ಆ ಹೆಂಗಸು ಒಂದು ಹೆಬ್ಬಾತನ್ನ ತೆಗೆದು ಇನ್ನೊಂದರ ಮೇಲೆ ಎಸೆದಳು. ಒಮ್ಮೆಗೇ ಒಂದು ಚೀತ್ಕಾರ ಕೇಳಿಸಿತು. ಆ ಸದ್ದನ್ನ ವರ್ಣಿಸೋದು ಅಷ್ಟು ಸುಲಭವಲ್ಲ. ಅದೊಂದು ಹೆಬ್ಬಾತುವಿನ ಚೀರು ದನಿಯಾಗಿತ್ತು. ಅದು ಎಷ್ಟು ದೊಡ್ಡಮಟ್ಟದ ವಿಲಕ್ಷಣವಾದ ಏರುಧ್ವನಿಯ ನರಳುವಿಕೆ ಮತ್ತು ಕಂಪನವಾಗಿತ್ತೆಂದರೆ ನನ್ನ ಕಾಲುಗಳೂ ತಣ್ಣಗಾಗಿ ಹೋಗಿದ್ದವು. ನನಗೆ ನನ್ನ ಮುಂಗುರುಳುಗಳ ಚುಚ್ಚುವಿಕೆಯೂ ಅನುಭವಕ್ಕೆ ಬಂದಿತು.
ಸ್ಮಿತಾ ಮಾಕಳ್ಳಿ ಅನುವಾದಿತ ಐಸಾಕ್ ಬಾಶೆವಿಸ್ ಸಿಂಗರನ ‘ಇನ್ ಮೈ ಫಾದರ್ಸ್ ಕೋರ್ಟ್‌ʼ ಆತ್ಮಕಥನದ ಸರಣಿಯ ಎರಡನೆಯ ಕಂತು

 

ನಮ್ಮ ಮನೆಯಲ್ಲಿ ಯಾವಾಗಲೂ ಮಾತುಗಳು ಇರುತ್ತಿದ್ದುದೇ, ಈ ಸತ್ತ ಮನುಷ್ಯರ ದೆವ್ವಗಳು ಜೀವಂತವಾಗಿರುವವರ ಒಳಗೆ ಸೇರಿಕೊಂಡು ಅವರನ್ನ ವಶೀಕರಿಸಿಕೊಂಡಿದ್ದರ, ಆತ್ಮಗಳು ಪ್ರಾಣಿಗಳೊಳಗೆ ಪುನರವತಾರ ತಾಳಿದ್ದದರ, ಪುಂಡ ದೆವ್ವ ನೆಲೆಸಿರುವ ಮನೆಗಳ, ಪಿಶಾಚಗ್ರಸ್ಥ ನೆಲಮಾಳಿಗೆಗಳ ಬಗ್ಗೆಯೇ. ನಮ್ಮಪ್ಪ ಇವುಗಳ ಬಗ್ಗೆ ಮಾತನಾಡುತ್ತಿದ್ದುದ್ದಕ್ಕೆ ಕಾರಣ, ಮೊದಲನೇಯದಾಗಿ ಅವನಿಗೆ ಇವುಗಳ‌ ಮೇಲೆ ಎಲ್ಲಿಲ್ಲದ ಆಸಕ್ತಿ, ಎರಡನೇಯದಾಗಿ ಇಂತಹ ದೊಡ್ಡ ಪಟ್ಟಣದಲ್ಲಿ ಮಕ್ಕಳು ಸುಲಭವಾಗಿ ದಾರಿ ತಪ್ಪಿಬಿಡಬಹುದೆಂದು. ಮಕ್ಕಳು ಎಲ್ಲಂದರಲ್ಲಿ ಹೋಗಿಬಿಡುತ್ತಾರೆ, ಎಲ್ಲವನ್ನ ನೋಡುತ್ತಿರುತ್ತಾರೆ, ಅಪವಿತ್ರ ಪುಸ್ತಕಗಳನ್ನ ಓದುತ್ತಾರೆ. ಹಾಗಾಗಿ ಕಾಲಕಾಲಕ್ಕೆ ಅವರಿಗೆ ಈ ಪ್ರಪಂಚದಲ್ಲಿ ನಡೆಯುವ ನಿಗೂಢಗಳ ಬಗ್ಗೆ ನೆನಪಿಸುತ್ತಿರೋದು ಅನಿವಾರ್ಯ ಅಂದುಕೊಂಡಿದ್ದ.

