ಆಂತರಿಕ ಸಚಿವಾಲಯವು ಸಿನಿಮಾದ ಕುರಿತು ಏನು ಹೇಳಿದರು ಅನ್ನುವುದನ್ನು ಹೇಳುತ್ತೇನೆ. ಅದು ನೆನಪಾದರೇನೆ ಸಿಟ್ಟು ಉಕ್ಕುತ್ತದೆ. ಸಿಟ್ಟು ಮಾಡಿಕೊಳ್ಳುವುದು ನನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೂ ಅದನ್ನು ಹೇಳುತ್ತೇನೆ. ಆ ಸಮಯದಲ್ಲಿ ಸಚಿವಾಲಯವು ನಿರ್ದೇಶಕನ ಮೊದಲ ಚಿತ್ರವನ್ನು ಅವನ ನಿರ್ದೇಶನ ಪರೀಕ್ಷೆಯಂತೆ ಪರಿಗಣಿಸುತ್ತಿದ್ದರು. ಸುಗತ ಸಂಶಿರೊ ಮುಗಿಯುತ್ತಿದ್ದಂತೆ ಅದನ್ನು ಆಂತರಿಕ ಸಚಿವಾಲಯಕ್ಕೆ ಕೊಟ್ಟೆ. ನನ್ನ ಪರೀಕ್ಷೆಗೆ ಅಲ್ಲಿಗೆ ಹೋಗಬೇಕಿತ್ತು. ಪರೀಕ್ಷಕ ಮಂಡಳಿಯ ಪರೀಕ್ಷಕರು ಸೆನ್ಸಾರ್ನವರು. ಅವರೊಂದಿಗೆ ಹೆಸರಾಂತ ನಿರ್ದೇಶಕರಿರುತ್ತಿದ್ದರು. ನನ್ನ ಪರೀಕ್ಷೆಗೆ ಯಮ ಸಾನ್, ಓಜು ಯಾಸುಜಿರೊ ಮತ್ತು ತಸಕಾ ಟೊಮೊಟಕಾ ಈ ಮಂಡಳಿಯಲ್ಲಿದ್ದರು.
ಹೇಮಾ. ಎಸ್ ಅನುವಾದಿಸಿರುವ ಅಕಿರ ಕುರೋಸಾವ ಆತ್ಮಕತೆಯ ಮತ್ತೊಂದು ಕಂತು

 

ಜನರು ಸಾಮಾನ್ಯವಾಗಿ ಮೊದಲ ಚಿತ್ರವನ್ನು ನಿರ್ದೇಶಿಸಿದಾಗಿನ ಅನುಭವದ ಕುರಿತು ಕೇಳುತ್ತಿರುತ್ತಾರೆ. ಮೊದಲೇ ಹೇಳಿದಂತೆ ನಾನದನ್ನು ಖುಷಿಯಿಂದ ಅನುಭವಿಸಿದೆ. ಪ್ರತಿ ರಾತ್ರಿ ಮಲಗುವಾಗ ಮರುದಿನದ ಚಿತ್ರೀಕರಣವನ್ನೇ ನಿರೀಕ್ಷಿಸುತ್ತಿದ್ದೆ. ಯಾವುದೇ ರೀತಿಯ ಕಹಿ ಅನುಭವಗಳಾಗಲಿಲ್ಲ. ತಂಡದ ಪ್ರತಿಯೊಬ್ಬರು ತಮ್ಮ ಇಡೀ ಸಾಮರ್ಥ್ಯವನ್ನು ತೊಡಗಿಸಿ ಅತ್ಯುತ್ತಮವಾದದ್ದನ್ನೇ ನನಗೆ ಕೊಟ್ಟರು. ಕಲಾ ನಿರ್ದೇಶಕರು, ವಸ್ತ್ರವಿನ್ಯಾಸಕರು ಸಣ್ಣ ಬಜೆಟ್ ಸಿನೆಮಾ ಎನ್ನುವುದನ್ನು ಲೆಕ್ಕಿಸದೆ “ಸರಿ ಆ ವಿಷಯ ನಮಗೆ ಬಿಡಿ!” ಎಂದರು. ನನಗೆ ಬೇಕಿದ್ದಂತೆ ಎಲ್ಲವನ್ನೂ ಒದಗಿಸಿಕೊಟ್ಟ ಅವರ ಬದ್ಧತೆ ನನ್ನನ್ನು ಆಳವಾಗಿ ಮುಟ್ಟಿತು. ನನ್ನ ನಿರ್ದೇಶನ ಸಾಮರ್ಥ್ಯದ ಬಗ್ಗೆ ಇದ್ದ ಅನುಮಾನಗಳೆಲ್ಲ ಮೊದಲ ದೃಶ್ಯದ ಚಿತ್ರೀಕರಣದ ನಂತರ ಮಳೆ ಬಿದ್ದ ಮೇಲೆ ಮೋಡಗಳು, ಇಬ್ಬನಿ ಚದುರಿ ಹೋಗುವಂತೆ ಚದುರಿ ಹೋಯಿತು. ಇಡೀ ಕೆಲಸ ಸರಾಗವಾಗಿ ಮುಗಿಯಿತು.

ನನಗನ್ನಿಸಿದ್ದನ್ನು ಹೇಳುವುದು ಕಷ್ಟ. ಆದರೂ ಪ್ರಯತ್ನಿಸುತ್ತೇನೆ. ಸಹಾಯಕ ನಿರ್ದೇಶಕನಾಗಿದ್ದಾಗ ಯಮ ಸಾನ್ ಹೇಗೆ ನಿರ್ದೇಶಿಸುತ್ತಿದ್ದರು ಎಂದು ಎಚ್ಚರಿಕೆಯಿಂದ ಗಮನಿಸುತ್ತಿದ್ದೆ. ನಿರ್ಮಾಣದ ಪ್ರತಿಹಂತ ಹಾಗೂ ಪ್ರತಿ ವಿವರಗಳಿಗೂ ಆತ ಗಮನನೀಡುತ್ತಿದ್ದನ್ನು ನೋಡಿ ಆಶ್ಚರ್ಯವಾಗುತ್ತಿತ್ತು. ಅಷ್ಟು ಸೂಕ್ಷ್ಮವಾಗಿ ನಾನು ಗಮನಿಸಲಾರೆ ಎಂದು ನನ್ನ ನಿರ್ದೇಶನ ಪ್ರತಿಭೆಯ ಬಗ್ಗೆ ನನಗೆ ಅನುಮಾನವಿತ್ತು.

