ವಿವೇಕ ವೃಕ್ಷಗಳು
ನೂರಾರು ವರ್ಷದ ಮರವೊಂದು
ಒಣಗಲಾರದೆ ಚಿಗುರೊಡೆಯಲಾರದೆ
ದಿನದೂಡುತ್ತಿದೆ ಇಲ್ಲಿ
ಮರವೆಂದರೆ ಮರವಲ್ಲ
ಇದು ಕೈಮರ
ಬುಡಕ್ಕೆ ಸಾತ್ವಿಕ ಗೊಬ್ಬರವಿಟ್ಟು
ಬೌದ್ಧಿಕ ಬೆವರಿನ ನೀರುಣಿಸಬೇಕಿದ್ದ
ಸಲಹುವ ಕಾಯಕದವರು ಘಮಘಮಿಸುವ
ತಿಳಿನೀರಿನಂಥ ಉಚ್ಚೆ ಹೊಯ್ಯುತ್ತಿದ್ದಾರೆ
ಗೊಬ್ಬರದ ಮಾತಂತೂ
ಕೇಳಲೇಬೇಡಿ
ಈ ಮರಗಳ ಗಾಳಿಯ ಸ್ಪರ್ಶಕ್ಕೇ
ಕಣ್ಣುಗಳು ಬೆಳಕುದುಂಬಿ
ಕೈ ಕಾಲುಗಳು ರೆಕ್ಕೆಯಾಗಿ
ತೇಲಿದಂತಾಗುತ್ತಿದ್ದ ಕಾಲ ಒಂದಿತ್ತು
ಹಿಂದೊಮ್ಮೆ ಹಣ್ಣು ಮೆದ್ದ ಹಕ್ಕಿಗಳು
ಕೋಟಿಕೋಟಿ ಜೀವ ಮೀಟುವ
ಹಾಡು ಹಾಡಿವೆ
ತಿಂದ ಹಣ್ಣಿನ ಬೀಜಗಳ
ಎಲ್ಲೆಡೆ ಚೆಲ್ಲಿ ಹೋಗಿವೆ
ಅಯ್ಯೋ
ಹಕ್ಕಿಗಳಿಗೇನು ಬಿಡಿ
ಈಗಲೂ ಕಡಿಮೆ ಇಲ್ಲ
ತೀರ್ಥಕ್ಷೇತ್ರದ ಭಕ್ತರಂತೆ
ಬರುತ್ತವೆ ಹಿಂಡುಹಿಂಡಾಗಿ
ಸಮಸ್ಯೆಯೆಂದರೆ ಈ ವಿವೇಕದ
ಮರಗಳ ಹೀಚುಗಳೀಗ ಮಾಗದೇ
ಒಮ್ಮೆಲೇ ಹಣ್ಣಾಗುತ್ತವೆ
ತಿಂದ ಹಕ್ಕಿಯ ರೆಕ್ಕೆಗಳು ಮುರುಟಿ
ಬುದ್ದಿ ಮಂಕಾಗಿ ಹೊಟ್ಟೆ ಮಾತ್ರ
ತುಂಬಿ ತುಳುಕಿ ತಗುಲುತ್ತದೆ
ಅಸಹಜ ರೋಗವೊಂದು
ಮರಗಳ ಗಾಳಿ ತಾಕಿದವರ ಕಣ್ಣುಗಳು
ಮಬ್ಬಾಗಿ ಗಬ್ಬಾಗಿ ಎತ್ತ ನೋಡಿದರತ್ತ
ದಿಕ್ಕುಗಾಣದ ಗಾವಿಲರ ಹಿಂಡು
ಹಣ್ಣು ತಿಂದು ಗಾಳಿ ಕುಡಿದ
ಗಾವಿಲರು ಮತ್ತಾವುದೋ ಮರ
ಗಿಡ ಕಾಯುವ ಕಾಯಕಕ್ಕೆ ಸೇರಿ
ಸೀಮೆಯ ಮರಗಳೆಲ್ಲಾ
ಮೋಹಕ ವಿಷದ ಕಾರ್ಖಾನೆಗಳಾಗುತ್ತವೆ
ಎಲ್ಲೂ ಕಾಣುತ್ತಿಲ್ಲ
ಒಂದಾನೊಂದು ಕಾಲದ
ಬೋಧಿವೃಕ್ಷಗಳು
ಕಾಲ ದಾಟಿ ಕೇಳುತಿದೆ ಕಲ್ಯಾಣದ