ಒಂದು ದಿನ ನಮಗೆ ಧಾರ್ಮಿಕ ಗ್ರಂಥವೊಂದರಲ್ಲಿದ್ದ ಕಥೆಯೊಂದನ್ನು ಹೇಳಿದ್ದ. ನನ್ನ ನೆನಪು ತಪ್ಪಾಗಿಲ್ಲವಾದರೇ, ಆ ಪುಸ್ತಕದ ಕರ್ತೃ ರಬ್ಬಿ ಎಲಿಯಾಹು ಗ್ರೇಡಿಕರ್ ಅಥವಾ ಇತರ ಗ್ರೇಡಿಕರ್ ಋಷಿಗಳಲ್ಲಿ ಒಬ್ಬನಿರಬಹುದು. ಆ ಕತೆಯೂ ನಾಲ್ಕು ಪಿಶಾಚಿಗಳು ಹುಡುಗಿಯೊಬ್ಬಳನ್ನ ಹಿಡಿದಿಟ್ಟುಕೊಂಡಿದ್ದರ ಬಗ್ಗೆಯಾಗಿತ್ತು. ನಿಜವಾಗಿಯೂ ಆ ಪಿಶಾಚಿಗಳು ಅವಳ ಕರುಳಿನಲ್ಲಿ ತೆವಳಿಕೊಂಡು ಚಲಿಸುತ್ತಾ, ಅವಳ ಹೊಟ್ಟೆ ಊದಿಸಿ, ಅವು ಅವಳ ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಅಲೆದಾಡಿಕೊಂಡು, ಅವಳ ಕಾಲುಗಳಿಂದ ಜಾರೋದನ್ನ ನೋಡಬಹುದಾಗಿತ್ತಂತೆ. ಗ್ರೇಡಿಕರ್ ರಬ್ಬಿ ಏನೇನೋ ಮಂತ್ರ ಪಠಿಸಿ, ಗಿಡ ಮೂಲಿಕೆಗಳ ಸಾಂಬ್ರಾಣಿ ಹೊಗೆ ಹಾಕಿ, ಟಗರಿನ ಕೊಂಬಿನಿಂದ ಕಹಳೆ ಊದಿ ಆ ದುಷ್ಟ ಪಿಶಾಚಿಯನ್ನ ಉಚ್ಛಾಟಿಸಿದ್ದನಂತೆ.

ಯಾರಾದರೂ ಇದನ್ನೆಲ್ಲಾ ಪ್ರಶ್ನಿಸಿದರೇ, ನಮ್ಮಪ್ಪ ಕೆರಳಿಬಿಡುತ್ತಿದ್ದ. “ದೇವರೇ ಪ್ರತಿಬಂಧಿಸು, ಹಾಗಿದ್ದರೇ ಗ್ರೇಡಿಯಕ್ ನ ದೊಡ್ಡ ರಬ್ಬಿಯವರು ಸುಳ್ಳರ? ಎಲ್ಲಾ ರಬ್ಬಿಗಳು, ಸಂತರು, ಋಷಿಮುನಿಗಳು ಮೊಸಗಾರರೇನು? ಈ ನಾಸ್ತಿಕರು ಮಾತ್ರ ಸತ್ಯವಂತರ? ಎಂಥ ವ್ಯಥೆ ನಮ್ದು! ಹೇಗೆ ತಾನೇ ಒಬ್ರು ಇಷ್ಟೊಂದು ಕುರುಡಾಗಿರೋಕೆ ಸಾಧ್ಯ?” ಎಂದೆಲ್ಲಾ ವಾದಕ್ಕೆ ನಿಂತುಬಿಡೋನು.

ಯಾವುದೇ ಮುನ್ಸೂಚನೆ ಇಲ್ಲದೇ ನಮ್ಮನೆ ಕದ ತೆರೆದುಕೊಂಡು ಹೆಂಗಸೊಬ್ಬಳು ಒಳಗೆ ಬಂದಳು. ಅವಳ ಕೈಯ್ಯಲ್ಲಿ ಎರಡು ಹೆಬ್ಬಾತುಗಳಿದ್ದ ಬುಟ್ಟಿಯೊಂದಿತ್ತು. ಹೆದರಿದ್ದಂತೆ ಕಾಣುತ್ತಿದ್ದಳು. ಅವಳ ಮದುವೆಯ ವಿಗ್ ಕೊಂಚ ಓರೆಯಾಗಿತ್ತು. ಅವಳೊಂದು ಪುಕ್ಕಲ ನಗೆ ನಕ್ಕಳು.

ಅಪ್ಪ ಅನ್ಯಸ್ತ್ರೀಯರನ್ನು ನೋಡುತ್ತಿರಲಿಲ್ಲ, ಕಾರಣ ಯಹೂದಿಗಳ ಕಟ್ಟಳೆಯ ಪ್ರಕಾರ ಅದು ನಿಷೇಧಿತವಾಗಿತ್ತು, ಆದರೆ ನನ್ನಮ್ಮ ಮತ್ತು ಮಕ್ಕಳಾದ ನಾವು ಅವಳನ್ನ ನೋಡಿದ ತಕ್ಷಣಕ್ಕೆ, ಏನೋ ವಿಚಿತ್ರವಾದ ಗೊಂದಲ ನಮ್ಮ ಅನಿರೀಕ್ಷಿತ ಸಂದರ್ಶಕಿಗೆ ಕಾಡುತಿದೆ ಎಂಬುದು ಎದ್ದು ಕಾಣುತ್ತಿತ್ತು.

“ಏನದು?” ಅಪ್ಪ ಕೇಳಿದ. ಅದೇ ಕ್ಷಣಕ್ಕೆ ಸರಿಯಾಗಿ ಅವಳ ನೋಡದಿರಲು ಅವನು ಅವಳಿಗೆ ಬೆನ್ನು ಮಾಡಿನಿಂತ.