ನಿರ್ದೇಶಕನ ದೃಷ್ಟಿಕೋನದಿಂದ ನಿರ್ಮಾಣವನ್ನು ನೋಡಿದಾಗ ಒಬ್ಬ ಸಹಾಯಕ ನಿರ್ದೇಶಕನಾಗಿ ಇಲ್ಲವೇ ಎರಡನೆಯ ಯೂನಿಟ್ ನಿರ್ದೇಶಕನಾಗಿ ನೋಡಲಾಗದ್ದನ್ನೆಲ್ಲ ನೋಡಲು ಸಾಧ್ಯವಾಗಿತ್ತು. ಸ್ಥಾನಗಳ ನಡುವಿನ ವ್ಯತ್ಯಾಸ ಅರಿವಾಯಿತು. ನೀವು ನಿಮ್ಮದೇ ಕಲಾಕೃತಿಯನ್ನು ಸೃಷ್ಟಿಸುವುದು ಮತ್ತೊಬ್ಬರ ಕೆಲಸಕ್ಕೆ ನೆರವಾಗುವುದು ಎರಡೂ ಬೇರೆ ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮ್ಮದೇ ಚಿತ್ರಕತೆಯನ್ನು ನಿರ್ದೇಶಿಸುತ್ತಿದ್ದಾಗ ಉಳಿದವರಿಗಿಂತ ಅದು ನಿಮಗೆ ಹೆಚ್ಚು ಚೆನ್ನಾಗಿ ಅರ್ಥವಾಗುತ್ತದೆ. ಅಂತಿಮವಾಗಿ ನಿರ್ದೇಶಕನಾದಾಗ ಯಾಮ ಸಾನರು ನಿರ್ದೇಶಕನಾಗಬೇಕೆಂದಿದ್ದಲ್ಲಿ ಮೊದಲು ಚಿತ್ರಕತೆಗಳನ್ನು ಬರಿ ಎಂದು ಹೇಳಿದ್ದು ಯಾಕೆ ಎಂದು ಅರ್ಥವಾಯಿತು. ಆದ್ದರಿಂದಲೇ ಸುಗತ ಸಂಶಿರೋ ಮೊದಲ ಚಿತ್ರವಾದರೂ ನನಗೆ ಹೇಗೆ ಬೇಕಿತ್ತೋ ಅದೇ ರೀತಿ ಚಿತ್ರೀಕರಿಸಲು ಸಾಧ್ಯವಾಯಿತು. ಈ ಚಿತ್ರದ ನಿರ್ಮಾಣ ಕಡಿದಾದ ಬೆಟ್ಟವನ್ನು ಹತ್ತಿದಂತಿರಲಿಲ್ಲ. ಬದಲಿಗೆ ಪರ್ವತದ ಇಳಿಜಾರಿನಲ್ಲಿ ಸರಾಗವಾಗ ಜಾರಿದಂತಿತ್ತು. ಒಟ್ಟಾರೆಯಾಗಿ ಹೇಳಬೇಕೆಂದರೆ ವೈಯುಕ್ತಿಕವಾಗಿ ಖುಷಿಯಾದ ಪ್ರವಾಸದ ಅನುಭವವನ್ನು ನೀಡಿತು.

ಸುಗತ ಸಂಶಿರೋದಲ್ಲಿ ಒಂದು ಹಾಡಿದೆ. ಆ ಹಾಡಿನ ಸಾಹಿತ್ಯ ಹೀಗಿದೆ:

ಅಲ್ಲಿಗೆ ತೆರಳುವ ಹಾದಿಯಲಿ ತುಂಬಿದೆ ಸಂತಸ
ಮನೆಗೆ ಮರಳುವ ಹಾದಿಯಲಿ ಕವಿದಿದೆ ಭಯ

ನನಗೂ ಹಾಗೆಯೇ ಅನ್ನಿಸಿತು. ಪರ್ವತದ ತುದಿಯವರೆಗೂ ಹತ್ತಿಬಿಟ್ಟಿದ್ದೆ. ಇನ್ನೇನೂ ತುದಿ ತಲುಪಬೇಕೆನ್ನುವಷ್ಟರಲ್ಲಿ ಕಡಿದಾದ ಬಂಡೆಯೊಂದು ಎದುರಾಗಿತ್ತು. ಚಿತ್ರದ ಅಂತಿಮ ದೃಶ್ಯದಲ್ಲಿ ಇದರ ಅನುಭವವಾಯಿತು. ಆ ದೃಶ್ಯದಲ್ಲಿ ಸಂಶಿರೋ ಮತ್ತು ಹಿಗಾಕಿ ಗೆನ್ಸೂಕೆ ಇಬ್ಬರೂ ಉಕ್ಯೋ ಗಹರಾದ ಬಯಲಿನಲ್ಲಿ ಸೆಣೆಸಬೇಕಿತ್ತು. ಎತ್ತರದ ಬಯಲು ಪ್ರದೇಶದಲ್ಲಿ ಗಾಳಿ ಬೀಸುತ್ತಿರುವ ಸ್ಥಳ ನಮಗೆ ಬೇಕಿತ್ತು. ಕಿವಿಗಡಚಕ್ಕುವ ಜೋರು ಗಾಳಿಯಿಲ್ಲದೆ ಈ ಅಂತಿಮ ನಿರ್ಣಾಯಕ ಹೋರಾಟ ಚಿತ್ರದಲ್ಲಿನ ಉಳಿದ ಆರು ಹೋರಾಟಗಳಿಗಿಂತ ಭಿನ್ನವಾಗಿ ನಿಲ್ಲುವುದಿಲ್ಲ ಎಂದು ನನಗನ್ನಿಸುತ್ತಿತ್ತು.

ಮೊದಲಿಗೆ ಉದ್ದನೆಯ ಹುಲ್ಲಿನ ಸೆಟ್ ಹಾಕಿದೆವು (ಗಾಳಿ ಯಂತ್ರಗಳ ಸಹಾಯದಿಂದ ಗಾಳಿ ಬೀಸುವ ಎಫೆಕ್ಟ್ ಸೃಷ್ಟಿಸುವುದು ನಮ್ಮ ಐಡಿಯಾ). ಆದರೆ ಪೂರ್ಣಗೊಂಡ ಸೆಟ್ ನೋಡಿದಾಗ ಇಲ್ಲಿ ಆ ಹೋರಾಟದ ದೃಶ್ಯವನ್ನು ಚಿತ್ರೀಕರಿಸಿದರೆ ಉಳಿದ ಹೋರಾಟದ ದೃಶ್ಯಗಳಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಈ ದೃಶ್ಯದಿಂದ ಇಡೀ ಚಿತ್ರವೇ ಹಾಳಾಗುತ್ತದೆ ಅನ್ನಿಸಿತು. ತತ್ತಕ್ಷಣವೇ ನಿರ್ಮಾಣ ಸಂಸ್ಥೆಯನ್ನು ಭೇಟಿ ಮಾಡಲು ಓಡಿದೆ. ಕಡೆಯ ದೃಶ್ಯವನ್ನು ಹೊರಾಂಗಣದಲ್ಲಿ ಚಿತ್ರೀಕರಿಸಲು ಅನುಮತಿ ಪಡೆದುಕೊಂಡೆ. ಆದರೆ ಅದರಲ್ಲೊಂದು ತೊಡಕಿತ್ತು. ಮೂರು ದಿನಗಳೊಳಗಾಗಿ ಚಿತ್ರೀಕರಣವನ್ನು ಮುಗಿಸಬೇಕಿತ್ತು.

ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಹಕೊನೆ ಪರ್ವತದ ಮೇಲಿನ ಸೆಂಗೊಕುಹಾರ ಬಯಲು ಪ್ರದೇಶ. ಆ ಸ್ಥಳವು ಬೀಸುಗಾಳಿಗೆ ಹೆಸರುವಾಸಿಯಾಗಿತ್ತು. ಆದರೆ ವಿಲಕ್ಷಣವೆನಿಸುವಂತೆ ನಮಗೆ ಮೋಡ ಮುಸುಕಿದ ಪ್ರಶಾಂತ ವಾತಾವರಣ ಎದುರಾಯಿತು. ಎರಡು ದಿನ ಏನೂ ಮಾಡಲಾಗದೆ ಕಾಯುತ್ತಾ ಕೂತೆವು. ಮೂರನೆಯ ದಿನ ಕೂಡ ಗಾಳಿಯ ಸದ್ದಿಲ್ಲದೆ ಕಳೆದುಹೋಯಿತು. ಹಕೊನೆ ಪರ್ವತದ ಕೆಳಗೆ ಮಂಜು ಆವರಿಸಲಾರಂಭಿಸಿತು. ನಾವು ಮನೆಗೆ ಮರಳಲು ಸಿದ್ಧರಾದೆವು.

ಚಿತ್ರತಂಡಕ್ಕೆ ಕೊನೆಪಕ್ಷ ಮೂರನೆಯ ದಿನದ ಕೊನೆಯವರೆಗೆ ಕಾದು ನೋಡೋಣ ಎಂದು ಹೇಳಿದೆ. ಹಾಳಾಗಿ ಹೋಗಲಿ ಬಿಟ್ಟುಬಿಡೋಣ ಅನ್ನುವ ಅರೆಮನಸು ಒಂದೆಡೆ, ಹತಾಶೆ ಮತ್ತೊಂದೆಡೆ ಕಾಡುತ್ತಿತ್ತು. ಬೆಳಿಗ್ಗೆಯೇ ಬೀರ್ ಕುಡಿಯಲು ಶುರುಮಾಡಿದೆವು. ಕುಡಿಯುತ್ತಾ ಕುಡಿಯುತ್ತಾ ನಶೆ ಏರಿ ಎಲ್ಲವನ್ನೂ ಬಿಟ್ಟುಹಾಕಿ ಇನ್ನೇನು ಹಾಡಲು ಶುರುಮಾಡಬೇಕು ಅಷ್ಟರಲ್ಲಿ ಕಿಟಕಿ ಕಡೆ ನೋಡಿದವರು ಯಾರೋ ಎಲ್ಲರನ್ನೂ ಸುಮ್ಮನಿರಲು ಹೇಳುತ್ತಾ ಕಿಟಕಿಯಾಚೆಗೆ ಬೊಟ್ಟು ಮಾಡಿ ತೋರಿದರು. ಹೊರಗಡೆ ಹಕೊನೆ ಪರ್ವತವನ್ನು ಆವರಿಸಿದ್ದ ಮೋಡ ಮೆಲ್ಲಗೆ ಮೇಲೆರಲಾರಂಭಿಸಿತು. ಆಶಿನೊಕೊ ಕೊಳದ ಮೇಲೆ ಗಾಳಿ ಸುತ್ತುತ್ತಾ ಸ್ವರ್ಗದತ್ತ ಹೊರಳಲಾರಂಭಿಸಿತು. ಇದ್ದಕ್ಕಿದ್ದಂತೆ ಭಯಂಕರ ಗಾಳಿ ಕಿಟಕಿಯ ಮೂಲಕ ತೂರಿ ಗೋಡೆಗೆ ನೇತುಹಾಕಿದ್ದ ಕಲಾತ್ಮಕ ಚಿತ್ರ ಅಲ್ಲಾಡಿ ಕುಣಿಯಲಾರಂಭಿಸಿತು. ಪರಸ್ಪರ ಮುಖ ನೋಡಿಕೊಂಡು ಥಟ್ಟನೆ ಕಾರ್ಯಪ್ರವೃತ್ತರಾದೆವು.

ಆ ಕ್ಷಣದಿಂದಾಚೆಗೆ ನಡೆದದ್ದೆಲ್ಲ ಮಿಂಚಿನ ಕಾರ್ಯಾಚರಣೆ. ಪ್ರತಿಯೊಬ್ಬರೂ ನಮಗೆ ಬೇಕಿದ್ದ ಉಪಕರಣಗಳನ್ನು ಹೊತ್ತುಕೊಂಡೋ ಎಳೆದುಕೊಂಡೋ ಹೊರಗೆ ಓಡಿದೆವು. ಚಿತ್ರಿಕರಣದ ಸ್ಥಳ ಹತ್ತಿರದಲ್ಲೇ ಇತ್ತು. ನಾವು ಭಯಂಕರ ಗಾಳಿಯ ನಡುವೆ ದಾರಿಮಾಡಿಕೊಂಡು ಅದನ್ನು ಮಣಿಸುವವರಂತೆ ನುಗ್ಗಿದೆವು.

ಬೆಟ್ಟದ ಮೇಲೆ ನಾವಂದುಕೊಂಡಿದ್ದ ಕಡೆಯಲ್ಲಿನ ಹುಲ್ಲು ಆಗಲೇ ನೆಲಕಚ್ಚಿತ್ತು. ಆದರೆ ಮತ್ತೊಂದೆಡೆ ತುಪ್ಪಳದಂತಿದ್ದ ಹುಲ್ಲಿನ ತೆನೆಗಳು ಗಾಳಿಗೆ ಸಮುದ್ರದ ಅಲೆಗಳಂತೆ ತೊಯ್ದಾಡುತ್ತಿತ್ತು. ಆಕಾಶದುದ್ದಕ್ಕೂ ನಮ್ಮ ತಲೆಗಳ ಮೇಲೆ ಮೋಡಗಳು ಸರಿದಾಡಲಾರಂಭಿಸಿತು. ಇದಕ್ಕಿಂತ ಹೆಚ್ಚಿನ ಸೆಟ್ ಬಯಸಿರಲಿಲ್ಲ.

ನಮ್ಮ ಇಡೀ ಚಿತ್ರತಂಡ ಗಾಳಿಯ ದವಡೆಯಲ್ಲಿ ಸಿಕ್ಕ ಹುಲುಮಾನವರಂತೆ ಕೆಲಸ ಮಾಡಿದೆವು. ನಮಗೆ ಅಗತ್ಯವಿದ್ದ ದೃಶ್ಯ ಚಿತ್ರೀಕರಿಸುತ್ತಿದ್ದಂತೆ ಹಿನ್ನಲೆಯಲ್ಲಿದ್ದ ಮೋಡಗಳು ತಾವಾಗಿ ಮಾಯವಾಗಿಬಿಡುತ್ತಿದ್ದವು. ಮಧ್ಯಾಹ್ನ ಮೂರರವರೆಗೆ ಒಂದು ಕ್ಷಣವೂ ವಿರಮಿಸಿದೆ ಕೆಲಸ ಮಾಡಿದೆವು.