ಹಕ್ಕಿಯ ಕಳವಳದ ಕೂಗು
ಅರಿವು ಉಳಿಯಲರಿಯದೆ
ಕೆಟ್ಟಿತ್ತು ಲೋಕವೆಲ್ಲ
ಬೆತ್ತಲೆ ಪಾಠ
ಮಾತಲಿ ಮನ ಮಗ್ನ
ಮೆಲು ಮಾತು ಕೂಡ
ಗೋಡೆಗಳಿಗಪ್ಪಳಿಸಿ ಪ್ರತಿಧ್ವನಿಸುತ್ತವೆ
ಎದುರಿನ ಕಣ್ಣುಗಳಲಿ ಹೊಳೆ
ಹೊಳೆವ ಮಿಂಚು
ತಡವಾಗಿರುತ್ತದೆ
ಬಟ್ಟೆಯುಟ್ಟವರ ಎದುರು ಬೆತ್ತಲೆ
ನಿಂತಿದ್ದೇನೆಂದು ತಿಳಿಯಲು
ಯಾಕೋ ಮುಜುಗರವೆನಿಸುವುದೇ ಇಲ್ಲ
ಪಾಪ ರೂಢಿ ನೋಡಿ
ಕೈ ಮಾತ್ರ ಯಾಂತ್ರಿಕವಾಗಿ
ಮಾನ ಮುಚ್ಚಲು
ಮಿಸುಕಾಡುತ್ತದೆ
ಬೆತ್ತಲೆಯ ಲಜ್ಜೆ
ಇಷ್ಟಿಷ್ಟೇ ಹೆಚ್ಚಿ
ಎಚ್ಚರವಾದಾಗ
ಎಂದಿನಂತೆ ನಿದ್ದೆ ಮತ್ತೆ
ಮೈಮುರಿದು ತಬ್ಬಿಕೊಳ್ಳುತ್ತದೆ
ಮರು ದಿನ ಎಂದಿಗಿಂತ
ಹೆಚ್ಚು ಗೌರವವಿರುತ್ತದೆ
ಸತ್ಯಕ್ಕೆ ಸಾಕ್ಷಿಯಾದ
ತರಗತಿ ಕೋಣೆಯಲಿ
ಸತ್ತು ಬದುಕಬೇಕು
ನಮ್ಮ ಹಳೆಯ ಮಾವಿನ ಮರ
ಅಜ್ಜಿಯ ಹತ್ತು ಆಡುಗಳು
ಅವ್ವಗೆ ಬಳುವಳಿಯಾಗಿ ಬಂದ ಎಮ್ಮಿ
ಊರ ಜನಕೆ ನೀರುಣಿಸಿ
ಬತ್ತಿದ ಬಾವಿ ಈಗ
ಕಾಲು ಶತಮಾನದ ಹಿಂದೆ
ಕಾಯ ಕಳೆದುಕೊಂಡಿವೆ
ಹಣ್ಣು ಹಾಲು ನೀರು ಪಡೆದ
ನಮ್ಮೀ ಕಾಯಗಳಲ್ಲಿ
ಕನಸುಗಳಲ್ಲಿ
ಪ್ರಜ್ಞೆಯ ಪಟಲದ
ಯಾವುದೋ
ಬಿಂದುವಾಗಿ
ಎಲ್ಲೆಲ್ಲೋ
ಬದುಕುತ್ತಿವೆ
ಇನ್ನೂ
ಹೀಗೆ
ಸುಮ್ಮನೆ
ಸತ್ತು ಬದುಕಬೇಕು
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಿ. ಬಿ. ಐನಳ್ಳಿಯವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೇರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.