“ರಬ್ಬಿ, ನನಗೊಂದು ವಿಚಿತ್ರವಾದ ಸಮಸ್ಯೆ ಉಂಟಾಗಿದೆ”.

“ಏನದು? ಹೆಂಗಸರ ಸಮಸ್ಯೆಯೇನು?”

ಆ ಹೆಂಗಸು ಹುಂ ಎಂದಿದ್ದರೇ, ನನ್ನನು ಆ ತಕ್ಷಣದಲ್ಲೇ ಕೋಣೆಯಿಂದ ಆಚೆ ಕಳುಹಿಸುತ್ತಿದ್ದರು. ಆದರೆ ಅವಳ ಉತ್ತರ: “ಅಲ್ಲ, ಅದು ಈ ಹೆಬ್ಬಾತುಗಳಿಗೆ ಸಂಬಂಧಿಸಿದ್ದು” ಎಂದಾಗಿತ್ತು.

“ಅವುಗಳದ್ದೇನು?”

“ಪ್ರೀತಿಯ ರಬ್ಬಿಯೇ, ಈ ಹೆಬ್ಬಾತುಗಳನ್ನ ಶಿಷ್ಟ ರೀತಿಯಲ್ಲಿಯೇ ಕೊಲ್ಲಲಾಗಿದೆ. ನಂತರ ಇವುಗಳ ತಲೆಗಳನ್ನ ಉರುಳಿಸಿದೆ. ತದನಂತರ ಇವುಗಳ ಕರುಳನ್ನ, ಯಕೃತ್ತನ್ನ, ಮತ್ತಿತರ ಎಲ್ಲಾ ಅಂಗಗಳನ್ನ ತೆಗೆದಿದ್ದೇನೆ. ಆದರೂ ಸಹ ಈ ಹೆಬ್ಬಾತುಗಳು ಒಂಥರಾ ಶೋಕದನಿಯಲ್ಲಿ ಅರಚುತ್ತಿದ್ದಾವೆ…”

ಈ ಮಾತುಗಳನ್ನ ಕೇಳಿದ್ದೇ ತಡ, ಅಪ್ಪ ಬಿಳಿಚಿಕೊಂಡುಬಿಟ್ಟ. ನನಗೂ ಸಹ ಒಂದು ದಾರುಣ ಭಯ ನನ್ನ ಮೇಲೆ ಬಿದ್ದ ಹಾಗೇ ಆಯಿತು. ಆದರೆ ನನ್ನಮ್ಮ ವಿಚಾರವಾದಿ ಮನೆತನದವಳಾಗಿದ್ದರಿಂದ ಅವಳು ಸ್ವಭಾವತಃ ಇಂತದ್ದನ್ನೆಲ್ಲಾ ಸಂಶಯಿಸುತ್ತಿದ್ದಳು.

“ಕೊಂದ ಹೆಬ್ಬಾತುಗಳು ಅರಚೋದಿಲ್ಲ,” ಅಂದಳು ಅಮ್ಮ.

“ನೀವೇ ಅದನ್ನ ಕೇಳುವಿರಂತೆ,” ಉತ್ತರಿಸಿದಳು ಆ ಹೆಂಗಸು.

ಅವಳು ಒಂದು ಹೆಬ್ಬಾತನ್ನ ತೆಗೆದು ಟೇಬಲ್ ಮೇಲಿಟ್ಟಳು. ನಂತರ ಇನ್ನೊಂದನ್ನು ಹೊರತೆಗೆದಳು. ಈ ಹೆಬ್ಬಾತುಗಳು ತಲೆರಹಿತವಾಗಿದ್ದವು, ಚಿಕ್ಕದಾಗಿ ಹೇಳಬೇಕು ಅಂದ್ರೆ, ಅವು ಸತ್ತ ಹೆಬ್ಬಾತುಗಳಷ್ಟೆ. ನನ್ನಮ್ಮನ ತುಟಿಯಂಚಲ್ಲಿ ಒಂದು ಸಣ್ಣ ನಗು ಕಾಣಿಸಿತು.

“ಮತ್ತೇ ಈ ಹೆಬ್ಬಾತುಗಳು ಅರಚುತ್ತವ?”

“ಸದ್ಯದಲ್ಲೇ ನೀವೆ ಕೇಳ್ತಿರ”