ಚಿತ್ರಕತೆಯಲ್ಲಿದ್ದಂತೆ ಇಡೀ ದೃಶ್ಯವನ್ನು ಚಿತ್ರೀಕರಿಸಿಕೊಂಡೆವು. ಆಗ ದೂರದಲ್ಲಿ ತಲೆಗೆ ಮುಂಡಾಸು ಕಟ್ಟಿ ಹುಲ್ಲು ಹಾಸಿನ ಮಧ್ಯೆ ಯಾರೋ ಏನನ್ನೋ ಹೊತ್ತು ಬರುತ್ತಿರುವುದು ಕಂಡಿತು. ಅವರು ಹತ್ತಿರ ಬರುತ್ತಿದ್ದಂತೆ ನಾವು ತಂಗಿದ್ದ ಮನೆಯ ಕೆಲಸದವರು ಎಂದು ಗುರುತುಹತ್ತಿತ್ತು. ಬೀಸುಗಾಳಿಯಿಂದ ತಮ್ಮ ಕೂದಲನ್ನು ರಕ್ಷಿಸಿಕೊಳ್ಳಲು ತಲೆಗೆ ಮುಂಡಾಸು ಬಿಗಿದಿದ್ದರು. ಮಿಸೊ ಸೂಪನ್ನು ದೊಡ್ಡ ಪಾತ್ರೆಯಲ್ಲಿ ಹೊತ್ತು ಬಂದಿದ್ದರು. ಅಲ್ಲಿಯವರೆಗೂ ಅಷ್ಟು ರುಚಿಯಾದ ಸೂಪನ್ನು ಕುಡಿದೇ ಇರಲಿಲ್ಲ. ಹತ್ತು ಬಟ್ಟಲು ಸೂಪು ಕುಡಿದೆ.

ಸಹಾಯಕ ನಿರ್ದೇಶಕನಾಗಿದ್ದ ಕಾಲದಿಂದಲೂ ನನಗೂ ಗಾಳಿಗೂ ವಿಚಿತ್ರ ನಂಟಿತ್ತು. ಯಮ ಸಾನ್ ಒಮ್ಮೆ ಚೋಶಿಯ ಅಲೆಗಳನ್ನು ಚಿತ್ರೀಕರಿಸಿಕೊಂಡು ಬರಲು ಹೇಳಿದರು. ಮೂರು ದಿನಗಳವರೆಗೆ ಪ್ರಶಾಂತ ಸಮುದ್ರದೆದುರು ಕಾದು ಕುಳಿತಿದ್ದೆ. ಇದ್ದಕ್ಕಿದ್ದಂತೆ ದೊಡ್ಡ ಅಲೆಗಳು ಎದ್ದವು. ಏನನ್ನು ಚಿತ್ರೀಕರಿಸಬೇಕೆಂದುಕೊಂಡು ಬಂದಿದ್ದೆನು ಆ ದೃಶ್ಯ ಸೆರೆಹಿಡಿಯಲು ಸಿಕ್ಕಿತು. ಮತ್ತೊಮ್ಮೆ Horses ಚಿತ್ರೀಕರಣ ಸ್ಥಳದಲ್ಲಿ ಚಂಡಮಾರುತಕ್ಕೆ ಸಿಕ್ಕು ನನ್ನ ರೈನ್ಕೋಟ್ ಚಿಂದಿಯಾಯಿತು. Nora inu (Stray Dog, 1949) ಚಿತ್ರೀಕರಣ ಸಮಯದಲ್ಲಿ ಬಯಲಿನಲ್ಲಿ ಹಾಕಿದ್ದ ಸೆಟ್ “ಕಿಟ್ಟಿ” ಎನ್ನುವ ಚಂಡಮಾರುತಕ್ಕೆ ಸಿಕ್ಕು ಛಿದ್ರವಾಯಿತು. ಮೌಂಟ್ ಫುಜಿಯಲ್ಲಿ Kakushi toride no san-akunin (The Hidden Fortress, 1958) ಚಿತ್ರೀಕರಣ ನಡೆಯುತ್ತಿದ್ದಾಗ ಸತತವಾಗಿ ಮೂರು ಬಾರಿ ಚಂಡಮಾರುತದ ದಾಳಿಗೆ ತುತ್ತಾದೆವು. ನಾವು ಚಿತ್ರೀಕರಿಸಬೇಕೆಂದುಕೊಂಡಿದ್ದ ಮೂರು ಕಾಡುಗಳು ಒಂದರ ನಂತರ ಒಂದು ನಾಶವಾದವು. ಹತ್ತು ದಿನದಲ್ಲಿ ಮುಗಿಯಬೇಕಿದ್ದ ಅಲ್ಲಿನ ಚಿತ್ರೀಕರಣ ಮುಗಿಯಲು ನೂರು ದಿನಗಳಾದವು.

ಆದರೆ ಈ ಎಲ್ಲ ಗಾಳಿಗಳಿಗೆ ಹೋಲಿಸಿದಲ್ಲಿ ಸೆಂಗೊಕುಹರಾ ಬಯಲಿನಲ್ಲಿ ಸುಗತಾ ಸಂಶಿರೋ ಚಿತ್ರೀಕರಣ ಸಮಯದಲ್ಲಿ ಬೀಸಿದ ಗಾಳಿ ನಿಜಕ್ಕೂ “ದೈವಿಕವಾದದ್ದು” ಎನ್ನಿಸಿತು. ಅನುಭವದ ಕೊರತೆಯಿಂದಾಗಿ ಅಂದು ಆ ದೈವಿಕ ಗಾಳಿ ನೀಡಿದ ಅವಕಾಶವನ್ನು ಸಂಪೂರ್ಣ ಬಳಸಿಕೊಳ್ಳಲು ಆಗದೇ ಹೋದದ್ದರ ಬಗ್ಗೆ ವಿಷಾದವಿದೆ. ಆ ಬೀಸುಗಾಳಿಯ ನಡುವೆ ನನಗೆ ಅವಶ್ಯವಿದ್ದಷ್ಟು ಚಿತ್ರೀಕರಿಸಿಕೊಂಡೆ ಎಂದುಕೊಂಡಿದ್ದೆ. ಆದರೆ ಸಂಕಲನಕ್ಕೆ ಕೂತಾಗ ಆ ದೃಶ್ಯಗಳು ಏನೇನೂ ಸಾಲದು ಅನ್ನಿಸಿತು. ಅಲ್ಲಿ ಬೇರೆ ಬೇರೆ ಕಡೆಯಲ್ಲಿ ಚಿತ್ರೀಕರಿಸಬಹುದಿದ್ದ ಅಥವ ಚಿತ್ರೀಕರಣ ಮಾಡಬಹುದಿದ್ದ ಹಲವು ಸ್ಥಳಗಳಿದ್ದವು.

