಡು ಕಡೆಯವರು ಒಬ್ಬರನ್ನೊಬ್ಬರು ತಿರಸ್ಕರಿಸುವಾಗ ಯಾರೊಬ್ಬರನ್ನು ಬಲವಂತವಾಗಿ ಒಪ್ಪಂದಕ್ಕೆ ಬದ್ಧರಾಗಿರಲು ಒತ್ತಾಯಿಸಬಾರದು ಎಂಬುದು. ಉಡುಗೊರೆಗಳ ಮೇಲೆ ವಧು ಹತೋಟಿ ಹೊಂದಿರುತ್ತಾಳೆ.

ಆ ಹುಡುಗಿ ಕೃತಕ ನಗೆ ನಕ್ಕಳು. ಅವಳ ಕಣ್ಣುಗಳಲ್ಲಿ ಏನೋ ಹೊಳೆಯುತ್ತಿತ್ತು. ಚಿನ್ನದ ಹೊಳಪಿನ ಪ್ರತಿಬಿಂಬವನ್ನು ಅಲ್ಲಿ ನಾನು ಕಂಡೆ ಅಂತನ್ನಿಸಿತು. ಅವಳ ಹಾಲೆಗಳಿಂದ ಜೋತಾಡುತ್ತಿದ್ದ ಕಿವಿಯೋಲೆಗಳು, ಮತ್ತು ಸಣ್ಣ ವಜ್ರದ ಉಂಗುರ ಕೈ ಬೆರಳಿನ ಮೇಲೆ ಮಿನುಗುತ್ತಿದ್ದುದ್ದನ್ನು ನಾನು ಆಗ ಮಾತ್ರ ಗಮನಿಸಿದೆ.

“ರಬ್ಬಿ, ಅವನು ಅಧಿಕೃತವಾಗಿ ಇವಳಿಗೆ ಕ್ಷಮೆ ಕೋರಿ ಒಂದು ಪತ್ರ ಬರೆಯಲಿ,” ತಂದೆ ಬೇಡಿಕೆಯಿಟ್ಟ.

ನನಗೆ ನೆನಪಿರುವ ಹಾಗೇ, ಎರಡು ಕಡೆಯವರು ಕ್ಷಮೆಯ ದಾಖಲೆಗಳನ್ನ ಬರೆದರು. ಮುರಿದ ನಿಶ್ಚಿತಾರ್ಥದಂತಹ ಪ್ರಕರಣಗಳಲ್ಲಿ ಇದೇ ವಾಡಿಕೆ. ಇಬ್ಬರು ತಮ್ಮ ಹೆಸರುಗಳಿಂದ ಸಹಿ ಮಾಡಿದರು. ಇದು ಕ್ರೋಚ್ಮಲ್ನಾ ಬೀದಿಯಲ್ಲಿ ಅಸಮಾನ್ಯವಾದುದು ನೆರವೇರಿದಂತಾಗಿತು. ಇದೆಲ್ಲವೂ ಮುಗಿದಾದ ಮೇಲೆ ಯುವಕ ಕೂತೇಯಿದ್ದ. ಅವನಿಗೆ ಅವರ ಜೊತೆ ಅಲ್ಲಿಂದ ಕಾಣುವ ಹಾಗೆ ಹೊರಡುವುದು ಬೇಕಿರಲಿಲ್ಲ. ಹುಡುಗಿಯ ತಂದೆ ಅವಳೆಡೆಗೆ ತಿರುಗಿ, “ಬೇಗನೇ ಬಾ ಈಗ!” ಎಂದ.

ಆಗ ಆ ಹುಡುಗಿ ಏನೋ ಹೇಳಿದಳು. ಅದು ನನ್ನ ನೆನಪಿನಲ್ಲಿ ಅಳಿಸಿ ಹೋಗದಂತೆ ಕುಳಿತಿದೆ. ಅವಳು ತೀವ್ರವಾಗಿ ಹೇಳಿದಳು : “ನಾನು ನಿನ್ನ ಥರದವನನ್ನು ಮತ್ತೇ ಭೇಟಿಯಾಗುವವರೆಗೂ ನನ್ನ ಎರಡು ಕಾಲುಗಳು ಮುರಿದಿರಿಲಿ!”

ನಾನು ಚಿಕ್ಕವನಾಗಿದ್ದರೂ ಸಹ, ಅವಳು ಅವನನ್ನು ಇನ್ನೂ ಪ್ರೀತಿಸುತ್ತಿದ್ದಳು ಎಂಬುದು ಅರ್ಥವಾಗಿತ್ತು. ಆ ನಿಶ್ಚಿತಾರ್ಥ ಮುರಿದು ಬೀಳಲು ಕಾರಣ ಆ ಲೋಭಿ ತಂದೆಯೇ ಆಗಿದ್ದ.