ಆ ಹೆಂಗಸು ಒಂದು ಹೆಬ್ಬಾತನ್ನ ತೆಗೆದು ಇನ್ನೊಂದರ ಮೇಲೆ ಎಸೆದಳು. ಒಮ್ಮೆಗೇ ಒಂದು ಚೀತ್ಕಾರ ಕೇಳಿಸಿತು. ಆ ಸದ್ದನ್ನ ವರ್ಣಿಸೋದು ಅಷ್ಟು ಸುಲಭವಲ್ಲ. ಅದೊಂದು ಹೆಬ್ಬಾತುವಿನ ಚೀರು ದನಿಯಾಗಿತ್ತು. ಅದು ಎಷ್ಟು ದೊಡ್ಡಮಟ್ಟದ ವಿಲಕ್ಷಣವಾದ ಏರುಧ್ವನಿಯ ನರಳುವಿಕೆ ಮತ್ತು ಕಂಪನವಾಗಿತ್ತೆಂದರೆ ನನ್ನ ಕಾಲುಗಳೂ ತಣ್ಣಗಾಗಿ ಹೋಗಿದ್ದವು. ನನಗೆ ನನ್ನ ಮುಂಗುರುಳುಗಳ ಚುಚ್ಚುವಿಕೆಯೂ ಅನುಭವಕ್ಕೆ ಬಂದಿತು. ಆ ಕೋಣೆಯಿಂದ ಓಡಿ ಹೋಗಬೇಕು ಅನ್ನಿಸಿತು. ಆದರೆ ಓಡೋದಾದರೂ ಎಲ್ಲಿಗೆ? ನನ್ನ ನಾಲಿಗೆ ಭಯಕ್ಕೆ ಅದುಮಿಡಿದಂತಾಗಿತ್ತು. ಮೂರು ವರ್ಷದ ಮಗುವಿನ ರೀತಿ‌ ನಾನು ಕೂಡ, ಕಿರುಚಿ ಅಮ್ಮನ ಲಂಗಕ್ಕೆ ಅಂಟಿಕೊಂಡು ನಿಂತಿದ್ದೆ.

ಹೆಂಗಸಿನೆಡೆಗೆ ತನ್ನ ದೃಷ್ಟಿಯನ್ನ ತಪ್ಪಿಸಬೇಕೆಂಬುದನ್ನು ಅಪ್ಪ ಮರೆತು ಹೋದಂತಾಗಿದ್ದ. ಅವನು ಆ ಟೇಬಲ್ಲಿನೆಡೆಗೆ ಓಡಿದ. ಹೆಚ್ಚು ಕಮ್ಮಿ ನನ್ನಷ್ಟೇ ಭಯಭೀತನಾಗಿದ್ದ. ಅವನ ಕೆಂಪು ದಾಡಿ ನಡುಗುತ್ತಿತ್ತು. ಅವನ ನೀಲಿ ಕಣ್ಗಳಲ್ಲಿ ಭಯ ಮತ್ತು ಸಮರ್ಥನೆಯ ಮಿಶ್ರಣವನ್ನ ಕಾಣಬಹುದಿತ್ತು. ಈ ಸುಳುಹುವಿನ ಪ್ರಕಾರ ನನ್ನಪ್ಪನಿಗೆ ಇದು ಬರೀ ಗ್ರೇಡಿಯಕ್ ರಬ್ಬಿಗೆ ಕಳುಹಿಸಿದಂತಹ ಶಕುನವಾಗಿರದೇ ಸ್ವತಃ ಅವನಿಗೂ ಸ್ವರ್ಗದಿಂದಲೇ ಕಳುಹಿಸಿದಂತಾಗಿತ್ತು. ಬಹುಶಃ ಇದೊಂದು ದುಷ್ಟಶಕ್ತಿಯ ಗುರುತಾಗಿತ್ತು, ಅಂದರೆ ಸೈತಾನನೇ ಖುದ್ದು ಕಳುಹಿಸಿದ್ದ ಶಕುನವಾಗಿರಬಹುದೆ?

“ಈಗೇನು ಹೇಳುತ್ತೀರ?” ಕೇಳಿದಳು ಹೆಂಗಸು.

ನನ್ನ ತಾಯಿ ಈಗ ನಗುತ್ತಿರಲಿಲ್ಲ. ಅವಳ ಕಣ್ಣುಗಳಲ್ಲಿ ಎಂತದ್ದೋ ಸಂಕಟ ಮತ್ತು ರೋಷ ಕಾಣಿಸುತ್ತಿತ್ತು.

“ಇಲ್ಲಿ ಏನಾಗುತ್ತಿದೆ, ನನಗೆ ಅರ್ಥವಾಗುತ್ತಿಲ್ಲ” ಎಂದಳು ಖಚಿತವಾದ ಅಸಮಾಧಾನದೊಂದಿಗೆ.

“ನೀವು ಇದನ್ನು ಮತ್ತೇ ಕೇಳಬಯಸ್ತಿರಾ?”

ಮತ್ತೇ ಆ ಹೆಂಗಸು ಒಂದು ಹೆಬ್ಬಾತನ್ನ ಮತ್ತೊಂದರ ಮೇಲೆ ಎಸೆದಳು. ಮತ್ತೇ ಆ ಸತ್ತ ಹೆಬ್ಬಾತುಗಳು ವಿಲಕ್ಷಣವಾಗಿ ಚೀರಿದವು – ಅದು ಕಟುಕನ ಕತ್ತಿಯು ಮೂಕ ಜೀವಿಗಳ ಕೊಲ್ಲುವಾಗ ಹೊಮ್ಮುವಂತಹ, ಜೀವಶಕ್ತಿಯನ್ನ ಇನ್ನೂ ತಡೆಹಿಡಿದು, ಬದುಕಲು ನಿರ್ಧರಿಸಿ ಅನ್ಯಾಯಕ್ಕೆ ಮುಯ್ಯಿ ತೀರಿಸಲು ಹೋರಾಡುವಂತಹ ಚೀತ್ಕಾರ. ನನ್ನೊಳಗೊಂದು ನಡುಕ ಚಲಿಸಿದಂತಾಯಿತು. ಯಾರೋ ನನ್ನೊಳಗೆ ಇರೋಬರೋ ಬಲವನ್ನೆಲ್ಲಾ ಬಳಸಿ ಜೋರಾಗಿ ಹೊಡೆದಂತಾಯಿತು.