ಕಷ್ಟಕರ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿರುವಾಗ ನಿಮಗೆ ಒಂದು ಗಂಟೆಯ ಕೆಲಸ ಎರಡೋ ಮೂರೋ ಗಂಟೆಗಳಷ್ಟಾದಂತೆ ತೋರುತ್ತದೆ. ಆ ಶ್ರಮದಾಯಕ ಕೆಲಸದಿಂದ ನೀವು ಹೆಚ್ಚಿನ ಸಮಯವನ್ನು ಅಲ್ಲಿ ವ್ಯಯಿಸಿದಿರಿ ಎಂದು ನಿಮಗೆ ಅನ್ನಿಸುತ್ತದೆ. ವಾಸ್ತವ ಸತ್ಯ ಎನ್ನುವುದು ಸತ್ಯವಾಗಿಯೇ ಉಳಿಯುತ್ತದೆ. ಒಂದು ಗಂಟೆ ಎಂದರೆ ಒಂದು ಗಂಟೆ ಮಾತ್ರವೇ ಆಗಿರುತ್ತದೆ. ಈ ಅನುಭವದಿಂದ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದಾಗ ಆಯಾಸದಿಂದ ಸಾಕಿನ್ನು ಎನ್ನಿಸಿದಾಗಲೆಲ್ಲ ಪ್ರಯತ್ನಪೂರ್ವಕವಾಗಿ ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತೇನೆ. ಹಾಗೆ ಮಾಡಿದಾಗ ಅಂತಿಮವಾಗಿ ನನಗೇನು ಬೇಕಿತ್ತೋ ಅದನ್ನು ಪಡೆದಿರುತ್ತೇನೆ. ಸುಗತ ಸಂಶಿರೊದ ಗಾಳಿಯ ಕಹಿ ಅನುಭವ ನನಗೆ ಕಲಿಸಿದ ಪಾಠವಿದು.

ಸುಗತ ಸಂಶಿರೊ ಕುರಿತು ಇನ್ನೂ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುವುದಿದೆ. ಆದರೆ ಹಾಗೆ ಮಾಡಿದರೆ ಇಡೀ ಪುಸ್ತಕದಲ್ಲಿ ಆ ಚಿತ್ರದ ಬಗ್ಗೆ ಮಾತ್ರ ಮಾತಾಡಿದಂತಾಗುತ್ತದೆ. ನಿರ್ದೇಶಕನಿಗೆ ತಾನು ಪೂರ್ಣಗೊಳಿಸಿದ ಪ್ರತಿ ಚಿತ್ರವೂ ಅವನಿಡಿ ಬದುಕೇ ಆಗಿರುತ್ತದೆ. ನನ್ನ ಚಿತ್ರಗಳ ಮೂಲಕ ಈ ರೀತಿಯ ಹಲವು ಬದುಕುಗಳನ್ನು ಬಾಳಿದ್ದೇನೆ. ಪ್ರತಿ ಚಿತ್ರದೊಂದಿಗೆ ಭಿನ್ನ ಜೀವನ ಶೈಲಿಯ ಅನುಭವವನ್ನು ಪಡೆದಿದ್ದೇನೆ. ಪ್ರತಿ ಚಿತ್ರದೊಂದಿಗೆ ಹಲವು ರೀತಿಯ ಜನರೊಂದಿಗೆ ಒಂದಾಗಿ ಅವರ ಬದುಕನ್ನು ಬದುಕಿದ್ದೇನೆ. ಇದೇ ಕಾರಣಕ್ಕಾಗಿ ಹೊಸ ಚಿತ್ರ ಮಾಡುವಾಗ ಹಳೆಯ ಚಿತ್ರದ ಜನರನ್ನು ಕಷ್ಟಪಟ್ಟು ಮರೆಯಬೇಕಾಗುತ್ತದೆ.

ಈಗ ನನ್ನ ಹಳೆಯ ಕೃತಿಗಳ ಕುರಿತು ಬರೆಯುವಾಗ ಮರೆತಿದ್ದ ಆ ವ್ಯಕ್ತಿಗಳೆಲ್ಲ ಜೀವಂತವಾಗಿ ಮನಸಲ್ಲಿ ಸುಳಿಯುತ್ತಾ ತಮ್ಮತ್ತ ಗಮನಹರಿಸಲು ಒತ್ತಾಯಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ವ್ಯಕ್ತಿತ್ವವಿದೆ. ಮೂಕವಿಸ್ಮಿತನಾಗಿ ನೋಡುತ್ತಿದ್ದೇನೆ. ಪ್ರತಿಯೊಬ್ಬರೂ ನಾನು ಜನ್ಮಕೊಟ್ಟು ಬೆಳೆಸಿದ ಮಕ್ಕಳು. ಅವರೆಲ್ಲರೂ ನನಗೆ ಮುಖ್ಯ. ಪ್ರತಿಯೊಬ್ಬರ ಬಗ್ಗೆಯೂ ಬರೆಯಬೇಕೆಂದು ಆಸೆ. ಆದರದು ಸಾಧ್ಯವಿಲ್ಲ. ಈವರೆಗೆ 27 ಸಿನಿಮಾಗಳನ್ನು ಮಾಡಿದ್ದೇನೆ. ಪ್ರತಿಯೊಂದರಿಂದ ಎರಡು ಅಥವ ಮೂರು ಪಾತ್ರಗಳನ್ನು ಪ್ರಾತಿನಿಧಿಕವಾಗಿ ತೆಗೆದುಕೊಂಡು ನನ್ನ ನೆನಪುಗಳನ್ನು ಅಷ್ಟಕ್ಕೆ ಸೀಮಿತಗೊಳಿಸಿಕೊಂಡರೂ ಅದರ ಕುರಿತು ಬರೆದು ಮುಗಿಸುವುದು ಸಾಧ್ಯವಿಲ್ಲ.

ಸುಗತ ಸಂಶಿರೊದಲ್ಲಿ ನನ್ನ ಆಸಕ್ತಿ ಮತ್ತು ಪ್ರೀತಿಯನ್ನು ಸೆಳೆದ ಪಾತ್ರ ಸಂಶಿರೊ. ಆದರೀಗ ಹಿಂತಿರುಗಿ ನೋಡುವಾಗ ಖಳನಾಯಕ ಹಿಗಾಕಿ ಗೆನ್ನೊಸ್ಕಿ ಕುರಿತು ಅಷ್ಟೇ ಪ್ರೀತಿಯಿತ್ತು ಅನ್ನಿಸುತ್ತದೆ. ಹಿಗಾಕಿ ಗೆನ್ನೊಸ್ಕಿ ಕೂಡ ಅಷ್ಟೇ ಬಲಾಢ್ಯ.

ಇನ್ನೂ ರೂಪುಗೊಂಡಿಲ್ಲದ ಅಪಕ್ವ ವ್ಯಕ್ತಿತ್ವಗಳೆಂದರೆ ನನಗೆ ಇಷ್ಟ. ಬಹುಶಃ ಇಷ್ಟು ವಯಸ್ಸಾದರೂ ನಾನಿನ್ನೂ ಅಪಕ್ವವಾಗಿಯೇ ಉಳಿದಿರುವುದು ಇದಕ್ಕೆ ಕಾರಣವಿರಬಹುದು. ಅಪಕ್ವತೆಯಿಂದ ಪಕ್ವತೆಯ ಹಾದಿಯಲ್ಲಿ ನಡೆಯುವವರನ್ನು ನೋಡುವುದೊಂದು ಬೆರಗು. ಇದೇ ಕಾರಣಕ್ಕಾಗಿ ಹೊಸಬರು ನನ್ನ ಸಿನಿಮಾಗಳ ಮುಖ್ಯಪಾತ್ರಧಾರಿಗಳಾಗಿರುತ್ತಾರೆ. ಸುಗತ ಸಂಶಿರೊ ಕೂಡ ಅದೇ ಬಗೆ. ಆತ ಅತ್ಯುತ್ತಮ ಅಂಶಗಳಿಂದ ಮಾಡಿದ್ದ ಇನ್ನೂ ಪೂರ್ಣಾಕಾರ ಪಡೆದಿರದ ವ್ಯಕ್ತಿ.

ಅಪಕ್ವ ವ್ಯಕ್ತಿಗಳೆಂದು ಹೇಳುತ್ತಿರುವಾಗ ಉಜ್ಜಿದರೂ ಆಭರಣವಾಗದ ವ್ಯಕ್ತಿಗಳ ಕುರಿತು ನನಗೆ ಆಸಕ್ತಿ ಇದೆ ಎಂದರ್ಥವಲ್ಲ. ಸಂಶಿರೊ ಉಜ್ಜಿದಷ್ಟೂ ಹೊಳೆಯುವ ವ್ಯಕ್ತಿತ್ವ ಹೊಂದಿದ್ದ. ಹಾಗಾಗಿ ಸಿನಿಮಾ ವೇಳೆ ನನ್ನಿಂದ ಸಾಧ್ಯವಾದಷ್ಟು ಆತನಿಗೆ ಹೊಳಪನ್ನು ನೀಡಲು ಪ್ರಯತ್ನಿಸಿದೆ.

ಆ ದೃಶ್ಯದಲ್ಲಿ ಸಂಶಿರೋ ಮತ್ತು ಹಿಗಾಕಿ ಗೆನ್ಸೂಕೆ ಇಬ್ಬರೂ ಉಕ್ಯೋ ಗಹರಾದ ಬಯಲಿನಲ್ಲಿ ಸೆಣೆಸಬೇಕಿತ್ತು. ಎತ್ತರದ ಬಯಲು ಪ್ರದೇಶದಲ್ಲಿ ಗಾಳಿ ಬೀಸುತ್ತಿರುವ ಸ್ಥಳ ನಮಗೆ ಬೇಕಿತ್ತು. ಕಿವಿಗಡಚಕ್ಕುವ ಜೋರು ಗಾಳಿಯಿಲ್ಲದೆ ಈ ಅಂತಿಮ ನಿರ್ಣಾಯಕ ಹೋರಾಟ ಚಿತ್ರದಲ್ಲಿನ ಉಳಿದ ಆರು ಹೋರಾಟಗಳಿಗಿಂತ ಭಿನ್ನವಾಗಿ ನಿಲ್ಲುವುದಿಲ್ಲ ಎಂದು ನನಗನ್ನಿಸುತ್ತಿತ್ತು.

ಹಿಗಾಕಿ ಗೆನ್ಸೂಕೆ ಕೂಡ ಸರಿಯಾಗಿ ಉಜ್ಜಿದಲ್ಲಿ ಹೊಳಪನ್ನ ಪಡೆಯಬಲ್ಲ ಗುಣದವನು. ಆದರೆ ವ್ಯಕ್ತಿಗಳು ತಮ್ಮ ವಿಧಿಗೆ ಬದ್ಧವಾಗಿರುತ್ತಾರೆ. ವಿಧಿ ಎನ್ನುವುದು ಅವರಿರುವ ಪರಿಸರದಲ್ಲಾಗಲಿ ಅಥವ ಅವರಿರುವ ಸ್ಥಿತಿಯಲ್ಲಾಗಲಿ ಇರುವುದಿಲ್ಲ. ಅವರ ವ್ಯಕ್ತಿತ್ವ ಆ ಪರಿಸರ ಹಾಗೂ ಸನ್ನಿವೇಶವನ್ನು ಹೇಗೆ ಒಳಗೊಳ್ಳುತ್ತದೆ ಎನ್ನುವುದರಲ್ಲಿರುತ್ತದೆ. ನೇರವಂತಿಕೆಯ, ಸುಲಭಕ್ಕೆ ಮಣಿಯದ ವ್ಯಕ್ತಿಗಳು ತಾವಿರುವ ಪರಿಸರ, ಸ್ಥಿತಿ ತಮ್ಮ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳುವರು. ಅಹಂಕಾರಿ ಮನೋಭಾವದ ಹೊಂದಾಣಿಕೆ ಮಾಡಿಕೊಳ್ಳದ ವ್ಯಕ್ತಿಗಳು ತಮ್ಮ ಪರಿಸರ ಹಾಗೂ ಸ್ಥಾನಮಾನಗಳಿಂದಲೇ ಹಾಳಾಗುತ್ತಾರೆ. ಸುಗತ ಸಂಶಿರೊ ಮೊದಲ ಗುಂಪಿಗೆ ಸೇರಿದರೆ ಹಿಗಾಕಿ ಗೆನ್ಸುಕೆ ಎರಡನೆಯ ವರ್ಗಕ್ಕೆ ಸೇರುತ್ತಾನೆ.

ವೈಯುಕ್ತಿಕವಾಗಿ ನನ್ನ ಮನೋಭಾವ ಸಂಶಿರೊ ಬಗೆಯದು ಆದರೆ ಹಿಗಾಕಿ ವ್ಯಕ್ತಿತ್ವದೆಡೆಗೆ ವಿಚಿತ್ರ ಸೆಳೆತ. ಇದೇ ಕಾರಣದಿಂದಲೇ ಹಿಗಾಕಿಯ ಅವಸಾನವನ್ನು ಬಹಳ ಪ್ರೀತಿಯಿಂದ ರೂಪಿಸಿದೆ. ನಂತರ ಜೊಕು ಸುಗತ ಸಂಶಿರೊ (ಸುಗತ ಸಂಶಿರೊ II, 1945) ರಲ್ಲಿ ಹಿಗಾಕಿ ಇಬ್ಬರು ಸಹೋದರರನ್ನು ಇದೇ ರೀತಿ ಸೂಕ್ಷ್ಮವಾಗಿ ಚಿತ್ರಿಸಿದೆ.