ನನ್ನ ತಂದೆಯ ದನಿಯೂ ಒಡೆದಂತಾಗಿತ್ತು, ಮುರಿದ ಬಿಕ್ಕಿನಂತೆ. “ಸರಿ, ಈಗಲೂ ಯಾರಾದರೂ ಸೃಷ್ಟಿಕರ್ತನನ್ನ ಸಂದೇಹಿಸೋರು ಇದ್ದೀರೋ?”

“ರಬ್ಬಿ, ನಾನೇನು ಮಾಡ್ಲಿ, ಎಲ್ಲಿಗೆ ಹೋಗ್ಲಿ?” ಅಂತ ಆ ಹೆಂಗಸು ಮೆಲುದನಿಯಲ್ಲಿ ಶೋಕಗೀತೆಯಂತೆ ಹಾಡಲು ಶುರುವಿಟ್ಟಳು. “ನನಗೆ ಏನಾಗಿದೆ? ಸಂಕಟವೇ ನಾನಾದೇನಾ! ನಾನು ಅವುಗಳನ್ನ ಏನು ತಾನೇ ಮಾಡ್ಲಿ?” ಬಹುಶಃ ನಾನೂ ಅಲೆಮಾರಿ ರಬ್ಬಿಯೊಬ್ಬನನ್ನ ಹುಡುಕಿಕೊಂಡು ತಿರುಗಬೇಕೆ? ಒಂದು ವೇಳೆ ಇವನ್ನ ನಾನು ಸರಿಯಾಗಿ ಕೊಂದಿಲ್ಲವ? ನನಗೆ ಇವನ್ನ ಮನೆಗೆ ತೆಗೆದುಕೊಂಡು ಹೋಗೋಕೆ ಭಯ ಆಗ್ತಿದೆ. ನಾನು ಇದರಿಂದ ಸಬ್ಬಾತ್ ಊಟವನ್ನ ತಯಾರು ಮಾಡಬೇಕೆಂದಿದ್ದೆ. ಆದರೆ ಈಗ, ಎಂತ ಕೇಡಾಗಿದೆ! ಪೂಜ್ಯ ರಬ್ಬಿ, ನಾನೀಗ ಏನು ಮಾಡ್ಬೇಕು? ಅವುಗಳನ್ನ ಎಸೆಯಬೇಕಾ? ಯಾರೋ ಹೇಳಿದ್ರು ಅವನ್ನ ಶವ ವಸ್ತ್ರದಲ್ಲಿ ಮುಚ್ಚಿ ಗೋರಿಯೊಳಗೆ ಹೂಳಬೇಕು ಅಂತ. ನಾನೊಬ್ಬ ಬಡ ಹೆಂಗಸು. ಎರಡು ಹೆಬ್ಬಾತುಗಳು! ನನ್ನ ಅದೃಷ್ಟಕ್ಕೆ ಬೆಲೆ ತೆತ್ತಂತೆ!”

ಅಪ್ಪನಿಗೆ ಏನು ಉತ್ತರ ಕೊಡಬೇಕು ಅಂತ ತಿಳಿಯಲಿಲ್ಲ. ಅವನು ಪುಸ್ತಕದ ಕಪಾಟಿನೆಡೆಗೆ ಕಣ್ಣಾಯಿಸಿದ. ಇದಕ್ಕೆಲ್ಲಾ ಉತ್ತರ ಎಲ್ಲಾದರೂ ಇದ್ದದ್ದೆ ಆದರೆ, ಅದು ಇಲ್ಲೆಯೇ ಇರಬೇಕು. ಇದಕ್ಕಿದ್ದ ಹಾಗೆ ಅಮ್ಮನ ಕಡೆಗೆ ಸಿಟ್ಟಿನಿಂದ ನೋಡತೊಡಗಿದ.

“ಮತ್ತೆ, ನೀನು ಈಗ ಏನು ಹೇಳ್ತೀಯಾ?”

ಈ ಮಾತುಗಳನ್ನ ಕೇಳಿದ್ದೇ ತಡ, ಅಪ್ಪ ಬಿಳಿಚಿಕೊಂಡುಬಿಟ್ಟ. ನನಗೂ ಸಹ ಒಂದು ದಾರುಣ ಭಯ ನನ್ನ ಮೇಲೆ ಬಿದ್ದ ಹಾಗೇ ಆಯಿತು. ಆದರೆ ನನ್ನಮ್ಮ ವಿಚಾರವಾದಿ ಮನೆತನದವಳಾಗಿದ್ದರಿಂದ ಅವಳು ಸ್ವಭಾವತಃ ಇಂತದ್ದನ್ನೆಲ್ಲಾ ಸಂಶಯಿಸುತ್ತಿದ್ದಳು.