ನನ್ನ ಮೊದಲ ಚಿತ್ರ ಸುಗತ ಸಂಶಿರೊಗೆ ಬಂದ ವಿಮರ್ಶೆಗಳು ಇತ್ಯಾತ್ಮಕವಾಗಿದ್ದವು. ಅದರಲ್ಲೂ ಸಾಮಾನ್ಯ ಜನ ಬಹುಶಃ ಯುದ್ಧದ ಸಮಯವಾದ್ದರಿಂದ ಮನರಂಜನೆಗಾಗಿ ಕಾದಿದ್ದವರಂತೆ ನನ್ನ ಸಿನೆಮಾಗೆ ಬೆಚ್ಚನೆಯ ಪ್ರೀತಿ ತೋರಿದರು. ನನ್ನ ಸಿನೆಮಾ ಐಸ್ಕ್ರೀಂ ಅಥವ ಸ್ವೀಟ್ ಕೇಕಿಗಿಂತ ಹೆಚ್ಚಲ್ಲ ಎನ್ನುವುದು ಸೈನ್ಯದ ಬಲವಾದ ಅಭಿಪ್ರಾಯವಾಗಿತ್ತು. ಆದರೆ ನೌಕಾದಳದ ಮಾಹಿತಿ ಇಲಾಖೆಯು ಸಿನೆಮಾದಲ್ಲಿ ಮನರಂಜನೆಯೇ ಮುಖ್ಯ ಎಂದು ಘೋಷಿಸಿತು.

ಆಂತರಿಕ ಸಚಿವಾಲಯವು ಸಿನಿಮಾದ ಕುರಿತು ಏನು ಹೇಳಿದರು ಅನ್ನುವುದನ್ನು ಹೇಳುತ್ತೇನೆ. ಅದು ನೆನಪಾದರೇನೆ ಸಿಟ್ಟು ಉಕ್ಕುತ್ತದೆ. ಸಿಟ್ಟು ಮಾಡಿಕೊಳ್ಳುವುದು ನನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೂ ಅದನ್ನು ಹೇಳುತ್ತೇನೆ. ಆ ಸಮಯದಲ್ಲಿ ಸಚಿವಾಲಯವು ನಿರ್ದೇಶಕನ ಮೊದಲ ಚಿತ್ರವನ್ನು ಅವನ ನಿರ್ದೇಶನ ಪರೀಕ್ಷೆಯಂತೆ ಪರಿಗಣಿಸುತ್ತಿದ್ದರು. ಸುಗತ ಸಂಶಿರೊ ಮುಗಿಯುತ್ತಿದ್ದಂತೆ ಅದನ್ನು ಆಂತರಿಕ ಸಚಿವಾಲಯಕ್ಕೆ ಕೊಟ್ಟೆ. ನನ್ನ ಪರೀಕ್ಷೆಗೆ ಅಲ್ಲಿಗೆ ಹೋಗಬೇಕಿತ್ತು. ಪರೀಕ್ಷಕ ಮಂಡಳಿಯ ಪರೀಕ್ಷಕರು ಸೆನ್ಸಾರ್ನವರು. ಅವರೊಂದಿಗೆ ಹೆಸರಾಂತ ನಿರ್ದೇಶಕರಿರುತ್ತಿದ್ದರು. ನನ್ನ ಪರೀಕ್ಷೆಗೆ ಯಮ ಸಾನ್, ಓಜು ಯಾಸುಜಿರೊ ಮತ್ತು ತಸಕಾ ಟೊಮೊಟಕಾ ಈ ಮಂಡಳಿಯಲ್ಲಿದ್ದರು. ಇವರಲ್ಲಿ ಯಮ ಸಾನರಿಗೆ ಬೇರೆ ಕೆಲಸವಿದ್ದರಿಂದ ಅವರು ಬರಲಿಲ್ಲ. ಅವರು ಕರೆ ಮಾಡಿ ಓಜು ಇರುವುದರಿಂದ ಎಲ್ಲವೂ ಸರಿಯಾಗಿ ನಡೆಯುತ್ತದೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು. ಪರೀಕ್ಷೆಗೆ ಹಠಮಾರಿ ಕೋತಿಗಳಂತಿದ್ದ ಸೆನ್ಸಾರ್ನವರೊಂದಿಗೆ ಕಾದಾಡಲು ಹಠಮಾರಿ ನಾಯಿಯ ಹಾಗೆ ಹೋದೆ.

ಆ ದಿನ ಆಂತರಿಕ ಸಚಿವಾಲಯದ ಒಳಾಂಗಣದ ಕೈಸಾಲೆಯಲ್ಲಿ ವಿಷಾದದಲ್ಲಿ ನಡೆದುಹೋದೆ. ಇಬ್ಬರು ಆಫೀಸ್ ಪರಿಚಾರಕ ಹುಡುಗರು ಹಾದಿ ಮಧ್ಯದಲ್ಲಿ ಹರಟೆ ಹೊಡೆಯುತ್ತಿರುವುದನ್ನು ಗಮನಿಸಿದೆ. ಒಬ್ಬ “ ಯಮ ಅರಾಶಿ” (ಬಿರುಗಾಳಿ) ಎಂದು ಕೂಗುತ್ತಾ ಸಾಂಶಿರೋದಲ್ಲಿ ಬಳಸಿದ್ದ ವಿಶೇಷ ತಂತ್ರದಂತೆ ಮತ್ತೊಬ್ಬನ್ನು ನೆಲಕ್ಕುರುಳಿಸಿದ. ಸುಗತ ಸಂಶಿರೊ ಚಿತ್ರ ಪ್ರದರ್ಶನ ಮುಗಿದಿದೆ ಎಂದು ಅರ್ಥವಾಯಿತು. ಆದರೂ ಮೂರು ಗಂಟೆ ಕಾಲ ಕಾಯಿಸಿದರು. ಇದರ ನಡುವೆ ಸಂಶಿರೊನ ಅನುಕರಣೆ ಮಾಡಿದ ಹುಡುಗ ಚಾ ಹಿಡಿದು ಬಂದ. ಅವನ ಮುಖದಲ್ಲಿ ಪ್ರೀತಿ ತುಳುಕುತ್ತಿತ್ತು.

ಕಡೆಗೂ ಆರಂಭವಾದ ಪರೀಕ್ಷೆ ಬಹಳ ಕೆಟ್ಟದಾಗಿತ್ತು. ಕೋಣೆಯೊಂದರಲ್ಲಿ ಉದ್ದವಾದ ಮೇಜಿತ್ತು. ಸೆನ್ಸಾರ್ ಮಂಡಳಿಯವರೆಲ್ಲ ಮೇಜಿನ ಒಂದು ಬದಿಯಲ್ಲಿ ಕುಳಿತಿದ್ದರು. ಮೇಜಿನ ಕೊನೆಯಲ್ಲಿ ಓಜು ಮತ್ತು ತಸ್ಕಾ ಕೂತಿದ್ದರು. ಅವರ ಪಕ್ಕದಲ್ಲಿ ಆಫೀಸ್ ಪರಿಚಾರಕ ಹುಡುಗನಿದ್ದ. ಎಲ್ಲರೂ ಕಾಫಿ ಕುಡಿಯುತ್ತಿದ್ದರು. ಮೇಜಿನ ಮತ್ತೊಂದು ಬದಿಯಲ್ಲಿ ಒಂದು ಕುರ್ಚಿಯಿತ್ತು. ಅಲ್ಲಿ ಅವರ ಎದುರಿಗೆ ನನಗೆ ಕೂರಲು ಹೇಳಿದರು. ಅದೊಂದು ರೀತಿಯಲ್ಲಿ ವಿಚಾರಣೆಯಂತಿತ್ತು. ಸಹಜವಾಗಿ ನನಗೆ ಕಾಫಿ ಕೊಡಲಿಲ್ಲ. ಇಡೀ ಸನ್ನಿವೇಶ ಸುಗತ ಸಂಶಿರೊ ಎನ್ನುವ ಮಹಾಪರಾಧ ಮಾಡಿದ್ದೀನೇನೋ ಎನ್ನುವಂತಿತ್ತು.

ಇಡೀ ಚಿತ್ರ “ಬ್ರಿಟೀಷ್ – ಅಮೇರಿಕನ್”ಮಯವಾಗಿದೆ ಎನ್ನುವುದು ಸೆನ್ಸಾರ್ನವರ ವಾದ. ಸಂಶಿರೊ ಮತ್ತವನ ವೈರಿಯ ಮಗಳ ನಡುವೆ ದೇವಾಲಯದ ಮೆಟ್ಟಿಲ ಮೇಲೆ ನಡೆಯುವ ಘಟನೆ ಸೆನ್ಸಾರ್ನವರಿಗೆ “ಪ್ರೇಮ ದೃಶ್ಯ”ದಂತೆ ಕಾಣಿಸಿತು. ಆದರೆ ಆ ದೃಶ್ಯದಲ್ಲಿ ಅವರಿಬ್ಬರೂ ಪರಸ್ಪರ ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಆ ದೃಶ್ಯವನ್ನು ಹಿಡಿದುಕೊಂಡು ಅವರೇನೋ ಮಹಾನ್ ಸತ್ಯವನ್ನು ಕಂಡುಹಿಡಿದವರಂತೆ ಆ ದೃಶ್ಯದ ಬಗ್ಗೆ ಅದು ಹೀಗೆ ಅದು ಹಾಗೆ ಎಂದು ಹೇಳಿದ್ದನ್ನೇ ಹೇಳತೊಡಗಿದರು. ಅದನ್ನೆಲ್ಲ ಕೇಳಿಸಿಕೊಂಡಿದ್ದರೆ ಸಿಟ್ಟಿನಿಂದ ಕುದ್ದುಹೋಗುತ್ತಿದ್ದೆ. ಆದ್ದರಿಂದಲೇ ಅವರ ಮಾತುಗಳತ್ತ ಗಮನಕೊಡದೆ ಕಿಟಕಿಯಾಚೆ ನೋಡುತ್ತಾ ಬೇರೆ ವಿಷಯಗಳ ಕುರಿತು ಯೋಚಿಸುತ್ತಿದ್ದೆ.

ಆದರೆ ತಾಳ್ಮೆಯ ಮಿತಿ ಮೀರುತ್ತಿತ್ತು. ಮುಖ ಕೆಂಪೇರತೊಡಗಿತು ಆದರೆ ಏನೂ ಮಾಡುವಂತಿರಲಿಲ್ಲ. “ಬಾಸ್ಟರ್ಡ್ಸ್! ನೆಗೆದುಬಿದ್ದೋಗಿ! ಈ ಕುರ್ಚಿಯನ್ನು ತಿನ್ನಿ!” ಅಂತ ಅಂದುಕೊಳ್ಳುತ್ತಾ ಅಪ್ರಯತ್ನಪೂರ್ವಕವಾಗಿ ಎದ್ದು ನಿಂತೆ. ಅದೇ ಸಮಯಕ್ಕೆ ಓಜು ಕೂಡ ಎದ್ದು ನಿಂತು : “ನೂರು ಅಂಕಗಳು ಸಿಕ್ಕರೆ ಅದು ಅದ್ಭುತ ಎನ್ನುವುದಾದರೆ ಸುಗತ ಸಂಶಿರೊ ಗೆ ನೂರ ಇಪ್ಪತ್ತ ಅಂಕಗಳನ್ನು ಕೊಡಬೇಕು! ಅಭಿನಂದನೆಗಳು ಕುರೊಸೊವ!” ಎಂದರು. ಅಸಂತುಷ್ಟ ಸೆನ್ಸಾರ್ ಮಂಡಳಿಯವರನ್ನು ನಿರ್ಲಕ್ಷಿಸಿ “ಗಿಂಜಾ ರೆಸ್ಟೊರೆಂಟಿಗೆ ಹೋಗಿ ಅಲ್ಲಿ ಸೆಲೆಬ್ರೆಟ್ ಮಾಡೋಣ” ಎಂದು ನನ್ನ ಕಿವಿಯಲ್ಲುಸಿರಿದರು.

ಆಮೇಲೆ ಓಜು ಮತ್ತು ಯಮಾ ಸಾನ್ ರೆಸ್ಟೋರೆಂಟಿಗೆ ಬಂದರು. ಅವರಿಗಾಗಿ ಅಲ್ಲಿ ಕಾಯುತ್ತಿದ್ದೆ. ನನ್ನ ಸಿಟ್ಟನ್ನು ಶಮನಮಾಡಲು ಓಜೊ ಎಷ್ಟು ಸಾಧ್ಯವೋ ಅಷ್ಟು ಸುಗತ ಸಾಂಶಿರೊವನ್ನು ಹೊಗಳಿದ. ಅಷ್ಟು ಸುಲಭವಾಗಿ ಸಮಾಧಾನಗೊಳ್ಳುವವನು ನಾನಲ್ಲ. ಕೂತಿದ್ದ ಕುರ್ಚಿಯನ್ನು ಎತ್ತಿ ಆ ಸೆನ್ಸಾರ್ ಮಂಡಳಿಯವರ ತಲೆ ಮೇಲೆ ಹೊಡೆದಿದ್ದರೆ ಹೇಗಿರುತ್ತಿತ್ತು ಎಂದು ಯೋಚಿಸುತ್ತಿದ್ದೆ. ಹಾಗೆ ಮಾಡದಂತೆ ನನ್ನನ್ನು ತಡೆದ ಓಜುಗೆ ಇವತ್ತಿಗೂ ಚಿರಋಣಿ.