ಅಮ್ಮನ ಮುಖ ಉದ್ವಿಗ್ನತೆಯಿಂದ ಚಿಕ್ಕದಾಗಿ ತೀಕ್ಷ್ಣವಾಗತೊಡಗಿತು. ಅವಳ ಕಣ್ಣುಗಳಲ್ಲಿ ಕೋಪ ಜೊತೆಗೆ ನಾಚಿಕೆಯಂತಹದೇನೋ ಕಾಣಬಹುದಾಗಿತ್ತು.

“ನಾನು ಅದನ್ನ ಮತ್ತೆ ಕೇಳಬೇಕು.”

ಅವಳ ಮಾತುಗಳಲ್ಲಿ ಅರ್ಧ ಮನವಿ, ಮತ್ತರ್ಧ ಆಜ್ಞೆ ತುಂಬಿತ್ತು.

ಆ ಹೆಂಗಸು ಮತ್ತೆ ಮೂರನೇ ಬಾರಿಗೆ ಆ ಹೆಬ್ಬಾತುಗಳನ್ನ ಒಂದರ ಮೇಲೊಂದನ್ನ ಎಸೆದಳು, ಮೂರನೇ ಬಾರಿಗೂ ಅದೇ ಚೀತ್ಕಾರ ಕೇಳಿ ಬಂತು. ನನಗೆ ಇದೊಂದು ಹರಕೆಯ ಕಡಸಿನ ಧ್ವನಿಯ ಹಾಗೇ ಅನಿಸಿತು.

“ವ್ಯಥೆ, ಎಂತಹ ವ್ಯಥೆ ಮತ್ತೂ ಈಗ ಕೂಡ ದೈವನಿಂದನೆಯೇ… ಇದರಲ್ಲಿ ಬರೆದಿದೆ ದುಷ್ಟರು ನರಕದ ಹೆಬ್ಬಾಗಿಲಿನಲ್ಲೂ ತಮ್ಮ ಪಾಪಕ್ಕೆ ಪ್ರಾಯಶ್ಚಿತ ಪಡೋದಿಲ್ಲವಂತೆ.” ಅಪ್ಪ ಮಾತಾಡೋಕೆ ಶುರುವಿಟ್ಟ. “ತಮ್ಮ ಕಣ್ಣಾರೆ ಸತ್ಯವನ್ನ ನೋಡಿಯೂ ನಮ್ಮ ಸೃಷ್ಠಿಕರ್ತನನ್ನ ಅಲ್ಲಗಳೆಯೋದು ಇವತ್ತಿಗೂ ಮುಂದುವರೆದಿದೆ. ಅಂಥವರನ್ನ ತಳವಿಲ್ಲದ ಗುಂಡಿಗೆ ಎಳೆದೊಯ್ದರು ಇದೆಲ್ಲಾ ಸಹಜ ಅಥವಾ ಆಕಸ್ಮಿಕ ಅಂತ ಸಮರ್ಥಿಸಿಕೊಂಡು ಬಿಡುತ್ತಾರೆ….”

ಅಪ್ಪ ಅಮ್ಮನೆಡೆಗೆ ನೀನು ಅವರಂತವಳೇ ಅನ್ನೋ ರೀತಿಯಲ್ಲಿ ನೋಡಿದ.

ಸುಮಾರು ಹೊತ್ತು ಹೀಗೇ ಮೌನದಲ್ಲಿ ಇದ್ವಿ. ಆಗ ಆ ಹೆಂಗಸು ಕೇಳಿದಳು “ಸರಿ, ಇದನ್ನೆಲ್ಲಾ ನಾನೇ ಕಲ್ಪಿಸಿಕೊಂಡಿದ್ದೀನಾ?”.

ಇದಕ್ಕಿದ್ದ ಹಾಗೇ ನಮ್ಮಮ್ಮ ನಕ್ಕಳು. ಆ ನಗುವಿಲ್ಲಿ ಏನೋ ಅಡಗಿತ್ತು, ಅದು ನಮ್ಮನೆಲ್ಲಾ ನಡುಗಿಸಿತು. ನನ್ನ ಆರನೇ ಇಂದ್ರಿಯದಿಂದಲೋ ಏನೋ ಒಟ್ಟಿನಲ್ಲಿ ನನಗೆ ಮನವರಿಕೆಯಾಗಿ ಹೋಗಿತ್ತು ನಮ್ಮಮ್ಮ ನಮ್ಮ ಕಣ್ಣೆದುರೇ ನಡೆಯುತ್ತಿರೋ ಈ ಪ್ರಬಲ ನಾಟಕಕ್ಕೆ ತೆರೆ ಎಳೆಯಲು ಏನೋ ತಯಾರಿ ಮಾಡ್ತಾ ಇದ್ದಾಳೆ ಅಂತ.

“ನೀನು ಇವುಗಳ ಉಸಿರಕೊಳವೆಗಳನ್ನ ತೆಗೆದಿದ್ದೀಯಾ?” ಕೇಳಿದಳು ಅಮ್ಮ.

“ಉಸಿರಕೊಳವೆಗಳಾ? ಇಲ್ಲಾ….”

“ಅವನ್ನ ತೆಗಿ ಆಚೆ, ಆಗ ಈ ಹೆಬ್ಬಾತುಗಳು ಅರಚೋದನ್ನ ನಿಲ್ಲಿಸ್ತಾವೆ” ಎಂದಳು ಅಮ್ಮ.

ನಮ್ಮಪ್ಪನಿಗೆ ಪಿತ್ತ ನೆತ್ತಿಗೇರಿತು. “ಏನು ಬಡಬಡಾಯಿಸ್ತಾ ಇದ್ದೀಯಾ ನೀನು? ಆ ಕೊಳವೆಗಳಿಗೂ ಇದಕ್ಕೂ ಏನು ಸಂಬಂಧ?”

ಅಮ್ಮ ಒಂದು ಹೆಬ್ಬಾತನ್ನ ತೆಗೆದುಕೊಂಡು, ಅವಳ ಸಪೂರ ಬೆರಳನ್ನ ಅದರೊಳಗೆ ಹಾಕಿ ತನ್ನ ಶಕ್ತಿಯನ್ನೆಲ್ಲಾ ಬಳಸಿ ಕತ್ತಿನಿಂದ ಶ್ವಾಸಕೋಶಗಳ ತನಕ ಇದ್ದ ಸಣ್ಣ ಕೊಳವೆಯನ್ನ ಎಳೆದಳು. ನಂತರ ಇನ್ನೊಂದು ಹೆಬ್ಬಾತುವಿನ ಉಸಿರಕೊಳವೆಯನ್ನು ತೆಗೆದಳು. ನಾನೋ ನಮ್ಮಮ್ಮನ ಧೈರ್ಯಕ್ಕೆ ಗಾಬರಿಗೊಂಡು ನಡುಗುತ್ತಾ ನಿಂತಿದ್ದೆ. ಅವಳ ಕೈಗಳು ರಕ್ತಮಯವಾಗಿದ್ದವು, ಯಾರಾದರು ವಿಚಾರವಾದಿಗಳನ್ನ ಹಾಡುಹಗಲೇ ಹೆದರಿಸಲು ಪ್ರಯತ್ನಿಸಿದರೆ, ಅಂತವರ ಮೇಲೆ ಉಕ್ಕಿಬರುವ ರೋಷವನ್ನ ಅವಳ ಮುಖದಲ್ಲಿ ಕಾಣಬಹುದಾಗಿತ್ತು.

ಅಪ್ಪನ‌ ಮುಖ ತಣ್ಣಗೆ ಬಿಳುಚಿಕೊಂಡು, ಸ್ವಲ್ಪ ನಿರಾಸೆಯನ್ನ ಹೊರಸೂಸ್ತಾ ಇತ್ತು. ಅವನಿಗೆ ಅಲ್ಲಿ ಏನಾಗಿದೆ ಅನ್ನೋದು ತಿಳಿದು ಹೋಗಿತ್ತು: ತರ್ಕ, ಈ ತಣ್ಣಗಿನ ತರ್ಕ, ಮತ್ತೆ ಧರ್ಮವನ್ನ ಸೀಳಿ, ಅಣಕಿಸಿ, ಇನ್ನಷ್ಟು ಲೇವಡಿ ಮತ್ತು ಅವಹೇಳನ ಮಾಡ್ತಾ ಇದೆ.

“ಈಗ, ನೀವು ದಯಮಾಡಿ ಒಂದು ಹೆಬ್ಬಾತನ್ನ ಮತ್ತೊಂದರ ಮೇಲೆ‌ ಎಸೆಯಿರಿ!” ಆಜ್ಞೆ ಮಾಡಿದಳು ಅಮ್ಮ.

ಎಲ್ಲದು ಒಂದು ಹಂತಕ್ಕೆ ಬಂದಿತು. ಈಗೇನಾದರೂ ಹೆಬ್ಬಾತುಗಳು ಅರಚಿದ್ದೆ ಆದರೆ, ಅಮ್ಮ ಅವಳ ಮೇಧಾವಿ ಅಪ್ಪನಿಂದ ಪಡೆದಿದ್ದ ವಿಚಾರವಾದಿ ಧೈರ್ಯ, ಸಂದೇಹಿಸುವ ಗುಣ ಎಲ್ಲವನ್ನ ಕಳೆದುಕೊಳ್ಳುವಳು. ನಾನೋ ಹೆದರಿದ್ದರು ಸಹ, ಒಳಗೊಳಗೆ ಆ ಹೆಬ್ಬಾತುಗಳು ಅರಚಲಿ, ಅದೆಷ್ಟು ಜೋರಾಗಿ ಎಂದರೆ ಬೀದಿಲಿ ಹೋಗುತ್ತಿದ್ದವರು ಕೂಡ ಇವುಗಳ ಅರಚಾಟವನ್ನ ಕೇಳಿಸಿಕೊಂಡು ಇಲ್ಲಿಗೆ ಓಡಿಬರಬೇಕು ಅಂತ ಪ್ರಾರ್ಥಿಸ್ತಾ ಇದ್ದೆ.

ಅಯ್ಯೋ, ಆದರೆ ಈ ಹೆಬ್ಬಾತುಗಳೋ ನೀರವ ಮೌನ ತಾಳಿಬಿಟ್ಟವು, ಮೌನವೆಂದರೆ ಉಸಿರಿನಾಳ ಇರದ ಸತ್ತ ಹೆಬ್ಬಾತುಗಳಂತೆ.

ಅಮ್ಮ ನನ್ನೆಡೆಗೆ ತಿರುಗಿ “ನನಗೊಂದು ಒರೆಸು ಬಟ್ಟೆ ತೆಗೆದುಕೊಂಡು ಬಾ!” ಅಂದಳು.

ನಾನು ಬಟ್ಟೆ ತರಲು ಓಡಿದೆ. ನನ್ನ ಕಣ್ಣೊಳಗೆ ನೀರು ತುಂಬಿದ್ದವು. ಅಮ್ಮ ಕಷ್ಟದ ಆಪರೇಶನ್ ಮಾಡಿದ ಸರ್ಜನ್ ರೀತಿ ಕೈ ಒರೆಸಿಕೊಂಡಳು.

“ಇದು ಇಷ್ಟೇ ಆಗಿತ್ತು!” ಜಯವನ್ನ ಘೋಷಿಸಿದಳು.

ಅಪ್ಪ ಕೆಮ್ಮಲು ಮೊದಲು ಮಾಡಿ, ಗೊಣಗಾಡಿದ. ಅವನ ಟೋಪಿಯಿಂದ ಗಾಳಿ ಹಾಕಿಕೊಳ್ಳಲಾರಂಭಿಸಿದ.

ಕೊನೆಗೆ “ನಾನು ಇದುವರೆಗೂ ಇಂತಹದನ್ನ ಕೇಳಿಯೇ ಇಲ್ಲ” ಎಂದ.

“ನಾನು ಸಹ,” ಧ್ವನಿಗೂಡಿಸಿದಳು ಆ ಹೆಂಗಸು.

“ನಾನು ಸಹ,” ಅಂದಳು‌ ಅಮ್ಮ. “ಆದರೆ ಎಲ್ಲದಕ್ಕೂ ಒಂದು ವಿವರಣೆ ಅಂತ ಇರುತ್ತೆ. ಸತ್ತ ಹೆಬ್ಬಾತುಗಳು ಅರಚೋದಿಲ್ಲ.”

“ನಾನೀಗ ಮನೆಗೆ ಹೋಗಿ ಇದರಿಂದ ಅಡುಗೆ ಮಾಡಬಹುದೇ?” ಹೆಂಗಸು ಕೇಳಿದಳು.

“ಮನೆಗೆ ಹೋಗಿ ಸಬ್ಬಾತ್ ಗೆ ಅಡುಗೆ ಮಾಡು ಹೋಗು.” ಅನ್ನೋ ತನ್ನ‌ ನಿರ್ಧಾರವನ್ನ ಅಮ್ಮ ಹೇಳಿದಳು. “ಹೆದರೋಕೆ ಹೋಗಬೇಡ ಅವೇನು ನಿನ್ನ ಪಾತ್ರೆಗಳ ಒಳಗಿಂದ ಕೂಗೊಲ್ಲಾ.”

“ನೀವೇನು ಹೇಳ್ತೀರಾ ರಬ್ಬಿ?”

“ಅದೂ…. ಅವು ಕ್ರಮಬದ್ಧವಾಗಿವೆ (ಕೋಶರ್),” ಎಂದು ಮೆಲುನುಡಿದ‌ ಅಪ್ಪ. “ಅವನ್ನ ತಿನ್ನಬಹುದು” ನಿಜಕ್ಕೂ ಅವನ ಮನ ಒಪ್ಪಲಿಲ್ಲ, ಆದರೆ ಈಗ ಅವನು ಅವು ಅಶುದ್ಧ ಅಂತ ಹೇಳೋ‌ ಹಾಗು ಇರಲಿಲ್ಲ.

ಅಮ್ಮ‌ ಅಡುಗೆ ಮನೆಗೆ ಹೋದಳು. ನಾನು ಅಪ್ಪನ ಬಳಿಯೇ ಇದ್ದೆ. ಅಚಾನಕ್ ಆಗಿ ನಾನೇನೋ ದೊಡ್ಡವನು ಅನ್ನೋ ರೀತಿಯಲ್ಲಿ ಮಾತನಾಡಿಸೋಕೆ ಶುರುಮಾಡಿದ.

“ನಿನ್ನ ಅಮ್ಮ ನಿನ್ನ‌ ತಾತ ಬಿಲ್ಗೊರೆಯ ರಬ್ಬಿಯ ನಂತರದವಳು. ಅವರು ಬಹು ದೊಡ್ಡ ವಿದ್ವಾಂಸರು, ಆದರೆ ಕಠೋರವಾದ ವಿಚಾರವಾದಿ. ಜನ ನನಗೆ ನನ್ನ ಮದುವೆಗೂ ಮುನ್ನವೇ ಎಚ್ಚರಿಕೆ ಕೊಟ್ಟಿದ್ದರು…….”

ಈಗ ಈ ಮದುವೆಯನ್ನ ಮುರಿದುಕೊಳ್ಳೋಕೆ ತುಂಬಾನೇ ತಡವಾಗಿ ಹೋಗಿದೆ, ಅನ್ನೋದನ್ನ ಹೇಳುವವನಂತೆ ಅಪ್ಪ ತನ್ನ ಕೈಗಳನ್ನ ಮೇಲಕ್ಕೆ ತೂರಿದ.